Friday, December 14, 2012

                            ಆತ್ಮಸಖಿಗೊಂದು ಪತ್ರ ---೩




    ಸಖೀ, ನಿನ್ನೆ ಸಾಯಂಕಾಲದ ನಡಿಗೆಯಲ್ಲಿ ನಮ್ಮ ನೆರೆಯವರೊಬ್ಬರು ಜೊತೆಯಾದರು. ಅವರ ಕೈಲಿ ಅವರದೊಂದು ನಾಯಿ ಸೂಝಿ. ಬಾಂಧವ್ಯ ಬೆಸೆಯಲು ಪ್ರೀತಿಯಷ್ಟೇ ಬೇಕು ಮತ್ತು ಪ್ರೀತಿಯಷ್ಟೇ ಸಾಕು ಅನ್ನೋದು ಅಲ್ಲಿ ಮತ್ತೂ ಸ್ಪಷ್ಟವಾಯಿತು ಕಣೇ. ಅವರು ಇತ್ತೀಚೆಗಷ್ಟೇ ಕೈಗೆ ಏಟು ಮಾಡಿಕೊಂಡಿದ್ದ ಕಾರಣ ನಾಯಿಬೆಲ್ಟ್ ಹಿಡಿದುಕೊಂಡು ಹೋಗುವುದು ಕಷ್ಟ ಆಗುತಿತ್ತು. ಹಾಗಾಗಿ ಅವರ ಕಷ್ಟ ನೋಡಲಾಗದೇ "ಕೊಡಿ ಇಲ್ಲಿ" ಅಂತ ತಗೊಂಡೆ ನೋಡು... ತಿರುಗಿ ನನ್ನನ್ನೊಮ್ಮೆ ಅವರನ್ನೊಮ್ಮೆ ನೋಡಿದ್ದೇ, ಕೂಗುತ್ತಾ, ಅವರೆಡೆಗೆ ಹಾರಿ ಕುಣಿದು, ಅವರಸುತ್ತ ಮೂರು ಸುತ್ತು ತಿರುಗಿದ್ದೇ ಬಲಪ್ರಯೋಗಿಸಿ ನನ್ನಿಂದ ಬಿಡಿಸಿಕೊಳ್ಳಲೆತ್ನಿಸತೊಡಗಿತು. ಮತ್ತದನ್ನು ತನ್ನ ವಶಕ್ಕೆ ತೆಗೆದುಕೊಂಡಡು ನಸುನಕ್ಕ ಆಕೆ ತನ್ನೆಡೆಗೆ ಅದರ ಪ್ರೀತಿಯ ಪರಿಯನ್ನ ಎಳೆ ಎಳೆಎಳೆಯಾಗಿ ಬಿಚ್ಚಿಡತೊಡಗಿದರು.....

    ನಾಯಿಯನ್ನ ನಮ್ಮಕಡೆ ನಮ್ಮವರು ಮನೆಯಲ್ಲಿ ಸಾಕುವ ಪರಿಪಾಠ ಇಲ್ಲ ನೋಡು, ಅದರ ಬೌಧ್ಧಿಕತೆಯ ಪರಿಚಯ ಅಂದ್ರೆ ಅದು ತುಂಬಾ ನಿಯತ್ತಿನ ಪ್ರಾಣಿ ಅನ್ನೋದು ಬಿಟ್ರೆ, ಅದರ ನಿಸ್ವಾರ್ಥ ಪ್ರೀತಿಯ ಮಟ್ಟದ ನೇರ ಪರಿಚಯ ನನಗಾಗಿರಲಿಲ್ಲ. ಈ ನಾಯಿ ಆಕೆಯನ್ನು ತನ್ನ ತಾಯಿ ಅಂತಲೇ ಭಾವಿಸಿದಂತಿತ್ತು. ನಮ್ಮೊಡನೆ ಒಂದೈದಾರು ವಾಕ್ಯ ಮಾತಾಡಿದ ನಂತರ "ಅಲ್ಲ್ವೇನೋ ಸೂಝಿ" ಅಂತ ಆಕೆ ಆಗಾಗ ಅದನ್ನೂ ಆ ಸಂಭಾಷಣೆಯೊಳಗೆಳೆದು ತರಲೇಬೇಕಾಗಿತ್ತು ಕಣೆ. ಇಲ್ಲವಾದಲ್ಲಿ ಒಂದಷ್ಟು ಹೊತ್ತಿನ ನಂತರ ಇಲ್ಲದ ಚೇಷ್ಟೆ ಮಾಡಿ ಅವರನ್ನ ತನ್ನತ್ತ ಸೆಳೆಯುತ್ತಿತ್ತು. ಆಕೆ ಮೊನ್ನೆ ಯಾವುದೋ ಒಂದು ಧಾರವಾಹಿಯಲ್ಲಿನ ಸನ್ನಿವೇಶಕ್ಕಾಗಿ ಒಂದೆರಡುಹನಿ ಕಣ್ಣೆರು ಸುರಿಸಿದರಂತೆ ನೋಡು, ಹಾರಿ ಬಂದು ಎದೆಯ ಮೇಲೆ ಮುಖವಿಟ್ಟು ಕೂತುಬಿಡ್ತಂತೆ, ಸಮಾಧಾನಿಸುವವರ ಹಾಗೆ. ಅವರ ಕೋಣೆಯಲ್ಲಿ ಕೆಂಪು ಬಣ್ಣದ ಟ್ರಾವೆಲ್ ಬ್ಯಾಗ್ ಒಂದಿದೆಯಂತೆ, ಅದನ್ನೇನಾದರೂ ಎತ್ತಿಕೊಂಡು ಈ ಕೋಣೆಗೆ ಬಂದರೆ ಸಾಕಂತೆ, ಬಾಲ ಅಲ್ಲಡಿಸಿಕೊಂಡು ಕುಯ್ ಕುಯ್ ಅಂತ ಅವರ ಸುತ್ತಮುತ್ತಲೇ ತಿರುಗಾಡುತ್ತ ತನ್ನ ಅಸಹಾಯಕತೆ ಬಯಲು ಮಾಡುತ್ತಂತೆ ಮತ್ತು ಅದರ ಕುಯ್ಗುಡುವಿಕೆಯಲ್ಲಿ "ಬಿಟ್ಟುಹೋಗಬೇಡ" ಅನ್ನುವ ಕೋರಿಕೆಯ ಧಾಟಿಯಿರುತ್ತಂತೆ. "ಸೂಝಿ ನಾನು ಹೊರಟೆ" ಅಂತಂದರೆ ಸಾಕಂತೆ ಓಡಿ ಬಂದು ಮುಂದಿನೆರಡೂ ಕಾಲುಗಳಿಂದ ಈಕೆಯ ಕಾಲು ಬಳಸಿ ತಡೆಯುತ್ತದಂತೆ. ಹೆಮ್ಮೆಯಿಂದ ಹೇಳುತ್ತಲೇ ಹೋದ ಆಕೆಯ ಮನಸಿನ ಸಂತೋಷ ಸ್ಪಷ್ಟವಾಗಿ ಆ ಮುಖಭಾವದಲ್ಲಿ ಗೋಚರಿಸುತ್ತಿತ್ತು. ಹೀಗೆ ಇನ್ನೂ ಒಂದಷ್ಟು ಅದರ ಕತೆಗಳನ್ನು ಕೇಳಿ ಒಂದು ಕ್ಷಣ ನನಗನಿಸಿತು ಅಯ್ಯೋ ಇಷ್ಟೊಂದು ಪ್ರೀತಿಸುವ ಜೀವಿಗೆ ಅದನ್ನು ಮಾತಾಡಿ ವ್ಯಕ್ತಪಡಿಸುವ ಸಾಧ್ಯತೆಯನ್ನು ಪ್ರಕೃತಿ ಕೊಟ್ಟಿಲ್ಲವಲ್ಲಾ ಅಂತ. ಕೇವಲ ಸಂಜ್ಞೆಗಳಿಂದಲೇ ಇಷ್ಟೊಂದು ಪ್ರಭಾವಶಾಲಿಯಾಗಿ ಪ್ರೀತಿ ವ್ಯಕ್ತಪಡಿಸುವದ್ದು ಇನ್ನು ಮಾತು ಬಂದಿದ್ದರೆ ಇನ್ನೆಷ್ಟೆಲ್ಲಾ ಪ್ರೀತಿಯ ರೀತಿಯನ್ನದು ತೋರಿಸಬಹುದಿತ್ತು....ಆಕೆಗಿನ್ನೆಷ್ಟು ಖುಶಿ ಸಿಗುತ್ತಿದ್ದಿರಬಹುದು... ಅನ್ನಿಸಿತು, ಅದನ್ನಾಕೆಯೊಡನೆ ಹೇಳಿಯೂ ಬಿಟ್ಟೆ. "ಅಯ್ಯೋ ಸುಮ್ನಿರಿ ಮಾತು ಬರದಿದ್ದರೇನೇ ಒಳ್ಳೆಯದು ಬಿಡಿ... .... " ಅನ್ನುವುದೇ.....! ಒಮ್ಮೆ ನಾನು ದಂಗಾದರೂ ಮರುಕ್ಷಣ ನಿಜವೆನಿಸಿತು.

    ಈಗ ಹೇಳೇ... ಮಾತು ಬರುತಿದ್ದರೆ ಆ ನಾಯಿಯೆಂಬ ಜೀವದಲ್ಲಿ ಪ್ರತಿಫಲಿಸುತ್ತಿರುವ ಅದರೊಡತಿಯ ಪ್ರೀತಿ ಅಷ್ಟು ಬಲಿಷ್ಠವಾಗಿರಲು ಸಾಧ್ಯವಿತ್ತೇ..? ಹೋಗಬೇಡ ಎಂದು ಕಾಲನ್ನು ಬಳಸುವ ವೇಳೆ ಜೋರಾಗಿ "ಹೋಗಬೇಡ" ಅಂತ ನಾಯಿಯೊಂದು ಹೇಳಿದ್ದಿದ್ದರೆ ಅದು ಅಧಿಕಾರ ಚಲಾಯಿಸುತ್ತಿದೆ ಅನ್ನಿಸುತ್ತಿರಲಿಲ್ಲವೇನೇ...".ಮೌನ ಸಾಕು ಮಾತು ಬೇಕು"- ನಾವೆಲ್ಲ ಕಾಲೇಜು ದಿನಗಳಲ್ಲಿ ಹಾಡುತ್ತಿದ್ದ "ಮಾತನಾಡು ಮೊಗ್ಗೇ ನೀನು" ನೆನಪಿದೆಯಾ..? ಆ ಹಾಡಿನ ಈ ಮೇಲಿನ ಸಾಲು ನನಗೆ ತುಂಬಾ ಆತ್ಮೀಯವೆನಿಸುತಿತ್ತು ಸಖೀ... "ಮಾತುಗಳಲೆ ಮಿಂದು ಮಡಿಯಾಗುವಾ" ಅಂತ ನಾನೂ ಎಲ್ಲೋ ಒಮ್ಮೆ ಬರೆದ ನೆನಪು. ಮಾತು ಬಾಳ್ವೆಗೆ ತುಂಬಾ ಅಗತ್ಯದ ವಿಷಯ ಅಂತ ನಾನು ಬಲವಾಗಿ ನಂಬಿದ್ದೇನೆ. ಆದರೆ ಈ ಒಂದು ಗಳಿಗೆ ಅದೆಲ್ಲ ಸುಳ್ಳು ಅನ್ನಿಸಿತು ಕಣೆ. ಅಂದರೆ ಮಾತು ಎಷ್ಟೋ ಸಂಬಂಧಗಳಿಗೆ ಮುಳುವಾಗುತ್ತದಾ? ಒಪ್ಪುವಾ.., ತೂಕವಿಲ್ಲದ ಅಸಂಬದ್ಧ ಮಾತುಗಳು ಅಥವಾ ಕಠೋರ ಮಾತುಗಳು ಖಂಡಿತಾ ಸಂಬಂಧವೊಂದಕ್ಕೆ ಮಾರಕ ಒಪ್ಪುತ್ತೇನೆ. ಆದರೆ ಮಾತು ಬರುವುದಕ್ಕಿಂತ ಮೂಕವಾಗಿರುವುದು ಮೇಲು ಅಂತ ಈ ಸಂದರ್ಭದಲ್ಲಿ ಅನ್ನಿಸುವಷ್ಟು ಅಪಾಯಕಾರಿನಾ ಮಾತು?

    ಒಂದು ಸಂಬಂಧದ ಮತ್ತದರೊಳಗಿನ ಪ್ರೀತಿಯ ಹುಟ್ಟಲ್ಲಿ, ಬಲಿಯುವಿಕೆಯಲ್ಲಿ ಮತ್ತು ಉಳಿಯುವಲ್ಲಿ ಮಾತು ವಹಿಸುವ ಪಾತ್ರವಾದರೂ ಏನು? ಮಾತನ್ನೇ ಎಲ್ಲಾ ಅನಿಷ್ಟಗಳಿಗೂ ಕಾರಣ ಅಂತ ದೂರುವ ಹಿನ್ನೆಲೆಯಲ್ಲಿ ಮಾತು ಬರೋದಕ್ಕಿಂತ, ಇಲ್ಲದಿರುವುದೇ ಮೇಲು ಅನ್ನುವ ಮಾತು ತಾತ್ಕಾಲಿಕವಾಗಿ ಹೌದು ಅನ್ನಿಸಿದರೂ, ಅದು ಮನುಷ್ಯನಿಗೆ ದೇವರಿತ್ತ ವರ ಅನ್ನುವುದೂ ಸುಳ್ಳಲ್ಲ ಕಣೇ... ಎಷ್ಟು ಸುಂದರವಾದ ಅಭಿವ್ಯಕ್ತಿ ಮಾಧ್ಯಮ ಅದು! ಆ ಮಾಧ್ಯಮವನ್ನು ಬಳಸುವುದರ ಮೇಲೆಯೇ ಸಂಬಧಗಳ ಅಳಿವು-ಉಳಿವು ಇದೆ, ಅಲ್ಲಿ ಸ್ಪಷ್ಟವಾಗುತ್ತದೆ ಅದರ ಪಾತ್ರ...ಅಂತೀಯಾ?

    ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿದೆ. ಹಾಗಾದರೆ, ಮಾತನ್ನು ಹಿತಮಿತವಾಗಿ, ಅಳೆದುತೂಗಿ ಬಳಸಿದಲ್ಲಿ ಮಾತ್ರ ಅದು ಜೀವನಾನಂದಕ್ಕೆ ಪೂರಕವಾ? ಹಾಗೊಮ್ಮೆ ಪ್ರತಿ ಬಾರಿಯೂ ಅಳೆದುಸುರಿದು ಮಾತುದುರಿಸುವುದು ಸಾಧ್ಯವಾಗುವ ಮಾತೇನೇ? ನಾವು ಪ್ರೀತಿಸುವ, ನಂಬಿರುವ ಜೀವಗಳೆದುರು ಮುಕ್ತವಾಗಿ ಮಾತನಾಡುವುದು ಸಹಜವಲ್ಲವೇನೇ? ಅಲ್ಲಿಯೂ ಸಂಶಯಿಸಿ ಆಡುವ ಮಾತುಗಳು ಸತ್ಯವನ್ನೊಳಗೊಂಡು, ಪ್ರಾಮಾಣಿಕವಾಗಿರುತ್ತವೇನೇ? ಮೆಚ್ಚಿಸುವ, ಒಪ್ಪಿಸುವ ಹವಣಿಕೆ ಇಣುಕುವ ಸಾಧ್ಯತೆ ಬರಲ್ಲವಾ? ಅದರಿಂದ ಹುಟ್ಟುವ ಅಸಹಜತೆ ಅನುಬಂಧಕ್ಕೆ ಮಾರಕವೇ ತಾನೇ? ಹೌದು, ಅದಕ್ಕೆ ಯಾವುದೇ ವ್ಯವಹಾರದಲ್ಲಿ ಅಸಹಜತೆ ಇರಬಾರದೆಂದರೆ ಅಲ್ಲಿ ಪೂರ್ವಾಗ್ರಹಪೀಡಿತ ಅಥವಾ ಆಷಾಡಭೂತಿತನದ ಮಾತುಗಳಿರಬಾರದು. ಅಂದರೆ ಮಾತಾಡುವ ಕಲೆಯನ್ನು ಕಲಿತುಕೊಳ್ಳಬಹುದು ಅನ್ನುತ್ತೀಯಾ? ನನಗನಿಸುತ್ತದೆ, ಮಾತುಕಲಿಯುವ ವಯಸ್ಸಿನ ಮಗು ಸುತ್ತಮುತ್ತಲಿನ ವಾತಾವರಣದ ಮಾತುಗಳಿಂದ ಪ್ರಭಾವಿತವಾಗಿ ಮಾತಿನ ಧಾಟಿಯನ್ನು ಏನು ಕಲಿಯುತ್ತದೆ ಅದೇ ಜೀವನಪರ್ಯಂತ ಉಳಿದುಕೊಳ್ಳುತ್ತದೆ... ಅಲ್ಪಸ್ವಲ್ಪ ಬದಲಾಗಬಹುದಾದ ಅದರ ಚಿಂತನೆಯ ಧಾಟಿಗನುಗುಣವಾಗಿ ಮಾತಿನ ಧಾಟಿ ಸ್ವಲ್ಪ ಮಟ್ಟಿಗೆ ಬದಲಾದರೂ ಮೂಲಭೂತ ಶೈಲಿ ಉಳಿದೇ ಉಳಿಯುತ್ತದೆ, ಏನಂತೀಯಾ?

    ನುಡಿದರೆ ಮುತ್ತಿನ ಹಾರದಂತಿರಬೇಕು......ಅಂತ ವಚನಕಾರರು ಹೇಳಿದಂತೆ, ಮಾತು ಕರ್ಣಾಮೃತವೆನಿಸಬೇಕೆಂಬುದೇನೋ ನಿಜ... ಆದರೆ ಅದನ್ನು ಸಾಧಿಸುವಲ್ಲಿ ಹಲವಾರು ಬಾರಿ ನಮ್ಮನ್ನು ನಾವು ನೋವಿಗೊಡ್ಡಿಕೊಳ್ಳಬೇಕಾಗಿ ಬರುವುದಂತೂ ನಿಜ. ಹಾಗಂತ ಕರ್ಣಕಠೋರವಾಗಿ ಮಾತನಾಡುವವರು ನಿರಾಳವಾಗಿರುತ್ತಾರೆ ಎಂದೇನೂ ಅರ್ಥವಲ್ಲ, ಎದುರಿರುವವರು ಇವರ ಮಾತುಗಳಿಗೆ ಹೆದರಿದಂತೆ ವರ್ತಿಸಿದರೂ ಅವರ ಭಾವ, "ಅಬ್ಬಾ ಇವರ ಸಹವಾಸ ಬೇಡಪ್ಪಾ "ಎನ್ನುವಂತಿರುತ್ತದೆ. ಅಲ್ಲಿ ಆತ್ಮೀಯತೆ ಸುಲಭವಾಗಿ ಚಿಗುರುವುದಿಲ್ಲ, ಹಾಗಾಗಿ ಇಂಥವರಿಗೆ ತಮ್ಮ ನೇರ ಹಾಗೂ ಮೊನಚು ಮಾತುಗಳ ಕಾರಣ ದೂರವಿಡಲ್ಪಡುವ ನೋವಿರುತ್ತದೆ. ಮತ್ತಿದೂ ಇದೆ, ನಗುತ್ತಾ ಮೆತ್ತಗೆ ಮಾತಾಡುವವರ ಆಶಯ ನಿಜವಾಗಿಯೂ ಮೃದುವ್ಯವಹಾರವೇ ಆಗಿದ್ದರೂ, ಸದಾ ನಗುವವರನ್ನ ನಂಬಬಾರದು, ಅತಿವಿನಯಂ ಧೂರ್ತಲಕ್ಷಣಂ ಮುಂತಾದ ಮಾತುಗಳನ್ನೆದುರಿಟ್ಟು ಅದನ್ನೂ ಖಂಡಿಸುವವರಿದ್ದಾರೆ. ಇನ್ನು ಸತ್ಯ ಅಸತ್ಯ ಮಾತುಗಳನ್ನು ಆಡುವುದನ್ನು ಕುರಿತು. ಇದಂತೂ ಅತ್ಯಂತ ಧರ್ಮ ಸಂಕಟದ ವಿಷಯ... ನ ಬ್ರೂಯಾತ್ ಸತ್ಯಮಪ್ರಿಯಂ ಅನ್ನುವ ಮಾತು ಅಪ್ರಿಯಸತ್ಯವನ್ನು ನುಡಿಯದಿರುವಂತೆ ಪ್ರಚೋದಿಸುತ್ತದಲ್ಲವೇ? ಅಂಥ ಸಂದರ್ಭವೊಂದು ಸುಳ್ಳು ಮಾತನ್ನು ಅಪೇಕ್ಷಿಸಿಯೇ ಇರುತ್ತದೆ. ಹಾಗೆಂದರೆ ಮಾತು ಸಮಯ ಸಂದರ್ಭಕ್ಕೆ ತಕ್ಕಂತೆ ತಾನಿರಬೇಕಾದ ಸ್ವರೂಪ ತಾಳಬೇಕು, ಮಾತು ಎನ್ನುವ ಅಸ್ತ್ರವನ್ನು ಬಳಕೆಯರಿತು ಆಯಾ ಸಂದರ್ಭಕ್ಕೆ ತಕ್ಕಂತೆ ಮಾರ್ಪಡಿಸಿ ಬಳಸುವುದೇ ಸೂಕ್ತ ಅಂತೀಯಾ?

    ಈ ಗೊಂದಲಗಳು ಕಾಡುತ್ತಿದ್ದಾಗ ಮನಸು ನಿನ್ನೊಂದಿಗೆ ಮಾತುಕತೆ ಬಯಸಿತು ಸಖೀ.... ನಿನ್ನೊಡನಂತೂ ಯಾವುದೇ ಹಿಂಜರಿಕೆಯಿಲ್ಲದೇ ಯಾವುದೇ ಸೋಸುವಿಕೆಯಿಲ್ಲದೇ ಮಾತಾಡಬಲ್ಲೆ ನಾನು. ಅಗೋ...ಮತ್ತಿಲ್ಲೊಂದು ಗೊಂದಲ... ನಾನೂ ನೀನೂ ಸ್ಪಷ್ಟವಾಗಿ ನಮ್ಮಿಬ್ಬರ ಅಂತರಾಳವನ್ನು ಮಾತುಗಳ ಮುಖಾಂತರ ಪರಸ್ಪರ ಬಿಚ್ಚಿಡುತ್ತೇವೆ ನೋಡು... ನಮ್ಮೊಳಗೆ ಭಿನ್ನಾಭಿಪ್ರಾಯಗಳಿದ್ದಾಗ್ಯೂ ನಮ್ಮ ಪ್ರೀತಿ ಸದಾ ನಳನಳಿಸುತ್ತಲೇ ಬೆಳೆದಿಲ್ಲವೇನೇ? ಇದರರ್ಥ ಸಂಬಂಧ ದೃಢವಾಗಿದ್ದಲ್ಲಿ ಅದರ ಅಳಿವು-ಉಳಿವು, ಮಾತು ಮತ್ತದರ ಹಿಂದಿನ ಭಾವಗಳನ್ನು ಅವಲಂಬಿಸಿಲ್ಲ ಅಂತೀಯಾ? ಬಿಡು...... ಮಾತು ಬಯಸಿದೆ ಮನ, ಆದರೆ ಕಾಡಿದೆ ಮಾತು ತಲುಪಲಾಗದ ದೂರ, ಇವೆರಡರ ಫಲಶ್ರುತಿಯೇ ನನ್ನೀ ಪತ್ರ.... ನಿನಗನ್ನಿಸಿದ್ದನ್ನ ಬರೆದು ತಲುಪಿಸುತ್ತೀಯಲ್ಲಾ.....? ಮುಗಿಸುತ್ತಿದ್ದೇನೆ.....













No comments:

Post a Comment