Thursday, January 31, 2013

ವ್ಯೆತ್ಯಾಸ ಹೆಚ್ಚೇನಿಲ್ಲ...


----------------------------------

ಊರ ನಡುವಲೊಂದು ಗುಡಿ,

ಮೂಲೆಯಲೊಂದು ಗುಡಿಸಲು.

ದೀಪ ಉರಿದಿವೆಯಲ್ಲಿ ದೀಪದೆಣ್ಣೆ ನುಂಗಿ

ಇಲ್ಲೂ ಉರಿದಿವೆ ಹೆಣ್ಣ ಕಣ್ಣೀರ ನುಂಗಿ

ವ್ಯೆತ್ಯಾಸ ಹೆಚ್ಚೇನಿಲ್ಲ...



ಅಲ್ಲಿ ಮೊಳಗಿ ಮಾರ್ದನಿಸಿವೆ

ಘಂಟೆಜಾಗಟೆ ಶಂಖನಾದ

ಇಲ್ಲೂ ಮೊಳಗಿದೆ

ನಿತ್ಯ ನಿಶ್ಯಬ್ಧ ರೋದನ.



ಅಲ್ಲಿ ಸಾರಿವೆ ಕಣಕಣವು

ಮುಕ್ತಿಸಾಧನೆಯ ಗುಟ್ಟು

ಇಲ್ಲೂ ಸಾರಿವೆ ಗೋಡೆಬಾಗಿಲು

ಅನುದಿನದ ಹುಟ್ಟುಸಾವು.



ಅಲ್ಲಿ ಅರ್ಪಣೆಯಾಗಿದೆ

ತನ್ನತನ ಭಕ್ತಿಯಡಿಯಾಳಾಗಿ.

ಇಲ್ಲೂ ಅದೇ ಆಗಿದೆ

ಹೊಟ್ಟೆಬುತ್ತಿಯ ತುತ್ತಿಗಾಗಿ.



ಅಲ್ಲಿ ಮೈಮರೆವ ತಾದಾತ್ಮ್ಯ

ನರನಾರಾಯಣ ಕೂಟ

ಇಲ್ಲಿ ಮೈಮರೆತಿದೆ ವಿಕಾರ

ದೇಹಗಳೆರಡರ ಮೇಳ.



ಅಲ್ಲಿ ಕಾಣಿಕೆ ಹುಂಡಿಗೆ..

ಕೆರೆಯ ನೀರನು ಕೆರೆಗೆ ಚೆಲ್ಲಿ

ಇಲ್ಲೂ ಚೆಲ್ಲಿದೆ ಕಾಸು

ಉಬ್ಬುತಗ್ಗಿಗಷ್ಟು ಬೆಲೆ ಕಟ್ಟಿ.



ಹೊರಹೊರಟ ಮನಸಲ್ಲಿ ಹಗುರ

ತುಮುಲ ಕಳೆದು ಶಾಂತಿ ಹೊತ್ತು.

ಇಲ್ಲೂ ಹಗುರಾಗಿದೆ, ಕೊಟ್ಟುಬಿಟ್ಟು

ಅಷ್ಟೆಷ್ಟೋ ದುಡ್ದ ಜೊತೆಗೆ ದುಗುಡ.



ಹಗುರಾಗಿಸುವ ಚೈತನ್ಯಕಲ್ಲಿ ಆರತಿ

ಇಲ್ಲದೇ ಚೇತನವಿದೆ, ಆರತಿಯಷ್ಟೆ ಇಲ್ಲ.

ಅಲ್ಲಿಯದು ನಿರ್ಜೀವ ದೈವಬಿಂಬವಾದರೆ,

ಇದು ಜೀವಂತಿಕೆ ನೇಣಿಗೇರೋ ಗಲ್ಲುಗಂಬ.











ಜಾರಿಹೋದವುಗಳು.


-----------------

ಹೇಗೆ ಸಾಗಿ ಹೋದವೋ

ಮುಷ್ಟಿಯೊಳಗಿನ ಗಾಳಿಯಂತೆ

ಆ ದಿನಗಳು...



ಚೆಲುವೆನಿಸಿದ್ದವು ಆದರೆ,

ಮನತಾಕದೆ, ಪಡಿಮೂಡದೆ, ಸುಮ್ಮನೆ

ಕಣ್ಣಿಗಷ್ಟೆ ಎಟುಕಿದ ದೃಶ್ಯದಂತೆ...



ಹಿತವೆನಿಸಿದ್ದವು ಆದರೆ,

ಸ್ಪರ್ಶವಾಗದ, ಸ್ಪಂದನೆಗೊದಗದ, ಬರೀ

ಅನಿಸಿಕೆಗಷ್ಟೇ ಗ್ರಾಸ ಭಾವದಂತೆ...



ನೋವೆನಿಸಿದ್ದವು ಆದರೆ,

ಒತ್ತಡಕೊದಗದ, ನೀರಾಗದ, ತಟ್ಟನೆ

ಗಾಳಿಹೊತ್ತೊಯ್ದ ಅತಿಥಿ ಕಾರ್ಮೋಡದಂತೆ....



ಭಯವೆನಿಸಿದ್ದವು ಆದರೆ,

ಹೆಡೆಯೆತ್ತದೆ, ಬುಸುಗುಟ್ಟದೆ ಮೆತ್ತಗೆ

ಅತ್ತಸರಿದು ಹೋದ ಹಾವಂತೆ...



ಎಣಿಕೆಗೆ ಸಿಗದ ಗಳಿಕೆ

ಕೈಸೋರಿ ಹೋದ ಲೆಕ್ಕ

ಹೆದರಿಕೆಗೆ ಹುಟ್ಟಿದ ಬೆವರು

ಬೆಳಕಲುರಿಯುವ ಸೊಡರಿನಂತೆ

ಅರ್ಥತಾರದ ನಿರರ್ಥಕತೆ ಮೀರದ

ಜಾರಿಹೋದ ಮತ್ತೆ ಬಾರದ ದಿನಗಳು.









Wednesday, January 30, 2013

ಬರೆದೂ ಬರೆದಂತನಿಸದೆ....


----------------------

ಒಣಒಣ ಬಣಬಣ ಹಾಳೆ,

ಒಳಗಿನ ನೂರರಲೊಂದೂ ಹೊರಬರದು.

ತಡೆಗೋಡೆ ಕೆಡವುವ ಪರಿಯೆಂತೋ,

ಕೈಹಿಡಿದೆಳೆತರುವ ತಂತು ಎಲ್ಲೋ,



ಇಬ್ಬನಿಯಿಂದ ಮಸಣದ ಗೋರಿವರೆಗೆ,

ಎಲ್ಲ ಬರೀ ಅಕ್ಷರಗಳಾಗಿ ಭ್ರಮನಿರಸನ.

ನೋಡಿದ್ದು, ಕೇಳಿದ್ದು, ಅನುಭವಿಸಿದ್ದು,

ಭಾವಗಳಾಗುತ್ತಿಲ್ಲ, ಬಣ್ಣ ತುಂಬುತಿಲ್ಲ.



ಲೇಖನಿಯಳುತಿದೆ ಜೀವ ಬಸಿದು

ತಾ ಚೆಲ್ಲಿದ ಹನಿಹನಿ ವ್ಯರ್ಥವಾದುದಕೆ.

ಹಾಳೆಯೂ ಅಳುತಿದೆ ತುಂಬಿದೊಡಲು

ಬರೀ ದಾಕ್ಷಿಣ್ಯಕ್ಕೆ ಬಸುರಾದುದಕೆ.



ಕೊಡವಿ ಕಿತ್ತೆಸೆವ ಕ್ಷಣಿಕ ಹತಾಶೆ

ಖಾಲಿಯಾಗಲಾಗದ ಭಾವಬಿಂದಿಗೆ

ತುಳುಕಿ ಹೊರಚೆಲ್ಲಿದ ಹನಿಹನಿ

ಅಳತೆಗೆ ಸಿಗದುಳಿದ ಬರೀ ನಿರಾಸೆ.



ತಲುಪುವ ಯತ್ನವಿರದ ಸಂವೇದನೆ,

ಬಗೆಹರಿಸುವ ಗುರಿಯಿರದ ಸ್ಪಂದನೆ,

ಆಳಕಿಳಿಯದ ನೋಟ ಮತ್ತದರ ನಿವೇದನೆ,

ಸಂವಹನ ಸಾಧಿಸದ ಮೂಕ ನಿರೂಪಣೆಯಷ್ಟೇ.



ಕೈಚೆಲ್ಲಿ ಕೂತಿದ್ದ ಸಾಮರ್ಥ್ಯ

ಹುಡುಕ ಹೊರಟಿದೆ ಸಾರ್ಥಕ್ಯ

ಬರೆವ ಕರಗಳಿಗಷ್ಟು ಸ್ವಾತಂತ್ರ್ಯ

ಬರೆಸುವ ಮನಕೊಂದಷ್ಟು ಸತ್ಯ.





ನೀ ಮಾಯೆಯೊಳಗೋ...


--------------

ನಿನ್ನೆಗಳೆದುರು ನಿಂತು ನನ್ನ ಕಂಡೆ

ನಾನಲ್ಲವೆನಿಸಿತು

ನಾಳೆಗಳ ಒಳಹೊಕ್ಕು ಕಲ್ಪಿಸಿ ಕಂಡೆ

ನಾನಲ್ಲವೆನಿಸಿತು

ಇಂದಿನೊಳಗಿಂದಲೂ ಅದೇ ಅನಿಸಿದ್ದು..

ಹಾಗಾದರೆ ನಾ ಬಲ್ಲ ನಾನೆಲ್ಲಿ?



ಮುಂಜಾವಿನ ಭರವಸೆಯಲಿ ಆಸೆಯಾಗಿ,

ನಡುದಿನದ ಅನುಭವದಲಿ ಕಲಿಕೆಯಾಗಿ,

ಸಂಜೆಯ ಸಾಂತ್ವನದಲಿ ಶಾಂತಿಯಾಗಿ,

ಮುಳುಗೆದ್ದದ್ದೇ ಬಂತು, ಆದರಲ್ಲಿ ನಾನೆಲ್ಲಿ?



ಸತ್ಯದ ಬೆನ್ನತ್ತಿ ಸುಳ್ಳುಗಳಿಂದ,

ನಿಷ್ಠೆಯ ಬೆನ್ನತ್ತಿ ಆಮಿಷಗಳಿಂದ,

ಸಹಜತೆಯ ಬೆನ್ನತ್ತಿ ಮುಖವಾಡಗಳಿಂದ,

ಓಡಿ ಸಾಗಿದ್ದೇ ಬಂತು, ಆದರಿಲ್ಲಿ ನಾನೆಲ್ಲಿ?



ಹುಡುಕಾಟವೇ ಕಳಕೊಳುವ ಪ್ರಕ್ರಿಯೆಯಾಗಿ

ಸಿಕ್ಕು ಬಿಡಿಸುತ ಮತ್ತಷ್ಟು ಗೋಜಲಾಗಿ,

ನಿಂತನೆಲೆಯೂ ಕದ್ದದ್ದೆನಿಸಿ, ಅಯೋಮಯ ದೃಷ್ಟಿ..

ನನ್ನ ತೋರುವ ಕನ್ನಡಿಯೆ ಇಲ್ಲ, ನಿಮ್ಮನೆಂತು ಕಾಣಲಿ?



Monday, January 28, 2013

ಮಾಡಿದ್ದುಣ್ಣೋ.....


---------------------

ನೀ ಆಟಿಕೆಯಾಗಿಸಿದೆ, ಅದು ಆಟವಾಯಿತು

ಸರಕಾಗಿಸಿದೆ, ಅದು ಮಾರಾಟಕ್ಕೊದಗಿತು

ಅಕ್ಷರವಾಗಿಸಿದೆ, ಅದು ಹಾಳೆಯಷ್ಟೆ ತುಂಬಿತು

ಶಬ್ಧವಾಗಿಸಿದೆ, ಅದು ಬರೀ ಸದ್ದಾಗುಳಿಯಿತು

ಸ್ವಪ್ನವಾಗಿಸಿದೆ, ಅದು ಭ್ರಮೆಯಾಗುಳಿಯಿತು

ನೀ ಬೆಂಬತ್ತಿದೆ, ಅದು ಮೃಗತೃಷ್ಣೆಯಾಯಿತು.



ಮನಸೇ,

ಎದುರು ಹುಟ್ಟುವುದು ಬೇರೇನಲ್ಲ,

ನಿನದೇ ಕ್ರಿಯೆಗೊಂದು ಪ್ರತಿಕ್ರಿಯೆಯಷ್ಟೇ...

ನೂರಕ್ಕೆ ನೂರು ನಂಬಿಕೆ ಸಾಕಷ್ಟೇ,

ನಂಬಿಕೆಯ ಸಾಕ್ಷಾತ್ಕಾರಕಿನ್ನೇನಲ್ಲ.



ಒಂದೇ ಬಾರಿ,

ನಿಂತಲ್ಲಿ ನಿನ್ನನೇ ನೋಡಬೇಕಿತ್ತು.

ಅದು ನೆರಳಾಗುತಿತ್ತು.

ಅಕ್ಷರಗಳು ಕವನಗಳಾಗಿ,

ಶಬ್ಧಗಳು ಸರಿಗಮವಾಗಿ,

ಸ್ವಪ್ನ ಕೈಗೂಡಬಹುದಿತ್ತು.



ಈಗಾಗದು...

ಈಗಲ್ಲಿರುವುದು ನೀ ಮಾಡಿದ

ಭಾವಾನುವಾದ, ಶಬ್ಧಾನುವಾದಗಳಷ್ಟೆ.

ರೂಪಾಂತರ ಮೂಲಕ್ಕೊಯ್ಯದು,

ಮೂಲ ರೂಪಾಂತರಕ್ಕೊದಗದು.



ಬಿಡು..

ದಾಟಿಸಿ ನುಣುಚಿಕೊಳಲಾಗದು

ನೀ ಬಿತ್ತಿದ್ದೇ ಮರುಕ್ಷಣದ ಫಸಲು

ಆಗದ್ದನಲ್ಲ, ನೀನಾಗಿಸದ್ದ ಜಪಿಸು

ನೀನೊದಗದೆ ಅದು ನಿನಗೊದಗದು.

Friday, January 25, 2013

ಒಂದು ಪಂದ್ಯ, ಒಂದು ಬಹುಮಾನ.


---------------------------

ನಡೆಯಲಿದೆ ಪಂದ್ಯ, ಗಣಪನಲ್ಲ,

ಮೊದಲಿಗಿಲ್ಲಿ ಬಲವೇ ವಂದ್ಯ.



ಸಾಮಾನ್ಯವಲ್ಲ, ಕುಸ್ತಿ- ಕರಾಟೆಯಲ್ಲ,

ವಸ್ತುವಿಷಯವಿನ್ನೂ ಗೋಪ್ಯ, ಬಹಿರಂಗವಾಗಿಲ್ಲ,

ನೋಡಬಂದವರು ಓಡಿಹೋಗಬಾರದಲ್ಲಾ...



ಫಲಕ ತೂಗುಬಿದ್ದಿದೆ- "ಬಲಪ್ರದರ್ಶನ"

ಕೆಳಗೊಂದಷ್ಟು ಹೆಸರಿವೆ, ಹಲವು ಬಣ.

ದಾರಿ ಸೂಚಿತ, ಚಪ್ಪರದಡಿ ಸಿದ್ಧ ಕಣ.



ಪಾರಿವಾಳ-ಗಿಣಿಗಳ ಕಾಲಿಗೆ ಬಿಗಿದು ಹಗ್ಗ

ಹಾರಿಬಿಡಲಾಗಿದೆ, ಅಳತೆಯೊಳಗವು ಕುಣಿದು

ಹಾಡಿದಂತೆ ಕೂಗಿ, ಕಣ್ಮನ ತಣಿಸಬೇಕಿದೆ.



ಅಲಂಕಾರ ಕಮ್ಮಿಯಿಲ್ಲ, ಗೋಡೆಗಷ್ಟು ಸುಣ್ಣ

ಕೃತಕ ಹಸಿರು ಹೂ, ಬಣ್ಣ ವಾಸನೆ ತೀಕ್ಷ್ಣ

ಅತಿಥಿಗಳಿಗೆ ಜಿಂಕೆಚರ್ಮದ ಹಾಸು, ಸುಖಾಸನ.



ಘಂಟೆ ಢಣ್ ಅಂತು, ಕಣ್ಣುಕಿವಿ ನಿಮಿರಿದವು

ತೊಡೆತಟ್ಟಿದ ಕಣ್ಣುಮನದಲಿ ಕ್ರೌರ್ಯದ ಕಾವು

ಮೈಕೈಗೆ ಮೆತ್ತಿದ್ದು ಮಣ್ಣಲ್ಲ, ಕೊಚ್ಚುವ ಕೆಚ್ಚು.



ಕಣದ ನಡುವೊಂದು ಬುಟ್ಟಿ...

ಆಟಿಕೆಗಳು, ಕಂದನದೊಂದು ತೊಟ್ಟಿಲು

ಮೈನರೆದ ಹೊಟ್ಟೆನೋವಿನ ಸಂಗಾತಿ ಚಾಪೆ,

ಕಂಬನಿ ಹೊದ್ದ ಮೊದಲ ಪ್ರೇಮಪತ್ರ,

ಗೆಳತಿಗಾಗಿ ಹೆಣೆದ ಮಲ್ಲಿಗೆ ಮಾಲೆ,

ಮದುಮಕ್ಕಳ ಹಾರ, ಅರಳುತಿರುವ ಗುಲಾಬಿ,

ಬೆವರುವಾಸನೆಯ ಮೊದಲ ಸಂಬಳದ ಲಕೋಟೆ

ಮಧುಚಂದ್ರವ ನೆನಪಿಸಿದ ತುಂಬು ಚಂದ್ರಬಿಂಬ,

ಕಣ್ಣೊರೆಸಿದ ಸಾಂತ್ವನದಾಗರ ಅಮ್ಮನ ಸೆರಗು

ಬಾಳಿನುದ್ದಕೂ ಆಧರಿಸಿದ ಅಪ್ಪನ ದುಡ್ಡಿನಚೀಲ,

ಅಜ್ಜನದೊಂದೇ ಆಸರೆಯಾದ ಊರುಗೋಲು,

ಅಜ್ಜಿಯ ಸಾಗದ ಕ್ಷಣವ ನುಂಗುವ ಮುರುಕು ಕನ್ನಡಕ..

ಇನ್ನೂ ಹೀಗೇ ಕೆಲಸಕ್ಕೆ ಬಾರದವು ಅನೇಕ..

ಹೊಸಕಬೇಕಂತೆ,ಇವು ಹುಟ್ಟಿಲ್ಲ ಅನಿಸಬೇಕಂತೆ.



ಜಟ್ಟಿಗಳಲ್ಲ, ಮಲ್ಲರಲ್ಲ, ನಮ್ಮ ನಿಮ್ಮಂಥ ಸ್ಪರ್ಧಿಗಳು

ವೀಕ್ಷಕರಿಗಿಂತ ಗೆಲ್ಲಬಂದವರೆ ಹೆಚ್ಚು..

ಬಹುಮಾನದ ಜಾಗದಲಿತ್ತು - ನೋವು ತಾಕದ

ದಪ್ಪಹೊದಿಕೆಯ, ಸ್ಪರ್ಶಸ್ಪಂದನರಹಿತ ಮೈಮನದ ಕವಚ.











Thursday, January 24, 2013

ವಿಮುಖತೆಯ ಮುಖಾಮುಖಿ


---------------

ನಡೆಯುತ್ತಿದ್ದೇವೆ ನಾನಿತ್ತ ನೀನತ್ತ,

ಭೂತ ಮೈಮೇಲೆ ಬಂದಂತೆ

ವಿಮುಖತೆಯನಪ್ಪಿ.

ಗುರಿಯಿಲ್ಲ, ಗುರುವಿಲ್ಲ,

ಇದ್ದುದನೆಲ್ಲ ಗಾಳಿಗೆ ತೂರಿ.

ಬೇಡವೆನಿಸುತಿಲ್ಲ, ಆದರೆ

ಬೇಕಾದುದರ ಅರಿವಿಲ್ಲ.



ನಡುವೊಂದು ಗೂಟವಿದೆ

ದೇವಳದ ಗರ್ಭಗುಡಿಯ ಆತ್ಮದಂತೆ.

ಎರಡು ಹಗ್ಗಗಳೂ ಬಿಗಿದಿವೆ,

ನನ್ನ ಕಾಲಿಗೊಂದು, ನಿನದಕೊಂದು.

ಅಕ್ಷಯವಾಗುವ ಉದ್ದದಳತೆಯವು,

ಉತ್ತರಕೊಂದು ದಕ್ಷಿಣಕೊಂದು.

ಎಷ್ಟೇ ಎಳೆದರೂ ಬಿಡಿಸಿಕೊಳ್ಳವು

ಗಂಟು ಭದ್ರ, ಹಾಕಿದ್ದು ನಾನು ನೀನು



ಕಾಲಸಾಗರದ ಮುನಿಸಿನಲೆಗಳು

ಅಳಿಸಿದ್ದು ಮರಳ ಅಕ್ಷರವಷ್ಟೆ,

ಹೆಸರನಲ್ಲ, ಬರೆದ ಭಾವವನಲ್ಲ.

ಮೂಡಿದ ಕ್ಷಣವೇ ಅದೊಂದು ದಾಖಲೆ,

ಅಳಿಸಿ ಸುಳ್ಳು ಮಾಡಲಾಗುವುದಿಲ್ಲ.

ಎದೆಗಣ್ಣಿಗೆ ಕಣ್ಣುಮುಚ್ಚಾಲೆಯಾಡಿಸಿ

ಭ್ರಮೆಗೆ ದೂಡಿದರೂ,

ಶ್ರದ್ಧೆಯ ಪ್ರಭೆಗೆ ಮತ್ತೆ ಸಾಕ್ಷಾತ್ಕಾರ..



ಇಂದು ಎಣಿಸಿದ್ದಾಗಲಿಲ್ಲ,

ನಾಳೆಗೊಂದು ಕನಸಿಲ್ಲೆ ಹುಟ್ಟಿತು.

ಕಾಯುವಿಕೆ ಕ್ಷಣಗಳಿಗೆ ಅರ್ಥ ತುಂಬಿತು.

ನಾಳೆಯೂ ಇಂದಿನ ಪ್ರತಿಬಿಂಬವಾದರೆ,

ನಾಳೆಗಳಿಗೆಲ್ಲ ಗುರಿ ಸ್ಪಷ್ಟವಾದೀತು.

ಕಾಯಬಲ್ಲೆ, ಕಾದು ಕುದಿದು ಬೆಂದಾಗಿದೆ.

ಭಾನುಭೂಮಿಯ ಮಿಲನದವರೆಗೆ,

ಗುಲಗಂಜಿ ಏಕವರ್ಣದ್ದಾಗುವವರೆಗೆ.



ಗುಂಡು ಭೂಮಿಯಲಿ ವಿಮುಖತೆಗೆ

ಮುಖಾಮುಖಿಯಾಗುವ ಆಸೆಯಿದೆ.

ಹೊಸಮುಂಜಾವಿಗೊಂದು ಕನಸು

ನಿರಾಸೆಯ ಗರ್ಭ ಪ್ರಸವಿಸಿದ ವರಕೂಸು.

ಉತ್ಸಾಹವದರ ಉಸಿರು

ನನಸಾಗುತ ಬೆಳೆವುದು ಗೊತ್ತದಕೆ,

ನಿರೀಕ್ಷೆಯಲೇ ಒಂದು ದಿನ

ನಾನಿಲ್ಲವಾಗುವವರೆಗೆ.