Wednesday, July 8, 2015

ಒಳಗಿಲ್ಲೊಂದು ತಳವಿರದ ಬಾವಿ
ಕೊರೆದು ತಣ್ಣನೆ ನಡೆದು ಹೋದವನೇ
ಅಷ್ಟುದ್ದಗಲದ ನೀರ ನಡುವೆಯೂ
ಉಕ್ಕುಕ್ಕಿಸಿ ಜ್ವಾಲೆ ಕುದಿವ ದಾಹ!
ಉರಿಯ ಶಮನಕ್ಕೇನು ಮಾಡಲಿ?

ಬರಲೇನು ಅನ್ನುತ್ತಾ
ಉದ್ವೇಗದ ಬಿರುಗಾಳಿಯ ಹುಟ್ಟುಹಾಕಿ
ಅತ್ತತ್ತ ಸಾಗಿಹೋದವನೇ,
ಕಿತ್ತೆಲ್ಲ ಬಿಸುಡುತಿರುವ ಅದರ
ಶಾಂತಿಗ್ಯಾವ ಮಂತ್ರ ಪಠಿಸಲಿ?

ಅಳಬಾರದು ಅನುತಾ
ಭೋರ್ಗರೆವ ಕಡಲ ಬಯಲಸೀಮೆಯ ಕಣ್ಣಿಗಿಳಿಸಿ
ಪ್ರೀತಿಯ ಸಂಕಟ ಬಿತ್ತಿಹೋದವನೇ,
ಒತ್ತರಿಸಿ ಬರುತಾ ಸಭ್ಯತೆಯದೆಲ್ಲ
ಪರಿಧಿ-ಮಿತಿ ಅಳಿಸುತಿರುವ ಉಬ್ಬರಕ್ಯಾವ ತಡೆ ತರಲಿ?

Tuesday, July 7, 2015

ಆಗೆಲ್ಲ ಚಿಕ್ಕದಿತ್ತು ಜಗತ್ತು
ನೀ ಕೇಳಿಸುವಷ್ಟು ನಾ ಬೆಳೆದಿರದ ಹೊತ್ತು.

ಕರಿಬಂಡೆ; ಮತ್ತಾಗೆಲ್ಲ ಹೀಗಲ್ಲ, ಬಿರುಮಳೆ.
ಪಾಚಿ ಮತ್ತು ಹೂವಷ್ಟು ಮಿದು ಹೆಜ್ಜೆ.
ಬಿಡದೆ ಸರಸರ ಹತ್ತಿಳಿಯುತಾ
ಜಾರಿ, ಸಾವರಿಸಿ, ಬೀಳದೆ ತುದಿಗೇರಿ
ಮತ್ತಿಳಿದು ಸಂಜೆಗೆ ಮನೆಹೊಗುವಾಗೆಲ್ಲ
ಕ್ಷಣವೊಂದೊಂದೂ ನಾ ನನ್ನೆದುರೇ ಇರುತಿದ್ದೆ.

ಅಜ್ಜನದೊಂದು ಅಲ್ಲದ್ದೊಂದು ಗದ್ದೆಯೆರಡು,
ಸಪೂರ ಹುಣಿಯೊಂದು ನಡು.
ಮತ್ತಾಗೆಲ್ಲ ಹೀಗಲ್ಲ, ಬಿಡದ ಆಟಿಯ ಮಳೆ
ಉಕ್ಕಿ ಹರಿವ ನೀರು ಅತ್ತಿಂದಿತ್ತ ಇತ್ತಿಂದತ್ತ
ಹವಾಯಿ ಚಪ್ಪಲ ಇನ್ನೂ ಎಳೆಗಾಲು
ಆಯ ತಪ್ಪದೆ ಸಂಭಾಳಿಸಿಕೊಂಡು ದಾಟಿ
ಹೋಗುತಾ ಬರುತಾ ಗಳಿಗೆಯೂ ಬಿಡದಂತೆ
ನಾ ನನ್ನೆದುರೇ ಇರುತಿದ್ದೆ.

ಮರ ಹತ್ತುತಾ, ಬಿದ್ದಳುತಾ,
ಹೊಂಡ ಹಾರುತಾ, ಕೊಚ್ಚೆಕೆಸರಾಗುತಾ,
ಬಾವಿಯಿಣುಕುತಾ, ಬೆಚ್ಚಿ ಕಣ್ಮುಚ್ಚುತಾ,
ಭೋರ್ಗರೆವ ನೆರೆಗೆ ಮೆಲ್ಲ ಕಾಲಿಕ್ಕಿ
ರಭಸ ಚಪ್ಪರಿಸುತಾ,
ಸೆಳೆವಿನ ತೋಡಿಗಿಳಿದು ಎಳೆವ ಹರಿವ
ಹಿಂದೆಳೆಯುತಾ
ಹೀಗೆ ಎಷ್ಟೆಷ್ಟೋ ನೆನಪಾಗುತವೆ.
ನಾ ಕಣ್ಮರೆಯಾದದ್ದು
ನನ್ನೇ ನಾ ಹುಡುಕಿದ್ದೂ
ಊಹೂಂ... ಒಮ್ಮೆಯೂ ಇಲ್ಲ.

ಈಗ ಜಗತ್ತು ದೊಡ್ಡದು.
ನೀ ಕೇಳಿಸುತ್ತಲೇ
ಎಟುಕದಿರುವಷ್ಟು ಪರಿಮಿತಿಯದ್ದು.

ಈಗೆಲ್ಲ ಹಾಗಿಲ್ಲ; ಇದ್ದರಿತ್ತು,
ಇಲ್ಲದಿರೆ ಆಟಿಯಲೂ ಮಳೆಗೆ ನೆರೆಯ ಜತೆಯಿಲ್ಲ.
ಸ್ಪಷ್ಟ ಹಾದಿ, ಸುದೃಢ ಪಾದ
ಸುಮ್ಮಸುಮ್ಮನೆ ಬೀಳುವ ಭಯ!
ನಿನ್ನ ಕಣ್ಣಲಿ, ನಗೆಯಲಿ, ಶೂನ್ಯದಾಳದಲಿ
ಮಾತಲಿ, ಪದದಲಿ, ಅಡಕವುಳಿದುದರಲಿ
ಬರುವಲಿ, ಇರುವಲಿ, ಇಲ್ಲಿಲ್ಲದಿರುವಲಿ
ವಿರಹದಲಿ, ಅಳುವಲಿ, ಆಸೆಯುತ್ಕಟತೆಯಲಿ
ಸತ್ಯದಲಿ, ಸುಳ್ಳಲಿ, ಆಣೆಪ್ರಮಾಣದಲಿ
ಹೀಗೆ ಎಲ್ಲೆಲ್ಲೂ
ಸಂಭಾಳಿಸುವ ನನ್ನ ಹುಡುಕುತ್ತೇನೆ.
ಸಿಗದೇ ಹೋದಾಗ ಮತ್ತೆ
ರಾತ್ರಿಯಾಗುತ್ತದೆ
ನನ್ನ ಚೆಹರೆಗಳ ಅವಷ್ಟೂ ಕತೆ ಹೇಳುತ್ತದೆ
ಎಲ್ಲ ಗುರುತಿಟ್ಟುಕೊಂಡು
ಮತ್ತೆ ಹುಡುಕಾಟಕೆ ಹಗಲ ಕಾಯುತ್ತೇನೆ.

Saturday, July 4, 2015

ಒಂದಷ್ಟು ನೀರು; ಆಳ ಹೆಚ್ಚಿಲ್ಲ.
ತಾವರೆಯೆಲೆಯಷ್ಟೇ; ಅರಳಿಲ್ಲ.
ಜಾರುಮೈಯ್ಯ ದುಂಡು ಬಂಡೆ; ಪಾಚಿಗಟ್ಟಿಲ್ಲ.
ಕರೆದವೋ ಇಲ್ಲವೋ
ಒಂದೇ ಸಮ ಓಗೊಟ್ಟಿದ್ದೇನೆ.
ಎಲ್ಲ ಮುಟ್ಟಿಮುಟ್ಟಿ ಅಪ್ಪಿದ ಅಂಗಾಲಿನ ಬದುಕಿಗೆ
ಜಾರುವ, ನೀರಿಗೆ ಬೀಳುವ,
ತೋಯುವ, ಮತ್ತೆಲ್ಲ ಮರೆಯುವಾಸೆ..

ಒಂದಷ್ಟು ಕಾರ್ಮೋಡ; ಮಳೆಗಾಲವಲ್ಲ.
ಆಗಸದಲಷ್ಟು ಪಚ್ಚೆಹುಲ್ಲು; ಮರದೊಳಗೆ ಹಸಿರಿಲ್ಲ.
ನೆಲದಗಲಕೂ ಅದೇ ಪಚ್ಚೆ; ಜಿಂಕೆ ಮೇಯುತಿಲ್ಲ.
ಒಂಟಿಗಾಲಿನ ಜಿಗಿತಕೆ
ಮುಗಿಲ ಮುಟ್ಟುವ,
ಬಣ್ಣವಿರದ ಮರದಮ್ಮನೆದೆಗಿಣುಕುವ,
ಸುಳ್ಳು ಸುಳ್ಳೇ ಮೋಡಕೆ ಮರುಳಾಗಿ
ಬಾನ ತುಂಬೆಲ್ಲ ಗರಿಮುಚ್ಚಿ ಹಾರಿದ
ನಿರ್ವರ್ಣ ಆಸೆಗಳ
 ಮುಟ್ಟಿ ಮುದ್ದಿಸುವಾಸೆ.



ಕಾಯುವುದಿಲ್ಲ
ನವಿಲಿಗೂ ಬಣ್ಣ ಬಂದೀತೆಂದು
ಹಸಿರಿಗೂ ಮರ ಸಿಕ್ಕೀತೆಂದು
ತಾವರೆಯರಳೀತೆಂದು ಮತ್ತೆ
ಮಳೆಯೂ ಆದೀತೆಂದು.
ಒಂಟಿಕಾಲಲಿ ಎಕ್ಕರಿಸುವ ನಿಲುವು ಮಾತ್ರ
ಕಾಯುತ್ತಿದೆ ಮತ್ತು ಕಾಯುತ್ತದೆ
ಎಂದೋ ಒಮ್ಮೆ ಚಿತ್ರವಾದರೂ
ನಿನ್ನವರೆಗೆ ತಲುಪಿಸೀತು.


Thursday, July 2, 2015

ಹೋಗು ಹೋಗೋ...

ಏ ಹೋಗು ಹೋಗೋ
ನಿಧಾನಿಸಿ, ಯೋಚಿಸಿ
ಉಸಿರುಗಟ್ಟುವಷ್ಟು ಅಳು ಹರಳುಗಟ್ಟಿಸಿ
ಮತ್ತಷ್ಟೇ ಪೂರ್ವಿಕಲ್ಯಾಣಿ ಹಾಡಬೇಕಂತೆ.
ಗೊತ್ತು ನಿನಗೆ
ನಿಧಾನಿಸಿದರೆ ಇಲ್ಲೊಂದು ಸಾವಾಗುವುದು
ಒಂದು ಕೋಪದ್ದೂ ಮತ್ತೊಂದು ಸಾಸುವೆಯಷ್ಟು ಧೈರ್ಯದ್ದೂ .
ಕತ್ತಲಲಿರಿಸಿ ಮೆತ್ತಗಾಗಿಸುವುದು, ಬೆಚ್ಚಿಸಿ ಚುಚ್ಚುವುದು
ಹೀರಿ ಹೊರಗೆಳೆದು ಸತ್ವ ಬರಿದಾಗಿಸುವುದು
ನಿನದೂ, ಆ ಕೊಂಡಿಯದೂ ಜಾಯಮಾನ..
ಒಳಗುಳಿವುದಾಗದಂತೆ ಸುಮ್ಮನೆ
ಕದ ಮೊದಲು ಮೆಲ್ಲ,
ಮತ್ತಷ್ಟು ಗುಲ್ಲು ಮಾಡಿಯೇ ತಟ್ಟಿದ್ದೆ.
ಕದವೋ ಕಾದ ಕಾವಲಿಯಂತೆ
ಮರುಭೂಮಿಯ ಮರಳಂತೆ
ಚಾತಕದಂತೆ
ಹನಿಯೊಂದು ಸಾವ ಸಾಯಿಸುವ ಅಮೃತದ್ದೇನೋ ಎಂಬಂತೆ
ಯಾರು ಎತ್ತ ಎನ್ನದೆ ಊರಗಲ ತೆರಕೊಂಡಿದೆ.
ನಿನಗೋ ಒಳಗನು ಪರೀಕ್ಷಿಸುವ,
ಕೆದಕಿ ಕಣಕಣವನೂ ಒಡೆದು ಸೂಕ್ಷ್ಮದಾಳಕ್ಕೆ,
ಬಣ್ಣ, ವಾಸನೆ, ರುಚಿ ನೋಡುವ
ಎಲ್ಲ ಕೂಡಿ, ಕಳೆದು, ಭಾಗಿಸಿ, ಹರಿದು, ಹಂಚಿ
ಒಂದಷ್ಟು ಪಾತ್ರಗಳಲಿ,
ಕತೆ ಹೆಣೆವ, ಓದಿಹೇಳಿ
ಮತ್ತಿನ್ನೊಂದಷ್ಟು ಮಂತ್ರಮುಗ್ಧ
ಪಾಪಗಳ, ಪಾಪಿಗಳ ಸೆಳೆವ ಚಪಲ..
ಹೋಗೋ.. ಇಲ್ಲಾರೂ ಪಾಸಾಗಲಿಲ್ಲ
ಅಸಲು ನಿನಗುತ್ತರಿಸಲೇ ಇಲ್ಲ.
ಇಲ್ಲಾರೂ ಒಡೆಯುವುದೂ ಇಲ್ಲ
ಕೆದಕುವುದು ಬಿಡು,
ಅಸಲು ನೀ ಮುಟ್ಟುವುದೂ ಆಗಿಲ್ಲ.
ಕತೆಯಾಗಿಸುವುದು ಬಿಡು
ಒಂದಕ್ಷರಕೂ ಇಲ್ಲಾರನೂ ಎಳೆತರುವುದಾಗಿಲ್ಲ.
ಹೋಗು ಹೋಗೋ..
ಕದವಂದು ತೆರೆದದ್ದು
ಇಂದೂ ಹಾಗೇ ಇದೆ.
ಮುಂಚೆಯೂ ಬದುಕೆಂಬುದಿತ್ತು,
ನಂತರವೂ ಬದುಕಿರುವುದು.
ಕನಿಷ್ಠ ಇಲ್ಲದನು ಬಾಡಿಸುವ ಸುಳ್ಳಿನ ಕಣ್ಕಟ್ಟಿಲ್ಲ
ಸುಳ್ಳು ಬೇಟೆಯಾಡಿದ ಗಾಯದ ನಿಟ್ಟುಸಿರಿಲ್ಲ.
ಇಲ್ಲಾರ ನೋವನೂ ಗೇಲಿಯಾಗಿಸಿಲ್ಲ,
ಯಾರ ಒಲವನೂ ಆಟಿಕೆಯಾಗಿಸಿಲ್ಲ.
ಹೋಗು ಹೋಗೋ ನೋವೇ,
ಜೋಳಿಗೆಯಲಿ ನಿನದು ಸ್ವರ್ಗಸುಖವಿದ್ದರೂ
ನಿನ್ನ ಮೋಜಿಗೆ ಇಲ್ಲಾರೂ ಕುಣಿವವರಿಲ್ಲ.
ನೀ ಪ್ರೀತಿಯ ಜೊತೆ ಬರಲಿಲ್ಲ,
ಇಲ್ಲಾರೂ ನಿನನುಳಿಸಿಕೊಳುವವರಿಲ್ಲ.







ಹಾರಿ ಚಿಂವ್ ಎನುತ ಕಸಕಡ್ಡಿ ಹೆಕ್ಕಿದ್ದು
"ಅಯ್ಯೋ ಹೆಚ್ಚು ಹೊತ್ತಿಲ್ಲ; ತತ್ತಿಯ ಕಾಯಿಸುವಂತಿಲ್ಲ.."
ಗ್ರಾಸ  ಸಿಗದೆ ಬರೀ ಕಸವಾಯ್ದು ತರುತಾ
ಮೈಗಿಂತ ಭಾರ ಒಮ್ಮೊಮ್ಮೆ
ಸತ್ತು ಇಲ್ಲವಾದಂತೆ ಹಗುರ ಒಮ್ಮೊಮ್ಮೆ...
ತಂದು ಒಗ್ಗೂಡಿಸಿದ್ದು, ಗೂಡಾಗಿಸಿದ್ದು
ಕಾವಿತ್ತು, ತಿನಿಸಿತ್ತು, ರೆಕ್ಕೆಗೆ ಜೀವವಿತ್ತು
ಕಾಲಿಗೆ ಧೈರ್ಯವಿತ್ತು, ಬಿದ್ದಾಗ ರೋಧಿಸಿ
ಮೊದಲ ಹಾರಿಗೆ ಕುಪ್ಪಳಿಸಿದ್ದು,
ಮತ್ತೆಲ್ಲ ಹಾರಿಯೇ ಹೋದದ್ದು
ಯಾವುದೂ ಸ್ಪಷ್ಟ ಕಣ್ಮುಂದಿಲ್ಲ.
ಖಾಲಿಗೂಡು ನೇತಾಡಿ ಮಳೆಗಾಳಿಗುದುರಿದ್ದು ಬಿಟ್ಟು..
ಈಗೀಗ ಹೆಚ್ಚು ನೆನಪುಳಿವುದಿಲ್ಲ.

ಹಸಿವಿದೆ ಹೊಟ್ಟೆಯುದ್ದಗಲ ಅದೂ ಹಸಿಹಸಿ
ಹಲ್ಲಿಲ್ಲ; ಕಣ್ಮುಂದೆ ಕಡಲೆ ರಾಶಿರಾಶಿ
ಉಮ್ಮಳಿಸುವ ಭಾವನೆರೆ
ಒಳಗಬ್ಬರಿಸುವ ಕಡಲು
ಕಣ್ಣೀರ ಚೀಲದಲಿ ಬರ.
ಒಸರದು ಹನಿಯೊಂದೂ.
ಕಣ್ಣ ನೆಲದೊಡಲು ಬರಿದು.
ಮನಸಿಗೀಗ ವಯಸಾಯ್ತು.

ಕಣ್ಣ ಕಾಮನಬಿಲ್ಲು ಕ್ಷಣ ಹೊತ್ತಷ್ಟೇ
ಬಣ್ಣ ಬಿಡಿಸಿಬಿಡಿಸಿ ತೋರಿದ್ದು.
ಬೆನ್ನಲೇ ಬದುಕು ಬಿಸಿಲಾಗಿ
ಮೋಡವೂ ಮರೆ, ಹನಿಯೊಡೆದದ್ದೂ ಮರೆ.
ಹೊತ್ತೊಯ್ದ ಗಾಳಿಗೆ ಬಣ್ಣ ವಾಸನೆ ರುಚಿ ಹೆಸರುಗಳಿರಲಿಲ್ಲ,
ಈಗ ಅವನಿಲ್ಲ.
ಹುಡುಕುವುದೆಲ್ಲಿ, ತಿರುಗಿ ಕೇಳುವುದೆಲ್ಲಿ?
ನೆನಪು ಖಾಲಿ ಡಬ್ಬ
ಬರಿದೇ ಸದ್ದು ಮಾಡುತಿದೆ,
ರಾತ್ರಿಗಳಲಿ ನಿದ್ದೆಯೂ ಇಲ್ಲ.

ನೋವು ಥೇಟ್ ದೇವನ ಹಾಗೆ.
ಅರ್ಥಾನರ್ಥಕೆಟುಕುವುದಿಲ್ಲ, ಅರ್ಥವಿಲ್ಲದ್ದಲ್ಲ.
ಬೆರಳ ತುದಿಗಂಟಿದ್ದು ಅಷ್ಟೇ ಅಷ್ಟಲೂ
ಮೈದುಂಬಿ ತುಳುಕಿಸುವಷ್ಟು ಸಮೃದ್ಧಿ!.
ಅಳತೆಗೆಟುಕುವುದಿಲ್ಲ,
ನಗುವ ಲೋಕದ ಕೈದುಂಬುವಷ್ಟೂ ಇಲ್ಲ.

ಇಲ್ಲಗಳಲಿ ಮತ್ತು ಇದ್ದು ಇಲ್ಲವಾದವುಗಳಲಿ ಬಿಟ್ಟು
ನೋವು ಇನ್ನೆಲ್ಲೂ ಇಲ್ಲ.
ನನ್ನಲ್ಲಿಲ್ಲದ್ದು, ಇಲ್ಲವಾದುದು ನಿನಗೆಂತು ತೋರಲಿ ಹೇಳು?
ಕ್ಷಮಿಸು ಗೆಳತಿ,
ನೋವ ಬರೆವುದಾಗಲಿಲ್ಲ.
ಬರೆದಲ್ಲಿ ಅಲ್ಲಲ್ಲಿ ಕಣ್ಣುಮಿಟುಕಿಸಿ
ಮಿಂಚುಹುಳದ ವಿಸ್ಮಯದಂತೆ
ನಿನ್ನೆದುರು ಸುಳಿದುಹೋಗಿಲ್ಲದಿದ್ದರೆ
ನನಗಿನ್ನೂ ನೋವಾಗಿಯೇ ಇಲ್ಲ.

Wednesday, June 24, 2015

ನಗೆಯ ಸಾರಥಿಯೇ..

ಓಹ್! ಹಾಗಾದರೆ
ನೂರು ಮರುಭೂಮಿಯ
ನೂರಾರು ಬರಗಾಲಗಳ
ಶತಶತಮಾನದ ದಾಹಕ್ಕೆ
ಇದೋ ಈ ಇಂದಿನ ನಿರೀಕ್ಷೆಯಿತ್ತೆಂದಾಯಿತು..
ಥೇಟ್ ಹೀಗೇ ನೀನೊಮ್ಮೆ ಬರುವ,
ನಿಲುವ, ನುಡಿವ, ಮುಟ್ಟುವ ತುಣುಕು ಆಸೆ
ಬಿರುಗಾಳಿಯಬ್ಬರದಲೂ
ಮಿಣಮಿಣ ಬೆಳಕುಳಿಸಿಕೊಂಡಿತ್ತೆಂದಾಯಿತು.

ಒಣಗಿಲ್ಲದ ಗಂಟಲು ಪಸೆ ಬೇಡಿರಲಿಲ್ಲ
ಆರಿಲ್ಲದ ಕಂಠದಲಿ ಹಾಡು ನಿಂತಿರಲಿಲ್ಲ
ಒಪ್ಪುವ ರಾಗ
ಮತ್ತೆದೆ ಮಿಡಿವ ಲಯವೊಮ್ಮೆಯೂ ತಪ್ಪಿರಲಿಲ್ಲ
ಸಣ್ಣಪುಟ್ಟ ದೂರು-ದುಮ್ಮಾನ ಚಿಗುರಲೇ ಚಿವುಟಿ
ಕಳೆಯಿಲ್ಲದ ತೋಟ, ಹೂನಗೆಗೂ ಕಮ್ಮಿಯಿರಲಿಲ್ಲ
ಅರರೇ! ಎಲ್ಲಿತ್ತು ಇಷ್ಟೊಂದು ನಿರ್ವಾತ?!
ತುಂಬಿ ತುಳುಕುತ್ತಿದ್ದಲ್ಲೂ
ಒಳಗಿಷ್ಟು ಖಾಲಿ ಅಡಗಿದ್ದುದು
ಅದು ಭಣಭಣವೆನ್ನುತಿದ್ದದ್ದು
ನೀ ಬಂದು ತುಂಬುವವರೆಗೆ ಗೊತ್ತೇ ಇರಲಿಲ್ಲ.

ಹಾಗೆ ಬಂದೆ, ಹೀಗೆ ಉಲಿದೆ
ಮೊದಲ ಮಳೆಯದೂ, ಮೊದಲ ಮುತ್ತಿನದೂ
ಒಂದೇ ಘಮವೆಂದದ್ದು ನೀನೇ ತಾನೇ?
ಕಣ್ರೆಪ್ಪೆಯ ಹಾದಿಯಲಿ ನಗೆಯ ಸಾರಥಿಯೇ,
ಮುಚ್ಚಿದೆವೆಯಡಿ ಅಮಿತ ಸಾಮ್ರಾಜ್ಯ
ವಿಸ್ತರಿಸುವದೊಂದು ಯೋಚನೆಯಿದೆಯಂತೆ
ಅಲ್ಲಿಯವರೆಗೂ ಜತೆ ನೀಡುವೆಯಾ?

Tuesday, June 23, 2015

ಎಲ್ಲ ಮೀರಿ....

ಹಸಿರು, ನೀರು, ಅರಳು, ಕರಕಲು,
ಕಣಿವೆ, ಗುಡ್ಡ, ಗೂಡು, ಬಯಲು
ಒಂದನೂ ಬಿಡದೆ ಕೆಲವೇ ಹೊತ್ತಲಿ
ಒಳಗಿಳಿಯದೆಯೇ ಮೇಲುಮೇಲಲಿ
ತಾಕುವ ಚಳಿಮಳೆ ಒಗ್ಗೂಡಿದ
ನಿರ್ಗಂಧ ಆದರೂ ಬಲು ಹಿತ
ಗಾಳಿಯೊಂದು ತಣ್ಣನೆಯ ಉಗುರು
ಮುತ್ತಿಕ್ಕಿದ ಸಿಹಿಯಷ್ಟೇ ಇಲ್ಲುಳಿಯಲಿ.

ಅದರೆಲ್ಲ ಉದ್ವೇಗ, ಆವೇಗ, ವೇಗಗಳಿಗೆ
ಮಬ್ಬು ಕವಿದ ಪಾಪದ ಅಷಾಡವೊಂದು ನೆಪವಾಗಲಿ.
ಹೊಸಹೊಸತಿಗೆ ತುಡಿವ ಮಿಡಿವ
ನಿರಂತರತೆಗೆ ಪ್ರಾಣವೆಂಬ ಹೆಸರು ನೆಪವಾಗಲಿ
ಆಳ ಅಳೆಯದೆ, ಬರೀ ಸವರುತಲೇ ತಳ ತಾಕುವುದಕೆ
ವೇದಾಂತ-ವೈರಾಗ್ಯ ನೆಪವಾಗಲಿ.

ಬಂದು ಹೋದ ನೆನಪು ಮಾಯಲಿ.
ಬಂದೇ ಬರುವ ಕನಸು
ಕನಸಷ್ಟೇ ಎಂಬ ಜ್ಞಾನ ಹನಿಹನಿ ಜಿನುಗಲಿ.
ಹಸಿರು ಹಾಸಿ ಹಸಿರ ಹೊದ್ದ
ಮುಂಗಾರಿನ ಮಂಜು ಕವಿದ
ಒಂದು ಮುದ್ದು ಮುಂಜಾವಿನಂಥ,
ಸತ್ಯಕೆ ಹಿಡಿದ ಕನ್ನಡಿ ನಗುವೇ,
ಇವೆಲ್ಲಕ್ಕು ಮೀರಿ ಇವೆಲ್ಲವ ಮೀರಿ
ಪ್ರೀತಿಸುವ ನನ್ನ ಶಕ್ತಿ
ಪುಷ್ಟಿ ತುಷ್ಟಿಗಳ ಬೇಡದೆ
ಬರಿದೇ ಬೆಳೆಯುತಾ ಸಾಗಲಿ.