Tuesday, September 3, 2013

ನೀಲಿ ಪಡೆದು ಭಾನು ಕೊಟ್ಟ ಬಾನು

ಮೇಲೆ ಹರವಿಕೊಂಡ ಅವ
ಕೆಳಗೆ ಹರಡಿಕೊಂಡ ಅವಳು
ಅವಗೆ ಬಗಿಯುವಾತುರ
ಅವಳಿಗೆ ಚೂರುಚೂರಾಗುವದ್ದು.
 
ಅವಳು ಬಿತ್ತರಿಸಿದ ರಹಸ್ಯ.
ಮೈಯ್ಯೆಲ್ಲಾ ಕಣ್ಣಾಗಿ ಕಿವಿಯಾಗಿ
ಅವ ಕಂಡ ಅಸಂಖ್ಯ ದೃಶ್ಯ..
ಎಲ್ಲೋ ಒಂದಷ್ಟು ಕಡಲು
ನೀಲಿನೀಲಿ ಅದರೊಡಲು
ದೃಷ್ಟಿಯಲ್ಲೇ ನಿಂತ ಕ್ಷಣ
ಅವಳೊಡಲ ನೀಲಿದನಿ
ಪ್ರತಿಧ್ವನಿಸಿದೆ ಅವನೊಳು..
 
ಅದೆಲ್ಲೋ ಕರಾವಳಿಯ ಕಡಲು
ಬಯಲುಸೀಮೆಯಲಿ ನಾನು
ಅಲ್ಲಿ ಪ್ರತಿಫಲಿಸಿದ ನೀಲಿ
ಇಲ್ಲೂ ಕಂಡು ದಂಗು ನಾನು..
ಅವಳು ಅವನೊಳಗೆ
ಇಷ್ಟು ಆವರಿಸುವುದು ಸಾಧ್ಯವೇ?!
 
ದೂರ ಬಹಳಷ್ಟು ನಡುವೆ
ನೂರು ಮತ್ತೆಷ್ಟೋ ಅಡೆತಡೆ
ತಲುಪಿಯಾನೇ, ಆತುರ ಕಾತುರ
ತಡೆದಾನೇ ಅವನೆಂಬ ಅವನೇ
ಪೂರ್ತಿ ನೀಲಿಯಾದ ಮೇಲೆ?!
 
ಶಿವನ ವೀರಭದ್ರನಂತೆ
ತಾನಲ್ಲದ ತಾನಾಗಿ
ಬಾನು ಭಾನುವ ಸೃಜಿಸುತಾನೆ.
ವಿರಹದುರಿಯೇ ಮೈವೆತ್ತು
ಕುದಿಯುವ ಬೆಂಕಿಚೆಂಡು.
ಅವನೆಲ್ಲ ದಾಹ ಹೊತ್ತ
ಇವನ ಕಣ್ಣ ಬಿಸಿಲಿಗೆ, ಬೆಳಕಿಗೆ
ಹೋ! ಅವಳ ಮೈಮನವೆಲ್ಲಾ ಬೆಳಗು!
 
"ನಾ ಕದಲಿಯೂ ಚಲಿಸಲಾರೆ
ಅದೃಶ್ಯ ಬಂಧನವೆನದು.
ಇಲ್ಲೇ ಇದ್ದು ನಾನಲ್ಲಿಗಿಳಿವಂತೆ
ನೀನವಳ ಬಳಿಸಾರು" ಎಂದಪ್ಪಣೆಗೆ
ಭಾನು ಸಾಗುತಾನೆ ಹುಟ್ಟಿನಿಂದ
ಮುಳುಗುವೆಡೆಗೆ, ಪೂರ್ವದಿಂದ ಪಶ್ಚಿಮಕೆ..
 
ಲೋಕ ಬಾನು-ಭುವಿಯ ಸಂಗಮವೆನುವಲ್ಲಿ
ಅದೇ ಆ ನೀಲಿ ಮೊಗೆಮೊಗೆದು ಕೊಟ್ಟ
ಅವಳ ಕಡಲಿನೊಳಗಿಳಿಯುತಾನೆ ಭಾನು.
ಒಂದಾಗುತಾನೆ,
ಮುಳುಗಿ ತಾನಿಲ್ಲವಾಗುವ ಹೊತ್ತು
ತಾ ತಾನಲ್ಲದೇ ಬಾನುವೇ ಆಗುತಾನೆ.
ಬಾನೀಗ ಶಾಂತ, ತೃಪ್ತ..
 
ಅವಳಿಗೋ ಪಡೆದ ಕ್ಷಣವೇ
ಎಲ್ಲ ಮುಗಿದ ಚಿಂತೆ..
ಬೆಳ್ಳನೆ ಬೆಳಕು ಕತ್ತಲಾದ ಚಿಂತೆ
ಬಣ್ಣದೋಕುಳಿಯೆರಚಿದ ಕ್ಷಿತಿಜವೀಗ
ಕಪ್ಪುಕಪ್ಪು, ಭಾನು ಮುಳುಗಿಯಾಯ್ತು..
ಅವ ನಿಶ್ಚಿಂತ, ನಿರ್ವಿಕಾರ, ನಿರ್ಲಿಪ್ತ..

ಕಡಲು ಮೊರೆಯುತ್ತದೆ..
ಇಷ್ಟು ಕಾದು ಕಾದು
ಒಂದೇ ಕ್ಷಣದ ಮಿಲನವೇ?!
ಬಾನು ನಗುತಾನೆ,
ಮತ್ತೆ ನಾಳೆ ಬರಲಿದೆ,
ಅದೇ ಭಾನು, ಅದೇ ಬೆಳಕು,
ಅದೇ ಬಿಸಿಲು, ಮತ್ತದೇ ಮಿಲನದ
ಇನ್ನೊಂದು ಕ್ಷಣ ಹೊತ್ತು..
 
ಪುನಃ ಅವ ಮೇಲೆ ಹರವಿಕೊಳುತಾ
ಅವಳು ಕೆಳಗೆ ಹರಡಿಕೊಳುತಾ
ಕಾಯುತಾರೆ ಆ ಕ್ಷಣದ ನಾಳೆಗೆ..

No comments:

Post a Comment