Friday, November 23, 2012

ಸಾವಸಾಧನವಳಿಯಬೇಕು!


ಕ್ಷಣಕೆಷ್ಟೋ ಬಸಿರಧಾರಣೆ, ಕ್ಷಣಕೆಷ್ಟೋ ಜೀವದಾನ
ಅವಷ್ಟೂ ಅವಳಿಗವಳವೇ, ಪ್ರಕೄತಿಗೆಳ್ಳಷ್ಟೂ ಬೇಧವಿಲ್ಲ,

ಅದೄಶ್ಯ ಕ್ರಿಮಿಯಿಂದ ತಿಮಿಂಗಿಲದವರೆಗು,
ನೆಲವಪ್ಪೊ ಸಸಿಯಿಂದ ನಭದೆತ್ತರದ ವೃಕ್ಷದವರೆಗು,
ತನ್ನೆದೆಯ ಹಾಲನೆಲ್ಲೆಡೆ ನದಿಕೆರೆಗಳಾಗಿಸಿ,
ತನ್ನ ಸತ್ವವ ಶಕ್ಯವಿದ್ದಲ್ಲೆಲ್ಲ ತೇದು ಒದಗಿಸುವಳು.

ಮನುಜನವಳ ಕಂದ, ಹಾವು ಚೇಳುಗಳೂ....
ಕಚ್ಚೋ ಚೇಳನವ ಬಿಡದೆ ಹೊಡೆದು ಸಾಯಿಸುವ
ಕಲ್ಲಹಾವ ಪೂಜಿಸಿಯೂ, ಕಣ್ಮುಂದಿರೆ ಸಾಯಿಸುವ
ಹೆತ್ತವಳಾದರೂ ಪ್ರಶ್ನಿಸುವುದಿಲ್ಲ... ತಡೆವುದಿಲ್ಲ.

ವಂಶವಾಹಿಯದಲ್ಲ, ಜಾತಿಕುರುಹಲ್ಲ, ರಕ್ತಗುಣವೂ ಅಲ್ಲ,
ಮೊದಲ ಚೇಳಿಗೂ, ಹಾವಿಗೂ ಸೃಷ್ಟಿಯೇ ವಿಷವಿತ್ತದ್ದು.
ಈ ಜನ್ಮದ ಪ್ರಾಪ್ತಿಯವಕೆ - ಅವು ಅವುಗಳಾಗಿ ಹುಟ್ಟಿದ್ದು.
ಉಳಿವಾಸೆಗೆ ಕೊಲುವ ಉಪಾಯ ಅವಳಲ್ಲಗೆಳೆಯುವುದಿಲ್ಲ.

ಎಲ್ಲೆಡೆ ಬದುಕುವಾಸೆಯೆ ಹೊರತು, ಸಾವಿನದಿರುವುದಿಲ್ಲ.
ಸಾವಿನವಕಾಶವನ್ಯಾರೂ ಹೊತ್ತು ಪೂಜಿಸುವುದಿಲ್ಲ.
ಬುದ್ಧಿಯಿದ್ದವಕೂ, ಇಲ್ಲದವಕೂ ಅದೆ ಬದುಕುವ ದಾರಿ
ಕೊಲ್ಲೋ ಸಾಧನವಳಿಯಲೇಬೇಕು... ಯಾವರೂಪದ್ದಾದರೂ ಸರಿ.

No comments:

Post a Comment