Saturday, December 17, 2016

ಬರುವೆನೆಂದವನ
ಕಾಲಿಗಡ್ದಕಟ್ಟಿದ ಹಾಲಿನ ಋಣವ್ಯಾವುದೋ!
ಕೊಳಲೋ, ನವಿಲೋ, ಬೆಣ್ಣೆಯೋ, ಮಣ್ಣೋ
ಕಲ್ಪನೆಯಲೇ ಬಂಧಿಸಿಟ್ಟ ರಸಕ್ಷಣವ್ಯಾವುದೋ!
ಪಾತಾಳದ ಬಂಧಭೀತಿಯೋ,
ಮೀರಿದಾತನೂ ಒಳಗೊಂಡು ಕುಸಿದ ರಣಕಣವ್ಯಾವುದೋ!

ಗಾನದುದ್ದಕೂ ಧ್ಯಾನದುದ್ದಕೂ
ಜೊತೆಯಾಗುವ ವಾಗ್ದಾನವೊಂದಿತ್ತು;
ಭರದಿ ಶುರುವಾದ ಸ್ನಿಗ್ಧ ಯಾನವೂ..

ಸುರಿದಿತ್ತು, ಹರಿದು ಹಾಯ್ದಿತ್ತೊಮ್ಮೆ ಕೆಚ್ಚಲು
ಹೆಜ್ಜೆ ಸದ್ದಿಗೆ, ಅವನಧರದ ನೆನಕೆಗೇ.
ಬಿಗಿತ ಕಾದಿದೆ ಬಿರಿಯಲೀಗ ಕಣ್ಣೆಡೆಯಲೂ, ಹೆಣ್ಣೆದೆಯಲೂ
ನದಿಯಾಗಿ, ಝರಿಯಾಗಿ ಕೊನೆಗೊಮ್ಮೆ
ಕಡಲಂಥ ದಾಹದಲಿ ಸವಿಯಾಗಿ ಕರಗಲಿಕೆ.

ಕಾಲದಾಳದಲೆಲ್ಲೋ ಮೂಲವಿದೆ;
ಮೂಲದಾಳದಲಿ ಸಾಲದ ಮಾತಿದೆ.
ತೀರಿಯೇ ತೀರಬೇಕು!
ಏಳುಹೆಜ್ಜೆಯ ಹೆಸರು ಗಾವುದದಷ್ಟಾಗುತಲಾದರೂ,
ಕೆಲನೋಟ, ತುಸುಮಾತು, ಚಣಕಾಲದಲಾದರೂ..

ಬರುವೆನೆಂದಿದ್ದ, ಬಂದಾನು;
ಕೊನೆಯೆಂಬುದುಂಟೇ ನಿರೀಕ್ಷೆಗೆ?
ಹಾದಿ ಮೂರ್ತ-ಅಮೂರ್ತವೆರಡಕೂ,
ಸುಳ್ಳಿಗೂ ಸತ್ಯಕೂ
ಒಪ್ಪವಾಗುವುದಲ್ಲದ ಗಮ್ಯವುಂಟೇ?

ಬರುವೆಯಾದರೆ ಬಾ
ಕಣ್ಣೊರೆಸಲೆನ್ನ ಕಣ್ಣೆವೆ ಕಾದಿದೆ;
ನಗೆಗೆ ಬಣ್ಣ ಬಳಿಯಲು ಕೆನ್ನೆ ಕೆಂಪು!
ಬಾರೆಯಾದರೂ ಸರಿಯೇ ದೊರೆಯೇ,
ಇದೋ ಹೊತ್ತು ಹೊತ್ತಿದೆ ಭಾರ
ನಿನ್ನತ್ತ ಹೊರಡಿಸಲು,
ಕಳಚಿ ಒಂದಷ್ಟು, ಇನ್ನಷ್ಟು ತೊಡಿಸಿಕೊಡಲು!

No comments:

Post a Comment