Thursday, December 13, 2012

ತರವೇ...


----------------

ಸಿಟ್ಟು ತರವೇ ದೊರೆಯೇ...

ಬಂದರೂ ಹಾಗೊಮ್ಮೆ ಮೆಟ್ಟಬೇಕಲ್ಲವೇ....



ನಾನವಳೂ ಹೌದು ಮತ್ತಿವಳೂ.....

ಅದು ಒಡಲ ಗಂಟು, ನೀನೆದೆಯ ನಂಟು.

ನನ್ನ ಜಗದಿ ಎರಡಕೆರಡು ಜಾಗವುಂಟು...

ಕಣ್ಣೆರಡಿದ್ದರೂ ದೃಷ್ಟಿ ನನದೊಂದೇ...

ಅತ್ತ ಹರಿದಾಗಲೇ ಇತ್ತ ಬಯಸುವುದು ತರವೇ....



ನಾನಲ್ಲೂ ಇರುವೆ ಮತ್ತಿಲ್ಲೂ....

ಅಲ್ಲಿ ಆಧರಿಸೋ ಮಡಿಲು, ಇಲ್ಲಿ ಹಿಂಬಾಲಿಸೋ ನೆರಳು..

ನನ್ನಿರುವಲೆರಡೂ ರೂಪವುಂಟು....

ಕಿವಿ ಎರಡಿದ್ದರೂ, ಕೇಳುವ ಕರೆಯೊಂದೇ...

ಅದ ಗಮನಿಸುವಾಗಲೇ ನೀ ಕರೆವುದು ತರವೇ...



ನಾನದರದೂ ಹೌದು ಮತ್ತೆ ನಿನ್ನದೂ...

ಅದರೆದುರಿನ ಮಾದರಿ, ನಿನಗೆ ಪ್ರತಿಬಿಂಬವಿತ್ತ ಕನ್ನಡಿ...

ನನ್ನೊಳಗೆರಡೂ ಛಾಯೆಯುಂಟು...

ಕಾಲೆರಡಿದ್ದರೂ ನಡೆವ ದಿಶೆಯೊಂದೇ.....

ಅದರತ್ತ ನಡೆವಾಗ ನೀ ವಿಮುಖನಾಗುವುದು ತರವೇ...













ಹಾಗೇ ಸುಮ್ಮನೆ........


-----------------------

ಹಣೆ ಸ್ವಲ್ಪ ಹಿರಿದಾಯ್ತು, ಮೂಗು ತುಸು ಮೊಂಡು,

ಕಣ್ಣಷ್ಟಗಲವಿರಬೇಕಿತ್ತು, ಬಾಯಿ ದೊಡ್ಡದಾಯ್ತು,

ಹಲ್ಲು ನೇರವಾಗಿಲ್ಲ, ಗಲ್ಲ ಚೂಪಿಲ್ಲ,

ಕೆನ್ನೆ ಸೇಬಂತಿಲ್ಲ, ನೀಳವೇಣಿಯೂ ಅಲ್ಲ...

ಬಣ್ಣವಷ್ಟೊಂದಿಲ್ಲ, ಅಂಗಸೌಷ್ಟವವೂ ಇಲ್ಲ...



ಮುಖದಲ್ಲೊಂದು ಮೆಲುನಗು,

ಕಣ್ಣ ನಿಟ್ಟಿಸಿ, ಕೆನ್ನೆಸವರಿ, ಮೂಗು ಮೂಗಲಿ ಮುಟ್ಟಿ,

ಗಲ್ಲ ಹಿಡಿದೆತ್ತಿ, ಹಣೆ ಚುಂಬಿಸಿ, ನಿನ್ನ ನಗು ನನಗಿಷ್ಟ,

ನಿನ್ನಂಥವರಿಲ್ಲ ಕಣೇ...ಎಂಬವರ ಸಾನ್ನಿಧ್ಯದಲಿ ,

ಕಿವುಡಲ್ಲದ ಕಿವಿ ಬೇರೆಲ್ಲೆಡೆಗೆ ಕಿವುಡಾಗಿತ್ತು





ವಿದಾಯ


-------------

ಅದೋ ಹೊರಹೊರಟಿತದು, ಹೇಳುತಿದೆ ವಿದಾಯ...

ಒಳಬಂದ ಬಾಗಿಲಲೆ ಹೊರಹೋಗುತಿದೆ.

ಉಳಿವ ಯೋಗ್ಯತೆಯಿಲ್ಲವೆಂದಲ್ಲ,

ಅಳಿವ ಸಾಧ್ಯತೆಯಿದೆಯೆಂದು....



ತಿರುಗಿ ಬಹುಶಃ ಬರದು, ನೋವ ಬಯಸುವುದಿಲ್ಲ

ಬಯಸುವುದೇನು, ಸನಿಹಕೂ ಸುಳಿವುದಿಲ್ಲ...

ನೋವಹೊತ್ತು ಮೆರೆಸುವರ ಸುತ್ತಮುತ್ತಲಿ,

ನೋವು ಮರೆವುದಾಗುವುದಿಲ್ಲ....



ಇಂಥ ಕಡೆ ಬಹುಶಃ ಹೊಕ್ಕುವುದೂ ಇಲ್ಲ,

ಹೊಕ್ಕುವುದೇನು, ಒಳಗಿಣುಕುವುದೂ ಇಲ್ಲ,

ಅಲ್ಲೊಳಗೆಲ್ಲ ತುಂಬಿದ ಅಸಮಾಧಾನದಿ,

ಸಮಾಧಾನ ಹುಡುಕುವುದಾಗುವುದಿಲ್ಲ.....



ಅದರದಿದೆ ಅದರಂಗಳ, ಅದರದೇ ಭಾವಶರಧಿ...

ಬಂಧಗಳೇ, ಬರಬಹುದು ನೀವೂ ನೆನಪಾದಲ್ಲಿ ....

ಅತ್ಮೀಯ ಸ್ವಾಗತ ಅಲ್ಲಿದ್ದೇ ಇದೆ, ನಿರೀಕ್ಷೆಯೂ...

ಆದರೂ ಈ ಸೊಗ ಅಲ್ಲಿಹುದೇ? ಪ್ರಶ್ನೆ ಕಾಡುವುದು..



ನೂರು ನಗುವ ನೋವೊಂದಿಲ್ಲಿ ನುಂಗಿಹುದು

ನೀರಲಿಲ್ಲದ ಮೀನಂತೆ ಅಲ್ಲದು ತಹತಹಿಸಬಹುದು..

ನೀವು ತರೋ ಪ್ರೀತಿಸೆಲೆ ಜೀವಜಲವಾಗಬಹುದು

ಇದೋ...ಹೊರಹೊರಟಿಹುದು, ಹೇಳುತಿದೆ ವಿದಾಯ...



Saturday, December 8, 2012


ಆತ್ಮಸಖಿಗೊಂದು ಪತ್ರ...

........................................
  ಸಖೀ, ನಿನ್ನೊಡನೆ ಮನಸಲ್ಲೇ ನಿನ್ನೆ ತುಂಬಾ ಹೊತ್ತು ಮಾತಾಡಿದೆ ಕಣೇ... ಅದೇನು ಅಂತೀಯಾ....ಹೇಳ್ತೀನಿ ಇರು. ಎಷ್ಟು ವಿಚಿತ್ರ ನೋಡು, ನಾನು ನನ್ನ ಅನಿಸಿಕೆಯನ್ನು ತೋಡಿಕೊಳ್ಳಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ನಿನ್ನನ್ನು ನನ್ನ ಕಲ್ಪನೆಯೊಳತಂದು ಅದೆಷ್ಟೋ ಹೊತ್ತು ನಿನ್ನೊಡನೆ ಕಳೆದೆ...ನೀನೂ ಅಲ್ಲಿ ಆ ಚಿಂತನಾಸರಣಿಗೆ ಅದೆಷ್ಟೋ ಕೊಂಡಿಗಳ ರೂಪದಲ್ಲಿ ಒದಗಿದೆ... ಆದರೀಗ ಹೇಳು ನೋಡುವಾ... ಏನು ಮಾತಾಡಿದ್ದು ನಾವು...? ಹೇಳಲಾರೆ... ಯಾಕೆಂದರೆ ಅಲ್ಲಿದ್ದದ್ದು ನಿನ್ನ ಅಮೂರ್ತವ್ಯಕ್ತಿತ್ವ....ಅದೂ ನನ್ನ ಭಾವಪ್ರಪಂಚದೊಳಗಷ್ಟೆ....ಅದು ಹೇಗೆ ಅಂತೀಯಾ....ಅದು ಹೀಗೇ ಕಣೇ......



ಸ್ನೇಹ ಅಮೂರ್ತವೆಂದರೆ ನಿರಾಕಾರನನೊಪ್ಪಿದಂತೆ

ಸ್ನೇಹ ಮೂರ್ತವೆಂದರೆ ದೇಗುಲವ ಹೊಕ್ಕಂತೆ

ನಿರೂಪಣೆ, ಬಣ್ಣನೆ, ವಿವರಣೆಗದು ಹೊರತು....

ಕಾರಣ, ಉದ್ದೇಶ, ಸಾಕ್ಷಿ, ಆಧಾರಕೂ ...

ಇದೆಯೆಂದರೂ ಇಲ್ಲವೆಂದರೂ.....

ಮೂರ್ತ- ಅಮೂರ್ತಗಳ ಮೀರಿದ್ದು

ಸ್ನೇಹವೂ ಹೌದು ಮತ್ತು ದೇವನೂ....



ಈ ಭಾವನೆಗಳೇ ಹಾಗೆ...ಗಾಳಿಯ ಹಾಗೆ...ಸಮುದ್ರದ ಹಾಗೆ....ಕಾಲದ ಹಾಗೆ....ತಮ್ಮಷ್ಟಕ್ಕೆ ತಾವು ಇಷ್ಟಬಂದಂತೆ ವರ್ತಿಸುತ್ತಲೇ ಸಾಗುತ್ತವೆ. ಅವು ಹಾಗಿರುವುದು ಬೇಕಿರಲಿ, ಬೇಡದಿರಲಿ,.. ಸಾಕಿರಲಿ, ಸಾಲದಿರಲಿ...ಸೂಕ್ತವಿರಲಿ, ಇಲ್ಲದಿರಲಿ...ಅವಕೆ ತಮ್ಮದೇ ದಾರಿ, ತಮ್ಮದೇ ನಿರ್ದೇಶನ ಮತ್ತೆ ತಮ್ಮದೇ ಗುರಿ. ಒಮ್ಮೊಮ್ಮೆ ನಮ್ಮೊಳಗವೇ ಬೇಡವೆನಿಸುವ ರೀತಿಯ ಅಧಿಪತ್ಯ ಸಾಧಿಸಿ ತಬ್ಬಿಬ್ಬುಗೊಳಿಸುವಷ್ಟು ಆಕ್ರಮಣಕಾರಿ.... ಒಮ್ಮೊಮ್ಮೆ ಪುಳಕಿತಗೊಳಿಸುವಷ್ಟು ಮಾರ್ದವ...ಇಲ್ಲದ್ದ ಕಲ್ಪಿಸಿ ಒಮ್ಮೊಮ್ಮೆ ದುಖಃದಾಯಕ, ಒಮ್ಮೊಮ್ಮೆ ಆಶಾದಯಕ, ...ತೀವ್ರವಾಗಿ ಒಮ್ಮೊಮ್ಮೆ ಎದುರಿದ್ದವರ ದೂರವಾಗಿಸುವಷ್ಟು ಕಠೋರ, ಒಮ್ಮೊಮ್ಮೆ ಸೀದಾ ಎದೆಗಿಳಿಸುವಷ್ಟು ಮಧುರ....ಹೀಗೆ ನಮ್ಮವೇ ಆಗಿದ್ದು ನಮ್ಮಾಧೀನಕ್ಕೆ ಹೊರತಾಗಿದ್ದರೂ ಇವು ಎಲ್ಲಾ ಹೊತ್ತಲ್ಲೂ ಸಂಗ ಬಿಡದ ಸಂಗಾತಿಗಳಂತೂ ಹೌದು...ಅದರಲ್ಲೂ ನನ್ನ ನಿನ್ನಂಥ ಸೂಕ್ಷ್ಮಮತಿಗಳು ಅವಕ್ಕೆ ತುಂಬಾ ಸದರ ಕೊಟ್ಟು ಬಿಟ್ಟಿರುತ್ತೇವೇನೋ ಹಲವು ಬಾರಿ...ಏನಂತೀಯಾ? ಅದಿರಲಿ ನಿನ್ನೆಯ ಮಾತುಕತೆಗೆ ಬರೋಣ..

ನಿನ್ನೆ ನಾನೊಂದು ಕವನ ಬರೆದು ಸಾರ್ವಜನಿಕರ ದೃಷ್ಟಿಗೆ ಅದನೊಪ್ಪಿಸಿದೆ ನೋಡು...ಅದು ಹೀಗಿತ್ತು....



ಬೆಲೆ ತೆರಲೇ ಬೇಕು

---------------------------------------

ಅಲ್ಲೊಂದು ಹೃದಯ- ಎಲ್ಲರದರಂತೆ

ದೇಹಕೂ ಮನಸಿಗೂ ಜೀವನದಿಯ ಸೆಲೆ



ಗೋಡೆ ಮಾತ್ರ ಬಹಳ ಮೆದು, ತೇವ ಸ್ವಲ್ಪ ಜಾಸ್ತಿ.

ಆರ್ದೃತೆಯುಳಿಸಿಕೊಂಡುದಕೆ ಇತ್ತ ಸೆಳೆತ ಜಾಸ್ತಿ

ಮೊದಲ ಮಳೆಯುಂಡ ಹಸಿಮಣ್ಣ ಘಮಲಂತೆ,

ತನ್ನತನ ಎಲ್ಲರಂತಿಲ್ಲೆಂಬ ಗರ್ವವಂತೆ.



ದಾರಿಹೋಕರೆಲ್ಲ ಒಣಗದ್ದು ವಿಶೇಷವೆಂದರು,

ಬಳಿಸಾರಿ ಮುಟ್ಟಿದರು, ಉಗುರಿಂದ ಕೆರೆದರು,

ಬೆರಳಲಿ ಬರೆದರು, ದೂರ ಸಾಗಿ ಜೋರು ಕಲ್ಲೆಸೆದರು,

ಅಳಿಯದ ಛಾಪು ಮೂಡಿಸಿ ಅಮರರೆನಿಸಬಯಸಿದರು.



ಗುರುತು ಮೂಡಿಸಲೀಗ ಸೂಜಿಮೊನೆ ಜಾಗವಲ್ಲಿಲ್ಲ.

ಹಸಿಗೋಡೆ ಜೊತೆಗಾರೂ ಇಲ್ಲ, ಇವೆ ಗುರುತು ಮಾತ್ರ.

ಗಟ್ಟಿಯಾಗಬೇಕದಕೀಗ, ಆಗಲೊಲ್ಲದು,

ಹುಟ್ಟುಗುಣ ಸುಟ್ಟರೂ ಬಿಟ್ಟು ಮಾತ್ರ ಹೋಗದು.



ಗಟ್ಟಿಯಾದರೂ ಮುಂದೊಮ್ಮೆ ಗುಳಿಗಳು, ಗೀಚುಗಳು,

ಗೀರುಗಳು, ಗಾಯಗಳು ಕಲೆಯಾಗುಳಿಯುವವು.

ಸುಲಭವಲ್ಲವಲ್ಲಾ... ಎಲ್ಲರಂತಿಲ್ಲದಿರುವುದು?!

ಬೇರೆ ಎನಿಸಿಕೊಳಲಿಕೆ ಬೆಲೆಯ ತೆರಲೇಬೇಕು.



ಸರಿ, ಅಭಿಪ್ರಾಯಗಳು, ಟೀಕೆಗಳು, ಮೆಚ್ಚುಗೆಗಳೂ ಬಂದವು, ಜೊತೆಗೊಂದು ಪ್ರಶ್ನೆ..."ಹಳೆಯ ಗಾಯ ಮರೆಯಲು ಹೊಸ ಸ್ನೇಹದ ಅವಶ್ಯಕತೆ ಇದೆಯಾ..." ಈ ಪ್ರಶ್ನೆ ನನ್ನ ಚಿಂತನೆಗೆ ಹಚ್ಚಿತು ಕಣೇ... ಬರಹಕ್ಕೂ ಅದರ ಬರಹಗಾರನಿಗೂ ಇರುವ ಮತ್ತು ಇರಬೇಕಾದ ಸಂಬಂಧದ ಸ್ವರೂಪ ಯಾವುದು... ನಿಜ, ಸಂಬಂಧ ಅಂದರೆ ಸಂಬಂಧ ... ಅದಕ್ಕೊಂದು ಸ್ವರೂಪ ಎಂಬ ನಿರ್ದಿಷ್ಟತೆ ಇರದು, ಮತ್ತು ಇರಬಾರದು, ಒಪ್ಪಿದೆ. ಆದರೂ ಅದಕ್ಕೊಂದು ಹೀಗಿರಬೇಕೆಂಬ ಕನಿಷ್ಠ ಹಾಗೂ ಸ್ಥೂಲನಿಯಮವಿರಬೇಕಲ್ಲವೇನೇ..ಹನ್ನೆರಡನೇ ಶತಮಾನದ ವಚನಕಾರರ ಬಗ್ಗೆ ಓದುವಾಗ ಹೀಗೆ ಓದಿದ್ದೆ- "ವಚನಚಳುವಳಿಯು ಅಷ್ಟೊಂದು ಪ್ರಭಾವಶಾಲಿಯಾಗಿ ಬೆಳೆಯಲು ಕಾರಣವೇನೆಂದರೆ ವಚನಕಾರರು ಸಾಮಾನ್ಯರ ನಡುವೆ ಬಾಳಿದರು, ಕಷ್ಟ ಸುಖಗಳನ್ನು ಅವರೊಂದಿಗೆ ಅನುಭವಿಸಿ, ಅದನ್ನು ಅನುಭಾವವಾಗಿಸಿ ಬದುಕಿದ್ದನ್ನು ಬರೆದರು, ಬರೆದದ್ದನ್ನು ಬದುಕಿದರು....." ಅಂದರೆ, ನಾವು ಅನುಭವಿಸಿದ್ದನ್ನ ಬರೆಯುವುದಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯವೇ... ಅಥವಾ ಕಲ್ಪಿಸಿ ಬರೆಯುವುದು , ಪರಕಾಯ ಪ್ರವೇಶದಿಂದುತ್ಪನ್ನ ಭಾವಗಳನ್ನು ಬಿಂಬಿಸುವುದು ಕೂಡಾ ಅಷ್ಟೇ ಪ್ರಭಾವಶಾಲಿಯಾಗುವುದು ಸಾಧ್ಯನಾ ಅಂತ...

ಸಾಮಾನ್ಯವಾಗಿ ಕವನಗಳ ಬಗ್ಗೆ ಮಾತಾಡುವಾಗ ಆರಿಸಿಕೊಳ್ಳುವ ಪ್ರಕಾರಗಳ ವೈವಿಧ್ಯತೆ ತುಂಬಾ ವಿಸ್ತಾರದ್ದು. ಅಲ್ಲಿ ವರ್ಣನೆಯದ್ದೊಂದು ಪ್ರಕಾರವಾದರೆ ಕಲ್ಪನೆಯದ್ದೊಂದು, ಹೇಳಿಕೆಯದ್ದೊಂದಾದರೆ ನಿವೇದಿಸಿಕೊಳ್ಳುವದ್ದೊಂದು, ಉಪದೇಶದ್ದೊಂದಾದರೆ ಪ್ರಶ್ನಿಸುವದ್ದೊಂದು, ಖಂಡನೆಯದ್ದೊಂದಾದರೆ ಹೊಗಳುವದ್ದೊಂದು...ಸಂವಾದದ್ದೊಂದಾದರೆ ಸ್ವಗತದ್ದೊಂದು ಹೀಗೆ ನೂರಾರು ತರಹದವುಗಳು... ಮತ್ತವುಗಳ ಜಾಡಿನ ರಚನೆಗಳು. ನನ್ನ ಮಟ್ಟಿಗಂತೂ ಮನಸಿನೊಳಗೆ ಒಂದು ವಿಷಯದ ಬಗೆಗಿನ ಭಾವನೆಗಳು ತುಂಬಿ ತುಳುಕಾಡಿದಾಗ ಉಳಿದವುಗಳಿಗೆಡೆ ಮಾಡಿಕೊಳ್ಳಲು, ಅಥವಾ ಭಾವನೆಗಳು ದಟ್ಟಮೋಡಗಳಂತಾದಾಗ ಸುರಿಯುವುದು ಅನಿವಾರ್ಯತೆಯಾದಾಗ...ಹೀಗೆ.. ಒಟ್ಟಿನಲ್ಲಿ ಹಗುರಾಗಲು ಒಂದು ಮಾಧ್ಯಮ ಈ ಬರವಣಿಗೆ. ಈ ಎಲ್ಲಾ ಪ್ರಕಾರಗಳಲ್ಲೂ ಮನುಷ್ಯನ ಕುರಿತಾಗಿ ಬರೆದ ಬರಹಗಳನ್ನು ತೆಗೆದುಕೊಳ್ಳುವಾ.ಅಲ್ಲಿನ ಭಾವನೆಗಳು ಸ್ವಾನುಭವದ ಶಿಶುಗಳಾಗಿಯೂ ಇರಬಹುದು ಅಥವಾ ಎದುರಾದದ್ದೊಂದು ಸಂದರ್ಭದಲ್ಲಿ ಕೇಂದ್ರದಲ್ಲಿ ತನ್ನನ್ನು ಕಲ್ಪಿಸಿಕೊಂಡು ಮೂಡಿದವೂ ಇರಬಹುದು, ಇಲ್ಲ ಪರರಿಗಾಗಿ ತುಡಿತದ ಫಲವೂ ಇರಬಹುದು. ಮುಖ್ಯವಾಗಿ ವಸ್ತುವೆಂದು ರಮ್ಯವಿಷಯವೊಂದನ್ನು ಆರಿಸಿ ಬರೆದಾಗಲಂತೂ ಅದೂ ಸ್ವಗತ ಮಾದರಿಯ ಅಥವಾ ಸಂವಾದ ಮಾದರಿಯ ಕವನಗಳಲ್ಲಿ ಬಿಂಬಿತ ಭಾವಗಳು ಮತ್ತು ಹೇಳಿಕೆಗಳು ಬಹುಶಃ ಓದುಗನ ಮನಸಿನಲ್ಲಿ ಒಂದೋ ಬರೆದವನನ್ನು ಅಥವಾ ತನ್ನನ್ನು ಆ ರಚನೆಯ ಕೇಂದ್ರವಾಗಿಸಿ ತೋರಿಸುವುದೇ ಹೆಚ್ಚು... ಏನಂತೀಯಾ...?

ಹಾಗಾದರೆ, ಕಲ್ಪಿಸಿ ಬರೆದ ಬರಹ ಅನುಭವಿಸಿ ಬರೆದದ್ದರಷ್ಟು ಪ್ರಭಾವಶಾಲಿಯಲ್ಲ ಅನ್ನುವುದಾದರೆ,ನನ್ನದಲ್ಲದ ಅನುಭವವೊಂದು ನನ್ನದೇ ಅನ್ನಿಸುವಷ್ಟು ಆ ಓದುಗನನ್ನು ಪ್ರಭಾವಿಸಿದ್ದು ಮತ್ತು ಆಮೂಲಕ ಆ ಪ್ರಶ್ನೆ ಹುಟ್ಟಿದ್ದು ಹೇಗೆ?

ಮನುಷ್ಯನಲ್ಲದ ವಿಷಯಗಳ ಬಗ್ಗೆ ಬರೆಯುವಾಗ ಪ್ರತಿಮೆಗಳು, ಉಪಮೆಗಳು ಎಷ್ಟೊಂದು ಹಿತವೆನಿಸುತ್ತವೆ!... ಉದಾಹರಣೆಗೆ ಭೂಮಿ ಬಾನುವಿನ, ಸೂರ್ಯ ಕಮಲದ, ಚಂದ್ರ ನೈದಿಲೆಯ ಪ್ರೇಮ, ಇಬ್ಬನಿಯ ಹನಿಯೊಂದು ಹಿಮಮಣಿಯೆನಿಸುವುದು, ಮೂಡಣದ ಬಾನಿನಲ್ಲಿ ರಕ್ತದೋಕುಳಿ ಚೆಲ್ಲಿದಂತನಿಸುವುದು, ಕ್ಷಿತಿಜದಲ್ಲಿ ಭೂಮಿ ಬಾನು ಸೇರಿ ಕಾಮನಬಿಲ್ಲಿನ ಜನನವೆಂದೆನಿಸುವುದು.. ಇವೇ ಮುಂತಾದ ಈ ರೀತಿಯ ಕಲ್ಪನೆಗಳು ನಮ್ಮ ಹಿರಿಯ ಕವಿಗಳ ರಚನೆಗಳಲ್ಲಿ ಪ್ರಮುಖ ಆಕರ್ಷಣೆಗಳೆನಿಸುವುದಲ್ಲದೆ, ಅವರವರ ರಚನೆಗಳ ಮೇರುಲಕ್ಷಣಗಳೆನಿಸುವುದು ಕಂಡಿದ್ದೇವೆ ಅಲ್ಲವೇ? ಅದೇ ರೀತಿ ಅವಲ್ಲದ ಆದರೆ ಅವಾಗಬಹುದಾದ ಮನುಷ್ಯನ ಗುಣಗಳು, ವರ್ತನೆಗಳು, ನಿರ್ಧಾರಗಳು, ಚಿಂತನೆಗಳು, ಲಕ್ಷಣಗಳು ಒಂದು ಕವನದಲ್ಲಿ ಕಲ್ಪನೆಯ ಫಲವಾಗಿ ಬಿಂಬಿಸಲ್ಪಟ್ಟರೆ, ಅದನ್ನೊಂದು ಸಾಧ್ಯತೆಯಾಗಿಯೇ ಅಥವಾ ನೈಜತೆಯಾಗಿಯೇ ನೋಡುವುದು ಯಾಕೆ? ಅದೊಂದು ಕಲ್ಪನೆಯಿರಬಹುದೆಂದು ಕನಿಷ್ಠ ಮೊದಲ ಓದಿನಲ್ಲಂತೂ ಅನಿಸುವುದಿಲ್ಲ..( ಹೆಚ್ಚಿನ ಸಲ ಇದು ಬೇರೆಯವರ ಬರಹಗಳ ಓದುಗಳಾದಾಗ ನನ್ನ ಚಿಂತನೆಯ ಜಾಡೂ ಹೌದು.) ಇದಕ್ಕೆ ನಮ್ಮ ಕ್ಲಿಷ್ಟ ಮನಸು ಕಾರಣ ಅಂತೀಯಾ,.. ಮನಸು ಎದುರಿಗಿನ್ನೊಂದು ಮನಸನ್ನು ಕಂಡಾಗ ಸಂಶಯದ ದೃಷ್ಟಿಯಿಂದಲೇ ನೋಡುವುದು ಅಂತೀಯಾ, ಅಥವಾ ಅನುಭವಕ್ಕೆ ಬರದ್ದು ಸತ್ಯವೇ ಅಲ್ಲ ಅನ್ನುವ ದೃಷ್ಟಿಕೋನ ಅಂತೀಯಾ..

ಹೀಗೆ ನಿನ್ನೆದುರಿಗಿಷ್ಟು ಜಿಜ್ಞಾಸೆಗಳನ್ನಿಟ್ಟು ಮುಗಿಸುತ್ತಿದ್ದೇನೆ....ನಿನಗೇನಾದರೂ ಇವಕ್ಕುತ್ತರವಾಗಿ ನಾನಿಲ್ಲಿ ಹೇಳದ್ದು ಹೊಳೆದರೆ ತಿಳಿಸುತ್ತೀಯಲ್ಲಾ.....ಇವತ್ತಿಗೆ ಮುಗಿಸಲಾ...

Tuesday, December 4, 2012



ಅಪ್ಪ....


-------------------

ಸವೆದ ಚಪ್ಪಲಿ, ಮಾಸಿದ ಚೀಲ,

ಮುರಿದ ಕನ್ನಡಕ,  ಒಡೆದ ವೀಳ್ಯದ ಪೆಟ್ಟಿಗೆ,

ಮುರುಕು ನಶ್ಯದ ಡಬ್ಬಿ, ಹರಕು ಬೈರಾಸ,

ಇಂಚಿಂಚು ಕುಸಿಯಿಸುವ ಇಳಿವಯಸಲಿ

ಕಳೆಗೆಟ್ಟ ಅಂಗಿ, ತೂತು ಬನಿಯಾನಿನೊಳಗಣ

ಅಪ್ಪನದೆಲ್ಲವೂ ಈಗ ಹಳೆಯದೇ...



ಆದರೆ....,

ತೊದಲಾದರೂ ನುಡಿ, ಭಾವಸ್ಪಷ್ಟತೆ,

ಭಕ್ತಿಯಲಿ ಮತ್ತೆ ಕಣ್ತುಂಬುವ ಪರವಶತೆ,

ತಪ್ಪುಸರಿಯ ಬೇರ್ಪಡಿಸುವ ಸ್ಮೃತಿದೃಢತೆ,

ಒಳಿತನಪ್ಪಿ ಕೆಡುಕ ತೊರೆವ ನೀತಿಬದ್ಧತೆ-

ಅವನಲಿ ಹೊಸತಾಗುತಲೇ ಸಾಗಿವೆ..



"ಅಪ್ಪಾ" ಎಂದಾಗ ಚಿಮ್ಮೋ ಮಾರ್ದವತೆ,

ಆ ಅಸಹಾಯನಗುವಲೂ ಕಾಣೋ ಭದ್ರತೆ,

ಮುದಿಕಾಯದಲೂ ಮುದಿಯಾಗದ ಭರವಸೆ,

"ತಾ ಇಲ್ಲಿ ಭಾರ" ಎನುವ ಕೈಯ್ಯ ಒತ್ತಾಸೆ,

ಈಗಷ್ಟೇ ಹುಟ್ಟಿದ ತಾಜಾತನ ನನ್ನೊಳಗಿವಕಿವೆ....



















ಈಗ ಒಪ್ಪಿದೆ .....


-------------------

ಸಾಕಾರದ ಸುತ್ತ ವಿಸ್ತೃತ ನಿರಾಕಾರ ಎಂದೆಯಲ್ಲಾ...

ತಿಳಿದಿರಲಿಲ್ಲ... ಈಗ ಒಪ್ಪಿದೆ,

ನಿನ್ನ ತುಂಬುಕಣ್ಣ ಹಿಂದಿನ ಶೂನ್ಯದೃಷ್ಟಿ...

ತುಂಬು ಬಾಳ ಹಿಂದಿನ ಶೂನ್ಯ ಆಸ್ತಿಪಾಸ್ತಿ....

ನಿಸ್ವಾರ್ಥತೆಯ ಸುತ್ತಲಿನ ಸ್ವಾರ್ಥಪ್ರೀತಿ

ಸತ್ಯಪರತೆಯ ಮುಂದಿನ ಸುಳ್ಳಮಾಲೆ

ನಿಷ್ಠೆಯ ಪ್ರತಿಯ ಢಂಭಾಚಾರದ ನಗು

ಮಾತುಗಳ ಹಿಂದಿನ ಮೌನ,

ಆರೋಗ್ಯದ ಹಿಂದಿನ ಒದ್ದಾಟ,

ಏಳ್ಗೆಯಾಸೆಯ ಹಿಂದಿನ ನಿರಾಸೆ,

ಅಳಿವಳಿಸೊ ಕಳಕಳಿಗೆ ಉಪೇಕ್ಷೆ,

ಕ್ಷೇಮಹಾರೈಕೆಯ ಹಿಂದಿನ ಅಧೈರ್ಯ-

ನೀನಂದುದಕೆ ಇವೇ ಪ್ರತ್ಯಕ್ಷ ಸಾಕ್ಷಿ....

ಅಪ್ಪಾ...ಈಗನಿಸಿದ್ದಲ್ಲ......

ಈ ಧೂಳು ಹಿಡಿದ ಕನ್ನಡಿಯ

ಬಿಂಬದಂತಿದ್ದ ಅಸ್ಪಷ್ಟ ಅನಿಸಿಕೆಗಳು,

ನಿನ್ನೆ ಬೀಳ್ಕೊಟ್ಟಾಗ ಕಂಡೂಕಾಣದುದುರಿದ

ನಿನ್ನ ನಗುವಿನ ಕಂಬನಿಯಲ್ಲಿ ಸ್ಪಷ್ಟವಾದವು.....













Friday, November 30, 2012

ಆತ್ಮಸಖಿಗೊಂದು ಪತ್ರ.....


---------------------------------------------------------------------------

ಸನ್ಮಿತ್ರರೇ, ದೈನಂದಿನ ಜೀವನದಲ್ಲಿ ಎದುರಾಗುವ ಅದೆಷ್ಟೋ ಸನ್ನಿವೇಶಗಳು, ಸಿಕ್ಕುವ ಮಾಹಿತಿಗಳು ನಮ್ಮೊಳಗೆ ಭಾವನೆಗಳ ಮಹಪೂರವನ್ನೇ ಹರಿಸುವಷ್ಟು ಪರಿಣಾಮಕಾರಿಗಳಾಗಿರುತ್ತವೆ. ಎಷ್ಟೋ ಬಾರಿ ಆ ಭಾವನೆಯ ಜಾಡು ಹೇಗಿರುತ್ತದೆ ಅಂದರೆ, ಅನಿವಾರ್ಯ ಕಾರಣಗಳಿಗಾಗಿ ತೀರಾ ಹತ್ತಿರದ ಸುತ್ತಮುತ್ತಲಿ ಅದನ್ನ ಹರಿಯಬಿಡಲಾಗುವುದಿಲ್ಲ. ಹಾಗಾಗಿ ಅಂಥ ಕೆಲ ಸಂದರ್ಭಗಳಲ್ಲಿ ನನಗನಿಸಿದ ಭಾವನೆಗಳನ್ನು ಅವು ಮೂಡಿದ ಹಾಗೆ ನನ್ನ ಕಾಲ್ಪನಿಕ ಗೆಳತಿಯೊಬ್ಬಳಲ್ಲಿ ಹಂಚಿಕೊಳ್ಳುವ ಹಾಗೂ ಅಮೂಲಕ ನಿಮಗೂ ಆ ಅನಿಸಿಕೆಗಳನ್ನು ಪರಿಚಯಿಸುವ ಯತ್ನ ಮಾಡುತ್ತಿದ್ದೇನೆ. ಕಾಲ್ಪನಿಕ ಗೆಳತಿ ಯಾಕೆಂದರೆ, ಮಧ್ಯೆ ಮಧ್ಯೆ ತಡೆಯುವ ಹಾಗೂ ತನ್ನ ಅಭಿಪ್ರಾಯ ತೂರಿಸುವ ಗೋಜಿಗವಳು ಹೋಗಲಾರಳು ಅನ್ನುವ ಕಾರಣ- ಅಷ್ಟೆ. ಆ ಕಾಲ್ಪನಿಕ ಪಾತ್ರದಲ್ಲಿ ನನ್ನ ನಿಜಜೀವನದ ಗೆಳೆತನದ ಛಾಯೆ ಖಂಡಿತಾ ಅಡಗಿಕೂತಿರುತ್ತದೆ. ಅನುಭವವಲ್ಲದ ಅಭಿವ್ಯಕ್ತಿ ಹೇಗೆ ತಾನೇ ರೂಪ ತಾಳೀತು ಅಲ್ಲವೇ? ಈ ಶೃಂಖಲೆಯ ಮೊದಲ ಪತ್ರ.......

-----------------------------------------------------------------------------

ಸಖೀ, ಯಾವತ್ತಿನಂತೆ ಇಂದೂ ಆ ಬೆಕ್ಕು ಅದರ ಪುಟಾಣಿಗಳೊಂದಿಗೆ ಬಂದಾಗ ನಿನ್ನ ನೆನಪು ತುಂಬ ಹೊತ್ತು ಮನ ತುಂಬಿತ್ತು ಕಣೇ...ನಾನೂ ನೀನೂ ನಿಮ್ಮನೆ ಬೆಕ್ಕಿನ ಕರ್ರಗಿನ ಮೂರುಕಾಲಿನ ಒಂದು ನಿತ್ರಾಣಿ ಮರಿಗೆ ತಮ್ಮನಿಗೆ ಮದ್ದುಣಿಸಲು ತಂದಿದ್ದ ಪಿಲ್ಲರ್ ನಲ್ಲಿ ಹಾಲುತುಂಬಿ ಸಾಕಿದ್ದು, ಮೊರವೊಂದಕ್ಕೆ ಗೋಣಿಚೀಲ ಹಾಸಿ ಮಲಗಿಸಿ, ಗಳಿಗೆಗೊಮ್ಮೆ ಜೀವಂತವಾಗಿದೆಯೇ ಎಂದು ನೋಡುತ್ತಿದ್ದುದು, ಕ್ಷಣಕ್ಷಣ ಬಿಗಡಾಯಿಸುತ್ತಿದ್ದ ಅದರ ಆರೋಗ್ಯಕ್ಕಾಗಿ ಕಣ್ಣೀರಿಡುತ್ತಾ ಮನಸಿಲ್ಲದಿದ್ದರೂ ಅದರ ಸಾವಿಗೆ ಕಾಯುತ್ತಿದ್ದೇವೇನೋ ಅನಿಸುತ್ತಿದ್ದುದು... ಈ ಎಲ್ಲಾ ಭಾವನೆಗಳೂ ನಿನ್ನೆಯವೇನೋ ಅನಿಸುವಷ್ಟು ತಾಜಾವಾಗಿವೆ ಕಣೆ ಎದೆಗೂಡಲ್ಲಿ. ಈಗ ಒಂದಾರೇಳು ತಿಂಗಳ ಹಿಂದೆ ಇದೂ ಒಂದು ಪುಟಾಣಿಯೇ. ಹೇಗೋ ಅಮ್ಮನೊಂದಿಗೆ ಮಾಳಿಗೆಯೇರಿ ಬಿಟ್ಟಿತ್ತು. ಮುಂದೊಂದು ದಿನ ಜಾಗ ಬದಲಿಸಲು ಆ ಅಮ್ಮ ಕೆಳಗಿಂದ ಕರೆವಾಗ ಹಾರುವ ಧೈರ್ಯವಾಗದೆ, ಅಮ್ಮ ಕಣ್ಣಿಂದ ಮರೆಯಾಗುವುದನ್ನೂ ತಡೆಯಲಾರದೆ, ಹೃದಯವಿದ್ರಾವಕವಾಗಿ ಕೂಗುತ್ತಾ ದಿನವೆಲ್ಲ ಚಿಟ್ಟೆನಿಸುವಂತೆ ಮಾಡಿತ್ತು. ತಡೆಯದೇ ನಾನು ಹರಸಾಹಸ ಮಾಡಿ ಅದರಮ್ಮನ ಗುರ್ರ್ರ್ ಗಳ ನಡುವೆ ಹೇಗೋ ಧೈರ್ಯ ಮಾಡಿ ಕೆಳಗೆ ತಂದಿಟ್ಟಿದ್ದೆ. ಈಗ ನೋಡು ಅದರ ಮರಿಗಳಿಗಾಗಿ ವಾರಕೊಂದರಂತೆ ಹೊಸಹೊಸ ಜಾಗ ಹುಡುಕಿ ಠೀವಿಯಿಂದ ಕರೆದೊಯ್ಯುವ ಪರಿ...! ಜಗತ್ತೆಷ್ಟು ದೊಡ್ಡ ದೊಡ್ಡ ಹೆಜ್ಜೆಯಿಟ್ಟು ಮುನ್ನಡೆಯುತ್ತಿದೆ, ಅದರದೇ ಅಂಗಗಳಾದ ನಮ್ಮ ಮನಸ್ಸಿನ ನಡಿಗೆ ಇನ್ನೂ ಅದೆಷ್ಟೋ ಹೆಜ್ಜೆ ಹಿಂದಿದೆ ಅನಿಸುವುದಿಲ್ಲವೇನೇ ಒಮ್ಮೊಮ್ಮೆ? ಅದುಬಿಡು.... ನಾನಿಂದು ನಿನ್ನಲ್ಲಿ ಹಂಚಿಕೊಳ್ಳಬೇಕಾಗಿರುವ ಅರ್ಥವಾಗದ ವಿಷಯ ಯಾವುದು ಗೊತ್ತೇನೇ? ಈ ಬೆಕ್ಕಿನ ಅಪ್ಪನೇ ಅದರ ಮರಿಗಳಿಗೂ ಅಪ್ಪ!! ಇದು ಪ್ರಕೃತಿಯ ಅತ್ಯಂತ ಸಹಜ ನಿಯಮವೇನೋ ಅನ್ನುವಷ್ಟರ ಮಟ್ಟಿಗೆ ವಂಶಾಭಿವೃದ್ಧಿಯ ವೇಳೆ ಅವು ನಿರಾಳ. ಅದನ್ನ ಒಪ್ಪಿಕೊಳ್ಳುವುದು ನಮಗೆ ಅತ್ಯಂತ ಕಷ್ಟದ ವಿಷಯವೆನಿಸುವುದು ಮತ್ತು ಆ ಬಗ್ಗೆ ಯೋಚಿಸುವುದೂ ಅಸಹ್ಯವೆನಿಸುವುದು- ಇದಕ್ಕೆ ಕಾರಣ, ನಮ್ಮಲ್ಲಿರುವ ಮನಸು ಅಂತೀಯಾ? ಮನಸು ಬೆಕ್ಕಿಗಿರುವುದಿಲ್ಲವಾ? ನಾನು ನಗುಮುಖದಿಂದಿಕ್ಕಿದರೆ ಮಾತ್ರ ಧೈರ್ಯವಾಗಿ ಓಡಿಬಂದು ಕಾಲುನೆಕ್ಕಿ,ಮೈಯೆಲ್ಲ ನನ್ನ ಕಾಲಿಗುಜ್ಜಿ ಮುದ್ದಿಸಿ ಹಾಲು ಕುಡಿದೋಡುವ ಇದೇ ಬೆಕ್ಕು, ಅದರ ಕೂಗಿಗೆ ಸಿಟ್ಟಿಗೆದ್ದು ಹಾಳಾಗಿ ಹೋಗು ಎನ್ನುವ ಭಾವದಲ್ಲಿಕ್ಕಿದ ಹಾಲು ಕುಡಿಯಲು ಬರುವ ಮಂದಗತಿಯ ನಡೆಯೇ ಬೇರೆ ಗೊತ್ತಾ? ಮನಸೆಂಬುದಿಲ್ಲದಿದ್ದರೆ ಇದು ಸಾಧ್ಯವೇನೇ ಸಖೀ? ಇರಲಿ ಬಿಡು ಅದರದ್ದು ನಮಗರ್ಥವಾಗದ ಜೀವನ ಶೈಲಿ ಅಂದುಕೊಂಡು ಬಿಡಬಹುದೇನೋ....ಆದರೆ ನಿನ್ನೆ ಪೇಪರ್ ನಲ್ಲಿ ಓದಿದ ಒಂದು ಸುದ್ಧಿ ಸಾಮಾನ್ಯವಾಗಿ ಒಂದು ಓದಿಗೆ ಅಥವಾ ಒಂದು ದೃಶ್ಯ ವೀಕ್ಷಣೆಗೆ ಕಣ್ಣೀರಾಗದ ನನ್ನನ್ನೂ ಅಳಿಸಿತ್ತು ಕಣೇ.. ಬಿಕ್ಕಿಬಿಕ್ಕಿ ಅತ್ತು ಬಿಟ್ಟೆ.. ನನಗೇ ಗಾಭರಿಯಾಗುವಷ್ಟು..ಯಾಕೆಂದರೆ ಆ ಪಾಟಿ ಅಳುತ್ತಿರುವುದು ಯಾಕೆ ಅಂತನೇ ಗೊತ್ತಿರದ ಅಳು ಅದು. ಸಣ್ಣ ಮಕ್ಕಳು ಒಪ್ಪಿಕೊಳ್ಳಲಾರದ್ದೇನಾದರೂ ನಡೆಯುತ್ತಿದ್ದಾಗ ಪ್ರತಿಕ್ರಿಯಿಸುವಂತಿತ್ತು ನನ್ನ ಮನಸಿನ ಅಸಹಾಯಕತೆಯ ಅಭಿವ್ಯಕ್ತಿ...

ಒಂದು ಹನ್ನೆರಡು ವರ್ಷದ ಹೆಣ್ಣುಮಗುವನ್ನ ಅದರ ಅಪ್ಪ, ಅಣ್ಣ ಮತ್ತು ಚಿಕ್ಕಪ್ಪ ಸೇರಿ ಎರಡು ವರ್ಷಗಳಿಂದ ನಿರಂತರ ಅತ್ಯಾಚಾರಕ್ಕೊಡ್ಡುತ್ತಿದ್ದರಂತೆ. ಶಾಲೆಯಿಂದೊಂದು ದಿನ ಮನೆಗೆ ಹೋಗಲಾರೆ ಎಂದಳುತ್ತಿದ್ದ ಮಗುವನ್ನು ಪುಸಲಾಯಿಸಿ ಜಾಣತನದಿಂದ ಕೇಳಿ ತಿಳಿದ ಉಪಾಧ್ಯಾಯಿನಿಯೊಬ್ಬರು ಈ ವಿಷಯ ಬಯಲು ಮಾಡಿದ್ದರು..ಇಷ್ಟೇ ಕಣೆ ನನ್ನಿಂದ ಓದಲಾದದ್ದು. ಮುಂದೆ ಕೈಕಾಲೆಲ್ಲ ಕಸುವಳಿದಂತಾಗಿ ಕಣ್ಣುಕತ್ತಲಿಟ್ಟುಬಿಟ್ಟಿತ್ತು. ಅವಳಮ್ಮ ಇದ್ದಳೇ ಇಲ್ಲವೇ... ಈ ಮುಂತಾದ ಈಗ ಏಳುತ್ತಿರುವ ಪ್ರಶ್ನೆಗಳು ಆಗ ಏಳಲೇ ಇಲ್ಲ ನೋಡು. ಹೌದು ನಿಜವೇ, ಇದೇನೂ ಹೊಸದಲ್ಲ, ಎರಡು ವರ್ಷದ ಮಗುವನ್ನೂ ಲೈಂಗಿಕಶೋಷಣೆಗೊಳಪಡಿಸಿದ್ದನ್ನು ಓದಿದ್ದೇನೆ, ಸಂಕಟಪಟ್ಟಿದ್ದೇನೆ. ಆದರೆ, ಈ ಸಾಲುಗಳು ಒಂದು ಕ್ಷಣ ಕಾಲಕೆಳಗಿನ ನೆಲ ಕುಸಿಯುವಂತಾಗಿಸಿದವು...ಬಹುಶಃ ಆ ಮಗುವಿನದು ಹೆಚ್ಚುಕಮ್ಮಿ ನನ್ನ ಪುಟಾಣಿಯ ವಯಸ್ಸಾಗಿರುವುದರಿಂದ ಆ ಮಟ್ಟಿಗಿನ ಸಂಕಟವಾಯಿತೋ ಏನೋ.. ಇದೆಂಥ ಅಭದ್ರತೆಯಲ್ಲಿ ಇದೆ ಕಣೇ ನಮ್ಮ ಹೆಣ್ಣುಕಂದಮ್ಮಗಳ ಜೀವನ..?! ಕಿರುಚಿ ಅಳಬೇಕೆನಿಸುತ್ತಿದೆ.

ಅತ್ಯಾಚಾರವೆಂಬುವುದೇ ತೀರಾ ಮನಸ್ಸನ್ನು ಘಾಸಿಗೊಳಿಸಿ, ಮನೋಸ್ಥೈರ್ಯವನ್ನ ಚೂರುಚೂರಾಗಿಸುವ ಅನುಭವ. ಅದರಲ್ಲೂ ಭದ್ರತೆಗೆ ಪೂರಕವಾಗಬೇಕಾದ ಅನುಬಂಧಗಳೇ ಆ ಜೀವಂತ ಸಾವಿನ ನೋವನ್ನಿತ್ತಾಗ... ಆ ಮಗುವಿಗೆ ಸತ್ತುಬಿಡುವಾ ಅನ್ನಿಸುವಷ್ಟೂ ವಯಸ್ಸಾಗಿಲ್ಲ ಕಣೇ... ಅದರ ಮನಸಿನ ನೋವು ಯಾವ ಪರಿಯದ್ದಿದ್ದೀತು..ಆಗತಾನೇ ಅರಳಿದ ಹೂವಿನಂಥ ಅದರ ಆ ಮೃದು ಮಧುರ ಮೈಮನಸು ಹೊಸಕಿಹಾಕಲ್ಪಟ್ಟಿತ್ತು ಅದೂ ಒಮ್ಮೆ ಅಲ್ಲ, ನೂರಾರು ಬಾರಿ.

ಇಲ್ಲ ಕಣೆ, ಪದೇ ಪದೇ ಅತ್ಯಾಚಾರವೆಸಗಿದ ಅವರಿಗೊಮ್ಮೆಯೂ ಹಿಂಜರಿಕೆಯಾಗಲಿಲ್ಲವೇ ಎಂಬ ಪ್ರಶ್ನೆ ಹುಟ್ಟಿದರೂ ಅಲ್ಲೇ ಮರೆಯೂ ಆಯಿತು. ಮೊದಲಬಾರಿ ಆ ಕಂದಮ್ಮನನ್ನು ಉಪಯೋಗಿಸಿಕೊಂಡಾಗ ಅಳುಕದ, ಹಿಂಜರಿಯದ ಮನಸು, ಅದು ಮನುಷ್ಯರ ಮನಸೇ ಅಲ್ಲ, ಮೃಗಗಳದು. ಅವರ ಬಗ್ಗೆ ಯಾವ ಯೋಚನೆಯೂ ಬರುತ್ತಿಲ್ಲ ನನಗೆ, ನನ್ನ ಕಾಡುತ್ತಿರುವುದು- ಆ ಮುಗ್ಧ ಜೀವದ ಅಸಹಾಯಕ ನೋವು.. ಮುಂದಿನ ಆ ಜೀವನದಲ್ಲಿ ಮತ್ತದರ ಪರಿಣಾಮ.

ಎಲ್ಲ ಬಿಡು.. ಯಾವುದೋ ವಿಷಯಕ್ಕೆ ಹತ್ತಾರು ವರ್ಷಗಳಿಂದ ನಮ್ಮೊಡನಿದ್ದು ಬಾಳು ಹಂಚಿಕೊಂಡ ಗಂಡಂದಿರೇ ಒಮ್ಮೊಮ್ಮೆ ಮನಸಿನ "ಒಲ್ಲೆ" ಎನ್ನುವ ಮಾತನ್ನು ತಿಳಿದೋ ತಿಳಿಯದೆಯೋ ದೇಹವನ್ನು ಬಳಸಿಕೊಂಡರೆ ನಾವದೆಷ್ಟು ಅಸಹಾಯಕತೆ ಅನುಭವಿಸುವುದಿಲ್ಲಾ... ಹೇಳು.. ಅದೆಷ್ಟು ರೋಷ ಉಕ್ಕಿ ಬರುವುದಿಲ್ಲ, ಅದೆಷ್ಟು ಕಣ್ಣೀರಿಳಿಯುವುದಿಲ್ಲ..! ಅದೂ ನಾವವರ ಜೊತೆ ಬಾಳಿನ ಅತ್ಯಂತ ರಮಣೀಯ ಕ್ಷಣಗಳನ್ನೂ ಹಂಚಿಕೊಂಡಿರುತ್ತೇವೆ, ನಮ್ಮ ಎಷ್ಟೋ ಸಂತಸಗಳಿಗೆ, ರೋಮಾಂಚನಗಳಿಗವರೇ ಕಾರಣರಾಗಿರುತ್ತಾರೆ, ಅಲ್ಲದೆ ಆ ಸಂಬಂಧ ಆ ಕ್ರಿಯೆಯನ್ನು ತನ್ನೊಳಗಿನ ಅವಿಭಾಜ್ಯ ಅಂಗವಾಗಿ ಹೊಂದಿರುವಂಥದ್ದು .ಆದರಿಲ್ಲಿ ಈ ಮಗು ಇನೂ ಒಬ್ಬರೊಡನೆ ದೇಹ ಹಂಚಿಕೊಳ್ಳುವ ವಿಷಯವನ್ನೇ ತಿಳಿದಿರಲಾರದ ವಯಸಿನಲ್ಲಿ ಅವರ ಇಚ್ಚೆಗನುಗುಣವಾಗಿ ಅದನ್ನವರಿಗೊಪ್ಪಿಸಬೇಕು ಅಂದರೆ, ಅದೆಂಥ ಅಸಹಾಯಕತೆಯಿದ್ದೀತು ಅದರ ಮುಂದೆ, ವಿರೋಧಿಸಿದಾಗ ಎಂಥೆಂಥ ಶಿಕ್ಷೆಗಳಿಗೊಡ್ಡಿಕೊಂಡಿರಬಹುದು, ಎರಡು ವರ್ಷಗಳ ಕಾಲ ಮುಚ್ಚಿಟ್ಟುಕೊಂಡ ಆ ಮಗುವನ್ನು ಇನ್ಯಾವ್ಯಾವ ತರಹದ ನಿಯಂತ್ರಣಗಳಲ್ಲಿಟ್ಟಿರಬಹುದು, ಅಲ್ಲದೇ ಮುಂದಿನ ಜೀವಿತಕಾಲದಲ್ಲಿ ಅದರ ಮನಸು ಲೈಂಗಿಕ ಜೀವನದ ಬಗ್ಗೆ ಅಸಹ್ಯವೆಂದಲ್ಲದೆ ಇನ್ನೆಂಥ ಭಾವನೆಯುಳಿಸಿಕೊಂಡೀತು ಹೇಳು... ಮತ್ತಳುತ್ತಿದ್ದೇನೆ ಕಣೆ...

ನಾವು ಚಿಕ್ಕವರಿದ್ದಾಗ ಅಣ್ಣ ನಾನು ಸುಮಾರು ಹದಿಮೂರು ಹದಿನಾಲ್ಕರ ವಯಸಿನ ನಂತರ ಒಂದೇ ಕುರ್ಚಿಯಲ್ಲಿ ಕೂತು, ಮೈಕೈ ಮುಟ್ಟಿ ತಮಾಷೆಯಾಡುವುದಾಗಲಿ, ಒಂದೇ ಕೋಣೆಯಲ್ಲಿ ಮಲಗುವುದಾಗಲಿ ನಿಷಿದ್ಧವಿತ್ತು. ಎಷ್ಟೊ ಬಾರಿ ಇದನ್ನು ನೆನೆಸಿಕೊಂಡಾಗ ಮುಂದಿನ ದಿನಗಳಲ್ಲಿ ಅಪ್ಪ-ಅಮ್ಮ, ಅಜ್ಜ-ಅಜ್ಜಿಯರ ಈ ನಿರ್ಬಂಧದ ಬಗ್ಗೆ ಇರಿಸುಮುರುಸಿನ ಭಾವನೆ ಬರುತ್ತಿತ್ತು, ಅರ್ಥವಾಗುತ್ತಿರಲಿಲ್ಲ, ತುಂಬಾ ಸಂಕುಚಿತ ಮನೋಭಾವನೆಯೆನಿಸಿದ್ದೂ ಇತ್ತು. ಬಹುಶಃ ಇಂಥ ಒಂದು ಪ್ರವೃತ್ತಿ ಮಾನವನ ಮನಸಿನಲ್ಲಿ ಸಂಬಂಧಗಳ ಯಾವ ಪರಿವೆಯೂ ಇಲ್ಲದ ಒಂದು ರೀತಿಯಲ್ಲಿ ಎದ್ದೇಳುವ ಸಾಧ್ಯತೆಗಳ ಬಗ್ಗೆ ಮುಂಚಿನಿಂದಲೂ ಸುಳಿವಿತ್ತು, ಹಾಗಾಗಿ ಅವರು ಅದಕ್ಕೆಡೆ ಮಾಡಿಕೊಡದಂತೆ ಈ ನಿಯಮಗಳನ್ನು ರೂಪಿಸಿದ್ದರು. ಹಾಗಾದರೆ ಮೂಲತಃ ಮಾನವನಿಗೂ, ಮೃಗಗಳಿಗೂ ದೈಹಿಕ ತೃಷೆಯ ವಿಷಯದಲ್ಲಿ ಎಳ್ಳಷ್ಟೂ ವ್ಯತ್ಯಾಸವಿಲ್ಲ ಅಂತೀಯಾ?

ಪ್ರಾಣಿಗಳಿಗಿಂತ ಮುಂದುವರಿದ, ಮೇಲ್ಮಟ್ಟದ ಮನೋಸ್ಥಿತಿ ನಮ್ಮದು ಎಂಬ ಪೊಳ್ಳು ಹೆಮ್ಮೆ ಈ ಸಂದರ್ಭದಲ್ಲಿ ತಲೆಕೆಳಗಾಗುವುದನ್ನು ನಾವೊಪ್ಪಿಕೊಳ್ಳಲೇಬೇಕು. ಅದೂ ಅವುಗಳಲ್ಲಿ ಹೀಗೆ ತಮ್ಮ ತೀಟೆ ತೀರಿಸಿಕೊಳ್ಳಲು ಬಹುಶಃ ಅಪ್ರಾಪ್ತ ವಯಸ್ಕ ಪ್ರಾಣಿಗಳನ್ನ್ಯಾವತ್ತೂ ಬಳಸಿಕೊಳ್ಳವು ಅನಿಸುತ್ತದೆ. ಅಷ್ಟರಮಟ್ಟಿಗಾದರೂ ನಿಯಮಗಳನ್ನು ಬಾಳಿನಲ್ಲಿ ಪರಿಪಾಲಿಸಿಕೊಂಡು ಬಾಳುವ ಅವುಗಳಿಗಿಂತ ನಾವು ಯಾವ ಅರ್ಥದಲ್ಲಿ ಮುಂದುವರಿದ ಜನಾಂಗದವರು ಕಣೇ..? ಅತೃಪ್ತಿಯ ಕೈಯ್ಯಲ್ಲಿ ಬುದ್ಧಿ, ದೇಹಗಳೆರಡನ್ನೂ ಕೊಟ್ಟು ನಾವು ಮನುಜರು, ಮಾನವ ಜನ್ಮ ದೊಡ್ಡದು ಅಂದುಕೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ ಹೇಳು...

ಇಷ್ಟಕ್ಕೂ ಬರೀ ಮಾತುಗಳಲ್ಲಿ ರೋಷ ವ್ಯಕ್ತ ಪಡಿಸುವ ನಾವೂ ಒಂದು ರೀತಿಯಲ್ಲಿ ಮನುಷ್ಯತ್ವವಿಲ್ಲದವರೇ ಹೌದು. ಆ ಪಾಪಿಗಳಿಗೆ ಶಿಕ್ಷೆಯೇ ಆಗದೆ ಹೊರಬಂದು ರಾಜಾರೋಷವಾಗಿ ಬಾಳುವ ಸಂದರ್ಭಗಳೇ ಹೆಚ್ಚು. ಆದರೂ ಒಂದಷ್ಟು ವರ್ಷ ಕಾರಾಗೃಹವಾಸದ ಶಿಕ್ಷೆಯಾದೀತೇ ಹೊರತು ಇನ್ನದಕ್ಕಿಂತ ಹೆಚ್ಚಿನದೇನೂ ಅಲ್ಲ. ಮಾತಾಡುತ್ತಾ ಕೈಚೆಲ್ಲಿ ಕೂತುಬಿಡುವ ನಾವು ಪರೋಕ್ಷವಾಗಿ ಆ ಅಮಾನುಷತ್ವದ ಮುಂದೆ ಸೋಲೊಪ್ಪಿಕೊಂಡಂತೆಯೇ ಅಲ್ಲವೇನೇ? ನಮ್ಮ ನಮ್ಮ ಸ್ವಾರ್ಥದ ಕೋಟೆಯೊಳಗಡೆ ನಮ್ಮ ಸಮಯವನ್ನೂ, ಸತ್ವವನ್ನೂ ಬರೀ ನಮ್ಮೊಳಿತಿಗಾಗಿ ರಕ್ಷಿಸಿಕೊಳ್ಳುವುದನ್ನು, ಉಳಿಸಿ ಬಳಸಿಕೊಳ್ಳುವುದನ್ನು ಜೀವನದ ಪರಮಗುರಿಯಾಗಿಸಿಕೊಂಡ ಇಂದಿನ ಜೀವನಶೈಲಿಯಲ್ಲಿ ನಾನಾದರೂ ಏನು ಮಾಡಿಯೇನು, ನಾಲ್ಕಾರು ಗೆರೆ ಬರೆದು ಹಗುರಾದೇನು, ಮಗಳಿಗಿನ್ನೊಂದಷ್ಟು ಜಾಗ್ರತೆಯಾಗಿರು ಎಂದೆಚ್ಚರಿಸಿಯೇನು, ನಿನ್ನ ಜೊತೆ ಹಂಚಿಕೊಂಡೇನು ಅಷ್ಟೆ. ಮುಂದೆ ಮತ್ತದೇ ದಿನಚರಿಗಳಲ್ಲಿ ಮುಳುಗಿ ಹೋಗುವುದು .... ಇರಲಿಬಿಡು.. ಅಸಹಾಯಕತೆಯ ಕಾರಣ ಮುಂದೊಡ್ಡುವುದೂ ಒಂದೊಳ್ಳೆಯ ಕಳ್ಳನೆಪವಾಗಿಬಿಟ್ಟಿದೆ ಈಗೀಗ. ನೀರು ತುಂಬಿದ ಗುಳಿಯೆಡೆಗೇ ಹರಿದು ಬರುವ ನೀರು ಕೂಡಾ ದಾರಿ ಮಾಡಿಕೊಳ್ಳುವುದು ಎನ್ನುವ ನಿಜದಂತೆ ಅಸಹಾಯಕತೆಯೊಳಗಿದ್ದಷ್ಟೂ ಅದು ನಮ್ಮನ್ನು ಇನ್ನೂ ಇನ್ನೂ ಹುಡುಕಿಕೊಂಡು ಬರುವುದು ಎನ್ನುವ ಮಾತನ್ನರಿತುಕೊಳ್ಳಬೇಕಾಗಿರುವ ತುರ್ತು ಈಗ ಹೆಣ್ಣುಜನಾಂಗದ ಮುಂದೆ ಬೃಹದಾಕಾರವಾಗಿರುವುದಂತೂ ಸುಳ್ಳಲ್ಲ ಏನಂತೀಯಾ...

ಅವಳ ನೋವೊಳಗೆ ಕಳೆದುಹೋಗಿದ್ದೆ, ಬಾಕಿಯಿರುವ ನನ್ನ ಕೆಲಸಗಳು ಕಾಯುತ್ತಿವೆ, ಮತ್ತೊಮ್ಮೆ ಮಾತಾಡುವಾ, ಬರಲಾ...