Friday, August 19, 2016

ನೀ ಬಂದಾಗೆಲ್ಲ ಬೆಳಕಿತ್ತು!
ಹೊತ್ತು ಎತ್ತಿಟ್ಟುಕೊಂಡಿತ್ತು
ಕೆಲಬಣ್ಣ ಅಲ್ಲಿ-ಇಲ್ಲಿಂದ ಮೆಲ್ಲ.
ಕಣ್ಣಿನಾಳದ ಆಸೆಯಿಂದಷ್ಟು,
ಬೆರಳ ತುದಿಯಾತುರದಿಂದಷ್ಟು,
ಕಿವಿಯ ಬಿಸಿ ಮೊರೆತದಿಂದಷ್ಟು,
ಉಸಿರಿನ ವೇಗದಿಂದಷ್ಟು,
ತುಟಿಗಳ ಆವೇಗದಿಂದಷ್ಟು,
ನಿನ್ನ ಪಾದಗಳಡಿಯಿಂದಷ್ಟು,
ಮತ್ತು ನೆತ್ತಿ ಸಿಂಗರಿಸುವ ನನ್ನ ಮುತ್ತಿನಿಂದಷ್ಟು..

ನೀನಲ್ಲಿ ತಲುಪಿರಬೇಕು
ಇಲ್ಲಿ ಪೂರ್ತ ಇರುಳಾಯ್ತು!
ಕತ್ತಲ ನಿರ್ವರ್ಣವ ಉಳುವುದಕೆ
ನೇಗಿಲ ಹೂಡಿದೆ ಹೊತ್ತು!
ಹಸನಾದ ಬಲುವಿಶಾಲ ಕಪ್ಪಿನಲಿ
ಊರಲು ನೂರು ಬಣ್ಣದ ಬಿತ್ತ ಬಿತ್ತು.
ಕಾಲುವೆ ತುಂಬಿಹರಿದು ಹನಿಸುತಿದೆ
ಎದೆ ನೆನಕೆ-ಕನವರಿಕೆಗಳನೂಡುತಿದೆ.

ಇನ್ನೇನು ಬಣ್ಣ ಮೊಳೆಯುವ ವೇಳೆ,
ಮೊಗ್ಗುಗಳೆದೆಯಲಿ ಘಮ ಹುಟ್ಟುವ ವೇಳೆ,
ಒಂದಷ್ಟು ಮಾತು-ಮೌನಗಳ ಗೋಡೆ
ಮುಚ್ಚಿಬಿಟ್ಟಿವೆ ಹಾದಿಯಿತ್ತಲಿಗೆ ಸದ್ದಿಲ್ಲದೆ!
ಕೈ ಮುಗಿದೀಗ ಬೇಡುವುದಿಷ್ಟೇ..
ಬರದೆಯೂ ಮಿಲನಚಿತ್ರದಾತ್ಮವಾಗಬೇಕು,
ಇಲ್ಲಿರದೆಯೂ ಉಸಿರಿಗೆ ಜೀವದುಂಬಬೇಕು,
ಮತ್ತದಕೆ ಇಲ್ಲಿ,
ನಿನ್ನ ಕುರುಹುಗಳ ಬಣ್ಣ ಚಿಗುರಿ ಚಿಮ್ಮಬೇಕು.

Wednesday, August 17, 2016

ತೂರಾಡುವ ಗಳಿಗೆ ಹೆಗಲೇರಿ
ಬಂದಿತ್ತವನ ಸೋತ ಕಣ್ಣ ಚಿತ್ರ!
"ನಿದ್ದೆ ಇರಲಿಲ್ಲವೇನು?" ಎಂದಿದ್ದಳು,
ಕದ್ದೊಯ್ದವಳ ನೆನೆದು ನಕ್ಕಿದ್ದ;
ಮೊದ್ದು; ಇವಳು ನಾಚಿ ಬೆವರಿದ್ದಳು!

ಜಾರಿಹೋದ ಹೆಜ್ಜೆಗುರುತು..
ಕಿವಿಯ ಹಾದಿಯಲಿ,
ಕೈಬೆರಳು ಕತ್ತಿನ ಸಪುರ ಕಣಿವೆಗಳ ತಿಕ್ಕಿ ನೋಡುತ್ತವೆ.
ವಯಸು ಬರೆದ ಗೆರೆಕುಳಿಯಲಿ ಮಣ್ಣು ಕೂತಿದ್ದೀತೇ?
ಮುತ್ತಿನ ನಡೆಗೆ ಸಂಶಯದ ತಡೆ!

"ಕಳಕೊಂಡೆಯೇನು ಏನಾದರೂ?" ಅಂದ.
ಬೋಳೊಂದು ಕಿವಿ ಸವರಿಕೊಂಡಿದ್ದಳು;
ಓಲೆಯಲ್ಲೇ ಬಿದ್ದಿತ್ತು; ತಿರುಗಣೆ ಸಿಕ್ಕಿರಲಿಲ್ಲ.
"ಅಯ್ಯೋ.. ಅದಿಲ್ಲಿ ನನ್ನ ಕಿಸೆಯಲ್ಲಿ; ಎಷ್ಟು ಚಂದ!" ಅಂದ.
ನಕ್ಕನವ; ಅವಳಿಗಾಗಲಿಲ್ಲ..

ತೊರೆಯೆದೆಯಲಿ ಹಾಲಿತ್ತು
ತೀರ ಒಣಗಿತ್ತೋ, ನನಗೆ ಹಾಗನಿಸಿದ್ದೋ!!
ತೊರೆಯುಣಿಸಿತ್ತು; ತೀರವೂ ತಣಿದಿರಬೇಕು..
ಗಿಡಗಂಟಿ, ಅಕ್ಕ ಪಕ್ಕದ ಗದ್ದೆಹುಣಿ ಪಿಸುನುಡಿಯುತಾವೆ,
"ಗದ್ದೆಗುಣಿಸುವುದುಂಟು; ತೀರಕುಣಿಸುವುದುಂಟೇ?
ಬೆಸೆದೂ ಬೆಸೆಯದುಳಿವ ತೀರವೇನಾದರೂ
ಮರುಳು ತೊರೆಯ ಹೀರಿಯೇನಾದರೂ ಮೊಳೆಸಿದ್ದುಂಟೇ?"

ಮತ್ತೆ ರಾಗಸಂಜೆಯ ರಂಗಿನಾಲಾಪ ನಿಲುಗಡೆಯ ತಾರಕದಲಿ.
ರಾತ್ರಿಯಿದು ಮೋಡತುಂಬಿದಾಗಸ.
ತಾರೆಯಿಲ್ಲ; ಹುಣ್ಣಿಮೆಗೂ ಚಂದ್ರನ ತೋರುವುದಾಗಿಲ್ಲ.
ಎಲ್ಲೆಂದರೆಲ್ಲೆಡೆ ಬರೀ ಚಂದ ಕಾಣುವ ಆ ಕಣ್ಣು
ಮಿಂಚುಹುಳಕೂ ತಾರೆ ಮಿನುಗು ಬಳಿಯಬಲ್ಲವು;
ಅವು ಸದಾ ನಗಬಲ್ಲುವು.

ಕಳಕೊಂಡದ್ದ ಎಲ್ಲೆಂದರಲ್ಲಿ
ಹುಡುಹುಡುಕುವ ಅವಳ ಅಂಗೈಲವನ ಹೆಸರು.
ನಿಟ್ಟಿಸುತಾ, ನಿರುಕಿಸುತಾ,
ಗಲ್ಲಕೆ ಕೈ ಹಚ್ಚಿ ಕೇಳುತಾಳೆ,
ಅವ ಕತೆ ಹೇಳುತಾನೆ.
ದಿಬ್ಬಗಳೆರಡು, ನಡು ಕ್ಷೀರತೊರೆ,
ದುಂಬಿ; ಹೂವಿಗೇ ಮೋಹಗೊಳುವ ಹೂವು,
ದಂತ ಕೆತ್ತಿದಂಥ ಪಾದ, ಚಿಗುರು ಬೆರಳು,
ಹೇಳಹೇಳುತಾ ಉಕ್ಕೇರುತಾನೆ.

ನಗುತಾಳವಳು ಬಗೆಬಗೆಯ ನಗು!
ಅವನವಳ ನೋಡುತಿಲ್ಲ.
ಮುಖಮುಚ್ಚಿಕೊಂಡ ಬೊಗಸೆ ತುಂಬ
ಕಣ್ಣಲದ್ದಿದ ನಗೆ
ಮೆತ್ತನೆ ಅವನ ಹೆಸರ ನೇವರಿಸುತಾವೆ! 

Monday, August 15, 2016

(ಚಿಲಕ- ಮುಳ್ಳು - ಅಜರಾಮರ- ಪೊರೆ)

ಎದೆತೋಟಕೆ ಬೇಲಿಬಾಗಿಲಿಲ್ಲ ಅನುವರಿದ್ದಾರು,
ನಾನೊಬ್ಬಳಿದ್ದೇನೆ ಚಿಲಕ ಕಂಡಿಲ್ಲದ ಕದ-ಕಿಂಡಿಗಳೊಡತಿ!
ಹೂದೋಟಕೆ ಬರುವುದಾದರೆ, ಹೂವಂಥ ನಗೆಯೇ ಬರಬೇಕು.
ಮುಳ್ಳ ನೆನೆಯುತಾ ಭಯ ಬಂದಾಗ ನಡುಗುವ ಕೈಗೆ ಮುಳ್ಳೇ ತಾಕೀತು..
ನಿನ್ನೆ ರಾತ್ರಿ ಹಾವು ಬಂದಿರಬೇಕು; ಹಿತ್ತಲಲಿ ಕಳಚಿದ ಪೊರೆ!
ನಮ್ಮದಾಗಿಸಿಕೊಂಡ ಕುರುಹಷ್ಟೇ ಅಜರಾಮರ;
ಗಳಿಸಿ, ಉಳಿಸಿ, ಉಂಡುಟ್ಟು ಹಾಸಿಹೊದ್ದದ್ದೆಲ್ಲವೂ ನಶ್ವರ!
ಸುಮ್ಮನೇ ಹೇಗೆಹೇಗೋ ಹೆಸರುಳಿಸಿಹೋದೇನಬೇಡ ಮನಸೇ,
ಋಣವುಳಿಸಿಹೋಗು ಜನ್ಮಗಳಿಗಾಗುವಷ್ಟು; ಮತ್ತೆ ಮತ್ತವರೇ ಎಲ್ಲ ಸಿಕ್ಕಿಯಾರು.

(ಹಲ್ಲುನೋವು-ಗಾಜು-ಪಂಚರ್- ಬೆನ್ನು)

ನಡೆದಾಡುವ ವಿಶ್ವಕೋಶ ಆತ
ಬಿಳಿಜುಬ್ಬಾ ಜೇಬಲ್ಲಿ ಕೈಯ್ಯಡಗಿಸಿ
ಬಾಯ್ತುಂಬ ಮಾತರಳಿಸುತ್ತಾ,
ಕಣ್ಣಗಾಜಿನಡಿ ನಗೆಯುದುರಿಸುತ್ತಾ
ನಡೆದಾಡುತಿದ್ದರೆ
ಅಜ್ಜರ ಕಾಡಲೊಂದು ಜೀವಸಂಚಲನ!

ಬೊಚ್ಚುಬಾಯಲ್ಲೆಲ್ಲಿದ್ದವೋ ಹಲ್ಲು!
ಮೊನ್ನೆಯಿಂದ ಹಲ್ಲುನೋವಂತೆ;
ಆತ ಹಾಜರಿಲ್ಲದೆ ಮಾತಿಲ್ಲ, ಕತೆಯಿಲ್ಲ;
ಮೌನ ತಬ್ಬಿದ ಸಂಜೆಗಳಲಿ
ಅಜ್ಜರ ಕಾಡಿಗೆ ಕಾಡೇ ಬಾಯಾಕಳಿಸುತ್ತಾ ಬೇಜಾರೆಂದಿತು!

"ಗಾಡಿ ಪಂಚರ್ ಅಪ್ಪಯ್ಯ,
ನಾಳೆ ಹೋಗೋಣ, ಡಾಕ್ಟರೆಲ್ಲಿ ಓಡಿಹೋಗ್ತಾರೆ?"
ಸಿಡ ಸಿಡ ಮಗನ ಮುಖದಲ್ಲಿ
ಕಣ್ಣುಮೂಗುಬಾಯಿಗಳಷ್ಟೇ ತನ್ನದೆನಿಸಿದವು..

ಲವಂಗದೆಣ್ಣೆ ಹತ್ತಿಯಲದ್ದಿಟ್ಟುಕೊಂಡು ಊಟ ಬಿಟ್ಟು ಮಲಗಿದ ಕಣ್ತುಂಬ
ಅಜ್ಜರ ಕಾಡಿನ ಸ್ತಬ್ಧ ಲಾಫಿಂಗ್ ಕ್ಲಬ್ ಮತ್ತು ಹಾಡುವ ರೇಡಿಯೋ ಧ್ವನಿ,
"ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೇ..."
ಮರುಸಂಜೆ ಕಾಲೆಳೆಯುತ್ತಾ ಬಂದು "ಹೊರಡು ಅಪ್ಪಯ್ಯ" ಅಂದವಗೆ
ಕಾಣಿಸಿದ್ದು, "ಬಾಗಿಲು ಹಾಕ್ಕೊಳಮ್ಮಾ" ಅನುವ ಧ್ವನಿಯ ಬೆನ್ನು..




(ಪದಕ-ಎದೆಭಾರ-ಕವಿತೆ-ಮಲ್ಲಿಗೆ)

ಏಳುಸುತ್ತಿನ ದುಂಡುಮಲ್ಲಿಗೆಯಂಥವಳು, ಹೆಸರು ಮಲ್ಲಿಗೆ;
ಏಳು ಹಾಸಿಗೆಯಡಿ ನಿದ್ದೆ ಮಾರಿಕೊಂಡವಳು ಸಾಸುವೆಗೆ !

ಎದೆಪದಕವಾಗುತಾ ಬಲುಗಟ್ಟಿಗ ಹುಡುಗ;
ಕವಿತೆಯಾಗಿ ಹುಡುಗಿಯೀಗ ಸಾಲುಪದ ತೂಕ!

ಮೂಡಣದ ಚಂದ ಪಡುವಣಕೆ ಸಾಗುತಾ,
ಅವನೋದಿದ: ಒಡ್ಡಿಕೊಂಡವಳು ಖಾಲಿಯಾದದ್ದು; ಪರಿಮಳವಲ್ಲ!

ಮಲ್ಲಿಗೆ ಪದವಾದಾಗ ರಾಗ ಘಮಗುಟ್ಟುತ್ತಿತ್ತು;
ಆಗ, ಆಗಲೇ ಕತ್ತಲ ತಾರೆ ಕಿತ್ತು ತರುವೆನೆಂದು ಹೋದವ ಬಂದಿಲ್ಲ!

ಈ ಮುಂಜಾವೂ ನಿನ್ನೆಯಷ್ಟೇ ಚಂದ, ನಿನ್ನೆಯಷ್ಟೇ ತಾಜಾ!
ಆದರೆ ಎದೆತೂಕದ ಭಾರಕೆ ಮಲ್ಲಿಗೆ ಕುಸಿದಲ್ಲಿ ಭೂಮಿ ಬಾಯ್ಬಿಟ್ಟಿದೆ..


Thursday, August 4, 2016

ಇಲ್ಲ ನೆನೆಯುವುದಿಲ್ಲ ನಿನ್ನ; ಅಲ್ಲೆಲ್ಲೋ ಅಮೃತಪಾನದ ಮಧ್ಯೆ
ಬಿಕ್ಕಳಿಕೆಯೊಂದು ನಿನ್ನ ಕಾಡದಿರಲಿ.

ಇಲ್ಲ ಕಾಯುವುದಿಲ್ಲ ನಿನ್ನ; ಅಲ್ಲೆಲ್ಲೋ ಸ್ವಪ್ನಯಾನದ ಮಧ್ಯೆ
ಅಡ್ಡ ಬೆಳೆದ ಬಿಳಲು ಕಾಲಿಗೆಡವದಿರಲಿ.

ಇಲ್ಲ ಕರೆಯುವುದಿಲ್ಲ ನಿನ್ನ; ಅಲ್ಲೆಲ್ಲೋ ಮುರಳಿಗಾನದ ಮಧ್ಯೆ
ಅನ್ಯಸ್ವರಲಯ ರಾಗಭಾವ ಕೆಡಿಸದಿರಲಿ.

ಇಲ್ಲ ದೂರುವುದಿಲ್ಲ ನಿನ್ನ; ಅಲ್ಲೆಲ್ಲೋ ಕರತಾಡನದ ಮಧ್ಯೆ
ಬಿಸಿಯುಸಿರೊಂದು ನಿನ್ನೆಡೆ ಸುಳಿಯದಿರಲಿ.

ಇಲ್ಲ ಕನವರಿಸುವುದಿಲ್ಲ ನಿನ್ನ; ಅಲ್ಲೆಲ್ಲೋ ಉನ್ಮತ್ತಮೌನದ ಮಧ್ಯೆ
ಊಳಿಟ್ಟು ಕತ್ತಲು, ನಿದ್ದೆಯ ಬೆಚ್ಚಿಸದಿರಲಿ.

ಇಲ್ಲ ಬರೆಯುವುದಿಲ್ಲ ನಿನ್ನ; ಅಲ್ಲೆಲ್ಲೋ ಭಾವಕಾನನದ ಮಧ್ಯೆ
ಜಾಣಕುರುಡು-ಕಿವುಡು ನಿನ್ನೊಳಹೊಗದಿರಲಿ.

ಇಲ್ಲ ಬದುಕುವುದಿಲ್ಲ ನಿನ್ನ; ಅಲ್ಲೆಲ್ಲೋ ಸಹಜಗಮನದ ಮಧ್ಯೆ
ಬಾಣ-ಈಟಿ ನಿನ್ನ ಬತ್ತಳಿಕೆಗಿಳಿಯದಿರಲಿ.

ಸಾಲುಗಳಲಿ ನಿನ್ನ ಸಿಂಗರಿಸಿ ತೇರೆಳೆಯುತಿದ್ದೆ,
ನಿನ್ನುತ್ಸವಕೆ ನಿನನೇ "ಮುದಗೊಳ್ಳು ಬಾ" ಎನುತಿದ್ದೆ.
ಇದೀಗ ಹೊತ್ತಾಯ್ತು; ಕರೆವ, ಓಗೊಡುವದೆಲ್ಲ ಹಳತಾಯ್ತು!
ಆದರೂ ಕ್ಷಮಿಸು,
ಮರೆಯಾಗಬಲ್ಲೆ, ಮರೆಯಲಾರೆ.
ನೀ ಬಾರದುಳಿದೆಯೆಂದು ತೇರ ನಿಲಿಸಲಾರೆ.
ಕಣ್ಣ ಮೆಲುಕುಗಳ ಪೀಠದಿಂದಿಳಿಸಲಾರೆ.
ನಿನ್ನೆ ಸತ್ತದ್ದೂ ಅಲ್ಲ, ಇಂದು ಹುಟ್ಟಿದ್ದೂ ಅಲ್ಲ.
ನಿನ್ನೆಯೊಡಲಲಿ ಇಂದು ಹೊತ್ತಾಗಿ ಕಂಡಿದೆಯಷ್ಟೇ!
ಇಷ್ಟವಿದ್ದರೆ ಕಣ್ಣಬಯಲಲೊಮ್ಮೆ ಇಣುಕಿನೋಡು.
ನನ್ನ ಶಬ್ದಗಳ ಸುಟ್ಟ ಮಸಣವಿದೆ, ಬೂದಿರಾಶಿಯಿದೆ.
ಬಳಿದುಕೋ ನೆನಕೆಗಳ ತಿಕ್ಕಿ ತೊಳೆದು ಪರಿಶುದ್ಧನಾಗಿ.
ಸುಳಿಗುರುಳ ಚೆಲುಭೈರವನಾಗು ಮತ್ತೆ ಅಂದಿನಂತೆಯೇ.
ಸಾಕ್ಷಿಯಾಗಲಾರೆ ನಾ ಮಾತ್ರ, ಕ್ಷಮಿಸಿಬಿಡು ನನ್ನನ್ನು,
ನಿನ್ನ ಭೇರಿ ಢಮರು ತಾಂಡವದ ಮೂರ್ತಸದ್ದಿಗಿನ್ನು.  
(ವೈಶಾಖ, ಸಂಸ್ಕಾರ, ಪರಸಂಗ, ಮುಕ್ತಿ)

"ಹರಿಯೇ ನಿನ್ನನು ಮೆಚ್ಚಿಸಲುಬಹುದು,
ನರರನೊಲಿಸುವುದು ಬಲುಕಷ್ಟ!"
ಒದ್ದೆ ಸೆರಗೊರೆಸುತ್ತಾ ಕೆಲಸ ಮುಗಿಸಿ ಬರುವ ಅಮ್ಮನ ಹಾಡು.
"ಎಷ್ಟುದ್ದ ವೈಶಾಖ, ಎಷ್ಟೊಂದು ಬೆವರು!
ಛೇ...ಇದೊಳ್ಳೆ ಪರದಾಟ!"
ಕೂತವರದು ಋತುವಿನ ಹಂಗಿಲ್ಲದೆ ಸದಾ ನಿಡುಸುಯ್ವ ಪಾಡು!

"ಮುಕ್ತಿ ಎಂದಾಗೆಲ್ಲ ಸಾವು ನೆನಪಾಗುವುದೇಕೆ?
ಋತು ಬದಲಾಗುವುದು ಬಿಡಿ;
ನೋವ ತಿಳಿಯಾಗಿಸಿ, ಹುರುಪು ಗಾಢವಾಗಿಸುವ,
ಅಮ್ಮನಂಥ ರಾತ್ರಿ ಕೈಬೀಸಿ ಮತ್ತೆ ಬರುವೆನೆಂದು ಹೊರಟಾಗ,
ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಸಲ ನವೀನ ಜನನ ಅನಿಸುವುದಿಲ್ಲವೇ?
ನಿದ್ದೆ-ಜಾಗೃತಿ ಸಂಧಿಸುವಂಥ ಗಳಿಗೆಯಲೇ ಅಲ್ಲವೇ ಮುಕ್ತಿ?"
ಅವನೊಂದಿಗಿನೊಂದು ಪರಸಂಗಕೂ ಮುನ್ನ
ಇಷ್ಟೇ ಅಲ್ಲ; ಇನ್ನೂ ಎಷ್ಟೆಷ್ಟೋ ಉದ್ದ ಮಾತಾಡುತ್ತಿದ್ದೆ!
"ಆಹಾ ಎಂಥ ಸಂಸ್ಕಾರ!" ಅನುತ್ತಿದ್ದರು ಆ ಉಳಿದವರೆಲ್ಲರೂ..
ಈಗ ಅವನಿದ್ದಾನೆ, ನಾನಿದ್ದೇನೆ, ಒಂದಿಷ್ಟು ಮುನಿಸು, ಮತ್ತಷ್ಟೇ ಮುದ್ದು...
ಮುಕ್ತಿ, ಸಂಸ್ಕಾರ ನೆನಪಾಗುವುದೇ ಇಲ್ಲ;
ವಸಂತ-ಶಿಶಿರ ಬೇರೆಬೇರೆ ಅನಿಸುವುದೇ ಇಲ್ಲ.
ಬರೀ ಹಾಡುವ ಮೌನ, ಮಾತು ಹುಟ್ಟುವುದೇ ಇಲ್ಲ.
"ನಿನಗಾಗೇ ಈ ಹಾಡುಗಳು ಬಿಸಿಲು ಮಳೆಯ ಜಾಡುಗಳು
ನೀನೇ ಇದರ ಮೂಲ ಸ್ಥೂಲ ಒಳಗಿವೇ ನನ್ನ ಪಾಡುಗಳು..."
ನಾನೊಳಗೊಳಗೇ ಹಾಡುವಾಗೆಲ್ಲ ಅಮ್ಮ ಗಟ್ಟಿ ಹಾಡುತ್ತಾಳೆ,
"ಬಂದದ್ದೆಲ್ಲಾ ಬರಲಿ
ಗೋವಿಂದನ ದಯೆಯೊಂದಿರಲಿ..."

Wednesday, August 3, 2016

(ಹಾಳೆ- ಸೇತುವೆ - ಬಟಾಣಿ - ಡೋರೆಮಾನ್)

ಕಣ್ಮುಂದಿನ ಹಾಳೆ ಬಿಳಿಯೇ ಉಳಿಯುತಿವೆ ಈಗೀಗ.
ಪೆನ್ನು ತುಂಬಿ ತುಂಬಿಟ್ಟರೂ ಕಾಲ ಶಾಯಿಯೊಣಗಿಸುವಾಗ.

ನನದೊಂದೇ ದಿಗಿಲು ಮಗಳದೀಗ ಹದಿಹರಯ,
ಎದೆಗಣ್ಣವಳದು ಸದಾ ಇಲ್ಲಿಂದಾಚೆಗೇ ನೆಟ್ಟಿದೆಯಾ?

ಅವಳ ಭಾವ, ಕತೆಯ ಕೌದಿ ಹೊಸೆವಾಗ ಆಗೆಲ್ಲ
ಮಾತು ಮಾತು ಬೆಸೆಯುತಿದ್ದ ಪದಸೇತುವೆ "ಅಮ್ಮ ಅಮ್ಮ"
ಕತೆಯಾಖಿರಿಗೆ ತೂಕಡಿಸುವ ದುಂಡು ಮುಖ ಎದೆಗೊತ್ತಿಕೊಂಡು
ಎಷ್ಟೆಲ್ಲ ಲಾಲಿ ಹಾಡಿದರೂ ತೆರೆದ ಬೊಗಸೆಗಂಗಳ ಕರೆ ಮತ್ತೆ,
"ಅಮ್ಮ, ಅಮ್ಮ ನಾನೂ ಹಾಡಬೇಕಮ್ಮ"
"ಹಾಡೇ ಚಿನ್ನಾರಿ ಕಂದಮ್ಮಾ"ಅಂದರೆ,
ಹಾಡೂ ಹೊಸೆಯುತಾಳೆ ಕಿಲಕಿಲ ನಗೆಯೊಡತಿ,
"ಮುದ್ದು ಪುಟಾಣೀ ತಗೋ ಬಟಾಣೀ..."

ಆ ಬೆಡಗು ನಗು, ಸುಳ್ಳು ಕತೆ, ಮುದ್ದು ಕವಿತೆ
ಎಲ್ಲ ಕಾಲ ಕದ್ದು ಬಚ್ಚಿಟ್ಟಿದೆಯೇನು?
ಅಲ್ಲಿಂದಿಲ್ಲಿಗೆ ಅವಳಿಷ್ಟ ಬದಲಾಗದ್ದೊಂದಿದ್ದರೆ,

ಕೇಳಿದ್ದು, ಕೇಳದ್ದು ಎಲ್ಲ ತಂದೀವ ಅದೇ ಡೊರೆಮಾನು!

Tuesday, August 2, 2016

(ಕನ್ನಡಿ -ಹಾವು - ತಂತಿ - ಕೊಟ್ಟಿಗೆ)

"ಕನ್ನಡಿಯೊಳಗಿನ ಗಂಟು ಪ್ರೇಮ" ಅವಳನ್ನುವಾಗ
ಅವನ ಮೌನಕ್ಕೊಳಗೊಳಗೇ ವ್ಯಂಗ್ಯದ ನಗು!

"ಹಾವಿನ ವಿಷವೂ ಉಳಿಸೀತು, ಹೆಣ್ಣಿನದಲ್ಲ" ಅವನನುವಾಗ
ಅವಳೊಳಗೆ ರೋಷದ ನಗು ಟಿಸಿಲೊಡೆಯುತ್ತದೆ.

ತಂತಿ ಗಟ್ಟಿಯಿತ್ತು, ಪೋಣಿಸಿದ್ದೂ ಭದ್ರವಿತ್ತು
ಮುತ್ತೇ ಒಡೆದಾಗ ಒಲವು ಕೊರಳ ಬಳಸೀತು ಹೇಗೆ?

ನಿನ್ನೆ ಕಪಿಲೆ ಕರು ಹಾಕಿದೆ.
ಗಬ್ಬ ಧರಿಸಿದ ಹೊತ್ತು ನೆನಪಿದ್ದೀತೇ?
ಬಿತ್ತಿದವನ ಮುಖ-ವರಸೆ ನೆನಪಿದ್ದೀತೇ?
ಈ ಕ್ಷಣ ಕಪಿಲೆಯ ಲೋಕವೆಂದರೆ,
ಎದೆದುಂಬಿದ ಪ್ರೀತಿಯೆಳೆದೆಳೆದು ಕುಡಿವ ಕರು,
ಕೊಟ್ಟಿಗೆಯ ನಡುವೊಂದು ಬೆಚ್ಚನ್ನ ಜಾಗ
ಕೆಲ ಸೂಡಿ ಹುಲ್ಲು, ಪಾತ್ರೆ ತುಂಬ ಅಕ್ಕಚ್ಚು!
ಹಗಲಿಗೆ ಬಿಳಿ ಬಣ್ಣ ಹಚ್ಚುತಾ ಬರುವವನು
ಇರುಳಿಗೆ ಹಗಲ ಸೀಳಿ ಏಳು ಬಣ್ಣ ಬಳಿವಾಗ
ಚಂದ್ರ ತೊಟ್ಟಿಲಾಗುತ್ತಾನೆ.
ನಿದ್ರೆ ತಾಯಾಗುತಾ ಮಡಿಲಲಿ ತಲೆಯಿಟ್ಟವಳಿಗೆ
ಕತೆ ಹೇಳುತದೆ ಸ್ವಪ್ನ!
ತಲೆಗೂದಲಲಾಡುತವೆ ನೆನಪ ಬೆರಳು;
ಬದುಕು ಸಾಂತ್ವನ!

ಮಧ್ಯದಲೊಂದು ಬ್ರಹ್ಮಕಮಲ
ನಿಧಾನ ಅರಳುತಾ ಗುನುಗುವಾಗ,
ರಾತ್ರಿರಾಣಿ ಬಳುಕುತ್ತಾ ನಗುವಾಗ,
ಪರಿಮಳದಲೆ ಎದ್ದುಕೂತು ನರ್ತಿಸುವಾಗ
ರೆಪ್ಪೆ ಮೇಲಿನ ಹಾದಿಯಲವನ ಜಾತ್ರೆ!
ತೇರ ಮುನ್ನಡೆಸುವುದು ಭರವಸೆಯ ದೊಂದಿ;
ಬದುಕು ಅಚ್ಚ ನಂಬಿಕೆ!

ಸುರುಳಿ ಸುರುಳಿ ಸಿಹಿ ಸುತ್ತಿ
ಕೈ ಬೆರಳಿಗೆ ಉಂಗುರವಾಗಿಸುತಾ
ಅವನ ನಗು ಅಲೆಯಲೆ ಭರತವುಕ್ಕುವಾಗ
ತೀರವೊಮ್ಮೊಮ್ಮೆ ಜರಿದರೂ ಗುಳಿಗಾಯಗಳಲಿ
ಹುಟ್ಟಿ ಕತ್ತೆತ್ತುತ್ತದೆ ಪುಟಾಣಿ ಜೀವಂತಿಕೆ!
ಏರಿಳಿತವೆರಡರಲೂ ಭೋರ್ಗರೆವ ಪುಳಕ;
ಬದುಕು ಮಧುಪಾತ್ರೆ!



Monday, August 1, 2016

"ಮರ್ಲೆ, ಮಲ್ಲಿಗೆ, ಕಾಕಡ, ಸೇವಂತಿಗೇ,,"
ಕೂಗುತ್ತಾ ಬರುತಾಳೆ ಹೂವಾಡಗಿತ್ತಿ.
ರಾತ್ರಿಯ ಹಳವಂಡಗಳಿಗೆ ಪರಿಮಳ ಬಳಿಯುತ್ತಾ,
ಬುಟ್ಟಿಯಲಷ್ಟು ಬೆಳಕಚೂರಿನ ಮಾಲೆ ಮಾಡಿ ತಂದು
ನಿತ್ಯ ನಸುಕು ಹಂಚುತಾಳೆ.
ಮಾಸಲು ಅವಳ ಸೀರೆನೆರಿಗೆಯಡಿ ಮಾತ್ರ
ಬಣ್ಣ ವಾಸನೆಯಿಲ್ಲದೊಂದು ಅತೃಪ್ತ ಕತ್ತಲು!

"ಕಲ್ಲಂಗಡಿ, ಬಾಳೆ, ಪರಂಗಿ, ಕಿತ್ತಳೇ..."
ಹಣ್ಣುಗಾಡಿಯವ ಕೂಗುತ್ತಾ ಗಾಡಿ ತುಂಬ
ಆರೋಗ್ಯದ, ಹೊಟ್ಟೆ ಕರಗಿಸುವ, ಕನಸು ಹಂಚುತ್ತಾನೆ.
"ಬಾಯಿ ಮತ್ತೆಮತ್ತೆ ಕೇಳುವಾಗ ಕರಿದದ್ದಲ್ಲ, ಹಣ್ಣು ತಿನ್ನಬೇಕಂತೆ"
ಹೊಟ್ಟೆ ತುಂಬಿದವರಷ್ಟು ಮಂದಿ
ಹೊಟ್ಟೆ ಕರಗಿಸುವ ಹಾದಿಯ ಕನವರಿಸುತ್ತಾರೆ.
ಗಾಡಿ ದೂಕುವ ಬೊಗಸೆದುಂಬ ನಿತ್ಯ ಸೇಬಿನದೇ ಕನಸು!

"ಪ್ರೀತಿ, ಪ್ರೇಮ, ಭಕ್ತಿ, ಆರಾಧನೇ.."
ಕಣ್ಣಿಂದ ಎದೆಗಳವರೆಗಿನ ಮೌನ ತುಳಿಯುತಾ ನಾನೂ ಕೂಗುತ್ತೇನೆ.
ಹಸಿರುಹುಣಿಯುದ್ದಕೂ ನಡೆವಾಗ ಎದುರಾಗುತ್ತವೆ,
ಚಾಚಿದ ಕೆಲ ಖಾಲಿ ಕೈ, ಚಾಚಿಲ್ಲದ ಇನ್ನು ಕೆಲವು,
ಜೊತೆಗೊಂದಷ್ಟು ಪಾರದರ್ಶಕ ತೆಳುಗೋಡೆಗಳೂ..
ಕೊಡಲು ಚಾಚಿದ್ದು ಕೊಳ್ಳಲು ಚಾಚಿದವುಗಳ ಮುಟ್ಟಲಾಗದೇ
ಉಚ್ವಾಸ-ನಿಶ್ವಾಸ ಗುರಿಮುಟ್ಟಿದೆವೆನುವಲ್ಲಿ ಉಸಿರುಗಟ್ಟಿಸುವ ನಿರ್ವಾತ!