Monday, November 26, 2012

   ನಮಸ್ಕಾರ.. ನಾನು ಅನುರಾಧಾ ಪ್ರಶಾಂತ್ ಸಾಮಗ. ನನ್ನ ಬರಹಗಳನ್ನು ಒತ್ತಟ್ಟಿಗೆ ಸೇರಿಸಿಡಲು ಅನುಕೂಲವಾಗುವಂತೆ ಭಾವಶರಧಿ ಎಂಬ ಈ ಬ್ಲಾಗ್ ನ ಬಾಗಿಲನ್ನು ತೆರೆಯುತ್ತಿದ್ದೇನೆ. ಅದರೊಳಗಿನ ಅವಕಾಶವನ್ನು ನನ್ನ ಅನಿಸಿಕೆಗಳಿಂದ ತುಂಬುತ್ತಿದ್ದೇನೆ. ನಿಮಗೆಲ್ಲರಿಗೂ ಭಾವಶರಧಿಯ ಅಲೆಗಳನ್ನು ವೀಕ್ಷಿಸಲು ಮತ್ತು ಇಚ್ಛೆಯಿದ್ದಲ್ಲಿ ಅದರಾಳದಲ್ಲಿ ಮುಳುಗೇಳಲು, ಅದರೊಡನೆ ಸಂವಾದಿಸಲು ಮನಸಾರೆ ಸ್ವಾಗತ ಮತ್ತು ತದನಂತರದ ಕಾಳಜಿಯ ಸಲಹೆಗಳಿಗೂ ಸದಾ ಸ್ವಾಗತ.


   ನಾಲ್ಕು ಗೋಡೆಗಳ ನಡುವೆ ಕಡಿಮೆಯೆಂದರೆ ಸುಮಾರು ಹತ್ತು ಹದಿನೈದು ವರ್ಷ ನಾವು ಶೈಕ್ಷಣಿಕವಾಗಿ ಕಲಿಯುವುದು, ಪದವೀಧರರಾಗುವುದು, ಎಂದು ಯಾವುದನ್ನು ಹೇಳುತ್ತೇವೋ ಅದು ಕಲಿಯುವ ಪ್ರಕ್ರಿಯೆಯನ್ನು ಕಲಿಯಲಿಕ್ಕೆ ಮಾತ್ರ ಎಂದು ನನ್ನ ಭಾವನೆಯೂ ಹೌದು, ಅನುಭವವೂ ಹೌದು. ಅದರೊಳಗಿನ ವಸ್ತುವಿಷಯದ ಮುಖಾಂತರಕ್ಕಿಂತ ಹೆಚ್ಚು ಅದನ್ನು ಅಭ್ಯಸಿಸಿದ ರೀತಿ, ಬೇಕಾದ ಶ್ರದ್ಧೆ, ಸಾಧನೆಗೆ ಇರಬೇಕಾದ ಬದ್ಧತೆ, ಪರಿಶ್ರಮದ ಗುಟ್ಟು, ಮತ್ತು ಸೋಲುಗೆಲುವಿನ ರುಚಿ-ಇವುಗಳ ಮೂಲಕ ಮುಂದಿನ ಜೀವನಕ್ಕೆ ಸಹಾಯ ಒದಗುವುದೆಂದು ನನ್ನ ಭಾವನೆ. ನಾನು ಶಾಲಾ ಕಾಲೇಜುಗಳಲ್ಲಿ ಅಭ್ಯಸಿಸಿದ ವಿಷಯವಲ್ಲದ ಸಾಹಿತ್ಯ ಇಂದು ನನ್ನ ಅತ್ಯಂತ ಅಚ್ಚುಮೆಚ್ಚಿನ ಸಂಗಾತಿಯಾಗಿದೆ, ಬದುಕುವ ಉದ್ದೇಶಗಳಲ್ಲೊಂದಾಗಿದೆ.ಓದುವ ಗೀಳಿದ್ದ ನನಗೆ ಹೇಳಿಕೊಳ್ಳುವಂಥ ಸಾಹಿತ್ಯದ ಕೌಟುಂಬಿಕ ಹಿನ್ನೆಲೆಯಿಲ್ಲದಿದ್ದರೂ ಮತ್ತು ತುಂಬಾ ಶ್ರೇಷ್ಠ ಮಟ್ಟಿನ ಓದುವಿಕೆಯಾಗಲಿ, ಅದಕ್ಕೆ ಪ್ರೋತ್ಸಾಹವಾಗಲೀ ಇರದಿದ್ದರೂ, ಚಂದಮಾಮ, ಸುಧಾ, ಪ್ರಜಾಮತಗಳಲ್ಲದೇ, ದಿನಪತ್ರಿಕೆಯ ಒಂದೂ ಅಕ್ಷರ ಬಿಡದೆ ಓದುವ ಮತ್ತದರಲ್ಲಿನ ವಸ್ತುವಿಷಯಕ್ಕಿಂತ ಹೆಚ್ಚಾಗಿ ಭಾಷೆಯ ಜಾಡನ್ನ, ಚಂದವನ್ನ ಅನಂದಿಸುವುದು ತುಂಬಾ ಖುಶಿ ಕೊಡುತ್ತಿತ್ತು. ಒಂದೇ ಒಂದು ಮನರಂಜನೆಯ ಸಾಧನವಾದ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಹಾಡುಗಳೂ ಮನಸೆಳೆದು, ನಾನೂ ಹೀಗೇ ಬರೆದು ಹಾಡಬೇಕೆಂಬ ಆಸಕ್ತಿ ಹುಟ್ಟಿದ್ದೂ ನಿಜವೇ. ನಾಲ್ಕಾರು ಸಾಲು ಬರೆದು ಹಾಡುಗಾರಿಕೆಯಲ್ಲಿ ಸ್ವಲ್ಪ ಆಸಕ್ತಿ ಇದ್ದುದರಿಂದ ರಾಗ ಹಾಕಿ ಬೇಕಾದಷ್ಟು ಸಲ ಹಾಡಿ ಆನಂದಿಸುತ್ತಿದ್ದುದೂ ಇತ್ತು. ಕುವೆಂಪು, ಬೇಂದ್ರೆ, ಶಿವರುದ್ರಪ್ಪ, -ಇವರೇ ಮೊದಲಾದ ಎಲ್ಲಾ ಕವಿಗಳ ಹಾಡುಗಳನ್ನು ಸಿಕ್ಕಿಸಿಕ್ಕಿದಲ್ಲೆಲ್ಲ ಕಲಿತು ಹಾಡುವುದೊಂದು ಹುಚ್ಚಾಗಿತ್ತು. ಆ ಹಾಡುವಿಕೆ ಅದರೊಳಗಿನ ಶಬ್ಧಗಳ ಜಾದೂವನ್ನು ಪರಿಚಯಿಸಿತು, ದೇವರ ದಯೆ, ಹಿರಿಯರ ಆಶೀರ್ವಾದ ಆ ತಿಳಿವನ್ನು ಬರವಣಿಗೆಯನ್ನಾಗಿಸಿತು. ಹಿರಿಯರಿಗಾಗಿ ಮನೆಗೆ ಬರುತ್ತಿದ್ದ ಕಾದಂಬರಿಗಳನ್ನೂ ಕದ್ದೋದಿ, ಸಿಕ್ಕಿಬಿದ್ದು "ನಿನ್ನ ವಯಸಿಗದು ಬೇಡ" ಎಂದು ಬಯ್ಸಿಕೊಂಡದ್ದೂ ಇತ್ತು. ಬಹುಶಃ ಆ ಸಮಯದಲ್ಲಿ ನನ್ನ ಆಸಕ್ತಿಗೆ ಮೇವಾಗಿ ದೊರಕಿದ ಆ ಓದು, ಆ ಕೇಳ್ಮೆ ಇಂದು ನನ್ನನ್ನು ಆಧರಿಸುತ್ತಿದೆ. ಸುಮಾರು ಹತ್ತನೇ ವರ್ಷದಲ್ಲಿ ಮೊದಲ ಕವನಬರೆದದ್ದು, ತರಂಗದಲ್ಲಿ ಪ್ರಕಟವಾಗಿತ್ತು- "ಅಜ್ಜನ ಗಡ್ಡ."

ಮುಂದೆ ಕಾಲೇಜಿನ ದಿನಗಳಲ್ಲೂ ಬರೆದಿದ್ದೆ, ಆದರೆ ಸ್ವಭಾವತಃ ಹಿಂಜರಿಕೆಯವಳಾದ ನಾನದನ್ನು ಅತೀ ಸಮೀಪದ ಗೆಳೆತಿಯರಲ್ಲದೇ ಬೇರ್ಯಾರಿಗೂ ತೋರಿಸುತ್ತಿರಲಿಲ್ಲ. ಮುಂದೆ ಮದುವೆ, ಉದ್ಯೋಗ ಎಂದು ಬರೆಯಬೇಕೆಂಬ ತುಡಿತದ ನಡುವೆಯೇ ಸಮಯದ ಅಭಾವದಲ್ಲಿ ಬರವಣಿಗೆ ಕುಂಟುತ್ತ ಸಾಗಿತ್ತು. ಯಥಾಪ್ರಕಾರ ನಮ್ಮನಮ್ಮೊಳಗಲ್ಲದೇ ಹೊರಗಿನ ಪ್ರಪಂಚಕ್ಕೆ ಅದು ಪ್ರವೇಶಿಸಲಿಲ್ಲ. ೨೦೦೪ರಲ್ಲಿ "ಸ್ಪಂದನ" ಎಂಬ ಹೆಸರಿನ ಪುಟ್ಟದೊಂದು ಕವನಸಂಕಲನ ನನ್ನ ಮಾವನವರ ಪ್ರಕಾಶಕಮಿತ್ರರೊಬ್ಬರ ಸಹಾಯದಿಂದ ಹೊರಬಂತು. ನನ್ನ ಇಚ್ಛಾನುಸಾರ ಸಮಯವನ್ನು ಬಳಸಬೇಕು ಮತ್ತು ಬರವಣಿಗೆ ಹಾಗೂ ಹಾಡುವುದರ ಸಹವಾಸದಲ್ಲಿ ಉಳಿದ ಜೀವನ ಕಳೆಯಬೇಕೆಂಬ ಉದ್ದೇಶದಿಂದ ೨೦೦೮ ರಲ್ಲಿ ನಾನು ಬಿ ಎಸ್ ಎನ್ ಎಲ್ ನ ಸಬ್ ಡಿವಿಜನಲ್ ಇಂಜಿನಿಯರ್ ಹುದ್ದೆಯಿಂದ ಸ್ವ-ಇಚ್ಚೆಯ ನಿವೃತ್ತಿ ಪಡೆದುಕೊಂಡೆ ಮತ್ತು ಆಗಿನಿಂದ ಎಲ್ಲೋ ಕೈಜಾರಿ ಹೋಗುತ್ತಿದ್ದ ಆ ಹವ್ಯಾಸಗಳನ್ನು ಮುಚ್ಚಟೆಯಿಂದ ನನ್ನ ದಿನಚರಿಯೊಳಗೆ ವಾಪಾಸು ತಂದೆ. ಈಗ ಅವು ನನ್ನ ಮೆಚ್ಚಿನ ಮಿತ್ರರು ಮತ್ತು ನಾನವುಗಳ ಆರಾಧಕಳು. ಇತ್ತೀಚೆಗೆ ಗೆಳತಿ ದೀಪಾಶಿವ "ನಿನ್ನ ಬರವಣಿಗೆ ನಾಲ್ಕುಜನರ ದೃಷ್ಟಿಗೆ ಬೀಳದ ಹೊರತು ಸುಧಾರಿಸಲಾರದು, ತಪ್ಪುಗಳೂ ನಿನಗೆ ಕಾಣಬೇಕು, ಮೆಚ್ಚುಗೆಯೂ ಹರಿದುಬರಬೇಕು. ಆಗಲೇ ಆ ಕಲೆ ಬೆಳೆಯುವುದು" ಅಂತ ಹೇಳಿ ಬಲವಂತವಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲು ಹೇಳಿದಳು. ಹಾಗೆ ನನ್ನ ಬರಹಗಳು ಎಫ್ ಬಿ ಮತ್ತು ಬಿ ಎಮ್ ವಿ ಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಅಲ್ಲಿಂದ ಕೃಷ್ಣಮೂರ್ತಿ ಸರ್ ಕನ್ನಡ ಬ್ಲಾಗ್ ಗೆ ಪರಿಚಯಿಸಿದರು. ಇಲ್ಲಿನ ಎಲ್ಲಾ ಸನ್ಮಿತ್ರರ ಪ್ರೋತ್ಸಾಹ ನನ್ನ ಉತ್ಸಾಹವನ್ನು ನೂರ್ಮಡಿಸಿದೆ. ಇದೀಗ ಬಹಳಷ್ಟು ಜನರ ಸಲಹೆಯಂತೆ ಸಹೋದರ ಪ್ರಕಾಶ್ ಶ್ರೀನಿವಾಸ್ ರವರ ಸಹಾಯದಿಂದ ನನ್ನ ಬ್ಲಾಗ್ ತೆರೆಯಲ್ಪಟ್ಟಿದೆ.

ಒಮ್ಮೊಮ್ಮೆ ಸ್ವಾನುಭವಕ್ಕೆ ಮತ್ತೊಮ್ಮೊಮ್ಮೆ ನನ್ನ ಪರಕಾಯ ಪ್ರವೇಶಕ್ಕೆ ತಕ್ಕಂತೆ ಭಾವಶರಧಿಯಲ್ಲೇಳುವ ಅಲೆಗಳ ಭರತ ಇಳಿತಗಳಿಗನುಗುಣವಾಗಿ ಇದೋ ಕೆಲವು ಬರಹಗಳು- ನನಗಾಗಿ ಮತ್ತು ನಿಮಗಾಗಿ.



1 comment:

  1. ನಮಸ್ಕಾರ ಅನುರಾಧಜಿ, ಪ್ರತಿಯೊಬ್ಬರಿಗೊ ತಮ್ಮ ಬಾವನೆಗಳನ್ನು ವ್ಯಕ್ತಪಡಿಸಲೊ ಸೂಕ್ತ ವೇದಿಕೆ ಬೇಕಾಗುತ್ತದೆ. ಆಂತರ್ಜಾಲ ಸಹ ಒಂದು. ಇಲ್ಲಿ ನನ್ನಂತವರ ಚಿಕ್ಕ ಪುಟ್ಟ ಕವಿತೆಗ್ಳ ಮೂಲಕ ನನ್ನ ಬಾವನೆಗಲನ್ನು ಹೊರ ಹಾಕುತ್ತೆನೆ. ಆದರೆ ಅವುಗಳನ್ನೆಲ್ಲ ಸಂಗ್ರಹಿಸಲು ಒಂದು ಬ್ಲಾಗ್ ಅವಶ್ಯ.ತಾವು ಅದನ್ನು ಮಾಡಿದ್ದಿರಿ. ನಿಮಗೆ ಶುಭವಾಗಲಿ.

    ReplyDelete