Saturday, October 10, 2015

ಹಬ್ಬದೆಯೂ ಚಪ್ಪರ
ಜಾಜಿಯರಳೊಂದು ಮೆಲ್ಲ ಮಾತಾಡಿದ ಕಂಪು.
ಬಣ್ಣದ ಸಂತೆಯಿಂದದೆಷ್ಟೋ ದೂರ
ಹಲಬಣ್ಣ ರೆಕ್ಕೆಗೆ ತಾನೇ ತಾನಂಟಿದ ಹೊಳಪು.

ಅದೇ ಬಿಮ್ಮನೆ ಬೆಳಗು
ನಡುವಯಸಿಗೆ ಕಾಲಿಡುವ ನಿಶ್ಶಬ್ದ ಹೊತ್ತು
ಸ್ತಬ್ಧಗಾಳಿ, ಕಂಪು-ರೆಕ್ಕೆಬಡಿತವಂಟಿಸಿಕೊಂಡು
ಮೈಗಡರಿದ್ದು ನಿನ್ನೆಗಳಾವುವೂ ಕಂಡಿರದ ಮತ್ತು!
ಅದೇ ಅಲ್ಲೊಮ್ಮೆ ಇಲ್ಲೊಮ್ಮೆ ಟುವ್ವಿ ಹಕ್ಕಿ
ನಡುನಡುವೆ ಕಾಗೆಯಷ್ಟೆ ಮುರಿದ ಮೌನವೂ
ಭ್ರೂ ಮಧ್ಯೆ ನೇರಳೆಸುಳಿ ಸ್ಪರ್ಶದ ಹಾಗೆ!

ಅದೋ
ಒಂಟಿ ಕಾಂಡದ ಸಿರುಟ ಹೊರಟ ಸೀಬೆ ಮಾಗುತಿದೆ.
ಮೂಲೆಯ ಮುರುಟಿದ ಕರವೀರದಲೊಂದು ಮೊಗ್ಗು!
ಬಾಡಿದ ತುಳಸಿ ತಲೆ ತುಸುವೇ ಎತ್ತಿ ನಿಂತಿದೆ.
ಚಿಗುರು ದಂಡೆಯ ಹಸಿರಲೆಲ್ಲ ಕೆಂಪರಳಿಸುವ ಹಿಗ್ಗು!

ಕರೆದಿರಲಿಲ್ಲ, ನೀನು ಬರುವ ಸುಳಿವಿರಲಿಲ್ಲ.
ಕದ ನೂಕಿದ್ದೇ ಇಲ್ಲಿದ್ದ ಇದ್ದಿಲೆಲ್ಲ ಬಂಗಾರ!
ಪುರುಷನೆಂದು ಪ್ರೀತಿಸಿದ್ದು ಪರುಷವನ್ನೇ?!

ಹರವಾದ ಬಯಲ
ಕಡು ಮೋಡದಡಿಯಲ್ಲಿ
ಗರಿಬಿಚ್ಚಿದ ನವಿಲ ಕಣ್ಣೊಳಗಿನ
ಹೊಳಹಾಗಿದ್ದೇನೆ;
ಕನವರಿಸುತ್ತಲೇ ಹೀಗೆ ಬದುಕಿಬಿಡುವೆ.
ಇನ್ನೊಮ್ಮೆ
ಕೊರಡು ಕೊನರುವ,
ನೀ ಬರುವ ಹೊತ್ತು
ಮತ್ತು ಹಿಂತಿರುಗುವ ಹೊತ್ತು
ಹೀಗೇ ಮುಂದೆ ಹೋಗುತಿರಲಿ...

No comments:

Post a Comment