Friday, January 25, 2013

ಒಂದು ಪಂದ್ಯ, ಒಂದು ಬಹುಮಾನ.


---------------------------

ನಡೆಯಲಿದೆ ಪಂದ್ಯ, ಗಣಪನಲ್ಲ,

ಮೊದಲಿಗಿಲ್ಲಿ ಬಲವೇ ವಂದ್ಯ.



ಸಾಮಾನ್ಯವಲ್ಲ, ಕುಸ್ತಿ- ಕರಾಟೆಯಲ್ಲ,

ವಸ್ತುವಿಷಯವಿನ್ನೂ ಗೋಪ್ಯ, ಬಹಿರಂಗವಾಗಿಲ್ಲ,

ನೋಡಬಂದವರು ಓಡಿಹೋಗಬಾರದಲ್ಲಾ...



ಫಲಕ ತೂಗುಬಿದ್ದಿದೆ- "ಬಲಪ್ರದರ್ಶನ"

ಕೆಳಗೊಂದಷ್ಟು ಹೆಸರಿವೆ, ಹಲವು ಬಣ.

ದಾರಿ ಸೂಚಿತ, ಚಪ್ಪರದಡಿ ಸಿದ್ಧ ಕಣ.



ಪಾರಿವಾಳ-ಗಿಣಿಗಳ ಕಾಲಿಗೆ ಬಿಗಿದು ಹಗ್ಗ

ಹಾರಿಬಿಡಲಾಗಿದೆ, ಅಳತೆಯೊಳಗವು ಕುಣಿದು

ಹಾಡಿದಂತೆ ಕೂಗಿ, ಕಣ್ಮನ ತಣಿಸಬೇಕಿದೆ.



ಅಲಂಕಾರ ಕಮ್ಮಿಯಿಲ್ಲ, ಗೋಡೆಗಷ್ಟು ಸುಣ್ಣ

ಕೃತಕ ಹಸಿರು ಹೂ, ಬಣ್ಣ ವಾಸನೆ ತೀಕ್ಷ್ಣ

ಅತಿಥಿಗಳಿಗೆ ಜಿಂಕೆಚರ್ಮದ ಹಾಸು, ಸುಖಾಸನ.



ಘಂಟೆ ಢಣ್ ಅಂತು, ಕಣ್ಣುಕಿವಿ ನಿಮಿರಿದವು

ತೊಡೆತಟ್ಟಿದ ಕಣ್ಣುಮನದಲಿ ಕ್ರೌರ್ಯದ ಕಾವು

ಮೈಕೈಗೆ ಮೆತ್ತಿದ್ದು ಮಣ್ಣಲ್ಲ, ಕೊಚ್ಚುವ ಕೆಚ್ಚು.



ಕಣದ ನಡುವೊಂದು ಬುಟ್ಟಿ...

ಆಟಿಕೆಗಳು, ಕಂದನದೊಂದು ತೊಟ್ಟಿಲು

ಮೈನರೆದ ಹೊಟ್ಟೆನೋವಿನ ಸಂಗಾತಿ ಚಾಪೆ,

ಕಂಬನಿ ಹೊದ್ದ ಮೊದಲ ಪ್ರೇಮಪತ್ರ,

ಗೆಳತಿಗಾಗಿ ಹೆಣೆದ ಮಲ್ಲಿಗೆ ಮಾಲೆ,

ಮದುಮಕ್ಕಳ ಹಾರ, ಅರಳುತಿರುವ ಗುಲಾಬಿ,

ಬೆವರುವಾಸನೆಯ ಮೊದಲ ಸಂಬಳದ ಲಕೋಟೆ

ಮಧುಚಂದ್ರವ ನೆನಪಿಸಿದ ತುಂಬು ಚಂದ್ರಬಿಂಬ,

ಕಣ್ಣೊರೆಸಿದ ಸಾಂತ್ವನದಾಗರ ಅಮ್ಮನ ಸೆರಗು

ಬಾಳಿನುದ್ದಕೂ ಆಧರಿಸಿದ ಅಪ್ಪನ ದುಡ್ಡಿನಚೀಲ,

ಅಜ್ಜನದೊಂದೇ ಆಸರೆಯಾದ ಊರುಗೋಲು,

ಅಜ್ಜಿಯ ಸಾಗದ ಕ್ಷಣವ ನುಂಗುವ ಮುರುಕು ಕನ್ನಡಕ..

ಇನ್ನೂ ಹೀಗೇ ಕೆಲಸಕ್ಕೆ ಬಾರದವು ಅನೇಕ..

ಹೊಸಕಬೇಕಂತೆ,ಇವು ಹುಟ್ಟಿಲ್ಲ ಅನಿಸಬೇಕಂತೆ.



ಜಟ್ಟಿಗಳಲ್ಲ, ಮಲ್ಲರಲ್ಲ, ನಮ್ಮ ನಿಮ್ಮಂಥ ಸ್ಪರ್ಧಿಗಳು

ವೀಕ್ಷಕರಿಗಿಂತ ಗೆಲ್ಲಬಂದವರೆ ಹೆಚ್ಚು..

ಬಹುಮಾನದ ಜಾಗದಲಿತ್ತು - ನೋವು ತಾಕದ

ದಪ್ಪಹೊದಿಕೆಯ, ಸ್ಪರ್ಶಸ್ಪಂದನರಹಿತ ಮೈಮನದ ಕವಚ.











No comments:

Post a Comment