Monday, December 31, 2012

ಹೊಸದಾರಿಯ ತಿರುವಲಿ...


------------------------

ನಡೆದು ಬಂದ ದಾರಿ, ಎಡವಿದ್ದೆಷ್ಟೋ ಸಲ,

ತಡೆದದ್ದದೇ ಬೀಳು, ತೊಡರಿದ್ದದೇ ಬೇರು.

ಸರಾಗ ನಡೆದು, ತೇಲಿ ಸಾಗಿದ್ದೂ ಇದೆ,

ನಡೆಸಿದ್ದದೇ ಭಾವ, ಸಾಗಿಸಿದ್ದದೇ ಮನ.

ಅದೇ ನಡೆ, ಅದೇ ಏಳುಬೀಳು..

ಸಾಕೆನಿಸಿ ನಿಲುವಂತಿಲ್ಲ, ಆಯ್ಕೆಯಿಲ್ಲ.

ಕಾಲ ತೋರಿದ ದಿಶೆ, ನಡೆಯುತಿರಬೇಕು.



ಭಯದಿಂದಲ್ಲ ಭರವಸೆಯಿಂದ,

ನಿರೀಕ್ಷೆಯಿಂದಲ್ಲ ಅರ್ಪಣೆಯಿಂದ,

ಅಪೇಕ್ಷೆಯಿಂದಲ್ಲ ಪ್ರಾರ್ಥನೆಯಿಂದ,

ಸಂಶಯದಿಂದಲ್ಲ ನಂಬಿಕೆಯಿಂದ

ಈ ಹೆಜ್ಜೆ ಊರುವಾಸೆ...

ಒತ್ತಡಕಲ್ಲ ಹಿಗ್ಗುವಲ್ಲಿಗೆ,

ಒಪ್ಪಂದಕಲ್ಲ ಒಪ್ಪುವಲ್ಲಿಗೆ,

ಕೆಡುಕಿಗಲ್ಲ ಸಂಭ್ರಮಕೆ,

ಅಳುಕಿಗಲ್ಲ ನಿರಾಳತೆಗೆ

ತೆರೆದುಕೊಳುವಾಸೆ....

ನಿನ್ನೆನಾಳೆಗಲ್ಲ ಇಂದಿಗೆ,

ಬೇಡುವವಕಲ್ಲ ದುಡಿವವಕೆ,

ಬೆಳೆದುದಕಲ್ಲ ಮೊಳೆತುದಕೆ,

ಅರಳಿದ್ದಕಲ್ಲ ಮುದುಡಿದ್ದಕೆ

ಒದಗುವಾಸೆ....

--------------

ಮುಂಬರುವ ೨೦೧೩ರ ದಿನಗಳು ನನ್ನಾಸೆಗಳಿಗೂ, ನಿಮ್ಮೆಲ್ಲರಾಸೆಗಳಿಗೂ ಸಫಲತೆಯ ತಾಣಗಳಾಗಲಿ...

ನಿರಾಸೆ, ಹತಾಶೆ, ಅಸಹಾಯಕತೆಗಳಿಗೆ, ಅನ್ಯಾಯ, ಅತ್ಯಾಚಾರ, ಅಸಮಾನತೆಗಳಿಗೆ ಸೋಲು ತರಲಿ...

ನೋವಿಗೆ ಸಾವು ತರಲಿ.... ಎಲ್ಲರಿಗೂ ಒಳ್ಳೆಯದಾಗಲಿ...









ಅಳಿಯದುಳಿಯುವ ಪರಿ


------------------------

ಎದೆನೆಲದ ಕಣ್ಣೀರ ಸಾಗರಕೆ

ಭಾವ ಮರಳಿನ ತಟದಾವರಣ.

ಧಾವಿಸಿ ಬರುವಲೆಗಳು,

ಮರಳಿನಕ್ಷರವೆಲ್ಲ ನುಂಗುವವು.

ಅಂತಃಶಕ್ತಿ ಬೆರಳದೂಡಿ ಬರೆಸುತಿದೆ..

ಮೊದಲೊಂದಕ್ಷರ.. ನಾ,

ಕಣ್ಣೀರಲೆ ಬಂದಳಿಸಿತು.

ಮುಂದಿನದೂ ಒಂದಕ್ಷರವೇ.. ನೀ,

ಮತ್ತದೇ ಬಂದಳಿಸಿತು.

ಎರಡಕ್ಷರ, ಮೂರು ಮತ್ತೆ ನಾಲ್ಕು..

ಅಳುವಿನಲೆಯದದೇ ಮರ್ಜಿ ಅಳಿಸುವುದು..



ಬೆಚ್ಚಿಬೀಳುತಲೊಮ್ಮೆ, ಹೆಚ್ಚಿದಾಸೆಯಲೊಮ್ಮೆ..

ಕನಸಗೋಪುರ ಕಟ್ಟಿ ಮರುಳುಮನ..

ಭವ್ಯವಾಗಿತ್ತು, ತುದಿಗೊಂದು ಮಿಂಚುತಡೆ,

ಪ್ರೀತಿ ಬಾವುಟವಿಟ್ಟು, ಬಾಗಿಲತೋರಣ,

ಮುಂದೊಂದು ರಂಗೋಲಿ...

ಅಲೆಗಳದು ಮತ್ತದೇ ಹುಚ್ಚಾಟ,

ಶಾಂತವಾದಂತೊಮ್ಮೆ,

ರೊಚ್ಚಿಗೆದ್ದಂತೊಮ್ಮೆ.

ಮರಳಗೋಪುರ ನಿಂತೀತೆ,

ಕನಸು ಫಲಿಸೀತೆ?



ಸಾಗರತಟವೇನೋ ಸರಿ,

ಬರೆದುದಳಿಸುವಲೆ ತಡೆವ,

ತಡೆಗೋಡೆಯಿರಬೇಕು..

ಬೆರಳೊಂದೇ ಅಲ್ಲ,

ಅಳಿಯದಕ್ಷರ ಮೂಡಿಸಲು ಬೇಕು,

ಮೆತ್ತಗಿದ್ದು ಮತ್ತೆ ಗಟ್ಟಿಯಾಗೋ ತಳ.

ಮರಳೊಂದೇ ಅಲ್ಲ,

ಜೊತೆಗಷ್ಟು ಗಟ್ಟಿಕಲ್ಲೂ ಬೇಕು,

ಬಂಧಿಸುವ ಒಲವ ಪದಾರ್ಥವೂ...

ಗೋಡೆ ಮೆತ್ತಗಿದ್ದು ಗಟ್ಟಿಯಾಗುವಲ್ಲಿ

ಆತ್ಮದೊಳಗಿಂದ ಹೊತ್ತು ತಂದು

ಅಂತಿಂಥದಲ್ಲ, ಸಿಹಿನೀರುಣಿಸಬೇಕು.

ಹಿನ್ನೆಲೆಯರಿತು, ನೆಲೆಯ ನಿರ್ಮಿಸಿ,

ಒಳಗಡಿಯಿಟ್ಟು, ಭಾವವಾವರಿಸಿದ ಕಣ್ಣೀರ

ಜೊತೆಗಿದ್ದೂ ಇಲ್ಲದಂತಿರಬೇಕು..

















ಮುಂದಡಿಯೂರುವ ಗಳಿಗೆ


---------------------

ತಂತಾನೇ ಕಳಚಿಕೊಳಹೊರಟಿದೆ,

ತಡೆಯಲಾಗದು ಹಳತನು.

ಹೊಸತೂ ಬರುತಿದೆ, ಅದನೂ...



ಹೆಜ್ಜೆಯೆತ್ತಿಸಿದ ಕಾಲ ಮುಂದಡಿಯೂರಿಸಲಿದೆ...

ಈ ಕ್ಷಣವೇಕೋ ನಿಂತಲ್ಲೆ ನಿಲುವಾಸೆ,

ಹಿಂದಿನವೆಲ್ಲಾ ಮುನ್ನಡೆದೂ ಹಾಗನ್ನಿಸದೆ,

ಹಿನ್ನಡೆಯೂ ಅಲ್ಲದ, ಎಡೆಬಿಡಂಗಿಗಳಾದಾಗ,

ಅನಿಸುತಿದೆ...."ಮುಂದಡಿ ಬೇಡ"..



ಹೊಸತೆಲ್ಲಕೂ ನಿರೀಕ್ಷೆಯ ಜೊತೆ,

ಹಳತೆಲ್ಲಕೂ ಕಣ್ಣೀರ ಹೊದಿಕೆ.

ಅದೇ ನಾಳೆ ಇದಾಗುವ ತಿಳಿವಿದ್ದರೂ,

ಹೊಸತಿನಾಸೆಗೆ ಅದನಪ್ಪಿ,

ನಾಳಿನಳುವಿಗೆ ಇನ್ಯಾರನ್ನೋ ದೂಷಿಸಿ,

ನಿನ್ನೆಯ ನೆನೆಯುವ ಮುಂದಡಿ ಬೇಡ....



ಹೊಸತೆಲ್ಲಕೂ ಅನಿಶ್ಚಿತತೆಯ ಜೊತೆ,

ಹಳತರೊಡನೆ ಅನುಭವದೆಚ್ಚರಿಕೆಯ ಗಂಟೆ,

ಅದೇ ನಾಳೆ ಇದ ಮೊಳಗಿಸುವುದಾದರೂ,

ಹೊಸತಿನಾಸೆಗೆ ಅದನಪ್ಪಿ,

ನಾಳಿನ ಅದರ ಸದ್ದಿಗೆ ಕಿವಿಮುಚ್ಚಿಸಿ,

ನಿನ್ನೆಯ ನೆನೆಯುವ ಮುಂದಡಿ ಬೇಡ....



ಹಳತೂ ಅಂದೊಮ್ಮೆ ಹೊಸದಿದ್ದಾಗ,

ಭರವಸೆಯ ತೊಟ್ಟಿಲಿನ ಕನಸ ಕಂದ,

ತೊಟ್ಟಿಲ ಮುರುಕುಕಂಬಿ, ಹರಕು ಹಾಸಿನ

ಏಕತಾನತೆಗಳುತ್ತಾ, ಏಳದೆ, ಬೆಳೆಯದೆ

ಇಂದೂ ಹಾಗೇ ಮಲಗಿದೆ...

ಏಳಲೆಳಸದ, ಬೆಳೆಸದ, ಹಾಗೇ ಉಳಿಸುವ

ಮುಂದಡಿ ಬೇಡ....



ಹೊಸತಿಗೆ ಹಳತ ಕಳಚುವ,

ಬೇಕಿರಲಿ, ಇಲ್ಲದಿರಲಿ- ಖಾಲಿ ಮಾಡಿ,

ಏನೇನೋ ತುಂಬಿಸುವ ಚಾಳಿ.

ಸಿಹಿಯೋ ಕಹಿಯೋ ನನ್ನದಾದ

ಹಳತೇ ಇಂದು ನನ್ನ ಪರಿಚಯ....

ಗುರುತಳಿಸಿ, ಇನ್ನೇನೋ ತರಲಿರುವ

ಮುಂದಡಿ ಬೇಡ..

Thursday, December 27, 2012

ಸರದಿ...


------------------------

ಹೀಗೆಂದೂ ನಾ ನಿಂತಿರಲಿಲ್ಲ,

ತಾಯಿತಂದೆ, ಕರುಳಬಳ್ಳಿ,

ಪತಿ(ತ್ನಿ), ಮಗು, ಸಂಬಂಧಗಳು,

ಹೊಟ್ಟೆಪಾಡು, ಕಟ್ಟುಪಾಡುಗಳು,

ಸ್ವಾರ್ಥ-ಪರಹಿತ, ಲೋಕೋದ್ಧಾರ,

ಮನರಂಜನೆ, ಲೋಕಾನುರಾಗಗಳು,

ಅಧ್ಯಾತ್ಮ, ಆತ್ಮೋದ್ಧಾರ, ಕರ್ತವ್ಯ,

ಅಭಿಮಾನ, ಗೆಳೆತನ, ಸಿದ್ಧಿಗಳು...

ಎಲ್ಲೆಡೆ ನಿಂತ ನಿನ್ನ ಗಡಿಯಾರದ ಮುಳ್ಳು,

ಹೊರಟಲ್ಲಿಗೆ ಮತ್ತೆ ಬಂದಾಗಿತ್ತು....

ಪರಿಭ್ರಮಣದೊಂದು ಬಿಂದಲೂ ನಾನಿಲ್ಲ.

ಕೊನೆಯಲಿದ್ದೆ ಭಿಕ್ಷಾಪಾತ್ರೆಯಂತೆ,

ಬಾಯ್ದೆರೆದು ಸಾವು ಹನಿಯೊಂದು ಬೇಡಿದಂತೆ.

ತಿರುಗಿ ನೋಡದ್ದು ನಂಬಿಕೆಯೇ,

ತಲುಪದ್ದು ಉಪೇಕ್ಷೆಯೇ?

ಮತ್ತೆ ಮತ್ತೆ ಬಾಯಾರಿದ ಸಾವಿನನುಭವ,.

ಇಂಚಿಂಚೆ ಕ್ಷೀಣಿಸಿ ನಾನು, ಇನ್ನೂ ಸತ್ತಿಲ್ಲ....

ಹೀಗೆ ನಿಂತಿರಲಿಲ್ಲ....ಮಂಚೂಣಿಯಲಿದ್ದೆ,

ಎಲ್ಲ ಕಾಲಲೊದ್ದಿದ್ದೆ, ನಿನ್ನ ಹೊತ್ತಿದ್ದೆ,

ನನ್ನುಸಿರಾದ ನಿನದರಲಿ ನನ್ನ ಹೆಸರಿಲ್ಲ.

ಎಲ್ಲಿ ಜಾರಿತೋ ...ಬಿಡು...

ಇಷ್ಟು ಅವೇ ಕಳಚಿದ್ದು..ಇದೋ ಕೊಂಡಿ

ಇನ್ನೊಂದೆರಡು ನಾನೇ ಕಳಚುವೆ.

ಬಂಧನದ ಸರಪಳಿ ಕಡಿಯಲಿ..

ನೀನೂ ಮುಕ್ತ, ನಾನೂ ಮುಕ್ತ ಮುಕ್ತ.

ಎದುರು ನೋಡದೆ ಶುರುವಾದದ್ದು.

ಎದುರು ನೋಡಿದ ಕೊನೆಯೇ ಬರಲಿ..


ಮುಗಿಸಲಾದರೂ ಬಿಡು ನನ್ನ ಮೊದಲು.


ಸರದಿಯ ಕೊನೆ ಯಾರದೂ ಆಗದಿರಲಿ.



Wednesday, December 26, 2012

ಮನದ ಹಾರಾಟ


-----------------------

ಮೊದಲೇ ಮಂಗ, ಸೆರೆ ಬೇರೆ ಕುಡಿದು,

ಮನದ ಹುಚ್ಚೆದ್ದ ಹಾರಾಟ...

ಮೆಚ್ಚುಗೆಗೆ..ನೆಲದ ಮೇಲಿಲ್ಲ ನಡೆ..

ನಿರ್ಬಲ ಕೊಂಬೆಯಲೇ ತೂಗಾಟ ತೊನೆದಾಟ....

ಜರೆದುದಕೂ ನೆಲದ ಮೇಲಿಲ್ಲ...

ಜರಿದು ಪಾತಾಳಕೆ...ಕಣ್ಣೀರ ಕಡಲ ದೋಣಿ...

ಯತಾರ್ಥ ಮರೆ, ಅಪಾರ್ಥದ್ದೇ ಕಾರುಬಾರು...

ಸತ್ಯದೆದುರು ಬೆಪ್ಪಾಗಿ ತಲೆಕೆರೆದು,

ಸುಳ್ಳ ಬಿಗಿದಪ್ಪಿ ತಲೆಹೇನು ತಿಂದು,

ಆತ್ಮರತಿ ಕಂದನಂತೆ ಎದೆಗವಚಿ,

ನಂಬಿಕೆಯಲಿ ನಿಲದೆ, ನಿಂತಲ್ಲಿ ನೆಲವಿರದೆ...

ತುದಿಗಾಲ ಪಯಣ...ಕಾಲೂರದು...

ತಟ್ಟನೊಂದು ನಿರ್ಧಾರ... ಈ ಮರ ಸಲ್ಲ....

ಹಣ್ಣು, ನೆರಳು, ಹಕ್ಕಿಬಳಗ, ಸ್ವನೆಲೆಯನೂ ...

ತೊರೆದು ನಡೆದೆಡೆ ನೀರಿಲ್ಲ.....

ಏನಿಲ್ಲದೆಡೆ ಇದೆಯೆನುತ,

ಇದ್ದೆಡೆ ಹಿತವಲ್ಲದ ಭ್ರಮೆಯಲಿ...

ಕಣ್ತೆರೆದುದಕಿಂತ ಮುಚ್ಚಿದ್ದೇ ಹೆಚ್ಚು...

ಹಿಂದುಮುಂದೆಲ್ಲ ಅಂಥದೇ ಸಂತೆ,

ಸೆಳೆಯುತ ನಡೆದಿತ್ತು ಅಯಸ್ಕಾಂತದಂತೆ..

ಒಮ್ಮೊಮ್ಮೆ ಜೈಕಾರ, ಒಮ್ಮೊಮ್ಮೆ ಛೀಮಾರಿ..

ಆತ್ಮದ ದನಿಯುಡುಗಿದ ಚಾಂಚಲ್ಯದಾಟ

ಮಂಗನನೂ ಮೀರಿಸಿತ್ತು.....

ಕ್ಷಮಿಸು ಜೀವವೇ......ಉತ್ತರಿಸಲಾರೆ..


ಉತ್ತರವಿಲ್ಲವೆಂದಲ್ಲ, ದನಿಯಿಲ್ಲ....

ನಗಲಾರೆ, ನಗುವಿಲ್ಲವೆಂದಲ್ಲ, ಮೊಗವಿಲ್ಲ...

ಆಡಲಾರೆ, ಮಾತಿಲ್ಲವೆಂದಲ್ಲ, ಬಾಯಿಲ್ಲ....

ಅಳಲಾರೆ, ನೋವಿಲ್ಲವೆಂದಲ್ಲ, ಕಣ್ಣೀರಿಲ್ಲ...



ನಿನ್ನೆಡೆಗೇ ಹೊರಟದ್ದು, ತಲುಪಲಾಗಲಿಲ್ಲ...

ಕಾಲಿಲ್ಲವೆಂದಲ್ಲ, ದಾರಿಯಿಲ್ಲ....

ನೀನಂದದ್ದು ಕೇಳಿಸಿತು, ಅರಗಲಿಲ್ಲ,

ಮೆಚ್ಚಿಲ್ಲವೆಂದಲ್ಲ, ಕೆಚ್ಚಿಲ್ಲ....

ಲೋಕದಲಿದಕಿಂತ ಬೇರಿಲ್ಲ ಉಸಿರೇ..

ಹಾರಲೆಳಸುವ ರೆಕ್ಕೆ,

ಹಾಡಲೆಳಸುವ ನಾಲಿಗೆ,

ತುಂಡಾಗುವುದು.. ಮತ್ತು....

ಸತ್ಯ ಅಲ್ಲೆಲ್ಲ ಸೋಲುವುದು











Tuesday, December 25, 2012

ಅದನೇ ಎರೆಯುವೆ....


-------------

ಆಗಷ್ಟೇ ಮೊಳೆತ ಬೀಜ,

ಪುಟ್ಟ ಮೊಳಕೆ,

ದಿನದ ಕಂದಮ್ಮನ ಎಳಸು,

ಅದೇ ಪುಟ್ಟ ಬೆರಳ ಸೊಗಸು...

ಸಂಶಯಿಸಿ ತಲೆಯೆತ್ತಿ ಅಳುಕಿ

ನೀನೇ ನನಗೆಲ್ಲ.. ಎಂದಂತೆ ಆಪ್ತ...

ಯಾವುದೋ, ಯಾರು ಬಿತ್ತಿದ್ದೋ...!!

ಅರಿವಿಲ್ಲದೆಡೆಯೂ ಅರಿವಿರದ ಸೆಳೆತ....

ಎದೆಯ ನೆಲದಲ್ಲಿಟ್ಟು ಜೋಪಾನ

ಪ್ರೀತಿ ಸುರಿದೆ, ಅದೇ ಉಣಿಸಿದೆ...

ಕಾಂಡವೆದ್ದು ಎಲೆಚಿಗಿತು, ಕೊಂಬೆರೆಂಬೆ..

ಗಿಡವಾಗಿ ಕಾಳಜಿ ಕೇಳುತಿತ್ತು...

ದಿನವೊಂದೂ ಅಗಲುವಂತಿಲ್ಲ, ಬಾಡುತಿತ್ತು.

ಈಗ ಮರವಾಗಿದೆ,

ಹೂಕಾಯಿಹಣ್ಣು ತಿಳಿದಿದೆ...

ಮುಡಿವದ್ದಲ್ಲ, ತಿನುವದ್ದಲ್ಲ...

ಕಸ ಉದುರಿಸಿ ನೆಲಕೆ, ಬಾವಿಗೆ...

ಚಾಚಿ ತೂಗಾಡೊ ಕೊಂಬೆ,

ಗಾಳಿ ಆಡಿದಂತಾಡಿ ಭರ್ರೋ...ಎನುತ

ಮನೆಮಾಡು ಮುರಿವ ಬೆದರಿಕೆ...

ಕಡಿಸಲಾರೆ...ಬಾಡಿಸಲಾರೆ..

ಅಂದಿನಂತೆ ನೇವರಿಸಿ ಮೈಮರೆವುದು,

ಕಣ್ಮುಚ್ಚಿ ಆತು ನಿಲ್ಲುವುದು,

ಭದ್ರತೆಯ ಮೆಲುಕಾಡುವುದು.. ಈಗಾಗುತಿಲ್ಲ...

ಎರೆದದ್ದು ಪ್ರೀತಿ, ಅದೇನೇ ಇತ್ತರೂ,

ಅದರ ಹಸಿರು ನನ್ನುಸಿರು....

ನಾ ಬದುಕಬೇಕು.... ಅದಕೆ,

ಮತ್ತದನೇ ಎರೆಯಬೇಕು.

ಮತ್ತೆ...


----------------

ನನ್ನೆದೆಗೂಡು ಬೆಚ್ಚಗಿತ್ತು,

ನೀ ಬಿಟ್ಟು ಹೊರ ನಡೆದೆ,

ಚಳಿ ಇದ್ದುದೂ ಲೆಕ್ಕಿಸದೆ.



ನೋವಲಿ ಮನ ಹರಿದು ಚೂರು,

ಸಿಟ್ಟು ಚೂರ ಹರಡಿ ಬಿಸುಟಿತು.



ಮಮತೆ ಮತ್ತೆಲ್ಲ ಒಟ್ಟು ಸೇರಿಸಿ,

ಪ್ರೀತಿ ಜೊತೆಗಿಟ್ಟು ಹೊಲಿಯಿತು.



ಅಕ್ಕರೆ ನಿನ್ನ ನಡುಕಕೆ ಹೊದೆಸಿತು,

ಮನ ಮತ್ತೆ ನಿನ್ನನಾವರಿಸಿತು.

ಕ್ಷಮಿಸಿ... ನಾ ಜಾಣನಲ್ಲ....


--------------------------------

ದಡ್ಡ ಮನಸು ಕಾಣಲಿಲ್ಲ ದೊಡ್ಡ ಮಾತು,

ಕಣ್ಣಷ್ಟೇ ನೋಡಿ, ಮನ ಹಿಂಬಾಲಿಸಿತು.

ಸೊನ್ನೆಯೆಷ್ಟು, ಅಂಕಿಯೆಷ್ಟು ಲೆಕ್ಕವಿಲ್ಲ..

ಕಂಡದ್ದು ಬರೀ ಚಿತ್ರ....



ಕಾಮನಬಿಲ್ಲು ,ನವಿಲುಗರಿ ಬಣ್ಣ,

ಅಮ್ಮನ ತುರುಬಿನ ಹೂವಿನ ಬಣ್ಣ.....

ಅಪ್ಪನ ಸೈಕಲ್, ಅಜ್ಜನ ನಶ್ಯದಡಬ್ಬಿ,

ಅಜ್ಜಿಯ ಬಳೆ, ಮುತ್ತಜ್ಜಿಯ ಕುಟ್ಟಾಣಿ.....

ಬೀಜ ಗಿಡವಾಗಿ, ಮೊಟ್ಟೆ ಮರಿಯಾಗಿ,

ಮೋಡ ಮಳೆಯಾಗಿ, ಅಕ್ಕಿ ಅನ್ನವಾಗಿ.....

ತಮ್ಮನ ನಗು, ಅಕ್ಕನ ಹಾಡು,

ಅಣ್ಣನ ದುಡಿಮೆ, ಗೆಳೆಯನೆದೆಗೂಡು....

ಇಷ್ಟೇ ಇದ್ದ ಚಿತ್ರ....

ನೋಟದಂತೆ, ಹಾಡಂತೆ

ಪವಾಡದಂತೆ, ದೇವನಂತನಿಸಿತು....



ಕಾಣದ್ದು ಊಹಿಸಿ, ಕಲ್ಪಿಸಿ,

ಕದಡಿ, ಬಡಿದೆಬ್ಬಿಸುವದ್ದು

ನನಗಾಗಲಿಲ್ಲ, ಕ್ಷಮಿಸಿ ನಾ ಜಾಣನಲ್ಲ.....

ದಡ್ಡ ಮನಸು ಕಾಣಲಿಲ್ಲ ದೊಡ್ಡ ಮಾತು,

ಕಣ್ಣಷ್ಟೇ ನೋಡಿದ್ದು,

ಮನ ಹಿಂಬಾಲಿಸಿದ್ದು.....



Monday, December 24, 2012

ಇಂದು ಮಧ್ಯಾಹ್ನ...


------------------

ಚಳಿಗಾಲದ ಚುಚ್ಚುವ ಬಿಸಿಲ ಮಧ್ಯಾಹ್ನ ಮಗಳನ್ನ ಡಾನ್ಸ ಕ್ಲಾಸಿಗೆ ಕರ್ಕೊಂಡು ಹೋಗ್ತಾ ಇದ್ದೆ. ಸೂರ್ಯನ ಜೊತೆ ಅರ್ಧ ಚಂದ್ರನೂ ಕಾಣಿಸ್ತಿದ್ದದ್ದು ಅವಳ ಕಣ್ಣಿಗೆ ಬಿತ್ತು. ನಾನು ಸ್ಕೂಟರ್ ಓಡಿಸುತ್ತಾ ಅದರ ಮೇಲಿನ ನಿಗಾದಿಂದ ಗಮನಿಸಿರಲಿಲ್ಲ. "ಅಮ್ಮ, ಚಂದಮಾಮ ರಾತ್ರಿನೇ ಕಾಣಿಸ್ಕೊಳ್ಳೊದಲ್ಲ್ವಾ?" ಅಂದ್ಲು, ಹೌದಮ್ಮಾ ಅಂದೆ. "ಅಂದ್ರೆ ತಂಪಾಗಿರುವ ಹೊತ್ತಲ್ಲಿ ಮಾತ್ರ ಹೊರಬಂದು ಅಭ್ಯಾಸ ಅಲ್ಲ್ವಾ ಅವನಿಗೆ?" ಅಂದ್ಲು, ಹೂಂ ಅಂದೆ, "ಮತ್ತೆ ನೋಡು ಈಗ ಹೇಳಿದ ಮಾತು ಕೇಳದೆ ಹೊರಗೆ ಬಂದುಬಿಟ್ಟಿರಬೇಕು, ಎಷ್ಟು ಸುಸ್ತಾದಂತೆ ಕಾಣ್ತಿದಾನೆ, ಪಾಪ... ಆವತ್ತು ಊರಲ್ಲಿ ಚಂಡಿಕಾಹೋಮಕ್ಕೆ ಮಲ್ಲಿಗೆಮಾಲೆ ಹಾಕಿದಾಗ ನಿಧಾನಕ್ಕೆ ಬೆಂಕಿ ಸುಡ್ತಾ ಇದ್ದಾಗ ಕಾಣ್ತಿತ್ತಲ್ಲಾ ಹಾಗೆ ಕಾಣ್ತಾ ಇದ್ದಾನೆ ಅಲ್ಲ್ವಾಮ್ಮಾ...".ತಲೆಯೆತ್ತಿ ನೋಡಿದರೆ.. ಹೌದು... ನೀಲಾಕಾಶದ ಶುಭ್ರತೆಯಲ್ಲಿ ತುಂಡುಚಂದ್ರನ ಬಿಳುಪು ಮಸುಕಾಗಿ ಕಾಣುತ್ತಿತ್ತು...ಅವಳ ಮಾತಿನ ಪ್ರಾಮಾಣಿಕತೆಗೋ ಏನೋ ನನಗೂ ಆತ ಸುಸ್ತಾದವನಂತೆ ಕಂಡ. ಮಗಳ ಮಿಡಿದ ಮನದ ಚಂದಮಾಮನೊಡನಿನ ಆತ್ಮೀಯತೆಯ ಪರಿ ತುಂಬಾ ಆಪ್ತವೆನಿಸಿತು... ಎಷ್ಟು ಸರಳ ಮತ್ತು ನೇರ ಆಲೋಚನೆಯಲ್ಲ್ವಾ ಮಕ್ಕಳದ್ದು?!

ಜೊತೆಗೆ ಇನ್ನೊಂದು ವಿಷಯ ಮಗ್ಗುಲು ಬದಲಾಯಿಸಿತು. ದಸರಾರಜೆಗೆ ಊರಿಗೆ ಹೋಗಿದ್ದಾಗ ದೇವಸ್ಥಾನವೊಂದರಲ್ಲಿ ಚಂಡಿಕಾಹೋಮ ನಡೆಯುತ್ತಿತ್ತು. ಅಲ್ಲಿ ಹೋಮಕುಂಡಕ್ಕೆ ಆಹುತಿಯೆಂದು ಹಾಕುತ್ತಿದ್ದ ರಾಶಿ ಹೂವು, ಹಣ್ಣು, ತುಪ್ಪ, ಹಾಲು, ಬಟ್ಟೆ....ಇವೇ ಮುಂತಾದ ಜೀವನಾವಶ್ಯಕ ವಸ್ತುಗಳು ಉರಿದುಹೋಗುತ್ತಿದ್ದುದು ಮುಂಚೆಯೂ ಹಲ ಬಾರಿ ನೋಡಿದ್ದೆನಾದರೂ ಆವತ್ತು ಮೊದಲಬಾರಿಗೆ ನನ್ನ ಮನಸನ್ನ ಕಳವಳಗೊಳಿಸಿತ್ತು. ಕಣ್ಣು ಅಪ್ರಯತ್ನವಾಗಿ ಅಲ್ಲೇ ನಿಂತು ನೋಡುತ್ತಿದ್ದ ನಮ್ಮೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ನಮ್ಮ ಕೆಲಸದವಳ ಮಗಳ ಮೇಲೆ ಹರಿಯಿತು. ಏನು ನಡೆಯುತ್ತಿರಬಹುದು ಆ ಮನದಲ್ಲಿ...?! ಅನ್ನುವ ಪ್ರಶ್ನೆ ಕಾಡಿತ್ತು...ನನ್ನ ಮಗಳ ಮನಸ್ಸಿನಲ್ಲಿ ಆ ಹೂವಿಗೆ ನೋವಾಗಿರಬಹುದು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಮೂಡಿದ ಆ ಚಿತ್ರ ಇವತ್ತಿನವರೆಗೂ ಅಚ್ಚಳಿಯದೇ ನಿಂತಿದೆ ಎಂದರೆ, ಇನ್ನು ಬಡತನದಲ್ಲಿ ಬೆಳೆಯುತ್ತಿರುವ ಮಗುವಿನ ಮನಸ್ಸಿನಲ್ಲಿ ತಮ್ಮನ್ನು ಕಾಡುವ ಕೊರತೆಯ ಹಿನ್ನೆಲೆಯಲ್ಲಿ ಮೂಡಿದ ಜೀವನಾವಶ್ಯಕ ವಸ್ತುಗಳನ್ನು ಸುಡುವ ಆ ಚಿತ್ರ ಇನ್ನೆಷ್ಟು ಢಾಳಾಗಿ ಪರಿಣಾಮ ಬೀರಿರಬಹುದು! ಯಾಕೋ ಕೆಟ್ಟದೆನಿಸಿತು... ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ... ಆದರೆ ಬದಲಾಗಿರುವ ಇಂದಿನ ಪ್ರಸ್ತುತ ಪ್ರಾಕೃತಿಕ, ಸಾಮಾಜಿಕ ಸಂದರ್ಭಗಳಲ್ಲಿ ನಮ್ಮ ಆಚರಣೆಗಳೂ ಜೀವನ್ಮರಣದ ತುರ್ತಿಗೆ ಸ್ಪಂದಿಸುವತ್ತ ಹೆಚ್ಚು ಜಾಗೃತವಾಗಬೇಕು ಅನಿಸುತ್ತಿದೆ.....





Sunday, December 23, 2012

ನಾನಾಗುಳಿವುದೆ ಸಾಕು...


----------------------

ಒಂದು ಹೆಸರಿಲ್ಲದೆಡೆ,

ಮಿದು ಪಸೆ ನೆಲ,

ಮೂಡಿದಚ್ಚು ತುಸು ಆಳ.

ಅಚ್ಚು ಆಕಾರವಾಗಿ ಅಕ್ಕರ,

ಬಣ್ಣದ ಭಾವದಲದ್ದಿ,

ನಿವೇದನೆ, ಬಣ್ಣನೆಯ ಚಿತ್ರಣ.

ಹೆಸರಿಲ್ಲ ಪಾಪ...ಮೂಡಿದ ಕ್ಷಣ

ಪ್ರಶ್ನೆ- ಇರಬಹುದೇ ನಾ ಕವಿತೆ?!



ಯತಿಪ್ರಾಸ, ಗೇಯತೆ,

ವಸ್ತುಗಾಂಭೀರ್ಯವಿಲ್ಲ,

ಬರೀ ಅನಿಸಿಕೆಗಳ ಮೊತ್ತ...

ಭಾವನೆಗಳ ವ್ಯರ್ಥ ವೃತ್ತ....

ಮಿಗಿಲಾಗಿ ಹುಟ್ಟಿದ್ದು ಹೆಸರಿಲ್ಲದೆಡೆ.

ಅಲ್ಲವೆನಿಸಿ, ನಾನಾರೆಂಬ ಜಿಜ್ಞಾಸೆ.



ಹೊರಟ ಗುರಿ ಸ್ವಂತಕೇ ಸ್ವಪರಿಚಯ...

ಕಂಡವರ ಉದ್ಗಾರದಿ ಹೆಸರು,

ಮನದಾಳದಿ ಅಸ್ತಿತ್ವಶೋಧ.



ಹೂದೋಟ ಹೊಕ್ಕು, ಹೂವು,

ಹೂ ಮೇಲಿನ ಚಿಟ್ಟೆಯಲಿ..

ಮನೆಯಂಗಳ ಹೊಕ್ಕು ಪ್ರೇಮ,

ಮುನಿಸು, ಜಗಳದಲಿ...

ಗುಡಿಸಲು ಹೊಕ್ಕು ಬೆತ್ತಲೆ ಹಸಿವಲಿ,

ದೇಗುಲ ಹೊಕ್ಕು ಭಕ್ತಿಯಲಿ,

ಹುಚ್ಚರಸಂತೆಯ ಹುಚ್ಚಲಿ...

ಸ್ಮಶಾನಮೌನ ಹೊಕ್ಕು

ಅಳಿದಾತ್ಮದ ದಿಕ್ಕೆಟ್ಟ ಪಿಸುನುಡಿಯಲಿ,

ಉಳಿದವುಗಳ ಸದ್ದಿಲ್ಲದಳುವಲಿ

ತನ್ನನೇ ಕಂಡು ಕಕ್ಕಾಬಿಕ್ಕಿ...



ಮೆಚ್ಚುಗೆ, ಟೀಕೆ, ಅವಗಣನೆ, ಅವಹೇಳನ,

ತಿದ್ದುಪಡಿ, ಮಾರ್ಪಾಟುಗಳಲಿ

ಹಾದವರ ತರ್ಕದ ಮೂಸೆಯೆರಕಕೆ

ಬಿದ್ದೇಳುತ, ಏರಿಳಿಯುತ ಸಾಕಾಗಿ

ಹೆಸರಿಲ್ಲದೆಡೆಗೇ ಹಿಂತಿರುಗಿತು..

ಹೆಸರು ಬೇಡ, ಅಸ್ತಿತ್ವ ಬೇಡ...

ನಾನಾಗುಳಿವುದು ಸಾಕೆನಿಸಿತು....

Saturday, December 22, 2012

ತಾಯಾಗದ ತಾಯ್ತನ


----------------------------

ಹೆರದ ಹೆಣ್ಣ ಹೆಳವ ತಾಯ್ತನಕೆ,

ಜಗದಗಲ ನಡೆವಾಸೆ.

ಹೊತ್ತು ಮಣಭಾರದ ಹೊಟ್ಟೆ,

ಊರೆಲ್ಲ ಮೆರೆವಾಸೆ.

ಮುಳ್ಳುಹಂದಿಯ ಮುಳ್ಳ

ನೆತ್ತಿಯಲಿ ಮುಡಿವಾಸೆ.

ಮಡಿವ ನೋವುಂಡು,

ಮಿಗಿಲಿರದ ಪಟ್ಟಕೇರುವಾಸೆ.

ಮೂಡದ ಎದೆಹಾಲಲಿ

ಕುಬುಸ ನೆನೆಸುವಾಸೆ.

ಕುರುಡು ಮಮತೆಗೆ

ಹಾಲ್ತುಟಿಯ ತೃಪ್ತಿ ಕಾಂಬಾಸೆ.

ಕಚ್ಚಿ ಹಾಲುಂಡ ಕಂದನ

ಕಳ್ಳನೆನುತ ನಗುವಾಸೆ.

ಕವಳದೆಲೆಯಲಿ

ಕಪ್ಪು ತುಟಿ ಕೆಂಪಾಗಿಸುವಾಸೆ.

ಬಾಣಂತಿ ಮದ್ದಿನಾಸೆ,

ಕದ್ದು ಬಡಿಸುವ ತುಪ್ಪದಾಸೆ.

ಅಮ್ಮ ಮೈ ತಿಕ್ಕಿ ತೊಳೆವ

ಎಣ್ಣೆ ಸ್ನಾನದಾಸೆ.

ನೋಡಬಂದ ನೆಂಟರ

ಹೋಲಿಕೆಯ ಮಾತಾಸೆ.

ನೆಟ್ಟ ಆ ದೃಷ್ಟಿ ನೀವಾಳಿಸೋ

ಅಮ್ಮನ ಮುಚ್ಚಟೆಯಾಸೆ.

ಸೂರಿಲ್ಲದ ಜಗಲಿತೊಲೆಗೆ

ತೊಟ್ಟಿಲ ಕಟ್ಟುವಾಸೆ

ಮೂಕ ಬಾಯ್ತುಂಬ

ಜೋಗುಳ ಹಾಡುವಾಸೆ...

ಆ ಬೊಚ್ಚುಬಾಯಲಿ

ಅದರಜ್ಜನ ಕಾಂಬಾಸೆ..

ಅಷ್ಟಗಲ ಕಣ್ಣಲಿ ನಾದಿನಿ,

ನಗುವಲಿ ತಾಯಿ, ಅಳುವಲಿ ತಂಗಿ,

ನಿಲುವಲಿ ಅತ್ತೆ, ಹಣೆಯಲಿ ಪತಿಯ

ನಿಲಿಸಿ ನಿಟ್ಟಿಸುವಾಸೆ...



ಬರಿದೇ ಕಾಯುತದೆ..

ಮರುಳು ಜೀವ, ಮರೆತಿದೆ,

ಹಣೆಮೇಲೆ ಆಸೆಯೇನೋ

ಉದ್ದ ಕವನವಾಯ್ತು..

ತೀರುವ ಕ್ಷಣ ತಾನು

ಬರೆಸಿ ತಂದಿಲ್ಲ.

ಇದಕಿಂತ ಬೇಕೇ ಪ್ರಳಯ...?


--------------------------------

ಈ ಮೂಡಣದ ಕೆಂಪು ನಿನ್ನೆಗಿಂತ ಸುಂದರ,

ನಾಚಿದ ಕೆಂಗುಲಾಬಿ ಕೆನ್ನೆಯಂತೆ ಮಧುರ

ಕೆಂಪಿದ್ದ ಕಳೆದ ಪಡುವಣದ ಕಳೆ ನೆತ್ತರಂತೆ,

ಕಂಡಿತ್ತು.. ಸುಡುಜ್ವಾಲೆಯ ಕೆನ್ನಾಲಿಗೆಯಂತೆ.



ಭಯ ದಾಟಿಸಿದ ಕೆಂಪು ಭರವಸೆಯ ಹರಿಕಾರ

ಮುಳುಗಿಸುವ ದಿಶೆಯಲದೇ ಕೆಂಪು ಭಯಂಕರ....



ಈ ತೇದಿ ದಾಟಿದ ನೆಮ್ಮದಿ,

ಹೇಗೋ ಏನೋ ಮುಂದೆ...ಒಳಗುದಿ

ಅನ್ನನೀರಿಲ್ಲದ ನಾಳೆಯಲು ಬದುಕುವಾಸೆ...

ಕನ್ನ ಹಾಕುತ ತಾಯೊಡಲಿಗೇ ಉಳಿಯುವಾಸೆ..



ದಾಟಿದ ಕಂಟಕ ಗೆಲುವೆನಿಸದ ಆ ಒಂದು ಕ್ಷಣ,

ಮನ ಹಾಡಿದ್ದು ಜೈಕಾರವಲ್ಲ, ಕಾಡಿದ್ದು ಬುದ್ಧಿವಿನಾಶ.

ಬುದ್ಧಿ ನಶಿಸಿದ ದೇಹರಾಶಿ, ನಾಳೆ ತುಂಬೆಲ್ಲ..

ಭವಿಷ್ಯ ಕಂಡ ಕಣ್ಣು ತತ್ತರಿಸಿದ್ದು, ನಿನ್ನೆಯಂತಲ್ಲ......



ಪ್ರಕೃತಿವಿಕೋಪವಿರದಿರದು, ಮಾಡಿದ್ದಕ್ಕುಣ್ಣಲೇಬೇಕು,

ಅಭೂತಪೂರ್ವ ಅತಿರೇಕ, ಅಂಥಹುದೇ ಫಲ.. ಬಹುಶಃ

ದೇಹದಳಿವಲ್ಲ, ಬುದ್ಧಿಚೇತನವಿರದ, ಗುರಿ-ಅರಿವಿರದ,

ಸತ್ಯನಿಷ್ಠೆಯಿರದ ತಳಿ ಮೊಳೆವುದಕಿಂತ ಬೇಕೇ ವಿನಾಶ....???

Friday, December 21, 2012

ಉತ್ತರವಿಲ್ಲದ ಪ್ರಶ್ನೆಗಳು


-------------------------------

ಕುಂತಿಗಂದೂ ಸಂಜೆಯಲ್ಲದ, ನಡುವಲ್ಲದ

ದಿನದ ಘಟ್ಟದಿ ಪ್ರಶ್ನೆ ಮಾಡುವಾಸೆ....

ಯಾರನ್ನು.., ಉತ್ತರವಿದೆಯೇ.., ಎಲ್ಲಿದ್ದೀತು....,

ಇದ್ದರೆ ಅರಗೀತೇ...ಒಂದೂ ಗೊತ್ತಿಲ್ಲ....

ಕಂದಮ್ಮಗಳ ಯುದ್ಧ, ಸಾವು-ನೋವು ಬಿಟ್ಟು,

ಕಳೆದ ಕಾಲದ ಗೊಡವೆಯೇಕೆ?.. ಗೊತ್ತಿಲ್ಲ...

ಬಿಟ್ಟಿನ್ನೇನೂ ಮನ ನೋಡುತಿಲ್ಲ, ಆಡುತಿಲ್ಲ...

ಸಾವಿನೆದುರು ವ್ಯರ್ಥ ಎಂಬುದಕರ್ಥ ಹುಡುಕಿದಂತೆ.



ಮೇಲೆ ಸುಡದ, ಆದರೆ ಆರಿಲ್ಲದ ಸೂರ್ಯ...

ಕೆಳಗೆ ತಣ್ಣನೆ, ಆದರೆ ತಣಿಸದ ನೀರು..

ದೇಹಕೆ ವೈಶಾಖದರಿವು, ಉರಿಯಲ್ಲದ ಬಿಸಿ,

ಪುಟ್ಟಪಾದಕಷ್ಟೇ ನೀರು, ಸಾಕೆನಿಸದ ತಂಪು.



ಅರಿಯದ ಪ್ರಾಯ ಗುರುವಶಕೆ ಸಂದುದೇಕೆ?

ಅರಳದ ಕಾಯಕೆ ಮರಿಮಾಡೊ ವರವೇಕೆ?

ಮೂರ್ಖಯತ್ನಕೆ ಮೇರುದೈವದ ಒತ್ತಾಸೆಯೇಕೆ?

ಕುಡಿಯೊಡೆದ ಬಂಧ ತಾಯ್ಗರುಳು ಕಡಿದುದೇಕೆ?

ತನ್ನವನೇ ತೊರೆದ ನಿರ್ವಿಕಾರಿ ತಾಯಿಗೊಪ್ಪಿಸಿದ್ದೇಕೆ?

ಗಂಡೆನಿಸದ ಗಂಡುಗಲಿ ತನ್ನ ಗಂಡನಾದುದೇಕೆ?

ಹಿಂದೆ ಮಾದ್ರಿಯೇಕೆ? ಏರುಪ್ರಾಯದಿ ವಾನಪ್ರಸ್ಥವೇಕೆ?

ಪರಬೀಜಕೆ ನೆಲವಾಗೆ ಪತಿ ನೀರೆರೆದುದೇಕೆ?

ಮುಚ್ಚಿಟ್ಟ ತೀರದಾಸೆಗಳ ತಾನಡಗಿಸಿದ್ದೇಕೆ?...

ಇನ್ನೂ ನೂರೊಂದಿತ್ತು... ಆದರಿಲ್ಲೇ... ಇಲ್ಲೇ...

ಮಾನಸತಳ ನಡುಗಿ, ಮತ್ತೆ ಒಳಗು ಮೂಕ,

ಪ್ರಶ್ನೆಮಾಲೆ ಕಡಿದು, ಭಾವ ಚಲ್ಲಾಪಿಲ್ಲಿ,

ಸೂರ್ಯ ನಿರುತ್ತರ, ಮುಖಮುಚ್ಚಿ ಮಾಯ,

ಪ್ರಶ್ನೆಯಲೇ ಬೆಳಗು ಸಂಜೆ, ರಾತ್ರಿಯಾಗಿ

ಕತ್ತಲೆಯೇನು ಉತ್ತರಿಸೀತು?

ಕೆಳಗೀಗ ಪಾದಕೆ ಕೊರೆವ ಶೈತ್ಯ,

ಬಿಸಿಯಲಿರಲಿಲ್ಲ, ಈಗ ಬೇಕಿಲ್ಲ...

ಒಳನಡೆಯಿತು ದೇಹ, ಮನಸಲ್ಲೇ...

ಮುಂದಿನ ಜೀವಿತದ ಪ್ರಶ್ನೆಮಾಲೆ ಹೆಣೆಯುತ್ತ...

ಬರಲಿರುವ ನಾಳಿನ ಆ ಘಟ್ಟಕೆ ಮತ್ತೆ ಕಾಯುತ್ತ...







ಅದುರಿ ಉದುರಿ ಬಿತ್ತು ಮಾತೊಂದು,


ಮುತ್ತಾಗಲು, ಸೊತ್ತಾಗಲು ಹೊರಟಿತ್ತು,

ಆದದ್ದು ಬಾಣ...ಚುಚ್ಚಿತು.



ಎದ್ದು ಬಿದ್ದು ಮೂಡಿತ್ತು ನಗುವೊಂದು,

ಛಾಪಾಗಲು, ಚೆಲುವಾಗಲು ಹೊರಟಿತ್ತು,

ಆದದ್ದು ಜೊಳ್ಳು....ಹೊರತಳ್ಳಲ್ಪಟ್ಟಿತು



ಕಾದು ಕದ್ದು ಹುಟ್ಟಿತ್ತು ನೋಟವೊಂದು,

ಪ್ರೀತಿಯಾಗಲು, ಭಕ್ತಿಯಾಗಲು ಹೊರಟಿತ್ತು,

ಆದದ್ದು ಸುಳ್ಳು...ನಗಣ್ಯವಾಯಿತು



ಮಾತ ಹಿಂದೆ ಸತ್ಯ, ನಗುವ ಹಿಂದೆ ತೃಪ್ತಿ

ನೋಟದ ಹಿಂದೆ ನಂಬಿಕೆಯಿರದೆ,

ಅವು ಅವಾಗಲಿಲ್ಲ, ಎಲ್ಲೂ ಸಲ್ಲಲಿಲ್ಲ.

ನಿನಗೆ ನೀನೇ ಸಾಟಿ....


-----------------------

ಪ್ರಾಣಿಯಂತೆನಲೇ..?

ಹೊಟ್ಟೆ ತುಂಬಿದ ಮೇಲೆ

ಹಾವು ಕಪ್ಪೆಗೂ ಪ್ರೀತಿ... ನಿನಗೆ...?

ತುಳುಕುವುದ ತುಂಬಿಸುವ ಜಾಡ್ಯ..

ದೇಹದಾಸೆಗಲ್ಲಿ ಸತ್ವ ಸಾಧಿಸಿ ತೋರಿ,

ಒಪ್ಪಿದ ಹೆಣ್ಣಲೇ ಕಾಮಕೇಳಿ... ನಿನಗೆ....?

ಕಣ್ಕಟ್ಟಿ, ಬಾಯ್ಕಟ್ಟಿ ದೇಹ ಬಳಸೋ ಆತುರ...

ಆಹಾರಕೆ, ಜೀವಭಯಕೆ ಕೊಲುವ ಅವೆಲ್ಲಿ...,

ಬಯಲಾಗುವ ಭಯಕು ಕೊಲುವ ನೀನೆಲ್ಲಿ....?!

ಪ್ರಕೃತಿನಿಯಮ ಮೆಟ್ಟಲರಿಯದ ಅವೆಲ್ಲಿ...,

ಮೀರುವುದೇ ಜೀವನಧರ್ಮವಾದ ನೀನೆಲ್ಲಿ...?!

ಮಾತಿಲ್ಲದೆ, ಸದ್ದಿಲ್ಲದೆ, ಪ್ರೀತಿಸುವ ಅವೆಲ್ಲಿ...,

ಮಾತಸದ್ದಲೇ ಅದ ತರಿವ ನೀನೆಲ್ಲಿ...?!



ರಾಕ್ಷಸನಂತೆನಲೇ....?

ವರ್ಷವದೆಷ್ಟೋ ಒಪ್ಪಿಗೆಗೆ ಕಾದ ರಾವಣ,

ಕ್ಷಣವೂ ಬೇಕಿಲ್ಲ ನಿನಗೆಸಗೆ ಶೀಲಹರಣ, ಪ್ರಾಣಹರಣ.

ಚೆಲುವು ಅಮೃತವೆಂದಿತ್ತ ವಿಷಕೆ ಸೋತಸುರರು,

ನಿನಲಿದೆ ಹಾಲಾಹಲ, ಕಣ್ತಣಿಸಿದನೆಲ್ಲ ಸುಡಲು.

ಬಯಸಿದ್ದ ಗೆದ್ದುಣುವ ದುರಾಸೆಯವರದು,

ಇದ್ದುದೆಲ್ಲವ ಕದ್ದುಣುವ ಕೆಟ್ಟಕನಸು ನಿನ್ನದು.

ಸಾವ ಗೆಲಲು, ವಿಷದೆದುರು ಹೋರಾಡಿ ಸತ್ತರು.

ನಿನಗೆ ಸಾವಿಲ್ಲ, ವಿಷವುಂಡು ಉಳಿವ ತಳಿ ನಿನದು..

ಮೇಲೆ ದೈವತ್ವ, ಕೆಳಗೆ ಕಾಮ ಕಂಡವರು ದೈತ್ಯರು,

ನಿನ ಕುರುಡುಕಾಮಕೆ ಮಗಳೂ ಒಂದೆ, ಸೂಳೆಯೂ..



ಮಾನವ ಜನ್ಮ ದೊಡ್ಡದು... ಯಾವಳತೆಯಲ್ಲಿ...?

ನಿನಗೆ ನೀನೇ ಸಾಟಿ, ನೀಚತನದಲ್ಲಿ...

ಆ ಕುಲದ ಮರಿ ಮುಖಮುಚ್ಚಿ, ಬೆಚ್ಚಿ ಬಾಳುವೆ,

ನಾಚಿಕೆ, ಅವಮಾನ, ನೋವು ಜೊತೆಗೆ ಭಯದಲಿ....





Thursday, December 20, 2012

ಇಲ್ಲಿ ನಾನೆಲ್ಲಿ...?!


---------------------

ಅಖಿಳಾಂಡ ಕೋಟಿ ಬ್ರಹ್ಮಾಂಡ,

ಸೌರವ್ಯೂಹದ ನವಗ್ರಹ, ಉಪಗ್ರಹಗಳು,

ಅಸಂಖ್ಯಾತ ತಾರೆ, ಧೂಮಕೇತುಗಳು

ಹೆಸರಿಟ್ಟಿಲ್ಲದ ಇನ್ನೆಷ್ಟೋ ಆಕಾಶಕಾಯಗಳು...

ನಡು ಪುಟ್ಟದೊಂದು ಅಸ್ತಿತ್ವ ಈ ಭೂಮಿ..

ನೂರಾರು ಪಥಚಲನದ ನಡು ದಾರಿ ಮಾಡಿ,

ತನದರಲಿ ಸ್ವಂತಕೂ ಅವಗೂ ಗಿರಗಿರ ಸುತ್ತಿ..

ಪೂರ್ವಕರ್ಮದ ಪುಣ್ಯ.. ಲೆಕ್ಕವಿಲ್ಲದ ಸಂತಾನ

ಅದೃಶ್ಯಜಂತುವಿನಿಂದ ಭೀಮ ಕಾಯದವರೆಗೆ...

ಕೋಟ್ಯಾಂತರ ನೆಲಜಲವಾಯುವಾಸಿ ಪ್ರಭೇದ..

ಅವಕುಸಿರು, ಅನ್ನ.. ಇನ್ನಷ್ಟೇ ಹಸಿರು, ಗಿಡಮರ.....

ಒಂದರಂತೊಂದಿಲ್ಲ, ಅದಕರದೇ ಬಣ್ಣ

ನಿರ್ದಿಷ್ಟ ಜನ್ಮ, ಕರ್ಮ...

ಊಟ ಬೇಯಿಸಿ, ಉಪ್ಪುಹುಳಿ ಬೆರೆಸಿಟ್ಟವರಿಲ್ಲ

ನೀರು ಕಾಸಿಟ್ಟವರಿಲ್ಲ, ಅಲ್ಲಲ್ಲೆ ಅನ್ನ, ನೀರು...

ಮನುಕುಲಕೇ ಲೆಕ್ಕವಿಲ್ಲದ ಗಾತ್ರ, ಮೀರಿದ ಮಿತಿ,

ಇಷ್ಟೊಂದರ ಮಧ್ಯೆ ನಾನು ನಾನೆನುವ

ನಾನೆಷ್ಟನೇಯವನು, ಎಲ್ಲಿಯವನು, ಪಾತ್ರವೇನು...?!

ಎಷ್ಟು ಪ್ರಮುಖನು, ಪ್ರಬಲನು, ಪ್ರಸಿದ್ಧನು...?!

ಸಾಗರದಿ ಹನಿ ನೀರೆಂದರೆ ತಾನೆಂದಂತೆ

ಕಂದನಾಟಕೆ ಏನಂದಾಳು ಪ್ರಕೃತಿ ಮಾತೆ?

ನಕ್ಕುಬಿಟ್ಟರಾದೀತು, ಅತ್ತರದು ಪ್ರಳಯವೇ....











ಉತ್ತರ.


---------------------------

ಬಿಡು ಬಿಡು ನಾ ಹೋಗಬೇಕೆಂದ

ಕಟ್ಟಿಟ್ಟ ಮನಸನೊಂದು ದಿನ ಬಿಟ್ಟುಬಿಟ್ಟೆ...



ಕೋಶಹರಿದು ಹುಳು, ಬಣ್ಣದ ಚಿತ್ರವಾದ

ಚಿಟ್ಟೆ ಕಂಡಿತು, ಹಿಂಬಾಲಿಸಿತು...

ಪುರ್ರನೇ ಹಾರಿ ಹೂವಿಂದ ಹೂವಿಗೆ,

ಅಲ್ಲೆಷ್ಟಿತ್ತೋ ಹೀರಿ, ತೇಗಿ...ಮುಂದಿನದು ಮುಂದೆ

ಯಾವ ಬಂಧವೂ ಇಲ್ಲ, ಬೆಸುಗೆಯೂ....

ಹೂವಿಗೂ, ಚಿಟ್ಟೆಗೂ....ಹಾರುತಲೇ, ಕುಡಿಯುತಲೇ..

ಬೆಳಗು ಬೈಗಾಗಿ ...ರಾತ್ರಿ ಬೆಳಗಾಗಿ....

ಚಿಟ್ಟೆ ಯಾನ ಮುಗಿಸಿತ್ತು, ಮನಸು ಹಿಂದಿರುಗಿತ್ತು...

ನೀನ್ಯಾಕೆ ಹೀಗಿಲ್ಲ ಅಂದಿತು, ನಾ ನಿನ್ನಿಂದಲೇ ಅಂದೆ.



ಬಿಡು ಬಿಡು ಮತ್ತೆ ನಾ ಹೋಗಬೇಕೆಂದ

ಕಟ್ಟಿಟ್ಟ ಮನಸ ಮತ್ತೆ ಬಿಟ್ಟುಬಿಟ್ಟೆ...



ನೇರವಲ್ಲದ ಗೆರೆಯಲಿ ಫಳಫಳ....

ಮಿಣುಕುಹುಳ ಕಂಡಿತು, ಹಿಂಬಾಲಿಸಿತು...

ಕತ್ತಲಲಿ ಬೆಳಗುತ್ತ, ಬೆಳಕಲಿ ಲೀನ..,

ಒಮ್ಮೆ ಕಾಣಿಸುತ್ತ, ಒಮ್ಮೆ ಮೌನ....

ತಾ ಕಾಣದ ಸೊಬಗ ಬೆನ್ನ ಹಿಂದಿಗುಣಿಸುತ್ತ...

ಯಾವ ಅಪೇಕ್ಷೆಯೂ ಇಲ್ಲ, ನಿರೀಕ್ಷೆಯೂ...

ಹುಚ್ಚೆದ್ದು ಹಿಡಿಯುವ ಆಸೆಯ ಕೈತಾಗಿ,

ಕತೆಮುಗಿದಿತ್ತು, ಮನಸು ಹಿಂದಿರುಗಿತ್ತು..

ನೀನ್ಯಾಕೆ ಹೀಗಿಲ್ಲ ಅಂದಿತು, ನಾ ನಿನ್ನಿಂದಲೇ ಅಂದೆ.



ಬಿಡು ಬಿಡು ಪುನಃ ಹೋಗಬೇಕೆಂದ

ಕಟ್ಟಿಟ್ಟ ಮನಸ ಪುನಃ ಬಿಟ್ಟುಬಿಟ್ಟೆ...



ಒಂದು ಗಾಳಿತೇರು, ಅಳುನಗುಗಳೇ ಚಕ್ರ...

ಮೆತ್ತೆಹಾಸಲಿ ಮುದ್ದು ರಾಜಕುಮಾರಿ, ಹೆಸರು ದೃಷ್ಟಿ.

ಮನ ತೇರನೇರಿತು.... ಗಾಳಿ ನಡೆದೆಡೆ ಪಯಣ,

ದಿಕ್ಕಿಲ್ಲ ಗುರಿಯಿಲ್ಲ,

ನಿಂತೆಡೆ ಬಂಧ-ಬೆಸುಗೆ, ವಿದಾಯದ ಗಾಯ,

ನಾಳಿನ ಆಣೆ, ಹಿಂದಿನ ದೂರು,

ಒಂದಷ್ಟು ಅಪೇಕ್ಷೆ-ನಿರೀಕ್ಷೆ, ಸೋಲು-ಗೆಲುವು,

ಮನಸ್ತಾಪ-ಪಶ್ಚಾತ್ತಾಪ...ಕ್ಷಣ ಯುಗವೆನಿಸೋ ತಾಪ

ಎಷ್ಟು ದೂರಕು ಮುಗಿಯದ ಯಾನ... ಮನಸು ಹಿಂದಿರುಗಿತು.



ಈ ಬಾರಿ ಪ್ರಶ್ನೆಯಲ್ಲ... ಉತ್ತರವ ತಂದಿತ್ತು...

ದೃಷ್ಟಿಯೊಡನಿರೆ ನಾನು, ಯಾನ ನಿನದರಂತೆ...

ಜೀವನೋತ್ಸಾಹದ ಹಿಂದಿರೆ,

ಚಿಟ್ಟೆಯದರಂತೆ, ಮಿಂಚುಹುಳದಂತೆ.







Wednesday, December 19, 2012

ನಾಳೆ ಬರಲಿದೆ...


----------------------------------

ಮೊದಲಸಲ ಹೂವಂತೆ ಮುಟ್ಟಿದ್ದು,

ಮಂದಮಾರುತದಂತೆ ಸವರಿದ್ದು,

ಮೈಮರೆತದ್ದು...



ಕಣ್ಣ ಕಣ್ಣಲಿ ಮೀಯಿಸಿದ್ದು,

ರೆಪ್ಪೆಯಲಿ ತೋಯ್ದುದನೊರೆಸಿದ್ದು,

ಕನಸಲಿ ಅಲಂಕರಿಸಿದ್ದು..



ಮುತ್ತಲಿ ಮೊಗ ಮರೆ ಮಾಡಿದ್ದು,

ಮತ್ತೆ ಮತ್ತೇರಿದಂತಾಡಿದ್ದು,

ಇನ್ನೂ ಚಂದ ನಾನೆನಿಸಿದ್ದು.....



ಬೆಸುಗೆಯಿನ್ನೂ ಹಸಿಹಸಿ, ನಾ ಪ್ರೀತಿಯೆರೆದಿರುವೆ,

ಒಣಗಬಿಟ್ಟಿಲ್ಲ.......

ನೀ ಒಣಗಿಸಿರುವೆ, ಇಂದು ನಿನ್ನ ಸ್ಪರ್ಶವೇ ಹೇಳಿತು,

ಒಣಗಿ ಒರಟಾಗಿಬಿಟ್ಟಿದೆ....

ಗೊತ್ತು..... ನಾ ಮೌನವಪ್ಪಬೇಕು,

ಒಪ್ಪಬೇಕು......ಒಪ್ಪಿಸಿಕೊಳಬೇಕು...



ತಾಳಿಕೊಳ್ಳುವುದ ನಾ ಬಲ್ಲೆ, ಮನಸಲ್ಲ...

ಬಹುಶಃ ಈಗದು ಹಾಗಿಲ್ಲ, ತಲೆ ಬಾಗದು...

ಸುಮ್ಮಸುಮ್ಮನೆ ನಗದು, ನುಂಗದು...

ಜಾರಿಬಿದ್ದ ತಾರೆ ನಗು, ಶುಭಕೋ ಅಶುಭಕೋ

ಕಣ್ಣಹನಿಯಾಗಿ ಉದುರಿದ್ದಕೆ....

ನಿನ್ನ ಹಣೆಗೆರೆಯ ನಡು ಕುಳಿಯಾಗಿದೆ....



ನೀ ತಯಾರಿರು... ನಾಳೆ ಬರಲಿದೆ ....

ಒಣಗಿದ್ದ ಚಿಗುರಿಸುವುದೋ,

ಒಲೆಗಿಟ್ಟು ಚಳಿ ಕಾಯಿಸುವುದೋ...

ಈ ರಾತ್ರಿಯೇ ನಿರ್ಧರಿಸಬೇಕಿದೆ.....

ಯಾಕೆ ತಡ ಮಾಡಿದೆ?


--------------------------------------

ಯಾಕೆ ತಡ ಮಾಡಿದೆ?


--------------------------------------

ಒಂದಿಷ್ಟೂ ಮಸುಕಾಗಿಲ್ಲ ನೀ ಬಂದ ಗಳಿಗೆ.

ಹಾಲಾಗದ ಹಾಲ್ಗ್ರಂಥಿಗಳೂ ಸ್ರವಿಸಿದಂತೆ,

ತುಂಬದೊಡಲಿಗೂ ಮಡಿಲುತುಂಬಿದಂತೆ,

ಕುರುಡಗೆ ಕಣ್ಣು, ಹೆಳವಗೆ ಕಾಲು... ಇನ್ನೂ ಹೀಗೇ....



ಕೊರತೆಪಲ್ಲಕ್ಕಿ ಆಸೆ ಹೊತ್ತ ಮೆರವಣಿಗೆಗೆ,

ಸಂತೃಪ್ತಿಸಮೃದ್ಧಿ ಛತ್ರಚಾಮರವಾದ ಹಾಗೆ.

ಕುಡಿಯೇಳದ ಗರ್ಭದಿ ಜೀವಸಂಚಲನ,

ಇರುಳ ಬಾಳಲಿ ಮಿಂಚಿನೆಳೆಯ ದರ್ಶನ.



ನಿನ್ನನಪ್ಪುತಾ, ಒಪ್ಪುತಾ....

ಅದು......ಸುಲಭವಿರಲಿಲ್ಲ....



ಬೇರಿಲ್ಲದ ಗೆಲ್ಲು ನೆಡುವಾಗಿನ ಸಂಶಯ,

ಕೇಳಿಲ್ಲದ್ದ ಹಾಡಿ ಒಪ್ಪಿಸುವಾಗಿನ ಭಯ.

ಗೊತ್ತಿಲ್ಲದ ದಾರಿಯಂಚಿನ ಗುರಿಸಾಧನೆ,

ನನದಲ್ಲದ್ದ ಹಾಗೆನುವ ತಪ್ಪುಸರಿ ಚಿಂತನೆ.



ಕಂದಾ, ನೀ "ಅಮ್ಮಾ" ಅಂದೆ, ನಾ ಕಾದುದೆಲ್ಲ ಮರೆತೆ,

ಭಯ-ಸಂಶಯ ಸುಟ್ಟು, ಚಿಂತನೆಯ ಮೆಟ್ಟಿ ನೀ ನಿಂತೆ.

ನಿನ್ನೆಗಳ ಮರೆಸಿದ್ದೆ, ನಾಳೆಯ ಕನಸಷ್ಟೇ ತೋರಿದೆ,

ನನ್ನ ನಾ ಮರೆತಿದ್ದೆ, ನೀ ನೆನಪಿಸಿ, ಪರಿಚಯಿಸಿದೆ.

ಹೇಳೇ ಬಂಗಾರಿ...

ಇಷ್ಟು ಹೊತ್ತೆಲ್ಲಿದ್ದೆ?..... ಯಾಕೆ ತಡ ಮಾಡಿದೆ? .














Tuesday, December 18, 2012

ಅದು ಪ್ರೇಮ...


--------------------

ಅಲ್ಲೊಂದು ಹಪಹಪಿಸುವಿಕೆ,

ಬಿಟ್ಟು ಹೋದ ಬಂಧಕಾಗಿ....

ಬರುವಾಸೆ, ನಿರೀಕ್ಷೆ, ನಂಬಿಕೆಯಲಿ

ಉಸಿರುಸಿರಲೂ ಹೆಸರ ಜಪ.....



ಇನ್ನೊಂದಿತ್ತು ಚಡಪಡಿಕೆ...

ಸತ್ತು ಹೂತುಹೋದ ಜೀವಕಾಗಿ....

ಆಸೆಯಿಲ್ಲ ,ನಿರೀಕ್ಷೆಯಿಲ್ಲ ನಂಬಿಕೆಯೂ..

ಉಸಿರುಸಿರೂ ನೆನಪಲಿ ಭಾರ....



ಇನ್ನೂ ಒಂದಿತ್ತು ಕಾಯುವಿಕೆ....

ಕಣ್ಣೆದುರಿದ್ದೂ ಕೈಗೆಟಕದಿದ್ದುದಕಾಗಿ...

ಆಸೆ, ನಿರೀಕ್ಷೆಗಳಿವೆ, ನಂಬಿಕೆಯಿಲ್ಲ..

ತಪ್ಪಿತಾಳ ಉಸಿರುಸಿರೂ ಅಸ್ಪಷ್ಟ ...



ತಾ ನೇಯ್ದ ಜಾಲದೊಳು ತಾನೇ ಬಂಧಿ..

ಬದಲಾಯ್ತು ಕಾಲ,ದೇಶ,ಹಿನ್ನೆಲೆ...ಭಾವ ಸ್ಥಾಯಿ....

ಇದ್ದುದ ಇಲ್ಲದರೊಡನೆ ಹೆಣೆದ ಮಾಯಾಬಂಧ...

ನಾಮ ಒಂದೇ ರೂಪಹಲವು, ಅದು ಬರೀ ಪ್ರೇಮ....



ಸಾವೆಡೆಡೆಗಿನ ಯಾನವೂ ಜೀವಂತವಿಲ್ಲಿ,

ಅದು ಜೀವಸೆಲೆ, ಜೀವಧಾರೆ, ಜೀವಾಮೃತ...

ನೋವ ಕಂಬನಿಗು ಮಳೆಬಿಲ್ಲ ಬಣ್ಣ ಬರೆದ

ಕಲೆ, ಚೈತನ್ಯದಲೆ, ಜೀವನೋತ್ಸಾಹ....

ಕೆಡುಕಿನುತ್ಸವದಿ ಕ್ಷಮೆಯಾರತಿಯ ಜ್ಯೋತಿ

ಮನದ ರಥದಿ ದೈವತ್ವದ ಪ್ರತಿಕೃತಿ...

ಪ್ರೇಮವೇ...


----------------------------

ಕಣಿವೆಗಿಳಿದಾಗ ನಾನು,

ನೀ ಹಿಡಿದೆಳೆದೆ, ನಾ ಮೇಲೆದ್ದೆ...

ಹಿಡಿಯಷ್ಟಾದಾಗ ನಾನು,

ನೀ ಅರಳಿಸಿದೆ, ನಾ ಹೂವಾದೆ..

ಮೌನವಾದಾಗ ನಾನು,

ನೀ ದನಿಯಾದೆ, ನಾ ಮಾತಾದೆ.

ಕಳಕೊಂಡಾಗ ನಾನು,

ನೀ ಹುಡುಕಾಟವಾದೆ, ನಾ ಪಡಕೊಂಡೆ...



ಕತ್ತಲಡರಿದಾಗ, ಬೆಪ್ಪಾವರಿಸಿದಾಗ

ನೀ ಬೆಳಕಾದೆ, ನಾ ಕಣ್ತೆರೆದೆ.

ಮುಳುಗುತಿದ್ದಾಗ, ಉಸಿರುಗಟ್ಟಿದಾಗ

ಪ್ರಾಣವಾಯುವಾದೆ, ನಾ ಉಳಿದುಕೊಂಡೆ.

ಜಾರಿಬಿದ್ದಾಗ, ಗಾಯಗೊಂಡಾಗ,

ಮೆತ್ತನಲ್ಲಿ ಸವರಿದೆ, ನಾನೆಲ್ಲ ಮರೆತೆ..

ನೋಯುತ್ತಿದ್ದಾಗ, ಸಾಯುತ್ತಿದ್ದಾಗ,

ನೀ ಅಮೃತವಾದೆ, ನಾ ಜೀವವಾದೆ.



ಸಾಗುತಲೇ ಮುಂದೆ ಸೋತುಹೋದಾಗ,

ನೀ ಹೆಗಲನಿತ್ತೆ, ನಾನೊರಗಿಕೊಂಡೆ.

ಹಾಡುತಲೇ ಒಮ್ಮೆ ತಾಳ ತಪ್ಪಿದಾಗ,

ನೀ ಲಯವಿತ್ತೆ, ನಾ ಅನುಸರಿಸಿದೆ.

ಬಾಳಯಾತ್ರೆಯಲೊಮ್ಮೆ ದಾರಿ ತಪ್ಪಿದಾಗ,

ನೀನೆದುರಾದೆ, ನಾ ಹಿಂಬಾಲಿಸಿದೆ.

ಬೆವರಿಳಿಸಿದ ಮೈಮನ ಖಾಲಿಯಾದಾಗ,

ನೀ ಹಸಿರಾದೆ, ನಾ ಮೊಗೆದುಕೊಂಡೆ....



ಪ್ರೇಮವೇ, ನಿನ್ನಂಥದ್ದಿಲ್ಲ, ಇನ್ನಿರುವುದೂ ಇಲ್ಲ..

ನೀನೊದಗುವೆಡೆ ಇನ್ನೇನೂ ಬೇಕಿಲ್ಲ....

ಸೋಲಿಗೊದಗುವ ನಿನ್ನ ಪರಿಯಿದೆಯಲ್ಲಾ...,

ಎಲ್ಲೂ ಇಲ್ಲ, ಇನ್ನೆಲ್ಲೆಡೆ ಬೇಕು ಗೆದ್ದೆತ್ತಿನ ಬಾಲ.

Sunday, December 16, 2012

ಹನಿಮುತ್ತು...


------------------

ಸರಿರಾತ್ರಿಗೆ ಘನಮೋಡದ ಕಪ್ಪಡರಿದಂತೆ...

ತಾರೆಮಿನುಗಿಗೆ ಬೆಳ್ದಿಂಗಳು ಬಿಳಿಯೆರೆದಂತೆ..

ಸಹಜತೆಗೆ ಸತ್ಯದ ಜೊತೆ ಮೆರುಗೀವುದಂತೆ ....

----------------------------------------------------

ಬೀಸೋ ಗಾಳಿ ಸುರಿವ ಮಳೆಯ ಛೇಡಿಸಿ,

ಹನಿ ಮುನಿಸ ಕಾರಂಜಿ ಸಿಡಿಸಿದಂತೆ,

ಮೆಲುಮಾರುತ ತೆಂಗಿನಗರಿಯ ಛೇಡಿಸಿ,

ಒನಪಲಿ ಗರಿಯೆಳೆ ನರ್ತಿಸಿದಂತೆ,

ನಿನ್ನ ನೆನಪೂ ನೋಡು....

ಒಮ್ಮೊಮ್ಮೆ ಜೋರಾಗಿ ಒಮ್ಮೊಮ್ಮೆ ಮೆತ್ತಗೆ

ಈ ಮನವ ಕಾಡಿಸಿ

ಒಮ್ಮೊಮ್ಮೆ ಕಣ್ಣೀರ ಕಾರಂಜಿ,

ಮತ್ತೊಮ್ಮೆ ಮಿಶ್ರಭಾವ ನರ್ತಿಸಿದಂತೆ...

----------------------------------------

ಭಾವ ಬಿದ್ದೇಳುವಾಗ ಎದೆನೆಲದ ಮೇಲೆ

ಅಕ್ಷರಕೆ ಒದ್ದಾಟ ಹಾಳೆ ಮೇಲೆ

----------------------------

ನೀಲಾಕಾಶವ ಬಣ್ಣತುಂಬಿ ಅಲಂಕರಿಸಿದ ಕಲೆಗೆ

ಭೂಮಿ ತಿರುಗಿತಿರುಗಿ ನೋಡಿ ಮೆಚ್ಚಿ ನಿಂತ ನಿಲುವಿಗೆ

ಸೂರ್ಯ ಸಂಕೋಚದಿ ಮುಖಮುಚ್ಚಿಕೊಂಡ......

---------------------------------





ಕಂದಗೊಂದು ಮಾತು


--------------

ಮೇಲೇರು ಸೂರ್ಯನಂತೆ,

ಏರಿದಂತೆ ಕಿರಿದಾಗುತ ಸಾಗುವಂತೆ.....

ಕಿರಿದಾಗು ಚಂದ್ರನಂತೆ,

ಪ್ರತಿಹೆಜ್ಜೆ ಮರುಕಳಿಸೊ ಪೂರ್ಣತೆಯೆಡೆಗಿದ್ದಂತೆ..



ಕಾಡದಿರಲಿ ದೊಡ್ಡತನದ ಹಂಬಲ,

ದೊಡ್ಡದರಲ್ಲಷ್ಟೇ ಇಲ್ಲ ಹಿರಿತನ.....

ಬಾಡದಿರಲಿ ನಿನ್ನತನದ ತಾಜಾತನ,

ಗೆಲುವಲಷ್ಟೇ ಅಡಗಿಲ್ಲ ನಿಜಬಲ..



ಕಂದ ನೀನೆನ್ನ ಕನಸು,

ನಾನಾಗದ್ದನಾಗಿ ತೋರಿಸು...

ಹೆಚ್ಚೇನಿಲ್ಲ, ನೀನಾಗುಳಿ ಸಾಕು,

ಇಂದು ನಾಳೆಯಲಿ ಸಮರೂಪ ಸಾಧಿಸು...



ಕೊರತೆ ನೆರಳಿನ ವಿನಯ

ಸಮೃದ್ಧಿಯಲೂ ಜೊತೆಗಿರಲಿ...

ನಾಳೆ ತರುವ ಗರ್ವವಿದ್ದರೆ...

ಇಂದು ತನ್ನ ದಾರಿ ಬದಲಿಸಲಿ...



ಹರಿಶ್ಚಂದ್ರನಲ್ಲ, ಸಾಂತ್ವನವಾಗಿ,

ಕೃಷ್ಣನಲ್ಲ, ಅಳಿಯದ ಸ್ನೇಹವಾಗಿ,

ಬುದ್ಧನಲ್ಲ, ಕೊನೆತನಕ ನಿಷ್ಠನಾಗಿ,

ರಾಮನಲ್ಲ, ಜಾರದ ನಂಬಿಕೆಯಾಗಿ

ಹೀಗೆ... ಅರ್ಥವಾಗುವುದಾದರೆ, ತಿಳಿ...

ದೇವರಾಗಲ್ಲ, ಮನುಜನಾಗಿ ಬದುಕು...















Saturday, December 15, 2012

ಬುದ್ಧನಾಗಹೊರಟ ಭಾವ...


--------------------

ತಳಿರು ತೋರಣ ತಲೆಬಾಗಿಲಲಿ,

ಅಂಗಳಕೆ ಚೊಕ್ಕ ಚುಕ್ಕೆರಂಗೋಲಿ,

ಸ್ವಾಗತಫಲಕವಾಗಿ ನಿಂತು ನಗು,

ಖುಶಿಯಿತ್ತಿತು ಕಂಡವರಿಗಾಹ್ವಾನ.



ಬಣ್ಣಬಣ್ಣದ ಹೂವರಳಿ ತೋಟದಿ

ಘಮ ಹರಡಿ ಕೈಹಿಡಿದೆಳೆ ತರುತಾ...

ಮೆಲುಗಾನ ತಂಪಸೂಸೋ ಇಂಪಲಿ,

ದಾಟಿಹೋಗಲಾಗದ ಮತ್ತಾದ ಸೆಳೆತ.



ಭವ್ಯತೆಯ ನಿಲುವಿನ ಎದೆಯರಮನೆ ...

ತಲೆಯೆತ್ತಿ ನಿಂತ ನೆಲೆ ದೇಗುಲದಂತೆ..

ನಾಡಿ ಘಂಟಾನಾದ, ನುಡಿ ಶಂಖಘೋಷ...

ಪೂಜೆ ಅಲ್ಲೊಳಗಿನ ಭಾವದೇವಗೆ.....



ಹೊಸಿಲ ಹೂವಿಗ್ಯಾಕೋ ನಿಶ್ಯಬ್ಧ ಕಣ್ಣೀರು...

ಭಾವ ಗಮನದ ಬಯಕೆ.., ಹೊಸಿಲ ಬಂಧ.

ಗಲ್ಲಕೆ ಕೈಯಿಟ್ಟು ಕೂತ ಭಂಗಿ...

ನಿರೀಕ್ಷೆಯೇ, ಹತಾಶೆಯೇ..ನಿರಾಸೆಯೇ...?!



ಕಂಡವರೆಲ್ಲ ಪ್ರಸಾದ ಉಂಡೆದ್ದರು,

ಉಂಡೆಲೆಯ ಜೊತೆ ಬಾಡಿದ ಹೂವೂ ತಿಪ್ಪೆಗೆ...

ಕಂಡವರೂ ಇಲ್ಲ, ಕಣ್ಣಿಗೊತ್ತಿದವರೂ...



ಪೂಜೆ ಮಧ್ಯ ಎದ್ದುಹೊರಟ ಭಾವ

ಬುದ್ಧನಾಗ ಹೊರಟಿತ್ತೇ?

ಹೂವದಕೆ ಆಸೆಯೆನಿಸಿತೇ....?
ತಲೆಕೆಳಗಾದ ನಿರೀಕ್ಷೆ


---------------------------

ಕಾದು ಕುಳಿತಿದ್ದೇನೆ.....

ವಸಂತವಿಲ್ಲದೆ ಹಾಡುವ ಕೋಗಿಲೆಗಾಗಿ,

ಮುಗಿಲ ಕಾಣದೆ ನಲಿವ ನವಿಲಿಗಾಗಿ.

ಹಣ್ಣಿಲ್ಲದೆಯೂ ಮೊಳೆವ ಬೀಜಕಾಗಿ,

ಬೇರಿಲ್ಲದೆ ಚಿಗುರುವ ಹಸಿರಿಗಾಗಿ.

ಸಾಗರಕಲ್ಲದೆ ಸೊಗದಿ ಸಾಗೊ ನದಿಗಾಗಿ,

ಆವಿ,ಮೋಡ,ಹಿಮವಾಗದೊಂದು ಹನಿಜಲಕಾಗಿ.

ಮುಡಿಯ ಗುರಿಗಲ್ಲದೆ ಅರಳೊ ಹೂವಿಗಾಗಿ,

ದುಂಬಿಗಲ್ಲದೆ ತುಂಬೋ ಮಧುವಿಗಾಗಿ.

ಅವನಿಲ್ಲದ ಅವಳೊಳಗ ನಗುವಿಗಾಗಿ,

ಅವಳಲ್ಲದ ಅವನ ಕಣ್ಣ ಕನಸಿಗಾಗಿ.

ಇಳೆ ಬಾನಾಚಿಗಿನ ಬಂಧವೊಂದಕಾಗಿ,

ಹೇಳಹೆಸರಿಲ್ಲದ ಇರುವೊಂದಕಾಗಿ...



ಕಾದಿದ್ದೆ, ಹಾದಿಯಲಿ ಈವರೆಗೆ ನಿನಗಾಗಿ,

ನಿನ್ನ ಮಾತಿಗೆ, ಅದರ ಪ್ರೀತಿಗೆ,

ನಿನ್ನ ಹಾಡಿಗೆ, ಅದರ ಮೋಡಿಗೆ,

ನಿನ್ನಕ್ಷರಕೆ, ಮತ್ತದರ ಒಕ್ಕಣೆಗೆ

ನಿನ್ನ ಪ್ರಶ್ನೆಗೆ, ಅದರ ಪ್ರೇಮಕೆ...

ನಿರೀಕ್ಷೆಯಷ್ಟೇ ಅಲ್ಲ, ಎಲ್ಲಕುತ್ತರವಿತ್ತು,

ನೀ ಕೇಳಲಿಲ್ಲ, ನಾ ನೀಡಲಿಲ್ಲ...

ತಿರುವಿರದ, ಕೊನೆಯಿರದ, ನೆರಳಿರದ ಹಾದಿಗೆ

ನಾ ವಯಸ ಹಾಸಿದ್ದು ನಿನ್ನ ಸ್ವಾಗತಿಸಲು....

ಬಂದದ್ದು ಇಲ್ಲಗಳಷ್ಟೇ....ಎಲ್ಲ ಖಾಲಿ, ಖಾಲಿ

ಕಾಲ ನನ್ನ ನಾನಾಗುಳಿಸದ ವಿವಶತೆ....

ಕಾದದ್ದು ಬರದೆ ಬರದೆ, ನಡೆ ತಿರುಗಿದಂತೆ...

ಬರಲಾರದುದಕೆ ಕಾವುದೇ ರೂಢಿಯಾಗಿ..


ತಲೆಕೆಳಗಾಗಿದ್ದು ನಿರೀಕ್ಷೆ ಪರೀಕ್ಷೆಯಲಿ ಹೀಗೆ.
































ಹಸಿವೆ


-------------------------

ಹಸಿವೆ ಪ್ರಖರವೆಂದರು,

ತಟ್ಟೆಯ ಹೊಳಪಲ್ಲಿ ನಿಸ್ತೇಜ ಕಣ್ಣ ಬಿಂಬವಿತ್ತು.

ಹಸಿವೆ ಕಿವುಡೆಂದರು,

ಉಣ್ಣುವ ಬಾಯ ಮೌನವನೂ ಅದಾಲಿಸುತಿತ್ತು.

ಹಸಿವೆ ಮೂಕವೆಂದರು,

ಚಪ್ಪರಿಸುವಿಕೆಯಲಿ ಅದರ ಬಿಕ್ಕಳಿಕೆ ಮಾತಿತ್ತು.

ಹಸಿವೆ ಕುರುಡೆಂದರು,

ತಣಿದು ತೇಗುವ ಕನಸು ನಿತ್ಯ ಕಾಣುತಿತ್ತು.

ಹಸಿವೆ ಕಹಿಯೆಂದರು,

ಅದಕೆ ಜಠರಾಮ್ಲದ ಹುಳಿಯಷ್ಟೆ ಗೊತ್ತಿತ್ತು.

ಹಸಿವೆ ನಿರಾಕಾರವೆಂದರು,

ಗುಡಿಸಲ ಕಂದನಲಿ ಮೂರ್ತಿವೆತ್ತಂತಿತ್ತು.

ಹಸಿವೆ ಬಲಶಾಲಿಯೆಂದರು,

ಚೆಲ್ಲಿ ಬಿಸುಟಗುಳಲಿ ಕಸುವಳಿದು ಕುಸಿದಿತ್ತು.

ಹಸಿವೆ ಪರಮಸತ್ಯವೆಂದರು,

ಸತ್ಯಮಿಥ್ಯದ ನಡು ತುತ್ತೊಂದಕೆ ಅಲೆಯುತಿತ್ತು.

ಹಸಿವೆಗೆಲ್ಲೆಡೆ ಗೆಲುವೆಂದರು

ಸಾವದೇವನೆದುರು ಕೈಚೆಲ್ಲಿ ಸೋತು ಮಲಗಿತ್ತು













Friday, December 14, 2012

                            ಆತ್ಮಸಖಿಗೊಂದು ಪತ್ರ ---೩




    ಸಖೀ, ನಿನ್ನೆ ಸಾಯಂಕಾಲದ ನಡಿಗೆಯಲ್ಲಿ ನಮ್ಮ ನೆರೆಯವರೊಬ್ಬರು ಜೊತೆಯಾದರು. ಅವರ ಕೈಲಿ ಅವರದೊಂದು ನಾಯಿ ಸೂಝಿ. ಬಾಂಧವ್ಯ ಬೆಸೆಯಲು ಪ್ರೀತಿಯಷ್ಟೇ ಬೇಕು ಮತ್ತು ಪ್ರೀತಿಯಷ್ಟೇ ಸಾಕು ಅನ್ನೋದು ಅಲ್ಲಿ ಮತ್ತೂ ಸ್ಪಷ್ಟವಾಯಿತು ಕಣೇ. ಅವರು ಇತ್ತೀಚೆಗಷ್ಟೇ ಕೈಗೆ ಏಟು ಮಾಡಿಕೊಂಡಿದ್ದ ಕಾರಣ ನಾಯಿಬೆಲ್ಟ್ ಹಿಡಿದುಕೊಂಡು ಹೋಗುವುದು ಕಷ್ಟ ಆಗುತಿತ್ತು. ಹಾಗಾಗಿ ಅವರ ಕಷ್ಟ ನೋಡಲಾಗದೇ "ಕೊಡಿ ಇಲ್ಲಿ" ಅಂತ ತಗೊಂಡೆ ನೋಡು... ತಿರುಗಿ ನನ್ನನ್ನೊಮ್ಮೆ ಅವರನ್ನೊಮ್ಮೆ ನೋಡಿದ್ದೇ, ಕೂಗುತ್ತಾ, ಅವರೆಡೆಗೆ ಹಾರಿ ಕುಣಿದು, ಅವರಸುತ್ತ ಮೂರು ಸುತ್ತು ತಿರುಗಿದ್ದೇ ಬಲಪ್ರಯೋಗಿಸಿ ನನ್ನಿಂದ ಬಿಡಿಸಿಕೊಳ್ಳಲೆತ್ನಿಸತೊಡಗಿತು. ಮತ್ತದನ್ನು ತನ್ನ ವಶಕ್ಕೆ ತೆಗೆದುಕೊಂಡಡು ನಸುನಕ್ಕ ಆಕೆ ತನ್ನೆಡೆಗೆ ಅದರ ಪ್ರೀತಿಯ ಪರಿಯನ್ನ ಎಳೆ ಎಳೆಎಳೆಯಾಗಿ ಬಿಚ್ಚಿಡತೊಡಗಿದರು.....

    ನಾಯಿಯನ್ನ ನಮ್ಮಕಡೆ ನಮ್ಮವರು ಮನೆಯಲ್ಲಿ ಸಾಕುವ ಪರಿಪಾಠ ಇಲ್ಲ ನೋಡು, ಅದರ ಬೌಧ್ಧಿಕತೆಯ ಪರಿಚಯ ಅಂದ್ರೆ ಅದು ತುಂಬಾ ನಿಯತ್ತಿನ ಪ್ರಾಣಿ ಅನ್ನೋದು ಬಿಟ್ರೆ, ಅದರ ನಿಸ್ವಾರ್ಥ ಪ್ರೀತಿಯ ಮಟ್ಟದ ನೇರ ಪರಿಚಯ ನನಗಾಗಿರಲಿಲ್ಲ. ಈ ನಾಯಿ ಆಕೆಯನ್ನು ತನ್ನ ತಾಯಿ ಅಂತಲೇ ಭಾವಿಸಿದಂತಿತ್ತು. ನಮ್ಮೊಡನೆ ಒಂದೈದಾರು ವಾಕ್ಯ ಮಾತಾಡಿದ ನಂತರ "ಅಲ್ಲ್ವೇನೋ ಸೂಝಿ" ಅಂತ ಆಕೆ ಆಗಾಗ ಅದನ್ನೂ ಆ ಸಂಭಾಷಣೆಯೊಳಗೆಳೆದು ತರಲೇಬೇಕಾಗಿತ್ತು ಕಣೆ. ಇಲ್ಲವಾದಲ್ಲಿ ಒಂದಷ್ಟು ಹೊತ್ತಿನ ನಂತರ ಇಲ್ಲದ ಚೇಷ್ಟೆ ಮಾಡಿ ಅವರನ್ನ ತನ್ನತ್ತ ಸೆಳೆಯುತ್ತಿತ್ತು. ಆಕೆ ಮೊನ್ನೆ ಯಾವುದೋ ಒಂದು ಧಾರವಾಹಿಯಲ್ಲಿನ ಸನ್ನಿವೇಶಕ್ಕಾಗಿ ಒಂದೆರಡುಹನಿ ಕಣ್ಣೆರು ಸುರಿಸಿದರಂತೆ ನೋಡು, ಹಾರಿ ಬಂದು ಎದೆಯ ಮೇಲೆ ಮುಖವಿಟ್ಟು ಕೂತುಬಿಡ್ತಂತೆ, ಸಮಾಧಾನಿಸುವವರ ಹಾಗೆ. ಅವರ ಕೋಣೆಯಲ್ಲಿ ಕೆಂಪು ಬಣ್ಣದ ಟ್ರಾವೆಲ್ ಬ್ಯಾಗ್ ಒಂದಿದೆಯಂತೆ, ಅದನ್ನೇನಾದರೂ ಎತ್ತಿಕೊಂಡು ಈ ಕೋಣೆಗೆ ಬಂದರೆ ಸಾಕಂತೆ, ಬಾಲ ಅಲ್ಲಡಿಸಿಕೊಂಡು ಕುಯ್ ಕುಯ್ ಅಂತ ಅವರ ಸುತ್ತಮುತ್ತಲೇ ತಿರುಗಾಡುತ್ತ ತನ್ನ ಅಸಹಾಯಕತೆ ಬಯಲು ಮಾಡುತ್ತಂತೆ ಮತ್ತು ಅದರ ಕುಯ್ಗುಡುವಿಕೆಯಲ್ಲಿ "ಬಿಟ್ಟುಹೋಗಬೇಡ" ಅನ್ನುವ ಕೋರಿಕೆಯ ಧಾಟಿಯಿರುತ್ತಂತೆ. "ಸೂಝಿ ನಾನು ಹೊರಟೆ" ಅಂತಂದರೆ ಸಾಕಂತೆ ಓಡಿ ಬಂದು ಮುಂದಿನೆರಡೂ ಕಾಲುಗಳಿಂದ ಈಕೆಯ ಕಾಲು ಬಳಸಿ ತಡೆಯುತ್ತದಂತೆ. ಹೆಮ್ಮೆಯಿಂದ ಹೇಳುತ್ತಲೇ ಹೋದ ಆಕೆಯ ಮನಸಿನ ಸಂತೋಷ ಸ್ಪಷ್ಟವಾಗಿ ಆ ಮುಖಭಾವದಲ್ಲಿ ಗೋಚರಿಸುತ್ತಿತ್ತು. ಹೀಗೆ ಇನ್ನೂ ಒಂದಷ್ಟು ಅದರ ಕತೆಗಳನ್ನು ಕೇಳಿ ಒಂದು ಕ್ಷಣ ನನಗನಿಸಿತು ಅಯ್ಯೋ ಇಷ್ಟೊಂದು ಪ್ರೀತಿಸುವ ಜೀವಿಗೆ ಅದನ್ನು ಮಾತಾಡಿ ವ್ಯಕ್ತಪಡಿಸುವ ಸಾಧ್ಯತೆಯನ್ನು ಪ್ರಕೃತಿ ಕೊಟ್ಟಿಲ್ಲವಲ್ಲಾ ಅಂತ. ಕೇವಲ ಸಂಜ್ಞೆಗಳಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿ ಪ್ರೀತಿ ವ್ಯಕ್ತಪಡಿಸುವದ್ದು ಇನ್ನು ಮಾತು ಬಂದಿದ್ದರೆ ಇನ್ನೆಷ್ಟೆಲ್ಲಾ ಪ್ರೀತಿಯ ರೀತಿಯನ್ನದು ತೋರಿಸಬಹುದಿತ್ತು....ಆಕೆಗಿನ್ನೆಷ್ಟು ಖುಶಿ ಸಿಗುತ್ತಿದ್ದಿರಬಹುದು... ಅನ್ನಿಸಿತು, ಅದನ್ನಾಕೆಯೊಡನೆ ಹೇಳಿಯೂ ಬಿಟ್ಟೆ. "ಅಯ್ಯೋ ಸುಮ್ನಿರಿ ಮಾತು ಬರದಿದ್ದರೇನೇ ಒಳ್ಳೆಯದು ಬಿಡಿ... .... " ಅನ್ನುವುದೇ.....! ಒಮ್ಮೆ ನಾನು ದಂಗಾದರೂ ಮರುಕ್ಷಣ ನಿಜವೆನಿಸಿತು.

    ಈಗ ಹೇಳೇ... ಮಾತು ಬರುತಿದ್ದರೆ ಆ ನಾಯಿಯೆಂಬ ಜೀವದಲ್ಲಿ ಪ್ರತಿಫಲಿಸುತ್ತಿರುವ ಅದರೊಡತಿಯ ಪ್ರೀತಿ ಅಷ್ಟು ಬಲಿಷ್ಠವಾಗಿರಲು ಸಾಧ್ಯವಿತ್ತೇ..? ಹೋಗಬೇಡ ಎಂದು ಕಾಲನ್ನು ಬಳಸುವ ವೇಳೆ ಜೋರಾಗಿ "ಹೋಗಬೇಡ" ಅಂತ ನಾಯಿಯೊಂದು ಹೇಳಿದ್ದಿದ್ದರೆ ಅದು ಅಧಿಕಾರ ಚಲಾಯಿಸುತ್ತಿದೆ ಅನ್ನಿಸುತ್ತಿರಲಿಲ್ಲವೇನೇ...".ಮೌನ ಸಾಕು ಮಾತು ಬೇಕು"- ನಾವೆಲ್ಲ ಕಾಲೇಜು ದಿನಗಳಲ್ಲಿ ಹಾಡುತ್ತಿದ್ದ "ಮಾತನಾಡು ಮೊಗ್ಗೇ ನೀನು" ನೆನಪಿದೆಯಾ..? ಆ ಹಾಡಿನ ಈ ಮೇಲಿನ ಸಾಲು ನನಗೆ ತುಂಬಾ ಆತ್ಮೀಯವೆನಿಸುತಿತ್ತು ಸಖೀ... "ಮಾತುಗಳಲೆ ಮಿಂದು ಮಡಿಯಾಗುವಾ" ಅಂತ ನಾನೂ ಎಲ್ಲೋ ಒಮ್ಮೆ ಬರೆದ ನೆನಪು. ಮಾತು ಬಾಳ್ವೆಗೆ ತುಂಬಾ ಅಗತ್ಯದ ವಿಷಯ ಅಂತ ನಾನು ಬಲವಾಗಿ ನಂಬಿದ್ದೇನೆ. ಆದರೆ ಈ ಒಂದು ಗಳಿಗೆ ಅದೆಲ್ಲ ಸುಳ್ಳು ಅನ್ನಿಸಿತು ಕಣೆ. ಅಂದರೆ ಮಾತು ಎಷ್ಟೋ ಸಂಬಂಧಗಳಿಗೆ ಮುಳುವಾಗುತ್ತದಾ? ಒಪ್ಪುವಾ.., ತೂಕವಿಲ್ಲದ ಅಸಂಬದ್ಧ ಮಾತುಗಳು ಅಥವಾ ಕಠೋರ ಮಾತುಗಳು ಖಂಡಿತಾ ಸಂಬಂಧವೊಂದಕ್ಕೆ ಮಾರಕ ಒಪ್ಪುತ್ತೇನೆ. ಆದರೆ ಮಾತು ಬರುವುದಕ್ಕಿಂತ ಮೂಕವಾಗಿರುವುದು ಮೇಲು ಅಂತ ಈ ಸಂದರ್ಭದಲ್ಲಿ ಅನ್ನಿಸುವಷ್ಟು ಅಪಾಯಕಾರಿನಾ ಮಾತು?

    ಒಂದು ಸಂಬಂಧದ ಮತ್ತದರೊಳಗಿನ ಪ್ರೀತಿಯ ಹುಟ್ಟಲ್ಲಿ, ಬಲಿಯುವಿಕೆಯಲ್ಲಿ ಮತ್ತು ಉಳಿಯುವಲ್ಲಿ ಮಾತು ವಹಿಸುವ ಪಾತ್ರವಾದರೂ ಏನು? ಮಾತನ್ನೇ ಎಲ್ಲಾ ಅನಿಷ್ಟಗಳಿಗೂ ಕಾರಣ ಅಂತ ದೂರುವ ಹಿನ್ನೆಲೆಯಲ್ಲಿ ಮಾತು ಬರೋದಕ್ಕಿಂತ, ಇಲ್ಲದಿರುವುದೇ ಮೇಲು ಅನ್ನುವ ಮಾತು ತಾತ್ಕಾಲಿಕವಾಗಿ ಹೌದು ಅನ್ನಿಸಿದರೂ, ಅದು ಮನುಷ್ಯನಿಗೆ ದೇವರಿತ್ತ ವರ ಅನ್ನುವುದೂ ಸುಳ್ಳಲ್ಲ ಕಣೇ... ಎಷ್ಟು ಸುಂದರವಾದ ಅಭಿವ್ಯಕ್ತಿ ಮಾಧ್ಯಮ ಅದು! ಆ ಮಾಧ್ಯಮವನ್ನು ಬಳಸುವುದರ ಮೇಲೆಯೇ ಸಂಬಧಗಳ ಅಳಿವು-ಉಳಿವು ಇದೆ, ಅಲ್ಲಿ ಸ್ಪಷ್ಟವಾಗುತ್ತದೆ ಅದರ ಪಾತ್ರ...ಅಂತೀಯಾ?

    ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿದೆ. ಹಾಗಾದರೆ, ಮಾತನ್ನು ಹಿತಮಿತವಾಗಿ, ಅಳೆದುತೂಗಿ ಬಳಸಿದಲ್ಲಿ ಮಾತ್ರ ಅದು ಜೀವನಾನಂದಕ್ಕೆ ಪೂರಕವಾ? ಹಾಗೊಮ್ಮೆ ಪ್ರತಿ ಬಾರಿಯೂ ಅಳೆದುಸುರಿದು ಮಾತುದುರಿಸುವುದು ಸಾಧ್ಯವಾಗುವ ಮಾತೇನೇ? ನಾವು ಪ್ರೀತಿಸುವ, ನಂಬಿರುವ ಜೀವಗಳೆದುರು ಮುಕ್ತವಾಗಿ ಮಾತನಾಡುವುದು ಸಹಜವಲ್ಲವೇನೇ? ಅಲ್ಲಿಯೂ ಸಂಶಯಿಸಿ ಆಡುವ ಮಾತುಗಳು ಸತ್ಯವನ್ನೊಳಗೊಂಡು, ಪ್ರಾಮಾಣಿಕವಾಗಿರುತ್ತವೇನೇ? ಮೆಚ್ಚಿಸುವ, ಒಪ್ಪಿಸುವ ಹವಣಿಕೆ ಇಣುಕುವ ಸಾಧ್ಯತೆ ಬರಲ್ಲವಾ? ಅದರಿಂದ ಹುಟ್ಟುವ ಅಸಹಜತೆ ಅನುಬಂಧಕ್ಕೆ ಮಾರಕವೇ ತಾನೇ? ಹೌದು, ಅದಕ್ಕೆ ಯಾವುದೇ ವ್ಯವಹಾರದಲ್ಲಿ ಅಸಹಜತೆ ಇರಬಾರದೆಂದರೆ ಅಲ್ಲಿ ಪೂರ್ವಾಗ್ರಹಪೀಡಿತ ಅಥವಾ ಆಷಾಡಭೂತಿತನದ ಮಾತುಗಳಿರಬಾರದು. ಅಂದರೆ ಮಾತಾಡುವ ಕಲೆಯನ್ನು ಕಲಿತುಕೊಳ್ಳಬಹುದು ಅನ್ನುತ್ತೀಯಾ? ನನಗನಿಸುತ್ತದೆ, ಮಾತುಕಲಿಯುವ ವಯಸ್ಸಿನ ಮಗು ಸುತ್ತಮುತ್ತಲಿನ ವಾತಾವರಣದ ಮಾತುಗಳಿಂದ ಪ್ರಭಾವಿತವಾಗಿ ಮಾತಿನ ಧಾಟಿಯನ್ನು ಏನು ಕಲಿಯುತ್ತದೆ ಅದೇ ಜೀವನಪರ್ಯಂತ ಉಳಿದುಕೊಳ್ಳುತ್ತದೆ... ಅಲ್ಪಸ್ವಲ್ಪ ಬದಲಾಗಬಹುದಾದ ಅದರ ಚಿಂತನೆಯ ಧಾಟಿಗನುಗುಣವಾಗಿ ಮಾತಿನ ಧಾಟಿ ಸ್ವಲ್ಪ ಮಟ್ಟಿಗೆ ಬದಲಾದರೂ ಮೂಲಭೂತ ಶೈಲಿ ಉಳಿದೇ ಉಳಿಯುತ್ತದೆ, ಏನಂತೀಯಾ?

    ನುಡಿದರೆ ಮುತ್ತಿನ ಹಾರದಂತಿರಬೇಕು......ಅಂತ ವಚನಕಾರರು ಹೇಳಿದಂತೆ, ಮಾತು ಕರ್ಣಾಮೃತವೆನಿಸಬೇಕೆಂಬುದೇನೋ ನಿಜ... ಆದರೆ ಅದನ್ನು ಸಾಧಿಸುವಲ್ಲಿ ಹಲವಾರು ಬಾರಿ ನಮ್ಮನ್ನು ನಾವು ನೋವಿಗೊಡ್ಡಿಕೊಳ್ಳಬೇಕಾಗಿ ಬರುವುದಂತೂ ನಿಜ. ಹಾಗಂತ ಕರ್ಣಕಠೋರವಾಗಿ ಮಾತನಾಡುವವರು ನಿರಾಳವಾಗಿರುತ್ತಾರೆ ಎಂದೇನೂ ಅರ್ಥವಲ್ಲ, ಎದುರಿರುವವರು ಇವರ ಮಾತುಗಳಿಗೆ ಹೆದರಿದಂತೆ ವರ್ತಿಸಿದರೂ ಅವರ ಭಾವ, "ಅಬ್ಬಾ ಇವರ ಸಹವಾಸ ಬೇಡಪ್ಪಾ "ಎನ್ನುವಂತಿರುತ್ತದೆ. ಅಲ್ಲಿ ಆತ್ಮೀಯತೆ ಸುಲಭವಾಗಿ ಚಿಗುರುವುದಿಲ್ಲ, ಹಾಗಾಗಿ ಇಂಥವರಿಗೆ ತಮ್ಮ ನೇರ ಹಾಗೂ ಮೊನಚು ಮಾತುಗಳ ಕಾರಣ ದೂರವಿಡಲ್ಪಡುವ ನೋವಿರುತ್ತದೆ. ಮತ್ತಿದೂ ಇದೆ, ನಗುತ್ತಾ ಮೆತ್ತಗೆ ಮಾತಾಡುವವರ ಆಶಯ ನಿಜವಾಗಿಯೂ ಮೃದುವ್ಯವಹಾರವೇ ಆಗಿದ್ದರೂ, ಸದಾ ನಗುವವರನ್ನ ನಂಬಬಾರದು, ಅತಿವಿನಯಂ ಧೂರ್ತಲಕ್ಷಣಂ ಮುಂತಾದ ಮಾತುಗಳನ್ನೆದುರಿಟ್ಟು ಅದನ್ನೂ ಖಂಡಿಸುವವರಿದ್ದಾರೆ. ಇನ್ನು ಸತ್ಯ ಅಸತ್ಯ ಮಾತುಗಳನ್ನು ಆಡುವುದನ್ನು ಕುರಿತು. ಇದಂತೂ ಅತ್ಯಂತ ಧರ್ಮ ಸಂಕಟದ ವಿಷಯ... ನ ಬ್ರೂಯಾತ್ ಸತ್ಯಮಪ್ರಿಯಂ ಅನ್ನುವ ಮಾತು ಅಪ್ರಿಯಸತ್ಯವನ್ನು ನುಡಿಯದಿರುವಂತೆ ಪ್ರಚೋದಿಸುತ್ತದಲ್ಲವೇ? ಅಂಥ ಸಂದರ್ಭವೊಂದು ಸುಳ್ಳು ಮಾತನ್ನು ಅಪೇಕ್ಷಿಸಿಯೇ ಇರುತ್ತದೆ. ಹಾಗೆಂದರೆ ಮಾತು ಸಮಯ ಸಂದರ್ಭಕ್ಕೆ ತಕ್ಕಂತೆ ತಾನಿರಬೇಕಾದ ಸ್ವರೂಪ ತಾಳಬೇಕು, ಮಾತು ಎನ್ನುವ ಅಸ್ತ್ರವನ್ನು ಬಳಕೆಯರಿತು ಆಯಾ ಸಂದರ್ಭಕ್ಕೆ ತಕ್ಕಂತೆ ಮಾರ್ಪಡಿಸಿ ಬಳಸುವುದೇ ಸೂಕ್ತ ಅಂತೀಯಾ?

    ಈ ಗೊಂದಲಗಳು ಕಾಡುತ್ತಿದ್ದಾಗ ಮನಸು ನಿನ್ನೊಂದಿಗೆ ಮಾತುಕತೆ ಬಯಸಿತು ಸಖೀ.... ನಿನ್ನೊಡನಂತೂ ಯಾವುದೇ ಹಿಂಜರಿಕೆಯಿಲ್ಲದೇ ಯಾವುದೇ ಸೋಸುವಿಕೆಯಿಲ್ಲದೇ ಮಾತಾಡಬಲ್ಲೆ ನಾನು. ಅಗೋ...ಮತ್ತಿಲ್ಲೊಂದು ಗೊಂದಲ... ನಾನೂ ನೀನೂ ಸ್ಪಷ್ಟವಾಗಿ ನಮ್ಮಿಬ್ಬರ ಅಂತರಾಳವನ್ನು ಮಾತುಗಳ ಮುಖಾಂತರ ಪರಸ್ಪರ ಬಿಚ್ಚಿಡುತ್ತೇವೆ ನೋಡು... ನಮ್ಮೊಳಗೆ ಭಿನ್ನಾಭಿಪ್ರಾಯಗಳಿದ್ದಾಗ್ಯೂ ನಮ್ಮ ಪ್ರೀತಿ ಸದಾ ನಳನಳಿಸುತ್ತಲೇ ಬೆಳೆದಿಲ್ಲವೇನೇ? ಇದರರ್ಥ ಸಂಬಂಧ ದೃಢವಾಗಿದ್ದಲ್ಲಿ ಅದರ ಅಳಿವು-ಉಳಿವು, ಮಾತು ಮತ್ತದರ ಹಿಂದಿನ ಭಾವಗಳನ್ನು ಅವಲಂಬಿಸಿಲ್ಲ ಅಂತೀಯಾ? ಬಿಡು...... ಮಾತು ಬಯಸಿದೆ ಮನ, ಆದರೆ ಕಾಡಿದೆ ಮಾತು ತಲುಪಲಾಗದ ದೂರ, ಇವೆರಡರ ಫಲಶ್ರುತಿಯೇ ನನ್ನೀ ಪತ್ರ.... ನಿನಗನ್ನಿಸಿದ್ದನ್ನ ಬರೆದು ತಲುಪಿಸುತ್ತೀಯಲ್ಲಾ.....? ಮುಗಿಸುತ್ತಿದ್ದೇನೆ.....













Thursday, December 13, 2012

ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಸ್ವಾತಂತ್ರ್ಯದಿನಾಚರಣೆಯೇ ಮುಂತಾದ ಸಂದರ್ಭಗಳಲ್ಲಿ ಸ್ಪರ್ಧೆಗಳಿಗೆ ಹೊಸಹೊಸ ಹಾಡುಗಳು ಬೇಕಾಗಿದ್ದಾಗ ನಮ್ಮ ಅಪ್ಪನೇ ಬರೆದು ರಾಗ ಸಂಯೋಜಿಸಿ ಕೊಡುತ್ತಿದ್ದರು. ಹಾಗೆ ಗೆದ್ದು ತಂದ ಬಹುಮಾನಗಳು ನಮ್ಮಮ್ಮನ ಪುಟ್ಟಮನೆಯ ತುಂಬಾ ಇವೆ... ನೋಡಿದಾಗಲೆಲ್ಲ ನಮ್ಮ ಗೆಲುವಿನಲ್ಲಿ ಅಪ್ಪನ ಕಳಕಳಿಯ ಭಾಗವಹಿಸುವಿಕೆಗೆ ಎದೆತುಂಬಿ ಬರುತ್ತದೆ... ನನ್ನ ಪುಟ್ಟಿಗೋ ಕಣ್ಣಲ್ಲಿ ಅನುಪಮ ಹೊಳಪು... ನನ್ನಮ್ಮ, ಚಿಕ್ಕಮ್ಮ ಇಷ್ಟೊಂದು ಗೆದ್ದದ್ದು... ಅಂತ...ಅಂಥ ಹಾಡುಗಳಲ್ಲಿ ಇಂದು ಅವಳಿಗೆ ಒಂದು ಹಾಡು ಕಲಿಸಿದೆ, ಅವಳ ಶಾಲೆಯ ವಾರ್ಷಿಕೋತ್ಸವದ ಸ್ಪರ್ಧೆಗಾಗಿ....ಅದು ಹೀಗಿದೆ..ಹಂಚಿಕೊಳ್ಳಬೇಕೆನಿಸಿತು...(ಹಳೆಯ ಹಿಂದಿ ಚಿತ್ರವೊಂದರ ಹಾಡು ಏ ವತನ್ ಏ ವತನ್ ನ ಧಾಟಿಯಲ್ಲಿ..)


ನನ್ನ ಜನನಿ ನನ್ನ ನಾಡು ನನ್ನ ದೇಶ ಭಾರತಾ..

ನಿದ್ದೆ ಸಾಕು ಎದ್ದು ನೋಡು ನಿನ್ನ ಜನರ ಪಾಡನು.(ನನ್ನ ಜನನಿ).

ವೇದಕಾಲದಿಂದಲಿದ್ದ ನಿನ್ನ ವೈಭವಗಳಾ

ಆಧುನಿಕತೆ ಸುಟ್ಟು ಚಿಂದಿಚೂರು ಮಾಡಿ ಬಿಸುಟಿದೆ

ಭ್ರಷ್ಟ ಜನರ ಸ್ವೇಚ್ಛೆಯಲ್ಲಿ ನರಕಸದೃಶಳಾಗಿರುವೆ

ಅದಕ್ಷಹಿಂಸೆ ತುಂಬಿರುವ ನಿನ್ನ ಜನರ ನೋಡು ಬಾ...(ನನ್ನ ಜನನಿ)

ಎದ್ದೇಳು ಭಾರತಾ ಹಿಂದೆ ನಡೀ ನನ್ನ ತಾಯಿ

ಇಂದಿನ ಈ ನರಕಕಿಂತ ಹಿಂದಿನದೇ ವೈಭವಾ

ಭರತನಾಳ್ವಿಕೆಯಾ ಸವಿಯ ನಮಗೆ ಒಮ್ಮೆ ಉಣಿಸೆ ಬಾ

ಋಣದಿಕಣ್ಣು ಕಟ್ಟಿರುವಾ ನಮ್ಮ ಪಟ್ಟಿ ಬಿಡಿಸೆ ಬಾ

ಜನನಿಜನ್ಮಭೂಮಿಯು ಸ್ವರ್ಗಕದೋ ಅನುಪಮ

ಎಂಬ ಮಾತ ಋಜುಗೊಳಿಸೆ ಎದ್ದೇಳು ಭಾರತಾ(ನನ್ನ ಜನನಿ)

----------------------------------------

ಅಪ್ಪಾ, ನನಗೆ ನಿನ್ನ ಮಗಳೆಂಬ ಮಾತಿಗೆ ಹೆಮ್ಮೆ ಇದೆ...









ಅದು ಅದೇ ನಲ್ಲ,


ನೀ ಕೂಗಿದಾಗಲೆಲ್ಲ ನನ್ನೊಳಗೋಗೊಡುವದು,

ಕೂಗದಾಗಲೆಲ್ಲ ಕೂಗಿದ್ದ ಪ್ರತಿಧ್ವನಿಸುವದು,

ಮುಚ್ಚಿದೆವೆಯಲು ಸ್ಪಷ್ಟ ಬಿಂಬ ಮೂಡಿಸುವದು

ತೆರೆದ ಕಣ್ಣಿಗೆ ನಗೆಯ ದಿರಿಸುಡಿಸುವದು

ಒಡಲಾಳದಿ ಅರಳುವ ಅರಿವೇಳಿಸುವದು

ಮೈಮನಕೆ ತಾರುಣ್ಯ ನವೀಕರಿಸುವದು

ನಿನ್ನೆಗಿರದ ನಾವೀನ್ಯ ಪ್ರತಿ ಇಂದಿಗೀವದು

ಎದ್ದ ಗಳಿಗೆಯೆ ಮೊಗಕೆ ತೃಪ್ತಿ ನತ್ತನೀವದು

ನಿದ್ದೆಯ ಹೊರಳಾಟಕೊಂದು ಕನಸಾಗುವದು,

ಕನಸಲೊಂದು ಮೆಲುರಾಗದಾಲಾಪವಾಗುವದು

ದಣಿದ ಹೊತ್ತಲಿ ಅಲ್ಲೆ ಅಮೃತ ಹನಿಯಿಸುವದು..



ನಾ, ನೀ ಎಂಬಂತರವ ಶೂನ್ಯರೂಪಕೆ ತಂದು,

ಮಿಳಿತದಾನಂದದ ಉಡುಗೊರೆಯಿತ್ತುದಕೆ,

ಹೆಸರು ಬೇಕೇನು, ಹೊತ್ತುಗೊತ್ತು ಬೇಕೇನು?

ಉಕ್ತಜಾಗ, ಸೂಕ್ತರೂಪ, ಒಪ್ಪಿಗೆಯಮುದ್ರೆ ಬೇಕೇನು?



ಬೆತ್ತಲಾದಾಗ ಭಯ.....


-----------------------

ಕತ್ತಲು ಮುಸುಕಿದಂತೆ ಬೆತ್ತಲು ಭಯದೊಡಲು.



ತಪ್ಪುಗಳು, ಅಲ್ಲದವು, ಅಲ್ಲದೆಯೂ ಹಾಗನಿಸಿದವು,

ಆದವು, ಆಗದಿರುವವು, ಆಗಲಿರುವವು...

ತನ್ನವು, ಅಲ್ಲದವು, ಆದಾಗ್ಯೂ ಜೋಳಿಗೆಯಲಿರುವವು.

ಉಚ್ಚ್ವಾಸಕೆ ನಿರಾಳತೆಯ ಒತ್ತಾಸೆಯಿಲ್ಲ, ಎದೆ ಬರಿದು,

ಬಿಟ್ಟುಸಿರುಗಳಾಗಿ ನಿಟ್ಟುಸಿರು, ಗೊಂದಲದ ಬಸಿರು.

ದಿನ ತುಂಬಿದೊಡಲಿನದರಂತೆ ಬಿಸಿತುಪ್ಪದ ಪಿಂಡ,

ಹೊರಬಿದ್ದರೆ ಬಯಲು, ಒಳಗುಳಿದರೆ ಭಾರ...



ಮಾಡಿದ್ದುಣ್ಣೋ ..... ಮಾಡಿದ್ದಕ್ಕೂ, ಯೋಚಿಸಿದ್ದಕ್ಕೂ..

ನೀರ್ಕುಡಿಯಲೇಬೇಕು...ಉಪ್ಪುಂಡರೂ, ನೋಡಿ ಚಪ್ಪರಿಸಿದರೂ..

ಕಣ್ಮುಚ್ಚಿ ಕುಡಿವ ಬೆಕ್ಕು ನಮ್ಮನಿಮ್ಮೆಲ್ಲರೊಳಗೂ...

ಹರಿದಂತೆ ಹರಿಯಬಿಡುವ ಭಾವಪ್ರವಾಹದ ನಡೆಗೆ,

ಎದೆ ಸುಡುವ ಭಯದ ಜ್ವಾಲಾಮುಖಿಯುಗುಳು....

ಸಿಡಿದ ಕಿಡಿಗಳು ಹರಡಿ ನೋಟ ಹರಿದೆಲ್ಲೆಡೆ,

ಬರೆಮೂಡದ, ಗೆರೆಯಾಗದ ಅದೃಶ್ಯ ಚಾಟಿಯೇಟು...



ನೆತ್ತಿಬಗಿದು, ಚಿಮ್ಮಿರಕ್ತ, ಸತ್ವ ಸಾಧಿಸುವ ಗುಳಿಗನಂತೆ,

ನೆತ್ತರಾಗಿಳಿಯಬೇಕು ಆಸೆ ಸೀಳಿದ ಗಾಯದಿ ನಿರಾಸೆ,

ನಾಲ್ಕರಲ್ಲ್ಯಾವುದೋ ಒಂದು ವೈರಾಗ್ಯವಾಗಿ ರೆಸಿಗೆ,

ಹುಣ್ಣಾಗಿ ಕಾಡಿ ಖಾಲಿತನದ ಇರುಳು ಕುಡಿಯೊಡೆದು...

ಭರವಸೆಯ, ಭದ್ರತೆಯ,ಆಶ್ವಾಸನೆಯ ಕಿರಣಕೆ ಕಾವ

ಕತ್ತಲು ಮುಸುಕಿದಂತೆ ಮತ್ತೆ ಬೆತ್ತಲು ಭಯದೊಡಲು.









ತರವೇ...


----------------

ಸಿಟ್ಟು ತರವೇ ದೊರೆಯೇ...

ಬಂದರೂ ಹಾಗೊಮ್ಮೆ ಮೆಟ್ಟಬೇಕಲ್ಲವೇ....



ನಾನವಳೂ ಹೌದು ಮತ್ತಿವಳೂ.....

ಅದು ಒಡಲ ಗಂಟು, ನೀನೆದೆಯ ನಂಟು.

ನನ್ನ ಜಗದಿ ಎರಡಕೆರಡು ಜಾಗವುಂಟು...

ಕಣ್ಣೆರಡಿದ್ದರೂ ದೃಷ್ಟಿ ನನದೊಂದೇ...

ಅತ್ತ ಹರಿದಾಗಲೇ ಇತ್ತ ಬಯಸುವುದು ತರವೇ....



ನಾನಲ್ಲೂ ಇರುವೆ ಮತ್ತಿಲ್ಲೂ....

ಅಲ್ಲಿ ಆಧರಿಸೋ ಮಡಿಲು, ಇಲ್ಲಿ ಹಿಂಬಾಲಿಸೋ ನೆರಳು..

ನನ್ನಿರುವಲೆರಡೂ ರೂಪವುಂಟು....

ಕಿವಿ ಎರಡಿದ್ದರೂ, ಕೇಳುವ ಕರೆಯೊಂದೇ...

ಅದ ಗಮನಿಸುವಾಗಲೇ ನೀ ಕರೆವುದು ತರವೇ...



ನಾನದರದೂ ಹೌದು ಮತ್ತೆ ನಿನ್ನದೂ...

ಅದರೆದುರಿನ ಮಾದರಿ, ನಿನಗೆ ಪ್ರತಿಬಿಂಬವಿತ್ತ ಕನ್ನಡಿ...

ನನ್ನೊಳಗೆರಡೂ ಛಾಯೆಯುಂಟು...

ಕಾಲೆರಡಿದ್ದರೂ ನಡೆವ ದಿಶೆಯೊಂದೇ.....

ಅದರತ್ತ ನಡೆವಾಗ ನೀ ವಿಮುಖನಾಗುವುದು ತರವೇ...













ಹಾಗೇ ಸುಮ್ಮನೆ........


-----------------------

ಹಣೆ ಸ್ವಲ್ಪ ಹಿರಿದಾಯ್ತು, ಮೂಗು ತುಸು ಮೊಂಡು,

ಕಣ್ಣಷ್ಟಗಲವಿರಬೇಕಿತ್ತು, ಬಾಯಿ ದೊಡ್ಡದಾಯ್ತು,

ಹಲ್ಲು ನೇರವಾಗಿಲ್ಲ, ಗಲ್ಲ ಚೂಪಿಲ್ಲ,

ಕೆನ್ನೆ ಸೇಬಂತಿಲ್ಲ, ನೀಳವೇಣಿಯೂ ಅಲ್ಲ...

ಬಣ್ಣವಷ್ಟೊಂದಿಲ್ಲ, ಅಂಗಸೌಷ್ಟವವೂ ಇಲ್ಲ...



ಮುಖದಲ್ಲೊಂದು ಮೆಲುನಗು,

ಕಣ್ಣ ನಿಟ್ಟಿಸಿ, ಕೆನ್ನೆಸವರಿ, ಮೂಗು ಮೂಗಲಿ ಮುಟ್ಟಿ,

ಗಲ್ಲ ಹಿಡಿದೆತ್ತಿ, ಹಣೆ ಚುಂಬಿಸಿ, ನಿನ್ನ ನಗು ನನಗಿಷ್ಟ,

ನಿನ್ನಂಥವರಿಲ್ಲ ಕಣೇ...ಎಂಬವರ ಸಾನ್ನಿಧ್ಯದಲಿ ,

ಕಿವುಡಲ್ಲದ ಕಿವಿ ಬೇರೆಲ್ಲೆಡೆಗೆ ಕಿವುಡಾಗಿತ್ತು





ವಿದಾಯ


-------------

ಅದೋ ಹೊರಹೊರಟಿತದು, ಹೇಳುತಿದೆ ವಿದಾಯ...

ಒಳಬಂದ ಬಾಗಿಲಲೆ ಹೊರಹೋಗುತಿದೆ.

ಉಳಿವ ಯೋಗ್ಯತೆಯಿಲ್ಲವೆಂದಲ್ಲ,

ಅಳಿವ ಸಾಧ್ಯತೆಯಿದೆಯೆಂದು....



ತಿರುಗಿ ಬಹುಶಃ ಬರದು, ನೋವ ಬಯಸುವುದಿಲ್ಲ

ಬಯಸುವುದೇನು, ಸನಿಹಕೂ ಸುಳಿವುದಿಲ್ಲ...

ನೋವಹೊತ್ತು ಮೆರೆಸುವರ ಸುತ್ತಮುತ್ತಲಿ,

ನೋವು ಮರೆವುದಾಗುವುದಿಲ್ಲ....



ಇಂಥ ಕಡೆ ಬಹುಶಃ ಹೊಕ್ಕುವುದೂ ಇಲ್ಲ,

ಹೊಕ್ಕುವುದೇನು, ಒಳಗಿಣುಕುವುದೂ ಇಲ್ಲ,

ಅಲ್ಲೊಳಗೆಲ್ಲ ತುಂಬಿದ ಅಸಮಾಧಾನದಿ,

ಸಮಾಧಾನ ಹುಡುಕುವುದಾಗುವುದಿಲ್ಲ.....



ಅದರದಿದೆ ಅದರಂಗಳ, ಅದರದೇ ಭಾವಶರಧಿ...

ಬಂಧಗಳೇ, ಬರಬಹುದು ನೀವೂ ನೆನಪಾದಲ್ಲಿ ....

ಅತ್ಮೀಯ ಸ್ವಾಗತ ಅಲ್ಲಿದ್ದೇ ಇದೆ, ನಿರೀಕ್ಷೆಯೂ...

ಆದರೂ ಈ ಸೊಗ ಅಲ್ಲಿಹುದೇ? ಪ್ರಶ್ನೆ ಕಾಡುವುದು..



ನೂರು ನಗುವ ನೋವೊಂದಿಲ್ಲಿ ನುಂಗಿಹುದು

ನೀರಲಿಲ್ಲದ ಮೀನಂತೆ ಅಲ್ಲದು ತಹತಹಿಸಬಹುದು..

ನೀವು ತರೋ ಪ್ರೀತಿಸೆಲೆ ಜೀವಜಲವಾಗಬಹುದು

ಇದೋ...ಹೊರಹೊರಟಿಹುದು, ಹೇಳುತಿದೆ ವಿದಾಯ...



Saturday, December 8, 2012


ಆತ್ಮಸಖಿಗೊಂದು ಪತ್ರ...

........................................
  ಸಖೀ, ನಿನ್ನೊಡನೆ ಮನಸಲ್ಲೇ ನಿನ್ನೆ ತುಂಬಾ ಹೊತ್ತು ಮಾತಾಡಿದೆ ಕಣೇ... ಅದೇನು ಅಂತೀಯಾ....ಹೇಳ್ತೀನಿ ಇರು. ಎಷ್ಟು ವಿಚಿತ್ರ ನೋಡು, ನಾನು ನನ್ನ ಅನಿಸಿಕೆಯನ್ನು ತೋಡಿಕೊಳ್ಳಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ನಿನ್ನನ್ನು ನನ್ನ ಕಲ್ಪನೆಯೊಳತಂದು ಅದೆಷ್ಟೋ ಹೊತ್ತು ನಿನ್ನೊಡನೆ ಕಳೆದೆ...ನೀನೂ ಅಲ್ಲಿ ಆ ಚಿಂತನಾಸರಣಿಗೆ ಅದೆಷ್ಟೋ ಕೊಂಡಿಗಳ ರೂಪದಲ್ಲಿ ಒದಗಿದೆ... ಆದರೀಗ ಹೇಳು ನೋಡುವಾ... ಏನು ಮಾತಾಡಿದ್ದು ನಾವು...? ಹೇಳಲಾರೆ... ಯಾಕೆಂದರೆ ಅಲ್ಲಿದ್ದದ್ದು ನಿನ್ನ ಅಮೂರ್ತವ್ಯಕ್ತಿತ್ವ....ಅದೂ ನನ್ನ ಭಾವಪ್ರಪಂಚದೊಳಗಷ್ಟೆ....ಅದು ಹೇಗೆ ಅಂತೀಯಾ....ಅದು ಹೀಗೇ ಕಣೇ......



ಸ್ನೇಹ ಅಮೂರ್ತವೆಂದರೆ ನಿರಾಕಾರನನೊಪ್ಪಿದಂತೆ

ಸ್ನೇಹ ಮೂರ್ತವೆಂದರೆ ದೇಗುಲವ ಹೊಕ್ಕಂತೆ

ನಿರೂಪಣೆ, ಬಣ್ಣನೆ, ವಿವರಣೆಗದು ಹೊರತು....

ಕಾರಣ, ಉದ್ದೇಶ, ಸಾಕ್ಷಿ, ಆಧಾರಕೂ ...

ಇದೆಯೆಂದರೂ ಇಲ್ಲವೆಂದರೂ.....

ಮೂರ್ತ- ಅಮೂರ್ತಗಳ ಮೀರಿದ್ದು

ಸ್ನೇಹವೂ ಹೌದು ಮತ್ತು ದೇವನೂ....



ಈ ಭಾವನೆಗಳೇ ಹಾಗೆ...ಗಾಳಿಯ ಹಾಗೆ...ಸಮುದ್ರದ ಹಾಗೆ....ಕಾಲದ ಹಾಗೆ....ತಮ್ಮಷ್ಟಕ್ಕೆ ತಾವು ಇಷ್ಟಬಂದಂತೆ ವರ್ತಿಸುತ್ತಲೇ ಸಾಗುತ್ತವೆ. ಅವು ಹಾಗಿರುವುದು ಬೇಕಿರಲಿ, ಬೇಡದಿರಲಿ,.. ಸಾಕಿರಲಿ, ಸಾಲದಿರಲಿ...ಸೂಕ್ತವಿರಲಿ, ಇಲ್ಲದಿರಲಿ...ಅವಕೆ ತಮ್ಮದೇ ದಾರಿ, ತಮ್ಮದೇ ನಿರ್ದೇಶನ ಮತ್ತೆ ತಮ್ಮದೇ ಗುರಿ. ಒಮ್ಮೊಮ್ಮೆ ನಮ್ಮೊಳಗವೇ ಬೇಡವೆನಿಸುವ ರೀತಿಯ ಅಧಿಪತ್ಯ ಸಾಧಿಸಿ ತಬ್ಬಿಬ್ಬುಗೊಳಿಸುವಷ್ಟು ಆಕ್ರಮಣಕಾರಿ.... ಒಮ್ಮೊಮ್ಮೆ ಪುಳಕಿತಗೊಳಿಸುವಷ್ಟು ಮಾರ್ದವ...ಇಲ್ಲದ್ದ ಕಲ್ಪಿಸಿ ಒಮ್ಮೊಮ್ಮೆ ದುಖಃದಾಯಕ, ಒಮ್ಮೊಮ್ಮೆ ಆಶಾದಯಕ, ...ತೀವ್ರವಾಗಿ ಒಮ್ಮೊಮ್ಮೆ ಎದುರಿದ್ದವರ ದೂರವಾಗಿಸುವಷ್ಟು ಕಠೋರ, ಒಮ್ಮೊಮ್ಮೆ ಸೀದಾ ಎದೆಗಿಳಿಸುವಷ್ಟು ಮಧುರ....ಹೀಗೆ ನಮ್ಮವೇ ಆಗಿದ್ದು ನಮ್ಮಾಧೀನಕ್ಕೆ ಹೊರತಾಗಿದ್ದರೂ ಇವು ಎಲ್ಲಾ ಹೊತ್ತಲ್ಲೂ ಸಂಗ ಬಿಡದ ಸಂಗಾತಿಗಳಂತೂ ಹೌದು...ಅದರಲ್ಲೂ ನನ್ನ ನಿನ್ನಂಥ ಸೂಕ್ಷ್ಮಮತಿಗಳು ಅವಕ್ಕೆ ತುಂಬಾ ಸದರ ಕೊಟ್ಟು ಬಿಟ್ಟಿರುತ್ತೇವೇನೋ ಹಲವು ಬಾರಿ...ಏನಂತೀಯಾ? ಅದಿರಲಿ ನಿನ್ನೆಯ ಮಾತುಕತೆಗೆ ಬರೋಣ..

ನಿನ್ನೆ ನಾನೊಂದು ಕವನ ಬರೆದು ಸಾರ್ವಜನಿಕರ ದೃಷ್ಟಿಗೆ ಅದನೊಪ್ಪಿಸಿದೆ ನೋಡು...ಅದು ಹೀಗಿತ್ತು....



ಬೆಲೆ ತೆರಲೇ ಬೇಕು

---------------------------------------

ಅಲ್ಲೊಂದು ಹೃದಯ- ಎಲ್ಲರದರಂತೆ

ದೇಹಕೂ ಮನಸಿಗೂ ಜೀವನದಿಯ ಸೆಲೆ



ಗೋಡೆ ಮಾತ್ರ ಬಹಳ ಮೆದು, ತೇವ ಸ್ವಲ್ಪ ಜಾಸ್ತಿ.

ಆರ್ದೃತೆಯುಳಿಸಿಕೊಂಡುದಕೆ ಇತ್ತ ಸೆಳೆತ ಜಾಸ್ತಿ

ಮೊದಲ ಮಳೆಯುಂಡ ಹಸಿಮಣ್ಣ ಘಮಲಂತೆ,

ತನ್ನತನ ಎಲ್ಲರಂತಿಲ್ಲೆಂಬ ಗರ್ವವಂತೆ.



ದಾರಿಹೋಕರೆಲ್ಲ ಒಣಗದ್ದು ವಿಶೇಷವೆಂದರು,

ಬಳಿಸಾರಿ ಮುಟ್ಟಿದರು, ಉಗುರಿಂದ ಕೆರೆದರು,

ಬೆರಳಲಿ ಬರೆದರು, ದೂರ ಸಾಗಿ ಜೋರು ಕಲ್ಲೆಸೆದರು,

ಅಳಿಯದ ಛಾಪು ಮೂಡಿಸಿ ಅಮರರೆನಿಸಬಯಸಿದರು.



ಗುರುತು ಮೂಡಿಸಲೀಗ ಸೂಜಿಮೊನೆ ಜಾಗವಲ್ಲಿಲ್ಲ.

ಹಸಿಗೋಡೆ ಜೊತೆಗಾರೂ ಇಲ್ಲ, ಇವೆ ಗುರುತು ಮಾತ್ರ.

ಗಟ್ಟಿಯಾಗಬೇಕದಕೀಗ, ಆಗಲೊಲ್ಲದು,

ಹುಟ್ಟುಗುಣ ಸುಟ್ಟರೂ ಬಿಟ್ಟು ಮಾತ್ರ ಹೋಗದು.



ಗಟ್ಟಿಯಾದರೂ ಮುಂದೊಮ್ಮೆ ಗುಳಿಗಳು, ಗೀಚುಗಳು,

ಗೀರುಗಳು, ಗಾಯಗಳು ಕಲೆಯಾಗುಳಿಯುವವು.

ಸುಲಭವಲ್ಲವಲ್ಲಾ... ಎಲ್ಲರಂತಿಲ್ಲದಿರುವುದು?!

ಬೇರೆ ಎನಿಸಿಕೊಳಲಿಕೆ ಬೆಲೆಯ ತೆರಲೇಬೇಕು.



ಸರಿ, ಅಭಿಪ್ರಾಯಗಳು, ಟೀಕೆಗಳು, ಮೆಚ್ಚುಗೆಗಳೂ ಬಂದವು, ಜೊತೆಗೊಂದು ಪ್ರಶ್ನೆ..."ಹಳೆಯ ಗಾಯ ಮರೆಯಲು ಹೊಸ ಸ್ನೇಹದ ಅವಶ್ಯಕತೆ ಇದೆಯಾ..." ಈ ಪ್ರಶ್ನೆ ನನ್ನ ಚಿಂತನೆಗೆ ಹಚ್ಚಿತು ಕಣೇ... ಬರಹಕ್ಕೂ ಅದರ ಬರಹಗಾರನಿಗೂ ಇರುವ ಮತ್ತು ಇರಬೇಕಾದ ಸಂಬಂಧದ ಸ್ವರೂಪ ಯಾವುದು... ನಿಜ, ಸಂಬಂಧ ಅಂದರೆ ಸಂಬಂಧ ... ಅದಕ್ಕೊಂದು ಸ್ವರೂಪ ಎಂಬ ನಿರ್ದಿಷ್ಟತೆ ಇರದು, ಮತ್ತು ಇರಬಾರದು, ಒಪ್ಪಿದೆ. ಆದರೂ ಅದಕ್ಕೊಂದು ಹೀಗಿರಬೇಕೆಂಬ ಕನಿಷ್ಠ ಹಾಗೂ ಸ್ಥೂಲನಿಯಮವಿರಬೇಕಲ್ಲವೇನೇ..ಹನ್ನೆರಡನೇ ಶತಮಾನದ ವಚನಕಾರರ ಬಗ್ಗೆ ಓದುವಾಗ ಹೀಗೆ ಓದಿದ್ದೆ- "ವಚನಚಳುವಳಿಯು ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆಯಲು ಕಾರಣವೇನೆಂದರೆ ವಚನಕಾರರು ಸಾಮಾನ್ಯರ ನಡುವೆ ಬಾಳಿದರು, ಕಷ್ಟ ಸುಖಗಳನ್ನು ಅವರೊಂದಿಗೆ ಅನುಭವಿಸಿ, ಅದನ್ನು ಅನುಭಾವವಾಗಿಸಿ ಬದುಕಿದ್ದನ್ನು ಬರೆದರು, ಬರೆದದ್ದನ್ನು ಬದುಕಿದರು....." ಅಂದರೆ, ನಾವು ಅನುಭವಿಸಿದ್ದನ್ನ ಬರೆಯುವುದಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯವೇ... ಅಥವಾ ಕಲ್ಪಿಸಿ ಬರೆಯುವುದು , ಪರಕಾಯ ಪ್ರವೇಶದಿಂದುತ್ಪನ್ನ ಭಾವಗಳನ್ನು ಬಿಂಬಿಸುವುದು ಕೂಡಾ ಅಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯನಾ ಅಂತ...

ಸಾಮಾನ್ಯವಾಗಿ ಕವನಗಳ ಬಗ್ಗೆ ಮಾತಾಡುವಾಗ ಆರಿಸಿಕೊಳ್ಳುವ ಪ್ರಕಾರಗಳ ವೈವಿಧ್ಯತೆ ತುಂಬಾ ವಿಸ್ತಾರದ್ದು. ಅಲ್ಲಿ ವರ್ಣನೆಯದ್ದೊಂದು ಪ್ರಕಾರವಾದರೆ ಕಲ್ಪನೆಯದ್ದೊಂದು, ಹೇಳಿಕೆಯದ್ದೊಂದಾದರೆ ನಿವೇದಿಸಿಕೊಳ್ಳುವದ್ದೊಂದು, ಉಪದೇಶದ್ದೊಂದಾದರೆ ಪ್ರಶ್ನಿಸುವದ್ದೊಂದು, ಖಂಡನೆಯದ್ದೊಂದಾದರೆ ಹೊಗಳುವದ್ದೊಂದು...ಸಂವಾದದ್ದೊಂದಾದರೆ ಸ್ವಗತದ್ದೊಂದು ಹೀಗೆ ನೂರಾರು ತರಹದವುಗಳು... ಮತ್ತವುಗಳ ಜಾಡಿನ ರಚನೆಗಳು. ನನ್ನ ಮಟ್ಟಿಗಂತೂ ಮನಸಿನೊಳಗೆ ಒಂದು ವಿಷಯದ ಬಗೆಗಿನ ಭಾವನೆಗಳು ತುಂಬಿ ತುಳುಕಾಡಿದಾಗ ಉಳಿದವುಗಳಿಗೆಡೆ ಮಾಡಿಕೊಳ್ಳಲು, ಅಥವಾ ಭಾವನೆಗಳು ದಟ್ಟಮೋಡಗಳಂತಾದಾಗ ಸುರಿಯುವುದು ಅನಿವಾರ್ಯತೆಯಾದಾಗ...ಹೀಗೆ.. ಒಟ್ಟಿನಲ್ಲಿ ಹಗುರಾಗಲು ಒಂದು ಮಾಧ್ಯಮ ಈ ಬರವಣಿಗೆ. ಈ ಎಲ್ಲಾ ಪ್ರಕಾರಗಳಲ್ಲೂ ಮನುಷ್ಯನ ಕುರಿತಾಗಿ ಬರೆದ ಬರಹಗಳನ್ನು ತೆಗೆದುಕೊಳ್ಳುವಾ.ಅಲ್ಲಿನ ಭಾವನೆಗಳು ಸ್ವಾನುಭವದ ಶಿಶುಗಳಾಗಿಯೂ ಇರಬಹುದು ಅಥವಾ ಎದುರಾದದ್ದೊಂದು ಸಂದರ್ಭದಲ್ಲಿ ಕೇಂದ್ರದಲ್ಲಿ ತನ್ನನ್ನು ಕಲ್ಪಿಸಿಕೊಂಡು ಮೂಡಿದವೂ ಇರಬಹುದು, ಇಲ್ಲ ಪರರಿಗಾಗಿ ತುಡಿತದ ಫಲವೂ ಇರಬಹುದು. ಮುಖ್ಯವಾಗಿ ವಸ್ತುವೆಂದು ರಮ್ಯವಿಷಯವೊಂದನ್ನು ಆರಿಸಿ ಬರೆದಾಗಲಂತೂ ಅದೂ ಸ್ವಗತ ಮಾದರಿಯ ಅಥವಾ ಸಂವಾದ ಮಾದರಿಯ ಕವನಗಳಲ್ಲಿ ಬಿಂಬಿತ ಭಾವಗಳು ಮತ್ತು ಹೇಳಿಕೆಗಳು ಬಹುಶಃ ಓದುಗನ ಮನಸಿನಲ್ಲಿ ಒಂದೋ ಬರೆದವನನ್ನು ಅಥವಾ ತನ್ನನ್ನು ಆ ರಚನೆಯ ಕೇಂದ್ರವಾಗಿಸಿ ತೋರಿಸುವುದೇ ಹೆಚ್ಚು... ಏನಂತೀಯಾ...?

ಹಾಗಾದರೆ, ಕಲ್ಪಿಸಿ ಬರೆದ ಬರಹ ಅನುಭವಿಸಿ ಬರೆದದ್ದರಷ್ಟು ಪ್ರಭಾವಶಾಲಿಯಲ್ಲ ಅನ್ನುವುದಾದರೆ,ನನ್ನದಲ್ಲದ ಅನುಭವವೊಂದು ನನ್ನದೇ ಅನ್ನಿಸುವಷ್ಟು ಆ ಓದುಗನನ್ನು ಪ್ರಭಾವಿಸಿದ್ದು ಮತ್ತು ಆಮೂಲಕ ಆ ಪ್ರಶ್ನೆ ಹುಟ್ಟಿದ್ದು ಹೇಗೆ?

ಮನುಷ್ಯನಲ್ಲದ ವಿಷಯಗಳ ಬಗ್ಗೆ ಬರೆಯುವಾಗ ಪ್ರತಿಮೆಗಳು, ಉಪಮೆಗಳು ಎಷ್ಟೊಂದು ಹಿತವೆನಿಸುತ್ತವೆ!... ಉದಾಹರಣೆಗೆ ಭೂಮಿ ಬಾನುವಿನ, ಸೂರ್ಯ ಕಮಲದ, ಚಂದ್ರ ನೈದಿಲೆಯ ಪ್ರೇಮ, ಇಬ್ಬನಿಯ ಹನಿಯೊಂದು ಹಿಮಮಣಿಯೆನಿಸುವುದು, ಮೂಡಣದ ಬಾನಿನಲ್ಲಿ ರಕ್ತದೋಕುಳಿ ಚೆಲ್ಲಿದಂತನಿಸುವುದು, ಕ್ಷಿತಿಜದಲ್ಲಿ ಭೂಮಿ ಬಾನು ಸೇರಿ ಕಾಮನಬಿಲ್ಲಿನ ಜನನವೆಂದೆನಿಸುವುದು.. ಇವೇ ಮುಂತಾದ ಈ ರೀತಿಯ ಕಲ್ಪನೆಗಳು ನಮ್ಮ ಹಿರಿಯ ಕವಿಗಳ ರಚನೆಗಳಲ್ಲಿ ಪ್ರಮುಖ ಆಕರ್ಷಣೆಗಳೆನಿಸುವುದಲ್ಲದೆ, ಅವರವರ ರಚನೆಗಳ ಮೇರುಲಕ್ಷಣಗಳೆನಿಸುವುದು ಕಂಡಿದ್ದೇವೆ ಅಲ್ಲವೇ? ಅದೇ ರೀತಿ ಅವಲ್ಲದ ಆದರೆ ಅವಾಗಬಹುದಾದ ಮನುಷ್ಯನ ಗುಣಗಳು, ವರ್ತನೆಗಳು, ನಿರ್ಧಾರಗಳು, ಚಿಂತನೆಗಳು, ಲಕ್ಷಣಗಳು ಒಂದು ಕವನದಲ್ಲಿ ಕಲ್ಪನೆಯ ಫಲವಾಗಿ ಬಿಂಬಿಸಲ್ಪಟ್ಟರೆ, ಅದನ್ನೊಂದು ಸಾಧ್ಯತೆಯಾಗಿಯೇ ಅಥವಾ ನೈಜತೆಯಾಗಿಯೇ ನೋಡುವುದು ಯಾಕೆ? ಅದೊಂದು ಕಲ್ಪನೆಯಿರಬಹುದೆಂದು ಕನಿಷ್ಠ ಮೊದಲ ಓದಿನಲ್ಲಂತೂ ಅನಿಸುವುದಿಲ್ಲ..( ಹೆಚ್ಚಿನ ಸಲ ಇದು ಬೇರೆಯವರ ಬರಹಗಳ ಓದುಗಳಾದಾಗ ನನ್ನ ಚಿಂತನೆಯ ಜಾಡೂ ಹೌದು.) ಇದಕ್ಕೆ ನಮ್ಮ ಕ್ಲಿಷ್ಟ ಮನಸು ಕಾರಣ ಅಂತೀಯಾ,.. ಮನಸು ಎದುರಿಗಿನ್ನೊಂದು ಮನಸನ್ನು ಕಂಡಾಗ ಸಂಶಯದ ದೃಷ್ಟಿಯಿಂದಲೇ ನೋಡುವುದು ಅಂತೀಯಾ, ಅಥವಾ ಅನುಭವಕ್ಕೆ ಬರದ್ದು ಸತ್ಯವೇ ಅಲ್ಲ ಅನ್ನುವ ದೃಷ್ಟಿಕೋನ ಅಂತೀಯಾ..

ಹೀಗೆ ನಿನ್ನೆದುರಿಗಿಷ್ಟು ಜಿಜ್ಞಾಸೆಗಳನ್ನಿಟ್ಟು ಮುಗಿಸುತ್ತಿದ್ದೇನೆ....ನಿನಗೇನಾದರೂ ಇವಕ್ಕುತ್ತರವಾಗಿ ನಾನಿಲ್ಲಿ ಹೇಳದ್ದು ಹೊಳೆದರೆ ತಿಳಿಸುತ್ತೀಯಲ್ಲಾ.....ಇವತ್ತಿಗೆ ಮುಗಿಸಲಾ...

Tuesday, December 4, 2012



ಅಪ್ಪ....


-------------------

ಸವೆದ ಚಪ್ಪಲಿ, ಮಾಸಿದ ಚೀಲ,

ಮುರಿದ ಕನ್ನಡಕ,  ಒಡೆದ ವೀಳ್ಯದ ಪೆಟ್ಟಿಗೆ,

ಮುರುಕು ನಶ್ಯದ ಡಬ್ಬಿ, ಹರಕು ಬೈರಾಸ,

ಇಂಚಿಂಚು ಕುಸಿಯಿಸುವ ಇಳಿವಯಸಲಿ

ಕಳೆಗೆಟ್ಟ ಅಂಗಿ, ತೂತು ಬನಿಯಾನಿನೊಳಗಣ

ಅಪ್ಪನದೆಲ್ಲವೂ ಈಗ ಹಳೆಯದೇ...



ಆದರೆ....,

ತೊದಲಾದರೂ ನುಡಿ, ಭಾವಸ್ಪಷ್ಟತೆ,

ಭಕ್ತಿಯಲಿ ಮತ್ತೆ ಕಣ್ತುಂಬುವ ಪರವಶತೆ,

ತಪ್ಪುಸರಿಯ ಬೇರ್ಪಡಿಸುವ ಸ್ಮೃತಿದೃಢತೆ,

ಒಳಿತನಪ್ಪಿ ಕೆಡುಕ ತೊರೆವ ನೀತಿಬದ್ಧತೆ-

ಅವನಲಿ ಹೊಸತಾಗುತಲೇ ಸಾಗಿವೆ..



"ಅಪ್ಪಾ" ಎಂದಾಗ ಚಿಮ್ಮೋ ಮಾರ್ದವತೆ,

ಆ ಅಸಹಾಯನಗುವಲೂ ಕಾಣೋ ಭದ್ರತೆ,

ಮುದಿಕಾಯದಲೂ ಮುದಿಯಾಗದ ಭರವಸೆ,

"ತಾ ಇಲ್ಲಿ ಭಾರ" ಎನುವ ಕೈಯ್ಯ ಒತ್ತಾಸೆ,

ಈಗಷ್ಟೇ ಹುಟ್ಟಿದ ತಾಜಾತನ ನನ್ನೊಳಗಿವಕಿವೆ....



















ಈಗ ಒಪ್ಪಿದೆ .....


-------------------

ಸಾಕಾರದ ಸುತ್ತ ವಿಸ್ತೃತ ನಿರಾಕಾರ ಎಂದೆಯಲ್ಲಾ...

ತಿಳಿದಿರಲಿಲ್ಲ... ಈಗ ಒಪ್ಪಿದೆ,

ನಿನ್ನ ತುಂಬುಕಣ್ಣ ಹಿಂದಿನ ಶೂನ್ಯದೃಷ್ಟಿ...

ತುಂಬು ಬಾಳ ಹಿಂದಿನ ಶೂನ್ಯ ಆಸ್ತಿಪಾಸ್ತಿ....

ನಿಸ್ವಾರ್ಥತೆಯ ಸುತ್ತಲಿನ ಸ್ವಾರ್ಥಪ್ರೀತಿ

ಸತ್ಯಪರತೆಯ ಮುಂದಿನ ಸುಳ್ಳಮಾಲೆ

ನಿಷ್ಠೆಯ ಪ್ರತಿಯ ಢಂಭಾಚಾರದ ನಗು

ಮಾತುಗಳ ಹಿಂದಿನ ಮೌನ,

ಆರೋಗ್ಯದ ಹಿಂದಿನ ಒದ್ದಾಟ,

ಏಳ್ಗೆಯಾಸೆಯ ಹಿಂದಿನ ನಿರಾಸೆ,

ಅಳಿವಳಿಸೊ ಕಳಕಳಿಗೆ ಉಪೇಕ್ಷೆ,

ಕ್ಷೇಮಹಾರೈಕೆಯ ಹಿಂದಿನ ಅಧೈರ್ಯ-

ನೀನಂದುದಕೆ ಇವೇ ಪ್ರತ್ಯಕ್ಷ ಸಾಕ್ಷಿ....

ಅಪ್ಪಾ...ಈಗನಿಸಿದ್ದಲ್ಲ......

ಈ ಧೂಳು ಹಿಡಿದ ಕನ್ನಡಿಯ

ಬಿಂಬದಂತಿದ್ದ ಅಸ್ಪಷ್ಟ ಅನಿಸಿಕೆಗಳು,

ನಿನ್ನೆ ಬೀಳ್ಕೊಟ್ಟಾಗ ಕಂಡೂಕಾಣದುದುರಿದ

ನಿನ್ನ ನಗುವಿನ ಕಂಬನಿಯಲ್ಲಿ ಸ್ಪಷ್ಟವಾದವು.....













Friday, November 30, 2012

ಆತ್ಮಸಖಿಗೊಂದು ಪತ್ರ.....


---------------------------------------------------------------------------

ಸನ್ಮಿತ್ರರೇ, ದೈನಂದಿನ ಜೀವನದಲ್ಲಿ ಎದುರಾಗುವ ಅದೆಷ್ಟೋ ಸನ್ನಿವೇಶಗಳು, ಸಿಕ್ಕುವ ಮಾಹಿತಿಗಳು ನಮ್ಮೊಳಗೆ ಭಾವನೆಗಳ ಮಹಪೂರವನ್ನೇ ಹರಿಸುವಷ್ಟು ಪರಿಣಾಮಕಾರಿಗಳಾಗಿರುತ್ತವೆ. ಎಷ್ಟೋ ಬಾರಿ ಆ ಭಾವನೆಯ ಜಾಡು ಹೇಗಿರುತ್ತದೆ ಅಂದರೆ, ಅನಿವಾರ್ಯ ಕಾರಣಗಳಿಗಾಗಿ ತೀರಾ ಹತ್ತಿರದ ಸುತ್ತಮುತ್ತಲಿ ಅದನ್ನ ಹರಿಯಬಿಡಲಾಗುವುದಿಲ್ಲ. ಹಾಗಾಗಿ ಅಂಥ ಕೆಲ ಸಂದರ್ಭಗಳಲ್ಲಿ ನನಗನಿಸಿದ ಭಾವನೆಗಳನ್ನು ಅವು ಮೂಡಿದ ಹಾಗೆ ನನ್ನ ಕಾಲ್ಪನಿಕ ಗೆಳತಿಯೊಬ್ಬಳಲ್ಲಿ ಹಂಚಿಕೊಳ್ಳುವ ಹಾಗೂ ಅಮೂಲಕ ನಿಮಗೂ ಆ ಅನಿಸಿಕೆಗಳನ್ನು ಪರಿಚಯಿಸುವ ಯತ್ನ ಮಾಡುತ್ತಿದ್ದೇನೆ. ಕಾಲ್ಪನಿಕ ಗೆಳತಿ ಯಾಕೆಂದರೆ, ಮಧ್ಯೆ ಮಧ್ಯೆ ತಡೆಯುವ ಹಾಗೂ ತನ್ನ ಅಭಿಪ್ರಾಯ ತೂರಿಸುವ ಗೋಜಿಗವಳು ಹೋಗಲಾರಳು ಅನ್ನುವ ಕಾರಣ- ಅಷ್ಟೆ. ಆ ಕಾಲ್ಪನಿಕ ಪಾತ್ರದಲ್ಲಿ ನನ್ನ ನಿಜಜೀವನದ ಗೆಳೆತನದ ಛಾಯೆ ಖಂಡಿತಾ ಅಡಗಿಕೂತಿರುತ್ತದೆ. ಅನುಭವವಲ್ಲದ ಅಭಿವ್ಯಕ್ತಿ ಹೇಗೆ ತಾನೇ ರೂಪ ತಾಳೀತು ಅಲ್ಲವೇ? ಈ ಶೃಂಖಲೆಯ ಮೊದಲ ಪತ್ರ.......

-----------------------------------------------------------------------------

ಸಖೀ, ಯಾವತ್ತಿನಂತೆ ಇಂದೂ ಆ ಬೆಕ್ಕು ಅದರ ಪುಟಾಣಿಗಳೊಂದಿಗೆ ಬಂದಾಗ ನಿನ್ನ ನೆನಪು ತುಂಬ ಹೊತ್ತು ಮನ ತುಂಬಿತ್ತು ಕಣೇ...ನಾನೂ ನೀನೂ ನಿಮ್ಮನೆ ಬೆಕ್ಕಿನ ಕರ್ರಗಿನ ಮೂರುಕಾಲಿನ ಒಂದು ನಿತ್ರಾಣಿ ಮರಿಗೆ ತಮ್ಮನಿಗೆ ಮದ್ದುಣಿಸಲು ತಂದಿದ್ದ ಪಿಲ್ಲರ್ ನಲ್ಲಿ ಹಾಲುತುಂಬಿ ಸಾಕಿದ್ದು, ಮೊರವೊಂದಕ್ಕೆ ಗೋಣಿಚೀಲ ಹಾಸಿ ಮಲಗಿಸಿ, ಗಳಿಗೆಗೊಮ್ಮೆ ಜೀವಂತವಾಗಿದೆಯೇ ಎಂದು ನೋಡುತ್ತಿದ್ದುದು, ಕ್ಷಣಕ್ಷಣ ಬಿಗಡಾಯಿಸುತ್ತಿದ್ದ ಅದರ ಆರೋಗ್ಯಕ್ಕಾಗಿ ಕಣ್ಣೀರಿಡುತ್ತಾ ಮನಸಿಲ್ಲದಿದ್ದರೂ ಅದರ ಸಾವಿಗೆ ಕಾಯುತ್ತಿದ್ದೇವೇನೋ ಅನಿಸುತ್ತಿದ್ದುದು... ಈ ಎಲ್ಲಾ ಭಾವನೆಗಳೂ ನಿನ್ನೆಯವೇನೋ ಅನಿಸುವಷ್ಟು ತಾಜಾವಾಗಿವೆ ಕಣೆ ಎದೆಗೂಡಲ್ಲಿ. ಈಗ ಒಂದಾರೇಳು ತಿಂಗಳ ಹಿಂದೆ ಇದೂ ಒಂದು ಪುಟಾಣಿಯೇ. ಹೇಗೋ ಅಮ್ಮನೊಂದಿಗೆ ಮಾಳಿಗೆಯೇರಿ ಬಿಟ್ಟಿತ್ತು. ಮುಂದೊಂದು ದಿನ ಜಾಗ ಬದಲಿಸಲು ಆ ಅಮ್ಮ ಕೆಳಗಿಂದ ಕರೆವಾಗ ಹಾರುವ ಧೈರ್ಯವಾಗದೆ, ಅಮ್ಮ ಕಣ್ಣಿಂದ ಮರೆಯಾಗುವುದನ್ನೂ ತಡೆಯಲಾರದೆ, ಹೃದಯವಿದ್ರಾವಕವಾಗಿ ಕೂಗುತ್ತಾ ದಿನವೆಲ್ಲ ಚಿಟ್ಟೆನಿಸುವಂತೆ ಮಾಡಿತ್ತು. ತಡೆಯದೇ ನಾನು ಹರಸಾಹಸ ಮಾಡಿ ಅದರಮ್ಮನ ಗುರ್ರ್ರ್ ಗಳ ನಡುವೆ ಹೇಗೋ ಧೈರ್ಯ ಮಾಡಿ ಕೆಳಗೆ ತಂದಿಟ್ಟಿದ್ದೆ. ಈಗ ನೋಡು ಅದರ ಮರಿಗಳಿಗಾಗಿ ವಾರಕೊಂದರಂತೆ ಹೊಸಹೊಸ ಜಾಗ ಹುಡುಕಿ ಠೀವಿಯಿಂದ ಕರೆದೊಯ್ಯುವ ಪರಿ...! ಜಗತ್ತೆಷ್ಟು ದೊಡ್ಡ ದೊಡ್ಡ ಹೆಜ್ಜೆಯಿಟ್ಟು ಮುನ್ನಡೆಯುತ್ತಿದೆ, ಅದರದೇ ಅಂಗಗಳಾದ ನಮ್ಮ ಮನಸ್ಸಿನ ನಡಿಗೆ ಇನ್ನೂ ಅದೆಷ್ಟೋ ಹೆಜ್ಜೆ ಹಿಂದಿದೆ ಅನಿಸುವುದಿಲ್ಲವೇನೇ ಒಮ್ಮೊಮ್ಮೆ? ಅದುಬಿಡು.... ನಾನಿಂದು ನಿನ್ನಲ್ಲಿ ಹಂಚಿಕೊಳ್ಳಬೇಕಾಗಿರುವ ಅರ್ಥವಾಗದ ವಿಷಯ ಯಾವುದು ಗೊತ್ತೇನೇ? ಈ ಬೆಕ್ಕಿನ ಅಪ್ಪನೇ ಅದರ ಮರಿಗಳಿಗೂ ಅಪ್ಪ!! ಇದು ಪ್ರಕೃತಿಯ ಅತ್ಯಂತ ಸಹಜ ನಿಯಮವೇನೋ ಅನ್ನುವಷ್ಟರ ಮಟ್ಟಿಗೆ ವಂಶಾಭಿವೃದ್ಧಿಯ ವೇಳೆ ಅವು ನಿರಾಳ. ಅದನ್ನ ಒಪ್ಪಿಕೊಳ್ಳುವುದು ನಮಗೆ ಅತ್ಯಂತ ಕಷ್ಟದ ವಿಷಯವೆನಿಸುವುದು ಮತ್ತು ಆ ಬಗ್ಗೆ ಯೋಚಿಸುವುದೂ ಅಸಹ್ಯವೆನಿಸುವುದು- ಇದಕ್ಕೆ ಕಾರಣ, ನಮ್ಮಲ್ಲಿರುವ ಮನಸು ಅಂತೀಯಾ? ಮನಸು ಬೆಕ್ಕಿಗಿರುವುದಿಲ್ಲವಾ? ನಾನು ನಗುಮುಖದಿಂದಿಕ್ಕಿದರೆ ಮಾತ್ರ ಧೈರ್ಯವಾಗಿ ಓಡಿಬಂದು ಕಾಲುನೆಕ್ಕಿ,ಮೈಯೆಲ್ಲ ನನ್ನ ಕಾಲಿಗುಜ್ಜಿ ಮುದ್ದಿಸಿ ಹಾಲು ಕುಡಿದೋಡುವ ಇದೇ ಬೆಕ್ಕು, ಅದರ ಕೂಗಿಗೆ ಸಿಟ್ಟಿಗೆದ್ದು ಹಾಳಾಗಿ ಹೋಗು ಎನ್ನುವ ಭಾವದಲ್ಲಿಕ್ಕಿದ ಹಾಲು ಕುಡಿಯಲು ಬರುವ ಮಂದಗತಿಯ ನಡೆಯೇ ಬೇರೆ ಗೊತ್ತಾ? ಮನಸೆಂಬುದಿಲ್ಲದಿದ್ದರೆ ಇದು ಸಾಧ್ಯವೇನೇ ಸಖೀ? ಇರಲಿ ಬಿಡು ಅದರದ್ದು ನಮಗರ್ಥವಾಗದ ಜೀವನ ಶೈಲಿ ಅಂದುಕೊಂಡು ಬಿಡಬಹುದೇನೋ....ಆದರೆ ನಿನ್ನೆ ಪೇಪರ್ ನಲ್ಲಿ ಓದಿದ ಒಂದು ಸುದ್ಧಿ ಸಾಮಾನ್ಯವಾಗಿ ಒಂದು ಓದಿಗೆ ಅಥವಾ ಒಂದು ದೃಶ್ಯ ವೀಕ್ಷಣೆಗೆ ಕಣ್ಣೀರಾಗದ ನನ್ನನ್ನೂ ಅಳಿಸಿತ್ತು ಕಣೇ.. ಬಿಕ್ಕಿಬಿಕ್ಕಿ ಅತ್ತು ಬಿಟ್ಟೆ.. ನನಗೇ ಗಾಭರಿಯಾಗುವಷ್ಟು..ಯಾಕೆಂದರೆ ಆ ಪಾಟಿ ಅಳುತ್ತಿರುವುದು ಯಾಕೆ ಅಂತನೇ ಗೊತ್ತಿರದ ಅಳು ಅದು. ಸಣ್ಣ ಮಕ್ಕಳು ಒಪ್ಪಿಕೊಳ್ಳಲಾರದ್ದೇನಾದರೂ ನಡೆಯುತ್ತಿದ್ದಾಗ ಪ್ರತಿಕ್ರಿಯಿಸುವಂತಿತ್ತು ನನ್ನ ಮನಸಿನ ಅಸಹಾಯಕತೆಯ ಅಭಿವ್ಯಕ್ತಿ...

ಒಂದು ಹನ್ನೆರಡು ವರ್ಷದ ಹೆಣ್ಣುಮಗುವನ್ನ ಅದರ ಅಪ್ಪ, ಅಣ್ಣ ಮತ್ತು ಚಿಕ್ಕಪ್ಪ ಸೇರಿ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರಕ್ಕೊಡ್ಡುತ್ತಿದ್ದರಂತೆ. ಶಾಲೆಯಿಂದೊಂದು ದಿನ ಮನೆಗೆ ಹೋಗಲಾರೆ ಎಂದಳುತ್ತಿದ್ದ ಮಗುವನ್ನು ಪುಸಲಾಯಿಸಿ ಜಾಣತನದಿಂದ ಕೇಳಿ ತಿಳಿದ ಉಪಾಧ್ಯಾಯಿನಿಯೊಬ್ಬರು ಈ ವಿಷಯ ಬಯಲು ಮಾಡಿದ್ದರು..ಇಷ್ಟೇ ಕಣೆ ನನ್ನಿಂದ ಓದಲಾದದ್ದು. ಮುಂದೆ ಕೈಕಾಲೆಲ್ಲ ಕಸುವಳಿದಂತಾಗಿ ಕಣ್ಣುಕತ್ತಲಿಟ್ಟುಬಿಟ್ಟಿತ್ತು. ಅವಳಮ್ಮ ಇದ್ದಳೇ ಇಲ್ಲವೇ... ಈ ಮುಂತಾದ ಈಗ ಏಳುತ್ತಿರುವ ಪ್ರಶ್ನೆಗಳು ಆಗ ಏಳಲೇ ಇಲ್ಲ ನೋಡು. ಹೌದು ನಿಜವೇ, ಇದೇನೂ ಹೊಸದಲ್ಲ, ಎರಡು ವರ್ಷದ ಮಗುವನ್ನೂ ಲೈಂಗಿಕಶೋಷಣೆಗೊಳಪಡಿಸಿದ್ದನ್ನು ಓದಿದ್ದೇನೆ, ಸಂಕಟಪಟ್ಟಿದ್ದೇನೆ. ಆದರೆ, ಈ ಸಾಲುಗಳು ಒಂದು ಕ್ಷಣ ಕಾಲಕೆಳಗಿನ ನೆಲ ಕುಸಿಯುವಂತಾಗಿಸಿದವು...ಬಹುಶಃ ಆ ಮಗುವಿನದು ಹೆಚ್ಚುಕಮ್ಮಿ ನನ್ನ ಪುಟಾಣಿಯ ವಯಸ್ಸಾಗಿರುವುದರಿಂದ ಆ ಮಟ್ಟಿಗಿನ ಸಂಕಟವಾಯಿತೋ ಏನೋ.. ಇದೆಂಥ ಅಭದ್ರತೆಯಲ್ಲಿ ಇದೆ ಕಣೇ ನಮ್ಮ ಹೆಣ್ಣುಕಂದಮ್ಮಗಳ ಜೀವನ..?! ಕಿರುಚಿ ಅಳಬೇಕೆನಿಸುತ್ತಿದೆ.

ಅತ್ಯಾಚಾರವೆಂಬುವುದೇ ತೀರಾ ಮನಸ್ಸನ್ನು ಘಾಸಿಗೊಳಿಸಿ, ಮನೋಸ್ಥೈರ್ಯವನ್ನ ಚೂರುಚೂರಾಗಿಸುವ ಅನುಭವ. ಅದರಲ್ಲೂ ಭದ್ರತೆಗೆ ಪೂರಕವಾಗಬೇಕಾದ ಅನುಬಂಧಗಳೇ ಆ ಜೀವಂತ ಸಾವಿನ ನೋವನ್ನಿತ್ತಾಗ... ಆ ಮಗುವಿಗೆ ಸತ್ತುಬಿಡುವಾ ಅನ್ನಿಸುವಷ್ಟೂ ವಯಸ್ಸಾಗಿಲ್ಲ ಕಣೇ... ಅದರ ಮನಸಿನ ನೋವು ಯಾವ ಪರಿಯದ್ದಿದ್ದೀತು..ಆಗತಾನೇ ಅರಳಿದ ಹೂವಿನಂಥ ಅದರ ಆ ಮೃದು ಮಧುರ ಮೈಮನಸು ಹೊಸಕಿಹಾಕಲ್ಪಟ್ಟಿತ್ತು ಅದೂ ಒಮ್ಮೆ ಅಲ್ಲ, ನೂರಾರು ಬಾರಿ.

ಇಲ್ಲ ಕಣೆ, ಪದೇ ಪದೇ ಅತ್ಯಾಚಾರವೆಸಗಿದ ಅವರಿಗೊಮ್ಮೆಯೂ ಹಿಂಜರಿಕೆಯಾಗಲಿಲ್ಲವೇ ಎಂಬ ಪ್ರಶ್ನೆ ಹುಟ್ಟಿದರೂ ಅಲ್ಲೇ ಮರೆಯೂ ಆಯಿತು. ಮೊದಲಬಾರಿ ಆ ಕಂದಮ್ಮನನ್ನು ಉಪಯೋಗಿಸಿಕೊಂಡಾಗ ಅಳುಕದ, ಹಿಂಜರಿಯದ ಮನಸು, ಅದು ಮನುಷ್ಯರ ಮನಸೇ ಅಲ್ಲ, ಮೃಗಗಳದು. ಅವರ ಬಗ್ಗೆ ಯಾವ ಯೋಚನೆಯೂ ಬರುತ್ತಿಲ್ಲ ನನಗೆ, ನನ್ನ ಕಾಡುತ್ತಿರುವುದು- ಆ ಮುಗ್ಧ ಜೀವದ ಅಸಹಾಯಕ ನೋವು.. ಮುಂದಿನ ಆ ಜೀವನದಲ್ಲಿ ಮತ್ತದರ ಪರಿಣಾಮ.

ಎಲ್ಲ ಬಿಡು.. ಯಾವುದೋ ವಿಷಯಕ್ಕೆ ಹತ್ತಾರು ವರ್ಷಗಳಿಂದ ನಮ್ಮೊಡನಿದ್ದು ಬಾಳು ಹಂಚಿಕೊಂಡ ಗಂಡಂದಿರೇ ಒಮ್ಮೊಮ್ಮೆ ಮನಸಿನ "ಒಲ್ಲೆ" ಎನ್ನುವ ಮಾತನ್ನು ತಿಳಿದೋ ತಿಳಿಯದೆಯೋ ದೇಹವನ್ನು ಬಳಸಿಕೊಂಡರೆ ನಾವದೆಷ್ಟು ಅಸಹಾಯಕತೆ ಅನುಭವಿಸುವುದಿಲ್ಲಾ... ಹೇಳು.. ಅದೆಷ್ಟು ರೋಷ ಉಕ್ಕಿ ಬರುವುದಿಲ್ಲ, ಅದೆಷ್ಟು ಕಣ್ಣೀರಿಳಿಯುವುದಿಲ್ಲ..! ಅದೂ ನಾವವರ ಜೊತೆ ಬಾಳಿನ ಅತ್ಯಂತ ರಮಣೀಯ ಕ್ಷಣಗಳನ್ನೂ ಹಂಚಿಕೊಂಡಿರುತ್ತೇವೆ, ನಮ್ಮ ಎಷ್ಟೋ ಸಂತಸಗಳಿಗೆ, ರೋಮಾಂಚನಗಳಿಗವರೇ ಕಾರಣರಾಗಿರುತ್ತಾರೆ, ಅಲ್ಲದೆ ಆ ಸಂಬಂಧ ಆ ಕ್ರಿಯೆಯನ್ನು ತನ್ನೊಳಗಿನ ಅವಿಭಾಜ್ಯ ಅಂಗವಾಗಿ ಹೊಂದಿರುವಂಥದ್ದು .ಆದರಿಲ್ಲಿ ಈ ಮಗು ಇನೂ ಒಬ್ಬರೊಡನೆ ದೇಹ ಹಂಚಿಕೊಳ್ಳುವ ವಿಷಯವನ್ನೇ ತಿಳಿದಿರಲಾರದ ವಯಸಿನಲ್ಲಿ ಅವರ ಇಚ್ಚೆಗನುಗುಣವಾಗಿ ಅದನ್ನವರಿಗೊಪ್ಪಿಸಬೇಕು ಅಂದರೆ, ಅದೆಂಥ ಅಸಹಾಯಕತೆಯಿದ್ದೀತು ಅದರ ಮುಂದೆ, ವಿರೋಧಿಸಿದಾಗ ಎಂಥೆಂಥ ಶಿಕ್ಷೆಗಳಿಗೊಡ್ಡಿಕೊಂಡಿರಬಹುದು, ಎರಡು ವರ್ಷಗಳ ಕಾಲ ಮುಚ್ಚಿಟ್ಟುಕೊಂಡ ಆ ಮಗುವನ್ನು ಇನ್ಯಾವ್ಯಾವ ತರಹದ ನಿಯಂತ್ರಣಗಳಲ್ಲಿಟ್ಟಿರಬಹುದು, ಅಲ್ಲದೇ ಮುಂದಿನ ಜೀವಿತಕಾಲದಲ್ಲಿ ಅದರ ಮನಸು ಲೈಂಗಿಕ ಜೀವನದ ಬಗ್ಗೆ ಅಸಹ್ಯವೆಂದಲ್ಲದೆ ಇನ್ನೆಂಥ ಭಾವನೆಯುಳಿಸಿಕೊಂಡೀತು ಹೇಳು... ಮತ್ತಳುತ್ತಿದ್ದೇನೆ ಕಣೆ...

ನಾವು ಚಿಕ್ಕವರಿದ್ದಾಗ ಅಣ್ಣ ನಾನು ಸುಮಾರು ಹದಿಮೂರು ಹದಿನಾಲ್ಕರ ವಯಸಿನ ನಂತರ ಒಂದೇ ಕುರ್ಚಿಯಲ್ಲಿ ಕೂತು, ಮೈಕೈ ಮುಟ್ಟಿ ತಮಾಷೆಯಾಡುವುದಾಗಲಿ, ಒಂದೇ ಕೋಣೆಯಲ್ಲಿ ಮಲಗುವುದಾಗಲಿ ನಿಷಿದ್ಧವಿತ್ತು. ಎಷ್ಟೊ ಬಾರಿ ಇದನ್ನು ನೆನೆಸಿಕೊಂಡಾಗ ಮುಂದಿನ ದಿನಗಳಲ್ಲಿ ಅಪ್ಪ-ಅಮ್ಮ, ಅಜ್ಜ-ಅಜ್ಜಿಯರ ಈ ನಿರ್ಬಂಧದ ಬಗ್ಗೆ ಇರಿಸುಮುರುಸಿನ ಭಾವನೆ ಬರುತ್ತಿತ್ತು, ಅರ್ಥವಾಗುತ್ತಿರಲಿಲ್ಲ, ತುಂಬಾ ಸಂಕುಚಿತ ಮನೋಭಾವನೆಯೆನಿಸಿದ್ದೂ ಇತ್ತು. ಬಹುಶಃ ಇಂಥ ಒಂದು ಪ್ರವೃತ್ತಿ ಮಾನವನ ಮನಸಿನಲ್ಲಿ ಸಂಬಂಧಗಳ ಯಾವ ಪರಿವೆಯೂ ಇಲ್ಲದ ಒಂದು ರೀತಿಯಲ್ಲಿ ಎದ್ದೇಳುವ ಸಾಧ್ಯತೆಗಳ ಬಗ್ಗೆ ಮುಂಚಿನಿಂದಲೂ ಸುಳಿವಿತ್ತು, ಹಾಗಾಗಿ ಅವರು ಅದಕ್ಕೆಡೆ ಮಾಡಿಕೊಡದಂತೆ ಈ ನಿಯಮಗಳನ್ನು ರೂಪಿಸಿದ್ದರು. ಹಾಗಾದರೆ ಮೂಲತಃ ಮಾನವನಿಗೂ, ಮೃಗಗಳಿಗೂ ದೈಹಿಕ ತೃಷೆಯ ವಿಷಯದಲ್ಲಿ ಎಳ್ಳಷ್ಟೂ ವ್ಯತ್ಯಾಸವಿಲ್ಲ ಅಂತೀಯಾ?

ಪ್ರಾಣಿಗಳಿಗಿಂತ ಮುಂದುವರಿದ, ಮೇಲ್ಮಟ್ಟದ ಮನೋಸ್ಥಿತಿ ನಮ್ಮದು ಎಂಬ ಪೊಳ್ಳು ಹೆಮ್ಮೆ ಈ ಸಂದರ್ಭದಲ್ಲಿ ತಲೆಕೆಳಗಾಗುವುದನ್ನು ನಾವೊಪ್ಪಿಕೊಳ್ಳಲೇಬೇಕು. ಅದೂ ಅವುಗಳಲ್ಲಿ ಹೀಗೆ ತಮ್ಮ ತೀಟೆ ತೀರಿಸಿಕೊಳ್ಳಲು ಬಹುಶಃ ಅಪ್ರಾಪ್ತ ವಯಸ್ಕ ಪ್ರಾಣಿಗಳನ್ನ್ಯಾವತ್ತೂ ಬಳಸಿಕೊಳ್ಳವು ಅನಿಸುತ್ತದೆ. ಅಷ್ಟರಮಟ್ಟಿಗಾದರೂ ನಿಯಮಗಳನ್ನು ಬಾಳಿನಲ್ಲಿ ಪರಿಪಾಲಿಸಿಕೊಂಡು ಬಾಳುವ ಅವುಗಳಿಗಿಂತ ನಾವು ಯಾವ ಅರ್ಥದಲ್ಲಿ ಮುಂದುವರಿದ ಜನಾಂಗದವರು ಕಣೇ..? ಅತೃಪ್ತಿಯ ಕೈಯ್ಯಲ್ಲಿ ಬುದ್ಧಿ, ದೇಹಗಳೆರಡನ್ನೂ ಕೊಟ್ಟು ನಾವು ಮನುಜರು, ಮಾನವ ಜನ್ಮ ದೊಡ್ಡದು ಅಂದುಕೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ ಹೇಳು...

ಇಷ್ಟಕ್ಕೂ ಬರೀ ಮಾತುಗಳಲ್ಲಿ ರೋಷ ವ್ಯಕ್ತ ಪಡಿಸುವ ನಾವೂ ಒಂದು ರೀತಿಯಲ್ಲಿ ಮನುಷ್ಯತ್ವವಿಲ್ಲದವರೇ ಹೌದು. ಆ ಪಾಪಿಗಳಿಗೆ ಶಿಕ್ಷೆಯೇ ಆಗದೆ ಹೊರಬಂದು ರಾಜಾರೋಷವಾಗಿ ಬಾಳುವ ಸಂದರ್ಭಗಳೇ ಹೆಚ್ಚು. ಆದರೂ ಒಂದಷ್ಟು ವರ್ಷ ಕಾರಾಗೃಹವಾಸದ ಶಿಕ್ಷೆಯಾದೀತೇ ಹೊರತು ಇನ್ನದಕ್ಕಿಂತ ಹೆಚ್ಚಿನದೇನೂ ಅಲ್ಲ. ಮಾತಾಡುತ್ತಾ ಕೈಚೆಲ್ಲಿ ಕೂತುಬಿಡುವ ನಾವು ಪರೋಕ್ಷವಾಗಿ ಆ ಅಮಾನುಷತ್ವದ ಮುಂದೆ ಸೋಲೊಪ್ಪಿಕೊಂಡಂತೆಯೇ ಅಲ್ಲವೇನೇ? ನಮ್ಮ ನಮ್ಮ ಸ್ವಾರ್ಥದ ಕೋಟೆಯೊಳಗಡೆ ನಮ್ಮ ಸಮಯವನ್ನೂ, ಸತ್ವವನ್ನೂ ಬರೀ ನಮ್ಮೊಳಿತಿಗಾಗಿ ರಕ್ಷಿಸಿಕೊಳ್ಳುವುದನ್ನು, ಉಳಿಸಿ ಬಳಸಿಕೊಳ್ಳುವುದನ್ನು ಜೀವನದ ಪರಮಗುರಿಯಾಗಿಸಿಕೊಂಡ ಇಂದಿನ ಜೀವನಶೈಲಿಯಲ್ಲಿ ನಾನಾದರೂ ಏನು ಮಾಡಿಯೇನು, ನಾಲ್ಕಾರು ಗೆರೆ ಬರೆದು ಹಗುರಾದೇನು, ಮಗಳಿಗಿನ್ನೊಂದಷ್ಟು ಜಾಗ್ರತೆಯಾಗಿರು ಎಂದೆಚ್ಚರಿಸಿಯೇನು, ನಿನ್ನ ಜೊತೆ ಹಂಚಿಕೊಂಡೇನು ಅಷ್ಟೆ. ಮುಂದೆ ಮತ್ತದೇ ದಿನಚರಿಗಳಲ್ಲಿ ಮುಳುಗಿ ಹೋಗುವುದು .... ಇರಲಿಬಿಡು.. ಅಸಹಾಯಕತೆಯ ಕಾರಣ ಮುಂದೊಡ್ಡುವುದೂ ಒಂದೊಳ್ಳೆಯ ಕಳ್ಳನೆಪವಾಗಿಬಿಟ್ಟಿದೆ ಈಗೀಗ. ನೀರು ತುಂಬಿದ ಗುಳಿಯೆಡೆಗೇ ಹರಿದು ಬರುವ ನೀರು ಕೂಡಾ ದಾರಿ ಮಾಡಿಕೊಳ್ಳುವುದು ಎನ್ನುವ ನಿಜದಂತೆ ಅಸಹಾಯಕತೆಯೊಳಗಿದ್ದಷ್ಟೂ ಅದು ನಮ್ಮನ್ನು ಇನ್ನೂ ಇನ್ನೂ ಹುಡುಕಿಕೊಂಡು ಬರುವುದು ಎನ್ನುವ ಮಾತನ್ನರಿತುಕೊಳ್ಳಬೇಕಾಗಿರುವ ತುರ್ತು ಈಗ ಹೆಣ್ಣುಜನಾಂಗದ ಮುಂದೆ ಬೃಹದಾಕಾರವಾಗಿರುವುದಂತೂ ಸುಳ್ಳಲ್ಲ ಏನಂತೀಯಾ...

ಅವಳ ನೋವೊಳಗೆ ಕಳೆದುಹೋಗಿದ್ದೆ, ಬಾಕಿಯಿರುವ ನನ್ನ ಕೆಲಸಗಳು ಕಾಯುತ್ತಿವೆ, ಮತ್ತೊಮ್ಮೆ ಮಾತಾಡುವಾ, ಬರಲಾ...























Thursday, November 29, 2012

೨೨)


೧) ಹರಡಿಬಿಡೆ



ಹಸಿರನುಟ್ಟು, ಹಸಿರ ಹಾಸಿ, ಹಸಿರ ಹೊದೆದ ಸುಂದರಿ,

ಒಪ್ಪಿದೆ ಕಣೆ, ನೀನು ವಿಧಿ ಮೆಚ್ಚಿ ಹರಸಿದ ಕಿನ್ನರಿ

ತೃಪ್ತಿಯಿಂದ ನೀ ಮುಚ್ಚಿದ ಕಂಗಳೆರಡ ತೆರೆದು ಬಿಡೆ,

ಹೆಚ್ಚಿದ್ದರೆ, ಹಸಿರ ಸ್ವಲ್ಪ ಅತ್ತ ಇತ್ತ ಹರಡಿಬಿಡೆ

ಒಣಗಿ ಕರಕಲಾದವರು ನಿನ್ನ ಸುತ್ತ ತುಂಬಿಹರು

ಹಸಿರ ಉಸಿರಿಗಾಗಿ ಬಹಳ ಆಸೆಯಿಂದ ಕಾದಿಹರು



೨) ಬೆಳಗು ಸುಂದರವೇ



ಕೋಳಿ ಕೂಗದಿದ್ದರೂ ಬೆಳಗಾಗುವುದು ಗೊತ್ತಿತ್ತು

ಆದರೆ ನಿನ್ನೆಯವರೆಗೆ ಕೋಳಿಕೂಗಿನಿಂದ

ಬೆಳಗು ಇನ್ನೂ ಸುಂದರವೆನಿಸುತಿತ್ತು

ನಿನ್ನೆ ಕೋಳಿ ಮಂಕಾಗಿಬಿಟ್ಟಿತ್ತು, ಕೂಗಲಿಲ್ಲ

ಬೆಳಗು ಸುಂದರವಲ್ಲವೆಂದೇನೂ ಅನಿಸಲಿಲ್ಲ



೨೩) ಕಳಕೊಳ್ಳುವ ಕಳವಳ



ಒಮ್ಮೊಮ್ಮೆ ಅನಿಸುವುದು

ಕಳೆದುಕೊಳ್ಳುವುದೇ ಜೀವನವೇ?

ಹುಟ್ಟಿದೆ, ಸ್ವಾತಂತ್ರ್ಯ ಕಳೆದುಕೊಂಡೆ,

ಬೆಳೆಯುತ್ತಾ ಬಾಲ್ಯ, ಕಲಿಯುತ್ತಾ ಮುಗ್ಧತೆ

ಬೆರೆಯುತ್ತಾ ನಂಬಿಕೆ, ತೆರೆದುಕೊಳ್ಳುತ್ತಾ ಸ್ವಂತಿಕೆ

ಹೀಗೆ..............

ಎಲ್ಲೆಲ್ಲೊ ಕೂಡುವುದಿಲ್ಲದೇ,ಕಳೆಯುವುದನ್ನೇ ಕಂಡೆ.

ವಿಧಿಯಾಟಗಳಾಡುತ್ತಾ, ಆಟದೊಲವ ಕಳೆದುಕೊಂಡೆ

ಬಂಧಗಳಲಿ ಮುಳುಗುತ್ತಾ ಈಜುವಾಸೆ ಕಳೆದುಕೊಂಡೆ

ಕಳೆದುಕೊಳ್ಳುತ್ತಾ ಸಾಗುತ್ತಿದ್ದಾಗಲೊಮ್ಮೆನೀನು ಸಿಕ್ಕಿದೆ.

ಕೊನೆಗೂ ಪಡೆದುಕೊಂಡೆ ಅನ್ನಿಸಿತು, ಆದರೆ

ನಿನ್ನ ಬಗೆಯ ಯೋಚಿಸುತ್ತಾ ನನ್ನ ಚಿಂತನೆಗಳನ್ನು

ನಿನ್ನ ಅರ್ಥೈಸುವ ಯತ್ನಗಳಲಿ ನನ್ನ ಕನಸುಗಳನ್ನು

ನಿನ್ನೊಲವ ಗಳಿಸುವ ದಾರಿಯಲಿ ನನ್ನ ಬಾಳ ಗುರಿಯನ್ನು

ಕೊನೆಗೆ ನಿನ್ನ ಹೊಂದುವ ಹವಣಿಕೆಯಲಿ ನಿನ್ನನೇ

ಹೀಗೆ......ಕಳೆದುಕೊಳ್ಳುತ್ತಲೇ ಸಾಗಿದ್ದೆ.

ನೀನಿಲ್ಲದೇ ನಾನಿಲ್ಲವೆಂದರಿವಾಗಿ

ಈಗ ನನ್ನನೂ ಕಳಕೊಂಡಿರುವೆ.

ಇಂದು ಕಳೆದುಕೊಳ್ಳಲೇನೂ ಉಳಿದಿಲ್ಲ

ನಾನೂ ಸಹ.



೨೩) ಶ್ರೀ ರಕ್ಷೆ



ನಾ ನೋಯಬಾರದೆಂಬ ನಿನ್ನ ಹಾರೈಕೆಯೇ

ಶ್ರೀರಕ್ಷೆಯಲ್ಲವೇನೇ?

ನನಗೆಸೆದ ಬಾಣಗಳು ನಿನಗೆದುರಾಗುವುದು

ನನ್ನನಳಿಸ ಹೊರಟವರ ನೀ ಶಪಿಸುವುದು

"ಹೆಚ್ಚು ತೆರೆದುಕೊಳ್ಳದಿರು ಮಂದಾನಿಲಮಾತ್ರವಲ್ಲ

ಬಿರುಗಾಳಿಯೂ ಇಲ್ಲಿದೆ" ಎಂದೆಚ್ಚರಿಸುವುದು

ಮೊಳೆಯದ ನನ್ನೇಳಿಗೆಗಾಗಿ ತಳಮಳಿಸುವುದು

ನಾ ಜಾರುವಾಗ ಅಲ್ಲಿಂದಲೇ ಹಿಡಿದೆತ್ತುವುದು

ಹೀಗೇ..

ನಾನು ನೀನೇ ಎಂಬಂತೆ ನನ್ನ ಒಳಗೊಳ್ಳುವುದು

ಇವೆಲ್ಲಕ್ಕಿಂತ ಬೇರೆ ಆಸ್ತಿ ಬೇಕೇನೇ?

ನಿನ್ನನ್ನ ಸಖಿ ಎಂದು ಸೀಮಿತಗೊಳಿಸಲಾರೆ

ಬಹುಶಃ ನಾನಿದುವರೆಗೆ

ಕೆಟ್ಟವಳಾಗದಿದ್ದುದ್ದಕ್ಕೆ ಬಹುಮಾನ ನೀನು.

ನೀನೆಂದಿದ್ದರೂ ನನ್ನ ಒಲವು,

ನಾ ಗೆದ್ದಾಗ ನನ್ನ ಗೆಲುವು,

ನಾ ಬಿದ್ದಾಗ ಎದ್ದೇಳಿಸುವ ಬಲವು

ಹಿನ್ನಡೆ ಕಾಡಲು ಮುನ್ನುಗ್ಗಿಸುವ ಛಲವು

ಸದಾ ಅಲ್ಲೇ ಇದ್ದು ಆಧರಿಸುವ ನೆಲವು

ಇಷ್ಟೆಲ್ಲಾ ಪಡೆದು ನಾ ಏನು ನೀಡಲಿ?

ನಾನು ಸುಧಾಮ, ಒಳಗಿರುವುದು

ಒಂದು ಹಿಡಿ ಪ್ರೀತಿಯಷ್ಟೇ.

ಬೇಕಾದಷ್ಟು ಮೊಗೆದುಕೋ.

ಖಾಲಿಯಾದೀತೆಂದು ಹೆದರಬೇಡ,

ಅದಕಿದೆ ಅಕ್ಷಯದಗುಣ, ಅಮರತ್ವ,

ತೆಗೆದಷ್ಟೂ ಹಾಗೇ ಉಳಿಯುವ ಜೀವಸತ್ವ.



೨೪) ಮನದ್ದು ಪುಲ್ಲಿಂಗವೆ, ಸ್ತ್ರೀಲಿಂಗವೆ?

"ನನ್ನ ರಾತ್ರಿಗಳು ಕರಾಳ" ನೊಂದು ನುಡಿದರೊಬ್ಬಾತ.

ಅದಕೆ ನಿತ್ಯ ಶುಭರಾತ್ರಿ ಎಂದು ಹಾರೈಸಿದಳೊಬ್ಬಾಕೆ

ಅಲ್ಲಿದ್ದದು ಕರಾಳತೆಯ ನಿರಾಳವಾಗಿಸುವ ಆಶಯವಷ್ಟೆ.

ಹಚ್ಚಿದ್ದು ನಡುವಿನ ಸಮಾಜ ಅದಕೆ ಸುಳ್ಳುರೆಕ್ಕೆ.

ಸಮಾಜಕಿದು ಅರ್ಥವಾಗದ ಮಾತು

ರಾತ್ರಿ ಹತ್ತಕ್ಕೆ ಆಕೆಗೇಕೆ ಆತನ ಯೋಚನೆ ಬಂತು?!

ಗಂಡು ಗಂಡಿಗಾಗಿ ಹೆಣ್ಣು ಹೆಣ್ಣಿಗಾಗಿ ಮಿಡಿದರೆ,

ಅದು ಹೃದಯವಂತಿಕೆ.

ಗಂಡು ಹೆಣ್ಣಿಗಾಗಿ, ಹೆಣ್ಣು ಗಂಡಿಗಾಗಿ ತುಡಿದರೆ

ಅದು ಚರಿತ್ರಹೀನತೆಯೇ?

ಮನದ್ದು ಪುಲ್ಲಿಂಗವೇ, ಸ್ತ್ರೀಲಿಂಗವೇ?

ಸಮಾಜಕ್ಕಿದು ಗೊತ್ತಿದೆಯೇ?

ಈ ಸಲ್ಲದುಗಳ ಒತ್ತಡಕೆ

ಮಿದುಹೃದಯ ಕಳೆದುಕೊಂಡಿದೆ ಆಕಾ ರ

ಅಸ್ತವ್ಯಸ್ತ ನೆಲೆಯಿಂದ ಹುಟ್ಟಿದರೆ

ನಡೆನುಡಿನಗುಗಳು ಹೇಗಾದಾವು ನೇರ?

"ಹಾರೈಕೆ ಇದ್ದರೆ ಮನದಲ್ಲಿರಲಿ"

ಎಂದವರೇ, ನಿಮಗಿದು ಗೊತ್ತಿರಲಿ-

ಸುಪ್ತವಾಗಿದ್ದರೆ ಅದು ಭಾವನೆ, ಮಿಂಚುಹುಳದಂತೆ.

ಬೆಳಕಿದ್ದರೂ, ಕ್ಷಣಿಕ ಹೊಳಪು

ಅದೇ ವ್ಯಕ್ತವಾದಾಗ ಸ್ಪಂದನೆ, ಹುಣ್ಣಿಮೆ ಬೆಳ್ದಿಂಗಳಂತೆ.

ಕತ್ತಲನೂ ಬಿಳಿಯಾಗಿಸಬಲ್ಲುದು.

ಕಣ್ಮನಗಳ ನಡುವೆ ಪಾರದರ್ಶಕತೆಯಿರಲಿ

ಪ್ರಾಮಾಣಿಕತೆಯನೂ ಗುರ್ತಿಸುವ ದೃಷ್ಟಿ ಇರಲಿ

ಇದ್ದುದ ಇಲ್ಲವಾಗಿಸಿ, ಇಲ್ಲದ್ದ ಹುಟ್ಟಿಸಿ ನೋಡುವ

ಅತಿ ಮಡಿವಂತಿಕೆ ಇಂದೇ ಸಾಯಲಿ.



೨೫) ಮನಸ ನಡೆ



ಮನಸು ಅರ್ಥಮಾಡಿಕೊಳ್ಳಬೇಕಂತೆ

ಮಂಗನ ನಡೆ ಅಂದಾಜು ಮಾಡಿದವರುಂಟೇ?

ಈಗ ಬೋಳು ಬಯಲಂತಿತ್ತು,

ಬಿತ್ತಲು ಹಸಿರಬೀಜ ಹುಡುಕುತ್ತಿದ್ದೆ.

ಅಷ್ಟರಲ್ಲೇ ಕಡುಹಸುರುಟ್ಟು ಶೋಭಿಸತೊಡಗಿತು

ಮುಡಿಗೇರಿಸಲು ಕೆಂಗುಲಾಬಿಗಾಗಿ ಹುಡುಕುತ್ತಿದ್ದೆ,

ತಟ್ಟನೇ ಕೆಂಗುಲಾಬಿಯಾಗಿ ಅರಳಿಬಿಟ್ಟಿತ್ತು

ಕೆಂಬಣ್ಣ ಮನಮೋಹಿಸುತ್ತಿತ್ತು,

ಅಷ್ಟರಲ್ಲೇ ಬೆಂಕಿಯಾಗಿ ಉರಿಯತೊಡಗಿತು

ಆರಿಸಲು ನೀರಿಗಾಗಿ ಹುಡುಕುತ್ತಿದ್ದೆ,

ತಾನೇ ನೀರಾಗಿ ಕರಗತೊಡಗಿತ್ತು.

ನೀರತುಂಬಲೊಂದು ಪಾತ್ರೆ ಹುಡುಕುತ್ತಿದ್ದೆ,

ನನ್ನ ಕಣ್ಣೊಳಗೇ ಹರಿದು ಬಂದಿತ್ತು.

ಮಂಜಾದ ಕಂಗಳಿಗೆ ಎಲ್ಲವೂ ಅಸ್ಪಷ್ಟ

ಮನವನರಿಯುವುದು ಬಲು ಕಷ್ಟ

ಅದು ನನ್ನದಾದರೂ ಅಷ್ಟೆ,

ನಿಮ್ಮದಾದರೂ ಅಷ್ಟೆ.



೨೬) ಆಲಯವಾಗಲಾರೆ



ನೀನಂದೆ, "ಆಲಯವಾಗು ,

ಚೌಕಟ್ಟುಗಳ ಗೋಡೆಗಳುಳ್ಳದ್ದು,

ಸೂರು ಆಧರಿಸುವ ಕಂಬಗಳು,

ಆ ಕಂಬಗಳ ನದುವೆ ಅಂತರವುಳ್ಳದ್ದು,

ಪ್ರವೇಶವಿಲ್ಲದ ಗರ್ಭಗುಡಿಯುಳ್ಳದ್ದು,

ಒಳಗೆ ಮುಟ್ಟಲಾಗದ ದೇವನಿರುವದ್ದು,

ಆಗ ನಿನ್ನೊಳಗೆ ಪೂಜೆ ನಡೆಯುವುದು."

ನಿನ್ನ ಸಲಹೆಗೊಂದು ನಮನವಿದೆ

ಆದರೆ,

ಹುಟ್ಟಿನಿಂದಲೇ ನಾನೊಂದು ಬಯಲು ಕಣೇ.

ಸೀಮೆಗಳು ಬೇಕಿಲ್ಲ, ಗೋಡೆಗಳಿಲ್ಲ,

ಸೂರೇ ಇಲ್ಲ, ಕಂಬಗಳೂ ಬೇಕಿಲ್ಲ

ಇಲ್ಲಿ ಪ್ರವೇಶವಿಲ್ಲದ ತಾಣವಿಲ್ಲ

ಮುಟ್ಟಬಾರದ ದೈವತ್ವವೂ ಇಲ್ಲ.

ಯಾರಾದರೂ ಬರಲಿ,

ಹೂ ಬೆಳೆಯಲಿ, ಫಲ ಪಡೆಯಲಿ,

ಬಾವಿ ತೋಡಲಿ, ದಾರಿ ಹೂಡಲಿ,

ಯೋಗ್ಯವೆನಿಸಿದರೆ ಮನೆ ಕಟ್ಟಲಿ

ಊರು ಮಾಡಲಿ, ನೆಲೆ ನಿಲ್ಲಲಿ.

ಬೇಡವೆನಿಸಿದರೆ ದಾಟಿಹೋಗಲಿ

ದಾಟಿಹೋದವರು ಎದೆಯ ಮೆಟ್ಟಿ,

ಅಳಿಯದ ಗಾಯಮಾಡುವರು ಎಂದೆಯ?

ಅದು ಇದ್ದದ್ದೇ, ಮೆಟ್ಟದೆ ಒಳಬರುವುದು ಹೇಗೆ?

ಮುಂದೆ ಬರುವರಲಿ ಒಬ್ಬರಿದ್ದಾರು

ಗಾಯವನೂ ವಾಸಿಮಾಡುವವರು.

ಕ್ಷಮಿಸು, ಆಲಯವಾಗಲಾರೆ

ಯಾಕೆಂದರೆ.............

ನನ್ನೊಳಗೆ ಪೂಜೆ ನಡೆಯಬೇಕಿಲ್ಲ

ಬದುಕು ನಡೆದರೆ ಸಾಕು,

ದೇಗುಲದ ಶಿಸ್ತಿನ ಮೌನಬೇಕಿಲ್ಲ,

ಜೀವಂತಿಕೆಯ ಸದ್ದಿರಬೇಕು.

ನಾ ಪವಾಡದ ನೆಲೆಯಾಗಬೇಕಿಲ್ಲ,

ನಿಜಪ್ರೀತಿಯ ಸೆಲೆಯಾಗಬೇಕು.



೨೭) ನಮೋನಮಃ

ಚಂದ್ರ ಕಣ್ಮರೆಯಾದ ರಾತ್ರಿ, ನಿದ್ದೆ ಮುರಿದಿತ್ತು.

ಕತ್ತಲು ಹೊರಕರೆದಿತ್ತು, ಹೊರನಡೆದೆ,

ನಿರ್ಜನಬೀದಿಗಳು, ನಿಶ್ಯಬ್ಧ ಮನೆಗಳು.

ಕತ್ತೆತ್ತಿದರೆ, ಆಹಾ!

ಕಪ್ಪು ಆಗಸದ ತುಂಬ ಚುಕ್ಕೆತಾರೆಗಳು.

ಇರುಳು ಕಾಡಲಿಲ್ಲ,

ಕಪ್ಪುಪರದೆಯಮೇಲೆ ಹೊಳಪು ಹೆಚ್ಚೆನಿಸಿತ್ತು

ನಾಯಿ ಊಳಿಡುತಿತ್ತು, ಗೂಬೆಯೂ ಕೂಗುತಿತ್ತು

ಭಯವಾಗಲೇ ಇಲ್ಲ,

ಅದರ ಹಿಂದಿನಮೌನ ಪ್ರಶಾಂತವೆನಿಸುತಿತ್ತು

ಹೊರಗಿನ ಪ್ರಕೃತಿಗೆ ನಮೋನಮಃ

ಕಪ್ಪುಹಿನ್ನೆಲೆಯಲ್ಲೂ ನಕ್ಷತ್ರವಿರಿಸಿದಕ್ಕಾಗಿ

ಬೆಚ್ಚಿಸುವ ಸದ್ದ ಜೊತೆ ಮೌನವನೂ ಇರಿಸಿದಕ್ಕಾಗಿ

ಒಳಗಿನ ಚೈತನ್ಯಕೂ ನಮೋನಮಃ

ಕತ್ತಲಲಿ ಮಿನುಗಿನ, ಶಬ್ಧದಲಿ ಶಾಂತಿಯ ಪಾತ್ರಗಳ

ನೇಪಥ್ಯದಿಂದ ಅರಿವಿನ ರಂಗಕೆ ತಂದುದಕಾಗಿ.



೨೮) ಗೋಕುಲಾಷ್ಟಮಿಯಂದು



ಕೃಷ್ಣಾ, ಆಗ ನಾನಿನ್ನೂ ಮಗು.

ಅಪ್ಪ ಹೇಳುತ್ತಿದ್ದರು,

ನೀನು ಭಕ್ತವತ್ಸಲನಂತೆ, ಅನಾಥರಕ್ಷಕನಂತೆ.

ಕತ್ತಲಿಗೆ ಹೆದರಿದಾಗ, ನೋವಿನಿಂದ ಅತ್ತಾಗ,

ಬೇಕಾದ್ದು ಸಿಕ್ಕದಾಗ, ಹೊಂದಿದ್ದು ಕಳೆದಾಗ

ಹೀಗೇ......ಕಾಡುವ ಗಳಿಗೆಗಳಲ್ಲೆಲ್ಲ

ನಿನ್ನ ಮೊರೆಹೋಗಲು ಕಲಿಸಿದ್ದರು

ಆಗೆಲ್ಲ ನಾನು ನಿನ್ನ ಕರೆದೆನೋ, ನೀನು ಒದಗಿದ್ದೆಯೋ

ನೆನಪಿಲ್ಲ.

ಈಗ ನಾನು ಮಗುವಲ್ಲ.

ನೀನೆನಗೆ ಎಂದೂ ಪವಾಡಪುರುಷನಾಗಿ,

ದೇವರಾಗಿ, ರಕ್ಷಕನಾಗಿ ದೊರೆಯಾಗಿ

ಕೊನೆಗೆ ಹಿರಿಯನಾಗಿಯೂ ಕಾಣುತ್ತಿಲ್ಲ.

ನೀನೆಂದಿದ್ದರೂ,

ನಿನ್ನರಿವಿನ ಸೀಮೆಯೊಳಗಿಹರೆಲ್ಲರ

ಮನೆಮನ ಲೂಟಿ ಮಾಡುತ್ತಾ,

ಅವರ ಬಯ್ಗುಳಕ್ಕೂ, ಪ್ರೀತಿಗೂ

ಅತ್ತಂತಾಡಿದರೂ, ಆನಂದವನೆ ಹಂಚುತ್ತಾ,

ಮಕರಂದಾದಿಗಳೊಡನೆ ಲೀಲೆಯೆಲ್ಲ ಆಡಿ,

ಕೊನೆಗೆ ಅವರನ್ನೇ ದೂರುತ್ತಾ,

ಅಮ್ಮನ ಗಮನ ಸೆಳೆಯಲು ಕಪಟವಾಡುವ

ನನ್ನ ಕಂದನ ಪ್ರತಿರೂಪವೆನಿಸುತ್ತೀಯ.

ಇದಕೆ...

ನನ್ನ ಮನೆತುಂಬ ನಾನಿಂದು ಬರೆದಿರುವ

ನಿನ್ನ ಪುಟ್ಟಹೆಜ್ಜೆಗಳೇ ಸಾಕ್ಷಿ.

ಹುಟ್ಟುಹಬ್ಬದ ಶುಭಾಶಯಗಳು ಮುದ್ದೂ......



೨೯) ಬರಡೂ ಹಸಿರಾಗುತ್ತದೆ



ಅಲ್ಲೊಂದಿತ್ತು ಬಟ್ಟಬೋಳು ಬಯಲು

ನಿರ್ಜನತೆಯ, ನಿಶ್ಯಬ್ಧದ್ದೆ ಕಾವಲು.

ಮೇಲೆ ಸುಡುವ ಬಿಸಿಲು,

ಭೂಮಿ ಒಣಗಿ ಬಿರುಕುಗಳು

ಪ್ರಕೃತಿ ಕಣ್ಣೀರು ಖಾಲಿಯಾದಂತೆ,

ಬರದಿ ಗರಬಡಿದು ಸ್ತಬ್ಧವಾದಂತಿತ್ತು.

ಒಂದುಮರವಿತ್ತು ಜೊತೆಗೆ ಒಂಟಿಯೆಂಬ ಅಳಲು

ಖಾಲಿಖಾಲಿ ಒಣಕೊಂಬೆಗಳು

ಲಟಲಟ ಮುರಿವ ರೆಂಬೆಗಳು

ಹಸಿರ ಕಳಕೊಂಡು ಬರಡಾಗಿದ್ದಕ್ಕೆ

ಅದು ಮೌನವಾಗಿ ಅಳುವಂತಿತ್ತು.

ಎಲ್ಲಿಂದಲೋ ಹಾರಿ ಬಂದವೆರಡು ಮೈನಾಗಳು

ಮೈಗೆ ಮೈತಾಗಿಸಿ, ಕೊಕ್ಕುಗಳ ಬೆಸೆದವು

ಚಿಲಿಪಿಲಿಯ ಲವಲವಿಕೆಯಿಂದ

ಪ್ರಕೃತಿಗೆ ಗೆಜ್ಜೆ ಕಟ್ಟಿದವು

ತಮ್ಮ ಪ್ರೀತಿಯಮೃತದಿಂದ

ಪಸೆಯನಿಷ್ಟು ತಂದವು

ಒಣಮರದಡಿ ಬಿದ್ದ ಅದರದೇ ಕಡ್ಡಿಗಳ

ಹೆಕ್ಕಿ ಗೂಡ ಕಟ್ಟಿದವು

ಮೊಟ್ಟೆಇಟ್ಟು, ಶಾಖ ಕೊಟ್ಟು

ಅಲ್ಲೇ ಮರಿ ಮಾಡಿದವು

ಮಳೆ ಬಂದಿಲ್ಲ, ಋತು ಬದಲಾಗಿಲ್ಲ,.

ಮರವೂ ಚಿಗುರಿಲ್ಲ, ಬಿಸಿಲೂ ಆರಿಲ್ಲ

ಆದರೆ,

ಈಗನ್ನಿಸುತ್ತಿಲ್ಲ, ಅದೊಂದು ಖಾಲಿ ಬಯಲು

ಜೀವಂತಿಕೆಯೆ ಬಂದಿತಲ್ಲಿ ಖಾಲಿಯನ್ನು ತುಂಬಲು

ಬರಡುತನ ಎಲ್ಲರಿಗು ಇದ್ದದ್ದೆ,

ಅವಗೆ ಇಂದು ಇವಗೆ ನಾಳೆ.

ಸಣ್ಣಪುಟ್ಟ ಖುಶಿ ಬಂದಾಗಲೂ

ಮನೆಮಾಡೆ ಒಳಗೆ ಸ್ವಾಗತಿಸಿದರೆ,

ಮುಂದೆ ಅವೇ ಮರಿಗಳ ಹುಟ್ಟಿಸಿ

ಖುಶಿಯನೇ ನೂರ್ಮಡಿಸಿಯಾವು

ಬರಡುತನ ಕಳೆದಾವು,

ಬಾಳು ಬೆಳಕಾಗಿಸಿಯಾವು



೩೦) ವಿವಶತೆ



ಗಂಧರ್ವಗಾಯನದೊಂದು ಸಂಜೆ

ಶ್ರುತಿ ಲಯ ಸಮ್ಮೇಳ, ಗಾಯಕನೂ ತನ್ಮಯ

ರಾಗಭಾವ ಸಮ್ಮೇಳ, ದೈವಸನ್ನಿಧಿಯ ಅನುಭವ

ಹಾಳುಗಳಿಗೆಯೊಂದರಲಿ, ತಂಬೂರಿ ತಂತಿ ಮುರಿಯಿತು,

ಬುರುಡೆ ಸೀಳಿತು, ರಸಭಂಗವಾಯ್ತು

ಅನುಭೂತಿ ನೊಂದು ವೇದಿಕೆಯಿಂದಿಳಿಯುವಂತಾಯ್ತು

ಸಿಂಗಾರಕ್ಕಿಟ್ಟ ಹೊನ್ನ ತಂಬೂರಿ ಕಪಾಟಿನೊಳಗೆ

ನುಡಿಯಲಾರದ ವಿವಶತೆಗೆ ಕಣ್ಣೀರಿಡುತಿತ್ತು.



೩೧) ಕ್ಷಮಿಸು



ಕ್ಷಮಿಸು

ನಿನ್ನ ಬಾಯಾರಿಕೆಗೆ ನಾ ನೀರಾಗಲಿಲ್ಲ,

ಹಸಿವೆಗೆ ತುತ್ತಿನೂಟವಾಗಲಿಲ್ಲ.

ನಿದ್ದೆಯಿಲ್ಲದ ರಾತ್ರಿಗೆ ಜೋಗುಳವಾಗಲಿಲ್ಲ.

ಬೇಸರ ತಣಿಸುವುದಕೆ ಹಾಡಾಗಲಿಲ್ಲ.

ದಣಿದು ಬಂದಾಗಲೆಲ್ಲ ನಗುವಾಗಲಿಲ್ಲ.

ಕಣ್ಣೀರೊರೆಸೊ ತುಂಡುವಸ್ತ್ರವಾಗಲಿಲ್ಲ.

ಪೂಜೆ ನಂಬದ ನೀನು ಪೂಜೆಗೆಂದೊಮ್ಮೆ

ಹೊರಟಾಗ ಹೂವಾಗಿಯೂ ಒದಗಲಿಲ್ಲ.

ಬಹುಶಃ........

ನಮ್ಮಿಬ್ಬರಿಗೂ ಇದೊಂದು ಅಪ್ರಿಯ ಸತ್ಯ

ನಾನೆಂದೂ ನಿನಗೊದಗಲೇ ಇಲ್ಲ.

ಯಾಕೆಂದರೆ, ಇದುವರೆಗೆ

ನಾನು ನಾನಾಗುವುದೇ ಸಾಧ್ಯವಾಗಿಲ್ಲ.



೩೨) ಹೂಗಳ ನಗು



ರಾತ್ರಿ ಗಾಳಿಮಳೆ ಜೋರಿಗೆ

ಪಾರಿಜಾತದ ಗೆಲ್ಲು ಕಿಟಕಿಯೆಡೆ ಬಾಗಿತ್ತು

ಮುಂಜಾನೆ ಕಿಟಕಿ ತೆರೆದೊಡನೆ

ಪುಟ್ಟರೆಂಬೆಯೊಂದು ಕಂಬಿಗಳೊಳ ಚಾಚಿತ್ತು

ರೆಂಬೆ ತುದಿಯಲ್ಲಲ್ಲಿ ಪುಟ್ಟ ಹೂ ಅರಳಿತ್ತು

ಕೆಂಪು ತೊಟ್ಟಿನ ಬಿಳಿಯ ಮೈ ಹಸುಗೂಸಿನಂತಿತ್ತು

ಅದಕೆ

ದೊಡ್ಡ ಮನೆಯ ಹಜಾರದ ದರ್ಶನವಾಗಿತ್ತು

ಶ್ರೀಮಂತಿಕೆಯ ಬಣ್ಣಗಳು ಕಣ್ಣು ಕುಕ್ಕಿತ್ತು

ಮೂಲೆಯಲಿತ್ತೊಂದು ದೊಡ್ಡ ಹೂದಾನಿ

ಅದರ ತುಂಬ ಅಂಗೈಯಗಲದ ಕೆಂಪು ಗುಲಾಬಿ

ಕಂಪಿಲ್ಲದ ಕೆಂಪು ಗುಲಾಬಿಯ ಕಂಡು

ಪಾರಿಜಾತಕೆ ಕಾಗದದ್ದೆಂಬ ವ್ಯಂಗ್ಯ ನಗು!

ಕ್ಷಣಕಾಲದದರ ಜೀವಿತವ ಕಂಡು ಗುಲಾಬಿಗೆ

ತನ್ನ ಜೀವನವೆ ಉದ್ದವೆಂಬ ಹೆಮ್ಮೆಯ ನಗು!









೩೩)ಯಾಕೆಂದರೆ.........

ನೀನಂದಿದ್ದೂ ಸರಿಯೇ

ನಿನ್ನಮ್ಮನ ಮುಂದುವರಿಕೆ ನೀನು,

ನಿನ್ನದು ನಿನ್ನ ಮಗಳು.

ಅಮ್ಮ ನಿನ್ನ ಗುರುವಾದರೆ,

ಮಗಳು ನಿನಗೆ ಗುರಿಯಾದಳು.

ಅಮ್ಮನದು ನಿನಗೆ ಧಾರೆಯಾದರೆ

ಮಗಳ ಪ್ರೀತಿ ಸೆಳೆವ ಅಯಸ್ಕಾಂತ.

ಅಮ್ಮ ನಿನಗೆ ಮಾದರಿಯಾದರೆ

ಮಗಳು ನಿನ್ನ ತದ್ರೂಪು.

ಅಮ್ಮ ಗಾಯಗಳಿಗೆ ಮುಲಾಮಾದರೆ

ಮಗಳು ಗಾಯಗಳೆಡೆಗಿನ ಮರೆವು

ಅಮ್ಮ ನಿನ್ನ ನುಡಿಗಳಲಿಹ ಸತ್ವವಾದರೆ

ಮಗಳು ಅದ ನಡೆಯಾಗಿಸುವ ಸತ್ಯ

ಅಮ್ಮ ಬಳಲಿಕೆಗೆ ಒರಗುಗಂಬವಾದರೆ

ಮಗಳು ನಿನ್ನ ತೂಗುವ ಉಯ್ಯಾಲೆ.

ಅಮ್ಮ ನಿನ್ನ ಕಣ್ಣೊರೆಸುವ ಕೈಯ್ಯಾದರೆ

ಮಗಳು ಕಣ್ಣೀರ ನಗುವಾಗಿಸುವ ಶಕ್ತಿ

ಹೀಗೆ ನನ್ನ ಬಾಳ ಭಾರ ಹೊತ್ತ

ಕಂಭಗಳಿವೆರಡು ಎಂದು ನೀನಂದದ್ದು

ನೂರಕ್ಕೆ ನೂರು ಸತ್ಯವಾದ ಮಾತು

ಯಾಕೆಂದರೆ ........

ನನ್ನಮ್ಮ ನನ್ನೆದುರಿನ ಕನ್ನಡಿಯಾದರೆ,

ನನ್ನ ಮಗಳದರೊಳಗಿನ ನನ್ನ ಪ್ರತಿಬಿಂಬ



೩೪) ಹೀಗೆರಡು ಅಗಲಿಕೆಗಳು



ಸಾವು ಅಗಲಿಸಿದವರ ನೋವು ಸಾವಬಯಕೆ ತಂದೀತು

ಬೇಡವೆಂದು ಬಿಟ್ಟುಹೋದವರದು ಕ್ಷಣಕ್ಷಣ ಸಾಯಿಸುವುದು

ಆ ಅಗಲಿಕೆಯಲಿ ತಲುಪಲಾಗದ ದೂರ ಚುಚ್ಚಿದರೆ

ಈ ತೊರೆಯುವಿಕೆಯಲಿ ತಿರಸ್ಕಾರದ ಉರಿ. .

ಆ ದೂರ ತಂದೀತು ಅಸಹಾಯಕತೆಯ ನೋವು,

ಈ ತಿರಸ್ಕಾರದಲಿ ಆತ್ಮವಿಶ್ವಾಸದ ಸಾವು.

ಅಸಹಾಯಕತೆಗೆ ಆತ್ಮವಿಶ್ವಾಸ ಆಸರೆಯಾದೀತು.

ಆತ್ಮವಿಶ್ವಾಸವಿಲ್ಲದ ಬಾಳು ಹೊರೆಯೇ ಹೌದು

ಹೊರೆಯಾದ ಬಾಳಿಗಿಂತ ಬೇಕೆ ಬೇರೆ ಸಾವು?



೩೫) ಮನಗಳೆರಡು ಸಂಧಿಸಿದಾಗ



ಮನಸುಗಳೆರಡು ಪರಸ್ಪರ ಸಂಧಿಸಿದ ಗಳಿಗೆ

ಅದು ಕರೆಯಿತು "ಈಗಲೇ ನನ್ನದಾಗು"

ಇದು ಹೇಳಿತು "ಬಹುಶಃ ಅದಾಗದು"

ಅದು ಹೇಳಿತು "ಅದಾಗಲೇಬೇಕು"

ಇದರುತ್ತರ "ಆಗಲೇಬೇಕಾದರೆ ಆದೀತು"

ಮರುಕ್ಷಣವೇ ಒಂದರೊಳಗೊಂದು ಇಳಿಯತೊಡಗಿ,

ಸಮರ್ಪಣೆ ಮೊಳೆಯತೊಡಗಿ,

ಇನ್ನುಳಿದದ್ದೆಲ್ಲಾ ಕರಗತೊಡಗಿ,

ಅದಕಿದಷ್ಟೆ ಇದಕದಷ್ಟೆ ಕಾಣುವಂತಾಯ್ತು.

ಆಗಲೇ ಅದಕೊಮ್ಮೆ ಭೂತದಾಳದ ಪ್ರಶ್ನೆ-

"ನೀ ನನ್ನದಲ್ಲವೇ?"

ಅದರ ಉತ್ತರ-

"ನೀ ನನ್ನ ದಾಟಿಹೋಗಿದ್ದೆಯಲ್ಲವೆ?"

"ಅದು ಕಾಲನಿರ್ಣಯ.

ಸಾವು ನಿನ್ನೊಳಗೆ ನನ್ನ ಕೊಂದಿತೆ?"

-ಮತ್ತೆ ಭೂತದ ಪ್ರಶ್ನೆ.

ಅದಕ್ಕೀಗ ಇಬ್ಬಗೆ- ನನ್ನದಲ್ಲದ ನಾನು

ಇದಕ್ಕೊದಗುವುದು ಹೇಗೆ?

ಅದು ನಿಂತಲ್ಲೆ ತಿರುಗಿ ಹಿಂದೆ ನೋಡುತ್ತಿದೆ,

ಇದು ನಡುವಲ್ಲಿ ನಿಂತು ತ್ರಿಶಂಕುವಾಗಿದೆ.

ಹಿಂತಿರುಗಲು ಇದಕ್ಕೆ ಹಿಂದೇನೂ ಇಲ್ಲ,

ಮುನ್ನಡೆಯಲು ಅಲ್ಲಿ ಸ್ವಾಗತವೂ ಇಲ್ಲ.



೩೬) ಹೆಣ್ಣಿನ ಪ್ರಶ್ನೆ



ಹೆಣ್ಣೊಂದರ ಮನ ಆಗಾಗ ಕೇಳುವುದು-

"ಎಲ್ಲಿದೆ ನನ್ನಮನೆ, ಯಾವುದು ನನ್ನಮನೆ?"

ಅಮ್ಮ ಹೇಳಿದ್ದಳು ಮದುವೆಯ ನಂತರ,

" ಇನ್ನು ನಿನ್ನ ಮನೆಯ ಸೇರಿ ಬೆಳಗು"

ಅಲ್ಲಿ ತಪ್ಪಾದಾಗಲೊಮ್ಮೆ ಅತ್ತೆ ಕೇಳುವರು

"ನಿನ್ನ ಮನೆಯಲ್ಲಿ ಇದು ಹೀಗೇ ಏನು?"

ಮೊದಲ ಆಷಾಢಕ್ಕೆ ತವರಿಗೆ ಹೋದಾಗ,

ಪಾತ್ರೆ ತೊಳೆದು ಇಟ್ಟ ಜಾಗ ಬದಲಾಯ್ತು.

ಅಮ್ಮ ನಕ್ಕುಹೇಳುತಾಳೆ "ನಿನ್ನ ಮನೆಯಲ್ಲಮ್ಮಾ"

ಹೊಸಿಲ ಬರೆವ ಗೆರೆಗಳಲ್ಲಿ ತವರ ಛಾಯೆಕಂಡು

ಅತ್ತೆ ಹೇಳುತಾರೆ- "ನಿನ್ನ ಮನೆಯಂತಲ್ಲಮ್ಮಾ,

ನನ್ನ ಮನೆಯಲ್ಲಿದ್ದೀಯ, ನಾ ಬರೆದಂತೆ ಬರಿ."

ಅಪ್ಪನ ಕನಸು, ಅಮ್ಮನ ಮನಸೇ ಅವಳಾದರೂ

ಅವರ ಪ್ರಕಾರ "ಈಗ ನೀ ಅವರವಳು"

ಅತ್ತೆಯ ಹೆಮ್ಮೆ, ಗಂಡನ ಒಲುಮೆ ಅವಳಾದರೂ,

ಅವರೂ ಹೇಳುವರು- "ಎಷ್ಟಾದರೂ ಅವರೆ ನಿನಗೆ ಹೆಚ್ಚು"

ಗೊಂಬೆಯಾಟದ ಗೊಂಬೆ ಈ ಹುಡುಗಿ

ಮತ್ತದೇ ಪ್ರಶ್ನೆಯೊಂದಿಗೆ ಕೂರುತಾಳೆ

"ಎಲ್ಲಿಗೆ, ಯಾರಿಗೆ ಸೇರಿದವಳು ನಾ?

ಎಲ್ಲಿದೆ ನನ್ನಮನೆ, ಇಲ್ಲಿಗೆ ಸುಮ್ಮನೆ ಬಂದೆನಾ? "



೩೭) ನಾ ಗರಿಕೆಯಾಗುವೆ



ಅಜ್ಜ ನೆಟ್ಟ ಮಾವಿನ ಮರದಲಿ

ನಾ ಮೊಳೆಯುತಿರುವೆ, ಪುಟ್ಟ ಚಿಗುರು.

ಇಲ್ಲಿ ಚಿಗುರುವ ಯೋಗವೋ, ಕರ್ಮವೋ-

ಅಪ್ಪ ಅಮ್ಮ ಇಲ್ಲಿದ್ದರು, ನಾನಿಲ್ಲಿ ಹುಟ್ಟಿದೆ,

ಬೇರಾವ ಕಾರಣವು ಇಲ್ಲ.

ಇಲ್ಲ, ಇಂದು ನನ್ನದಿದೆನಿಸುವುದಿಲ್ಲ

ಈಗಿನ ತುರ್ತಿಗಿದು ಶಕ್ಯವಾಗಿಲ್ಲ.

ಆಗಿನ ಮೌಲ್ಯಗಳನುಳಿಸಿಕೊಂಡಿಲ್ಲ

ನೆಟ್ಟವರ ಧ್ಯೇಯಗಳೂ ಕಾಣುತಿಲ್ಲ

ಹಣ್ಣು ನನ್ನವು ಮೇಲ್ವರ್ಗಕೇ ಎನ್ನುತಿದೆ

ಕೊಂಬೆಗಳಿಂದ ಅಕ್ಕಪಕ್ಕದವ ಚುಚ್ಚುತಿದೆ

ರೆಂಬೆಯಲೊಂದು ಕಾಳಸರ್ಪವನೂ ಸಾಕಿದೆ

ಒಣಗಿದೆಲೆಗಳ ಕಸವ ಸುತ್ತಲೂ ಬೀಳಿಸಿದೆ

ಭಯಗೊಂಡ ಜೀವಕುಲ ದೂರಕೇ ಓಡುತಿರೆ,

ಸ್ವಚ್ಛಗೊಳಿಸುವ ಕಾರ್ಯ ಅರ್ಧಕೇ ನಿಂತಿದೆ

ನೆರಳು ಇದ್ದರೂ, ದಣಿವಾರಿಸುತ್ತಿಲ್ಲ

ಹಣ್ಣಿದ್ದರೂ ಹಸಿವೆ ತಣಿಸುತ್ತಿಲ್ಲ

ಕೊಳೆತೆಲೆಗಳದೆ ನಾತ,

ಜೀವಸೆಲೆಯಿರದೆ ಮೌನದ್ದೆ ಕಾಟ

ಆದರೂ..........

ನಾನಿಲ್ಲೆ ಇರಬೇಕು, ಬೆಳೆಯಲೂ ಬೇಕು

ಇರುವೆ, ಆದರೆ.........

ಸಾವು ಬಂದಕ್ಷಣ ವರವೊಂದ ಕೇಳುವೆ,

ಮರುಜನ್ಮದಲಿ ನಾ ಗರಿಕೆಯಾಗುವೆ,

ಯಾರ ಗೆಲ್ಲೂ ಅಲ್ಲ, ಯಾರ ಹೂವೂ ಅಲ್ಲ

ಯಾರ ಹಣ್ಣೂ ಅಲ್ಲ, ಯಾರ ಬೀಜವೂ ಅಲ್ಲ.





೩೮) ಬಾಯಿಮಾತಷ್ಟೇ



ಮಾತು ಬೆಳ್ಳಿ ಮೌನ ಬಂಗಾರ ಅನ್ನುವರು,

ಬಾಯಿಗೇ ಕೈಹಾಕಿ ಮಾತು ಹೊರತೆಗೆಯುವರು.

ಕೈ ಕೆಸರಾದರೆ ಬಾಯಿ ಮೊಸರೆಂಬರು,

ಕೈ ಕೆಸರಾಗಿರುವವನ ಗೌರವಿಸಲರಿಯರು.

ಉಪ್ಪಿಗಿಂತ ರುಚಿ, ತಾಯಿಗಿಂತ ದೇವರಿಲ್ಲೆಂಬರು,

ಸ್ವಲ್ಪ ಹೆಚ್ಚುಕಮ್ಮಿಯಾದರೂ "ಥೂ" ಎಂದುಗಿಯುವರು.

ಅಜ್ಜ ನೆಟ್ಟ ಆಲದ ಮರದ ನೇಣು ಸಲ್ಲದೆಂಬರು,

ದೂರದಲಿ ಬಾಳು ಹುಡುಕಿದರೆ, ಭ್ರಷ್ಟನೆಂಬರು.

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬರು,

ಹತ್ತಿರ ಸ್ಪಷ್ಟವಾಗಿರುವುದ ಕಾಣಬಯಸರು.

ಸೋಲೇ ಗೆಲುವಿಗೆ ಸೋಪಾನವೆಂಬರು

ಸೋತು ಕುಸಿವವಗಿನ್ನೆರಡು ಕಲ್ಲೆಸೆಯುವರು

ಗೆದ್ದೆತ್ತಿನ ಬಾಲ ಹಿಡಿವುದು ಸರಿಯಲ್ಲೆಂಬರು

ಗೆಲುವು ಇರದಲ್ಲಿ ಪ್ರೋತ್ಸಾಹಿಸಲರಿಯರು

ಮಾನವರ ನಡುವಿನಲಿ ಸಹಜತೆಯೆ ಕಳವಾಗಿ

ಕದ್ದ ಆಷಾಢಭೂತಿಗಳೆ ಜಗವಾಳುವವರಾಗಿ

ಮನದ ನುಡಿಯನು ಕೇಳಿ ಬಾಳುವೆ ಎಂದವಗೆ

ಸ್ವರ್ಗವೆನಿಸದೆ ನರಕವಾಗಿಹುದು ಈ ಭೂಮಿ.



೩೯) ನಾ ಮೂಲವಸ್ತುವಷ್ಟೆ.



ಕ್ಷಮಿಸು ಜೀವವೆ,

ನನ್ನ ನಡೆಗಳಿಗೆ ನಾ ಪ್ರತಿಕ್ರಿಯೆ ಕೇಳುವೆ.

ಮೀರಾಳಂತೆ ಅವಳ ಹಾಡಲ್ಲಿ ,

ರಾಧಾಳಂತೆ ಅವಳ ನಿರೀಕ್ಷೆಯಲ್ಲಿ,

ಅಕ್ಕಳಂತೆ ಅವಳ ಹಠಸಾಧನೆಯಲ್ಲಿ

ಅಭಿವ್ಯಕ್ತವಾಗದ ಅದ ನಾ ಕಾಣಲಾರೆ.

ಯಾಕೆಂದರೆ ಅವರು.........

ಹೆಣ್ಣುಜನ್ಮದ ಅತ್ಯುನ್ನತ ಮಾದರಿಗಳಾದರೆ,

ನಾನು ಹೆಣ್ಣು ಜೀವರಚನೆಯ ಮೂಲವಸ್ತುಗಳಾದ

ಆರಾಧನೆ ಮತ್ತದರ ಸ್ಪಂದನೆಗಳ ಮೊತ್ತ ಅಷ್ಟೇ.





೪೦) ಇಂದು



ಒಂದಕ್ಕೊಂದು ಅಪ್ಪಿಕೊಂಡಂತಿರುವ

ನಿನ್ನೆ ನಾಳೆಗಳೆಂಬೆರಡು ಬಂಡೆಗಳ

ನಡುವಿನ ಕಿರಿದಾದ ಅವಕಾಶವೇ ಇಂದು.

ಕಿರಿದಾದಾರೂ ಜಾಗವಿದ್ದಲ್ಲೆಲ್ಲ ಬಂದು ಸೇರುವ

ತ್ಯಾಜ್ಯಗಳಂತೆ ಇಲ್ಲು ಇವೆ ಕಸಕಡ್ಡಿ ಹಲವು

ಮೊದಲ ಕೆಲ ಹೆಜ್ಜೆಗಳಲಿ ರಭಸವಿದ್ದರೆ,

ತೊರೆಯದು ಕಸಕಡ್ಡಿ ಕೊಚ್ಚಿಕೊಂಡು ಹೋದೀತು,

ಇಂದೆಂಬ ಅವಕಾಶವದಕೆ ದಕ್ಕೀತು.

ನಿನ್ನೆನಾಳೆಗಳ ವಿಸ್ತಾರ ದಾಟಿದ ಮೇಲೆ,

ಬಯಲೆಲ್ಲ ಅದರದೇ ಆದೀತು.

ಸ್ವತಂತ್ರ ಹರಿವು, ಮಿತಿಯಿರದ ಸೆಳವು

ನೋಡಲೂ ಬಂದಾರು ಜನ ಆ ಮುಕ್ತ ಚೆಲುವು

೪೧)

೧) ಗೊಂಬೆ ಹೇಳಿದ್ದು



ದೊಡ್ಡ ಗೊಂಬೆಯೊಳಗೊಂದು ಗೊಂಬೆ,

ಅದರೊಳಗಿತ್ತು ಇನ್ನೊಂದು

ಇನ್ನೊಂದರೊಳಗೆ ಮತ್ತೊಂದು

ಆ ಮತ್ತೊಂದರೊಳಗೂ ಸಿಕ್ಕಿತ್ತು

ಕೊನೆಗೊಂದು ಪುಟ್ಟಗೊಂಬೆ.

ಎಲ್ಲೋ ಏನೋ ಹೋಲಿಕೆಯ ನೆನಪು!!!

ದೊಡ್ಡವರಂತೆ ಕಾಣುವ ಹಲವರು ಹೀಗೇ ತಾನೆ?

ಅವರೊಳಗ ಬಗೆಯುತ್ತಾ ಹೋದಂತೆಲ್ಲಾ

ಕೊನೆಗುಳಿಯುವುದು ಕ್ಷುದ್ರವ್ಯಕ್ತಿತ್ವವೇನೇ.



೨) ಕಳೆದು ಹೋಗುವಾ



ಉಳಿಸುವ ಇಚ್ಛೆಯಿಲ್ಲದಿದ್ದರೆ ಅಳಿಸಿಬಿಡು

ಎರವಲೆನಿಸುವ ಗಮನದ ಭಿಕ್ಷೆ ಬೇಡ

ಪ್ರೀತಿಯೆಂದೆಂದೂ ನಿಷ್ಕಲ್ಮಶ

ಅದು ನಂಜಾಗುವ ಮುನ್ನ

ನೀ ನಾನಿಲ್ಲವೆಂದುಕೊಳ್ಳುವ

ನಾ ನೀನಿರಲೇ ಇಲ್ಲವೆಂದುಕೊಳ್ಳುವ

ತಪ್ಪು ಕಲ್ಪನೆಯೊಳಗೆ ಕಳೆದುಹೋಗುವಾ.....



Wednesday, November 28, 2012


ನಾ ನಾಳೆ ಬರುವಾಗ....


------------------

ನಾ ಬರುವೆನೆಂದು ಸಿಂಗರಿಸಿಕೊಳಬೇಕೇನೇ ನೀನು?

ಹೊಸದಾಗಿ ತೋರುವಂಥದ್ದುಳಿಸಿದಿಯೇನೇ ಇನ್ನೂ...



ಒದಗಿದೊಂದೇ ನೋಟವದು, ಶರಣಾಗಿಸಿತ್ತು...

ಅಲ್ಲ...

ಕಣ್ಣು ದೊಡ್ಡವೆಂದಲ್ಲ... ಎರಡು ಕನ್ನಡಿಗಳೆಂದು..

ಮೂಗು ಚೂಪೆಂದಲ್ಲ, ಒಳಿತಿಗಷ್ಟೆ ತೆರೆವದ್ದೆಂದು,

ಬಾಯಿ ಪುಟ್ಟದೆಂದಲ್ಲ...ಒಂದು ಸತ್ಯವೆಂದು,

ನಗು ಚಂದವೆಂದಲ್ಲ..ಒಂದು ಮಗುವೆಂದು,

ಹಣೆ ಚಿಕ್ಕದೆಂದಲ್ಲ, ಶುದ್ಧಭಾವಗಳ ಮನೆಯೆಂದು,

ಭಂಗಿ ಸುಂದರವೆಂದಲ್ಲ, ಬಲುದೃಢವೆಂದು...

ಮರುಳಾದದ್ದು ಕಣೇ..., ಹೀಗಿದ್ದೆಲ್ಲೂ ಕಂಡಿರಲಿಲ್ಲ....



ನೀ ಬಳುಕೊ ಬಳ್ಳಿಯೆಂದಲ್ಲ.. ಸುಮಕೋಮಲೆಯೆಂದಲ್ಲ,

ಬಣ್ಣ ಬಿಳಿಯೆಂದಲ್ಲ... ಅಷ್ಟೆಲ್ಲಾ ಯಾಕೆ...

ಅನುಪಮ ಸುಂದರಿಯೆಂದಲ್ಲ ಮೆಚ್ಚಿದ್ದು....

ನಾ ಕಂಡಷ್ಟು ನಿನ್ನ ಕಂಡವರುಂಟೇನೇ....?

ಬಿಡು...ದೇಹವನಲ್ಲ... ಮನವನಣಿಯಾಗಿಸು

ನಾ ಕಂಡಂತೆ ಕಾಣಲಿಕೆ, ಒಪ್ಪಿದಂತೊಪ್ಪಲಿಕೆ,

ಮಣಿದಂತೆ ಮಣಿಯಲಿಕೆ, ಲೀನವಾಗಲಿಕೆ,

ಮತ್ತಾ ಮನೋಮಿಲನದಲ್ಲಿ ನೀನಿಲ್ಲವಾಗಲಿಕೆ...










Tuesday, November 27, 2012

ನನಗ್ಗೊತ್ತು....ಆದರೂ..


-----------------------

ನಾ ಬಲ್ಲೆ... ನೀ ಹೇಳುತಿರುವುದೆಲ್ಲ ಸುಳ್ಳು

ಆ ಸುಳ್ಳನೇ ನಂಬುವಾಸೆ...

ನಾ ಬಲ್ಲೆ.... ನಿನಲಿರುವುದೆಲ್ಲ ವಿತಂಡವಾದ

ಆ ವಾದಕೇ ಸೋಲುವಾಸೆ..

ನಾ ಬಲ್ಲೆ... ನೀ ಹಂಚುವುದೆಲ್ಲ ನಿನ್ನೊಳಗ ನೋವೇ

ಆ ನೋವಿಗೇ ಒಡ್ಡಿಕೊಳುವಾಸೆ..

ನಾ ಬಲ್ಲೆ... ನೀ ನನ್ನ ಕಾಣಬಯಸದಿರುವೆ...

ಮರೆಯಿಂದಲೇ ನಿನ್ನ ನೋಡುವಾಸೆ...

ನಾ ಬಲ್ಲೆ... ನಿನಲಿಲ್ಲದಿರುವುದೆನ್ನೆಡೆಗೆ ಒಲವೇ...

ಇಲ್ಲದ್ದಕೇ ನನ ಪ್ರೀತಿಬಳ್ಳಿ ಹಬ್ಬಿಸುವಾಸೆ..

ನಾ ಬಲ್ಲೆ.. ನೀನೆಲ್ಲವ ಮುಗಿಸಬಯಸಿರುವೆ

ಆ ಬಯಕೆಯಲೊಂದು ಜಾಗ ಪಡೆವಾಸೆ....

ನಾ ಬಲ್ಲೆ... ನೀ ಕೊನೆಗೆ ಕಾಯುತಿರುವೆ..

ಆ ಕೊನೆಯಲೂ ನಿನ್ನ ಬುಡದಲಿರುವಾಸೆ...



ಆಸೆಗಳಿಲ್ಲದ ನಿನ್ನ ಪ್ರೇಮಿಸುತಿರುವೆ....ಹಾಗಾಗಿ

ಶುರುವಿಂದ ಕೊನೆವರೆಗೆ ಜೀವಂತವಾಗುಳಿವಾಸೆ...







ಪ್ರಶ್ನೆಯಲ್ಲ, ಇದು ಕೋರಿಕೆ....


-----------------

ನೂರೊಂದು ಹೇಳಬೇಕು ನಾನು,

ದನಿಯಿಲ್ಲದ ಮಾತು ಕೇಳಬಲ್ಲೆಯ ನೀನು?

ಮತ್ತೊಮ್ಮೆ ಹಾಡಬೇಕು ನಾನು,

ಶಬ್ಧವಿಲ್ಲದ ಹಾಡ ಸವಿಯಬಲ್ಲೆಯ ನೀನು?

ಪುನಃ ಪುನಃ ಬಯಲಾಗಬೇಕು ನಾನು,

ನಾ ತೋರದುದನ್ನೂ ನೋಡಬಲ್ಲೆಯ ನೀನು?

ಇದ್ದೂ ಇಲ್ಲಿರದಂತಿರಬೇಕು ನಾನು,

ನಿನ್ನೆದೆಯಲಿ ಹಾಗಿರಿಸಿಕೊಳುವೆಯ ನೀನು?



ನೀ ಕೇಳದೇ ತಿಳಿದೀಯಬೇಕು ನಾನು,

ತಪ್ಪುತಿಳಿದರೆ ತಿದ್ದಬಲ್ಲೆಯ ನೀನು?

ನಿನ ಹೆಜ್ಜೆ ಮೇಲಿಟ್ಟೆನದು ನಡೆಯಬೇಕು ನಾನು,

ಎಡವದಂತೆ ಕರೆದೊಯ್ಯುವೆಯೇನು?

ನೀನಿತ್ತುದುಂಡೇ ತಣಿಯಬೇಕು ನಾನು,

ಮತ್ತೆ ಕೇಳದಂತೆ ಉಣಿಸುವೆಯೇನು?

ನಿನ ಮಡಿಲಲೇಳದಂತೆ ನಿದ್ರಿಸಬೇಕು ನಾನು,

ಅಂಥ ಜೋಗುಳವೊಂದು ನಿನ್ನಲಿದೆಯೇನು?



ಬಿಡು....ಯಾವುದಾಗದಿದ್ದರೂ ಇದಾದೀತೇನು..?

ನನಗೆ ನೀನೆಂದರೆ ನೀನೇ ಎಂದರಿಯಬಲ್ಲೆಯ ನೀನು?





Monday, November 26, 2012

   ನಮಸ್ಕಾರ.. ನಾನು ಅನುರಾಧಾ ಪ್ರಶಾಂತ್ ಸಾಮಗ. ನನ್ನ ಬರಹಗಳನ್ನು ಒತ್ತಟ್ಟಿಗೆ ಸೇರಿಸಿಡಲು ಅನುಕೂಲವಾಗುವಂತೆ ಭಾವಶರಧಿ ಎಂಬ ಈ ಬ್ಲಾಗ್ ನ ಬಾಗಿಲನ್ನು ತೆರೆಯುತ್ತಿದ್ದೇನೆ. ಅದರೊಳಗಿನ ಅವಕಾಶವನ್ನು ನನ್ನ ಅನಿಸಿಕೆಗಳಿಂದ ತುಂಬುತ್ತಿದ್ದೇನೆ. ನಿಮಗೆಲ್ಲರಿಗೂ ಭಾವಶರಧಿಯ ಅಲೆಗಳನ್ನು ವೀಕ್ಷಿಸಲು ಮತ್ತು ಇಚ್ಛೆಯಿದ್ದಲ್ಲಿ ಅದರಾಳದಲ್ಲಿ ಮುಳುಗೇಳಲು, ಅದರೊಡನೆ ಸಂವಾದಿಸಲು ಮನಸಾರೆ ಸ್ವಾಗತ ಮತ್ತು ತದನಂತರದ ಕಾಳಜಿಯ ಸಲಹೆಗಳಿಗೂ ಸದಾ ಸ್ವಾಗತ.


   ನಾಲ್ಕು ಗೋಡೆಗಳ ನಡುವೆ ಕಡಿಮೆಯೆಂದರೆ ಸುಮಾರು ಹತ್ತು ಹದಿನೈದು ವರ್ಷ ನಾವು ಶೈಕ್ಷಣಿಕವಾಗಿ ಕಲಿಯುವುದು, ಪದವೀಧರರಾಗುವುದು, ಎಂದು ಯಾವುದನ್ನು ಹೇಳುತ್ತೇವೋ ಅದು ಕಲಿಯುವ ಪ್ರಕ್ರಿಯೆಯನ್ನು ಕಲಿಯಲಿಕ್ಕೆ ಮಾತ್ರ ಎಂದು ನನ್ನ ಭಾವನೆಯೂ ಹೌದು, ಅನುಭವವೂ ಹೌದು. ಅದರೊಳಗಿನ ವಸ್ತುವಿಷಯದ ಮುಖಾಂತರಕ್ಕಿಂತ ಹೆಚ್ಚು ಅದನ್ನು ಅಭ್ಯಸಿಸಿದ ರೀತಿ, ಬೇಕಾದ ಶ್ರದ್ಧೆ, ಸಾಧನೆಗೆ ಇರಬೇಕಾದ ಬದ್ಧತೆ, ಪರಿಶ್ರಮದ ಗುಟ್ಟು, ಮತ್ತು ಸೋಲುಗೆಲುವಿನ ರುಚಿ-ಇವುಗಳ ಮೂಲಕ ಮುಂದಿನ ಜೀವನಕ್ಕೆ ಸಹಾಯ ಒದಗುವುದೆಂದು ನನ್ನ ಭಾವನೆ. ನಾನು ಶಾಲಾ ಕಾಲೇಜುಗಳಲ್ಲಿ ಅಭ್ಯಸಿಸಿದ ವಿಷಯವಲ್ಲದ ಸಾಹಿತ್ಯ ಇಂದು ನನ್ನ ಅತ್ಯಂತ ಅಚ್ಚುಮೆಚ್ಚಿನ ಸಂಗಾತಿಯಾಗಿದೆ, ಬದುಕುವ ಉದ್ದೇಶಗಳಲ್ಲೊಂದಾಗಿದೆ.ಓದುವ ಗೀಳಿದ್ದ ನನಗೆ ಹೇಳಿಕೊಳ್ಳುವಂಥ ಸಾಹಿತ್ಯದ ಕೌಟುಂಬಿಕ ಹಿನ್ನೆಲೆಯಿಲ್ಲದಿದ್ದರೂ ಮತ್ತು ತುಂಬಾ ಶ್ರೇಷ್ಠ ಮಟ್ಟಿನ ಓದುವಿಕೆಯಾಗಲಿ, ಅದಕ್ಕೆ ಪ್ರೋತ್ಸಾಹವಾಗಲೀ ಇರದಿದ್ದರೂ, ಚಂದಮಾಮ, ಸುಧಾ, ಪ್ರಜಾಮತಗಳಲ್ಲದೇ, ದಿನಪತ್ರಿಕೆಯ ಒಂದೂ ಅಕ್ಷರ ಬಿಡದೆ ಓದುವ ಮತ್ತದರಲ್ಲಿನ ವಸ್ತುವಿಷಯಕ್ಕಿಂತ ಹೆಚ್ಚಾಗಿ ಭಾಷೆಯ ಜಾಡನ್ನ, ಚಂದವನ್ನ ಅನಂದಿಸುವುದು ತುಂಬಾ ಖುಶಿ ಕೊಡುತ್ತಿತ್ತು. ಒಂದೇ ಒಂದು ಮನರಂಜನೆಯ ಸಾಧನವಾದ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಹಾಡುಗಳೂ ಮನಸೆಳೆದು, ನಾನೂ ಹೀಗೇ ಬರೆದು ಹಾಡಬೇಕೆಂಬ ಆಸಕ್ತಿ ಹುಟ್ಟಿದ್ದೂ ನಿಜವೇ. ನಾಲ್ಕಾರು ಸಾಲು ಬರೆದು ಹಾಡುಗಾರಿಕೆಯಲ್ಲಿ ಸ್ವಲ್ಪ ಆಸಕ್ತಿ ಇದ್ದುದರಿಂದ ರಾಗ ಹಾಕಿ ಬೇಕಾದಷ್ಟು ಸಲ ಹಾಡಿ ಆನಂದಿಸುತ್ತಿದ್ದುದೂ ಇತ್ತು. ಕುವೆಂಪು, ಬೇಂದ್ರೆ, ಶಿವರುದ್ರಪ್ಪ, -ಇವರೇ ಮೊದಲಾದ ಎಲ್ಲಾ ಕವಿಗಳ ಹಾಡುಗಳನ್ನು ಸಿಕ್ಕಿಸಿಕ್ಕಿದಲ್ಲೆಲ್ಲ ಕಲಿತು ಹಾಡುವುದೊಂದು ಹುಚ್ಚಾಗಿತ್ತು. ಆ ಹಾಡುವಿಕೆ ಅದರೊಳಗಿನ ಶಬ್ಧಗಳ ಜಾದೂವನ್ನು ಪರಿಚಯಿಸಿತು, ದೇವರ ದಯೆ, ಹಿರಿಯರ ಆಶೀರ್ವಾದ ಆ ತಿಳಿವನ್ನು ಬರವಣಿಗೆಯನ್ನಾಗಿಸಿತು. ಹಿರಿಯರಿಗಾಗಿ ಮನೆಗೆ ಬರುತ್ತಿದ್ದ ಕಾದಂಬರಿಗಳನ್ನೂ ಕದ್ದೋದಿ, ಸಿಕ್ಕಿಬಿದ್ದು "ನಿನ್ನ ವಯಸಿಗದು ಬೇಡ" ಎಂದು ಬಯ್ಸಿಕೊಂಡದ್ದೂ ಇತ್ತು. ಬಹುಶಃ ಆ ಸಮಯದಲ್ಲಿ ನನ್ನ ಆಸಕ್ತಿಗೆ ಮೇವಾಗಿ ದೊರಕಿದ ಆ ಓದು, ಆ ಕೇಳ್ಮೆ ಇಂದು ನನ್ನನ್ನು ಆಧರಿಸುತ್ತಿದೆ. ಸುಮಾರು ಹತ್ತನೇ ವರ್ಷದಲ್ಲಿ ಮೊದಲ ಕವನಬರೆದದ್ದು, ತರಂಗದಲ್ಲಿ ಪ್ರಕಟವಾಗಿತ್ತು- "ಅಜ್ಜನ ಗಡ್ಡ."

ಮುಂದೆ ಕಾಲೇಜಿನ ದಿನಗಳಲ್ಲೂ ಬರೆದಿದ್ದೆ, ಆದರೆ ಸ್ವಭಾವತಃ ಹಿಂಜರಿಕೆಯವಳಾದ ನಾನದನ್ನು ಅತೀ ಸಮೀಪದ ಗೆಳೆತಿಯರಲ್ಲದೇ ಬೇರ್ಯಾರಿಗೂ ತೋರಿಸುತ್ತಿರಲಿಲ್ಲ. ಮುಂದೆ ಮದುವೆ, ಉದ್ಯೋಗ ಎಂದು ಬರೆಯಬೇಕೆಂಬ ತುಡಿತದ ನಡುವೆಯೇ ಸಮಯದ ಅಭಾವದಲ್ಲಿ ಬರವಣಿಗೆ ಕುಂಟುತ್ತ ಸಾಗಿತ್ತು. ಯಥಾಪ್ರಕಾರ ನಮ್ಮನಮ್ಮೊಳಗಲ್ಲದೇ ಹೊರಗಿನ ಪ್ರಪಂಚಕ್ಕೆ ಅದು ಪ್ರವೇಶಿಸಲಿಲ್ಲ. ೨೦೦೪ರಲ್ಲಿ "ಸ್ಪಂದನ" ಎಂಬ ಹೆಸರಿನ ಪುಟ್ಟದೊಂದು ಕವನಸಂಕಲನ ನನ್ನ ಮಾವನವರ ಪ್ರಕಾಶಕಮಿತ್ರರೊಬ್ಬರ ಸಹಾಯದಿಂದ ಹೊರಬಂತು. ನನ್ನ ಇಚ್ಛಾನುಸಾರ ಸಮಯವನ್ನು ಬಳಸಬೇಕು ಮತ್ತು ಬರವಣಿಗೆ ಹಾಗೂ ಹಾಡುವುದರ ಸಹವಾಸದಲ್ಲಿ ಉಳಿದ ಜೀವನ ಕಳೆಯಬೇಕೆಂಬ ಉದ್ದೇಶದಿಂದ ೨೦೦೮ ರಲ್ಲಿ ನಾನು ಬಿ ಎಸ್ ಎನ್ ಎಲ್ ನ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಿಂದ ಸ್ವ-ಇಚ್ಚೆಯ ನಿವೃತ್ತಿ ಪಡೆದುಕೊಂಡೆ ಮತ್ತು ಆಗಿನಿಂದ ಎಲ್ಲೋ ಕೈಜಾರಿ ಹೋಗುತ್ತಿದ್ದ ಆ ಹವ್ಯಾಸಗಳನ್ನು ಮುಚ್ಚಟೆಯಿಂದ ನನ್ನ ದಿನಚರಿಯೊಳಗೆ ವಾಪಾಸು ತಂದೆ. ಈಗ ಅವು ನನ್ನ ಮೆಚ್ಚಿನ ಮಿತ್ರರು ಮತ್ತು ನಾನವುಗಳ ಆರಾಧಕಳು. ಇತ್ತೀಚೆಗೆ ಗೆಳತಿ ದೀಪಾಶಿವ "ನಿನ್ನ ಬರವಣಿಗೆ ನಾಲ್ಕುಜನರ ದೃಷ್ಟಿಗೆ ಬೀಳದ ಹೊರತು ಸುಧಾರಿಸಲಾರದು, ತಪ್ಪುಗಳೂ ನಿನಗೆ ಕಾಣಬೇಕು, ಮೆಚ್ಚುಗೆಯೂ ಹರಿದುಬರಬೇಕು. ಆಗಲೇ ಆ ಕಲೆ ಬೆಳೆಯುವುದು" ಅಂತ ಹೇಳಿ ಬಲವಂತವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲು ಹೇಳಿದಳು. ಹಾಗೆ ನನ್ನ ಬರಹಗಳು ಎಫ್ ಬಿ ಮತ್ತು ಬಿ ಎಮ್ ವಿ ಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಅಲ್ಲಿಂದ ಕೃಷ್ಣಮೂರ್ತಿ ಸರ್ ಕನ್ನಡ ಬ್ಲಾಗ್ ಗೆ ಪರಿಚಯಿಸಿದರು. ಇಲ್ಲಿನ ಎಲ್ಲಾ ಸನ್ಮಿತ್ರರ ಪ್ರೋತ್ಸಾಹ ನನ್ನ ಉತ್ಸಾಹವನ್ನು ನೂರ್ಮಡಿಸಿದೆ. ಇದೀಗ ಬಹಳಷ್ಟು ಜನರ ಸಲಹೆಯಂತೆ ಸಹೋದರ ಪ್ರಕಾಶ್ ಶ್ರೀನಿವಾಸ್ ರವರ ಸಹಾಯದಿಂದ ನನ್ನ ಬ್ಲಾಗ್ ತೆರೆಯಲ್ಪಟ್ಟಿದೆ.

ಒಮ್ಮೊಮ್ಮೆ ಸ್ವಾನುಭವಕ್ಕೆ ಮತ್ತೊಮ್ಮೊಮ್ಮೆ ನನ್ನ ಪರಕಾಯ ಪ್ರವೇಶಕ್ಕೆ ತಕ್ಕಂತೆ ಭಾವಶರಧಿಯಲ್ಲೇಳುವ ಅಲೆಗಳ ಭರತ ಇಳಿತಗಳಿಗನುಗುಣವಾಗಿ ಇದೋ ಕೆಲವು ಬರಹಗಳು- ನನಗಾಗಿ ಮತ್ತು ನಿಮಗಾಗಿ.




೪೨) ಹಸಿವಿನ ಕರೆ



ದ್ರೋಣರ ಪರೀಕ್ಷೆಯಲಂದು ಅರ್ಜುನನಿಗೆ

ಮರದ ತುದಿಯ ಹಕ್ಕಿಯ ಕಣ್ಣುಮಾತ್ರ ಕಂಡಂತೆ,

ನನ್ನ ಹೆಮ್ಮೆಯ ತೋಟದೊಳ ಬಂದು ನಿಂತ,

ಬೀದಿ ಗುಡಿ ಸುವ ವಳ ಮಗಳಿಗೆ

ಅಲ್ಲಿನ ಹ ಸಿರು, ಜಾಜಿ ಹೂವಿನ ಕಂಪು,

ಪಾರಿಜಾತದ ಗಿಡದ ಮೇಲಿನ ಗಿಣಿಸಾಲು

ಗುಲಾಬಿಯ ಮೇಲಿನ ಬಣ್ಣದಚಿಟ್ಟೆಗಳು

ಅಕಾಶಮಲ್ಲಿಗೆಯ ಹೂಗೊಂಚಲು ....

ಯಾವವೂ ಕಾಣದೆ, ಮನೆಯೊಳಗಿದ್ದ

ನನ್ನ ಮಗಳ ಕೈಯ್ಯಲ್ಲಿನ ತಿಂಡಿಪೊಟ್ಟಣ

ಮಾತ್ರ ಕಾಣುತ್ತಿತ್ತು.............



ಪಂಚೇಂದ್ರಿಯಗಳಿಗಿಂತ ಹೊಟ್ಟೆಯ ಕರೆ

ಮತ್ತು

ಎಲ್ಲ ಆಸೆಗಳಿಗಿಂತ ಹಸಿವಿನ ಮೊರೆ

ಬಲಶಾಲಿಗಳೆನಿಸಿದವು.



೪೩) ನಿನ್ನ ಹುಟ್ಟುಹಬ್ಬಕೆ



ನಿನ್ನ ಹುಟ್ಟುಹಬ್ಬ ಇಂದು,

ಏನು ಉಡುಗೊರೆ ಕೊಡಲಿ" ಎಂದರೆ,

"ನಿನ್ನ ನಗು" ಎಂದೆಯಲ್ಲಾ,

ಇದಕಿಂತ ಬೇರೆನಗೆ ಬೇಕೆ?

ಏನು ಸಿಹಿ ಮಾಡಲಿ ಎಂದರೆ,

"ನಿನ್ನ ಮುತ್ತು" ಎಂದೆಯಲ್ಲಾ,

ಇದಕಿಂತ

ರಸಿಕತೆಯೆನಗೆ ಬೇಕೆ?

ದೇವರ ಬಳಿಸಾರಿ ನಮಿಸುವಾ ಎಂದರೆ,

ನಮ್ಮೊಲವಲ್ಲೇ ಆತನಿರುವ ಎಂದೆಯಲ್ಲಾ,

ಇದಕಿಂತ ಧನ್ಯತೆಯೆನಗೆ ಬೇಕೆ?

ವಯಸು ಮುಂದೋಡುತಿದೆ ಎಂದರೆ,

ಹುಡುಗಿ ನೀನಾಗಿರೆ, ನಾನೆಂದೂ ಯುವಕನೇ ಎಂದೆಯಲ್ಲಾ

ಇದಕಿಂತ ಮಾತೆನಗೆ ಬೇಕೆ?

ಹೊಸದಿರಿಸು ಧ ರಿಸೆಂದಿತ್ತರೆ,

ನಿನ್ನ ಘಮ ಬೆರೆತಾಗ ಹಳತೂ ಹೊಸತೆಂದೆಯಲ್ಲಾ,

ಇದಕಿಂತ ಮೆಚ್ಚುಗೆಯೆನಗೆ ಬೇಕೆ?

ಹೀಗೇ.......

ನನ್ನದಕೂ ನೀನೇ ಕೊಟ್ಟು, ನಿನ್ನದರಂದೂ ನನಗೇ

ಸೊಗವೆರೆಯುತಿರುವ ನೀನು,

ನನ್ನ ದೊರೆಯಲ್ಲ, ಪ್ರೀತಿಯ ಧಾರೆ.

ನನ್ನ ದೇವರಲ್ಲ, ನೆಮ್ಮದಿಯ ತವರು.



೪೪) ಬಸುರಿಬೆಕ್ಕು

ಬಸುರಿ ಬೆಕ್ಕಿನದು ಬಾಗಿಲಲ್ಲಿ ನಿಂತು ಕೂಗಾಟ

ಒಳಗವಳಿಗೆ ಬಿಡದೆ ಹಳೆಯ ನೆನಪುಗಳ ಕಾಟ.

ಒಡಲಲೇನೋ ಮೊಳೆತದ್ದು ಮೊದಲು ತಿಳಿದಾಗಿನ ಪುಳಕ

ತನ್ನದರೊಡನೆ ಅದರದೂ ಸೇರಿದಾಗಿನ ಉಸಿರ ತಾಳಮೇಳ,

ಒಡಲೊಳಗಿನ ಇರುವನು, ತನ್ನರಿವಿಗು ಹರಿಸಿದ ಮಿಸುಕಾಟ.

ಸದ್ದಿಗೋ ಹಸಿವೆಗೋ, ಬೆಚ್ಚಿ ಒದ್ದ ಪುಟ್ಟಕಾಲ ಸಂದೇಶ.

ಹೀಗೆ..........

ನೂರುನೋವೊಳಗೂ ಮುದ ನೀಡಿದ್ದ ನಿರೀಕ್ಷೆ, ಕೊನೆಗೆ ತಂದ ನಿರಾಸೆ.

ಚೈತನ್ಯದ ಚಿಲುಮೆಯಂದು ಹೊರಬಂದಾಗ ನಿಶ್ಚೇತನವಾದ ಅಸಹ್ಯಗಳಿಗೆ.

"ಬೇಡಮ್ಮಾ, ಕದ ತೆರೆಯಬೇಡ, ಇಲ್ಲೆ ಮರಿ ಮಾಡಿ, ಅದರಾಸೆಗೆ

ಕಂಟಬೆಕ್ಕು ವಾಸಹೂಡಿ, ಮರಿಯ ಕಾಯ್ವ ಸಹವಾಸ ಬೇಡವೆಮಗೆ"

ಮನೆಯೊಳಗಿಂದ ಮನೆಯೊಡತಿಯ ನಕಾರದ ಆದೇಶ

ಮನದೊಳಗಿಂದ ಕದತೆರೆಯೆಂಬ ತುಂಬು ಭಾವಾವೇಶ.

ಕೊನೆಗೊಮ್ಮೆ.........

ತುಂಬುಕಂಗಳಿಂದ ಒಳಗೆ ಸ್ವಾಗತಿಸಿ ಹೇಳಿದಳು

"ಬಾರೆ ಗೆಳತಿ, ತಾಯ್ತನದ ನಿನ್ನ ಕನಸು ಚೂರಾಗದು,

ನಿಶ್ಚಿಂತಳಾಗಿರು ಇಂದಿನಿಂದ ನಿನ್ನ ಮರಿಯು ನನ್ನದು"



೪೫)

೧) ಬೀಜವೇ, ನೆಲವೇ?



ನಾ ನಿನ್ನೊಳಗೆ ಬಿತ್ತಿದ್ದು ಗೊಡ್ಡುಬೀಜವೇನೋ,

ಮೊಳಕೆಯೊಡೆಯಲೇ ಇಲ್ಲ ನೋಡು.

ಆದರೆ ನೀ ಬಿತ್ತಿದ್ದು ಮೊಳೆತು,

ನನ್ನೊಳಗಿಲ್ಲಿ ಹಚ್ಚಹಸುರಾಗಿದೆ.

ಬೀಜದ ಸತ್ವ ಪ್ರಶ್ನಿಸಿದ್ದು ನನ್ನ ಆತ್ಮವಿಮರ್ಶೆ.

ಆದರೆ ನನ್ನದೇ ಆತ್ಮವಿಶ್ವಾಸ ಹೇಳುತಿದೆ,

ಬೀಜ ಮೊಳೆಯುವುದಕ್ಕೆ ನೆಲವೂ ಹಸನಿರಬೇಕು.



೨) ಮೌನದ ಬಿಸಿ



ಭಾವ ಬಳ್ಳಿಯಲಿ ಅರಳಿಹ ಸ್ನೇಹಕುಸುಮವೊಂದು

ಕಂಪು ತಾರದೆ ನಿನಗೆ ವಾಸನೆಯೆನಿಸಿದ್ದು ಯಾಕೆ?

ನೀ ನನ್ನತ್ತ ತೋರಿದ ಬೆಟ್ಟು,

ಅದರತ್ತ ತಲುಪಿದೆ ಕುಡುಗೋಲಾಗಿ.

ಗುಬ್ಬಿಗೆ ಬ್ರಹ್ಮಾಸ್ತ್ರಬೇಕಿಲ್ಲ,

ಈ ಬಳ್ಳಿ ಕುಯ್ಯಲು ಅಷ್ಟೆಲ್ಲ ಬೇಕಿಲ್ಲ,

ನಿನ್ನ ಉದಾಸೀನವೇ ಸಾಕು,

ಈ ಹೂವ ಬಾಡಿಸುವುದಷ್ಟು ಕಷ್ಟವಲ್ಲ,

ನಿನ್ನ ಮೌನದ ಬಿಸಿಯೇ ಸಾಕು.





೪೬) ಹಸಿರು ನೆನಪಿಸಿದ ಕಪ್ಪು



ಹಸುರು ರತ್ನಗಂಧಿಯ ಗಿಡದ ಮೇಲೆ

ಹಸುರು ಗಿಣಿಗಳ ಸಾಲು.

ಎರಡರ ಆತ್ಮಮಿಲನವಾದಂತೆ

ಅಲ್ಲಿರಲಿಲ್ಲ ಪ್ರತ್ಯೇಕತೆಯ ನೆರಳು

ಅಲ್ಲಿನ ಒಟ್ಟು ಸಾರಾಂಶ ಹಸುರೇ ಆಗಿತ್ತು.

ಹಸುರ ನೋಟದಲೇಕೆ ಮನಸು ಕಪ್ಪು ಕಾಣುತಿದೆ?

ತಪ್ಪುಗಳ ರಾಶಿಯಿದ್ದಾಗಲೂ ಹೀಗೆಯೇ

ನಿನ್ನದು ನನ್ನದೆಂದು ವಿಂಗಡಿಸಲಾಗದು

ನನ್ನದು ನಿನ್ನದ್ದ, ನಿನ್ನದು ನನ್ನದ್ದ ಇಮ್ಮಡಿಸಿ

ಅಲ್ಲೂ ಸಾರಾಂಶವೊಂದೇ ಮೂಡುವುದು,

ಆದರದರ ಬಣ್ಣ ಕಪ್ಪು.

ಕಣ್ಣ ಕಣ್ಣೀರಲ್ಲಿ ಕೆಂಪಾಗಿಸುವ ಕಪ್ಪು

ಎದೆಯ ಹಸಿರ ರಕ್ತ ಬಗಿಯುವ ಕಪ್ಪು.



೪೭)

೧) ಮರೆಯದಿರು



ನನಗೆ ತಾಗಲೆಂದೇ ನೀ ಕಳಿಸಿದ್ದು

ಬಂದು ತಲುಪಿದೆ, ಧನ್ಯವಾದಗಳು.

ಅಲ್ಲಿ ಬಿಸಿಯಾಗಿಯೇ ಹುಟ್ಟಿದ್ದರೂ,

ನನ್ನ ತಲುಪಿದಾಗ ಬಿಸಿಯಿರಲಿಲ್ಲ.

ಅಲ್ಲಿ ಚುಚ್ಚಲೆಂದೇ ಹೊರಟ ಬಾಣವಾದರೂ,

ಇಲ್ಲಿ ತಲುಪಿದ್ದು ಹೂವ ಹಿತಸ್ಪರ್ಶವಾಗಿ.

ಅಲ್ಲಿ ಸಿಟ್ಟು ಅದಕವಳಿಯಾಗಿ ಹುಟ್ಟಿದ್ದರೂ,

ಇಲ್ಲಿಗದು ನನ್ನನೆಮ್ಮದಿಯ ಜೊತೆ ಬಂದಿತ್ತು.

ಕೋಪಿಸಿಕೊಂಡಾದರೂ ಸರಿ, ಜೀವವೆ

ನೆನೆಯುತಿರು, ತೊರೆಯದಿರು,

ತೊರೆದು, ಮರೆಯದಿರು.



೨) ನಡೆದೀತೆ?



ಬಾಯಾರಿದ ಧರೆಯ ತಣಿಸುವಾಸೆಯಲಿ

ಮೋಡ ಹನಿಯಾಗತೊಡಗಿದ್ದಾಗಲೇ

ಅಕಾಲಗಾಳಿ ಬೀಸಿ ಮೋಡವ ಹೊತ್ತೊಯ್ದಿತೆಂದು

ಹಿಂದೆಯೇ ಮಳೆತುಂಬಿ ತಂದ ಇನ್ನೊಂದಕ್ಕೆ

ಧರೆ ಒಡ್ಡಿದ್ದ ಸೆರಗ ಮುಚ್ಚಿ ನಿರಾಕರಿಸಿದರೆ

ಅದರದೂ, ಅದರ ಸಂತಾನದ್ದೂ ಬಾಳು ನಡೆದೀತೆ?



೪೮) ಚೌತಿಯ ಚಂದ್ರ



ಅಂದು ಚೌತಿ, ನನ್ನಮ್ಮ ನನ್ನ ಪುಟ್ಟಿಗಂದಳು

"ಬಾ ಒಳಗೆ, ಚಂದ್ರನ ನೋಡಬೇಡ."

"ಯಾಕಜ್ಜೀ..?"-

ಪುಟ್ಟಿಯ ಪ್ರಶ್ನಾಮಾಲಿಕೆಯ ಹೊಸಮುತ್ತು.

ಗಣಪತಿಯ ಕತೆಗೆ ತಣಿಯದ ಪ್ರಶ್ನೆ ನನ್ನತ್ತ.

"ಆಮೇಲೆ ಹೇಳ್ತೇನಮ್ಮಾ" ಅಂದ

ನಾನೀಗ ಯೋಚನೆಯ ಕೂಪದೊಳಗೆ.

ಅದೇ ಸೊಗವೆರೆಯುವ ಚಂದ್ರ, ಅದೇ ಆಗಸ,

ಅದೇ ರಾತ್ರಿ, ಅವೇ ಕಾಂಬ ಕಂಗಳು.

ನಿನ್ನೆ ನಾಳೆಗಳಲವನು ಕಂಗಳ ಸೊಬಗು.

ಚಿಂತನೆಯ ಬದಲಾದ ಹಿನ್ನೆಲೆಯಲ್ಲಿ

ಇಂದು ಮಾತ್ರ ನೋಟಕೂ ನಿಷಿಧ್ಧ.

ಪ್ರಶ್ನೆಯಲಿ ಕಳೆದು ಹೋಗಿದ್ದೆ,

ಅಂಗಳದಿ ನಿಂದು ಅವನನೇ ನೋಡುತಿದ್ದೆ

ಅಮ್ಮ ಅಪವಾದದ ಭಯವೆಬ್ಬಿಸಿದಳು

ನಾನಂದೆ, "ನಾಳೆ ಕಂಡವರಾರು?

ಅಪವಾದವೆದುರಿಸಲು ನಾ, ಎಸಗಲು ಅವರು

ಇಲ್ಲದೆಯೇ ಹೋಗಬಹುದು, ಆದರೆ

ಇಂದಿನ ಚಂದ್ರ, ಮತ್ತವನ ಚೆಲುವೇ ನಿಜ

ನೋಡು ಬಾ ನೀನೂನೂ.



೪೯) ಮಾತುಮುತ್ತುಗಳು



೧)

ನಾ ನಿಂತ ನಿಲುವಲ್ಲಿ

ನನ್ನ ಪಾದದಡಿಯ ನೆಲದರಿವು ನನಗಷ್ಟೇ ಗೊತ್ತು.

ಹೂವೆಂದೋ ಇಲ್ಲ ಮುಳ್ಳೆಂದೋ

ನೀವು ಊಹಿಸಬಹುದು, ನಿಜ ಕಾಣಲಾಗದು

೨)

ಹಗಲುರಾತ್ರಿಗಳಂತೆ ಮಾತುಮೌನಗಳಿಗೂ,

ಕಾಲನಿಗದಿಯುಂಟು, ಕಾರ್ಯಕಾರಣಗಳುಂಟು.

ಎಷ್ಟು ಬಯಸಿದರೂ ಅವು ಅದಲುಬದಲಾಗವು.

ಹಾಗೆಂದು....

ದಿನ ಅಥವಾ ಬಾಯಿ ನಮ್ಮದಲ್ಲವೆನ್ನಲಾಗದು.



೫೦) ಚುಟುಕುದನಿ

೧)

ಕಂದನೆಂದೊಡನೆ ಅವಳ ಕಣ್ಮನಗಳಾವರಿಸುವ ನೀನು

ಬೇರ್ಯಾರೂ ಅಲ್ಲಿರಬಾರದೆಂದು ಅವಳ ಬಂಜೆಯಾಗಿಸಿದೆಯಾ?

೨)

ಸುಲಭವಾಗಿ ಅಕ್ಷರಗಳಾಗುವ ಈ ಎಲ್ಲಾ ಭಾವನೆಗಳು

ಮಾತಾಗುವ ಎಷ್ಟೋ ದಿನದ ಕನಸು ಕನಸಾಗಿಯೇ ಉಳಿಯಿತು.

೩)

ನೀ ನನ್ನ ಪ್ರೇಮಿಸಿದೆ ಎಂದರಿತಂದೇ ನಾನಿಲ್ಲವಾದೆ

ನಿನ್ನೊಳಗೇ ಕಳೆದುಹೋದದ್ದು ನಿನಗೇ ಸಿಕ್ಕದ ನೋವೇ?

೪)

ಗಾಢಮೋಡದ ಜೊತೆ ಬಂದು, ಭ್ರಮನಿರಸನ ಮಾಡುವ ಇತ್ತೀಚಿನ ಮಳೆಯಂತೆ

ಹೇಳಲೇಬೇಕೆನಿಸಿದ್ದು ಧಾವಿಸಿ ಬಂದು ಗಂಟಲಲ್ಲೇ ಕೆಲ ಹನಿಸುರಿಸಿ ಮೌನವಾಯಿತು.

೫)

ದೇವರಿಲ್ಲ ಎನ್ನುವವರೇ, ನಾಳೆ ಬಯಸಿದಲ್ಲೆಲ್ಲೂ ಸಾಂತ್ವನವಿಲ್ಲವಾದಾಗ,

ಅವನ ಮೌನಭರವಸೆಗೇ ನೀವೂ ಕಿವಿಯಾಗುವುವಿರಿ, ಒಪ್ಪಲಾರಿರಿ ಅಷ್ಟೇ.

೬)

ಸಿಹಿ ತಿನ್ನಗೊಡದ ಕಾಯಿಲೆಗೆ ಅಳುತ್ತಾ ಆ ದೊಡ್ಡ ಮನೆಯೊಡತಿ

ಹಸಿವೆ ತಾಳದೆ ಸತ್ತ ಕಂದಮ್ಮನ ಮಣ್ಣುಮಾಡಲು ಚಿಲ್ಲರೆ ಕಾಸಿತ್ತಳು.



೫೧)

೧)ಆತ್ಮದ ಬಂಧ



ಇಲ್ಲವೆನಿಸಿದುದರ ಕೊರಗಲ್ಲಿ ನೀ ಸವೆಸಿದೆಲ್ಲ ಕ್ಷಣಗಳು

ಇಲ್ಲವಾಗದೆ ಮರೆಯಾದುದಕೆ ಮಣಭಾರದ ಹೊರೆಯೇ ಹೌದು

ಆತ್ಮಗಳೆರಡರ ಬಂಧ ಜನ್ಮದಿಂದ ಜನ್ಮದವರೆಗೆ.

ಅದೆಲ್ಲಿಗೂ ಹೋಗಲಾರದು,

ಅಲ್ಲೇ ನಿನ್ನೊಳಗಿಂದ ನಿನ್ನನೇ ವೀಕ್ಷಿಸುತಿಹುದು.

ನಿನ್ನ ಕಣ್ಣೀರಿಗೆ ಅತ್ತು, ನೀ ನಗುವಾಗ ನಗುತಿಹುದು.



೨) ನಾ ಒಳ್ಳೆಯವಳು



ಆಡದೆ, ಒಳ್ಳೆಯವಳೆನಿಸುವ ನಿಟ್ಟಿನಲ್ಲಿ

ಕಳಕೊಂಡ ನೆಮ್ಮದಿಯ ಕ್ಷಣಗಳ ಹೋಲಿಕೆಯಲ್ಲಿ

ಪಡಕೊಂಡ ಕೆಡುಕೆನಲಿಲ್ಲದ ಸಮಾಧಾನ

ಬರೇ ಸ್ವಲ್ಪ, ಒಪ್ಪುವ ಮಾತೇ.

ಆದರೂ..................

ನನ್ನವರಲಾಗಲಿ, ಅದಲ್ಲದವರಲಾಗಲಿ

ತಪ್ಪಿಲ್ಲದೆ ಅನುಭವಿಸುವಾಗಲೂ

ಆಡಿ ಕೆಟ್ಟವಳೆನಿಸಿಕೊಳುವ ಧೈರ್ಯವಿಲ್ಲ.



೫೨) ಹೀಗೆರಡು ಪ್ರಶ್ನೆಗಳು



ಹಗಲೆಲ್ಲ ಜೊತೆಗಿದ್ದು ಸಾಕಷ್ಟು ಸುಖಿಸಿ,

ಪ್ರತಿರಾತ್ರಿಯೂ ಇಲ್ಲಸಲ್ಲದ ಕಾರಣವೊಡ್ಡಿ

ದೂರಾಗುವ, ಜಗದ ಇನ್ನೊಂದೆಡೆಗೆ

ಅದೇ ಸುಖವರಸಿ ಹೋಗುವ ರವಿಗಾಗಿ

ಮತ್ತೆ ಪ್ರತಿದಿನ ಬೆಳಿಗ್ಗೆ ಕಾಯುವ ಈ ಕಮಲದ್ದು

ಪ್ರೀತಿಯೆಂಬ ತಾಳ್ಮೆಯೇ ಅಥವಾ

ಪ್ರೀತಿಯೆಂಬ ಪೆದ್ದುತನವೇ ?!



ತನ್ನಲೇ ಪ್ರಾಣವಿರಿಸಿಕೊಂಡ ಇಳೆಗೆ

ಭಾನು ಉರಿಯಿತ್ತು ನೋಡುವ,

ತನ್ನಲೇ ನಲಿವನಿರಿಸಿದ ಚಕೋರಕೆ ಚಂದ್ರ

ಮಾಸವೊಂದರ ಕಾಲ ಕಾಣದೆ ಸತಾಯಿಸುವ,

ಈ ಉಪೇಕ್ಷೆ ................

ಇಳೆಯ ಮೇಲೆ ಭಾನುವಿನ,

ಚಕೋರನ ಮೇಲೆ ಚಂದ್ರಮನ,

ನಂಬಿಕೆಯ ಫಲಿತಾಂಶವೇ?





೫೩) ಗಿಡದ ಮೋಸ



ಅಲ್ಲೊಂದು ತೋಟ, ಒಳಗೆ ಹೂವಿಲ್ಲದ ಒಂದು ಹೂಗಿಡ.

ಹೂಬಿಡುವಷ್ಟು ಬೆಳೆಸದೆ ಆಕಾರಕಾಗಿ ಕತ್ತರಿಸುವ ಮಾಲಿ

ಅಲ್ಲಿ ನೋವು ಎಂದಿನಂತೆ ಸೆಳೆಯಿತು,

ದಿನವೂ ನಾ ಮುಟ್ಟಿ ಸ್ಪಂದಿವುದು ಶುರುವಾಯಿತು

ಮೊದಲೆಲ್ಲ ನಕ್ಕು ಅಲುಗಾಡಿದ್ದು ಮುಂದೊಮ್ಮೆ ಮುಳ್ಳಲಿ ಚುಚ್ಚಿತು

ಹೂವಾಗದ ಜನ್ಮ ಮುಳ್ಳಾದಾಗ ಚುಚ್ಚುವುದೇ ಅದರ ಧರ್ಮ-

ನನ್ನ ವಿಶ್ಲೇಷಣೆ.

ಮರುದಿನವೂ ಚುಚ್ಚಿದಾಗ ಎಲ್ಲೋ ಸಣ್ಣ ನೋವು

ಹಲವು ಗಾಯಗಳ ನಂತರ ಮನಒಲ್ಲದಿದ್ದರೂ

ಪರೀಕ್ಷೆಗಾಗಿ ದೂರದಿಂದ ವೀಕ್ಷಿಸಿದೆ.

ನಾ ಬಾಗಿ ಮುಟ್ಟಿದಾಗ ಮಾತ್ರ ಮುಳ್ಳುಜಾಗೃತ

ನಾನಿರದಾಗ ಗಿಡದ ನೋವಿನದೇ ಪ್ರದರ್ಶನದಾಟ

ಪ್ರೀತಿಯ ತಾಳ್ಮೆ ಗುಲಾಮತನವೆಂದುಕೊಂಡು

ತಮಗೆ ಮಿಡಿವ ಜೀವಗಳ ಚುಚ್ಚಲಿಕೇ ಮುಳ್ಳನೇಳಿಸುವದ

ನಾನೊಪ್ಪುವುದಿಲ್ಲ, ಆ ವ್ಯಕ್ತಿತ್ವಕ್ಕಿನ್ನು ಮಿಡಿಯುವುದಿಲ್ಲ.

ಈಗ ನಾ ಆ ತೋಟಕೇ ಹೋಗುವುದಿಲ್ಲ.





೫೪)

೧) ಬರೆವವರ ತುರ್ತು



ಹೂವು ಹಕ್ಕಿ ಬಾನು ಚುಕ್ಕಿಗಳು

ನೋವುನಲಿವು ಮೋಸದ್ರೋಹಗಳು

ಮಿಡಿತ ತುಡಿತ ಸರಸವಿರಸಗಳು

ಪ್ರೀತಿಪ್ರೇಮ ನಾಡುನುಡಿಗಳು

ಇವಿಷ್ಟೇ ಕವನವಾಗುವವೆಂದುಕೊಂಡಿದ್ದೆ.

ಹಸಿವೆ ಸಾವು ದಾಸ್ಯ ವಿಷಾದಗಳೂ

ಮಹಾಕಾವ್ಯಗಳಾಗುವುದ ಕಂಡು

ಬರೆಯಹೊರಟವಗೆ ಆಳಕಿಳಿಯುವ

ಮತ್ತು

ತೇಲುದೃಷ್ಟಿಯಲಿ ನೋಡಲಾಗದ

ಅನಿವಾರ್ಯತೆಯ ಅರಿವಾಯಿತು.



೨)ನೋಟ ಮತ್ತು ದೃಷ್ಟಿ

ಕಾಂತಿ ಕಾಣಬೇಕಾದರೆ ಕಾಂತಿಯರಸೊ ದೃಷ್ಟಿ ಬೇಕು

ಹೂಗಿಡದಲ್ಲಿ ಹೂವೂ ಇದೆ, ಮುಳ್ಳೂ ಇದೆ

ಅಂದೆಂದೋ ಚುಚ್ಚಿದ ಮುಳ್ಳ ನೆನೆಯುತ್ತಾ

ಬಳಿಸಾರಿದರೆ, ಭಯವೇ ಆಗುವುದು,

ಕಣ್ಣು ಹೂವ ನೋಡಿದರೂ, ದೃಷ್ಟಿಯಲಿ ಮುಳ್ಳೇ ಇದ್ದು,

ಹೂವ ತಡವಲಾಗದು, ಕಣ್ಮುಚ್ಚಿ ಮೈಮರೆಯಲಾಗದು



೫೫) ಪ್ರೀತಿ ನಾಪಾಸಾಗದು



ಪ್ರೀತಿಯ ಪರೀಕ್ಷಿಸುವುದು ಸಲ್ಲ,

ಅದು ನಾಪಾಸಾಗದು, ಆದರೆ ನಾವಷ್ಟೇ.

ಸೋಲುವ ಭಯವದಕಿಲ್ಲ.

ಪ್ರೀತಿಯೇ ಆದರೆ ಅಲ್ಲಿ ಶರತ್ತಿರುವುದಿಲ್ಲ,

ನಿರೀಕ್ಷೆ ಹುಸಿಯಾದರೆ, ಆ ಗಳಿಗೆಗಷ್ಟೇ,

ಪ್ರೀತಿ ಹುಸಿಯಾಗುವುದಿಲ್ಲ.

ರಾಮನೇ ಪರೀಕ್ಷಿಸಿ ಸೋತನಲ್ಲ!?

ಋಣಾನುಬಂಧವಿದ್ದಲ್ಲದು ಇರುವುದಷ್ಟೇ,

ಅದಕೆ ದೇವ- ಮಾನವರ ವ್ಯತ್ಯಾಸ ಗೊತ್ತಿಲ್ಲ.

ದಿನಕೊಮ್ಮೆ ಮರೆಯಾಗುವ ಸೂರ್ಯಗೆ ಸಾವಿದೆಯೇ?

ಹೊರಗಣ್ಣ ಮುಚ್ಚಿ ಒಳಗಣ್ಣಲದ ಕಾಣುವಾ.

ನಮ್ಮೊಳಗೇ ಹುಟ್ಟಿದ್ದು, ನಮ್ಮದೇ ಎಂದು ನಂಬುವಾ





೫೬) ಪ್ರೀತಿ ಕಾಣಿಸದು



ಪ್ರೀತಿ ಗಾಳಿಯಂತೆ, ಕಾಣಿಸದು,

ಉಸಿರಾಡಿಸುವುದು.

ಪ್ರೀತಿ ಕಂಪಿನಂತೆ, ಕಾಣಿಸದು,

ಮೈಮನ ತುಂಬುವುದು.

ಪ್ರೀತಿ ಖುಶಿಯಂತೆ, ಕಾಣಿಸದು,

ಮೈನವಿರೇಳಿಸುವುದು.

ಪ್ರೀತಿ ದೈವದಂತೆ, ಕಾಣಿಸದು,

ಬೀಳದಂತೆತ್ತುವುದು.

ಅದು ಹರಕೆಗೆ, ಹೊಗಳಿಕೆಗೆ, ಕಾಣಿಕೆಗೆ, ಹಾಸಿಗೆಗೆ

ಇಂಥವ್ಯಾವುವಕ್ಕೂ ಒಲಿಯದು.

ಅದೊಲಿಯುವುದಾದರೆ ನಂಬಿಕೆಗೆ, ನಂಬಿಕೆಗೆ

ಮತ್ತು ನಂಬಿಕೆಗೆ ಮಾತ್ರ





೫೭) ಬಾಳೆಂಬ ಕನ್ನಡಿ



ಬಾಳು ಕನ್ನಡಿಯಂತೆ

ನಮ್ಮೊಳಗ ನೇರ ಬಿಚ್ಚಿಡುವುದು

ಸೊಗಸಲ್ಲಿದ್ದರೆ ಸೊಗವ ,ಕೆಡುಕಿದ್ದರೆ ಕೆಡುಕ

ಪ್ರೇಮವಿದ್ದರೆ ಪ್ರೇಮವ, ದ್ವೇಷವಿದ್ದರೆ ದ್ವೇಷವ

ತಂದು ಮುಂದಿಡುವುದು.

ನಿನ್ನ ಕಾಣಿಸಲೆಂದು ಅವನ ಮುಂದದನಿಟ್ಟರೆ,

ಅಲ್ಲಿ ತನ್ನೊಳಗ ಕಂಡು ನಿನ್ನದೆಂದೆಣಿಸುವ

ಅವರಿವರ ಮಾತು ಬಿಡು,

ಮುಂದಿರುವ ಕನ್ನಡಿಯ ಮಾತ್ರ ನಂಬು.

ಮೆಚ್ಚುವಂಥದ್ದಿದ್ದರೆ ಬೆಳೆಸು

ಇಲ್ಲದಿದ್ದರೆ ಕಾಯಕಲ್ಪದಿ ಮೂಡಿಸು

ಅದನೂ, ನಿನ್ನನೂ ತಿಕ್ಕಿ ಬೆಳಗಿಸು

ಆಗಲೊಮ್ಮೆ...........

ಸುಂದರ ಬಿಂಬ ಮೂಡದಿದ್ದರೆ ಕೇಳು



೫೮) ದಿಟ್ಟ ನಿಲುವು



ಊರ ದೇವರ ಜಾತ್ರೆ,

ಉತ್ಸವ ಮೂರ್ತಿಯ ಮೆರವಣಿಗೆ

ನನ್ನ ಗಿಡವಂದೇ ಅರಳಿಸಿದ ಅಚ್ಚಬಿಳಿ ಗುಲಾಬಿಯ

ಮೂರ್ತಿಗರ್ಪಿಸೊ ಆಸೆಯಲಿ ಹಿಡಿದು ಕಾದಿದ್ದೆ.

ಹೂವು ಕೊಸರಿದಂತೆ, ಒಲ್ಲೆ ನಾ ಎಂದಂತೆ....!

ಕೈ ಸಡಲಿಸಿದೆ, ಬಿತ್ತು ನನದೆ ಪಾದದ ಮೇಲೆ.

"ದೇವಸನ್ನಿಧಿಗಿಂತ ಈ ಪಾದ ಹಿತವೆನಿಸಿತೇ?!!!"

ಹೂವು ಮಾತಾಡಿತು.....

"ಆ ಮೂರ್ತಿಯೇ ಕಾಣಿಸದಷ್ಟು ಹೂವಲ್ಲಿದೆ.

ಈಗ ಮೂರ್ತಿ ನನ್ನ ಗಮನಿಸದು,

ಬರೇ ಸಹಿಸಿ ಹೊರುವುದು.

ನೀನೆರೆದ ನೀರು ನನ್ನ ನೆತ್ತರಾಗಿಹುದು

ನೀನೆರೆದ ಪ್ರೀತಿ ನನ್ನ ಚೆಲುವೆ ಆಗಿಹುದು

ನನ್ನಿರುವೇ ಇಂದು ನಿನ್ನ ಸಂಭ್ರಮವಾಗಿಹುದು

ನನ್ನ ಸಹಿಸಿಕೊಳುವ ಆ ಗದ್ದುಗೆಗಿಂತ,

ಸಂಭ್ರಮಿಸುವ ನಿನ್ನ ಪಾದುಕೆಯೇ ಮೇಲು"

ಪುಟ್ಟ ಹೂವ ನಿಲುವು ಬೆಟ್ಟದಷ್ಟು

ದಿಟ್ಟವೆನಿಸಿತು, ದಿಟವೂ ಹೌದನಿಸಿತು.



೫೯) ಕ್ಷಮಿಸು ಜೀವವೇ....



ನಾನಾಗಲೇ ಬಂದಾಯ್ತು,

ನನ್ನದೆಲ್ಲವ ನಿನ್ನದಾಗಿಸಿಯಾಯ್ತು

ನನ್ನ ನಡೆ ಸಪ್ಪಳ ಮೆತ್ತಗಿತ್ತೇನೋ,

ಇಂದಿನವರೆಗೂ ನೀ ಕೇಳದಾದೆ.

ಕ್ಷಮಿಸು ಜೀವವೇ........

ನೀನಾಗ ಕಾಯುತಿದ್ದುದು ಅದಕಲ್ಲವೇನೋ

ನಾ ಬಾಗಿಲದೂಡಿ ಒಳನಡೆದದ್ದೂ ಸರಿಯಲ್ಲವೇನೋ

ಈಗ ನೀನಿಲ್ಲಿಂದ ಅಲ್ಲಿಗೆ ಕರೆಯುತಿರುವೆ,

ಬರಲೇನೂ ಇಲ್ಲಿಂದು ಉಳಿದಿಲ್ಲ,

ಅಲ್ಲಿ ಹಳತಾಗಿರುವುದ ನೀ ಕಾಣುತಿಲ್ಲ.



೬೦)ಹೀಗೆರಡು ದಾರಿಗಳು



ತಿರುವಿರದ, ಕವಲಿರದ ದಾರಿಯ ಪಥಿಕ,

ನೇರ ನಡೆಯುತಿರಬೇಕು

ದಾರಿ ತನ್ನಷ್ಟಕ್ಕೆ ಕೊನೆಯಾಗುವ ಮೊದಲು

ಮನದಾಸೆಗೆ ದಿಕ್ಕು ಬದಲಿಸಿದರೆ

ದಾರಿಗಳೇ ಇರದ ಕಾಡುಪಾಲು,

ಇಲ್ಲ,

ಕೊನೆ ಕಾಣದ ಕಣಿವೆ ಪಾಲು.



ಮುನ್ನಡೆಯುವವರು-

ಪಾಲಿಗೆ ಬಂದದ್ದು ಹೇಗಿದ್ದರೂ ಸರಿ

ದಾರಿ ಹೋದಂತೆಯೇ ನಡೆಯುತಿರಬೇಕು.

ಅದ ಬಯಸದವರು

ಹಿಂತಿರುಗಬೇಕಾದರೆ ಅದೇ ದಾರಿಯಲ್ಲ,

ವಿಧಿತೋರಿದ್ದಲ್ಲದ ಆರಿಸುವ ಧೈರ್ಯವಿರಬೇಕು



೬೧) ಪಿಸು ಮಾತುಗಳು



೧)

ದೇಹವ ನಂಬುವದಕ್ಕೊಂದು, ಮನಸ ನಂಬುವುದಕ್ಕೊಂದು

ಹೀಗೆ ಪ್ರೇಮಕ್ಕೆರಡು ವ್ಯಾಖ್ಯೆಗಳಾದಾಗ ಹೃದಯ ಪೆಚ್ಚಾಯಿತು.

೨)

ನೀ ಮುಂದೆಯೇ ಸಾಗುತಿರು, ಗುರಿ ನಿನ್ನ ಸಮೀಪಿಸಲಿ

ಹಿಂದೆಯೇ ನಾನಿದ್ದೇನೆ, ಯಾಕೆಂದರೆ, ನೀ ಈಗ ನನ್ನ ಗುರಿ

೩)

ನೋಯಿಸಿದಕೆ ಕ್ಷಮಿಸು,

ನೋವಿಳಿಸಲೆಂದೇ ಬಂದೆ, ದಾರಿಯಲಿ ನಗು ಹೆಕ್ಕಿ ತಂದೆ

ಅದರ ಕಂಪಲ್ಲಿ ನಿನ್ನ ನಿರಾಸೆ ಇದ್ದುದು ಕಾಣಲೇ ಇಲ್ಲ.

೪)

ನಾನಂಥದ್ದೇನೂ ಮಾಡದಾದೆ, ನಿನ್ನ ದೂರೂ ಸರಿಯೆ.

ನನಗಾಗದ್ದ ನಿನ್ನಿಂದ ಬಯಸಲಾರೆ, ಆದರೆ

ಒಮ್ಮೆ ಯೋಚಿಸುವೆಯ, ನೀ ನಾನಾಗಿದ್ದರೆ.....?



೬೨) ಆಗ ನಾನಿರುವುದಿಲ್ಲ.....



ನನ್ನ ಅಳಿಸಬೇಕೆಂದ ನಿನ್ನ ಮಾತು ಕೇಳಿತು

ಯಾರೆಂದು ನೀ ಹೇಳಿದ್ದಿರಬಹುದು,

ನಾ ಕೇಳದಾದೆ.

ನನ್ನ ನಾ ಅಳಿಸಲಾರೆ- ಯಾಕೆಂದರೆ,

ನೀ ನನ್ನೊಳಗಿದ್ದೀಯಲ್ಲಾ....!

ಬಹುಶಃ ನಿನ್ನಿಂದಲೂ ಅದಾಗದು- ಯಾಕೆಂದರೆ,

ನಾನಿರುವುದು ನಿನ್ನ ಹಣೆಬರಹದಲ್ಲಿ (ನೀ ನನದರಲ್ಲಿ)

ಮತ್ತು ಬರೆದವನೂ ಹಣೆಬರಹವಳಿಸಲಾರ.

ನಿನಗೊಂದು ಹಿಡಿ ತೃಪ್ತಿಯ ನಗು ತರುವುದಾದರೆ,

ಎಂದಿನಂತೆ ನಿನ್ನ ಯತ್ನಕೆ ಶುಭ ಹಾರೈಸುವೆ.

ಪವಾಡನಡೆದು ಮುಂದೊಮ್ಮೆ ಅದು ಸಾಧ್ಯವಾಗುವುದಾದರೆ,

ಈಗಲೇ ಮನಸಾರೆ ಅಭಿನಂದಿಸಿಬಿಡುವೆ

ಯಾಕೆಂದರೆ....ಆಗ ನಾನಿರುವುದಿಲ್ಲವಲ್ಲಾ.......



೬೩) ಸಂಬಂಧ



ಸಂಬಂಧಕ್ಕೊಂದು ಹಣೆಪಟ್ಟಿ ಇರಕೂಡದು.

ಹೆಸರಿದ್ದರೆ ಕಾಯ್ದುಕೊಳುವ ಚಿಂತೆಯಿಹುದು

ಅಲ್ಲಿ ನಿಭಾಯಿಸುವ ಹಿಂಸೆಯಲ್ಲ, ತಾನಿಲ್ಲವಾಗುವ ಅರ್ಪಣೆಯಿರಬೇಕು

ಅಲ್ಲಿ ಕೊನೆಯ ಚಿತ್ರಣವಲ್ಲ, ನಿರಂತರ ಹರಿವಿನರಿವಿರಬೇಕು

ಉಳಿಸುವ, ಅಳಿಸುವ ಯೋಚನೆಯಲ್ಲ, ತಂತಾನೇ ಬೆಳೆವ ಸಲೀಸಿರಬೇಕು

ಪಲ್ಲವಿಸಿದಾಗ ಬಣ್ಣದ ಚೆಲುವಲ್ಲ, ಕಾಣದ ಕಂಪು ಎದ್ದು ತೋರಬೇಕು

ಅಲ್ಲಿ ನಿಬಂಧನೆಯಲ್ಲ, ನಿರ್ಬಂಧವಿಲ್ಲದ ಮುಕ್ತತೆಯಿರಬೇಕು

ಸಂಶಯ- ಭಯದ ಕೂಸು ಮತ್ತು ನಂಬಿಕೆಯ ಸಾವು.

ಅದಕಲ್ಲಿ ಎಡೆಯಿಲ್ಲದಿರಬೇಕು.................

ಇಂಥದ್ದೊಂದು ಅನುಬಂಧ ನನಗೀಗ ಬೇಕು



೬೪) ಪಾಚಿಗಟ್ಟದಂತೆ....



ಪಾಚಿಕಟ್ಟದಂತೆ ಮನಸ ಕಾಯುತಿರಬೇಬೇಕು

ಆರ್ದ್ರತೆ ಇದ್ದಲ್ಲದು ಕಷ್ಟವೇ..ಆದರೂ

ಪಾಚಿ ಹುಟ್ಟದಂತಿಡಲು ಪ್ರಯತ್ನಿಸಬೇಕು

ಒಮ್ಮೊಮ್ಮೆ ಮುಚ್ಚಳವ ತೆಗೆದಿಡಲುಬೇಕು

ಆಗಾಗ ನೇಸರನೂ ಒಳಗಿಣುಕಬೇಕು

ತೇವ ನಿಲ್ಲದೆ, ಮೆಲ್ಲ ಹರಿಯುತಿರಬೇಕು

ಭಾವ ತುಂಬಿದರೊಮ್ಮೆ ಖಾಲಿಯಾಗಿಸಬೇಕು

ಸಂಬಂಧ ಪಟ್ಟಭದ್ರವಾಗದಿರಬೇಕು

ಬಂದದ್ದು ಒಳಹೊರಗೆ ನಡೆಯುತಿರಬೇಕು

ಹಳತು ಹೊಸತಕೆ ಜಾಗಮಾಡಿಕೊಡಬೇಕು

ಇಷ್ಟೆಲ್ಲ ಮಾಡಿಯೂ..........

ಕಟ್ಟಿದರೆ ಪಾಚಿ ಗಾಢವಾಗಬಿಡಬಾರದು

ಹುಟ್ಟಿನಲೆ ಒರೆಸಬೇಕು, ನಿರ್ಲಕ್ಷ್ಯ ಸಲ್ಲದು

ಗಟ್ಟಿಪಾಚಿಯ ಕೆರೆಯದೇ ತೆಗೆಯಲಾಗದು

ಕೆರೆತ ಮಿದುಮನವ ಗಾಯಗೊಳಿಸದಿರದು

ಹಾಗಾಗಿ ..................

ಪಾಚಿಗಟ್ಟದಂತೆ ಮನಸ ಕಾಯುತಿರಬೇಕು



೬೫) ಇನ್ನೇನು ಕೇಳಲಿ?



ನಿನ್ನ ಹರಕೆಯ ಯಾದಿಯಲ್ಲಿ,

ನಿನ್ನ ಕೋರಿಕೆಯ ಪಟ್ಟಿಯಲ್ಲಿ

ನಿನ್ನದೇ ಹೆಸರಿಲ್ಲ

ಪರರ ಇಲ್ಲಗಳ "ಇಲ್ಲವಾಗಿಸು"

ಎಂದೆನಗೆನುವ ನಿನಗೆ ಬೇಕಾದ್ದಿಲ್ಲವೆ?

-ನನ್ನ ದೈವವೊಂದು ದಿನ ಕೇಳಿದಂತೆ.....



ನಾನುತ್ತರಿಸಿದೆ-

ಜಗದ ನೋವುಗಳ ನಡುವೆ ನನದೊಂದೆ ನಲಿವು,

ನಲಿವುಗಳ ನಡುವೆ ನನದೊಂದೆ ನೋವು

ಒಂಟಿತನ ಕಾಡಿ ಓಡಿ ಹೋದಾವು

ಅಲ್ಲದೆ,

ನನ್ನ ದನಿ ತಲುಪುವ ಸನಿಹದಲ್ಲಿ ನೀನಿರಲು

ನಾ ಕೇಳಲು ಇನ್ನೇನಿದ್ದೀತು?



೬೬) ಚುಟುಕಗಳು



೧)

ರಾಮ ರಾವಣರ ನಾವೇ ಅವರಾಗಿ ನೋಡಬಹುದು,

ಆವಾಹಿಸಿಕೊಳಬೇಕಿಲ್ಲ, ನಮ್ಮೊಳಗಿಬ್ಬರೂ ಇದ್ದಾರೆ

ಒಮ್ಮೆ ಅವ, ಇನ್ನೊಮ್ಮೆ ಇವ ಏಳುತಿರುತಾರೆ

ಸಾಧ್ಯವಾದರೆ, ಹನುಮನ ಅವನಾಗಿ ನೋಡುವ

ಅವಾಹಿಸಿಕೊಳ್ಳುವಾ,

ಹಾಗೆ ಶರಣಾಗುವುದ ಕಲಿಯುವಾ

೨)

ಊರ್ಮಿಳೆಯ ನೋವಿಗೆ ಮಹಾಕಾವ್ಯ ಕಿರಿದಾಯ್ತು

ಸೀತೆಯದಕೆ ಭೂಮಿಯೊಡಲೇ ಬಿರಿಯಿತು

ಆದರೆ,

ಕೈಕೇಯಿಯದಕೆ, ತಾರೆಯದಕೆ, ಮಂಡೋದರಿಯದಕೆ

ಒಂದಕ್ಷರವೂ ಇಲ್ಲವಾಯಿತೇ?



೬೭) ಬೆಟ್ಟದಡಿಯ ಗಿಡ



ಒಮ್ಮೆ ಹಸಿರಾಗೊ, ಒಮ್ಮೆ ಒಣಗೋ ಬೆಟ್ಟವೊಂದು ,

ಪಕ್ಕ ದೊಡ್ಡ ಮರ, ಸುತ್ತ ದೊಡ್ಡ ಬಯಲು,

ತುದಿಯಲೊಂದು ದೇಗುಲ, ಒಳಗೆ ಮೊಳಗೊ ಗಂಟೆ

ಬೇಸರ ನೀಗಲವಕೆ ಪರಸ್ಪರರ ಸ್ನೇಹವಂತೆ.



ಗಾಳಿಯೇರಿ ಬಂತಲ್ಲಿಗೊಂದು ಅಜ್ಜನಗಡ್ಡ

ಆ ಅಗಾಧತೆಯ ಬುಡದಿ ಬಯಸಿ ಸ್ನೇಹ

ನೆಲೆಯೂರಲು ನಿಲಿಸಿತು ಹಾರಾಟ



ಬೀಜಮೊಳೆತು ಗಿಡ ಹುಟ್ಟಿ

ಅಭಿಮಾನವೇ ಹಸುರಾಗಿ, ಆರಾಧನೆಯೇ ಹೂವಾಗಿ....

ಹೀಗೆ ಕಾಲ ಭೂತವಾಗುತಿತ್ತು.



ಬೀಜ ಬೆಟ್ಟವ ಕತ್ತೆತ್ತಿಯೇ ನೋಡುತಿತ್ತು

ತನ್ನಾಸೆಗದು ಕಣ್ಣಾಗುವುದ ಕಾಯುತಿತ್ತು

ಬೆಟ್ಟಕೆ ಬಾಗಿ ಬುಡ ಕಾಣಲಾಗಲೇ ಇಲ್ಲ,

ಗಿಡಕೆ ಬೆಟ್ಟದೆತ್ತರ ತಲುಪಲಾಗಲೇ ಇಲ್ಲ





೬೮) ಮೂರು ಜಿಜ್ಞಾಸೆಗಳು

೧)

ನಿನಗೆನಲಿ ಮಾತಿಲ್ಲ ಎಂದ ಮೌನದೊಳಗೇ ಮಾತ ಹುಡುಕುವ ಕಣ್ಣು

ಮರುಭೂಮಿಯಲಿ ಮೃಗತೃಷ್ಣೆಯ ಬೆನ್ನಟ್ಟುವ ಒಂಟೆಯಂತೆ.

ಯುಗಗಳೇ ಕಳೆದರೂ ಮರುಭೂಮಿ, ಒಂಟೆ, ಮೃಗತೃಷ್ಣೆ

ಎಲ್ಲ ಹಾಗೆಯೇ ಉಳಕೊಂಡಿರುವುದು ಸೋಜಿಗವಲ್ಲವೆ?!

೨)

ಗಾಯ ಮಾಡಿದ ಚೂರಿಗೆ ಗಾಯ ಮಾಡಿದವರುಂಟೇ?

ಹುಶಾರಾಗಿ ವ್ಯವಹರಿಸಬಹುದು ಇಲ್ಲ, ದೂರವಿಟ್ಟುಬಿಡಬಹುದು.

ಆದರೆ ಗಾಯ ಮಾಡುವ ಅನುಬಂಧಗಳಿಗೆ.....??

ವ್ಯವಹಾರವಿದೆಯೇ ಅಲ್ಲಿ, ಅಥವಾ ದೂರವಿಡಬಹುದೇ?

೩)

ಪ್ರೇಮ- ದ್ವೇಷಗಳ ನಡುವಿನದು, ಮುಸ್ಸಂಜೆಯಂತೆ

ಹಗಲಿನ ಮುಂದುವರಿಕೆ ಅಥವಾ ರಾತ್ರಿಯ ಹುಟ್ಟು

ಮುಸ್ಸಂಜೆ ಕಾಲದಧೀನ, ಮುನ್ನಡೆದು ರಾತ್ರಿಯಾಗಲೇಬೇಕು

ಆದರೆ...

ನಮ್ಮಾಧೀನದ್ದ ಹಿಂದೆಳೆದು ಅನುಭೂತಿಯಾಗಿಸಬಹುದೇ?!



೬೮) ಹನಿಹನಿ ಅನಿಸಿಕೆ



೧)

ಕಾಯುತಿದ್ದ ಕಾದ ಭೂಮಿಯ ಮೇಲೆ

ಹಲಕಾಲದ ನಂತರ ಬಿದ್ದ ಕೆಲವೇ

ತುಂತುರು ಮಳೆಹನಿ

ಮಣ್ಣಿನೊಳ ಹೊಕ್ಕು ಕೂತಿದ್ದ

ವಾಸನೆಯ ಹೆಕ್ಕಿ ತಂದು

ಹಿತವಾದ ಪರಿಮಳವಾಗಿಸಿದವು

೨)

ಅವಮಾನವ ಯಾರಾದರೂ ನುಂಗಬಹುದು

ಅನಿವಾರ್ಯತೆ ಗಂಟಲೊಳಗಿಳಿಸುವುದು

ಖಾಲಿಬಯಲಲೊಮ್ಮೆ ಅದ ಹೊರಕಕ್ಕಬಹುದು

ಆದರೆ ಅರಗಿಸಿ ಅದನೂ ದಕ್ಕಿಸಿಕೊಳುವ

ತಾಕತ್ತಿರುವುದು ಪ್ರೀತಿಗೆ ಮಾತ್ರ.

೩)

ಕಣ್ಮುಂದೆ ಕಣ್ತುಂಬುವಂತೆ ನಿಂತ ನಾನು

ಕಾಣಬಾರದೆಂದು ಕಣ್ಮುಚ್ಚಬೇಡ

ಭ್ರಮೆಯ ಕವಚ ಸುರಕ್ಷವೆಂದು

ನಾನಿಲ್ಲದ ಸುಳ್ಳಿನೊಳಹೊಕ್ಕಬೇಡ

ಕಾಲಲೊದ್ದಾದರೂ ಒಮ್ಮೆ ನೋಡು

ನಾನಿರುವ ಆ ಸ್ಪರ್ಶ ನಿನಗರಿವಾದರೆ ಸಾಕು



೬೯) ನಗುವಿನಾಸೆ



ನಾನೊಂದು ಖಾಲಿನಗು,

ಸಹಜತೆಯ ಚಪ್ಪಡಿಕಲ್ಲಿನಡಿ ಮುಚ್ಚಿ

ಸೊಗ ಮಾತ್ರ ಹೊರಸೂಸೊ ಪೊಳ್ಳುನಗು



ಸುಖಕೆ ನಕ್ಕು, ನೋವಿಗಳಬಲ್ಲವರೇ,

ನಿಮಗೆ ನಾನಾಗೊ ಆಸೆ, ನನಗೆ ನೀವಾಗುವದ್ದು



ಸಹಜವಾಗಿ, ಸರಳವಾಗಿರುವುದೆನಗೂ ಇಷ್ಟವೇ

ಸುಳ್ಳುಸುಳ್ಳೆ ಸಿಂಗರಿಸಿಕೊಳಬೇಕು, ನಗುವಾಗಿ ಹುಟ್ಟಿರುವೆ



ನನ್ನಲೂ ಇವೆ ಹಲವು ಹಣ್ಣಾದ ಹುಣ್ಣು,

ಕಾಲ್ಚೆಂಡಾಗಿಸಿ ಬಿಸುಟ ಹಸಿಗಾಯಗಳು

ಬೆನ್ನಲಿವೆ, ಒಡಲಾಳದಲಿವೆ, ತೋರಲಾರೆ



ಸುಳ್ಳುಮರೆವ ಮುಲಾಮ ಹಚ್ಚಿ ಮುಚ್ಚಿರುವೆನಲ್ಲಾ..,

ಗಾಳಿಯಾಡದೆ, ಅವು ಒಣಗುತಿಲ್ಲ, ಮಾಯುತಿಲ್ಲ.



ನಗುವಾಗುತ, ಒಳಗೊಳಗೇ ಅತ್ತದ್ದು ಸಾಕಾಗಿದೆ

ಕಣ್ಣೀರಾಗಿ ಧುಮ್ಮಿಕ್ಕುವ ರಭಸವೀಗ ಬೇಕಿದೆ.



ಪುಣ್ಯಕೋಟಿಯ ಹಾಗೆ ಸೆರಗೊಡ್ಡಿ ಕೇಳುವೆ

"ವಿಧಿಯೇ, ಆಣೆ ಮಾಡುವೆ, ಮತ್ತೆ ಹಿಂತಿರುಗುವೆ

ಒಂದೆ ಒಂದು ಕ್ಷಣದ ಮಟ್ಟಿಗೆ ಅಳುವಾಗುವೆ



ಗಾಳಿ ಒಳಗೂ ಬೀಸಿ ಗಾಯಗಳು ಮಾಯಲಿ

ಹಳತು ಖಾಲಿಯಾಗಿ ಹೊಸನೋವಿಗೆ ತೆರವಾಗಲಿ



ನಗುವಿನೊಳಗೂ ಇರುವ ಅಳು ಜಗಕೊಮ್ಮೆ ಕಾಣಲಿ

ನಗೆಯ ವರ ಕೇಳ್ವವರ ಭ್ರಮೆ ಹರಿದು ಬಿಡಲಿ"



೭೦)ಮಾತು ಮಳೆಯಲಿ ಮೀಯೋಣ



ಅವಮಾನದ ನೆರಳು ತಂಪಲ್ಲ, ಒಪ್ಪಿದೆ.

ಅದರ ಪರಿಧಿಯಿಂದಾಚೆ ಯಾಕೆ ಬರಲೊಲ್ಲೆ?



ಝಾಡಿಸಿ ಒದ್ದೆದ್ದು ಬರಬಲ್ಲೆಯ, ಇಲ್ಲ ತಾನೇ?

ಪ್ರೀತಿಮರದಡಿಯ ಆ ನೆರಳಲಿ,

ಅನಿವಾರ್ಯತೆಯ ಚಾಪೆಗೊರಗುವುದು ರೂಢಿಯಾಗಿದೆ ತಾನೇ...



ಉರಿಸುವುದಕೇ ಕೆಲವು, ಬೇಯುವುದಕೇ ಕೆಲವು.

ಪಾತ್ರ ಹಂಚಿಕೆಯಾಗಿಬಿಟ್ಟಿದೆ, ನಾಟಕವೂ ಸುರುವಾಗಿದೆ,

ಬದಲಾಗುವುದು, ಹಿಂತೆಗೆಯುವುದು- ಈಗಾಗದು.



ಈಗೇನು, ಉರಿ ತಣಿಸಬೇಕೇನೇ, ನಾನಿಲ್ಲವೇ ಗೆಳತಿ?

ಬಾ, ಮಾತು ಮಳೆಯಲಿ ತೋಯ್ದು ಮೀಯೋಣ,

ಯಾವ ಉರಿ ದಹಿಸುವುದು ನೋಡಿಯೇ ಬಿಡೋಣ.



೭೧) ಶಹಬ್ಬಾಸ್!



ನೀರಿನಾಳಕೆ ಇಳಿದ ಮಿಂಚುಳ್ಳಿ,

ಶಹಬ್ಬಾಸ್!

ಮೀನು ಹಿಡಿದೇ ಮೇಲೆ ಬಂತು

ಉಸಿರುಗಟ್ಟಿದರೂ ಗುರಿಯ ದಾರಿ ಬಿಡಲಿಲ್ಲ

ಗುರಿ ಸಿಕ್ಕಹೊರತು ಉಸಿರಾಡಲಿಲ್ಲ

ಮೇಲೇ ಹುಡುಕಿದರೆ ಕಾಣಿಸದ ನಿಧಿಗಳು

ಹಕ್ಕಿಗುಸಿರಾಗದ ಗಾಳಿಹೊತ್ತ ನೀರಲ್ಲಿಹ ಮೀನಂತೆ.

ಬೇಕಾದಷ್ಟು ಸತ್ವ ತುಂಬಿಕೊಂಡು, ಗುರಿಯ ದಿಟ್ಟಿಸಿಕೊಂಡೆ

ಉಸಿರುಕಟ್ಟಿ ತಳಕೆ ನುಗ್ಗಬೇಕು

ತಳಕಿಳಿವ ತಾಳ್ಮೆಯಿದ್ದರಷ್ಟೇ ಸಿಕ್ಕುವುದು

ಅದು ಪ್ರೀತಿಯಾದರು ಅಷ್ಟೆ, ಇನ್ನೇನಾದರು ಅಷ್ಟೆ.



೭೨)

ನಿನಗಾಗಿಯೇ

ತಂಗಾಳಿ ಮೊದಲಬಾರಿಗಿಂದು ಚುಚ್ಚುತ್ತಿದೆ

ಒಡಲೆಲ್ಲ ನಿನ್ನ ನೋವ ತುಂಬಿ ತಂದಿರುವುದಕೆ,

ಮಂದಾನಿಲವೂ ಉಸಿರುಗಟ್ಟಿಸುವಂತಿದೆ.

ದೀರ್ಘವಾಗಿ ಈಗ ಒಳಗೆಳೆದುಕೊಂಡಿರುವೆ.

ನನ್ನೆದೆಗೂಡಲ್ಲಿ ವೇದನೆಯ ಬೇರ್ಪಡಿಸಿ,

ನನ ಹೃದಯಕಿಳಿಸಿರುವೆ, ಅಲ್ಲಿದ್ದ

ಹಾರೈಕೆಯುಡುಗೊರೆಯ ಗಾಳಿರಥದಲ್ಲಿರಿಸಿ,

ಒಲವ ಕಾವಲಿರಿಸಿ, ವಿಶ್ವಾಸವ ದಾರಿದೀಪವಾಗಿಸಿ,

ನಿನ್ನತ್ತ ಕಳಿಸಿರುವೆ.

ನನ್ನದೆಲ್ಲವ ಮಾಡುವಂತೆ,

ಇದ ಅತ್ತ ಸರಿಸಬೇಡ.

ನೂರಕ್ಕೆ ನೂರೂ ನಿನಗಾಗಿಯೇ.

ಪ್ರತಿಯಾಗಿ ನನಗೇನೂ ಬೇಡ.





೭೩) ಪ್ರೇಮ ನಿಂತಿದೆ



ಪ್ರೇಮ ಹಾಗೆ ಹೀಗೆಂದು ವ್ಯಾಖ್ಯಾನಿಸುವವರಲೊಂದು ಮಾತು

ಪ್ರೇಮಕೆ ಪದಗಳಾಧಾರ ಬೇಕೆ... ? ಬೇಡ.



ನಾನದನು ಬರೆದು, ಆಡಿ, ಕರೆಯುತ್ತಲೇ ಇದ್ದೆ,

ಅಣಕಿಸುತ ಅದು ಮುಂದೋಡುತಿತ್ತು,

ನಾನು ಖಾಲಿ ಖಾಲಿ.



ಈಗ ನಾನು ಮೌನಿ,

ನಿಶ್ಯಬ್ಢವ ನೋಡೆ ತಿರುಗಿದ ಪ್ರೇಮ,

ಅಲ್ಲೇ ನಿಂತಿದೆ, ಓಡುತಿಲ್ಲ.



ಪರಸ್ಪರ ತಲುಪುವೆವೋ ಇಲ್ಲವೋ....

ಮುಖಾಮುಖಿಯಂತೂ ಆದೆವು.

ಮತ್ತು ಅದರ ಬೆನ್ನು ಕಾಣುತಿಲ್ಲ,

ಅಷ್ಟರ ಮಟ್ಟಿಗಿಂದು ನಾನು ನಿರಾಳ



೭೪) ತುಂತುರು

೧)

ನಾನು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೀರ, ಧನ್ಯವಾದಗಳು

ಆದರೆ ನನಗವು ಉತ್ತರಗಳಾಗದೆ ಪ್ರಶ್ನೆಗಳೇ ಆದದ್ದು ದುರಾದೃಷ್ಟ.

೨)

ನಾನೇನೋ ಮೈಮರೆತಿದ್ದೆ,

ನಾನಂದುಕೊಂಡವರೇ ನೀವಾಗಿದ್ದರೆ ಎಚ್ಚರಿಸಬಹುದಿತ್ತಲ್ಲ?

೩)

ಜಗತ್ತು ಭ್ರಮೆಯಲ್ಲ ಎಂದೇ ಸಾಧಿಸುತ್ತಿದ್ದೆ,

ಇಂದು ಹೌದೆನಿಸುತ್ತಿದೆ, ನಿನ್ನೆಮೊನ್ನೆಯಿಂದೀಚೆಗೆ ನಾನೂ ಮಾಯುತ್ತಿದ್ದೇನೆ.

೪)

ಎಲ್ಲ ಮುಗಿಯಿತು ಅನ್ನುವಲ್ಲಿನ್ನೇನು ನಿರೀಕ್ಷಿಸುವುದು?

ಮುಗಿಯುವ ಮುನ್ನವೇ ಹಿಂತಿರುಗಬೇಕಾದ ವಿಧಿ ನನ್ನದು

೫)

ಹುಟ್ಟು ಇನ್ನೊಂದು ಹುಟ್ಟಿಗಾಗಿ ಸಾವಿನಲ್ಲಿ ಕೊನೆಯಾಗಲೇಬೇಕು

ನಡುವೆ ಕ್ಷಣಕ್ಷಣವೂ ಜೀವ ಹೊಸ ಹುಟ್ಟು ಪಡೆದು ಜೀವನದ ಮುನ್ನಡೆ

ಎಂದೋ ಬರುವ ಸಾವ ಪ್ರತಿ ಹೆಜ್ಜೆಯಲ್ಲೂ ನಿರೀಕ್ಷಿಸಿದರೆ ವಿಶ್ವಾಸದ ಹಿನ್ನಡೆ.



೭೫) ನಾವ್ಯಾರಾಗೋಣ?



ಹಗಲ ನೆಚ್ಚುವವರು ರಾತ್ರಿಯನ್ನಾಗಲಿ,

ನೆರಳನ್ನಾಗಲಿ ಅಲ್ಲಗಳೆಯುವುದಿಲ್ಲ

ಹಗಲನ್ನು ನಂಬಿಕೆಯಲ್ಲೂ, ರಾತ್ರಿಯನ್ನು ನಿದ್ದೆಯಲ್ಲೂ

ಅನುಭವಿಸಿ ಕಳೆಯುತ್ತಾರೆ.

ನೆರಳು ಜೊತೆಗಿದ್ದಾಗ ಪ್ರಾಣಮಿತ್ರನೆನ್ನುತ್ತಾರೆ,

ಇಲ್ಲದಿದ್ದಾಗ ಮರೆತಂತಿರುತ್ತಾರೆ.

ರಾತ್ರಿಯ ನೆಚ್ಚುವವರು,

ಹಗಲ ಕತ್ತಲ ಗುಂಗಲ್ಲಿ ಕಳೆಯುತ್ತಾರೆ

ಮತ್ತು ರಾತ್ರಿ ನಿದ್ದೆ ಹೊರಗೇ ಬಿಟ್ಟು

ಕಾಡುವ ಕತ್ತಲ ಗವಿ ಹೊಕ್ಕಿಬಿಡುತಾರೆ.

ನೆರಳೇ ನಿತ್ಯವೆನುತ ಹಿಂಬಾಲಿಸುತ್ತಾರೆ

ಈಗ ನೀವೇ ಹೇಳಿ- ನಾವ್ಯಾರಾಗೋಣ?



೭೬) ಪ್ರೇಮಬೀಜ



ನಮ್ಮ ಸಹವಾಸಕೆ,

ನನ್ನೊಳಗೆ ಅನುಭೂತಿಯೊಂದರ ಜನನ

ಇನ್ನೂ ಹೆಸರಿಟ್ಟಿರಲಿಲ್ಲ, ಅದಿನ್ನೂ ಹಸುಗೂಸು.

ನಿನಗ್ಯಾಕೋ ಭೂತಕದ ತೆರಳಿಸುವ ಬಯಕೆ.

ಪದಗಳಲುಗಲಿ ತುಂಡು ತುಂಡಾಗಿಸತೊಡಗಿದ್ದೆ

ಮೊದಲ ಪೆಟ್ಟು ಬಿದ್ದಾಗ, ಏನಾಶ್ಚರ್ಯ!!!

ಅದರೊಳಗೆ ಪ್ರವಹಿಸುತಿದ್ದುದು ನನ್ನ ಕಣ್ಣೀರು

ಬೊಗಸೆಯಲಿ ಮೊಗೆಮೊಗೆದು ನಾನದನು ಕುಡಿದೆ

ನೀ ಕಡಿಯುತ್ತಲಿದ್ದೆ, ನಾ ಕುಡಿಯುತ್ತಲಿದ್ದೆ.

ಕೊನೆಗೊಮ್ಮೆ ನೀ ತಲೆ ತರಿದೆ ನೋಡು,

ಬುಳುಬುಳು ಹರಿದ ಕಣ್ಣೀರಧಾರೆ,

ಬಿತ್ತೊಂದು ಹನಿ ಕೈಜಾರಿ ಎದೆನೆಲದ ಮೇಲೆ

ಅರರೆ......... ನೋಡಿದೆಯಾ......?!.

ಹನಿಯೊಡಲಲರಳಿದೆ ಮತ್ತದೇ ಅನುಭೂತಿ!!!

ಈಗ ಹೆಸರಿಟ್ಟಿರುವೆ,

ಅವ ರಕ್ತಬೀಜನಾದರೆ ಇವ ಪ್ರೇಮಬೀಜ.

ಈಗ ನಾನೇನೂ ಕುಡಿಯುತಿಲ್ಲ,

ಕಡಿದಂತೆ ಕುಡಿಯೊಡೆಯುವುದು ನಿಂತಿಲ್ಲ.

ಅದ ತೆರಳಿಸಲು ನೀ ಕಡಿವುದಕೆ ನನದೊಂದು ಜೈ

ಪ್ರೇಮಬೀಜದಲೇ ತುಂಬುತಿದೆ ಈಗ ನನ್ನ ಮನಮೈ.



೭೭) ಹೂವು ಹಾವಾಗುವ ಮುನ್ನ



ಪುಷ್ಪಗುಚ್ಛದೊಳಗೇನೋ ಗಲಿಬಿಲಿ, ಅಲ್ಲಿ

ಹೂವಿನ ರೂಪದಲೊಂದು ಹಾವಿಹುದಂತೆ

ಹೇಗೆ ಬೇರ್ಪಡಿಸುವುದು?!!!

ತನ್ನನ್ನು ಹೂವೆಂದೇ ಭಾವಿಸಿದ್ದ ಪ್ರತಿಯೊಂದರ ಮುಖದಿ

ಸಣ್ಣ ಸಂಶಯ- "ನಾ ಹಾಗೆ ಕಂಡಿಲ್ಲ ತಾನೇ?"

ಹಾವಲ್ಲದ ಹೂವೊಂದು ದ್ವಂದ್ವದಿ ಸಿಲುಕಿ

ತಾನು ಹಾವೇ ಅಂದುಕೊಳುವ ಮುನ್ನ

ಹಾವ ನಿಜವಾಗಿ ಕಂಡವರೇ, ಅದ ಕಿತ್ತೆಸೆಯಿರಿ.



೭೮) ಜಿಟಿಜಿಟಿ ಮಳೆಹನಿ

೧)

ಕಣ್ಣೀರಾಗದಿರು ಮನಸೇ, ನಿನ್ನದೇನೂ ದೊಡ್ಡದಲ್ಲ,

ಇವರು ಕೊಲ್ಲದವರನ್ನು ಕೊಂದ ಆರೋಪ ನಿರೂಪಿಸಿಯೇ ಶಿಕ್ಷಿಸುವವರು..... .

೨)

ಈಗಷ್ಟೇ ಎಡವುತ್ತಾ ನಡೆಯತೊಡಗಿದ್ದೆ,

ಹಿಂದೆ ತಮ್ಮ ನಾಯಿಯ ಅಟ್ಟಿಬಿಟ್ಟರು.

೩)

ಮೊದಲ ಮೆಟ್ಟಿಲ ಹತ್ತಿ ಮೇಲ್ನೋಡುತಿದ್ದೆ, ನಡುವಿನವೆಲ್ಲ ಮಾಯವಾಗಿ ಬಿಟ್ಟವು

ಕೊನೆಯದು ಉಳಿದಿದ್ದರೂ, ನಾ ಕೆಳಗಿಳಿಯಲೇ ಬೇಕಾಯಿತು.

೪)

ಆ ಬಿಂಬ ಕಣ್ಣ ಹೇಗೆ ತುಂಬಿದೆಯೆಂದರೆ,

ನಿದ್ದೆಗಾಗಲಿ, ಕನಸಿಗಾಗಲಿ ಅಲ್ಲಿ ಜಾಗವುಳಿದಿಲ್ಲ

೫)

ಚೂರಿಯೆಂದರು, ಮಾರಿಯೆಂದರು.

ಹೆಸರ ಕೂಗಲಾಗದಿದ್ದರೆ ಸುಮ್ಮನಿದ್ದರೂ ಆಗುತ್ತಿತ್ತು.

೬)

ನಿನ್ನಲ್ಲಿ ನಾ ಕಾಣಲೆತ್ನಿಸಿದ್ದೇ ನನಗೆ ನಿನ್ನಲ್ಲಿ ಕಂಡಿತು.

ನೀನು ಮಾತ್ರ ನನ್ನಲ್ಲಿದ್ದದ್ದ ಬಿಟ್ಟು ಬೇರೆಲ್ಲವನ್ನೂ ನನ್ನೊಳಗೆ ಕಂಡೆ.

೭)

ನಾ ನಿನ್ನ ಸಂಭ್ರಮಿಸುತ್ತಿರುವೆನಾದರೆ ಅದು ನನ್ನ ಪ್ರಾಪ್ತಿ

ನೀ ನನ್ನ ಸಹಿಸಲಾರೆಯಾದರೆ ಅದು ನಿನ್ನದು.