ಗುಳಿ ಇಳಿಜಾರುಗಳಲೊಂದು ಉರುಳುವ ಬಿಂದು
ಉಬ್ಬು ಏರುಗಳಲೇರುವ ಏದುಸಿರ ಹಾಡೊಂದು
ದಾಹದ ಪಾದ ಸ್ಪರ್ಶಿಸಿ, ಪೂರ್ತ ಆವರಿಸಿ, ರಮಿಸಿ, ಮುದ್ದಿಸಿ
ಏರುಜಾಗೃತದಿಂದ ನಿದ್ರೆಯಮಲಿಗೊಯ್ಯುವ ಹಾದಿಯುದ್ದಕು
ಒಮ್ಮೆ ತೆವಳಿ, ಒಮ್ಮೆ ನುಸುಳಿ, ಒಮ್ಮೆ ಬಗ್ಗಿ, ಒಮ್ಮೆ ನುಗ್ಗಿ...
ದೇಹಕೂ, ದಾಹಕೂ ಈಗ ಪೂರ ತಣಿದ ಸೊಗದ ಸುಗ್ಗಿ!
ಮಾತುಸುರಲಿದ್ದ ಭಾವಬಾವಿಯ ಹಾದಿಯ ನಕಾಶೆ
ಹೆಜ್ಜೆಗೂಡಿಸಿ ಹೆಗಲಿಗೊರಗಿ ಸಾಗುವ ಆಶೆ
ಕಾಲಡಿ ಕವಚ, ಗುಡಿಶಿಖರ ಕಲಶ ಒತ್ತಟ್ಟಿಗಾಗುವ ಭಾಷೆ
ಸುಗ್ಗಿಹಾಡಿನ ಗದ್ದಲದಲೆಲ್ಲೋ ಕಳೆದೇಹೋದವು!
ಥೇಟ್ ಅಂಥವೇ ಅದೆಷ್ಟೋ ಹನಿಗೂಡಿದ ಹಳ್ಳವೊಂದಕೆ
ದಾಹವ ಸಮೃದ್ಧಿಯಲಿ ಮೀಯಿಸುವಾಸೆ!
ಮುಗಿಲನೂ ನೆಲವನೂ ಒಂದೇ ಏಟಿಗೆ ಮುಟ್ಟಿಬರುವ
ಪ್ರಾಣವಾಯುವಿನ ಚೈತನ್ಯದಲಿ ತೋಯಿಸುವಾಸೆ!
ಇಕ್ಕೆಲ ಉಸಿರ ತೋರಣದ ಘಮ
ಊಹೆ ಬರೆದ ಹಸೆ, ಕಲಿಕೆ ತುಂಬಿದ ಬಣ್ಣ,
ಎಡವಿ ಹೊಸಿಲಿಗಂಟಿದ ಬೆಟ್ಟಿನುಗುರ ಚೂರು
ಅಳುಕುತಲೇ ಪಿಸುನುಡಿವ ಕಣ್ಬೊಂಬೆ ಮಾತು
ಮುಳ್ಳು ಚುಚ್ಚಿದ್ದೊಂದು, ಉಂಗುರ ಕಚ್ಚಿದ್ದೊಂದು ಕೈಬೆರಳು
ಹೀಗೆ ಹಂಚಿಕೊಳುತಾ ಎಲ್ಲವೆಂದರೆಲ್ಲ
ನಿಧಾನ ಸುಗ್ಗಿಯ ಒಳಗೊಯ್ಯುವಾಸೆ!
ಸುಗ್ಗಿ ಕಟಾವಿನ, ಕಣಜದ ಗುಂಗಿನಲೇ ಮುಳುಗಿತ್ತು!
ಹೆಣ್ಣಷ್ಟೇ ಅಲ್ಲದ ಹೆಣ್ತನದೊಂದು ಮೂಲಬಿಂಬಕೆ
ತಂತಾನೇ ಬೆತ್ತಲಾಗುವಾಸೆ
ಗುಟ್ಟುಪಟ್ಟುಗಳ ಕತೆ ಬಿತ್ತರಿಸುತಾ
ಅಷ್ಟೇ, ಇನ್ನೇನಿಲ್ಲ ಎಲೆ ಸಖ್ಯವೇ,
ಆಕಾರವಲ್ಲದ, ಆಕರ್ಷಣೆಯಲ್ಲದ, ತನ್ನೊಳಹೊರಗ
ತನ್ನಷ್ಟಕೇ ನಿರೂಪಿಸುವಾಸೆ..