Tuesday, December 8, 2015





"ಮನದಾಗಸದ ನಲ್ಲಿರುಳಲಿ ಮಿಣುಮಿಣುಕೆನುವವಳು
ಎದೆನೆಲದ ಮೇಲೆಲ್ಲ ಪಾರಿಜಾತವಾಗುದುರಿದವಳು
ಉಸಿರುಸಿರಿಗೂ ತನನೇ ತೇದು ಗಂಧವಾದವಳು
ಹೇಳೋ ಯಾರವಳು, ಏನು ಹೆಸರು?
ನನ್ನ ನೆನಪಿನುದ್ದಕೂ
ತನ್ನ ಹಸಿರ ಹಾಸಿರುವವಳು?"

ತುಟಿ ಮೇಲಿನೊಂದು ಪ್ರಶ್ನೆಯ
ತುಟಿ ಮೇಲಿನದೇ ಕಿರುಹಾಸ ಹೀರುತದೆ.
ಸಶಬ್ದ ನಗೆಯೊಂದು
ನವಜಾತ ಶಬ್ದಗಳ ನುಂಗಿ ತೇಗುತದೆ.
ಒಳಹೊರಗೆ ಅಲೆಯತೊಡಗುತ್ತೇನೆ,
ಎದುರಾದೆಲ್ಲ ಆಪ್ತ ಕ್ಷಣಗಳ ಕೇಳುತ್ತೇನೆ,
"ನನ್ನ ಇನಿಯನ ಅವಳ ಬಲ್ಲೆಯೇನೇ?"

ಧುತ್ತನೇ ಬಂದೆದುರು ನಿಲ್ಲುತಾನೆ
ಮೆತ್ತನೇ ಅತಿ ಮುದ್ದುಪ್ರಶ್ನೆಯಾಗುತಾನೆ
"ಬೆಲೆಯೇನೀವೆ ಹೇಳೇ ಹೆಸರುಸುರಿದರೆ?"
ನಾನನುತೇನೆ,
"ನನದೆಲ್ಲವೂ ನಿನದೇ ದೊರೆ,
ತೋರಿ ಪಡೆಯುವೆಯಂತೆ ನೀನೇ ಹಾಗೂ ಮಿಕ್ಕಿದ್ದಿದ್ದರೆ "

"ಉಂಟೇನೇ ಸೊಂಟದ ಡಾಬು?
ಉಂಟೇನೇ ಸುವರ್ಣ ಕಂಚುಕ?
ಉಂಟೇನೇ ರತ್ನದ ತೋಳ್ಬಂಧಿ?
ಉಂಟೇನೇ ವಜ್ರದ ನೆತ್ತಿಬೊಟ್ಟು?"
ಇಲ್ಲದುದರಷ್ಟೇ ಬೆಲೆಗೆ ಪಟ್ಟುಹಿಡಿವ;
ಪಾಪ, ಅವನೂ ಬಡವ.
ಇಲ್ಲಗಳದೇ ಸಾಮ್ರಾಜ್ಯದರಸಿ;
ನಾನೂ ಬಡವಿ.

ಸಮಸ್ತಕೂ ಮೀರಿ ತೂಗುವ ಹೆಸರು
ಮತ್ತೆ ಗುಟ್ಟಿನ ಹೆಗಲೇರಿ,
ಅರ್ಧದಾರಿಗೇ ವಾಪಾಸು
ಮತ್ತದಕೋ ಅಜ್ಞಾತವಾಸ!

ಪರದೆ-ಬಾಗಿಲು-ಗೋಡೆಗಳೆಡೆ ಕಣ್ಣಾಮುಚ್ಚಾಲೆ
ಎಲ್ಲ ಬಚ್ಚಿಟ್ಟುಕೊಳುವವರೇ.
ಹುಡುಕುವ, ಸಿಗುವ ಮಾತಿಲ್ಲ;
ಕೊನೆಮೊದಲಿರದ ಬರೀ ಆಟ!

ಇಲ್ಲಿ ಬದಲಾಗದುಳಿವುದು ಅಂಥದ್ದೇನಲ್ಲ ವಿಶೇಷ! 

No comments:

Post a Comment