Sunday, June 26, 2016

ಮೆಲ್ಲ ಆವರಿಸುತಾ
ಅರ್ಪಣೆಯ ಪೂರ್ಣಾಹುತಿಗೊಳುವ ಬೆಂಕಿಯಂಥ ಸತ್ಯವೇ,
ಮುಷ್ಟಿಯಷ್ಟು ನಿನದಮೂಲ್ಯ ಸಂಗ ಕೊಟ್ಟುಬಿಡು;
ದಹಿಸಿಕೊಳಬೇಕು
ಬೂದಿಯೇ ಪರಿಚಯಿಸುವಂತೆನ್ನ ನಾಳೆ

ಕುಳಿಗಾಳಿಯಲುಗ ನೇವರಿಕೆ,
ಅಳಕಿರಿದಷ್ಟಿನ್ನೂ ಬೇಕೆನಿಸುವೊಂದು ನೋವೇ,
ಚಿಟಿಕೆಯಷ್ಟು ನಿನದಮೂಲ್ಯ ಸಹಜತೆ ಕೊಟ್ಟುಬಿಡು;
ಬೆತ್ತಲಾಗಬೇಕು
ಹುದುಗಿಹೋಗುವೆನೆಂಬಂತೆ ಮರೆವಿನಡಿ ನಾಳೆ..

ನಾಭಿಮೂಲದ ಪುಳಕವೇ,
ಭ್ರೂಮಧ್ಯದ ಚಕ್ರಚಳಕವೇ,
ಆ ತುದಿಯಿಂದೀತುದಿವರೆಗಿನ ರೋಮಾಂಚನವೇ,
ರವಷ್ಟು ನಿನದಮೂಲ್ಯ  ಹೊತ್ತು ಕೊಟ್ಟುಬಿಡು;
ಒಳಗೊಳಬೇಕು
ಕ್ಷಣವೊಂದೂ ನನ್ನ ಹೊರಗುಳಿಯದಂತೆ ನಾಳೆ..

ಸಾಲುಮರಹಾಡಿಯ ಗಾಳಿಗುಂಜನ,
ಮಿಂಚು-ಗುಡುಗುಗಳಂತರದ ಕಂಪನ,
ಅಮ್ಮನ ಸೆರಗು ಕೆನ್ನೆ ತೀಡಿದ,
ಅಪ್ಪನುಸಿರು ನೆತ್ತಿ ಮೂಸಿದ....
ಸೇತುವಿನಂಥ ಓ ಮೌನಗಮನವೇ,
ತೃಣದಷ್ಟು ನಿನದಮೂಲ್ಯ ಸ್ಪಂದನೆ ಕೊಟ್ಟುಬಿಡು,
ಮಿಳಿತವಾಗಬೇಕು
ಇನ್ನು ಬಾಕಿಯಿಲ್ಲವೆಂಬಂತೆ ಎನಗೆ ನಾಳೆ..

ಕಾಣಬೇಕು ಅಂದ.
ಮುಚ್ಚಿದ ಕಣ್ಣಡಿಯೀಗ
ಎಂದೂ ಮರೆಯಾಗದಾಗಸವಾಗುವ ಕನಸು..

ಮುಟ್ಟಬೇಕು ಅಂದ.
ಕಣ್ಣರಳಿವೆ ಇಷ್ಟಗಲ;
ಅವನೆಲ್ಲ ಹಾದಿಯೂ ಹೊದೆವ ನೆಲವಾಗುವ ಕನಸು..

ತಟ್ಟಬೇಕು ಅಂದ.
ಹರಳುಗಟ್ಟಿದೆ ಕಣ್ಣ ದಾಹ;
ಬಾಳಹರಿವಿನಡಿ ತೋಯ್ದು ನಸೆಗಲ್ಲಾಗುವ ಕನಸು...

ಆವರಿಸಬೇಕು ಅಂದ.
ಕಣ್ರೆಪ್ಪೆ ಗಾಳಿಗಾಡುತಿವೆ;
ಉಸಿರ ತೆಕ್ಕೆಯ ಹುಚ್ಚು ಜೋಕಾಲಿಯಾಗುವ ಕನಸು..

ಒಳಗಿಳಿಯಬೇಕು ಅಂದ.
ಕಣ್ಣಸುಳಿಯೀಗ ಧ್ಯಾನಸ್ಥ;
ಅವಗವನ ತೋರುವ ಏಕಾಂತಕ್ಷಣಪುಂಜವಾಗುವ ಕನಸು..

ಅಂಟಿಕೊಳಬೇಕು ಅಂದ.
ಕಣ್ಣೊಳಗೊಂದು ಕ್ಷಿತಿಜ;
ಅಂಗೈ ನಟ್ಟನಡುವೊಂದು ಹುಟ್ಟುಮಚ್ಚೆಯಾಗುವ ಕನಸು..

ಮರೆತುಬಿಡಬೇಕು ಅಂದ;
ಸುಳ್ಳುಸುಳ್ಳೇ ನಕ್ಕಿವೆ ಕಣ್ಣು;
ಕಾಣುವಾಸೆಗಷ್ಟೇ ಪ್ರಕಟ, ಬೆನ್ನಿಗಂಟುವ ನೆರಳಾಗುವ ಕನಸು..

ಕಳಚಿಕೊಳಬೇಕು ಅಂದ.
ಖಾಲಿಯಾಗುತಿವೆ ಕಣ್ಣಬಣ್ಣ;
ಮಿಸುಕಾಡಿದಾಗ ಅಲ್ಲೊಳಗೇನೋ, ಬೆರಳಡಿ ಹಾಳೆಯಾಗುವ ಕನಸು..

ಬಿಟ್ಟುಹೋಗಬೇಕು ಅಂದ.
ಆಗದೆಯೂ ತೆರೆಕೊಂಡ ಕಣ್ಣಕದ;
ನೂರೊಂದರಲಿ ಅವನದೊಂದಾದರೂ ಹಾಡ ಹೊಗುವ ಕನಸು..

ಬಿಡದೆ ಸಾಗಿವೆ ಕನಸು
ನಿದ್ದೆ ಹಾದಿಯ ತುದಿಗೆ ಉರಿದೊಂದಿ ಬೆಳಕು!
ದೀಪದಡಿಯ ಬೂದಿಯಿಂದೆದ್ದ
ಅಮೃತಹಕ್ಕಿ ರೆಕ್ಕೆ ಕಾವಿಗೆ
ಕೋಶ ಕಳಚಿ, ಕನಸ ಪತಂಗ ರೆಕ್ಕೆಬಿಚ್ಚಿ,
ಮತ್ತೆ ಹಾರಿವೆ ದೀಪದೆಡೆಗೆ!



Friday, June 3, 2016


ಬರಲೇನು ಅನುತಾ
ಬರುವ ಆರಡಿಯೆತ್ತರದ ನನಸಲ್ಲ;
ಅಲ್ಲೆಲ್ಲಿಂದಲೋ ನಿದ್ದೆಗೆ ಕನಸ ಕಚಗುಳಿಯಿಟ್ಟು
ಝುಮ್ಮೆನಿಸುವ ತುದಿಬೆರಳ ಸ್ಪರ್ಶ ಅವನು!

ತುಂಬಿ ಸಿಹಿ ತರುತಾ
ಕಹಿಯೆಲ್ಲ ಮರೆ ಮಾಡುವ ತುತ್ತಲ್ಲ;
ಅಲ್ಲೆಲ್ಲೋ ನಗೆ ಮೊಗ್ಗಿನಡಿಯಿಂದ ಸಾರ ಹಾರಿಸಿತಂದು
ಒದ್ದೆ ಒಡಲಿಗೆ ಬೇರಿಳಿಸುವ ಸತ್ವ ಅವನು!

ಅಬ್ಬರದ ಕಡಲಡಿಯಿರುವ
ಬಲು ಅಪೂರ್ಪ ರತ್ನಹವಳವಲ್ಲ;
ಈ ಕತ್ತಿನಿಳಿಜಾರಲಿ ಹರಿವ ಕಣ್ಣಹನಿ ಕುಡಿದು
ಸ್ವಾತಿಮುತ್ತಾಗಿಸುವ ಸಿಂಪಿಯ ಮೌನ ಅವನು!

ಹೋಗುಹೋಗೋ ಕಾಲವೇ,
ಮುಳ್ಳು ನಡೆಸುವ ನಡೆ ನೀನು;
ಹೆಚ್ಚೇನು ಬಯಸಲಾದೀತು?
ಬಾಯ್ದೆರೆದಲ್ಲೆಲ್ಲ ತೊಟ್ಟಿಕ್ಕೀತೆ ಜೇನು?

ಅವನೆಂಬುದ ಭಟ್ಟಿಯಿಳಿಸಿಕೊಂಡು
ಮುಚ್ಚಿಟ್ಟ ಅಟ್ಟದ ಮೇಲಿನೊಂದು ಪಾತ್ರೆಯಲಿ
ಕೆನೆಹಾಲು ದಿನವೂ ಮೊಸರಾಗುತದೆ..
ಹೆಪ್ಪಿಟ್ಟ ನೆನಪು ಸದಾ ಸವಿ ಮೆತ್ತುತವೆ.

ಕಾಯುವರಮನೆಗಾಗಲೇ ಕೆಸರುಕಲ್ಲಿಟ್ಟಾಗಿದೆ,
ಪ್ರತಿ ನಾಳೆಯೂ ಶುಭವೆ ನನ್ನ ಮನೆಯೊಕ್ಕಲಿಗೆ..
ಕಿಂಡಿಯೆದುರಿಡುವೆ ಅವನ ಹೆಸರಿನೊಂದು ಗಾಳಿಗಂಟೆ
ಅಲೆ ಸಣ್ಣದೊಂದೂ ಸಾಕು ಪುಳಕವೆಬ್ಬಿಸಿ ಹರಡಲಿಕೆ!

Thursday, June 2, 2016

ನೀರ ನೈದಿಲೆ ಆಕಾಶಮಲ್ಲಿಗೆಗನುತಾಳೆ...

ತೋಳ್ಚಾಚಿ ಕರೆದೊಂದು ದಿನ ಆಗಸ
ಕಾರ್ಮೋಡಕೆ ಆತ್ಮಸಾಕ್ಷಾತ್ಕಾರ!
ಸೋನೆ ಹನಿ ಮೀಸಿದೊಂದು ದಿನ ಎಳೆಬಿಸಿಲ
ಹಸಿರಕಣ್ಣಲಿ ಮಳೆಬಿಲ್ಲ ವಯ್ಯಾರ!
ಉಕ್ಕೇರಿದಾಗೊಮ್ಮೆ ಮುಚ್ಚಿಟ್ಟ ಉದ್ವೇಗ
ಮೈಮುರಿದು ನಸುನಕ್ಕೀತು ಬರ!
ಬಿಚ್ಚಿ ಸುರಿದಾಗಲೊಮ್ಮೆ ಎದೆಯಾವೇಗ
ಮಣ್ಣಿನೆದೆ ಪರಿಮಳಕಾಗ ಎಚ್ಚರ!
ಜಾಜಿಚಪ್ಪರದಲಿ ಎಳೆಬಸಿರ ಪುಳಕ
ಕಂಪಿನಲೆಯಲಿ ಗಾಳಿಗೆ ಸ್ವಯಂಸಾಕಾರ!
ಅಚ್ಚರಿಯೇಕೇ?!
ಇರುಳನೂ ಹಾದಿಯಾಗಿಸುವ ಅದ್ಭುತವೇ,
ಕೇಳು ಕತ್ತಲಿನೊಂದು ಹೊಳೆಹೊಳೆವ ಕಣ್ಣೇ,
ಪ್ರೀತಿಯೂರಿನೊಂದು ಅದ್ಭುತ, ಓ ಹೆಣ್ಣೇ,
ವಸಂತನ ಹಿಂದೆ ತಾನೇ ಚಿಗುರು ತುತ್ತೂರಿಯೊಂದು
ಕೋಗಿಲೆಯೆದೆಗೆ ಜೀವ ತುಂಬುವುದು?
ಪಕ್ಕಾ ಸ್ವಯಂಭುವೊಂದು ಮೋಹಕೆ ತಾನೇ
ಸುಮ್ಮಸುಮ್ಮನೆ ನರನಾಡಿಯವನನೇ ಮಿಡಿವುದು?
ಎಲೆ ನಭದ ಮಡಿಲ ಮುದ್ದು ತಾರೆಯೇ,
ಸಿಕ್ಕಿದಾಗ ಹೇಗೋ ಬೆಳಕತುಣುಕೊಂದು
ಫಳ್ಳನೆ ನಗದೆ ಇದೇನು ವರಸೆಯೇ?
ಯಾರಂದವರು ಚಂದ್ರನೆಂದರೆ
ಲೋಕಕೊಬ್ಬನೇ ಎಂದು?!
ನೋಡು,
ನಿನ್ನೂರಿನಾಗಸದ ಬೆಳ್ಳಿತುಂಡೇ ಬೇರೆ,
ನನ್ನೂರ ಸೂರ ಬೆಳಕಿಂಡಿಯೇ ಬೇರೆ..
ಅಲ್ಲವ ನಿನ್ನ ಕಣ್ಮಣಿ, ಇಲ್ಲಿ ನಾನಿವನದು!