Friday, December 21, 2012

ಉತ್ತರವಿಲ್ಲದ ಪ್ರಶ್ನೆಗಳು


-------------------------------

ಕುಂತಿಗಂದೂ ಸಂಜೆಯಲ್ಲದ, ನಡುವಲ್ಲದ

ದಿನದ ಘಟ್ಟದಿ ಪ್ರಶ್ನೆ ಮಾಡುವಾಸೆ....

ಯಾರನ್ನು.., ಉತ್ತರವಿದೆಯೇ.., ಎಲ್ಲಿದ್ದೀತು....,

ಇದ್ದರೆ ಅರಗೀತೇ...ಒಂದೂ ಗೊತ್ತಿಲ್ಲ....

ಕಂದಮ್ಮಗಳ ಯುದ್ಧ, ಸಾವು-ನೋವು ಬಿಟ್ಟು,

ಕಳೆದ ಕಾಲದ ಗೊಡವೆಯೇಕೆ?.. ಗೊತ್ತಿಲ್ಲ...

ಬಿಟ್ಟಿನ್ನೇನೂ ಮನ ನೋಡುತಿಲ್ಲ, ಆಡುತಿಲ್ಲ...

ಸಾವಿನೆದುರು ವ್ಯರ್ಥ ಎಂಬುದಕರ್ಥ ಹುಡುಕಿದಂತೆ.



ಮೇಲೆ ಸುಡದ, ಆದರೆ ಆರಿಲ್ಲದ ಸೂರ್ಯ...

ಕೆಳಗೆ ತಣ್ಣನೆ, ಆದರೆ ತಣಿಸದ ನೀರು..

ದೇಹಕೆ ವೈಶಾಖದರಿವು, ಉರಿಯಲ್ಲದ ಬಿಸಿ,

ಪುಟ್ಟಪಾದಕಷ್ಟೇ ನೀರು, ಸಾಕೆನಿಸದ ತಂಪು.



ಅರಿಯದ ಪ್ರಾಯ ಗುರುವಶಕೆ ಸಂದುದೇಕೆ?

ಅರಳದ ಕಾಯಕೆ ಮರಿಮಾಡೊ ವರವೇಕೆ?

ಮೂರ್ಖಯತ್ನಕೆ ಮೇರುದೈವದ ಒತ್ತಾಸೆಯೇಕೆ?

ಕುಡಿಯೊಡೆದ ಬಂಧ ತಾಯ್ಗರುಳು ಕಡಿದುದೇಕೆ?

ತನ್ನವನೇ ತೊರೆದ ನಿರ್ವಿಕಾರಿ ತಾಯಿಗೊಪ್ಪಿಸಿದ್ದೇಕೆ?

ಗಂಡೆನಿಸದ ಗಂಡುಗಲಿ ತನ್ನ ಗಂಡನಾದುದೇಕೆ?

ಹಿಂದೆ ಮಾದ್ರಿಯೇಕೆ? ಏರುಪ್ರಾಯದಿ ವಾನಪ್ರಸ್ಥವೇಕೆ?

ಪರಬೀಜಕೆ ನೆಲವಾಗೆ ಪತಿ ನೀರೆರೆದುದೇಕೆ?

ಮುಚ್ಚಿಟ್ಟ ತೀರದಾಸೆಗಳ ತಾನಡಗಿಸಿದ್ದೇಕೆ?...

ಇನ್ನೂ ನೂರೊಂದಿತ್ತು... ಆದರಿಲ್ಲೇ... ಇಲ್ಲೇ...

ಮಾನಸತಳ ನಡುಗಿ, ಮತ್ತೆ ಒಳಗು ಮೂಕ,

ಪ್ರಶ್ನೆಮಾಲೆ ಕಡಿದು, ಭಾವ ಚಲ್ಲಾಪಿಲ್ಲಿ,

ಸೂರ್ಯ ನಿರುತ್ತರ, ಮುಖಮುಚ್ಚಿ ಮಾಯ,

ಪ್ರಶ್ನೆಯಲೇ ಬೆಳಗು ಸಂಜೆ, ರಾತ್ರಿಯಾಗಿ

ಕತ್ತಲೆಯೇನು ಉತ್ತರಿಸೀತು?

ಕೆಳಗೀಗ ಪಾದಕೆ ಕೊರೆವ ಶೈತ್ಯ,

ಬಿಸಿಯಲಿರಲಿಲ್ಲ, ಈಗ ಬೇಕಿಲ್ಲ...

ಒಳನಡೆಯಿತು ದೇಹ, ಮನಸಲ್ಲೇ...

ಮುಂದಿನ ಜೀವಿತದ ಪ್ರಶ್ನೆಮಾಲೆ ಹೆಣೆಯುತ್ತ...

ಬರಲಿರುವ ನಾಳಿನ ಆ ಘಟ್ಟಕೆ ಮತ್ತೆ ಕಾಯುತ್ತ...







No comments:

Post a Comment