ಅಲ್ಲಲ್ಲಿ ಕುಂಕುಮ ವಿಭೂತಿ, ಹಾದವರ ಕರುಣಾದೃಷ್ಟಿ,
ಹಸುರಿನದರೊಡನೆ ಸಂಕಟದ ವೈದ್ಯರ ಔಷಧಿ,
ಕಣ್ಣು ತಾಗದಿರಲೆಂದೊಂದು ಮಾಲೆ- ಹೆಣೆದು ಚಪ್ಪಲಿ,
ಹರಕೆ ನೂರಡಿ ನಾ ಹರಕೆಯ ಕುರಿ, ಅಬ್ಬ...ತೀಕ್ಷ್ಣ ಈ
ಉರಿ.
ಮನೆಯೊಡತಿ ಗೃಹಪ್ರವೇಶದ ವೇಳೆ, ಅವರಪ್ಪನಿತ್ತದ್ದು
ನಾನಾಗಷ್ಟೇ ಮೊಳೆಯುತಿದ್ದೆ- ಅವಳೇ ನನ್ನ ನೆಟ್ಟದ್ದು.
ತಾನೂ, ನಾನೂ ಫಲ ಹೊರುವ ಕ್ಷಣಕೆ ಕಾದದ್ದೆ ಬಂತು
ಕಾಲಮಾತ್ರ ಉರುಳಿತ್ತು- ಫಲವತ್ತತೆ ತಲುಪದಾಗಿತ್ತು.
"ಸಿಡಿಲೆರಗಬಾರದೆ, ಹುಳತಿನ್ನಬಾರದೆ,
ಬುಡ ಕಡಿಯಬಾರದೆ, ನೆಲ ನುಂಗಬಾರದೆ"
ನಾ ಜಪಿಸುತಿದ್ದೆ, ನನನೊರಗಿ ನಿಂತವಳೆದೆ
ಅಳುತಲದೇ ನುಡಿವುದನು ಕೇಳುತಲೂ ಇದ್ದೆ.
ಕಾಣದ ಕಣ್ಣೀರ ಹೊಳೆಯೆರಡು ಸೇರಿ ಸಾಗರವಾಯ್ತು
ಕಣ್ಣೊರೆಸಿ ನುಡಿವೆವು- "ಕಣ್ಣೀರಿಳಿಸುವ ಹಕ್ಕೂ ಬಂಜೆಗಿಲ್ಲ
ನೆಟ್ಟು ನೀರೆರೆದವರೂ ಜೊತೆ ನೋಯಬಾರದಲ್ಲಾ.....
ಕಾಯೋಣ ಸಾವಿಗೆ, ಮುಂದಿನ ಜನ್ಮವೊಂದಿದೆಯಲ್ಲಾ.."
ಬಯಸಿ ಒಮ್ಮೆ, ಬಯಸದೊಮ್ಮೆ ಲೋಕ ಜರೆದಾಡುವುದು
ಬಾಯಿದ್ದೂ ಮೂಕಿಯವಳು, ಮಾತಿರದ ಮೌನಿ ನಾನು,
ತಿಳಿವುದೆನಗಷ್ಟೇ ಆ ಮೌನದರ್ಥ, ಅವಳಿಗೆನ್ನ ಭಾವಾರ್ಥ
ಕಾವುದೇ ಬಾಳಧರ್ಮವೆನುತ, ಆಶಾವಾದಕೆ ಶರಣೆನುವೆವು.
"ಹೆಣ್ಣಾಗಿ ನೀ
ಬಾ, ನಾನಾಗೇ ನಾ
ಬರುವೆ
ನಿನ್ನ ಕಂದಮ್ಮಗಳ ಕೇಕೆಗೆ ನಾ ಗರಿ ಬೀಸಿ ಆಡುವೆ.
ಗೆಳತಿ ಇಲ್ಲಿದ್ದನೂ ಸೇರಿಸಿ ಅಲ್ಲಿ ಪಡೆಯುವೆಯಂತೆ,
ನನ್ನೊಡಲ ಫಲ ನಿನ್ನೆಲ್ಲ ಶುಭಗಳಿಗೊದಗುತಾವೆ."
No comments:
Post a Comment