Wednesday, November 9, 2016

ಬೆರಳ ತುದಿಯಲ್ಲಿ ಸಾಗರ ಅಡಗಿತ್ತೇನೋ ಹುಡುಗಾ?
ಮುಟ್ಟಿದ್ದಕೇ ಮುತ್ತುರಾಶಿ ಮುತ್ತಿದೆ!
ಕಣ್ಣಂಚಿನಲಿ ಸೂರ್ಯನೇ ಉದಯಿಸಿದ್ದೇನೋ ಹುಡುಗಾ?
ನೋಟವೊಂದಕೇ ಬಿಸಿಯೇರಿದೆ!

ನರನಾಡಿಯಲಿ ನಾಚಿಕೆ, ಬೆನ್ನಿಗೇ ಬಯಲಾಗುವ ಬಯಕೆ.
ಎದೆ ಹುಣಿಯಲಿ ಸಾಲುಸಾಲು ಚಿಗುರು ಆಸೆಗರಿಕೆ,
ಬೆಚ್ಚದೆ ಬೆದರದೆ ತೆನೆಯೊಡೆದ ಹಸಿ ಎದೆಗಾರಿಕೆ!

ಬೆಳಗು ಅಂಗಳಕೆ ಬಿತ್ತಿದ ಬಣ್ಣದ ನಡು ನೀನೆ ನಿಂತಿದ್ದೆ
ಬಿಸಿನೀರೊಲೆಯ ಹೊಗೆಸುರುಳಿ ಘಮವೊಯ್ದು ಊರಿಗೆಲ್ಲ ಸಾರಿತ್ತು.
ಕಂಡ ಕಣ್ಣಲೆಲ್ಲ ನೂರು ಪ್ರಶ್ನೆ; ಕೆನ್ನೆಕುಳಿ ಕೆಂಪು ಉತ್ತರಿಸಿತ್ತು!

ಬರಸೆಳೆದು ಮರೆಗೊಯ್ದ ಕಾಲದ ತುಣುಕು; ಗಂಟೆಯೊಂದೀಗ ಕ್ಷಣವಾಯ್ತು!
ಪುರುಷನೋ-ಪರುಷವೋ, ನನ್ನೊಳ-ಹೊರಗು ಬಂಗಾರವಾಯ್ತು!
ಎಳೆಬಿಸಿಲು ಹೊಳೆಹೊಳೆದೆ ನೀನು, ಇಬ್ಬನಿ ಕಣ್ಮುಚ್ಚಿ ಕರಗಿಯೇ ಕರಗಿತು!

ಸೋಪಾನವೊಂದೊಂದರಲೂ ಪ್ರೀತಿ ಮದರಂಗಿಯ ಜೋಡಿಹೆಜ್ಜೆಗುರುತು!
ತುರೀಯದಲಿ ಬಿಳಿಶಂಖದೊಡಲು  ಹೆಸರು ನಿನದೇ ಅನುರಣಿಸಿತ್ತು.
ನಾನೀಗ ಹೆಣ್ಣೆನಿಸಿದ ಗಳಿಗೆಯಿದು ನಿನ್ನ ಗಲ್ಲದಿಂದುದುರಿ ನನ್ನ ಹಣೆಗಿಳಿದಿತ್ತು!

ನಲ್ಲ, ನಾನಲ್ಲ; ಕೈಹಿಡಿದು ನೀನೇ ಮತ್ತೆ ಮತ್ತೆ ಮೇಲೆಮೇಲೇರಿಸಿದ್ದು!
ಮನಸು ಕಣ್ಬಿಟ್ಟಾಗೆಲ್ಲ ಘನಪರಿಮಳ ಒಳಹೊಕ್ಕಿತ್ತು; ಹೊಕ್ಕುಳ ಹೂವರಳಿತ್ತು!
ನೀ ನಡೆದಾಗ ನನ್ನಾಳದೊಳಗೆ, ಮಣ್ಣಿನ ಮನೆ, ಈ ಕಾಯ ದೇಗುಲವಾಯ್ತು!

No comments:

Post a Comment