Monday, January 21, 2013

ಬರೀ ನೆರಳಲ್ಲ ನಾನು


----------------

ಅಂದೇಕೋ ಸೌಮಿತ್ರಿ ಅನ್ಯಮನಸ್ಕ...

ಅಣ್ಣನ ವಿರಹದುರಿಯ ಬಿಸಿಯ ಶಾಖಕೆ

ಎಂದಿಲ್ಲದ್ದು ಮನವಿಂದೇಕೆ ಕುದಿಯುತಿದೆ?!



ಸೀತಾಮಾತೆಯ ಮಾಯಾಮೃಗದಾಸೆಗೆ,

ಅಣ್ಣ ನಿರಾಕರಿಸಿ, ಕೊನೆಗೆ ಮಣಿದದ್ದು,

ತನ್ನ ಕಾವಲಿಗಿರಿಸಿ ಬೇಟೆಗೆ ತೆರಳಿದ್ದು,

ದುರುಳ ಸಂಚಿಗೆ ಅಣ್ಣನ ಕೂಗಿನ ದಿರಿಸು,

ತಾ ಮರುಳಾಗಿ ಸೀತೆಯಾಜ್ಞೆಗೆ ಬಾಗಿ, ನಡೆದದ್ದು..

ರಾವಣನ ಕರೆಗೆ ಲಕ್ಷ್ಮಣರೇಖೆ ದಾಟಿ ಸೀತೆ,

ವಿರಹತಾಪದ ಕೂಪಕಣ್ಣನ ತಳ್ಳಿ ಹೋದದ್ದು....



ಬೆಚ್ಚಿಬಿದ್ದ ಲಕ್ಷ್ಮಣ, ಇದೇಕೆ ಹೀಗಾಗುತಿದೆ?!

ಅರ್ಧ ಲಕ್ಷ್ಮಣರೇಖೆ ಪರಿಚಿತ ಮುಖಚರ್ಯೆಯಾದಂತೆ...

ಊರ್ಮಿಳೆಯದಲ್ಲವೇ....ಕಾಡಿತು ನೆನಪು.

ಮೊದಲನೋಟದ್ದಲ್ಲ, ಕೊನೆಯ ಬಾರಿಯದು

ಮಡುಗಟ್ಟಿದ ನೋವಿತ್ತೇ, ಸಿಟ್ಟಿತ್ತೇ, ದೈನ್ಯತೆಯಿತ್ತೇ..

ಭ್ರಾತೃಪ್ರೇಮದ ದೃಷ್ಟಿಯಾವರಿಸಿದ ಕಣ್ಣು

ಅತ್ತ ನೋಡಿರಲೇ ಇಲ್ಲ....

ನಾರುಟ್ಟು, ಜಡೆಕಟ್ಟಿ ಹಿಂಬಾಲಿಸಿದ ಹೆಜ್ಜೆಗೆ

ಜೈಕಾರಗಳ ನಡುವೆ ಆ ಗೆಜ್ಜೆಯಳು ಕೇಳಿಸಲೇ ಇಲ್ಲ.

ಅವಳು ತಡೆಯಲಿಲ್ಲ, ತಾನು ಕರೆಯಲಿಲ್ಲ....



ವನವಾಸದಿ ನೆರಳಪಾತ್ರದ ನಡಿಗೆ,

ಮೈಯ್ಯ ಜೊತೆ ಮನಕೂ ತಾಗುತಿತ್ತು ಮುಳ್ಳು

ದಾಂಪತ್ಯಸುಖಕೆ, ಸಾಮೀಪ್ಯದ ಸೊಗಸಿಗೆ

ಕಾತರಿಸಿದ ಮನದಲೂ ಹಸಿವೆದಾಹಗಳಿತ್ತು.

ರಾಮನೆದೆಗೊರಗಿದ ಸೀತೆಯ ಸಲ್ಲಾಪ

ಉರಿವುದನಿನ್ನೂ ಉರಿಸುತಿತ್ತು....

ಮೆಟ್ಟಿ ಜಿತಕಾಮ, ಜಿತೇಂದ್ರಿಯನಾಗಹೊರಟಿದ್ದೆ...

ನಗೆಯಶಸ್ತ್ರ ಧರಿಸಿ ಅವರ ಜೋಡಿಗೆ ಕಾವಲಿದ್ದೆ.



ಕೆಲಕ್ಷಣಗಳ ವಿರಹಕೇ ಕಣ್ಣೀರಾದ ರಾಮ,

ಇಷ್ಟೂ ದಿನ ತಾ ಹನಿಸಲಿಲ್ಲ, ಇರಲಿಲ್ಲವೆಂದಲ್ಲ,


ಹರಿಯದಷ್ಟು ಘನವಾಗಿತ್ತು...ತನ್ನೊಡಲ ಧುಮುಗುಟ್ಟುವಿಕೆ

ತನ್ನ ರಾಮಗಿಂದೂ ಅರಿವಾಗದುಳಿಯಿತೇ?!

ಆದರ್ಶದ ಬೆನ್ನತ್ತಿದ ನಡಿಗೆ, ಅತಿಮಾನುಷನಾದೆನೇ?!

ಜೈಕಾರ ತುಂಬಿದ ಕಿವಿ ವಾಸ್ತವಕೆ ಕಿವುಡಾಯಿತೇ?!

ಪತಿಧರ್ಮ ಕಡೆಗಣಿಸಿ ಭ್ರಾತೃಸೇವೆಯ ಪುಣ್ಯ ದಕ್ಕೀತೇ?!

ರಾಮನನುಜನಷ್ಟೇ ಅಲ್ಲದೆ ತನ್ನ ತಾನು,

ಊರ್ಮಿಳೆಯ ಪತಿಯಾಗಿ, ಸೌಮಿತ್ರಿಯಾಗಿ

ಕಂಡ ಮನ ಬೊಬ್ಬಿಟ್ಟಿತು- "ಬರೀ ನೆರಳಲ್ಲ ನಾನು.."

1 comment:

  1. ಅಯ್ಯೋ, ಲಕ್ಷಣನ ಸ್ಥಿತಿ ಕೇಳಿ ಮರುಗಿತು ಜೀವ!
    ಹೌದಲ್ಲವೇ ಅನುರಾಧ, ನೀವು ಸೌಮಿತ್ರೆಯ ಒಳಭಾವ ಚೆನ್ನಾಗಿ ಪರಿಚಯಿಸಿದಿರಿ!

    ReplyDelete