Wednesday, May 27, 2015

ಹೂವು ಬಾಡಿಬಿಟ್ಟಿದೆ.



ಒಂದೊಂದು ಅರಳೂ
ಜಗದೆಲ್ಲವ ಮೀರಿದ
ವೈಶಿಷ್ಠ್ಯತೆ ತನದೆಂದುಕೊಂಡದ್ದು
ಹೂವಿನ ಸೌಂದರ್ಯದ ಗುಟ್ಟು..

ಸೂಜಿಯಲಿ ಚುಚ್ಚಿಸಿಕೊಂಡು
ಮಾಲೆ ಹೊಕ್ಕಾಗಲೂ
ಸರಣಿಯಲೊಂದು ತನ್ನ ಸ್ಥಾನದ
ಪರಿವೆಯಿಲ್ಲದ ನಂಬಿಕೆಯದರದು!

ದೇವಬಿಂಬದ ಮೇಲೇರುತಾ
ಸಾರ್ಥಕತೆಯಲರ್ಪಿಸಿಕೊಂಡಿತು.
ಕಳಚಿಕೊಂಡದ್ದು,
ಮತ್ತಾಗ ಅಲ್ಲುದುರಿದ ತನದೂ,
ತನ್ನ ನಿನ್ನೆಗಳದೂ
ಒಂದಷ್ಟು ಹನಿಗಳ ಮರೆತು
ಎದುರು ನೋಡಿಯೇ ನೋಡಿತು,
ಅವನದೊಂದು ಮೆಚ್ಚುಗೆಯ ನೋಟಕೆ.
ಅವನೋ ಕಲ್ಲುದೇವ, ಪಾಪ!!
ಮೆಚ್ಚುವುದೂ, ಮಾತಾಗುವುದೂ ಅಲ್ಲ,
ನಗುತಾ ಸುಮ್ಮನುಳಿವ
ಮೌನವಷ್ಟೇ ಅವನ ಜಾಯಮಾನ.
ಸಮರ್ಪಣೆಗಳನುಣುತಾ
ಮೇಲೇರುವುದಷ್ಟೇ ಗೊತ್ತವಗೆ.

ಈಗರಿವಾಗಿದೆ
ಹತ್ತರಲೊಂದು ಅಥವಾ
ಹತ್ತರ ಜೊತೆ ತಾ ಹನ್ನೊಂದು.
ಜಗದೆಲ್ಲರ ತಾಪ ತಣಿಸುವಷ್ಟು
ತಂಪಿನವನ ಮೈಮೇಲೆ ಕೂತಂತೆಯೇ
ಹೂವು ಬಾಡಿಬಿಟ್ಟಿದೆ. 

1 comment:

  1. tumbaa arthapoorNavaadantha kavite...ಅವನದೊಂದು ಮೆಚ್ಚುಗೆಯ ನೋಟಕೆ.
    ಅವನೋ ಕಲ್ಲುದೇವ, ಪಾಪ!!
    ಮೆಚ್ಚುವುದೂ, ಮಾತಾಗುವುದೂ ಅಲ್ಲ,
    ನಗುತಾ ಸುಮ್ಮನುಳಿವ
    ಮೌನವಷ್ಟೇ ಅವನ ಜಾಯಮಾನ.
    ಸಮರ್ಪಣೆಗಳನುಣುತಾ
    ಮೇಲೇರುವುದಷ್ಟೇ ಗೊತ್ತವಗೆ...ತಂಪಿನವನ ಮೈಮೇಲೆ ಕೂತಂತೆಯೇ
    ಹೂವು ಬಾಡಿಬಿಟ್ಟಿದೆ... ee ella saalugaLu tumbaanE kaaDtaave :)

    ReplyDelete