Saturday, May 28, 2016

ಕಳೆದುಹೋಗದಂತೆ
ಕೆಲ ನಿನ್ನೆ ಇಂದುಗಳ ನಡುವೆ
ತನ್ನ ಕಾಯ್ದುಕೊಳುವುದೆ
ನೋಡು ಈ ಕ್ಷಣದ ಗೊಡವೆ,
ಬೆಂಗಾಡ ಕನಸ ಹನಿಗಳಲಿ ಮುಳುಗಿಹೋಗಿರುವೆ..

ಎರಡು ಕೊಳದೆರಡು ಹಂಸಗಳ ನಡೆಗೆ
ಒಂದೇ ಹೆಸರ ಜಾಡು.
ಹುಡುಕಹೊರಟಿವೆ ಮುಕ್ತಿ;
ಮುಕ್ತಿ ಕ್ಷಣವೊಂದರ ಸೊತ್ತು,
ಮತ್ತದೇ ಹೊತ್ತ ಹೊರೆಯಿಳಿವ ಹಾಡು!

ಕಣ್ಣಜೋಳಿಗೆ ತುಂಬ
ತುಂಬಿಕೊಳಲಿ ಭರತದ ಕಡಲು.
ಉಕ್ಕುಕ್ಕಿ ಬೋಳು ಪಡುವಣಕೆ
ಮುಳುಗುವದಾದರೂ ಬಣ್ಣ ಬಳಿಯಲಿ ಒಂದು
ತೃಷೆ ಕಡಲೆದುರು ಗಹಗಹಿಸಿ ನಗದಿರಲಿ ಇನ್ನೆಂದೂ..

ಸುಳ್ಳು-ಸತ್ಯ ಸರಿ-ತಪ್ಪು ಕೂಡು-ಕಳೆಗಳಲಿ
ಸಿಂಗರಗೊಳಲೇ ಇಲ್ಲ ನೋಡು;
ದೂರು ದುಗುಡ ದುಮ್ಮಾನದೆದುರು
ಅದೋ ಅದೊಂದು ಸಶಬ್ದ ನಗು
ನನ್ನ ಮುಕ್ತಿ ಕನ್ಯೆಯ ಸೊಂಟದ ಡಾಬು.

ಬಯಲಿಗೊಯ್ಯುವ ಬಾಗಿಲೇ,
ಸಂಕ್ರಮಣದೊಂದು ಸುಮುಹೂರ್ತ
ಎಲ್ಲ ಮೀರಿ ಹಾರಾಟ ಮುಕ್ತಮುಕ್ತ!
ಎದೆಯೊಡ್ಡಿ ನಿಂತ ಅವಕಾಶದಾಕಾಶ ನೀನು
ತಬ್ಬಿ ಬಳ್ಳಿಯಂತರಾಳ ಹಾಡುವ ಗುಬ್ಬಿ ನಾನು.

ಹೋಗು ಅಡಗು ಬೇಕಾದರೆ,
ಹೂವಾಡಗಿತ್ತಿಯ ಹೂಬುಟ್ಟಿಯೊಳಗೆ,
ಹಾವಾಡಿಗನ ಪುಂಗಿ ನಳ್ಳಿಯೊಳಗೆ
ನೋವು-ಖುಶಿಯೆರಡನೂ ಕಣ್ಕಟ್ಟು ಬಿಚ್ಚಿಬಿಟ್ಟಿರುವೆ
ಒಂದಾದರೂ ಹುಡುಕೀತು; ಆ ಹೊತ್ತು ಮುಕ್ತವಾದೀತು!











Sunday, May 22, 2016

ಪತ್ತಲುಟ್ಟು ಬರುತಿದ್ದ ಕಚಗುಳಿಯ
ಬೆತ್ತಲಾಗಿಸಿ, ತಾಗಿಸಿ ನಿಜಗುರುತಾಗಿಸಿದವನೇ,
ಮೈಮುರಿದು ಹೊರಟ ನೆಟಿಕೆ ಸಾರಿವೆ,
ಜೀವಕಣಕಣಕೀಗ ಋಣಭಾರ!

ಆಳದ ಬೊಗಸೆ ಅಂತರ್ಜಲವ
ಕೆದಕೆದಕಿ ಅಡಗಿದೊರತೆ ಝಿಲ್ಲನೆ ಚಿಮ್ಮಿಸಿದವನೇ,
ಜುಳುಜುಳು ಗುಪ್ತಗಾಮಿನಿ ಸಾರಿದೆ,
ಹನಿಹನಿಗೂ ಈಗ ಋಣಭಾರ!

ಸಹಸ್ರಾಕ್ಷ-ಸಹಸ್ರಬಾಹುಗಳಾಗಿ
ಮೇಲಿಂದ ನಕ್ಷತ್ರ, ತಳದಿಂದ ಮುತ್ತು,
ಮತ್ತದೋ ಆ ಕ್ಷಿತಿಜದಕ್ಷಯ ರಂಗು
ತರಲು ಸಾಗಿವೆ ದೂರದೂರ ಭರದಿಂದ..

ಗಂಧರ್ವಗಾಯನ ತರಬಹುದೇ?
ಧ್ವನಿಯ ನೆಲೆಯ ಕಣ್ಮುಚ್ಚಿ ಕೂತು ಕೇಳುವುದಾದೀತೇ?
ನೀನೋ ಜಂಗಮ ಜೋಗಿ!

ಗಾಳಿಯಂತಾಡಿಸುವ ನಶೆ ತಂದರಾದೀತೇ?
ತುಟಿ ಸೋಕುವುದಿರಲಿ, ಪಿಸುನುಡಿಗೇ ನಾ ತೂರಾಡಿದ್ದಿದೆ;
ನಿನ್ನ ನೋಟಕಿಂತ ನಶೆಯುಂಟೆ?

ಬಿಡು, ಋಣವೇ ಬೆಸೆಯಲಿ ಸಾವಿನಾಚೆಗೂ.
ಈ ಯುಗದಾದಿ ಬೆಸೆದಂತೆ ನಾಳಿನವು ಮತ್ತೆಮತ್ತೆ.
ರಾಶಿ ಪೇರಿಸುತಿರು ಋಣದ ಕ್ಷಣಗಳ ಹಾಗೇ,
ಹುಟ್ಟಿ, ಹುಡುಕಿ ಬರಲಿರುವೆ ನಾನಂತೂ ಹೀಗೇ ಮತ್ತೆಮತ್ತೆ!

Saturday, May 21, 2016

ಹಾಗೇ ಅಂಗಾಲ ಕಲೆಯಾದ ಒಂದಷ್ಟು ಹಠಮಾರಿ ಕೆಮ್ಮಣ್ಣು
ವೈಶಾಖದ ಕೊನೆಕೊನೆಯ ಕಡುಬಿಸಿಲಿಳಿಸಿಕೊಂಡ ಉರಿಗಣ್ಣು
ಗಾಳಿಯ ಬೀಸುಧರ್ಮಕೆ ಸ್ಪಂದಿಸಿ ಬಂಧ ಕಳಚಿಕೊಳುವೆಲೆ
"ನಾನೂ.." ಎನುತ ಮಕಾಡೆ ನೆಲಕಚ್ಚುವದೇ ವರವೆಂದುದುರುವ ಪಾರಿಜಾತ...
ಈಗೀಗ ಅತಿಸಹಜವೂ ನಿಜದಚ್ಚರಿಯೆನಿಸುವುದು;
ಹಗಲು ನಿದ್ದೆಗೆಳಸಿ, ರಾತ್ರಿಯೆಚ್ಚರಿಸುವುದು ಮಾಮೂಲೆನಿಸುವುದು..

ವನಮಾಲಿಯೇ ನಿಲ್ಲಿಸದಿರು ಕೊಳಲಗಾನವೆಂದರವರು,
"ನನ್ನ ಮಹಾಬಲಿಯೇ ನಿಲ್ಲಿಸಿಬಿಡೆಲ್ಲವ" ಇದು ನಾ ಹೇಳುವುದು!
ಸಾಕು, ಕನಸರೆಕ್ಕೆಯೇರಿಯಷ್ಟೇ ಬರುವ ನಗುವೂ,
ಮತ್ತು ನಿದ್ದೆ ಕಳುವಾದ ಕಣ್ಣುಗಳ ಬಿಕ್ಕು ಪ್ರವಾಹವೂ..
ಸಾಕು, ತೂರಿಬಂದ ಪರಿಮಳದಲೆಯಿಲ್ಲೇ ತೆಳುವಾಗಲಿ,
ಬೆಸೆವ ಸೇತು ಅಂತರದಳತೆಯ ಮಾಪನವಾಗಲಿ..

ಹೌದು,
"ಮಳೆ ಬೀಳದಿರಲಿ, ಹಸಿರುದಿಸದಿರಲಿ, ಹೂವರಳದಿರಲಿ,
ತೆನೆಬತ್ತಕಾಳಲಿ, ಹಟ್ಟಿಹಟ್ಟಿಯ ತಾಯ್ಕೆಚ್ಚಲಲಿ ಹಾಲ್ದುಂಬದಿರಲಿ.."
ಎಂದೆನುವುದಾದರೆ ಹೊಳೆಹೊಳೆದ ಆ ನಿನ್ನೆ ಮರುಕಳಿಸದಿರಲಿ..
ಅಯ್ಯೋ...
ಸುತ್ತುಬಳಸಿ ಹೇಳಿಕೇಳಲಿರುವುದಾದರೂ ಏನು,
ಮೌನ ತೂಗಿತೂಗಿ ಮಲಗಿಸಿದ ಹೊತ್ತನೆಬ್ಬಿಸಬಹುದಿತ್ತು,
ಬಂದುಬಿಡಬಹುದಿತ್ತು; ಬಿಲ್ಕುಲ್ ಇಲ್ಲಿಲ್ಲದಿರುವದ್ದು ಇಂದಿಲ್ಲಿರಬಹುದಿತ್ತು..