Tuesday, August 25, 2015

ಸುಳ್ಳುಗಳ ಶರಶಯ್ಯೆ!
ನಂಬಿಕೆಗೆ ಇಚ್ಛಾಮರಣವೊಂದು ವರವಿರಲಿಕ್ಕಿಲ್ಲ.
ಸಾವನಪ್ಪಲಾಗದೆ ಉಳಿವಿಗಾಸ್ಥೆಯಿಲ್ಲದೆ
ಮಿಣುಮಿಣುಕೆನುತಿದೆ ಜೀವಭಾವ!

ತೋಡಿದ ಗೋರಿ ಆ ತುದಿಗೆ,
ಪ್ರಯೋಗಪಶು ಪ್ರೇಮ ಈ ತುದಿಗೆ.
ನಡುವೊಂದಿಷ್ಟೇ ಇಷ್ಟು ಹಾದಿ,
ನಿಂತಿವೆ ಜೋಡಿ ಹೆಜ್ಜೆ ಬಲು ಹುಮ್ಮಸ್ಸಲಿ.
ನಗೆಯು ಬರುತಿದೇ ಎನಗೆ...

ನಗುವಿಗೋ ಅಳುವಿಗೋ
ಕಣ್ಣಂತೂ ತುಂಬಿದ್ದಾಗಿದೆ.
ಆಗಸದಂಥ ಬದುಕಿನಗಲ
ಎಲ್ಲ ಗಾಂಭೀರ್ಯ
ಎಲ್ಲ ಸೌಂದರ್ಯ
ಕಿತ್ತುಕೊಂಡು
ಆಸೆಬಳ್ಳಿ ಪೊಗದಸ್ತು ಹಬ್ಬಿಸಿಟ್ಟು
ಬಣ್ಣಬಣ್ಣದ ಸುಳ್ಳರಳಿಸಿ
ಮೇಲಷ್ಟು ಮೋಸದ ಘಮವೆರಚಿಬಿಟ್ಟು
ಬೊಗಸೆದುಂಬಿದ ಒಲವೇ,
ನೀನಂದರೆ ನಂಬಿಕೆಯಲ್ಲವೇ?
ಹೌದು ನಿನಗದು ಶಾಪವೇ..
ಬಯಸಿದಾಗಲಷ್ಟೇ ಬರುವ ಸಾವು!
ಬದುಕುವಾಸೆಯ ಜೊತೆಗೆ ನೋವು!

Monday, August 24, 2015

ನೀನುಳಿಯದೆ ಹೋದದ್ದು
ನಾ ಮಿಕ್ಕದೆ ಅಳಿದದ್ದು
ಈ ಶೂನ್ಯದೊಳಗೆ
ಲೀನವಾದದೆಷ್ಟೋ ಕತೆಗಳಲಿ
ನಮ್ಮದೂ ಸೇರಿಹೋಗಲಿದೆ.
ಮತ್ತೆ ಎಲ್ಲವೂ ಬರೀ ಶೂನ್ಯವೆಂಬುದು
ಎಷ್ಟನೆಯದೋ ಬಾರಿ ದೃಢಗೊಳ್ಳಲಿದೆ.

ಅಷ್ಟರೊಳಗೊಮ್ಮೆ
ನಿರ್ವಾತದೊಳಗೂ ಉಸಿರಿನ ಪಲುಕು
ನಿರ್ವರ್ಣದೊಳಗೂ ಮಳೆಬಿಲ್ಲ ಥಳಕು
ನೋಟ ಹೆಣೆದ ಚಪ್ಪರ; ನಗೆಬಳ್ಳಿ ಬಳುಕು
ಕೂಟ ನೇಯ್ದ ಕನಸು; ಸವಿನೆನಕೆ ಮೆಲುಕು
ಪವಾಡಗಳ ಮೆತ್ತೆಯ ಮೇಲೊಮ್ಮೆ
ನಡೆದುಬಿಡುವಾ..

ಪ್ರೇಮವೂ ಜೀವಂತ ನಮ್ಮಂತೆಯೇ.
ಪ್ರೀತಿಯೊಂದು ಕಣ್ಣು, ಕಾಮನೆಯೊಂದು.
ಪಟ್ಟಿಯೊಂದಕೂ ಕಟ್ಟದೆ
ದಿಟ್ಟಿದೀವಿಗೆಯುರಿಸುವಾ
ಕತ್ತಲೂ ಹೊಳೆಹೊಳೆವಂತೆ.
ಎಚ್ಚರಾಗಿಸುವ ಸಮ್ಮಿಲನ
ನಿಚ್ಚ ಸಂಕಲ್ಪಿಸಿ ಪ್ರೇಮಿಸಿಬಿಡುವಾ.

ನಾಳೆಯ ಹೆಗಲಲಿ ಮೂಟೆಯಿದೆ.
ಥೇಟ್ ನಿನ್ನೆಗಿದ್ದಂತೆ,
ಇಂದು ಹೊತ್ತು ತಂದಂತೆ.
ಒಳಗಿಣುಕುವ ಧಾವಂತವೂ
ಕೂಡಿ ಕಳೆವ ಲೆಕ್ಕದಾಟವೂ
ಒತ್ತಟ್ಟಿಗಿಟ್ಟು ಕೈಯ್ಯಿತ್ತು ಇಳಿಸಿಕೊಳುವಾ
ಹಗುರಾದ ನಾಳೆಯನೂ ಬದುಕಿಸಿಬಿಡುವಾ..






Monday, August 17, 2015


ಬೇಸರವಿದೆ ನನಗೆ
ನನ್ನೆಡೆಗೆ...

ಕಾಲ ಕಿರುಬೆರಳಿಂದ ನೆತ್ತಿಗೋ
ನೆತ್ತಿಯಿಂದ ಅಂಗಾಲಿಗೋ
ನಿನ್ನ ಮೊದಲ ಹೆಜ್ಜೆಯಳಿಸುತಾ
ನೀ ಸಾಗಿದ ಹಾದಿಯಲ್ಲಿ
ನನ್ನ ಕಣ್ಬೆಳಕು ಚೆಲ್ಲಿದ್ದಕೆ.

ಮನವ ಶ್ರುತಿಮಾಡಿ
ಹೊಸರಾಗ ಹುಟ್ಟುಹಾಕಿದ ನನ್ನ
ಉತ್ತುಂಗದಲೊಮ್ಮೆಗೇ
ಶ್ರುತಿಯಿಂದಿಳಿಸಿ
ನನ್ನೆದೆಯನೇ ಮತ್ತೆಳೆದೆಳೆದು
ಶ್ರುತಿ ಹೊಂದಿಸುವ ಕೈಗಳಿಗೆ
ಎದೆ ತಂತುವೊಪ್ಪಿಸಿದ್ದಕೆ.

ಸೇದಿ ಸೇದಿ ಆಳದಿಂದಷ್ಟು
ಕೂಪ ಖಾಲಿಯಾಗಿಸುವಷ್ಟು
ಕಣ್ರೆಪ್ಪೆ ಆವಾಹಿಸಿಕೊಂಡ ನೋವಿಗೆರೆಯುತಾ
"ಅಳಿಸಿದೆನೇ?" ಅಂದಿದ್ದಕೆ
"ಇಲ್ಲ ಕನಸೇ, ಕಸಕೆ ಕಣ್ಣೀರು" ಅಂದದ್ದಕೆ.

ಜೊತೆಗೆ ಮೆಚ್ಚುಗೆಯೂ ಇದೆ ನನಗೆ
ನಿನ್ನೆಡೆಗೆ.
ನೂರು ಮಾತು  ಹೇಳಲಾರದ್ದು
ಒಂದು ಮೌನದಿ ತಿಳಿಹೇಳಿದ್ದಕೆ.

ಇದೋ...
ಹುಡುಕಹೊರಟಿದ್ದೇನೆ.
ಬರೆವ ಸಾಧನದ ಜೊತೆಗೇ ಅಳಿಸುವದ್ದೂ ಹುಟ್ಟಿದ್ದೀತು.
ಹಣೆಯಿಂದ ಕೆಲ ನಿನ್ನೆಗಳ ಅಳಿಸಹೊರಟಿದ್ದೇನೆ..

Saturday, August 15, 2015

ನೋಡು ಕಲಿಸಲೆಂದೇ ಇದೆ ಬರೆದು ಮತ್ತೆ ಮತ್ತಳಿಸಿದ ಕರಿಹಲಗೆ.
ಬಲು ಅಂತರವಿರಲಿದೆ ಈ ಬಾರಿ ಹುಣ್ಣಿಮೆಯೆರಡರ ನಡುವೆ.

ಬೆಳ್ದಿಂಗಳಿದ್ದರೂ ಅಂದು ಈ ಹಿಂದಿನ ಅಂದಿನಂತನಿಸದು.
ಸತ್ಯ ಹುಣ್ಣಿಮೆಯೆಂದರೆ ಚಂದ್ರನಿರುವಷ್ಟೇ ಅಲ್ಲವೆಂಬುದು.

ಕಾಯುವುದೂ ಸಾಯುವುದೂ ಒಮ್ಮೊಮ್ಮೆ ಒಂದೇ ಅನಿಸುವುದು,
ಕಣ್ಣಲಿ ಸಂದೇಶ ನಿನದು; ಕೈಯ್ಯಲಿ ಕಾಲ ನನದು ಸೋರಿದಂತನಿಸುವುದು.

ಹೌದು ಅಲ್ಲಗಳ ಲೆಕ್ಕವೂ, ಹೂ ಪಕಳೆ ಲೆಕ್ಕವೂ ಒಂದೇ ಅಂತೆ.
ಬೇಡ, ಮುರಿದು ಲೆಕ್ಕಿಸಲಾರೆ, ಎಚ್ಚರಾಗುವುದಾಗದಿದ್ದರೇನಂತೆ!

ಬೆರೆತು ಕೂತಾಗ ಬೆರೆತಂತೆಯೇ ಅನಿಸುವ ಎಲ್ಲವೂ ನಮ್ಮವೇ.
ಕೂಗಿ ಕರೆಯಬೇಕಾದಾಗ ಚದುರಿಹೋದೆವೆನಿಸುವುದೂ ನಾವೇ.

ಮೊದಲಲೆಲ್ಲು ನಿಲಲಾಗಲಿಲ್ಲ ಸರಿಯೇ.. ಕೊನೆಯದಾಗಿಸುವುದಾದೀತೇ?
ಸರದಿ ಬಂದಿರುವುದೇ ಆದರೆ ದೊರೆಯೇ, ಅಲ್ಲೇ ನನ್ನುಳಿಸುವುದಾದೀತೇ?

ನೀನರ್ಥೈಸಿದ ಪರಿ ಇನ್ಯಾರೂ ಕಥಿಸಿರಲಿಲ್ಲ; ನನ್ನ ಮಥಿಸಿರಲಿಲ್ಲ.
ಹೊಸಹೊಸತು ಶಬ್ದದೊಳ ಅರ್ಥದಂತೆ ಹೊಸಹೊಸತಾಗಿ ನಿನ್ನೊಳ ಹುದುಗುವಾಸೆ.

ಸ್ವಂತವನಡಗಿಸಿ ಈ ಪರಿ ಯಾರೂ ಕಣ್ಣಾಮುಚ್ಚಾಲೆ ಉಲಿದದ್ದಿರಲಿಕ್ಕಿಲ್ಲ.
ಸಿಕ್ಕಿಬೀಳುವಾಸೆ, ಆಟ ಮುಗಿಸುವ ಹೊತ್ತು ನನ್ನನೇ ಮುಟ್ಟಿ ನೋಡುವಾಸೆ.

ನೀ ಹೇಳಿದ್ದೇ ಆಗಲಿ ನಿನ್ನ ಬಂಡವಾಳದ ಚೀಲದ ಮೂಲೆಯಲ್ಲೇ ಸರಿ
ಖಾಲಿ ಡಬ್ಬವಾಗುಳಿದುಬಿಡುವೆ, ನಿನ್ನುಸಿರು ಬಡಿದಾಗೆಲ್ಲ ಸದ್ದಾದರೂ ನೆನಪಿಸೀತು.

ಲೋಕಕೇನು? ನೂರು ದೀಪ ನೆಲದಲ್ಲಿ, ಅದಕು ಹೆಚ್ಚು ಮಿನುಗುತಾರೆ ಆಗಸದಲ್ಲಿ.
ನಾ ಮಿಂಚುಹುಳ; ಹೇಗೆಹೇಗೋ ನಿನ್ನ ಕಣ್ಣಚ್ಚರಿಯ ನೆಚ್ಚಿ ಹೊಳೆದುಬಿಟ್ಟಿದ್ದೇನೆ..

ಮುನ್ನಡೆಸಲೂಬೇಡ, ಹಿಂದುಳಿಯಲೂ ಬಿಡಬೇಡ; ನೀನೀಗ ಅಭ್ಯಾಸವಾಗಿದ್ದೀಯ.
ಬಿಟ್ಟರೆ ಕಣ್ಬಿಡುವುದಾಗದು; ಮತ್ತಾಗ ಹುಣ್ಣಿಮೆಯೇ ಹುಡುಕಿ ಬಂದರೂ ವ್ಯರ್ಥವಾದೀತು..
ನಾನೆಂದರೆ ನಾನಲ್ಲ
ನಾನೆಂದರೇನೂ ಅಲ್ಲ
ಕುಲ-ಜಾತಿ, ಕಾಲ-ಜಾಗಮಿತಿ
ಒಂದೂ ನನದಲ್ಲ;
ನಾನೆಂದರೆ ಹೆಸರಲ್ಲ,
ರೂಪವೂ ಅಲ್ಲ.

ನಾನುಳಿವುದೂ ಇಲ್ಲ
ಮಣ್ಣಿನಾಸ್ತಿ ಮಣ್ಣು ಹೊಗದೆ ಗತಿಯಿಲ್ಲ.
ಸ್ಥಾವರ-ಜಂಗಮಗಳಲಿ, ಆಗ
ಇಹ-ಪರದ್ದೆರಡೂ ನಾಮಗಳಲಿ
ಗುರುತಿಸಿಕೊಳಲಾರೆ;
ಅದಕೇ ಈಗ
ಬಣ್ಣಿಸಿಕೊಳಲಾರೆ.

ನೀ ಕಂಡದ್ದು ಮಾತ್ರ ಸುಳ್ಳಲ್ಲ
ಒಮ್ಮೊಮ್ಮೆ ನನ್ನಲಿ, ಒಮ್ಮೊಮ್ಮೆ ಅವರಲಿ.
ಅದು ಇದೆ,ಇತ್ತು, ಮತ್ತಿರುವದ್ದು ಕೂಡ.
ಹೆಸರು-ರೂಪ, ಸತ್ಯ-ಸುಳ್ಳು
ವಾಸ್ತವ-ಭ್ರಮೆ, ಮಿತಿ-ಸ್ಮೃತಿ
ಯಾತಕೂ ನಿಲುಕದ
ಮತ್ತೆಲ್ಲವನೂ ಒಳಗೊಂಡ
ಅದನ್ನಷ್ಟೇ ನೆಚ್ಚಿಕೋ
ಮತ್ತು ಮೆಚ್ಚಿಕೋ..

ಕಾಲದೊಂದಿಗೆ ಅವಿರತ ಬೆಳೆವದ್ದು
ಅದೊಂದೇ ಜೀವವೇ,
ಇನ್ನೆಲ್ಲ ತೃಣವಾಗುತಾ ಸಾಗುವವು.
ಕೈಗೂಡೀತು;
ಕ್ಷಣವೊಂದು ಕೃಪೆ ಮಾಡಿದಾಗ
ಅರಗಿಸಿಕೊಂಡಾಗ ಪ್ರಶ್ನಿಸದೆ,
ಕರಗಿಹೋದಾಗ ಉಳಿಯದೆ.
ಹಾಗೆ,  ಆಗ, ನಾನಲ್ಲ, ನೀನಲ್ಲ
ಪ್ರೀತಿ ಬದುಕ ದಕ್ಕಿಸಿಕೊಂಡೀತು;
ಮತ್ತು ಬದುಕು ಪ್ರೀತಿಯ.
ಹೀಗೆ ಅಮರವದರ ದೇವಕಣದಲಾದರೂ
ಬದುಕುಸಿರಾಡಿದ ಕುರುಹುಳಿದೀತು.

ಎಲ್ಲಕ್ಕು ಎತ್ತರದ,
ಆದರೂ ಕೈಗೆಟುಕಿದ
ಅನುಭೂತಿಯೆಂದುಕೊಂಡಿದ್ದು
ಒಂದೆರಡು ನಿದ್ದೆಯಿಂದೀಚೆಗೆ
ಅಥವಾ ಒಂದೆರಡು ಎಚ್ಚರದಿಂದೀಚೆಗೆ
ಕತ್ತಲಕೂಪದ ಭಯವೀಗ!

ಆಗೆಲ್ಲ ಜಗದ ಕಣ್ಣಲಿ
ನನದೇ ಬಿಂಬ, ಸುಸ್ಪಷ್ಟ ..
ನಿದ್ದೆಯಂಥದೇ ಮಾಯೆಯೊಂದು
ಮುಳುಗಿಸಿ ತನ್ನೊಳಗೆ, ಮತ್ತೆ ಹೊರಗೆಸೆದು
ಈಗ ಕಾಣಿಸಿಕೊಳುವುದಾಗುತ್ತಿಲ್ಲ,
ಅಡಗಿಕೊಳಲೂ ಗೊತ್ತಿಲ್ಲವಾದ ಭಯ!

ಈಗೀಗ ನೀನು ಎನುವೆಲ್ಲವೂ
ಕೆಕ್ಕರಿಸಿ ಕಣ್ಣು, ಪರೀಕ್ಷಿಸುತಿವೆ.
ಮೈಮನ ಬಿಚ್ಚಿದೆದೆಯಲಿ ಹರವಿಡುತಿದ್ದೆ;
ಗುಟ್ಟಿಗೊಂದು  ಒಳಗೆಡೆಯಿರದೆ,
ತೆರಕೊಳಲೂ ಆಗದ ವಿವಶತೆ!
ಅಮೃತದಂಥ ಸತ್ಯವೊಂದು ಬಿಸಿತುಪ್ಪವಾದ ಭಯ!

ನನ್ನೊಳಗೊಂದು ಹೊಸಗುಮ್ಮ
ಆಕ್ರಮಣದಾಚೆಗೆ ಗೆದ್ದು, ಮುದ್ದು ಮಾಡುತಾವರಿಸಿ
"ನೀನಿನ್ನು ನೀನಲ್ಲ, ನಾ" ಎನುತಿದೆ.
ನನ್ನೊಳಗಿನ ನಾ, ಹಳೆಯ ಮಬ್ಬುಚಿತ್ರ
ಮುರಿದ ಗಾಜುಚೌಕಟ್ಟಿನೊಳಗಿನ ಪಟ;
ಒಳಪೀಠದಿಂದ ನೇರ ರಸ್ತೆಬದಿಗಿಳಿವ ಭಯ!

ಅಯ್ಯಾ ,
ಅಮೃತಗಳಿಗೆಯೇ ನನಗೇ ಹೇಗೊಲಿದೆ?
ನಾನೋ ಶುದ್ಧ ನರಮಾನವ!
ಬಿಳಿ-ಕಪ್ಪು ಬೇರ್ಪಡಿಸುತಾ ನರನಾಡಿಯೂ
ಮಿಳಿತ ಚೆಲುವಿನೆಡೆ ಅಬೋಧ!
ಹೊಸ್ತಿಲೊಳಹೊರಗೆ
ಬಿಡದಾಡುವ ಲೋಲಾಕು!
ಎಲ್ಲಿ ಖುಶಿಯ ನೆರಳು ಭಯವೋ
 ನಾನಿದೋ ಆ ಸಮಾಜದ ಕೂಸು.

Monday, August 10, 2015


ನಿಜವೇ..
ಅದುಮಬಹುದು
ಭಾವಮೊಗ್ಗರಳದಂತೆ, ಹಾಡು ಹುಟ್ಟದಂತೆ,
ಜೀವಸೆಲೆಯದು ನಿನ್ನಂತರ್ಜಲದ ವಶ!
ಚಿವುಟಬಹುದು
ಮುನ್ನುಗ್ಗದಂತೆ, ಇನ್ನೆತ್ತರಕೇರದಂತೆ,
ಬುಡದಿಂದ ತುದಿವರೆಗೆ ನಿನ್ನೆಡೆ ಬಾಗಿದೆ ಕಾಂಡ!

ಆದರೆ
ಮುರುಟಿಸಲಾರೆ ಬೇರು
ಉಳಿಯದಂತೆ, ಅಲ್ಲೇ ಹಬ್ಬದಂತೆ,
ಅದಾಗಲೇ ನನ್ನಾತ್ಮದೊಳಗಿಳಿದಿದೆ ನೋಡು!
ತಡೆಯಲಾರೆ ಶಕ್ತಿ
ಮತ್ತೆಮತ್ತೆ ಮೆಲ್ಲ ಅದೃಶ್ಯ ಚಿಗುರದಂತೆ,
ಅದಾಗಲೇ ನನ್ನಸ್ತಿತ್ವದ್ದಾಗಿದೆ ಕುರುಹು! 

ಅಯ್ಯೋ!
ನೀ ಬಂದಿರುವುದು ಸ್ನೇಹದಾವರಣದೊಳಗೆ,
ಅದಾಗಲೇ ಇಹದೆಲ್ಲ ಮೀರಿ ಚಿರಾಯುವಾಗಿಯಾಗಿದೆ  ಬಿಡು..

Sunday, August 9, 2015

ಉಸಿರೆರೆದು ಪೊರೆದಿದ್ದೆ.
ಸಾಧ್ಯತೆ ಹೊತ್ತುತಂದ
ಹತ್ತುಹಲ ಹೆಜ್ಜೆ ಗುರುತಾಗುತಲೂ
ತೋಟದೊಳಗೊಂದೂ
ಹೂವರಳಲಿಲ್ಲ.
ಕಾಲವುರುಳುತಾ
ಕೆಲ ಗುರುತುಳಿದವು, ಕೆಲವಳಿದವು.
ಕಾಯುತಿದ್ದೆವು ನಾನೂ ತೋಟವೂ..
ನೀ ಹೊಕ್ಕ ಹೊತ್ತು ಕಾಲ ಮೈನೆರೆದಿತ್ತೇನೋ!
ಬಸಿರುಟ್ಟು ಹೂ ಬಿಟ್ಟಿತು .

ತನು ನಿನ್ನದು ಜೀವನ ನಿನದು ಎನಲಾರೆ ದೊರೆಯೇ
ಅಮಿತ ಮನದ ಪ್ರಶಸ್ತ ದಿಕ್ಕಲಿ
ಹಚ್ಚಿದೊಂದು ಅದೇ ಹೂಬೇಲಿಯೊಳಗೆ
ಹೂಮಾಡು, ಹೂ ನೆಲದ ನಡು
ಕಟ್ಟಿದ್ದೇನೆ ನಾಕು ಗೋಡೆ
ಬೆಚ್ಚಗಿರಿಸಿದ್ದೇನೆ ಒಳಗೆ,
ಮತ್ತದೇ  ಹೂವೆರೆದು ಪೂಜಿಸಿದ್ದೇನೆ ನಿನ್ನ.

ಎಂದಿಗಾದರೂ
ಹೂ ಸೋಕಿದರಿವಾದರೊಮ್ಮೆ
ಕಣ್ಮುಚ್ಚಿ ಎಲ್ಲ ಆಲಿಸು..
ಉಸಿರೆರೆದ ತೋಟದ
ಘಮ ಕೇಳಿದರೆ ಗುರುತಿಸಿಕೋ.
ಅದೇ ನಾನಾಗಿರುತ್ತೇನೆ..
ಎಂದೋ ನಿನಗರ್ಪಿತ,
ನಿನ್ನಲೇ ಮೈಮರೆತ ಅದೇ ನಾನು..

Saturday, August 8, 2015

ಅದೋ ಆ ಸಂದೇಶ ಬಂದಂದು  ಸಂಜೆಮಲ್ಲಿಗೆ ನಸುನಸುಕಲಿ ಅರಳಿತ್ತು;
ಮನದಂಗಣ ರಂಗುಪಡುವಣ, ದುಂಬಿರೆಕ್ಕೆ ಹಾಡುಗಬ್ಬ!
ಅದರಿಂದೀಚೆಗೆ ಸಂಜೆಗಷ್ಟೇ ಅರಳುತಿದೆ;
ಹಾಗೆ ಹೊತ್ತುಗೊತ್ತದಕೂ ಗೊತ್ತು.

ಮುಂದೊಮ್ಮೆ ಬಿರುಬಿಸಿಲ ನಡು ಸುಮ್ಮಸುಮ್ಮನೆ ಮೋಡ ಸುರಿದಿತ್ತು
ಕಣ್ಣಿನಂಗಳ ಪಸೆಪಸೆ, ಮಳೆಬಿಲ್ಲಿನ ಬಣ್ಣಗಬ್ಬ!
ತುಸುವೇ ಹೊತ್ತಿಗೆ ಮೋಡ ಚದುರಿತ್ತು;
ಕಾಲನಿಯಮವದಕೂ ಗೊತ್ತು.

ಪಾರಿಜಾತದ ಗೆಲ್ಲಿನ ಹಕ್ಕಿಗೂಡಲಿ ತತ್ತಿಯೊಡೆದು ಮರಿ ಮೂಡಿತ್ತು.
ಬಾಳಿನಂಗಳ ತುಂಬುಭರವಸೆ, ಬೆಳ್ದಿಂಗಳ ಹುಣ್ಣಿಮೆಹಬ್ಬ!
ಮರಿ ಹಾರಿ ಗೂಡುರುಳುವ ಭಯದಲೇ ಈಗೀಗ ಬೆಳಗಾಗುತಿದೆ;
ನನಗೆ ನಾವಿಬ್ಬರೂ ಗೊತ್ತು.