Friday, September 20, 2013

ಕೊನೆಯಪಕ್ಷ...

ಅಲ್ಲಿಂದ ಇಲ್ಲಿಯವರೆಗೆ
ಎಲ್ಲ ಕೇಳಿದ ಮೇಲುಳಿದದ್ದು
ಪ್ರೀತಿಸುವ ಮತ್ತು ಪ್ರೀತಿಸುತಲೇ
ತೃಪ್ತನಾಗುವ ಶಕ್ತಿಯ ಕೋರಿಕೆ.
 
ಅದನಿತ್ತುಬಿಟ್ಟೆ ನೋಡು,
ಹೆಚ್ಚುಕಾಲ ಸಂಭ್ರಮಿಸಲಾಗಲೇ ಇಲ್ಲ.
ಈಗ ಬೇಕಿದೆ ತುರ್ತು ,
ಅದ ಮಣಿಸುವ ದ್ವೇಷಿಸುವ ಆನೆಬಲ.
 
ತಪಕಂತೂ ಕೂರಲಾರೆ,
ಜಪ ನಾನರಿತಿಲ್ಲ,
ಹೆಚ್ಚೆಂದರೆ ಕಾಯಬಲ್ಲೆ,
ಕಾಯುತಲೇ ಸಾಯಬಲ್ಲೆ.
 
ಕೊನೆ ಗಳಿಗೆಯಲಾದರೂ ಪ್ರಭುವೇ,
ಉಸಿರುಸಿರನೂ ಕಂಬನಿಯಾಗಿಸಿದ
ಒತ್ತಡದಾಗರಗಳು ಕೆಲವಿವೆ,
ಬಲು ಪ್ರೀತಿಪಾತ್ರವವು ನನಗೆ.
 
ನನ್ನ ದ್ವೇಷಕವು ಸಡಿಲಾಗಲಿ
ನನ್ನ ತಂಪೆದೆ ಕೋಪದ ಕುಲುಮೆಯಾಗಿ
ಕಂಬನಿ ಕುದಿದು ಆವಿಯಾಗಲಿ
ಆ ಆವಿ ನನ್ನ ಕೊನೆಯುಸಿರಿಗೊದಗಲಿ.
 
ಪ್ರೀತಿಯುಂಡು ಜೀರ್ಣಿಸಲಾಗದೆ
ಕಕ್ಕಿದ ಸುಸ್ತಿಗೆ ದ್ವೇಷ ಬೆನ್ನು ಸವರಲಿ.
ಪ್ರೀತಿಯದಾರಿ ಇಷ್ಟು ದುರ್ಗಮವೇ?
ಗೊತ್ತಿರದೆ ಆಯ್ದುಬಿಟ್ಟೆ, ಕೇಳಿಬಿಟ್ಟೆ ಕ್ಷಮೆಯಿರಲಿ.
 
ಪ್ರೀತಿಯ ಸುಳಿವಿರದ ಸುಲಭಮಾರ್ಗದಲಿ
ಜೀವಂತ ಒಂದು ಹೆಜ್ಜೆಯನಾದರೂ ಊರಿಸು.

Thursday, September 19, 2013

ಕ್ಷಮಿಸು.

ದೈವಸಾನ್ನಿಧ್ಯದಲಿ
ಶರಣಾಗತಿಯಡಿ
ಕೈಗುದುರಿದ ಹೂ
ಬಾಡಿದ್ದರೆ, ನಿರ್ಗಂಧವಿದ್ದರೆ
ಹೂವಲ್ಲವೆನಿಸಿದರೂ
ಕಣ್ಣಿಗೊತ್ತಿಕೊಳುವಾಗ
ಪ್ರಶ್ನೆಯಿರುವುದಿಲ್ಲ,
ಕಲ್ಲ ಮೈಮೇಲಿದ್ದುದು
ಅದು, ಪ್ರಸಾದ.
 
ನಿನ್ನ ಸಾನ್ನಿಧ್ಯದಲಿ
ಅದೇ ಶರಣಾಗತಿಯಡಿ
ಎದೆಗುದುರಿದ ಹೂಭಾವ
ಗಡುಸಿದ್ದರೆ, ನಿರ್ಗಂಧವಿದ್ದರೆ,
ಹೂವಲ್ಲವೆನಿಸಿದರೆ,
ಕಣ್ಣಿಗೊತ್ತಿಕೊಳುವ ಯತ್ನಕೆ
ಎದುರಿವೆ ಬರೀ ಪ್ರಶ್ನೆ..
ನಿನ್ನೊಳಗಿಂದ ಬಂದಿದೆ
ಇದು, ಸಂಬಂಧ.

,ಓ ಹಗಲ ದೀಪವೇ..

ದಾರಿದೀಪಕೊಂದು ಜಿಜ್ಞಾಸೆ.
ತಣ್ಣನೆಯ ಬಿಳಿಚಂದ್ರನನಲ್ಲ,
ತನ್ನಂತೆ ಹೊತ್ತಿಉರಿವ
ಕೆಂಪುಸೂರ್ಯನ ಕೇಳುವಾಸೆ.
 
ರಾತ್ರಿಪೂರ್ತಿ ಆ ಕಡೆ, ಈ ಕಡೆ
ಒಂದೇಸಮ ದಾರಿತೋರುವ ದೀಪಕೆ,
ರಾತ್ರಿಯ ಕೊನೆಯಹೆಜ್ಜೆ
ತಾ ಬರೀ ನೆನಪಾಗುಳಿವ ಕಥೆ.
ಹಗಲವ ಬರುವ ಹೊತ್ತು
ಮತ್ತೆಮತ್ತೆ ಕೊಲೆಯಾಗಿ
ತಾ ಪ್ರಶ್ನೆಯಾಗಿಯೇ ಉಳಿದ ವ್ಯಥೆ.
 
ಸುತ್ತ ಸುತ್ತುವ ದೀಪದಹುಳು
ನಗುತಾವೆ, ಇದರಂತರಾಳವ
ರಾಗ ಮಾಡಿ ಗುಯ್ ಗುಡುತಾವೆ...
ದೀಪ ಮುನಿಸಿಕೊಳುವುದಿಲ್ಲ,
ಮತ್ತದೇ ಗೆದ್ದಲುತಿಂದುಳಿದ
ಅರ್ಧಜೀವದ ಕಂಬದಾಸರೆ,
ಬಣ್ಣ ಮಾಸಿದ ಹಿಂದಿನ ತಟ್ಟೆ
ಸಹವಾಸದಲೇ ಹೊತ್ತಿಕೊಳುತದೆ
ಕತ್ತಲಾಗುತ್ತಿದ್ದಂತೆ ಕೆಂಪಗೆ,
ಇದೇ ಮೊದಲಬಾರಿಯೆಂಬಂತೆ.
 
ನಡೆದು ಬರುತಾವಷ್ಟು
ಬಾಯಾರಿದ ದೇಹ
ಹಿಂತಿರುಗುವಾಗ
ಭಾರವಿಳಿಸಿ ತಣಿಸಿ ದಾಹ.
ಬರುವವಕೆ ಮನೆ ಬೇರೆ ಇದೆ,
ಮನಸಲ್ಲಿಟ್ಟು ಬಂದಿದ್ದಾವು..
ತನ್ನಡಿಯವು ಇವೆಲ್ಲಿ ಕಿತ್ತಿಟ್ಟಾವು,
ಎಲ್ಲಿ ಬಚ್ಚಿಟ್ಟಾವು?
ಅವಕಿದೇ ಮನೆ, ಮಂತ್ರಾಲಯವೂ...
 
ಮನಸಿಲ್ಲದ ತಮ್ಮ ದೇಹದ
ತೃಷೆಗೊದಗಿದ ಆ ದೇಹ,
ಮತ್ತದರೊಳಗಿನ ಮನಸುಗಳ
ಕೊನೆಪಕ್ಷ ನೆನಪೂ ಅಲ್ಲ,
ಮರೆವು ಮಾಡಿ ಹೊರನಡೆವ
ನಿರ್ಜೀವ ಕಾಲುಹಾದಿಯ
ಕತ್ತಲೆ ತಾ ತೊಡೆಯಲಾಗದು, ಏಕೆ?
 
ಮನಸನಲ್ಲೇ ಬಿಚ್ಚಿದ ಬಟ್ಟೆಯ
ಮಡಿಕೆಯೊಳಗೆತ್ತಿ ಮರೆಸಿ
ಜತನವಾಗಿಡಲಿನ್ನೂ ಕಲಿಯದ,
ಪ್ರತಿಬಾರಿ ದೇಹವ್ಯಾಪಾರಕೆ
ಮನಸ ಬಲಿಕೊಡುವ
ಆ ಕೋಣೆಯೊಳಗಿನ
ಕತ್ತಲೆ ತಾ ತೊಡೆಯಲಾಗದು, ಏಕೆ?
 
ಒಂದೇ ಒಂದು ಬೀದಿಯ ದೀಪ,
ನನಗೇ ಇಂಥ ಭಾವತಿಕ್ಕಾಟ..
ಜಗದೆಲ್ಲ ಹಾದಿಬೀದಿಗಳ
ಆಗುಹೋಗು, ಒಳಿತುಕೆಡುಕುಗಳ
ಸಾಕ್ಷಿ ನೀನು,
ಓ ಹಗಲ ದೀಪವೇ
ನಿನಲಿಲ್ಲವೇ ಇಂಥವೆಷ್ಟೋ ಸಂಕಟ?

Monday, September 16, 2013

ಅದಲುಬದಲು

ನನ್ನಲೇ ಅದುಳಿದುದು ಗೊತ್ತಿಲ್ಲ, ಸೋಲೋ ಗೆಲುವೋ!
ತಣ್ಣನೆ ಛಳುಕೊಂದು ಅಡಿಯಿಂದ ಮುಡಿಗೆ, ನೋವೋ ನಲಿವೋ!
 
ದಾಟಲಾಗದೆ ಹೊಸಿಲು, ಎತ್ತಿದ ಹೂಹೆಜ್ಜೆ ಹಿಂದಿಡುವಾಗ ಮಣಭಾರ
ಮೀಟದುಳಿದ ತಂಬೂರಿಯೆದುರಿನ ಶ್ರುತಿತಪ್ಪಿದ ರಾಗ ರಾಜ್ಯಭಾರ
 ಸಪ್ತವರ್ಣ ಕಾಲ್ಮುರಿದುಕೊಂಡು ಬಿದ್ದ ಕುಳಿಯೊಡಲು ಬರೀಬಿಳಿ
ಸತ್ತುದಕೆ ಹೊದಿಸುವ, ವಿಧವೆಬಾಳಿಗುಡಿಸುವ ಖಾಲಿಖಾಲಿ ಬಿಳಿ.
 
ತೂಕಕಿಡಲಾಗದ ವಿಷಯ, ಇಲ್ಲೊಳಗಿನ ತಕ್ಕಡಿಯಾಕೋ ಕಣ್ಮರೆ
ಮೂಕವಾಗಿದೆ ಬಹುಶಃ ಇದಿಷ್ಟೇ ಎಂದು ಹೇಳಲಾಗದ ಅಳುಕಿಗೆ.
 
ಅಷ್ಟು ತುಂಬಿಕೊಂಡೂ ಅದು ಹಗುರವೆಂದು ಕೈಲೆತ್ತಿಕೊಡಬಯಸಿದ್ದೆ
ಆಗದೆ ಮತ್ತೊಳ ಬಂದುದು ಎಲ್ಲ ಕಳಕೊಂಡ ಖಾಲಿಯೆಂದುಕೊಂಡೆ..
 
ಆದರೆ ನೋಡು, ನಿನ್ನೆ-ಮೊನ್ನೆಗಿಂತ ಇಂದು ಭರಪೂರ ನನ್ನೊಳಗು
ಅಚ್ಚರಿಯಿಲ್ಲ, ಸಾಲದೇ ಅಷ್ಟಡಿ ಎತ್ತರದ ನೀನು ಒಳಹೊಕ್ಕದ್ದು?
 
ಹುಚ್ಚಿ ನಾನು, ನಿನನಲ್ಲೇ ಹೊರಗಿಟ್ಟು ನಿನ್ನೊಳಹೊಗಬಯಸಿದ್ದೆ,
ಶತಾಯಗತಾಯ ಮುಚ್ಚಿದ್ದ ಕದದೂಡುವ ಒತ್ತಾಯದತಿಥಿಯಂತೆ.
 
ನನ್ನ ಸ್ವಾಗತದಾಲಾಪ ನೈವೇದ್ಯವಾಗಿತ್ತು ಅವಗೆ, ನಿನಗೆ ಪ್ರಸಾದ
ನನನಲ್ಲೇ ಇಟ್ಟು, ನನ್ನೊಳಹೊಗಿಸಿದ್ದು ನಿನ್ನ, ಅವನದೇ ಆಶೀರ್ವಾದ.

ನಾನು ಬರೀ ನಾನಲ್ಲ..

ನಿನ್ನೆದೆಯನೇ ಜಗ ಮಾಡಿ
ಮೂಲೆಯ ಆ ಜಾಗ ಕೇಳಲಾರೆ
ತ್ರಿವಿಕ್ರಮ ನಾನು, ಜಗವನೇ ಹೆಜ್ಜೆಗಳಲಳೆಯಬಲ್ಲೆ.
 
ನಿನ್ನಿರುವನೇ ಅರಿವು ಮಾಡಿ
ಮೊನೆಯಷ್ಟು ಗಮನ ಬೇಡಲಾರೆ
ಕಾಮನಬಿಲ್ಲು ನಾನು, ಲೋಕವನೇ ಸೆಳೆಯಬಲ್ಲೆ.
 
ಕಾಲಗರ್ಭದ ತುಂಬ ನಿನ್ನ ತುಂಬಿ
ಕ್ಷಣವೊಂದರ ದಯಕೆ ಕಣ್ಣೊಡ್ಡಲಾರೆ
ಜೀವಂತಿಕೆ ನಾನು, ಅನಂತಕೇ ಕಣ್ಣ ಹಾಯಿಸಬಲ್ಲೆ.
 
ಗಡಿಯಾರ ತೂಗುಹಾಕಿದ ಮೊಳೆಯಾಗಿ
ಹೊತ್ತು ನೂಕುವ ಕೃತ್ಯ ಹೊರಲಾರೆ
ಗಂಟೆಯ ಮುಳ್ಳು ನಾನು, ಸಮಯ ಮುನ್ನಡೆಸಬಲ್ಲೆ.
 
ಕಣ್ಣ ಸುತ್ತಳತೆಯುದ್ದಗಲ ನಿನ್ನ ಹರಡಿ
ನೀನೆಸೆದ ನೋಟದೊಳಹೊಕ್ಕಲಾರೆ
ದೃಷ್ಟಿ ನಾನು, ನಿನ್ನೆತ್ತರಕೂ ಮೀರಿ ಬೆಳೆಯಬಲ್ಲೆ.
 
ನಿನ್ನ ಪ್ರೇಮಸಾಮ್ರಾಜ್ಯದ ದೊರೆ ಮಾಡಿ
ನೀನೆಸೆದ ಭಿಕ್ಷೆಯಲಿ ತಣಿಯಲಾರೆ,
ಪ್ರೇಮಬಿತ್ತ ನಾನು, ತುತ್ತಿಲ್ಲದೆಯೇ ಮೊಳೆಯಬಲ್ಲೆ.
 
ನನ್ನೆಲ್ಲವನೂ ನಿನ್ನ ಪಾಲುಮಾಡಿ
ಖಾಲಿಯಾಗಿಯೂ ಖಾಲಿ ಉಳಿಯಲಾರೆ
ಒಲವು ನಾನು, ಮತ್ತೆಮತ್ತೆ ಚಿಗುರಬಲ್ಲೆ, ಇರಬಲ್ಲೆ.

ಹಿಂತಿರುಗಿದೆ ಕನಸು

ಖುದ್ದು ಬಂದಿತ್ತಂತೆ ಕನಸಲ್ಲಿಗೆ
ಬರಿಗೈಲಿ ಕಳಿಸಿದ್ದೀಯಂತೆ..
 
ನಿನ್ನನೊಳಗೊಂಡು ತರಲು
ಶ್ರೀಗಂಧದ ಚೌಕಟ್ಟು ತಂದಿತ್ತಂತೆ..
ಖಾಲಿ ಹಿಂತಿರುಗುವಾಗ ಎಂದೂ ಬರದ
ಗೆದ್ದಲುಹುಳು ಬಂದು ತಿಂದವಂತೆ..
ಈಗ ನನ್ನ ಬೋಳುಕನಸಲಿ
ಒಂದಷ್ಟು ಅಳು, ಜೊತೆಗೆ ಗೆದ್ದಲುಹುಳು..
 
ನಿನ್ನ ಹೊತ್ತು ತರಲು
ಗಟ್ಟಿಪಲ್ಲಕ್ಕಿ ತಂದಿತ್ತಂತೆ..
ಖಾಲಿ ಬರುವಾಗ ಕಂಬನಿಹನಿ ಬಿದ್ದು
ತುಕ್ಕುಹಿಡಿದು ಚೂರುಚೂರಾಯ್ತಂತೆ..
ಈಗ ನನ್ನ ಜೊಳ್ಳುಕನಸಲಿ
ಒಂದಷ್ಟು ಕುದಿ, ಜೊತೆಗೆ ತುಕ್ಕಿನಪುಡಿ.
 
ನಿನ್ನ ಸ್ಪರ್ಶಸುಖ ತರಲು
ಮದರಂಗಿ ಬೆರಳು ಬಂದಿದ್ದವಂತೆ..
ಖಾಲಿ ಬರುವ ದಾರಿಯ ನಿರಾಸೆ ಚುಚ್ಚಿ
ರಕ್ತದ ಕೆಂಪು ಮದರಂಗಿಯ ನುಂಗಿತಂತೆ..
ಕುಸಿದುಕೂತ ಕನಸಲೀಗ
ಒಂದಷ್ಟು ಸುಳ್ಳು ಮತ್ತಷ್ಟು ಟೊಳ್ಳು...

**

ಮನಸು ನನ್ನ ಕೈಯ್ಯೊಳಗಿತ್ತು.
ನೀ ಒಂದೇ ಹೆಜ್ಜೆಯಳತೆ ದೂರ.
ನಿರ್ವಾತ ತುಂಬಿದಂತರ
ಗಾಳಿಬೆನ್ನೇರಿದ ವೇಗದಾಸೆ ಕ್ರಮಿಸಲಾಗಲಿಲ್ಲ.
 
ಒಂದೇ ಗಳಿಗೆ, ಯಥಾಸ್ಥಾನ ಹೊಕ್ಕಿದೆ ಮನಸು.
ನೀ ಪಡೆವುದಾಗಲಿಲ್ಲ ಎಂದರೂ
ನಾನೀವುದಾಗಲಿಲ್ಲ ಎಂದರೂ
ಅಂಥ ವ್ಯೆತ್ಯಾಸವೇನಿಲ್ಲ..
 
ಹಠಾತ್ತನೆ ದಿಕ್ಕುಬದಲಿಸಿವೆ
ಗಾಳಿ ಬೀಸಿದೆಡೆ ತೂರಿಕೊಳುವ ಹೆಜ್ಜೆ
ಮೈಮನಸು ಹಿಂಬಾಲಿಸಿ ಕಾಲ ದೂರ ಸಾಗಿದೆ..
ನಿರ್ವಾತ ನಿಧಾನ ಒಳಹೊಕ್ಕಿದೆ.
 
ನೆನಕೆಯಿಲ್ಲ, ಕನವರಿಕೆಯಿಲ್ಲ.
ಪ್ರಾಣವಿಲ್ಲ, ಪ್ರಮಾಣವೂ ಇಲ್ಲ.
ಪ್ರೀತಿಪ್ರೇಮ ಬಿಡು, ಉಸಿರಾಟವೇ ಇಲ್ಲ.
ಈಗ ಕೊಡುವುದೇನು, ಪಡೆವುದೇನು?
 
ಎಲ್ಲೋ ಕೆಲವು ಉಸಿರು ಕಡ ಸಿಕ್ಕರೆ,
ಒಳಹೊಕ್ಕಿ ಹೋರಾಡಿ ಅವು ಉಳಿದು ದಕ್ಕಿದರೆ,
ನಿರ್ವಾತದಾಳ್ವಿಕೆ ಹೇಗೋ ಪತನವಾದರೆ....
ನಿರ್ಜೀವ ಬಾಳಿಗಿಂದು ರೆ ಸಾಮ್ರಾಜ್ಯದ್ದೇ ಆಸರೆ..

Thursday, September 12, 2013

ನಾಳೆ ಬರುತಿದೆಯಂತೆ

ನಿನ್ನೆಯ ಬಸಿರ ಸೀಳಿದ
ಯಾತನೆಯಬ್ಬರ ಇಂದಿನುದ್ದಗಲಕಿತ್ತು.
ಸಂಜೆಯಾಗಿದೆ, ಇಂದಿನ ರಾತ್ರಿಯೂ ಒಂದು ಭರವಸೆ,
ಇದು ಅದಾಗಲಿದೆಯಂತೆ, ನಾಳೆ ಬರುತಿದೆಯಂತೆ..
 
ನೂರು ಕನಸಲಿ
ಬಿತ್ತಿದ ನೂರಾರು ಬೀಜಗಳಲಿ
ಅಂಗೈ ಪಾತಿಯಲೊಂದೇ ಒಂದು
ಮೊಳೆತಿದೆಯಂತೆ, ನಾಳೆ ಹೂ ಬಿಡಲಿದೆಯಂತೆ..
 
ಹಕ್ಕಿ ಹಾರಿ ಹುಡುಕಿ ಹೆಕ್ಕಿ
ಜತನದಿ ಜೀವ ಮುಡಿಪಿಟ್ಟು
ಒಟ್ಟು ಮಾಡಿದ್ದೆಲ್ಲ ಹೊಲಿದು, ಬೆಸೆದು
ಗೂಡು ಮಾಡಿದೆಯಂತೆ, ನಾಳೆ ತತ್ತಿಯಿಡಲಿದೆಯಂತೆ..
 
ಕೋಶದ ಭಿತ್ತಿಯಲಿ ಬಿರುಕು
ಅಂಟಿನಸಹ್ಯ ಯಾತನೆ ಮುಗಿದು
ತೆವಳುವ ಹುಳಕೆ ರೆಕ್ಕೆ ಮೂಡಲಿದೆ,
ಬಣ್ಣದ ಚಿತ್ರವಾಗುವುದಂತೆ, ನಾಳೆ ಚಿಟ್ಟೆಯಾಗಲಿದೆಯಂತೆ..
 
ನಡುಗುತಾ ನಿಲ್ಲಬಯಸುವ ಕಾಲು
ಬರೆಯಬಯಸುವ ಕೈ, ಹಾಡಬಯಸುವ ಬಾಯಿ
ಒಟ್ಟಾರೆ ಕುಣಿದುಕುಪ್ಪಳಿಸುವಾಸೆಯ ಮೈಮನ
ಚೈತನ್ಯ ಕುಡಿಯಲಿವೆ, ನಾಳೆ ಅದನವ ತರಲಿರುವನಂತೆ..

Tuesday, September 10, 2013

ಅವಳ ಕರೆತಾರೇ ಗೌರಮ್ಮಾ....

ಧಗೆಯಮ್ಮಾ.....
ಹೊತ್ತಿ ಉರಿಯುತಿವೆ ಮನಸುಗಳು.
 
ನಗೆಯ ವರ ತಾರಮ್ಮಾ..
ಬೇರೆಲ್ಲ ಸೌಭಾಗ್ಯ ಬಿಟ್ಟುಬಿಡು.
 
ಕೈ ಹಂಚಿವೆ ಕೆಂಡ,
ಬಾಳೊಂದು ಯುದ್ಧಕಾಂಡ.
 
ಎದೆ ತುಂಬಿದೆ ಬರೀ ಹೊಗೆ,
ಒಳಗೆಲ್ಲ ಚೆಲುವು ಸುಟ್ಟಿದ್ದಕೆ.
 
ಉಸಿರುಗಟ್ಟಿ ಕೆಮ್ಮಿ ಬಯ್ಗುಳು,
ಬಾಯ್ಬಿಟ್ಟರೆ ಬರೀ ರಕ್ತದುಗುಳು.
 
ರಾಗದ್ವೇಷಗಳ ಸಾಮ್ರಾಜ್ಯ
ಪ್ರೀತಿಪ್ರೇಮ ನಿಸ್ತೇಜ..
 
ಹತಭಾಗ್ಯ ಮುಖಕೆ ಸೆಟ್ಟಿಸಿಂಗಾರ
ಒಳಗೆ ಹಗೆಕೋಪದ ಬಗೆಭಂಡಾರ..
 
ನಿನ್ನನೂ ಬಿಟ್ಟಿಲ್ಲ, ಹಿತವಾದುದೇನನೂ...
ಹೆಸರೆಳೆದೆಳೆದು ತಂದಿಲ್ಲಿ
ಜಿಜ್ಞಾಸೆಯಾಗಿಸುತಾರೆ.
ಪ್ರಶ್ನೆಯ ಕಿಡಿ, ಉತ್ತರವೂ ಕಿಡಿಯೇ.
 
ಭಕ್ತಿ-ನಂಬಿಕೆ ಉರಿಸಿ
ಬೂದಿಯಾಗಿಸಲಾಗಿದೆ.
ಆ ಬೂದಿ ಹಣೆಗಿಟ್ಟು
ಉರಿವ ಶಕ್ತಿಯದೆನಲಾಗಿದೆ.
 
ಸ್ಥಿರ ತಾವಿರದೆ ಶ್ರದ್ಧೆ,
ಇರಿಸಿದಲ್ಲಿರಲಾಗದೆ ತ್ರಿಶಂಕು.
 
ನಗು ಮೃದುಮುಗುದೆ
ಹತಾಶೆ-ನಿರಾಶೆಯ ಕೈಲಿ
ಅತ್ಯಾಚಾರಕೊಳಗಾಗಿ
ಚಿಂದಿಚಿಂದಿ, ಮುಖ ಮುಚ್ಚಿ
ನಿನ್ನೆಡೆಗೋಡಿ ಬಂದಾಗಿದೆ.
 
ಕರೆದುತಾರೇ ತಾಯಿ..
ಕಳಚಲಾಗದೊಂದು
ಧೈರ್ಯಸ್ಥೈರ್ಯದ ಸೀರೆಯುಡಿಸಿ.
ಉರಿಸಲಾಗದೊಂದು
ವಜ್ರದಂಥ ನಿಲುವು ಮುಡಿಸಿ.
ದ್ವೇಷ-ಸಿಟ್ಟು ಕರಗಿಸುವ
ಪ್ರೀತಿಯ ಶಕ್ತಿಯಾಯುಧವಿತ್ತು.
 
ದೂಡುವ ಕೈಗಳ ಮುದ್ದಿಸಿ
ಕೊರಳಹಾರ ಮಾಡುವ ಚೆಲುವು,
ಮೂಡಿದೆಲ್ಲ ಅಡೆತಡೆ ತರಿದು
ಮನನುಗ್ಗಿ ಮನೆ ಮಾಡುವ ಒಲವು,
ಹೊಸದಾಗಿ ಹೀಗೆ ಸಿಂಗರಿಸಿ
ಮತ್ತವಳ ಧರೆಗಿಳಿಸಿ ತಾರೇ...
 
ಹಿಂದೆ ನಾ ಕೇಳಿದ್ದೆಲ್ಲ,
ನೀನಿತ್ತದ್ದೆಲ್ಲ ಇಂದು ತೃಣವೆನ್ನಬಲ್ಲೆ.
ಮಾನವತೆಯ ಗಿಡದಲೀಗ
ನೀನರಳಿಸಬೇಕು ತುರ್ತು ನಗುಮೊಲ್ಲೆ...
 
 
 

Saturday, September 7, 2013

ಒಳಗು ಬದಲಿಸುವ ಬಿಳಿಮೋಡಗಳು

ಗೊಂಬೆಗಾಗಿ ಕಿತ್ತಾಡುತ್ತಾ
ನಾನೂ ನನ್ನ ಕಂದಮ್ಮಳೂ
ಹಳತು ಹರಿದು ಕ್ಷಣಕಾಲದ ವಿಭ್ರಮೆ..
ಹಿಂದೆಯೇ ಹೊಸಗೊಂಬೆಯ
ಭರವಸೆ ಮೂಡಿಸಿದ ಮುಕ್ತ
ನಗೆಯಲೆ ಮೇಲೆ ಹಳೆಗೊಂಬೆಯೊಡಲ
ಅಂದಿನ ಹತ್ತಿತುಂಡುಗಳ ಹಾರಾಟ,
ಅವಳ ಹದಿನೆಂಟನೆಯ ಹುಟ್ಟುಹಬ್ಬ,
ಮೊನ್ನೆ ನಡುಹಗಲ
ನೀಲಾಕಾಶದ ಬಿಳಿಮೋಡಗಳಲ್ಲಿತ್ತು.
 
ಅತ್ತೆ ಸಾಯುತಾ ಹೆತ್ತ ಎರಡನೆಯ ಹೆರಿಗೆ
ಮೊದಲಕೂಸಿನ ಮೂರುವಯಸಿನ
ಮನದಲೇನಿತ್ತೋ, ಕಣ್ಣೀರೊರೆಸುತಲೇ ಇದ್ದ
ಬೆರಳು ಮಾಯಾಚಾಪೆಯೇರಿಸಿ
ಅಮ್ಮನ ಕಿತ್ತುಕೊಳುತಿರುವ
ಮೃತ್ಯುವಿಗೊಡ್ಡಿದ ಸವಾಲೆಂಬಂತೆ
ಅಂದು ದಿಂಬಿನರಿವೆ ಕಿತ್ತೆಸೆದ ಭರಕೆ
ಚೆಲ್ಲಾಡಿದ ಹತ್ತಿಚೂರುಗಳ ಹಾರಾಟ,
ಅತ್ತೆಯ ತಿಥಿಯ ದಿನ,
ನಿನ್ನೆ ಮಧ್ಯಾಹ್ನದ ನೀಲಾಕಾಶದ
ಬಿಳಿಮೋಡಗಳೊಳಗಿತ್ತು..
 
ಸರಣಿಮರಣದ ನಕ್ಷತ್ರಕಡ್ಡಿ ಕಿಡಿಗಳಂತೆ
ಸಾಲುಸಾಲು ಅದೆಷ್ಟೋ ಚಟ್ಟ.
ಆತ್ಮ ಉಡುಪು ಬದಲಿಸಲಿಕೆ
ಜಡವು ಸಾವಿನ ಪರದೆ ಅಡ್ಡಹಿಡಿದ ಕತೆ
ಮೌನ ಮುನ್ನಡೆಸಿದ ಶವಗಳ ಮೆರವಣಿಗೆ
ಮೇಲೆ ಹಾಸಿದ ಬಿಳಿಬಟ್ಟೆಯ ಹಾರಾಟ
ನೀ ಬರದೆ ಉಳಿದ
ಇಂದಿನ ಉರಿಬಿಸಿಲ ನೀಲಾಕಾಶದ
ಬಿಳಿಮೋಡಗಳೊಳಗಿದೆ..
 
 
 

Friday, September 6, 2013

ಇನ್ನೇನಲ್ಲ, ಅದು ನೀನೇ..

ನೀನಿತ್ತಿಲ್ಲವೆಂದು ಅಳುತಿರಲಿಲ್ಲ ಲೋಕವೇ,
ಈಗಿತ್ತಿರುವೆ, ಪ್ರೀತಿ ಮನಸ್ಪೂರ್ತಿ ಸ್ವೀಕರಿಸಿದೆ.
ತೇರ್ಗಡೆಪತ್ರವಿಲ್ಲದೆಯೂ ಮುನ್ನಡೆಯಬಲ್ಲುದು;
ನೀನಷ್ಟೇ ತೀರ್ಪೀಯದೆ ಕ್ಷಣವೂ ಇರಲಾರೆ.
 
ನೀ ಹಿಂಬಾಲಿಸಿದ್ದು ಪ್ರೀತಿಯನಲ್ಲ;
ದೂರ ಸಾಗುತಿದ್ದ ನಿನ್ನತನವನ್ನೇ.
ಸಮೀಪಿಸಿದ್ದೂ ಪ್ರೀತಿಯನಲ್ಲ;
ಸಾಗುವುದ ತಡೆಯಬಯಸಿದ ನಿನ್ನೊಳಗನ್ನೇ.
 
ನೀ ಮೆಚ್ಚಿದ್ದು ಪ್ರೀತಿಸಿದ್ದಕ್ಕಲ್ಲ;
ಅಲ್ಲಿದ್ದುದು ನಿನ್ನ ಅನಿಸಿಕೆಯದೇ ನೆರಳೆಂದು.
ನೀನೊಲಿದದ್ದೂ ಪ್ರೀತಿಸಿದ್ದಕ್ಕಲ್ಲ;
ಆ ನೆರಳು ಹಗಲಿರುಳೂ ನಿನಗೆ ಸ್ಥಿರವಿತ್ತೆಂದು.
 
ನೀ ಮಣಿದದ್ದು ಪ್ರೀತಿಗಲ್ಲ;
ನಿನಪಾದವೇ ಕುಣಿದಲ್ಲಿ ನೀ ಮೆತ್ತಗಾದುದಕೆ.
ಶರಣಾದದ್ದೂ ಪ್ರೀತಿಗಲ್ಲ;
ಸೆಟೆದೆದುರಿಸಿ ನಿಲುವ ಶಕ್ತಿಯಿಲ್ಲದ್ದಕೆ.
 
ನೀ ತಣಿದುದು ಪ್ರೀತಿಯಿಂದಲ್ಲ;
ತುಟಿ ಸವರಿದ ಜಿಹ್ವೆ ನಿನದೇ ಅಲ್ಲಿದ್ದುದಕೆ.
ತಂಪಾದುದೂ ಪ್ರೀತಿಯಿಂದಲ್ಲ;
ತಣಿಸುವೊರತೆ ನಿನದೇ ಅಲ್ಲಿ ಚಿಮ್ಮಿದ್ದಕೆ.
 
ನೀ ಉತ್ತೀರ್ಣವೆನುವುದಾದರೆ
ಅದು ಪ್ರೀತಿಯನ್ನಲ್ಲ;
ನಿನನೇ ಎದುರಿಸಿ, ಮಣಿಸಿ, ಒಲಿಸಿ, ಮೆಚ್ಚಿಸಿ,
ಒಪ್ಪಿಸಿ ನಿನ್ನೊಳಗೇ ಪ್ರೀತಿ ಕಂಡುಕೊಂಡ ನಿನ್ನನ್ನೇ...
 
ಜರೆಯುತಿರುವುದಾದರೂ ಪ್ರೀತಿಯನಲ್ಲ;
ತಲುಪಲಾಗದ ನಿನದೇ ಅಸಹಾಯಕತೆಯನ್ನ.
ತೊರೆಯುತಿರುವುದಾದರೂ ಪ್ರೀತಿಯನಲ್ಲ;
ನಿನ್ನೊಳಗಿನ ಜೀವಂತಿಕೆಯನ್ನ.
 
ಲೋಕವೇ,
ಪ್ರೀತಿಸಿ ಉದ್ಧರಿಸುವುದಲ್ಲ;
ಉದ್ಧಾರವಾಗುವುದು.
ನಿನ್ನ ನಂಬಿ ಏನೂ ಕಾದು ಕೂತಿಲ್ಲ;
ನೀನೆ ನಿನ್ನ ನಂಬಲು ಕಾದಿರುವುದು.
ಅಲ್ಲೆದುರಿರುವುದು, ನೀ ನಿಟ್ಟಿಸುತಿರುವುದು
ಇನ್ನೇನಲ್ಲ; ನೀನೇ, ಬರೀ ನೀನೇ..
 
ಪ್ರೀತಿ ನಿಸ್ವಾರ್ಥವಿರಬಹುದು; ನೀನಲ್ಲ.
ಪ್ರೀತಿ ನಿಷ್ಕಾಮವಿರಬಹುದು; ನೀನಲ್ಲ.
ಪ್ರೀತಿ ನಿರ್ಗುಣವಿರಬಹುದು; ನೀನಲ್ಲ.
ಸ್ವಾರ್ಥ, ಕಾಮ, ಗುಣಗಳ ಮಾಪಕದಲಿ
ಸ್ವಯಂಭು, ಸ್ವಯಂಪೂರ್ಣ, ಸ್ವತಂತ್ರ
ಪ್ರೀತಿಯನಳೆವುದು ಮೌಢ್ಯವೆನಿಸೀತು.
ಪ್ರೀತಿ ಬೆಳೆವದ್ದಲ್ಲ, ಅಳಿವದ್ದೂ ಅಲ್ಲ.
ನೀನುಳಿಯಲು ಬಿಡದೆ ಬಿಗಿಯಾಗಪ್ಪಬೇಕು,
ಕರಗಿ ನೆಲೆ ನಿಂತು ಪ್ರತ್ಯಕ್ಷವಾದೀತು.
ಸಡಿಲಬಿಟ್ಟರೆ ಕಾಣಿಸಿಕೊಳುವ ತುರ್ತಿಲ್ಲವದಕೆ,
ಇದ್ದೂ ಇರದಂತೆ ಅದೃಶ್ಯವಾಗುಳಿದೀತು.

ಲೋಕ ಕಸಿಯಲಾಗದ ಹಾಡು

ಮಾತು ಮನಸು ಭಾವ
ನೇರ ಸರಳರೇಖೆಯಲಿವೆಯೆಂದು
ಶುರುವಾದ ಬಿಂದುವಿನಿಂದ ಹೊರಡುತ್ತೇನೆ.
ಪ್ರತಿಬಾರಿ ಉತ್ಸಾಹದಿಂದ
ಧ್ವನಿಗೆ ದುಪ್ಪಟ್ಟು ತೀವ್ರತೆಯ ಪ್ರತಿಧ್ವನಿಯಾಗಿ.
"
ನೇರ ಚಲಿಸುವುದು ಬೆಳಕಷ್ಟೇ, ನೋಟವಲ್ಲ,ನೋಟದ ಅರಿವಲ್ಲ, ಅರಿವಿನ ತಿರುಳಲ್ಲ.".
ನೂರೊಂದನೆಯ ಬಾರಿಯೂ
ಬಯಸದೆಯೇ ಎಲ್ಲಾ ತಿರುವುಗಳ
ಎಲ್ಲಾ ಮೈಲುಗಲ್ಲುಗಳಲೂ
ಇದೇ ವಿವರ ಎದುರಾಗುವುದು,
ನಾನೋದುತ್ತೇನೆ ಹೊಸದರಂತೆ..
ಸೊಟ್ಟಪಟ್ಟ ಗೀಚುಗೀರುಗಳು
ಕಣ್ಣು ಮೈಕೈಯೆಲ್ಲಾ ಅರಚಿ ಗಾಯ.
ನೂರುಕಲೆಗಳನೂ ನಂಬಿಕೆಯ ಧಿರಿಸಿನಡಿ
ಮುಚ್ಚಿಡುತ್ತೇನೆ, ಮರೆಸುತ್ತೇನೆ;
ಅಲ್ಲ, ಲೋಕದಿಂದಲ್ಲ, ನನ್ನಿಂದಲೇ..
ಲೋಕವದನೇ ಸಾರಿ ಹೇಳಿದ್ದು, ನೋಡಿದ್ದು,
ಮತ್ತು ನೋಡಬಯಸುತ್ತದೆ ಕೂಡಾ..
ಅದಕೆ ನಂಬುವುದು ಗೊತ್ತಿಲ್ಲ,
ಸಂಶಯಿಸುತಲೇ ಎದುರುಗೊಳುವುದು
ಪರೀಕ್ಷಿಸುವುದು, ಗೆದ್ದುದನೂ ಸೋತುದನೂ
ತನಗೆ ಸಲ್ಲದೆಂದು ಎತ್ತಿ ಬದಿಗಿಡುವುದು..
ನಾನು ಇದೇ ಈ ಲೋಕದೊಳಗೇ
ಸಾವಿರದೊಂದನೆಯ ಬಾರಿಯೂ
ಮನತೊಡರಿದ್ದು ಅದೇ ಎನಿಸಿದಾಗ
ನಂಬುತ್ತೇನೆ.
ಮುಂದೊಮ್ಮೆ ಅದಲ್ಲವೆನಿಸಿದಾಗ
ನಂಬದುಳಿಯುತ್ತೇನೆ.
ದುರ್ಬೀನನೇ ಮತ್ತೆ ತಿಕ್ಕಿ
ಒರೆಸಿ ಪುನಃಪುನಃ ದಿಟ್ಟಿಸುತ್ತೇನೆ,
ಸ್ಪಷ್ಟ ಕಂಡದ್ದು ಒಪ್ಪಲೊಪ್ಪದ
ದಯನೀಯ ಕಣ್ಣುಗಳಿಂದ
ನಂಬಿಕೆಯ ಪ್ರತಿಬಿಂಬ
ಎದುರಿನವುಗಳಲಿ ಕಾಣಲು,
ಅಲ್ಲೊಂದು ಶುದ್ಧಸ್ಫಟಿಕ ಎದೆಗೊಳ
ಮತ್ತಲ್ಲಿ ಇಲ್ಲಿನದರ ಪ್ರತಿಫಲನ ನೋಡಲು.
ಯಾಕೆಂದರೆ ಲೋಕವೇ,
ನಾನು ಬರೀ ಪ್ರೀತಿಸುತ್ತೇನೆ,
ಅದಕಾಗಿ ನಂಬುತ್ತೇನೆ..
ಮೊದಲ ಹಾರುಹೆಜ್ಜೆ
ಮುಂದೆಲ್ಲೋ ಮುರಿದ ರೆಕ್ಕೆಯಾದರೂ
ನಂಬಿಕೆ ಕಿತ್ತೆನೆಂದು
ಗೆದ್ದೆನೆಂದು ನೀ ಬೀಗುವುದಾದರೆ
ನಿನಗೆ ಜಯವಾಗಲಿ ಲೋಕವೇ..
ನಾ ಮಾತ್ರ ಸೋತಿಲ್ಲ, ಸೋಲುವುದಿಲ್ಲ.
ಹಾರದೆಯೂ ನೆಲಕೊರಗಿಯೂ
ಮತ್ತೂ ಹೊಸತೆಂಬಂತೆ ಹಾಡಬಲ್ಲೆ,
ನಂಬುವ ಹಾಡು, ಪ್ರೀತಿಸುವ ಹಾಡು
ಒಮ್ಮೊಮ್ಮೆ ಮುದ ನೀಡುವಂತೆ,
ಒಮ್ಮೊಮ್ಮೆ ಎದೆ ಬಗಿಯುವಂತೆ..

Wednesday, September 4, 2013

**

ಅಯ್ಯೋ ಬಿಡು!
ಪಟ್ಟುಹಿಡಿದು ನಾನೂ ಕೂತಿರಲಿಲ್ಲ,
ದುಪ್ಪಟ್ಟು ಕೊಟ್ಟು ಕೊಳುವರಿಲ್ಲದಿರಲಿಲ್ಲ.
ಮನಸು ಅದೇ ಸಂತೆಯ ಅದೇ ಸೂರಿನಡಿ
ಅದೇ ಸರಪಳಿಯೊಳಗೆ ಪಾದವೂರಿದ್ದು
ನಿನ್ನೆದೆಯಲಿದ್ದು ಬಂದದ್ದು, ಅದೇ ಬಂಡವಾಳದ
ಇನ್ಯಾರೂ ಖರೀದಿಸಲಾಗದ ಬೆಲೆ ಕೂಗಿದ್ದು
ನಿನ್ನ ಪಾಕೀಟು ತೆತ್ತು ಖಾಲಿಯಾದದ್ದು
ಹಾಗೆ ನಿನ್ನ ಕೈಯ್ಯೊಳಗೆ ಸರಕು ಹೊಕ್ಕದ್ದು
ಸರಕ ಹೊತ್ತು ಹೊರಟ ನಿನ್ನ ಸರಪಳಿ,
ಪಾದ, ಸೂರು ಇನ್ನೆಲ್ಲ...
ಕೊನೆಗೆ ಸಂತೆಗೆ ಸಂತೆಯೇ ಹಿಂಬಾಲಿಸಿದ್ದು
ಎದೆಯುಬ್ಬಿಸಿ ತಲೆಯೆತ್ತಿ ನೀ ಮುಂದೆ ಮುಂದೆ
ಇನ್ನೆಲ್ಲ ಹಿಂದೆ ಹಿಂದೆ ಬಂದದ್ದು ಬೇರ‍ೆ ಮಾತು..

Tuesday, September 3, 2013

ನೀಲಿ ಪಡೆದು ಭಾನು ಕೊಟ್ಟ ಬಾನು

ಮೇಲೆ ಹರವಿಕೊಂಡ ಅವ
ಕೆಳಗೆ ಹರಡಿಕೊಂಡ ಅವಳು
ಅವಗೆ ಬಗಿಯುವಾತುರ
ಅವಳಿಗೆ ಚೂರುಚೂರಾಗುವದ್ದು.
 
ಅವಳು ಬಿತ್ತರಿಸಿದ ರಹಸ್ಯ.
ಮೈಯ್ಯೆಲ್ಲಾ ಕಣ್ಣಾಗಿ ಕಿವಿಯಾಗಿ
ಅವ ಕಂಡ ಅಸಂಖ್ಯ ದೃಶ್ಯ..
ಎಲ್ಲೋ ಒಂದಷ್ಟು ಕಡಲು
ನೀಲಿನೀಲಿ ಅದರೊಡಲು
ದೃಷ್ಟಿಯಲ್ಲೇ ನಿಂತ ಕ್ಷಣ
ಅವಳೊಡಲ ನೀಲಿದನಿ
ಪ್ರತಿಧ್ವನಿಸಿದೆ ಅವನೊಳು..
 
ಅದೆಲ್ಲೋ ಕರಾವಳಿಯ ಕಡಲು
ಬಯಲುಸೀಮೆಯಲಿ ನಾನು
ಅಲ್ಲಿ ಪ್ರತಿಫಲಿಸಿದ ನೀಲಿ
ಇಲ್ಲೂ ಕಂಡು ದಂಗು ನಾನು..
ಅವಳು ಅವನೊಳಗೆ
ಇಷ್ಟು ಆವರಿಸುವುದು ಸಾಧ್ಯವೇ?!
 
ದೂರ ಬಹಳಷ್ಟು ನಡುವೆ
ನೂರು ಮತ್ತೆಷ್ಟೋ ಅಡೆತಡೆ
ತಲುಪಿಯಾನೇ, ಆತುರ ಕಾತುರ
ತಡೆದಾನೇ ಅವನೆಂಬ ಅವನೇ
ಪೂರ್ತಿ ನೀಲಿಯಾದ ಮೇಲೆ?!
 
ಶಿವನ ವೀರಭದ್ರನಂತೆ
ತಾನಲ್ಲದ ತಾನಾಗಿ
ಬಾನು ಭಾನುವ ಸೃಜಿಸುತಾನೆ.
ವಿರಹದುರಿಯೇ ಮೈವೆತ್ತು
ಕುದಿಯುವ ಬೆಂಕಿಚೆಂಡು.
ಅವನೆಲ್ಲ ದಾಹ ಹೊತ್ತ
ಇವನ ಕಣ್ಣ ಬಿಸಿಲಿಗೆ, ಬೆಳಕಿಗೆ
ಹೋ! ಅವಳ ಮೈಮನವೆಲ್ಲಾ ಬೆಳಗು!
 
"ನಾ ಕದಲಿಯೂ ಚಲಿಸಲಾರೆ
ಅದೃಶ್ಯ ಬಂಧನವೆನದು.
ಇಲ್ಲೇ ಇದ್ದು ನಾನಲ್ಲಿಗಿಳಿವಂತೆ
ನೀನವಳ ಬಳಿಸಾರು" ಎಂದಪ್ಪಣೆಗೆ
ಭಾನು ಸಾಗುತಾನೆ ಹುಟ್ಟಿನಿಂದ
ಮುಳುಗುವೆಡೆಗೆ, ಪೂರ್ವದಿಂದ ಪಶ್ಚಿಮಕೆ..
 
ಲೋಕ ಬಾನು-ಭುವಿಯ ಸಂಗಮವೆನುವಲ್ಲಿ
ಅದೇ ಆ ನೀಲಿ ಮೊಗೆಮೊಗೆದು ಕೊಟ್ಟ
ಅವಳ ಕಡಲಿನೊಳಗಿಳಿಯುತಾನೆ ಭಾನು.
ಒಂದಾಗುತಾನೆ,
ಮುಳುಗಿ ತಾನಿಲ್ಲವಾಗುವ ಹೊತ್ತು
ತಾ ತಾನಲ್ಲದೇ ಬಾನುವೇ ಆಗುತಾನೆ.
ಬಾನೀಗ ಶಾಂತ, ತೃಪ್ತ..
 
ಅವಳಿಗೋ ಪಡೆದ ಕ್ಷಣವೇ
ಎಲ್ಲ ಮುಗಿದ ಚಿಂತೆ..
ಬೆಳ್ಳನೆ ಬೆಳಕು ಕತ್ತಲಾದ ಚಿಂತೆ
ಬಣ್ಣದೋಕುಳಿಯೆರಚಿದ ಕ್ಷಿತಿಜವೀಗ
ಕಪ್ಪುಕಪ್ಪು, ಭಾನು ಮುಳುಗಿಯಾಯ್ತು..
ಅವ ನಿಶ್ಚಿಂತ, ನಿರ್ವಿಕಾರ, ನಿರ್ಲಿಪ್ತ..

ಕಡಲು ಮೊರೆಯುತ್ತದೆ..
ಇಷ್ಟು ಕಾದು ಕಾದು
ಒಂದೇ ಕ್ಷಣದ ಮಿಲನವೇ?!
ಬಾನು ನಗುತಾನೆ,
ಮತ್ತೆ ನಾಳೆ ಬರಲಿದೆ,
ಅದೇ ಭಾನು, ಅದೇ ಬೆಳಕು,
ಅದೇ ಬಿಸಿಲು, ಮತ್ತದೇ ಮಿಲನದ
ಇನ್ನೊಂದು ಕ್ಷಣ ಹೊತ್ತು..
 
ಪುನಃ ಅವ ಮೇಲೆ ಹರವಿಕೊಳುತಾ
ಅವಳು ಕೆಳಗೆ ಹರಡಿಕೊಳುತಾ
ಕಾಯುತಾರೆ ಆ ಕ್ಷಣದ ನಾಳೆಗೆ..

**

ಎರಡು ಭೂಖಂಡ
ಪ್ರತ್ಯೇಕ ಹೆಸರು
ಎರಡು ಪರಿಮಿತಿ
ಹವೆ, ಭೂಸ್ಥಿತಿ
ಎರಡು ಆಚಾರವಿಚಾರ
ಎರಡು ಪ್ರತ್ಯೇಕ ಆಕಾರ.
ಈ ಎಲ್ಲ ಎರಡುಗಳ ನಡು
ಒಂದು ಸೀಮೆ, ಒಂದು ಗಡಿ.
ಅಲ್ಲೊಂದು ಇಲ್ಲೊಂದು
ಗಡಿತಾಕಿ ನಿಂತ ಶಿಖರವೆರಡು.
ನಡುವೊಂದು ತೂಗುಯ್ಯಾಲೆ.
ಭೋರೆಂದು ಬೀಸಿದೊಂದು
ಗಾಳಿಯ ರಭಸಕೋ ಲಹರಿಗೋ
ಶಿಖರಾಗ್ರ ಬಾಗಿವೆ ಪರಸ್ಪರರತ್ತ.
ಮಿತಿ ದಾಟುವ ಮುಟ್ಟುವ
ದೂರ ಕ್ಷತಿ ಮಾಡುವಾಸೆ
ಹುಟ್ಟಿದ್ದು ರಭಸಕ್ಕೋ ಲಹರಿಗೋ
ಮತ್ತೆ ಗೊತ್ತಿಲ್ಲ..
ಅದೇ ಗಾಳಿಗೆ ಹುಯ್ದಾಡಿದೆ ಸೇತುವೂ..
ಎರಡು ಉದ್ದ ಹಗ್ಗ, ದೃಢತೆ ಗೊತ್ತಿಲ್ಲ
ಅತ್ತಿತ್ತ ಬೆಸೆದ ಬಿಗುವೂ ಗೊತ್ತಿಲ್ಲ.
ನಡುನಡುವೆ ಮರದ ಪಟ್ಟಿ
ಎಷ್ಟು ಹಳೆಯದೋ ಗೊತ್ತಿಲ್ಲ.
ಶಿಖರವೊಂದು ಹೆಜ್ಜೆ ಬಾಗಿ
ಮತ್ತೆ ನೆಟ್ಟಗಾಗಿದೆ, ಕಣ್ಮುಚ್ಚಿ.
ಇದೀಗ ಸರದಿ ಇನ್ನೊಂದರದು
ಮುಂದಿಟ್ಟು ಹಿಂದಡಿಯಿಡುವದ್ದು..
ಸ್ಪರ್ಶಿಸದೇ, ಕಾಲೂರದೇ
ಗೊತ್ತಿಲ್ಲದ್ದೆಲ್ಲ ಗೊತ್ತುಮಾಡಿಕೊಳಲಾದೀತೇ?
ಹುಯ್ದಾಡೀ, ಆಡೀ ಯತ್ನಿಸಿ
ಸಾಧಿಸಿ ದೄಢವಾಗಿ
ಸಾಗುವುದು ಬಿಟ್ಟು
ಪರಸ್ಪರ ಬಳಿಸಾರುವ ದಾರಿಯಲಿ,
ನಿಂತಲ್ಲೇ ನಿಂತು
ಆರಿದ ಬಾಯಿಗೆ ಭಯವುಣಿಸಿ
ಹಸಿದಾಗ ಸಂಶಯವುಂಡು
ವಕ್ರದೃಷ್ಟಿಗೆ ಕಾಮಾಲೆ ಹಚ್ಚಿದ್ದಕೆ
ಗಾಳಿಕಣಕೊಂದರಂತೆ
ಪ್ರಶ್ನೆಗಳುತ್ಪತ್ತಿಯಾಗಿವೆ..
ಇಷ್ಟೆಲ್ಲ ಮಾಡಿದ್ದು ಶಿಖರಗಳೇ,
ಗಾಳಿಯೇ, ತೂಗುಯ್ಯಾಲೆಯೇ,
ಅಥವಾ ಆ ಬಾಗುವಿಕೆಯೇ?
ಶಿಖರಗಳಿಗೂ ಮನಸಿದೆಯೇ,
ಮನಗಳೊಳಗೆ ಶಿಖರಗಳೇ?
ಶಿಖರ ನಮ್ಮೊಳಗಿದೆಯೇ,
ಶಿಖರದೊಳಗೆ ನಾವೇ?

Monday, September 2, 2013

**

ನೀ ಬಳಿಯಿರದಾಗಿನ ಪ್ರತೀಕ್ಷೆ
ಚಿನ್ನ ಪುಟಕಿಡುವ ಪರೀಕ್ಷೆ.
ಕಾದು, ಕುದಿದು ಗಳಗಳ
ಕಾಲಪಾತ್ರೆ ತುಂಬ ಜೀವಜಲ
ಪ್ರೀತಿ ಮರಳುತಿದೆಯಲ್ಲಿ
ಭಕ್ತಿ ಬೇಯುವ ಕುಲುಮೆಯಲಿ..
ನೂರು ರೂಪ ನೂರು ಜನ್ಮದಲೆಲ್ಲೋ
ಒಮ್ಮೊಮ್ಮೆ ಆಗೋ ಸಾಕ್ಷಾತ್ಕಾರದಲಿ
ಕರಗಿ ಕನಸಾಗಿ ನಿನ್ನಿರುಳಲಿ,
ಹೊಳೆದುಂಗುರವಾಗಿ ಬೆರಳಲಿ
ಕಣ್ಣಲಿ ಗುರ್ತಿಸಿ ಬೆಟ್ಟಲಿ ಧರಿಸಿದ್ದಕೆ
ಬೆಂಬಿಡದೆ ಅದಿನ್ನು ಕಾಡಲಿದೆ ಜೋಕೆ..
ನಾನಿರುವಾಗ ಬರಹದ ನೆಪವಾಗಿ,
ಬರೀ ನೆನಪಾಗುಳಿವಾಗ ವಿರಹವಾಗಿ

**

ಹೊರಗಣ್ಣ ಬೆಂಬತ್ತಿದ ನಡಿಗೆ
ಸೋತು ಕೂತ ಮನಸು
ಎಲ್ಲೂ ಏನೂ ತಾಳೆಯಾಗದೆ
ಮನಸು ತುಂಬಾ ಮುನಿಸು.
ಒಳಗವೆಷ್ಟೋ ಬಿಚ್ಚುಕಂಗಳಿವೆ
ಕಾಲ ಸರಿದಷ್ಟೂ ಚುರುಕಾಗುತಿವೆ
ತೋರಿ, ಕಾಣಿಸುವ ಆಮಿಷವೊಡ್ಡಿವೆ.
ಅಲ್ಲಿ ಮನಸಿನ ಕಾಲ್ಮುರಿದ ಬವಣೆ
ಕ್ಷಣಕೊಂದು ಹೊಸ ನೆಪನಮೂನೆ
ಮೈಮನಸು ಕನಸೆಲ್ಲ ಇಲ್ಲೇ ಬಿಟ್ಟು
ಕೈಗೂಡದ ನಮ್ಮ ಮಿಲನದಾಸೆಯುಟ್ಟು
ಹೋಗಿಬರೋಣವೇ ಒಲವೇ
ಒಂದೇ ಒಂದುಸಲ ಆ ನೆಲಕೆ?
ನನ್ನ ನಾನೆನಿಸಿದ ನಿನ್ನ ನೀನೆನಿಸಿದ
ಆ ಅವೆಲ್ಲವೂ ಕಾಣೆಯಾಗುವ ತಾಣಕೆ?
ನಾ ನೀನೇ ನೀ ನಾನೇ
ಅನಿಸುವ ದರ್ಪಣವಿದೆಯಂತೆ.
ಮೆಚ್ಚಿದ್ದು ಮೆಚ್ಚದ್ದೆಲ್ಲ ಅಪ್ರಯತ್ನ
ಸವಿಯೆನಿಸುವ ದರ್ಶನವಿದೆಯಂತೆ.