1)ಮರದಳಲು
------------------------------------
ಮೊಳೆತು, ಚಿಗುರಿ, ಹರಡಿ, ಉದ್ದ ಬೆಳೆದ ಮರಕೆ
ಹಸಿರಿನ ಸಂಭ್ರಮ, ಅಷ್ಟಗಲಕು ಚಾಚಿದ ಗರಿಮೆ,
ಹೂ-ಹಣ್ಣು ನೆರಳಲ್ಲದೆ, ಜಗಕುಸಿರ ತಾನಿತ್ತ ಹೆಮ್ಮೆ.
ಹಕ್ಕಿಗಳುಲಿ, ಅಳಿಲ ಓಡಾಟದ ಕಚಗುಳಿ,
ಬಳಸಿ ಬೆಳೆದ ಅವಲಂಬಿ ಬಳ್ಳಿ, ನೇತಾಡುವ ಬಾವಲಿ,
ಇಂಥ ಹಲ ಬಂಧುತ್ವಗಳ ನಡುವೆ ಸಮೃಧ್ಧ ಬಾಳ್ವೆ.
ಹೀಗಿರಲೊಮ್ಮೆ ಮರವ ಬೇರು ಕಾಡಿತು,
ಮೊಳೆತ ಕ್ಷಣದೊಡನಾಟದೊಳು ಮರ ಮುಳುಗೆದ್ದಿತು
ಬೀಜ ಫಲಿಸಿದ ಕಾಲ ಹಸಿರೂ ಬೇರೂ ಜೊತೆಗೇ ಮೂಡಿದ್ದು.
ಹಸಿರ ಮೇಲೇರಿಸಲೆಂದೆ ಬೇರು ಕೆಳಗಿಳಿದದ್ದು
ನೆಲದೊಳಗೆ ಅದೃಶ್ಯ ಬಾಳನೊಪ್ಪಿ ಅಪ್ಪಿಕೊಂಡದ್ದು.
ಬೆಳೆದು ಹರಡಿದ್ದರೂ ಅಗಲಗಲಕೆ, ಪ್ರಸಿಧ್ಧಿಯಾಗದುಳಿದದ್ದು.
ಮರ ಮೇಲೇರುತ್ತಾ ಬೇರಿಂದ ತನ್ನಷ್ಟಕ್ಕೆ ದೂರಾಯಿತು
ಸಂಪರ್ಕವೀಗ ಒಣಕಾಂಡದ್ದು, ಹಸಿರಿನದಲ್ಲ, ಪಸೆಯಲ್ಲಿಲ್ಲ.
ಬಗ್ಗಲೆಣಿಸಿದೆ ಮರ, ಬೇಕೆನಿಸಿ ಆ ಸಹಚರ್ಯದ ಮುಚ್ಚಟೆ.
ಗಿಡವಿರಲು ಬಗ್ಗದಿದ್ದುದು ಮರವಾಗಿ ಬಗ್ಗಲಾದೀತೆ?
ಮರೆತಾಗ ಕೆಲ ಬಂಧಗಳು ಮೆಲ್ಲ ಕಳಚಿಕೊಳುತಾವೆ.
ಹಳತೆನಿಸಿ ತಾವೇ ಹೊಸತಿಗೆ ಜಾಗ ಮಾಡಿಕೊಡುತ್ತವೆ.
---------------------------------------------------------------------
2)ಹೂವಿನುತ್ತರ
--------------------------
ಅರಳಿದ ಹೂವೊಂದರೊಡಲಿಂದ
ದುಂಬಿ ಹೀರಿ, ತೇಗಿ ಹೋಗುತಿತ್ತು,
ಅಷ್ಟರಲ್ಲೆ ಚಿಟ್ಟೆ ಹಾರಿಬಂದು ಕೂತಿತು.
ಹೂಮುಖದ ಅದೇ ನಗು ನನಗರಗದಾಯಿತು
"ನೋವಲ್ಲವೇನೇ ಗೆಳತಿ?" -ನನ್ನ ಪ್ರಶ್ನೆಗೆ ಹೀಗಂದಿತು-
"ಈ ಬಾಳು, ಮಧು, ನಗು ಎಲ್ಲ ದೇವನಿತ್ತ ವರಗಳು
ಜೊತೆಯಲಿತ್ತ ಹೀರಲ್ಪಡುವ ವಿಧಿಯನೆಂತು ಜರೆಯಲಿ?
ಕೆಲಹನಿ ಮಧು ದುಂಬಿಗೆ, ಕೆಲವು ಚಿಟ್ಟೆಗೆಂದೆ ಇತ್ತನು
ಹಸಿದ ಗಳಿಗೆ ನನ್ನೆಡೆಗೆ ಸಾಗೊ ದಾರಿಯನೂ ಇತ್ತನು
ಕುಡಿಯಲಿ, ತಣಿಯಲಿ ಅವನಿತ್ತುದ ಅವನಿಚ್ಛೆಯಂತೆ ಮುಗಿಸಲಿ
ನಾಕು ದಿನದ ಬಾಳು ಮತ್ತೆ ಉದುರಿಯೇ ಹೋಗುವುದು
ಇಲ್ಲ, ಬೆಡಗಿಮುಡಿ, ಒಡೆಯನಡಿ ಸೇರಿ ಬಾಡಿಯಳಿವುದು
ತೃಪ್ತಿ ನೀಡೊ ಸುಖದ ನೋವ, ನೋವು ಎನ್ನಬಾರದು"
ಪುಟ್ಟಜೀವಕೆ ದೊಡ್ಡದು, ನಮ್ಮದೆಷ್ಟು ಸಣ್ಣ ಚಿಂತನೆಯಲ್ಲವೆ?
"ನಾನು, ನಾನೇ" ಎಂಬ ಬಾಳು ಚಿಕ್ಕ ಜಗದಲಿರಿಸಿದರೆ,
"ನಿನದು, ನಿನಗಾಗಿಯೇ" ಎಂಬುದು ಅವನಡಿಗೂ ಒಯ್ಯಬಹುದು
----------------------------------------------
3)ಬೆಲೆ ತೆರಲೇ ಬೇಕು
---------------------------------------
ಅಲ್ಲೊಂದು ಹೃದಯ- ಎಲ್ಲರದರಂತೆ
ದೇಹಕೂ ಮನಸಿಗೂ ಜೀವನದಿಯ ಸೆಲೆ
ಗೋಡೆ ಮಾತ್ರ ಬಹಳ ಮೆದು, ತೇವ ಸ್ವಲ್ಪ ಜಾಸ್ತಿ
ಆರ್ದೃತೆಯುಳಿಸಿಕೊಂಡುದಕೆ ಇತ್ತ ಸೆಳೆತ ಜಾಸ್ತಿ
ಮೊದಲ ಮಳೆಯುಂಡ ಹಸಿಮಣ್ಣ ಘಮಲಂತೆ
ತನ್ನತನ ಎಲ್ಲರಂತಿಲ್ಲೆಂಬ ಗರ್ವವಂತೆ
ದಾರಿಹೋಕರೆಲ್ಲ ಒಣಗದ್ದು ವಿಶೇಷವೆಂದರು
ಬಳಿಸಾರಿ ಮುಟ್ಟಿದರು, ಉಗುರಿಂದ ಕೆರೆದರು
ಬೆರಳಲಿ ಬರೆದರು, ದೂರ ಸಾಗಿ ಜೋರು ಕಲ್ಲೆಸೆದರು
ಅಳಿಯದ ಛಾಪು ಮೂಡಿಸಿ ಅಮರರೆನಿಸಬಯಸಿದರು
ಗುರುತು ಮೂಡಿಸಲೀಗ ಸೂಜಿಮೊನೆ ಜಾಗವಲ್ಲಿಲ್ಲ
ಹಸಿಗೋಡೆ ಜೊತೆಗಾರೂ ಇಲ್ಲ, ಇವೆ ಗುರುತು ಮಾತ್ರ
ಗಟ್ಟಿಯಾಗಬೇಕದಕೀಗ, ಆಗಲೊಲ್ಲದು,
ಹುಟ್ಟುಗುಣ ಸುಟ್ಟರೂ ಬಿಟ್ಟು ಮಾತ್ರ ಹೋಗದು
ಗಟ್ಟಿಯಾದರೂ ಮುಂದೊಮ್ಮೆ ಗುಳಿಗಳು,ಗೀಚುಗಳು
ಗೀರುಗಳು, ಗಾಯಗಳು ಕಲೆಯಾಗುಳಿಯುವವು
ಸುಲಭವಲ್ಲವಲ್ಲಾ... ಎಲ್ಲರಂತಿಲ್ಲದಿರುವುದು?!
ಬೇರೆ ಎನಿಸಿಕೊಳಲಿಕೆ ಬೆಲೆಯ ತೆರಲೇಬೇಕು
------------------------------------
4)ದೇವರಿಲ್ಲ ಎಂದವರೇ
------------------------------------
ದೇವರಿಲ್ಲ ಎಂದವರೇ,
ಜಗಕೆ ಹೇಳಲಾಗದ್ದು, ತೋಡಿಕೊಳಬೇಕೆನಿಸಿದಾಗ
ಕಣ್ಮುಚ್ಚಿ ನಿವೇದಿಸಿ ನೋಡಿ, ಹಗುರಾಗುವಿರಿ.
ಕೇಳಿಸಿಕೊಂಡದ್ದು ಮೂಕ ಕಿವಿಯೊಂದು
ಅದೇ ದೇವರು
ದೇವರ್ಯಾಕೆ ಎಂದವರೇ,
ಸಂತೈಸುವರಿಲ್ಲದಿದ್ದಾಗ, ಮಿದುಮಾತೆರಡು ಬೇಕೆನಿಸಿದಾಗ
ಕಣ್ಣೀರಿಟ್ಟು ನೋಡಿ, ಕಿವಿಯಾಗುವಿರಿ.
ಸಂತೈಸಿದ್ದು ಮಾತಿಲ್ಲದ ಬಾಯಿಯೊಂದು.
ಅದೇ ದೇವರು
ದೇವರೆಲ್ಲಿ ಅಂದವರೇ,
ಸುಖದಿ ಎದೆಯ ಅರಳಿಸಿ, ನೋವಿಗೆ ಹಿಂಡುವ
ಭಾವನೆಯ ಹುಡುಕಿನೋಡಿ, ಕಾಣಲಾರಿರಿ.
ಭಾವದೊಳಗಿನ ಅದೃಶ್ಯಶಕ್ತಿ ಜಗವನಾಡಿಸುತಿಹುದು
ಅದೇ ದೇವರು
ಗಾಳಿಯಿರುವು ಕಾಣುವುದು ತೂಕವಿಲ್ಲದ್ದು ಒಡ್ಡಿಕೊಂಡಾಗ
ಆತ್ಮನಿರುವು ತಿಳಿವುದು ಆಳವಾಗಿ ತೊಡಗಿಕೊಂಡಾಗ
ಕಣ್ಣಿಗೆ ಕಾಣದ್ದೆಲ್ಲ ಇಲ್ಲ ಎನ್ನುವವರೇ,
ನಾನೆಂಬ ಭಾರ ಕಳೆದು, ಆಳಕಿಳಿಯುತ ನೋಡಿ
ಕೊನೆಗೊಮ್ಮೆ ಸಿಗುವ ದೇವಕಣವೇ ದೇವರು.
------------------------------------------------------
5)ಮಗು ತೋರಿದ ಸಾವು
--------------------------------------
ರಕ್ಕಸ ಗಾತ್ರದೆರಡು ಮನೆಯ ನಡುವೆ ಪುಟ್ಟ ಇಸ್ತ್ರಿಯಂಗಡಿ
ನಾಳೆ ಕೇಳಿದ ಬಟ್ಟೆ ಸಂಜೆಗೇ ತಲುಪಿಸುವ ಇಸ್ತ್ರಿಯವ
ಇಸ್ತ್ರಿ ಮಾಡುವುದ ಕಲಿತಿದ್ದ, ದುಡ್ಡು ಪಡೆವುದನಲ್ಲ
"ಚಿಲ್ಲರಿಲ್ಲ ನಾಳೆ" ಎಂದು ಮರೆತವರೆ ಬಹುಪಾಲು ಎಲ್ಲ
ಆ ನಸುಕಲಿ ತಗಡಗೋಡೆಯ ನೀಲಿಯಂಗಡಿ ಇರಲಿಲ್ಲ
ಮರದಹಲಗೆಯ ಮೇಲಿನ ಇಸ್ತ್ರಿ ಪೆಟ್ಟಿಗೆ ಕಾಣಿಸಲೆ ಇಲ್ಲ
ರಕ್ಷೆಯಿಲ್ಲದಿದ್ದು ಸದಾ ಕಾಡಿದ ನಾಲ್ಕು ಪುಟ್ಟಪಾದಗಳು ಇಲ್ಲ
ಇಜ್ಜಿಲಲಿ ಬರೆದ ಪಾಗಾರದೊಳಗೆ ಅವರಾಟದ ಮನೆಯು ಇಲ್ಲ
ಕೆಲಸದಾಕೆಯ ಮಾತು-" ಆಲದ ಮರಕಲ್ಲ,
ಗಸಗಸೆಯದಕೆ ನೇಣು ಹಾಕ್ಕೊಂಡನಂತಮ್ಮಾ".
ನಾನಂದೆ-"ದೇಹವೆಲ್ಲಿತ್ತು ಭಾರ, ಇದ್ದರೂ ಮನಸಿದ್ದಿರಬಹುದು"
"ಭೀತಿ ಹಿಡಕೊಂಡಿತ್ತಂತೆ"- ಅಂತೆಕಂತೆಗಳದೆ ಸಂತೆ
ವಾರಗಳೆರಡರಲ್ಲಿ ಮತ್ತೆ ಬಂದಿತ್ತಲ್ಲಿಗೆ ಹಸುರ ಪೆಟ್ಟಿಗೆ
ಒಳಗೆ ಬೋಳುಹಣೆ, ಕುತ್ತಿಗೆಯ ಚೆಲುವೆ ವಿಧವೆ
ಅತ್ತು ಊದಿದ ಕಂಗಳಂತೇ ಕಂಡ ಪುಟ್ಟ ಕಂದಗಳೆರಡು
ಎಂದಿನಂತೆ ಆ ಬರಿಗಾಲಿಗೆನ್ನ ಆಕ್ಷೇಪಕೆ ಉತ್ತರವಿಲ್ಲದಾಕೆಯ ಅಳು
ನಾ ಕೇಳದ ಪ್ರಶ್ನೆಗೆ ಕಂಬನಿಯೇ ಕತೆಯ ಶುರುವಿಟ್ಟಿತು
ಬಾಯ್ಮುಚ್ಚಿಡಲೆತ್ನಿಸಿದರೂ ಕಂದನ ಮುಗ್ಧತೆ ದನಿಯಾಯಿತು
"ಆ ಮನೆಯವರ ಸೀರೆ ಹರಿದುದಕೆ, ಅಪ್ಪನ ಪೋಲೀಸ್ ಒಯ್ದಿತು
ಅಲ್ಲಿಂದ ಬಂದವ, ತಬ್ಬಿ ಅತ್ತು ಹೋದವ ಮತ್ತೆ ಬರಲೇ ಇಲ್ಲ."
------------------------------------------
6ಗರವೂ ಅಳುತ್ತದೆ
--------------------------------
ಅಗಾಧ ಜಲರಾಶಿ ನಡುವೆಯೊಂದು ದೋಣಿ,
ಹಿಂದೂ ಮುಂದೂ ಚಲಿಸದೆ ಅಲ್ಲೆ ಹೊಯ್ದಾಡುತಿದೆ
ಪಯಣಿಗ ಹೆಣವಾದಾಗಲೇ ಹುಟ್ಟು ಬಿದ್ದು ಹೋಗಿದೆ
ದಾರಿತಪ್ಪಿದ ಅಲೆದಾಟ ಕಾಲದ ಮೇರೆ ಮೀರಿದಾಗ
ದಾರಿಪಾಡಿಗಿದ್ದ ಉಣಿಸು-ನೀರು ಮುಗಿದಾಗ
ಹಸಿವೆಗವನ ಅಂಗಾಂಗಳೊದಗಿದರೂ
ನೀರಡಿಕೆ ಆತಗೆ ಸಾವಾಗಿ ಬಂದಿತ್ತು.
ನೀರೊಳಗೇ ನೀರಡಿಕೆಗೆ ಬಲಿಯಾದ ಜೀವಕೆ
ಆ ಸಾಗರ ಕಣ್ಣೀರ ನದಿ ಹರಿಸಿತು
ಜೀವಸೆಲೆಯೆನಿಸುವ ಹೆಸರು ಹಾಗಾಗದ
ಅಸಹಾಯಕತೆಗೆ ಬಿಕ್ಕಿಬಿಕ್ಕಿ ದುಃಖಿಸಿತು
ಅದರೊಡಲೂ ಉಪ್ಪು, ಕಣ್ಣೀರೂ ಉಪ್ಪು
ಒಂದರೊಳಗೊಂದು ಲೀನವಾಗಿ,
ಬಿಕ್ಕುವಿಕೆಯದರ ಸಹಜಮೊರೆತದೊಳು ಹುದುಗಿ
ಸಾಗರದ ಅಳು ಲೆಕ್ಕಕ್ಕೇ ಸಿಗದೆಹೊಯಿತು.
----------------------------------------------------------------------------
7)ಕೊರತೆ ನೆರೆಯ ಸಂತಸ
-----------------------------------------------
ದಸರೆಗೆ ಸಜ್ಜಾದ ನಗರಿ, ಹಾದಿಬೀದಿಲಿ ಬಣ್ಣದ ದೀಪಗಳರಳಿ,
ಊರವರ ಉತ್ಸಾಹದೋಡಾಟ, ಮದುವೆ ಮನೆಯಂತಿತ್ತು
ವೃತ್ತದಲಲ್ಲಿ ನಾಲ್ಕಾಳೆತ್ತರದ ದೇವರ ಚಿತ್ರ
ಜರಿ ಸೀರೆ, ಆಭರಣ ಚಿತ್ರದ್ದಾದರೂ ಬಲು ಜೋರು
ಬಣ್ಣಬಣ್ಣದ ದೀಪ ಸಂಜೆಗತ್ತಲಲಿ ಝಗಮಗಿಸಿ
ಹೋಗಿಬರುವರ ಕಣ್ಮನ ಸೆಳೆಯುತ್ತಿತ್ತು
ನಖಶಿಖಾಂತ ಹರಿದ ಕಣ್ಣ ಪಟದ ಹೊಳಪು ಸೆಳೆಯದೆ
ಊರುಗಂಬದಡಿಯ ಚಿತ್ರವೊಂದು ಮನವ ಸೆಳೆಯಿತು
ಎರಡಡಿ ಎತ್ತರದ ಸಜೀವ ಉತ್ಸವಮೂರ್ತಿಯೊಂದು
ಚಿಂದಿಬಟ್ಟೆ, ಮಣ್ಣು ಮೈ, ಕೆದರು ತಲೆ, ಮೇಲೆ ದೃಷ್ಟಿ ನೆಟ್ಟಿದೆ
ಉಗುರು ಕಚ್ಚುತ್ತಿದ್ದ ಭಂಗಿ ಬೆರಗೆ ಮೂರ್ತಿವೆತ್ತಂತಿದೆ
ಹಸಿವು ಕಣ್ಣ ತುಂಬಿದ್ದರು ದೀಪದಬಣ್ಣ ಆವರಿಸಿದಂತಿದೆ
ಪಕ್ಕದಲಲ್ಲೆ ಕಲ್ಲ ಒಲೆ, ಸುತ್ತ ನಾಲ್ಕಾಳು ಜೋಡಿಗಳು
ಉರಿವ ಬೆಂಕಿ ಬೇಯಿಸುತಿತ್ತು ಸಂಜೆಯೂಟದ ಕೂಳು
ಮಾತು ನೂರು, ನಗೆಯು ಜೋರು, ಇಹದ ಪರಿವೆ ಇಲ್ಲದೆ
ಕರೆದರಾಗ ಕೂಸ "ಕಂದ ಬಂದು ಉಣ್ಣ ಬಾರದೆ?"
ಪಟದ ದೀಪವವರ ಗೋಡೆಯಿರದ ಮನೆಯ ಬೆಳಗಿರೆ
ಅನಿಸುತಿತ್ತು ನಲಿವ ಪಾಠ ಕಲಿಯಬೇಕು ಇಲ್ಲಿಯೆ
ಸುಖದಿ ಬಾಳೋ ಸೂತ್ರ ಹೇಳೊ ಶಾಲೆ ಎಲ್ಲು ಕಾಣದು
ಕೊರತೆ ನೆರೆಯ ತಾವಲಿ ನೋಡದು ವ್ಯಕ್ತವಾಗುವುದು
-------------------------------------------------------------
8)ನೋಡು - ಇಂದು ಹೀಗಿದೆ
--------------------------------------------
ಕಾಲಲಿ ಮುಟ್ಟಿ ಮುನ್ನಡೆದವರು ಮೆಟ್ಟಿಲಾಗಿಸಿದವರು
ನಿನ್ನ ಸ್ಪರ್ಶಿಸ ಬಂದವರಲ್ಲ
ನೀ ಅಹಲ್ಯೆಯೂ ಅಲ್ಲ, ಇದು ಆ ಕಾಲವೂ ಅಲ್ಲ
ಊದಿ ತುಂಬಿ, ಖಾಲಿಯಾಗಿಸಿ ಶಬ್ಧ ಹೊರಡಿಸುವವರು
ಆ ಅಳುವಿನೇರಿಳಿತ ಅಭ್ಯಸಿಸುವವರು
ನೀ ಕೊಳಲೂ ಅಲ್ಲ, ನುಡಿಸುವುದೂ ಅವರರಿತಿಲ್ಲ
ಕಡಿವಷ್ಟು ಎಳೆದು ತಂತಿಯ ಸರಿಗಮ ಎನಿಸುವವರು
ಆ ವಿದ್ಯೆಯ ಕಲಿಯಬಂದವರು
ನೀ ವೀಣೆಯೂ ಅಲ್ಲ, ಅವರಿಗೆ ಹಾಡೂ ಬೇಕಿಲ್ಲ
ಕಣ್ಣೊಳಗಿಣುಕುವವರು ಪೆಟ್ಟು ಗಾಯ ರಕ್ತ ರೆಸಿಗೆ ಹುಡುಕುವವರು
ತಕ್ಕಡಿಯಲಿಟ್ಟು ತಮ್ಮವೆಷ್ಟಿವೆ ಎಂದು ತೂಗುವವರು
ಅಲ್ಲ, ಸ್ಪಂದಿಸಿ ಶಮನಗೊಳಿಸುವರಲ್ಲ
ದೂರದೂರಕು ದೃಷ್ಟಿ ಹಾಯಿಸು- ಇತರರಿಗೆ ಮಿಡಿವವರಿಲ್ಲ
ಇದ್ದರೂ ಅವರು ಇನ್ನೇನೂ ಸಾಧಿಸಿರುವುದಿಲ್ಲ.
ನೀ ನೀನಾಗಿರದಿರೆ ಮಾತ್ರ ಮೇಲೇರುವೆ, ಪ್ರಸಿದ್ಧಿಯಾಗುವೆ
ನೀ ನೀನೇ ಆಗಿದ್ದರೆ ಕಳಕೊಳದೆ ನಿನನಷ್ಟೆ ಪಡೆಯುವೆ
-------------------------------------------------------------------------------------
9)ಸಾಗರಕ್ಕೆ ನಗುವುದೂ ಗೊತ್ತು
-------------------------------------------
ಎಲ್ಲಿಂದಲೋ ಬಂದ ಸಿಹಿನೀರ ನದಿಯೊಂದು
ಆತುರಾತುರದಿ ಸಾಗರದ ಬಳಿಸಾರಿತು
ತನ್ನ ಮಂಜುಳ ಹರಿವೆಲ್ಲಿ, ಈ ಭೋರ್ಗರೆತವೆಲ್ಲಿ!
ತನ್ನ ಸೀಮಿತವಿಸ್ತಾರವೆಲ್ಲಿ, ಈ ಅಗಾಧತೆಯೆಲ್ಲಿ!
ತನ್ನೊಡಲ ಕುಡಿಗಳೆಲ್ಲಿ, ಇಲ್ಲಿಹ ಜೀವರಾಶಿಯೆಲ್ಲಿ!
ಓರೆಕೋರೆಯಲೂ ಸಾಗುವ ತನ್ನ ಚಾಂಚಲ್ಯವೆಲ್ಲಿ,
ಈ ಸ್ಥಾವರವೆನಿಸುವ ನಿಲುವಿನ ಗಾಂಭೀರ್ಯವೆಲ್ಲಿ!
ಒಂದೂರ ಜೀವಾಳ ತಾನಾದರೆ ಅನೇಕ ನದಿಗಳಾಗರ ಈ ಸಾಗರ!
ಬಾಗಿ ಬಳುಕಿ ಮನಸಾರೆ ನಮಿಸಿತಾ ನದಿ
ಈ ಮಹತ್ತೆನಿಸುವ ಸೃಷ್ಟಿವಿಸ್ಮಯದೊಳ ಸೇರುವ
ತನ್ನ ವಿಧಿ ಬರಹಕೊಮ್ಮೆ, ಆ ಧನ್ಯತೆಗೊಮ್ಮೆ.
ಉಪ್ಪಾದ ತನ್ನೊಡಲ ನಿರರ್ಥಕತೆ ಕಾಣದ
ನದಿಯ ಅಚ್ಚರಿಯ ಸ್ವಗತ, ಆ ಮಿಲನದ ಉತ್ಸಾಹ
ಕಂಡ ಸಾಗರಕೆ ನಗುವೋ ನಗು- ವ್ಯಂಗ್ಯನಗು.
ಕಿರಿಯದಾದರೂ ಸ್ವತಂತ್ರವಾದ ಅಸ್ತಿತ್ವವೊಂದು
ಹಿರಿತನದ ಭಾಗವಾಗಲು ತನ್ನನೇ ಮರೆಯಹೊರಟುದಕೆ
ಮತ್ತು ಅಲ್ಲಿ ತನ್ನ ಸವಿಯನೇ ಬಲಿ ತೆರುತಿರುವುದಕೆ.
-----------------------------------------------------------------------
10)ಅವರಿಗೆ ಪುರುಸೊತ್ತಿಲ್ಲ....
-----------------------------------------------
ಮರುಳೇ ನಿನ್ನಂಗಳಕೆ ಬಂದರೆಂದು ಸಂಭ್ರಮಿಸದಿರು
ಹೂ ಆಯ ಬಂದವರು, ಆಯ್ದು ಹೊರಡುವರು
ರೆಂಜೆ, ಪಾರಿಜಾತಗಳು ಪೂಜೆಗೆ ಶ್ರೇಷ್ಠ, ಆದರೆ
ಅರಳಿ ಕೆಲಕಾಲಕೇ ಉರುಳಿ ಹೋಗುವವು
ಬಿದ್ದ ಕೆಲಗಳಿಗೆಯಲೆ ಆಯಬೇಕವನವರು
ಪೂಜೆಗಿಡುವರು, ನಡೆವ ಕಾಲು ಸೋಂಕಬಾರದು
ತೊಟ್ಟು ಕಳಚಿದ ಕಂಬನಿ ಆವಿಯಾಗುವ ಮುನ್ನವೇ
ಹೂಬುಟ್ಟಿಯೊಳು ತುರುಕುವರು, ಧನ್ಯ ಹೂ ಎನ್ನುವರು
ಮೇಲೆತ್ತಿ ಕಣ್ಣ ಆ ತೋಟ ಗಮನಿಸರವರು
ನೀನೆರೆದ ಪ್ರೀತಿ ಅಕ್ಕರೆಗಳ ಗುರುತಿಸಲಾರರು
ಗಿಡದೆಲೆ ಹಸಿರೇ, ಹಣ್ಣಾಗಿದೆಯೇ
ಹುಳ ಬಂದಿದೆಯೇ, ಬುಡ ಒಣಗಿದೆಯೇ,
ಕಾಂಡ ಬಾಗಿದೆಯೆ, ಊರುಗೋಲು ಬೇಕೆ
ಯೋಚಿಸರವರು, ವ್ಯರ್ಥ ನಿರೀಕ್ಷಿಸದಿರು.
ಎಲ್ಲ ಬಿಡು............,
ನಿನ್ನ ಹೂಗಳನೊಯ್ಯುವರನೂ ಸ್ವಾಗತಿಸುವ
ನಿನ್ನನೂ ನೋಡರು, ಅವರಿಗೆ ಪುರೊಸೊತ್ತಿಲ್ಲ.
-------------------------
11)ಚಂದ್ರಿಕೆಯ ಪಯಣ
--------------------------------------------
ಗ್ರಹಗತಿಗಳ ಫಲವಂತೆ, ಚಂದ್ರಗೆ ಬೆಳಕೆಂಬುದಿಲ್ಲವಂತೆ
ಭೂಮಿಗೆ ತಲುಪಿದ ಸುದ್ದಿ, ಒಡಲಲಿ ತಡೆಯದ ತಳಮಳ
ಉಸಿರಾಗಿದ್ದ ತನ್ನ ಹಸಿರು ಅಸಹನೀಯವೆನಿಸಿದಂತೆ,
ಹಿತವಾಗಿದ್ದ ಸೂರ್ಯನ ಬಿಳಿಬಿಸಿಲು ಉರಿಯೆನಿಸಿದಂತೆ
ರವಿಯಿತ್ತ ತನ್ನದರೊಳಷ್ಟು ತೆಗೆದು ಚಂದ್ರಗೆ ಕಳಿಸಲೇ?
ಮನಸು ಒಪ್ಪಿತು, ಅಳುಕಿದ ತನ್ನ ಪ್ರಭೆಯನೊಪ್ಪಿಸಿ
ಚಂದ್ರಿಕೆಯೆಂದವಳ ಹೊಸರೂಪವ ಹೆಸರಿಸಿ
ಊರ್ಧ್ವಮುಖಿಯಾಗಿಸಿ ಕಳಿಸಿದಳು
ಬಿದಿಗೆಯ ಚಂದ್ರನ ಓರೆನೋಟದಲಿ ಆಹ್ವಾನವಿತ್ತು
ಮರುಗಳಿಗೆಯೇ ಕಿರುಗಣ್ಣ ಭಾವ ಬದಲಾಯ್ತು
"ಹಿಂತಿರುಗು" ಎಂದ, ಬಂದರೆ ಪೂರ್ತಿಯಾಗಿ ಬಾ
ಮೊದಲೇ ಎರವಲದು, ಕಿರುಪಾಲೆನಗೆ ಬೇಡವೆಂದ
ಅಧೋಮುಖಿಯಾಗ ಹೊರಟವಳ ಇಳೆ ಸಂತೈಸಿದಳು
"ಬೆಂದ ಮನದಿ ಹುಟ್ಟುವುದು ಹಲಬಾರಿ ಕರಕಲು ಮಾತು
ಅಲ್ಲಿ ಭಾವ ಹಸಿಯೇ ಇರುವುದು, ಆವರಣವಷ್ಟೆ ಕಪ್ಪು
ಹಿಂತಿರುಗದಿರು, ಅವಗೆ ಬೇಡ, ನೀ ಸ್ವೀಕರಿಸು" ಎಂದಳು
ಇಂದಿಗೂ ಪಕ್ಷಕಾಲ ಪಯಣಿಸಿ ಬಂದ ಚಂದ್ರಿಕೆಯ
ಅವ ನಿರ್ದಾಕ್ಷಿಣ್ಯವಾಗಿ ಧರೆಗೆ ಮರಳಿಸುತ್ತಾನೆ
ಮತ್ತೆ ಖಾಲಿಯಾದ ಅವನ ನೋಡಲಾಗದೆ ಧರೆ
ಚಂದ್ರಿಕೆಯ ಪುಸಲಾಯಿಸಿ ಅತ್ತ ಕಳುಹಿಸುತ್ತಾಳೆ.
-------------------
12)ಹೂಗವನ.
----------------------------
ಮನದಂಗಳದಿ ಅರಳುತಿತ್ತೊಂದು ಹೂಗವನ.
ಭಾವಾರ್ಥವದರ ಕಂಪು, ಶಬ್ಧಾರ್ಥ ಬಣ್ಣ
ಮನದಂಗಳದ್ದದು ಮನೆಯಂಗಳದ್ದಲ್ಲವಲ್ಲಾ,
ಅರಳಿದರೆ ಸಾಲದು, ಹೊರಗುರಳಲೇಬೇಕು
ಚೆಲುವಷ್ಟೇ ಸಾಲದು, ಒಳಗು ಬಿಚ್ಚಿಡಬೇಕು
ಕಣ್ಸೆಳೆದರೆ ಸಾಲದು, ಮನಕೆ ಮುದ ಕೊಡಬೇಕು
ಸೋಂಕಿದ ಗಾಳಿ ಬೀಸಿದಂತಾಡಿದರೆ ಸಾಲದು,
ಅದು ಹೊತ್ತು ತರುವ ಪ್ರಶ್ನೆಗುತ್ತರವಾಗಬೇಕು
ಪರೀಕ್ಷಿಸಲೆಂದೇ ಇವೆ ಅಕ್ಷಿಗಳೊಂದಷ್ಟು,
ಒಂದೊಂದೂ ಪಕಳೆ ಬಿಡಿಸಿ ನೋಡುವವು.
ನೊಂದರೂ ನಗುತ ಅಂತರಾಳ ಬಿಂಬಿಸಬೇಕು.
ಮೃದುಮಧುರ ಹೂವದು, ತಡೆದುಕೊಂಡೀತೆ?
ತನ್ನ ಸತ್ವ ನಿರೂಪಣೆಗೆ ತಾನೇ ಸಾಕ್ಷಿಯಾಗಬೇಕೆ?
ಒಡ್ಡಿಕೊಳಬೇಕೆ? ಒಳಗಲ್ಲೇ ಬೆಚ್ಚಗಿದ್ದರಾಗದೇ?
ಆದರೆ...........
ಅದರ ಜೀವನೋತ್ಸಾಹಕೆ ಹೊರಹೊಮ್ಮುವಾಸೆ
ಚಳಿ-ಗಾಳಿ-ಮಳೆಗಳಿಗೆ ತೆರಕೊಳ್ಳುವಾಸೆ
ತಡೆಯಲಾರೆ, ಹೂ ತೆರೆದುಕೊಳಲಿ
ಕಾಯಾಗಿ, ಹಣ್ಣಾಗಿ, ಉದುರಿಬಿದ್ದೊಡೆದು,
ಬೀಜ ಹರಡಿ, ಮೊಳೆತು ಮತ್ತಷ್ಟು ಹೂ ಬಿರಿಯಲಿ
---------------------------------------------------------------------
13)ಬಯ್ದುಕೊಳುವುದು ಯಾಕೋ
---------------------ಬೆಳಕೆಂಬುದೇ ಹಾಗೆ ನೋಡು
ಇರುತ್ತದೆ ಕತ್ತಲ ಬೆನ್ನಲ್ಲೇ.
ರಾತ್ರಿಯ ಅಸ್ಪಷ್ಟತೆಯ ಕಳವಳ ಕಳೆಯೆ ಎಲ್ಲ ಕಾಯುತ್ತಿರಲು
ಮೆಲ್ಲ ಉಷೆಯ ಕಂಕುಳೇರಿದ ನಸುಕಂದನ ಮುಗ್ಧ ನಗುವಂತೆ
ರಾತ್ರಿಯ ನೀರವತೆ ಅಸಹನೀಯವೆನಿಸೆ ಉದಯರಾಗದಾಲಾಪಕೆ
ಶ್ರುತಿ ಸೇರಿಸೊ ಮಂದ್ರ ಷಡ್ಜದ ತಂಬೂರಿ ದನಿಯಂತೆ
ರಾತ್ರಿಯ ಸ್ತಬ್ಧತೆ ನಿದ್ರೆಮಡಿಲಿಂದ ಜಾರಿ ವಿರಾಮದ ಗಡಿಮೀರೆ,
ಎಚ್ಚರಿಸಿ ಲವಲವಿಕೆ ಸೂಸೊ ಹಕ್ಕಿಕೊರಲಿನ ಚಿಲಿಪಿಲಿಯಂತೆ
ಇಂತಿಪ್ಪ ಚುರುಕು ಬೆಳಕೂ ಒಮ್ಮೊಮ್ಮೆ
ತುಂಟಾಟದಾಸೆಗೆ ಕಣ್ಣುಮುಚ್ಚಾಲೆಯಾಡಲು
ಬಯ್ದುಕೊಳುವದೇಕೋ?
ಹರಿದ ಕಂಬಳಿಯ ತೂತಿನೊಳಗಣದಾಟ
ಹರಿದಾಡೊ ಮೋಡದ ಹಿಂದೆ ಅಡಗುವಾಟ
ಕತ್ತಲಲಿ ಸಾಗೊ ಮಿಂಚುಹುಳದ ಮಿಂಚಾಟ
ಆಗಸದ ತಾರೆಯ ಫಳಫಳ ಮಿನುಗುವಾಟ.......
ಹೀಗೇ ಅದೂ ಆಡಲಿಬಿಡು
ಬಾಳಲಿ ಬೆಳಕು ಕಾಣೆಯಾಗುತಿರಬೇಕು
ಮತ್ತೆ ಮೂಡುತಿರಬೇಕು
ಅದ ಬೆನ್ನಟ್ಟುತಿರಬೇಕು, ಕಾಯುತಿರಬೇಕು
ಕಾದು, ಬೆನ್ನಟ್ಟಿ ಅದು ಹೊಳೆದಾಗಲೇ
ಝಲ್ಲೆನಿಸಿ, ಮುದವೆನಿಸುವುದು
------------------
14)ನಾ ಕುದ್ದು ಆವಿಯಾದೆ...
-----------------
ನಿರೀಕ್ಷೆಯೇ ಆಗಿದ್ದ ನನ್ನತನ
ಕುದಿವ ನೀರಿನ ಆವಿಯಂತೆ ಹೇಳಹೆಸರಿಲ್ಲದೇ ಬಿಟ್ಟುಹೋಯಿತು
ಈಗ ಕ್ರಿಯೆಯಷ್ಟೇ ನನ್ನದು,
ಪ್ರತಿಕ್ರಿಯೆಗೂ ನನಗೂ ನಿರೀಕ್ಷೆಯ ಬೆಸುಗೆಯಿಲ್ಲ
ಕುದಿಯುವ ಬಿಂದು ತಲುಪಬೇಕಾಯಿತು ನೋಡು
ಹೌದು, ನೀನೇ ಅಲ್ಲಿ ಕುದಿಸುವ ಅಗ್ನಿಯಾಗಿದ್ದದ್ದು
ಬೆಂಕಿಯೆನಲಾರೆ, ನೀ ಉರಿಸಿ ಬೂದಿ ಮಾಡಲಿಲ್ಲ
ಕುದಿಸಿದೆ, ನಿನ್ನ ದೈವತ್ವದಿಂದ ನನ್ನತನ ಬೆಂದರೂ,
ಮುನ್ನಡೆಸಿದೆ, ಚರಮತೆಯ ಸನಿಹಕೊಯ್ದೆ, ಮತ್ತು ಆವಿಯಾಗಿಸಿದೆ.
ಈಗ ನಾ ಹಗುರ,ಇಹದ ಗುರುತ್ವಾಕರ್ಷಣೆಯ ಸೆಳೆತ ಮೀರಿ
ಅವಲಂಬನೆಗಳ ತೊರೆದು, ಮೇಲೇರುವೆಡೆ ಸಾಗುತಿರುವೆ
ನೀ ಮೇಲೇ ಇರುವುದು ನಿಜವಾದರೆ ನಿನ್ನೆಡೆಗೇ ಬರುತಿರುವೆ
ನಿನ್ನನೇ ಸರ್ವಸ್ವವಾಗಿಸಿರುವ ನಾ ನಿನ್ನಲೇ ಲೀನವಾಗುವುದಕೆ
ಸಾಕ್ಷಿಯಾಗಲಿರುವೆ
---------------------------------------------------------------------
15)ನಾನೆಲ್ಲಿ ಹೋದೆ....?!
----------------------------
ಬೆಳ್ದಿಂಗಳ ಆ ರಾತ್ರಿ
ಭೂಮ್ಯಾಕಾಶದ ನಡುವೊಂದು
ಸುಂದರ ಕಪ್ಪು ಬಿಳುಪು ಚಿತ್ರ
ನದಿಯೂ ನಿದಿರೆಗೆ ಜಾರುತಿರುವಂತೆ
ಮಂದಗಮನದ ಅಲೆಗಳಗುಂಟ
ಹುಟ್ಟಿಲ್ಲದ, ನಾವಿಕನಿಲ್ಲದ, ವೇಗವಿಲ್ಲದೊಂದು ದೋಣಿ.
ನಾ ತೀರದೊಂದು ಗುಂಡುಗಲ್ಲಿನ ಮೇಲೆ
ಜಾರುತಿದ್ದರೂ ಬೀಳದಂತೆ ಸಾವರಿಸಿಕೊಳ್ಳುತ್ತಾ
ರಾತ್ರಿರಾಣಿಯ ಗಂಧ ತಂದ ಮತ್ತನೇ ಉಸಿರಾಡುತ್ತಾ
ನಿದ್ದೆ-ಜಾಗೃತಿಯ ನಡುವೆ ಮೈಮರೆತಂತೆ....
ಅಷ್ಟರಲ್ಲಿ ದೋಣಿಯಲೊಂದು ಅಸ್ಪಷ್ಟ ಆಕೃತಿ...
ಅರೇ....ನಾ ಕಂಡ ಕನಸಿನವನೇ ಈತ?!
ನೋಡನೋಡುತ್ತಿದ್ದಂತೆ ಪಕ್ಕದಲ್ಲೊಂದು ಸ್ತ್ರೀ
ಆಕೆಯ ಮುಖಭಾವ ಬಹುಸ್ಪಷ್ಟ , ಬಹು ಪರಿಚಿತ
ಬಾಳಿಡೀ ಆ ಕ್ಷಣಕೆ ಪರಿತಪಿಸಿ ತನ್ನ ಹಾಡಲೇ
ಕೃಷ್ಣನನೊಮ್ಮೆ ಕಂಡಾಗಿನ ಮೀರಾಳದಿದ್ದಂತೆ,
ತೊರೆದು ತನ್ನ ಗುರುತು, ಹುಡುಕಾಟವೇ ತಾನಾಗಿ
ಮಲ್ಲಿಕಾರ್ಜುನನ ಬಳಿಸಾರಿದಾಗಿನ ಅಕ್ಕಳದರಂತೆ,
ಶ್ಯಾಮ ಬಿಟ್ಟು ಹೋದ ಗಳಿಗೆಯಲೇ ಉಳಿದು,
ಕೊಳಲುಲಿಯಲವನ ಸಾಕ್ಷಾತ್ಕರಿಸಿದಾಗಿನ ರಾಧೆಯದರಂತೆ.
ಆ ಧನ್ಯತೆಯ ಭಾವದೊಳ ಹುದುಗಿಹೂಗಿದ್ದ
ನನ್ನ ಮನ ಕೊನೆಗೊಮ್ಮೆ ಹಿಂತಿರುಗಿದಾಗ
ಒಳಹೊಕ್ಕಲು ಗುಂಡುಕಲ್ಲ ಮೇಲೆ ನಾನೇ ಇರಲಿಲ್ಲ.
----------------------------------
16)ಈಗರ್ಥವಾಗುತ್ತಿದೆ.....
--------------------------
ನೀ ಹೇಳಿದ್ದೂ ಅದೇ, ನಾ ಹೇಳಿದ್ದೂ ಅದೇ
ನೀನೇನೋ ಅರ್ಥೈಸಿದೆ, ನಾನೇನೋ....
ಸುತ್ತ ಸಂಶಯದ ಮಂಜು ಕರಗಿದಂತೆ
ನನಗೀಗ ಅರ್ಥವಾಗುತ್ತಿದೆ.....
ಸಾಧ್ಯಾಸಾಧ್ಯತೆಯ ನಾ ಪ್ರಶ್ನಿಸಿದೆ, ಅಲ್ಲೇ ಉಳಿದೆ,
ಆಗದ್ದಿದೆಂದು ನೀ ಉತ್ತರ ಪಡೆದೆ, ಮುಂದೆ ನಡೆದೆ
ನೀನತ್ತತ್ತ, ನಾನಿತಿತ್ತ ಸರಿದರೂ ಬಹುಶಃ
ಅನುಭಾವಿ ಆತ್ಮಗಳೆರಡು ಪರಸ್ಪರರತ್ತ.
ಭಿನ್ನ ಶಬ್ಧಗಳಲಿ ಒಂದೇ ತಾತ್ಪರ್ಯವಾಡಿದ
ಆ ಗಳಿಗೆಯಾದರೂ ನಾವೊಂದಾಗಿದ್ದೆವಲ್ಲವೇ?!
ಸಾಕು ಬಿಡು, ಇನ್ನದನ್ನೇ ತಿರುತಿರುಗಿ ನೋಡುತ್ತ
ಪುನರಾವರ್ತಿಸಿದಂತೆ ಅನುಭವಿಸಬಲ್ಲೆ.....
------------------------------
17)ಒಂದೇ ಹೆಸರೇಕೆ
--------------------------
ಬೆನ್ನಿಗಂಟಿದ ಹೊಟ್ಟೆಯಲೇ ಒಂದು,
ಉಂಡು ಕರಗಿಸಿಯಾಗಿದ್ದರಲೇ ಒಂದು
ಹೀಗೆರಡು ಸ್ವರೂಪದ್ದಿದ್ದಾಗ ಹಸಿವೆಯೆಂಬ ಒಂದೇ ಹೆಸರೇಕೆ?
ನೀರಿದ್ದು ಮರೆಯಾಗಿ ಬರ ಬಂದಲ್ಲೇ ಒಂದು
ತುಂಬು ಸಾಗರ ಎದುರಿದ್ದಾಗಲೇ ಒಂದು
ಹೀಗೆರಡು ತರಹದ್ದಿದ್ದಾಗ ದಾಹವೆಂಬ ಒಂದೇ ಹೆಸರೇಕೆ?
ಇಲ್ಲದ ಜೊತೆ ಕಾಡಿದ ನೋವಲ್ಲೇ ಒಂದು,
ಒಡನಾಟಗಳಲಿ ಹೂತುಹೋಗಿದ್ದಾಗಲೇ ಒಂದು
ಹೀಗೆರಡು ರೂಪದ್ದಿದ್ದಾಗ ಒಂಟಿತನವೆಂಬ ಒಂದೇ ಹೆಸರೇಕೆ?
ಕರೆದದ್ದು ಬಂದುದು ಅರಿವಾಗದಿದ್ದಾಗಲೇ ಒಂದು
ಹಂಬಲಿಸಿಯೂ ಒದಗದಿದ್ದಾಗಲೇ ಒಂದು
ಹೀಗೆರಡು ರೀತಿಯದಿದ್ದಾಗ ನಿರೀಕ್ಷೆಯೆಂಬ ಒಂದೇ ಹೆಸರೇಕೆ?
---------------------------------------------------------------------------------------------
18)ಆ ಸಂಜೆಯ ಮಳೆ
-------------------------
ಗುಡುಗಿನಾರ್ಭಟ, ಗಾಳಿಯಬ್ಬರ
ಮಿಂಚೂ ಕೋರೈಸಿ, ಕಾದ ಹಗಲಿನ ತೃಷೆ
ತಣಿವ ಸಾಧ್ಯತೆಯಾಗುತ್ತಿತ್ತು ದೂರದೂರ...
"ಮೋಡ ಮಳೆಯ ತಂದೀತೆ?"- ಅವಳಾಸೆಯ ಪ್ರಶ್ನೆ
ಆತ ಹೇಳಿದ- "ಗುಡುಗೊ ಮೋಡವೆಲ್ಲಿ ತಂದೀತು ಮಳೆ?"
"ನಿನ್ನಂತೆ..." ಸೇರಿಸಿದ ಕೊನೆಗೆ ಮೆತ್ತಗೆ.
ಮೆಲುಹಾಸ್ಯ ತಪ್ಪಿತಸ್ಥ ಮನಕೊಂದು ಪೆಟ್ಟಾಯಿತು.
ತಿಳಿಯಾಗಿದ್ದ ಒಳಗಿನ ವಾತಾವರಣ
ಹೊರಗಿನಂತೆ ಅಸ್ತವ್ಯಸ್ತವಾಯಿತು.
ಹೌದಲ್ಲವೇ.......?
ತಾನೆಂದಾದರೂ ತಣಿಸಿದೆನೇ?
ಒದಗಬಯಸುವ ಭಾವ ಗುಡುಗಿನಷ್ಟೇ ಸ್ಪಷ್ಟ
ಮನಸಿನಾರ್ದೃತೆ ಮಿಂಚಿನಷ್ಟೇ ಶುಭ್ರ
ಕಾವ ತಣಿಸುವಾಸೆಗೆ ಗಾಳಿಯದೇ ವೇಗ
ಆದರೆಂದೂ ಸುರಿಯಲಾರದೇ ಹೋದೆ.
ಒತ್ತಡವೆಷ್ಟೇ ಹೆಚ್ಚಾದರೂ ಮಳೆಯಾಗದ
ಮೋಡವೆಷ್ಟು ಗಾಢವಾಗಿದ್ದರೇನು ಫಲ?
ಪ್ರಕೃತಿಯೂ ಅವಳಂತೆ ಬಯಸಿಯೂ
ತಣಿಸಲಾರದ ಅಸಹಾಯಕತೆಯ
ಪೂರ್ತಿ ತೋರ್ಪಡಿಸಲೂ ಆಗದೇ,
ಒಳಗೆ ತಡೆದಿಟ್ಟುಕೊಳಲೂ ಆಗದೆ
ನಾಕುಹನಿ ಕಣ್ಣೀರು ಸುರಿಸಿದಂತೆ
ಪರಪರಮಳೆ ಬಂತು ನಿಂತೇ ಬಿಟ್ಟಿತು.
-----------
19)ಸಾವಲ್ಲೇ ಗೆಲುವೆ?!
--------------
ವಾತ್ಸಲ್ಯದಡಿಯಲ್ಲಿ ಮಗುವಾಗಿ ಬೆಳೆಯುತಿದ್ದವಳಲಿ
ಪ್ರೇಮ ಮೂಡಿಸಿ ಮಗುವಾಗುಳಿದಿಲ್ಲ ಎನಿಸಿದವ
ಎಲ್ಲಿಂದಲೋ ಬಂದು ಅವನಿಲ್ಲದೇನಿಲ್ಲ ಅನಿಸಿದವ
ಹೆಸರಿಗೆ ಅಪ್ಪನದರ ಜೊತೆ ತೆಗೆದು ತನ್ನದನ್ನಿತ್ತವ
ಅಸ್ತಿತ್ವವೊಂದಾಗಿದ್ದುದು ಅಚ್ಚರಿಯೆಂಬಂತೆ
ಜೊತೆ ಪಡೆದೂ ಒಂದಾಗುಳಿವುದ ತೋರಿಸಿದವ
ಮಡಿಲಲ್ಲಿ ತಾಯ್ತನದ ಸೊಬಗ ಅರಳಿಸಿ
ಉಡಿ ತುಂಬಿ ತವರಿಗೆ ಕಣ್ತುಂಬಿ ಕಳಿಸಿದವ
ಕೂಸ ಕಣ್ಣಲಿ ತಮ್ಮ ಪ್ರೇಮ ಬಿಂಬಿಸಿದಾಗ
ಹೊಸತು ಕಂಡವನಂತೆ ಸಂಭ್ರಮಿಸಿ ನಕ್ಕವ
ಬೇರೇನಿಲ್ಲವೆಂಬಂತೆ ಇಬ್ಬರ ಸುತ್ತಲೇ ಗಿರಕಿಯಾಡಿ
ಪ್ರಪಂಚ ಕೈಯ್ಯೊಳಗಿದ್ದಂತೆ ಮೆರೆಯುತ್ತಿದ್ದವ..
ಹಠಾತ್ತಾಗಿ ಹೀಗೆ ಬಿಟ್ಟು ನಡೆದರೆ.....?!
ಕಣ್ಣೀರು ಹಸುಗಂದಗೆ, ತಾಯ್ತಂದೆಗೆ ಅರಗದು
ಮುಚ್ಚಿಟ್ಟ ಒಣದುಃಖ ಹಸಿಒಡಲು ಭರಿಸದು
ತಿಂಗಳಕಾಲ ಅಗಲದೆ ಬಂದುಬಂದು ಕಾಡಿದವನ
ಹಿಂಬಾಲಿಸಿ ಹೋಗುವ ದಾರಿಯೂ ಕಾಣದು
ಕಂಗಾಲಾಗಿ ಕೂತವಳ ಕಂಡನಿಸಿತು-
"ಸಾವಿಗಂಜಲೇಬೇಕೆ........?
ಸಾವಪ್ಪಿದಲ್ಲೇ ಗೆಲುವೇ..? ಅದು ಬಳಿಸಾರಿಯೂ
ಬಿಟ್ಟುಳಿಸಿದವರ ಪಾಲಿಗೆ ಬರೀ ಸೋಲೇ ಇರುವುದೇ?!"
------------------------------------
ಒಂದಷ್ಟು ಚುಟುಕಗಳು
-------------------------------
ಹಕ್ಕಿಹಾರಾಟದ ಚಿತ್ರ ಸಂಜೆ ಅಳಿಸಿತು, ಚುಕ್ಕೆಚಿತ್ತಾರ ರಾತ್ರಿ ಬರೆಯಿತು
ಮುಕ್ತವಾಗಿ ತೆರಕೊಂಡ ಆಕಾಶ ಬರುವರ, ಬರೆವರ ತಡೆಯಲಿಲ್ಲ
ಹಾಗೆ ಬಹುಕಾಲ ಅದು ಖಾಲಿಯಾಗುಳಿಯಲಿಲ್ಲ
--------------------------------------------------
ಸ್ವರ್ಗವಿಲ್ಲಿ ನೆಲದಲಿಲ್ಲವೆಂದವರು ಯಾರು?!
ಮುಖದ ಕಣ್ಣು ಕಂಡದ್ದಲ್ಲ ಅದು, ಮನದ ಕಣ್ಣ ಕಲ್ಪನೆ
ಇಲ್ಲೇ ಸುತ್ತ ಇದೆ ಅಂದುಕೊಂಡವನದರ ಒಳಗೆ
ಎಲ್ಲೋ ಅತ್ತ ಅಂದವಗದು ನಿಲುಕದ ಆಗಸದೊಳಗೆ
------------------
ಕನಸ ನಿರ್ದೇಶಿಸಬಾರದು, ಅದರಷ್ಟಕ್ಕೆ ಬೆಳೆಯಬಿಡಬೇಕು ಕಣ್ಣಪಾಪೆಯ ದೃಷ್ಟಿ ಸೀಮಿತ, ನೀರಿಲ್ಲದ ದಾರಿಯಿಲ್ಲದ,
ಹೂವಿಲ್ಲದ, ಮೇವಿಲ್ಲದ ನಾಳೆಗೊಯ್ಯಬಹುದು.
ಸ್ವಪ್ನದ್ದು ಕಣ್ಣ ಮೀರಿದ ನೋಟ, ನಾವರಿಯದ ತಾವಲ್ಲಿ
ದಕ್ಕದ ಸತ್ಯ ಸುಳ್ಳಾಗಿಸುವ ಪವಾಡಕೊಯ್ಯಬಹುದು.
-------------------------------------
ನಾನೇನೋ ಚೆನ್ನಾಗೇ ಇದ್ದೇನೆಂದುಕೊಂಡಿದ್ದೆ
ನೀ "ಹೇಗಿರುವೆ" ಎಂದೆ ನೋಡು,
ಅಮ್ಮನ ಕಂಡು ನಿದ್ದೆಯಿಂದೇಳುವ ನೋವುಗಳಂತೆ
ಮೇಲೆದ್ದು ಕುಣಿಯತೊಡಗಿದವು
--------------------------------------------------
ಇರುವುದೆರಡೇ ಕಣ್ಣು, ದೃಷ್ಟಿ ಸಾಗುವ ಪಾಪೆಯಿನ್ನೂ ಸಣ್ಣ ಜಗವೊಮ್ಮೆಗೇ ಒಳಬರುವುದೆಂತು?!
ಕಂಡದ್ದೊಂದು ಮುಷ್ಟಿ, ಅರಿತದ್ದೊಂದು ಚಿಟಿಕೆ,
ಕಣ್ಣಳತೆಗೆ ಸಿಗದ್ದೆಲ್ಲ ಸುಳ್ಳೆಂಬ ಭ್ರಮೆಯೆಂತು?!
----------------------------------------
ಹೆಸರಲ್ಲೇನಿದೆ ಜೀವವೇ, ಆತ್ಮಗಳೆರಡರ ನಡುವೆ ಋಣಾನುಬಂಧವೇ ಮುಂದಾಗಿ
ಸೇತುವೆಯೊಂದ ಕಟ್ಟಿದ ಮೇಲೆ ಹೆಸರಿಲ್ಲದ ಬಂಧಕ್ಕೊಯ್ಯುವದೆಂಬ ಅಳುಕೇಕೆ?
--------------------------------------------------------------------------------------
ನನಲಿಲ್ಲದ ಆದರೆ ನನದೆನಿಸುವ ನೋವು ನಿದ್ದೆಗೊಡದೆ ಕಾಡುವುದೆಂದರೇನು?!
ಅಲ್ಲೇ ಎಲ್ಲೊ ಇದ್ದುದು, ನಾ ಗಮನಿಸೆ ನಾನಿರಲೇ ಇಲ್ಲವೆನುವುದೇನು?!
ಗಾಯ ಕಾಣದ ನೋವಿಗೆಲ್ಲಿ ಮುಲಾಮು ಹಚ್ಚಿ ಸಮಾಧಾನಿಸಲಿ?ರಕ್ತ ಕಣ್ಣೀರಾಗಿ ಹರಿದಾಗ ಹೇಗದ ಹೆಪ್ಪುಗಟ್ಟಿಸಿ ನಿಲ್ಲಿಸಲಿ?ಮೂಲದರಿವಿದ್ದರೂ, ಕೈಗಳಿದ್ದರೂ, ತಡವಿ ಸಂತೈಸಲಾಗುತ್ತಿಲ್ಲ. ಕ್ಷಮಿಸು ನೋವೇ, ಧಾವಿಸಿ ಬರುತಿದ್ದರೂ ನಿನ್ನ ಮುಟ್ಟಲಾಗುತ್ತಿಲ್ಲ.
--------------------------------------------------------------------------
ಶ್ರೇಷ್ಠ ಮುತ್ತಿನ ಹಾರದೊಂದು ಮುತ್ತೊಡೆದರೆ ಒಂದೇ ತಾನೇ ಎನ್ನಲಾಗದು
ಮುತ್ತೊಡೆದದ್ದು ಜೋಡಿಸಿ ಪೋಣಿಸಲಾಗದು, ದುರ್ಲಭವದು ಇನ್ನೊಂದು ಸಿಗದು
ಧರಿಸಿದಾಗಲೆಲ್ಲ ಖಾಲಿಜಾಗ ಕಾಡುವುದು, ಹೊಂದಿದ ಮೇಲೆ ಒಡೆಯದಂತಿಡಬೇಕು ----------------------------------------------------
ಸಮೃದ್ಧಿ ಮಣಭಾರದ ಜಂಭ ಕೊಟ್ಟರೆ, ಕೊರತೆ ಖಾಲಿಯೆನಿಸುವ ವಿನಯ ಲಾಭ ಕ್ಷಣಕಾಲದ ಸುಖ ಕೊಟ್ಟರೆ, ನಷ್ಟ ಮೈಲುದ್ದದ ತಾಳ್ಮೆ
ಗಳಿಸುವಿಕೆ ಉಳಿಸುವ ಚಿಂತೆ ಇತ್ತರೆ, ಕಳಕೊಳ್ಳುವಿಕೆ ಮತ್ತೆ ಗಳಿಸುವ ಛಲ
ಈಗ ಹೇಳಿ- ಅದು ಬೇಕೋ ಇದು ಬೇಕೋ?
----------------------------
ಸೋಲು ಕಣ್ಮುಂದಿದ್ದಾಗ ಬೇಕಾದದ್ದಿಷ್ಟೆ-
ಹಿಂತೆಗೆಯುವ ಮುನ್ನ ಒಂದು ಭಿನ್ನಯತ್ನ
-----------------------------------
No comments:
Post a Comment