ದಾರಿದೀಪಕೊಂದು ಜಿಜ್ಞಾಸೆ.
ತಣ್ಣನೆಯ ಬಿಳಿಚಂದ್ರನನಲ್ಲ, ತನ್ನಂತೆ ಹೊತ್ತಿಉರಿವ
ಕೆಂಪುಸೂರ್ಯನ ಕೇಳುವಾಸೆ.
ರಾತ್ರಿಪೂರ್ತಿ ಆ ಕಡೆ, ಈ ಕಡೆ
ಒಂದೇಸಮ ದಾರಿತೋರುವ ದೀಪಕೆ,
ರಾತ್ರಿಯ ಕೊನೆಯಹೆಜ್ಜೆ
ತಾ ಬರೀ ನೆನಪಾಗುಳಿವ ಕಥೆ.
ಹಗಲವ ಬರುವ ಹೊತ್ತು
ಮತ್ತೆಮತ್ತೆ ಕೊಲೆಯಾಗಿ
ತಾ ಪ್ರಶ್ನೆಯಾಗಿಯೇ ಉಳಿದ ವ್ಯಥೆ.
ಸುತ್ತ ಸುತ್ತುವ ದೀಪದಹುಳು
ನಗುತಾವೆ, ಇದರಂತರಾಳವ
ರಾಗ ಮಾಡಿ ಗುಯ್ ಗುಡುತಾವೆ...
ದೀಪ ಮುನಿಸಿಕೊಳುವುದಿಲ್ಲ,
ಮತ್ತದೇ ಗೆದ್ದಲುತಿಂದುಳಿದ
ಅರ್ಧಜೀವದ ಕಂಬದಾಸರೆ,
ಬಣ್ಣ ಮಾಸಿದ ಹಿಂದಿನ ತಟ್ಟೆ
ಸಹವಾಸದಲೇ ಹೊತ್ತಿಕೊಳುತದೆ
ಕತ್ತಲಾಗುತ್ತಿದ್ದಂತೆ ಕೆಂಪಗೆ,
ಇದೇ ಮೊದಲಬಾರಿಯೆಂಬಂತೆ.
ನಡೆದು ಬರುತಾವಷ್ಟು
ಬಾಯಾರಿದ ದೇಹ
ಹಿಂತಿರುಗುವಾಗ
ಭಾರವಿಳಿಸಿ ತಣಿಸಿ ದಾಹ.
ಬರುವವಕೆ ಮನೆ ಬೇರೆ ಇದೆ,
ಮನಸಲ್ಲಿಟ್ಟು ಬಂದಿದ್ದಾವು..
ತನ್ನಡಿಯವು ಇವೆಲ್ಲಿ ಕಿತ್ತಿಟ್ಟಾವು,
ಎಲ್ಲಿ ಬಚ್ಚಿಟ್ಟಾವು?
ಅವಕಿದೇ ಮನೆ, ಮಂತ್ರಾಲಯವೂ...
ಮನಸಿಲ್ಲದ ತಮ್ಮ ದೇಹದ
ತೃಷೆಗೊದಗಿದ ಆ ದೇಹ,
ಮತ್ತದರೊಳಗಿನ ಮನಸುಗಳ
ಕೊನೆಪಕ್ಷ ನೆನಪೂ ಅಲ್ಲ,
ಮರೆವು ಮಾಡಿ ಹೊರನಡೆವ
ನಿರ್ಜೀವ ಕಾಲುಹಾದಿಯ
ಕತ್ತಲೆ ತಾ ತೊಡೆಯಲಾಗದು, ಏಕೆ?
ಮನಸನಲ್ಲೇ ಬಿಚ್ಚಿದ ಬಟ್ಟೆಯ
ಮಡಿಕೆಯೊಳಗೆತ್ತಿ ಮರೆಸಿ
ಜತನವಾಗಿಡಲಿನ್ನೂ ಕಲಿಯದ,
ಪ್ರತಿಬಾರಿ ದೇಹವ್ಯಾಪಾರಕೆ
ಮನಸ ಬಲಿಕೊಡುವ
ಆ ಕೋಣೆಯೊಳಗಿನ
ಕತ್ತಲೆ ತಾ ತೊಡೆಯಲಾಗದು, ಏಕೆ?
ಒಂದೇ ಒಂದು ಬೀದಿಯ ದೀಪ,
ನನಗೇ ಇಂಥ ಭಾವತಿಕ್ಕಾಟ..
ಜಗದೆಲ್ಲ ಹಾದಿಬೀದಿಗಳ
ಆಗುಹೋಗು, ಒಳಿತುಕೆಡುಕುಗಳ
ಸಾಕ್ಷಿ ನೀನು,
ಓ ಹಗಲ ದೀಪವೇ
ನಿನಲಿಲ್ಲವೇ ಇಂಥವೆಷ್ಟೋ ಸಂಕಟ?
"ಮತ್ತೆಮತ್ತೆ ಕೊಲೆಯಾಗಿ
ReplyDeleteತಾ ಪ್ರಶ್ನೆಯಾಗಿಯೇ ಉಳಿದ ವ್ಯಥೆ"
ಬದುಕಿನ ಹಲವು ಮಜಲುಗಳಲ್ಲಿ ನನ್ನದೇ ಕಥೆ!!!
haagannisitaa sir?
Deletechennagide kavite..
ReplyDelete