Saturday, May 21, 2016

ಹಾಗೇ ಅಂಗಾಲ ಕಲೆಯಾದ ಒಂದಷ್ಟು ಹಠಮಾರಿ ಕೆಮ್ಮಣ್ಣು
ವೈಶಾಖದ ಕೊನೆಕೊನೆಯ ಕಡುಬಿಸಿಲಿಳಿಸಿಕೊಂಡ ಉರಿಗಣ್ಣು
ಗಾಳಿಯ ಬೀಸುಧರ್ಮಕೆ ಸ್ಪಂದಿಸಿ ಬಂಧ ಕಳಚಿಕೊಳುವೆಲೆ
"ನಾನೂ.." ಎನುತ ಮಕಾಡೆ ನೆಲಕಚ್ಚುವದೇ ವರವೆಂದುದುರುವ ಪಾರಿಜಾತ...
ಈಗೀಗ ಅತಿಸಹಜವೂ ನಿಜದಚ್ಚರಿಯೆನಿಸುವುದು;
ಹಗಲು ನಿದ್ದೆಗೆಳಸಿ, ರಾತ್ರಿಯೆಚ್ಚರಿಸುವುದು ಮಾಮೂಲೆನಿಸುವುದು..

ವನಮಾಲಿಯೇ ನಿಲ್ಲಿಸದಿರು ಕೊಳಲಗಾನವೆಂದರವರು,
"ನನ್ನ ಮಹಾಬಲಿಯೇ ನಿಲ್ಲಿಸಿಬಿಡೆಲ್ಲವ" ಇದು ನಾ ಹೇಳುವುದು!
ಸಾಕು, ಕನಸರೆಕ್ಕೆಯೇರಿಯಷ್ಟೇ ಬರುವ ನಗುವೂ,
ಮತ್ತು ನಿದ್ದೆ ಕಳುವಾದ ಕಣ್ಣುಗಳ ಬಿಕ್ಕು ಪ್ರವಾಹವೂ..
ಸಾಕು, ತೂರಿಬಂದ ಪರಿಮಳದಲೆಯಿಲ್ಲೇ ತೆಳುವಾಗಲಿ,
ಬೆಸೆವ ಸೇತು ಅಂತರದಳತೆಯ ಮಾಪನವಾಗಲಿ..

ಹೌದು,
"ಮಳೆ ಬೀಳದಿರಲಿ, ಹಸಿರುದಿಸದಿರಲಿ, ಹೂವರಳದಿರಲಿ,
ತೆನೆಬತ್ತಕಾಳಲಿ, ಹಟ್ಟಿಹಟ್ಟಿಯ ತಾಯ್ಕೆಚ್ಚಲಲಿ ಹಾಲ್ದುಂಬದಿರಲಿ.."
ಎಂದೆನುವುದಾದರೆ ಹೊಳೆಹೊಳೆದ ಆ ನಿನ್ನೆ ಮರುಕಳಿಸದಿರಲಿ..
ಅಯ್ಯೋ...
ಸುತ್ತುಬಳಸಿ ಹೇಳಿಕೇಳಲಿರುವುದಾದರೂ ಏನು,
ಮೌನ ತೂಗಿತೂಗಿ ಮಲಗಿಸಿದ ಹೊತ್ತನೆಬ್ಬಿಸಬಹುದಿತ್ತು,
ಬಂದುಬಿಡಬಹುದಿತ್ತು; ಬಿಲ್ಕುಲ್ ಇಲ್ಲಿಲ್ಲದಿರುವದ್ದು ಇಂದಿಲ್ಲಿರಬಹುದಿತ್ತು..

Saturday, March 5, 2016

ನೀ ಬಂದ ರಭಸಕ್ಕೆ ಹರಡಿ ರಾಡಿ ರಂಗೋಲಿ,
ದಿಕ್ಕಾಪಾಲಾದ ಹೆಬ್ಬಾಗಿಲ ತರಗಲೆ ರಾಶಿ,
ಜಾಗ ತಪ್ಪಿ ಮಖಾಡೆ ಬಿದ್ದುಕೊಂಡ ಕಾಲೊರೆಸು,
ತಳ್ಳಿಸಿಕೊಂಡ ಬಾಗಿಲದುರಿ ಉದುರಿದ ತೋರಣದೆಲೆ..
ಒಳಬಂದು ಪೊಟ್ಟಣ ಬಿಚ್ಚಿ ಹಂಚಿದ ಮತ್ತಿಗೆ
ಘಮ್ಮೆಂದು ಸುತ್ತಿಸುಳಿದೊಮ್ಮೆ
ಮರುಘಳಿಗೆಗೇ ಮಂದ, ಸ್ತಬ್ಧ ಗಾಳಿ!
ಕೆದರಿ ತಲೆ, ಕರಗಿ ಹಣೆಬೊಟ್ಟು,
ಜಾರಿ ಮುದುರಿ ವಸ್ತ್ರ, ಕೂತಲ್ಲೆ ಕಲ್ಲಾದ ನಾನು!

ಎಲ್ಲೆಡೆ ನಿಶ್ಶಬ್ದಗದ್ದಲವೆಬ್ಬಿಸಿ
ಸರ್ರನೆ ತೆರಳಿದ್ದಿನ್ನೂ ಅರಗಿಲ್ಲವೆಂಬಂತೆ
ಬಿಡದೆ ಗಾಳಿಗಾಡುತಿರುವ
ಮುಚ್ಚಿಕೊಳಲಾಗದೆ, ಪೂರ ತೆರಕೊಳಲಾಗದೆ
ಒಂದೆಡೆಗೂ ಮುಟ್ಟಲಾಗದೆ
ತ್ರಿಶಂಕು ಮೌನಹುಯ್ದಾಟದಲಿ
ಮೇಲಿನಗುಳಿ ಸಿಗಿಸಿರದ
ಎರಡರಲೊಂದು ಬಾಗಿಲು!

ಇದೋ ಈ ಗುಂಗಿನೊಳಗೆ
ಮುಂಚಲಿಸುತಲೇ ಮತ್ತೆ ಮತ್ತೆ ಸುತ್ತುತಿವೆ
ತುಂಬುಕಣ್ಣಕೊಳದೆರಡು ಮೀನು!
ಒಂದರ ಹಿಂದೊಂದು,
ನಲಿವಿನೆಲ್ಲ ಬಣ್ಣ ಹೊತ್ತೊಂದು,
ನೋವಿನ ನಿರ್ವರ್ಣದ್ದೊಂದು...


ಸುಮ್ಮನೆ ಉರುವಲಿಲ್ಲದೆ ಉರಿವ ಮಿದುಹೃದಯ,
ಸುಮ್ಮನೆ ಹರಿವ ಕಣ್ಣೀರುಗಳಿಗೆ ತವರು-ಗಮ್ಯಗಳಿರುವುದಿಲ್ಲ
ಸುಮ್ಮನೆ ಹಾಗೇ ಗಾಳಿಯಂತೆ ಮುಟ್ಟಿಹೋದ ಅನುಭೂತಿಗೆ
ಒಂದಷ್ಟು ಗರಿಗಳನೋ, ಅಷ್ಟೆಷ್ಟೊ ನಿಟ್ಟುಸಿರನೋ ಹಚ್ಚಿದ್ದಾದರೆ
ಆಗಲೂ ಅದು ಕಣ್ಣಿನ ಲೆಕ್ಕಕ್ಕೆಟುಕುವುದಿಲ್ಲ!
ಏನಾಗುತಿತ್ತು ಅಂದು ಬಂದಿರದಿದ್ದರೆ?
ನೂರು ಬಾರಿ ಬೊಬ್ಬಿಟ್ಟು ವ್ಯರ್ಥ ಕಾಲಪ್ರವಾಹದಲರಗಿದ
ಪ್ರಶ್ನೆಯಿಂದು ತನ್ನಷ್ಟಕ್ಕೇ ಗುನುಗಿಕೊಳುತಿದೆ,
"ಅಂದು ಬರದಿದ್ದರೆ ಇನ್ನೇನಿಲ್ಲ, ಇಂದು ಬರುತಿರಲಿಲ್ಲ, ಅಷ್ಟೇ !"

Wednesday, January 20, 2016

ಕೇಳಿಲ್ಲಿ...


ಗುಳಿ ಇಳಿಜಾರುಗಳಲೊಂದು ಉರುಳುವ ಬಿಂದು
ಉಬ್ಬು ಏರುಗಳಲೇರುವ ಏದುಸಿರ ಹಾಡೊಂದು
ದಾಹದ ಪಾದ ಸ್ಪರ್ಶಿಸಿ, ಪೂರ್ತ ಆವರಿಸಿ, ರಮಿಸಿ, ಮುದ್ದಿಸಿ
ಏರುಜಾಗೃತದಿಂದ ನಿದ್ರೆಯಮಲಿಗೊಯ್ಯುವ ಹಾದಿಯುದ್ದಕು
ಒಮ್ಮೆ ತೆವಳಿ, ಒಮ್ಮೆ ನುಸುಳಿ, ಒಮ್ಮೆ ಬಗ್ಗಿ, ಒಮ್ಮೆ ನುಗ್ಗಿ...
ದೇಹಕೂ, ದಾಹಕೂ ಈಗ ಪೂರ ತಣಿದ ಸೊಗದ ಸುಗ್ಗಿ!

ಮಾತುಸುರಲಿದ್ದ ಭಾವಬಾವಿಯ ಹಾದಿಯ ನಕಾಶೆ
ಹೆಜ್ಜೆಗೂಡಿಸಿ ಹೆಗಲಿಗೊರಗಿ ಸಾಗುವ ಆಶೆ
ಕಾಲಡಿ ಕವಚ, ಗುಡಿಶಿಖರ ಕಲಶ ಒತ್ತಟ್ಟಿಗಾಗುವ ಭಾಷೆ
ಸುಗ್ಗಿಹಾಡಿನ ಗದ್ದಲದಲೆಲ್ಲೋ ಕಳೆದೇಹೋದವು!

ಥೇಟ್ ಅಂಥವೇ ಅದೆಷ್ಟೋ ಹನಿಗೂಡಿದ ಹಳ್ಳವೊಂದಕೆ
ದಾಹವ ಸಮೃದ್ಧಿಯಲಿ ಮೀಯಿಸುವಾಸೆ!
ಮುಗಿಲನೂ ನೆಲವನೂ ಒಂದೇ ಏಟಿಗೆ ಮುಟ್ಟಿಬರುವ
ಪ್ರಾಣವಾಯುವಿನ ಚೈತನ್ಯದಲಿ ತೋಯಿಸುವಾಸೆ!

ಇಕ್ಕೆಲ ಉಸಿರ ತೋರಣದ ಘಮ
ಊಹೆ ಬರೆದ ಹಸೆ, ಕಲಿಕೆ ತುಂಬಿದ ಬಣ್ಣ,
ಎಡವಿ ಹೊಸಿಲಿಗಂಟಿದ ಬೆಟ್ಟಿನುಗುರ ಚೂರು
ಅಳುಕುತಲೇ ಪಿಸುನುಡಿವ ಕಣ್ಬೊಂಬೆ ಮಾತು
ಮುಳ್ಳು ಚುಚ್ಚಿದ್ದೊಂದು, ಉಂಗುರ ಕಚ್ಚಿದ್ದೊಂದು ಕೈಬೆರಳು
ಹೀಗೆ ಹಂಚಿಕೊಳುತಾ ಎಲ್ಲವೆಂದರೆಲ್ಲ
ನಿಧಾನ ಸುಗ್ಗಿಯ ಒಳಗೊಯ್ಯುವಾಸೆ!
ಸುಗ್ಗಿ ಕಟಾವಿನ, ಕಣಜದ ಗುಂಗಿನಲೇ ಮುಳುಗಿತ್ತು!

ಹೆಣ್ಣಷ್ಟೇ ಅಲ್ಲದ ಹೆಣ್ತನದೊಂದು ಮೂಲಬಿಂಬಕೆ
ತಂತಾನೇ ಬೆತ್ತಲಾಗುವಾಸೆ
ಗುಟ್ಟುಪಟ್ಟುಗಳ ಕತೆ ಬಿತ್ತರಿಸುತಾ
ಅಷ್ಟೇ, ಇನ್ನೇನಿಲ್ಲ ಎಲೆ ಸಖ್ಯವೇ,
ಆಕಾರವಲ್ಲದ, ಆಕರ್ಷಣೆಯಲ್ಲದ, ತನ್ನೊಳಹೊರಗ
ತನ್ನಷ್ಟಕೇ ನಿರೂಪಿಸುವಾಸೆ..

Saturday, January 16, 2016

ಸೀದಾ ಸ್ವರ್ಗದ ಮುಚ್ಚಿದ ಬಾಗಿಲೆದುರಿಗೇ ಒಯ್ದು ನಿಲಿಸಿ
ಪುಣ್ಯವಂತ ಅತಂತ್ರನೆನಿಸುವ ಗಳಿಗೆಯಿದನು
ಕ್ಷಮಿಸು, ಈ ಸಾಲಿಗೆಳತರದೆ ಇರಲಾಗುತ್ತಿಲ್ಲ.

ಸಾದಾ ನಗುವೊಂದು ಹಿಂದುಮುಂದಿನ ಚಿಂತಿಲ್ಲದ ಮಗು,
ಪುಟುಪುಟು ಹೊರಟುದುದ ಅಲ್ಲೆಲ್ಲೋ ಗೋರಿಯೆದುರು
ನಕ್ಕಳುವ ಅರೆಹುಚ್ಚನ ಮುಖದೆಡೆ ಹಾದಿ ತಪ್ಪಿಸಿದ ಗಳಿಗೆಯನೂ..

ಅತಿಪ್ರಿಯ ಲೌಕಿಕವ ಹುಗಿದು ಅತಿಕ್ಷುಲ್ಲಕದ ಕಾಲ್ಕೆಳಗೆ;
ದ್ವೇಷಿಸದೆಯೂ ದೂರವಿಟ್ಟಿದ್ದ ಅಲೌಕಿಕಕ್ಕೆ
ಬದುಕು ದಾಕ್ಷಿಣ್ಯಕ್ಕೆ ಬಸಿರಾದ ಗಳಿಗೆಯನೂ...

ಅಲ್ಲದೋ ಬಲುವಿಶಾಲವೊಂದು ನೀಲಿ
ನಡು ತೂಗುವ ಬಿಳಿಬೆಳಕ ತುಂಡು ಆಸೆ
ತಿಕ್ಕಿ ತೊಳೆದು ಹೊಳೆಸಿದ ಲೆಕ್ಕವಿರದಷ್ಟು ಮಿನುಗುನೋವುಗಳು
ಅರೆ! ವರ್ಷಋತುವಿನೇರು ಯೌವ್ವನದ ಒಂದು ಬರಡು ಗಳಿಗೆ,
ಒಣಒಣವೆಂಬಂತೆ ಉರಿವ ಆರ್ದ್ರ ಎದೆಯೂ
ನೀರಾಗದೆ ಅಳುವಾಗಸವೂ ಎಷ್ಟೊಂದು ಹೋಲುತ್ತವೆ!

ಕ್ಷಮಿಸು, ನಿನ್ನಂಥವೇ ಈ ಗಳಿಗೆಗಳನು
ಆಸ್ಥೆಯೊಂದು ಬಂಜೆಪಟ್ಟಕೇರುವ ಸಾಲುಗಳಿಗೆಳೆತರದೆ ಇರಲಾಗಲಿಲ್ಲ!

Thursday, January 14, 2016

ಕಣ್ತೆರೆಸುವ ಗಳಿಗೆಗಳು

ಅದೆಂಥ ಗಾರುಡಿಗನೋ ನೀನು!
ತೆರೆದ ಬಾಗಿಲಿಗೂ
ತಿಕ್ಕಿ ತೊಳೆದ ಬೊಗಸೆಗಣ್ಣ ಬರೆಯಬಲ್ಲವನು!
ಕಣ್ಬೊಂಬೆಗೂ ಬಿಡಿಸಿಯೊಂದು ಕಣ್ಣು,
ಕಣ್ತೆರೆಸಬಲ್ಲವನು!

ನನ್ನದಿದೋ ಮುಚ್ಚಿದ ಕದವೂ
ಜೀವಂತವೀಗ!
ಗಾಳಿಗಾಡುತಾ ಒಂದೇಸಮ ಸದ್ದು
ಮೌನಸಾಮ್ರಾಜ್ಯದ ತುಂಬೆಲ್ಲ!

ಅದೆಂಥ ಶಕ್ತಿಯೋ, ಭಕ್ತಿಯೋ ನಿನದು!
ಬಿಡದೆ ಕಿಂಚಿತ್ತೂ
ಕಲ್ಲಕಂಭವ ಬಗೆದು
ನರನನೂ, ಸಿಂಹವನೂ ನೀನು,
ಕಡೆಗೆ ನರಸಿಂಹನನೂ ಪ್ರಕಟಿಸುವವನು!

ನಿನ್ನೆದುರು ಮೈಮರೆಯುತಾ ಬೆತ್ತಲಾಗುವಾಗ
ಅಥವಾ ಬೆತ್ತಲಾಗುತಾ ಮೈಮರೆವಾಗ
ನಾ ನಾನಾಗತೊಡಗುತ್ತೇನೆ ನಿಧಾನ!
ಒಂದೆರಡೇ ಹೆಜ್ಜೆ ಅಷ್ಟೇ...
ಹಿಂದಿನಷ್ಟೂ ಹೆಜ್ಜೆಗಳ ಪಾಠ ಎದುರಾಗುತ್ತದೆ;
ಚಿಟ್ಟೆಯೊಂದು ಮಡಚಿಟ್ಟು ರೆಕ್ಕೆ,
ಕಳಚಿಟ್ಟು ಬಣ್ಣ-ಕಣ್ಣುಗಳ
ಕೋಶದೊಳಹೊಗುತ್ತದೆ;
ಎಡತಾಕುತಾ ಗೋಡೆ ಸುತ್ತ
ತೆವಳತೊಡಗುತ್ತದೆ.

ಮಂಜುಗಣ್ಣಿಗೆ
ಕೈಲಿ ಬೆತ್ತ ಹಿಡಿದ ಗುರುವಿನಂತೆ
ಕಿಡಿಕಾರುವ ಅಮ್ಮನ ಕಣ್ಣಿನಂತನಿಸುವ
ಆ ಗಳಿಗೆ,
ಗಾರುಡಿಗನೂ ಅಲ್ಲ, ಶಕ್ತಿ-ಭಕ್ತಿಗಳೂ ಅಲ್ಲ,
ನೀನು ಥೇಟ್ ನನ್ನಂತೆಯೇ ಮನುಷ್ಯನೆಂದರಿವಾಗುವ
ಆ ಗಳಿಗೆ,
ಆಪ್ತವೂ ಹೌದು; ಅನಪೇಕ್ಷಿತವೂ ಹೌದು!

Monday, January 4, 2016

ಸಾಗುತಲೇ ಇತ್ತು ಮುನ್ನೆಲೆ ಕತೆ;
ಹರಿದುಹೋಗಿದ್ದು ಹಿಂದಣ ಪರದೆ.

ಕಲರವದ ನಡು ಕಡುಸ್ಮಶಾನ ಮೌನ,
ಕಾಮನಬಿಲ್ಲ ನಡು ಬರಡು ಬೂದಿಬಣ್ಣ,
ಚಿನ್ನದಂಥ ಏಕಾಂತಕೂ ಹಿಡಿದ ತುಕ್ಕು,
ನತ್ತು-ಮುತ್ತೆಲ್ಲ ಕಾಗೆಬಂಗಾರವಾದದ್ದು!

ಮರೀಚಿಕೆಯೆಂದರಿತೂ ಬೆನ್ನಟ್ಟಿದ ರಾಮ,
ಅರ್ಥದ ಬೆನ್ನಟ್ಟಿ ಹೈರಾಣಾದ ಶಬ್ದ
ನನ್ನೊಳಗೆ ಸೋತು ಕುಸಿವಾಗ
ಉಮೆಶಿವರ ಜೋಡಿಯೊಂದು ಮುರಿದುಬಿದ್ದದ್ದು!

ಧ್ಯಾನಸ್ಥ ಬೊಗಸೆಗೆ
ಇಷ್ಟೇ ಅಥವಾ
ಇಷ್ಟೊಂದೆಲ್ಲ
ದಕ್ಕಿದ ಪರಿ ಚಿಂತಿಸುತಿದ್ದೆ.

ಮಹಾನ್ ಚೇತನವೊಂದು
ತನ್ನಷ್ಟಕ್ಕೆ ಉಲಿಯುತಿತ್ತು..
"ಪ್ರೀತಿ ಇಲ್ಲದ ಮೇಲೆ
ಹೂವು ಅರಳೀತು ಹೇಗೆ?
ಮಾತು ಹೊರಳೀತು ಹೇಗೆ?
ಮತ್ತರ್ಥ ಹುಟ್ಟೀತು ಹೇಗೆ?"