Tuesday, September 27, 2016

ಸೊಗದ ಸುಗ್ಗಿಯ ಸುದ್ದಿ
ಹಾಗೇ ತೇಲಿ ಬಂದು ತಲುಪಿತು.
ನಗೆಯ ಹಾಳೆಯಗಲ "ಕುಶಲವೇ ಕ್ಷೇಮವೇ?"
ನಿಜಕ್ಕೂ ನಾ ಸುಳ್ಳಾಡಲಾರೆ...

ಕರೆಯುತ್ತಿರುವ ನೀನು,
ಮಾತು ಸತ್ತು ಮುಚ್ಚಿಯಾಗಿರುವ ಮೌನದ ಕೋಟೆಬಾಗಿಲು.
ಅದರ ಉದ್ದದಷ್ಟುದ್ದ ಬಯಕೆ, "ಇನ್ನೂ ಬೇಕು"
ಕ್ಷಿತಿಜದಂಥ ನೆಲೆಯ ಕನಸೇರ‍ಲಾರೆ.

ಪಾತಾಳಕೆ ಕಾಲೂರಿ ಮತ್ತೆ ಚಿಮ್ಮಿ ನೆಗೆದೆತ್ತರ
ಹಾರುವ ದೇವತೆಯ ಅಂಗಾಲಿಂದುದುರಿದ
ಚಿನ್ನದ ಪುಡಿಯೊಂದಿಷ್ಟು ನೆತ್ತಿ ಮುತ್ತಿಕ್ಕಿತು;
ನಗೆ-ನೋವುಗಳ ನಡುವೆ
ಇಲ್ಲೊಂದಿಷ್ಟು ಗುಟ್ಟಿನ ಜಾಗವಿದೆ;
ಅಲ್ಲಿಡಲಾಗಿದೆ ಬಲು ಜತನ;
ಯೋಚಿಸದಿರು, ಅದು ಹಾಗೇ ಹೊಳೆಹೊಳೆಯುತಿರುತದೆ!

ಪರಿಮಳ ಅಂಟಿಸಿ ಬೆಸೆಯಬಲ್ಲವನೊಬ್ಬ
ದೇವದೂತನ ವಿಮಾನ ಸಕಾಲ
ಬಂದಿಳಿವ, ಬರದಿರುವ ಮಾತು ಬಿಡು.
ಅಂಗಳದಲಿ ನಿನ್ನಿಷ್ಟದ ಕೆಂಪು ಕೇಪಳಗುಚ್ಛ
ಅಂದಿನಂತೇ ಮತ್ತೆ ಮತ್ತರಳಲಿದೆ!

Saturday, September 24, 2016

(ತುಳುಕು - ಅಂಗಾಲು - ಜಡೆ - ಮನೆಯ ದಾರಿ)

ಮತ್ತಿಂದೂ ಕಣ್ಣೆದುರು ಬಂದುಹೋಗುತಾನೆ
ಅದೋ ಬ್ರಹ್ಮಗಿರಿಯ ತುತ್ತತುದಿಯಲ್ಲಿ ಹಾಗೇ
ಸವರಿಹೋದ ಮೋಡದಲೆಯಲಿ ತುಳುಕಿಯುಕ್ಕಿದ್ದ ತಂಪುಹನಿಯ ಹಾಗೆ.

"ಸಾವೆಂದರೆ ಮನೆಯ ದಾರಿ ನೋಡಕ್ಕಾ" ಅನುತ್ತಲೇ
ಗುದ್ದಾಡುತಲೇ ಮತ್ತದನೇ ನೆನೆದು ಅತಿ ಮುದ್ದಿನದೋ ಎಂಬಂತೆ
ನರಳುವ ಹುಡುಗ; ಕಡೆಗೋಲಾಡಿಸಿ ಎದೆಯಲಕ್ಕರೆಯ ಬೆಣ್ಣೆಯೇಳುವ ಹಾಗೆ..

ಬಹಳಷ್ಟು ಹೇಳಿ ಇನ್ನೇನೋ ಹೇಳಿ ಬರೀ ಹೇಳಿ
ಸಂತೈಸಬೇಕನಿಸುತ್ತದೆ ಅವನಿಗೇನೂ ಅಲ್ಲದ ಒಬ್ಬಳಾಗಿ
ಅಜ್ಞಾತ ಉಳಿದುಹೋದವು ಶಬ್ದವೊಂದೊಂದೂ ಅಂಗಾಲ ಮಚ್ಚೆಯ ಹಾಗೆ..

ಬದುಕಿಗೊಂದು ಮೊಗ್ಗಿನ ಜಡೆ ಹಾಕಬೇಕಂತೆ
ಸಾವಿನ ಅರಳುಗಳನು ಹುಟ್ಟಿನ ಹಗ್ಗದಲಿ ಕೋದು
ಅಳುನಗುಗಳಿಟ್ಟು ನಡುನಡುವೆ ಕಾಲ ಹೆಣೆಯುವುದು ಹೂಮಾಲೆ ಹೀಗೆ..

Tuesday, September 20, 2016


ಮಧ್ಯಾಹ್ನದ ಗೆಜ್ಜೆಯುಲಿ
ವೈಯ್ಯಾರದಲಿ ಬರುವಾಗ
ಮಾಗಿ ನಡು ಬಾಗಿ
ಕಾಲ್ತೊಳೆದು ಬರಮಾಡಿಕೊಂಡಿದೆ..

ಹಸಿರ ನಡುನಡುವೆ
ಇಣುಕುವ ಚೆಲುನೀಲಿ,
ಆಚೆ ಅಗಲ ನೀಲಿಯ ನಡುವೆ
ಹಾರಿ ತೇಲುವ ಹತ್ತಿರಾಶಿ!

ಖುಶಿಯ ಲಹರಿಯೊಂದು ಹಾಗೇ ಬಂದ್ದು
ತಾಕುವಾಗ ಬಿಸಿಬಿಸಿಯಾದದ್ದು.
ಅವನ ಸಹಿಯೊಂದು ಹಾಗೇ ಬಂದು
ತಲುಪುವಾಗ ಕಹಿಕಹಿ ಅನಿಸಿದ್ದು!

ಹಿಂತಿರುಗಿದೆಯಂತೆ ಅವನೊಳಗೆ ಪಚ್ಚೆ
ಜಗಳಾಡಿ ಮಲಗಿತ್ತು ತುಸುಕಾಲ
ಎದ್ದು ತಳಮಳಿಸಿ ನಲುಗಿ ದೂರದೂರ..
ಅಲ್ಲೆಲ್ಲೋ ತಿರುವಲಿ ಅಳುತಿದ್ದ ಅವಳು ಮತ್ತೆ ಸಿಕ್ಕಿದ್ದಾಳಂತೆ!

ಕಣ್ಮುಚ್ಚಿ ತಮ್ಮ ತಮ್ಮೂರುಗಳಲ್ಲಿ
ಅದರಷ್ಟಕೇ ಒಂದು ಸಮ್ಮೇಳ; ಮಿಲನವಾಗುತ್ತಿದೆ ಅಲ್ಲಿ..
ಇಲ್ಲೆಲ್ಲೋ ಮಧ್ಯಾಹ್ನ ಮುಗಿಯುತ್ತಿದೆ
ಮರೆಗಿಳಿಯುತಾ ಏನೇನೋ ಎಲ್ಲ ಖಾಲಿಯಾಗುತಿದೆ..

"ಖಾಲಿಯಿಂದಲೇ ಒಂದು ಮೊದಲಾಗುವುದು"
ಮಾತೊಂದು, ಮರಳುವ ನೂರಾರು ಪದಚಿಹ್ನಗಳಲಿ
ಮತ್ತೆ ಆಕಾಶಕೆ ಬಣ್ಣ ತುಂಬುತಿದೆ..
ನಾಳೆಯ ಹೊತ್ತ ಬಸಿರು ಚಿಗುರೊಡೆಯುತಿದೆ!

Monday, September 19, 2016

(ಯಕ್ಷಿಣಿ - ಗಂಟಲು- ಬೆದರಿಕೆ - ಚಿಂತಾಜನಕ)


ಬೆಳಕ ಕೂಸೊಂದು ಡೊಗ್ಗಾಲಲಿ
ದಾಟಲಿತ್ತು ಕತ್ತಲರಮನೆಯ ಹೊಸಿಲು.

ನಿದ್ದೆಗಣ್ಣಿಗೆ ಅದಾವುದೋ ಬಂದುಸುರಿ ಹೋಗಿತ್ತು
"ಅವರ ಸಮಾಗಮಕೆ ನಿಗದಿಯಾಗಿದೆ ಹೊತ್ತು!"

ಅಕಾಲ ನೆರೆಗೆ ಗಂಟಲುಬ್ಬಿ ಬಂದ ಗಳಿಗೆ,
ಕಣ್ಣಿಂದವನ ಹೆಸರ ಹೊಳಪಿಳಿದುಹೋದ ಗಳಿಗೆ..

ಪರಿಚಿತವೂ, ಅಸ್ಪಷ್ಟವೂ ಒಂದಾಕೃತಿ
ಬಿಟ್ಟ ಕಣ್ಣೆದುರೇ ಕೂಗಿ ಹೇಳಿದೆ; ಬಹುಶಃ ಇದವನ ಯಕ್ಷಿಣಿಯೇ...

"ಅಲ್ಲೊಂದು ಚಂದದ್ದು ಚಿಂತಾಜನಕವಿದೆಯಂತೆ
ಬಗಿದೆದೆಯ ನಗೆಯೊಳಗಿಂದ ಅಮೃತವುಣಿಸಬೇಕಂತೆ."

ನಂದಾದೀಪಕಷ್ಟು ತುಪ್ಪ ಸುರಿದು,
"ಸರ್ವೇ ಜನಾಃ ಸುಖಿನೋ ಭವಂತು..."
ಹೇಳುತಲೇ ಇದೆ ಬಾಯಿ; ಮನಸನೆಳತರುತಾ ಕೈ..
ತಾಳಮೇಳ ತಪ್ಪಿಸುವ ಪ್ರೀತಿಯೆಂಬ ವಿವಶತೆಗೊಂದು ಜೈ

ಅಲ್ಲಿ ನೋವಿನೊಂದು ಸಣ್ಣ ಬೆದರಿಕೆಗಿಲ್ಲಿ ಎದೆಗೂಡು ಬಿರುಕು..
"ಅಯ್ಯೋ ಪ್ರೀತಿಯೆಷ್ಟು ಚಂದ!"-ಮತ್ತೆ ಮತ್ತುಲಿವ ಮನಸು..

ಹೇಗೆ ಹೇಳಲಿ ಏನೊಂದನಾದರೂ ಈ ಪ್ರೇಮಿಗಳಿಗೆ?
ಅಲ್ಲಳುವಾಗ ಅವಳು, ಇಲ್ಲಿಂಚಿಂಚು ಸಾಯುವವಗೆ?

ಕರ್ಣನಲ್ಲ; ಎದೆಯಲಮೃತವಷ್ಟೇ ಇಲ್ಲ, ಬಗೆದೀವುದರಿತಿಲ್ಲ;
ಹಂಬಲಿಸುವುದಷ್ಟೇ ಗೊತ್ತು; ನಾನೂ ನಿಮ್ಮಿಂದ ಹೊರತಲ್ಲ...

Thursday, September 15, 2016

ನೋಟದ ಎಳೆಯೆಳೆಯೂ ಸೇರಿ
ಚಂದದೊಂದು ಕೆಂಪು ಕೌದಿ ಹೊಸೆದು
ನೀಲಿಗುಡಿಸುತ್ತಿರುವಾಗ
 ಅಸ್ತಮಿಸ ಹೊರಡುವ ಪೂರ್ಣಸೂರ್ಯನೇ,
ಚದುರುತಲೇ ಸಾಗುವ ಮೋಡದಡಿ
ಇಡೀ ಕಾಣುತಾ, ತುಂಡುತುಂಡಾಗುತಾ,
ನೀನಿದ್ದೂ ಕಾಣದಾಗುತಾ,
ಕಳವಳಿಸಿ ಎಕ್ಕರಿಸುವವರಿಗೆಲ್ಲ
ಪಡುವಣದಲಿ ಕಣ್ಣಾಮುಚ್ಚಾಲೆಯಾಡುವ ಹೊಳಪು
ಮತ್ತೆ ನೀನುದಯಿಸುವ ಕತೆ ನಿತ್ಯ ಹೇಳುವುದು.

ಚಿಲಿಪಿಲಿ ಹಾರುಹಕ್ಕಿ ಗೂಡಿನತ್ತ,
ಕೊರಳಗಂಟೆಯುಲಿ ದನಕರು ಹಟ್ಟಿಯತ್ತ,
ಅಂಗಳದ ಕಂದಮ್ಮ ಅಮ್ಮನ ಸೆರಗಿಗೆ ಮರಳುತಾ,
ಅಷ್ಟರಲಿ ನಿತ್ಯ ರಾತ್ರಿಯಾಗುವುದು,
ನನ್ನಂತೆ ಜಗವಿಡೀ ಸಾಂತ್ವನಗೊಳ್ಳುವುದು.

ಇದೆಂಥ ಚೋದ್ಯ ನೋಡು
ನೀನಲ್ಲಿಗೆ ಹೊರಟಾಗಲೂ ಕಳವಳ;
ಕಾರ್ಮೋಡವಲ್ಲಿ ಮುಚ್ಚಿಟ್ಟಿತ್ತೆಂದಾಗಲೂ ಕಳವಳ!
ಬಂದಿಲ್ಲಿ ಧಗಧಗನೆ ನಗುವಾಗಲೂ ಸಮಾಧಾನ,
ಬರುಲಿರುವೆಯೆಂದು ಹೋಗುವಾಗಲೂ ಸಮಾಧಾನ!
ಕ್ಯಾನ್ವಾಸಿನ ಬಿಳಿಹಾಳೆ ಮೇಲೆ
ಕಾಮನಬಿಲ್ಲೊಂದು ಚಲ್ಲಾಪಿಲ್ಲಿಯಾಗುತಾ,
ಮತ್ತೆ ಕಪ್ಪುಮಸಿಯೊಂದು ನಿಧಾನ ಹರಡಿಕೊಳ್ಳುತಾ...
ಕಪ್ಪೋ, ಒಪ್ಪೋ, ಸೊಗವೋ, ಅಲ್ಲವೋ
ಎಳೆಗಳು ಸಿಕ್ಕಿ ಒಂದರೊಳಗೊಂದು ಗೋಜಲು;
ಈಗ ಎಚ್ಚರವೆಂದರೆನೇ ಒಂದು ಗೊಂದಲ!

ಸಾಕಾಗಿದೆ, ಒಪ್ಪಿಸುವ ರಮಣೀಯ ಕಾವಳವೂ
ಮತ್ತಿನ್ನೂ ಚಂದದ ಕಳವಳವೂ..
ಸಾಕಾಗಿದೆ ಈ ದಟ್ಟ ಭರವಸೆಯೂ
ಮತ್ತಿನ್ನೂ ಮುದ್ದು ಸುಳ್ಳುಗಳೂ....

ಇನ್ನು ಬರೀ ಪ್ರೀತಿಸಬೇಕೆಂದುಕೊಂಡಿದ್ದೇನೆ,
ನಿನ್ನನ್ನು, ಹಗಲನ್ನು, ಬೆಳಕನ್ನು, ಬಿಸಿಲನ್ನು,
ಸ್ಪಷ್ಟವಿರುವ, ಬೆಚ್ಚಗಿರುವ, ಶುಭ್ರವಿರುವ
ಸತ್ಯವೆನಿಸುವ ಮತ್ತಿನ್ನ್ಯಾವುದೇ ಒಂದು ಅಂಥದ್ದನ್ನೂ..
ಅವಳು ಬರುವವಳಿದ್ದಾಳಂತೆ!
ವೇಳೆ ಕಳೆಗಟ್ಟಿಸಲು ಕೇಳಿಕೊಂಡಿದ್ದಾನೆ..

ಹಾದಿಗಷ್ಟು ಜೀವಜಲ ಸಿಂಪಡಿಸಿ ಸಾರಿಸಲಾಗಿದೆ.
ಕಣ್ಣ ಹೊಳಪಿಂದೊಂದಷ್ಟು ಚುಕ್ಕಿ ಹೆಕ್ಕಿ ಬಳ್ಳಿ ರಂಗೋಲಿ ಮೂಡಿದೆ.
ಆಗಷ್ಟೇ ಬಂದ ವಸಂತದ ಗೊಡ್ಡು ಟೊಂಗೆಯ ನವಪಲ್ಲವ ಕಿತ್ತು ತೋರಣ ಕಟ್ಟಲಾಗಿದೆ..
ಘಮದ ಹಾದಿ ಹಿಡಿದು ಬಂದ ಕುಹೂ ಹಿಂತಿರುಗಲಿತ್ತು;
ಗೆಜ್ಜೆಬೇಡಿ ತೊಡಿಸಿ ಹಾಡಿಗೇರ್ಪಾಟಾಗಿದೆ..
ಅಮ್ಮನ ಒತ್ತಾಸೆಗೆ ಹೊಳೆವ ಹಿತ್ತಾಳೆ ಪಾತ್ರೆಯಲಿ
ಪಾಯಸ ಕುದಿವಾಗ ಹದ ಉರಿಗೂ ಪಾತ್ರೆ ಬುಡ ಕರಟುತಿದೆ.
ಜಾಜಿ ಬಳ್ಳಿ ಅಮಾವಾಸ್ಯೆಯ ಇರುಳಿನಂತೆ ಬೋಳುಬೋಳು;
ಹೂದಂಡೆಯೊಂದು ನಡುಹಜಾರದ ಹೊನ್ನಬೋಗುಣಿಯಲವಳ ಕಾಯುತಿದೆ..
ಎದೆಮೇಲಿನ ಭಾರಗಳನುಜ್ಜಿ, ಉಜ್ಜಿ, ಕಿಡಿ ಹೊಮ್ಮಿಸಿ
ಪರಿಮಳಯುಕ್ತ ಕಡ್ಡಿಗಳುರಿಸಲಾಗಿದೆ..
ಶಯನ ಮಂಚದಲಷ್ಟು ಗುಲಾಬಿ ಪಕಳೆಗೆ
ಕೆನ್ನೆಕುಳಿಯಿಂದೆತ್ತಿ ಇನ್ನಷ್ಟು ಕೆಂಪು ಬಳಿಯಲಾಗಿದೆ..
ನಗೆ ಬಗೆದು ಒಂದಷ್ಟು ಕಂಪು ಹರಡಲಾಗಿದೆ..
ಮೂಲೆಮಟ್ಟದ ಮೇಲಿನ ಫೊಟೊದೆದುರು
ಕೈ ತೊಳಕೊಂಡು ಬಂದು ಬೊಗಸೆಯೊಡ್ಡಿ ಪ್ರಾರ್ಥಿಸಲಾಗಿದೆ..
"ನನ್ನದಾಯಿತು; ಇನ್ನಿಲ್ಲಿ ಸೊಗದುಂಬುವ ಭಾರ ನಿನದು"

ತೃಪ್ತಿಯಿಂದೊಮ್ಮೆ ತಿರುತಿರುಗಿ ನೋಡುತಾ ಮಂಜುಗಣ್ಣೆರಡು
ತನ್ನೊಳಗಿಂದಾಚೆಗೆ ಹೊಸಿಲ ದಾಟುತಾ
ಎಡವಿಬಿದ್ದವೇನೋ, ನೋವಲಿ ತುಂಬಿಬಂದಿವೆ..
ಹಾದಿಯುದ್ದಕು "ಸ್ವರ್ಗಕಿದೋ ಹಾದಿ" ಎಂಬ ಫಲಕ ನೆಡುತ್ತಾ
ಸುಳ್ಳುಸುಳ್ಳೇ ಹುಮ್ಮಸ್ಸೊಂದು ವಿಮುಖ ನಡೆವಾಗ
ಗೆಜ್ಜೆಯ ಕಿಂಕಿಣಿ ಬರಬರನೆ ಉದುರುತಿವೆ...
(ನದಿ - ಕೆಂಪು- ಸ್ವಾರ್ಥ - ಹುಚ್ಚುಹೊಳೆ)


ಕೆಂಪು ಹಾದಿಯಲಿ ಸೊಂಪೊಂದು ನದಿ
ದಾಟಬೇಕಿದೆ, ಸೇತುವಿಲ್ಲ.
ಕುಡಿದಷ್ಟೇ ಗೊತ್ತು,
ನೀರ ಹೋರಾಡಿ ಗೆಲ್ಲುವುದು ಗೊತ್ತಿಲ್ಲ..

ಸ್ವಾರ್ಥ ಜಾಲದಲಿ ಪ್ರೀತಿ ಸಿಕ್ಕಿ ಬಲಿ
ಬಿಡಿಸಿಕೊಳಬೇಕಿದೆ, ಬಲವಿಲ್ಲ.
ಸಿಲುಕುವುದು ಗೊತ್ತು
ಪ್ರೀತಿಗೆ ಹೊರಬಂದು ಗೆಲ್ಲುವುದು ಗೊತ್ತಿಲ್ಲ..

ದ್ವೇಷವೂ ಉಕ್ಕುಕ್ಕಿ ಪ್ರೇಮವೂ ಉಕ್ಕುಕ್ಕಿ
ಭಾವ ಹುಚ್ಚುಹೊಳೆ, ಸೆಳೆದೊಯ್ದಿದೆ
ನಡೆದಷ್ಟೇ ಗೊತ್ತು
ಬದುಕಿಗೆ ಸೆಳೆತಕೆದುರಾಗಿ ಗೆಲ್ಲುವುದು ಗೊತ್ತಿಲ್ಲ.

Thursday, September 1, 2016

ಸುಖಾಸುಮ್ಮನೆ ಬಿಮ್ಮನೆ ಕವಿದ ಕರಿಮುಗಿಲು,
ಬಿನ್ನಾಣದಲಿ ನಾಚುತಿರುವಂತೆ ನವಿಲು.
ನಾಟ್ಯದೊಳದ್ದಿಯಾಡುವ ಮುದ್ದು ಕಾಲು,
ಸುತ್ತಸುತ್ತುತಾ, ನೆಲಕೆ ಕಚಗುಳಿಯಿಕ್ಕುತಾ
ಕಣ್ಮನದುಂಬುತಾ ಹೆಜ್ಜೆ ಬರೆದ ರಂಗವಲ್ಲಿ,
ಎದೆ ಮೇಲೆ ಚುಕ್ಕಿ ಸಾಲುಸಾಲು
ಹೆಣೆವ, ಬೆಸೆವ ಗೋಜಲೊಂದು ಉದ್ದುದ್ದ ಬಳ್ಳಿ.
ಮೆತ್ತನೆ ಕಿತ್ತುಕೊಂಡು ಗಾಳಿಗಾಡುತಾ ಸಾಗಿದ ಪಚ್ಚೆಗರಿ
ಅಯ್ಯಬ್ಬಾ! ಅಂದಿತೇ ಹಸಿರ ನಸೆಗಲ್ಲ ಸವರಿ?
ಕೊಡವಿ ನೂಕಿತೇನು ನೆಲ ಹುಸಿಮುನಿಸಲಿ?
ಎತ್ತಿಕೊಂಡಿದೆ ಗಾಳಿ..
ಮುಟ್ಟಿ, ತಾಕಿ, ಸವರಿ, ಸಾಗಿದೆ ಪಯಣ,
ಮೆತ್ತಿಕೊಂಡಿದೆ ವನಸುಮದ ಪರಾಗದಷ್ಟು ಹಸಿಕಣ.
ನಿನ್ನೆಗಳ ಗಜಗರ್ಭದಾಳದಿಂದ
ಎತ್ತಿ ತಂದಿದೆ ತುತ್ತು ಹೊಕ್ಕುಳಬಳ್ಳಿ.
ನೆನಪೆಂದರೆ ಬರೀ ಪುಳಕ ಎಳೆಯೆಳೆಯಲ್ಲಿ.
ಬಂದದ್ದು, ಕೂತದ್ದು, ಕಂಡದ್ದು, ಅಡಗಿಸಿದ್ದು,
ಹುಡುಕಿದ್ದು, ತಡಕಿದ್ದು, ಸಿಕ್ಕಿದ್ದು, ಕಳೆದುಹೋದದ್ದು...
ನೀನೆಂದರೆ ಉಕ್ಕುಕ್ಕುವ ಭೋರ್ಗಡಲು
ನಾ ಮಿಂದು, ಮಿಂದು ನಾಚಿನೀರಾಗುವ ತೀರ!
ಸುರಿಯದ ಮೋಡದೊಳಗೆಲ್ಲ ತೇವ ಹುಡುಕುತಾ
ವೃಂದಾವನವನೂ ಹೊಕ್ಕಿತ್ತಂತೆ; ಗರಿಯೀಗ ಹಾರಿ ಬಂದಿದೆ ..
ಸೀದಾ ಕಡಲತಡಿಯಲ್ಲಿ ವಿಧಿ ನಡೆಸಿದಂತಿದೆಯೇನೋ ಸಿಹಿಹುನ್ನಾರ!
ತೀರದಲಿ ಶ್ರಾವಣದ ಕೂಸಿನ ಕುಹೂಕುಹೂ ಚಿತ್ತಾರ
ಗರಿ ಬಣ್ಣ ತುಂಬುತಿದೆ;
ತಳೆಯಲಿದೆಯೇನೋ ಖಾಲಿಬಿಳಿಯೊಂದು ಮಳೆಬಿಲ್ಲಿನವತಾರ!