Wednesday, January 16, 2013



ಹೀಗೊಂದು ಸ್ವಗತ

---------------

ಹಕ್ಕಿ ತೊರೆದೊಂದು ಪುಕ್ಕ,

ಗಾಳಿಯಲೆಯ ಮೌನತೇರಲಿ

ಮೇಲೇರುತೊಮ್ಮೆ ಕೆಳಗಿಳಿದೊಮ್ಮೆ

ಗಮ್ಯವಿರದ ಯಾನಿ ನಾನು.



ಹಕ್ಕಿಗರಿಯ ಪಾತ್ರದಲ್ಲಿ

ಅದರೊಡಲ ಶಾಖವಾಗಿ,

ಹಾರಾಟಕೊತ್ತಾಸೆಯಾಗಿ,

ಚೆಲುವಿನ ಸೆಲೆಯಾಗಿ,

ನೂರುಬಂಧಗಳಲೊಂದಾಗಿ,

ಜೀವಂತವಾಗಿದ್ದೆ.



ನನ್ನಾಸರೆಯದೇ ಹಾರಾಟ

ಗೊತ್ತಿದ್ದೋ ಇಲ್ಲದೆಯೋ..

ಹಕ್ಕಿಯುದುರಿಸಿದ್ದೋ, ನಾನುದುರಿದ್ದೋ

ಬೇರೆಯಾದ ಆ ಕ್ಷಣ

ಜೀವಚ್ಛವವಾದೆ.



ಗಾಳಿ ತೋರಿದ ದಿಕ್ಕು,

ನನದಲ್ಲದ ನಡಿಗೆ,

ನಾಳೆಗಲ್ಲದ ಯಾನ,

ಸ್ಥಿರವಲ್ಲದ ಸ್ಥಾನ,

ನಾನಲ್ಲದ ನಾನಾದೆ.



ಇರಬೇಕು, ಇರುವೆ.

ಉದುರಿ ಉಳಿವುದೂ ಗೆಲುವೇ.

ಪುಟ್ಟಮನದ ಕೈಗೆ,

ಚಿತ್ರದೊಂದು ಮೈಗೆ

ಅಂಟುವ ಗಳಿಗೆಗೆ

ಕಾದು ಸಾಗುವೆ ಇರದ ಗುರಿಯೆಡೆಗೆ.

-------------------------



















1 comment:

  1. ತಮ್ಮ ಕಲ್ಪನೆ, ಉಪಮೆ, ಭಾವಾಭಿವ್ಯಕ್ತಿ ಎಲ್ಲವೂ ಇಷ್ಟವಾಗುತ್ತದೆ.
    ಆದರೆ ಪದಗಳನ್ನು ಪೋಣಿಸುವ ಪರಿ ಕ್ಲಿಷ್ಟವಾಗಿ ಭಾಸವಾಗುತ್ತದೆ. (ಇದು ನನಗಷ್ಟೇ)
    ಎರಡು ಅಥವಾ ಮೂರು ಪದಗಳನ್ನು ಜೋಡಿಸಿಕೊಂಡು ಬರೆಯುವ ಶೈಲಿಯಿಂದ ಸ್ವಲ್ಪ ಬಿಡುಗಡೆ ಪಡೆದುಕೊಂಡು ಸರಳ ಹಾಗೂ ಬಿಡಿಬಿಡಿ ಪದಗಳನ್ನು ಬಳಸಿ ಬರೆದು ನೋಡಿ. ಒಟ್ಟಂದ ಮತ್ತು ಸೌಂದರ್ಯ ಹೆಚ್ಚುತ್ತದೆ ಎಂದು ನನ್ನ ಎಣಿಕೆ.
    ಓದು ಕೂಡ ಮುದ ನೀಡುತ್ತದೆ ಅನ್ನುವುದು ನನ್ನ ಅನಿಸಿಕೆ.

    ReplyDelete