Friday, July 25, 2014

ಅವನು ಅವಳು ಮತ್ತು ಬದುಕು
-----------------------
ನೆಗ್ಗಿ ನೋಡುವ ಅವನಾಟದ ಅಳತೆಗೋಲಿನ ಮೇಲೆ
ಅಳತೆ ಗುರುತು ಮೂಡಿಸುವ ಕಾಯಕದಲ್ಲವನು.
ಕಾಯಕವೇ ಕೈಲಾಸವಲ್ಲದಿದ್ದರೂ
ಬದುಕಂತೂ ಹೌದವಗೆ,
ಮತ್ತೆ ಬದುಕುವ ಉಪಾಯವೂ, ಉದ್ದೇಶವೂ..
ನಡುನಡುವೆ ಒಂದಷ್ಟು ಆಮೋದಪ್ರಮೋದ
ಒದಗಿದೆಲ್ಲ ಗಳಿಗೆಯಲೂ ಕಾಯಕಕೆ ಸತ್ವವರಸುತ್ತಾನೆ
ಮತ್ತು ವಿನೋದಕ್ಕೊಂದಷ್ಟು ಅವಕಾಶ..
ಬಸಿದು ಅನುಭವವ ದೃಶ್ಯಾದೃಶ್ಯ ಹಸಿವೆಗಳ
ತಣಿಸುತ್ತಾನೆ, ಆಗ ಕಂಡುಕೊಳ್ಳುತ್ತಾನೆ,
"ಬದುಕೆಂದರೆ ಜಗ್ಗಿ ನೋಡುವಾಟ ಮತ್ತು
ಗೆಲುವುದೆಂದರೆ ಹಸಿವೆ ತಣಿಸಿಕೊಳ್ಳುವುದು"

ಬಡಪೆಟ್ಟಿಗೆ ಮುರಿಯೆನುನುವ ಪಾಠದ ಹೊತ್ತಗೆಯಲಿ
ನವಿಲುಗರಿ ಜತನದಲಿ ಮುಚ್ಚಿಡುವ ಕಾಯಕದಲ್ಲವಳು
ಅವಳಿಗೂ ಬದುಕೆಂದರೆ ಕಾಯಕವೇ.
ತಾನುಳಿದು, ನವಿಲುಗರಿಯೂ ಮುರಿಯದಂತುಳಿಸುವುದು
ಮತ್ತೆಲ್ಲವೂ ಮರಿ ಮಾಡುವ ನಂಬಿಕೆ ಜತನ ಮಾಡುವುದು.
ನಡುನಡುವೆ ಒಂದಷ್ಟು ತೇಪೆ, ತೇಪೆ ಮತ್ತು ಬರೀ ತೇಪೆ..
ಒದಗಿದೆಲ್ಲ ಗಳಿಗೆಯಲೂ ಹೊಲಿವ ಪರಿಕರವರಸುತ್ತಾಳೆ
ಮತ್ತೆ ಕಣ್ಣಿಗೊಂದಷ್ಟು ಬೆಳಕು.
ಅನುಭವದ ಅಚ್ಚುಗಳಿಗಿಳಿಯುತಾ
ತನ್ನ ಕಾಪಿಟ್ಟುಕೊಳ್ಳುತ್ತಾಳೆ.
ಆಗ ಕಂಡುಕೊಳ್ಳುತ್ತಾಳೆ,
"ಬದುಕೆಂದರೆ ಕಾಪಿಟ್ಟುಕೊಳುವಾಟ ಮತ್ತು
ಗೆಲುವುದೆಂದರೆ ಉಳಿಯುವುದು."

6 comments:

  1. "ಬದುಕೆಂದರೆ ಜಗ್ಗಿ ನೋಡುವಾಟ ಮತ್ತು
    ಗೆಲುವುದೆಂದರೆ ಹಸಿವೆ ತಣಿಸಿಕೊಳ್ಳುವುದು..."
    "ಬದುಕೆಂದರೆ ಕಾಪಿಟ್ಟುಕೊಳುವಾಟ ಮತ್ತು
    ಗೆಲುವುದೆಂದರೆ ಉಳಿಯುವುದು..."
    ;;;;
    ವಾವ್...

    ReplyDelete
  2. Very good expression. Life is so beautiful with uncertainty, struggles..
    Nice

    ReplyDelete
  3. Well expressed. Life is beautiful with uncertainty, struggles..

    ReplyDelete
  4. ಮೊದಲು ಮನ ಸೆಳೆದ ಪದಗಳು
    ನೆಗ್ಗಿ, ಆಮೋದಪ್ರಮೋದ,...

    ಒಂದಿಡೀ ಬದುಕಿನ philosophy ಮತ್ತು ಸರಳ ಜೀವನೋಪಾಯ ಭೋದಿಸುವ ಸಾಲುಗಳು
    ""ಬದುಕೆಂದರೆ ಕಾಪಿಟ್ಟುಕೊಳುವಾಟ ಮತ್ತು
    ಗೆಲುವುದೆಂದರೆ ಉಳಿಯುವುದು.""

    ReplyDelete
  5. ಅನುಭಾವಶರಧಿಯಲ್ಲಿ ಬಹಳಕಾಲದನಂತರ ಬರಹವನ್ನು ಕಂಡಂತಾಯಿತು.....
    "ಬದುಕೆಂದರೆ ಕಾಪಿಟ್ಟುಕೊಳುವಾಟ ಮತ್ತು
    ಗೆಲುವುದೆಂದರೆ ಉಳಿಯುವುದು."

    ಚಂದದ ಬರಹ....

    ReplyDelete