ಹುಟ್ಟಿಂದ ಕಲ್ಲದು
----------------
ಸಾಗಿದ್ದೆ ದಾರಿ, ತಲುಪಿದ್ದೆ ಗುರಿ.ಸರಾಗಹಾದಿ, ಇಂತಿಪ್ಪ ಯಾನದಲೊಮ್ಮೆ
ಧುತ್ತೆಂದೊಂದು ಬಂಡೆ...
ಶತಮಾನದಿಂದಿತ್ತು, ಹಾಗೇ...
ಅಲುಗದೆ, ನುಡಿಯದೆ, ಅರಳದೆ, ನೋಯದೆ...
ಇಟ್ಟಿರಿಸಿದಂತೆ, ಗಮನದೊಳ-ಹೊರಗಿರದಂತೆ.
ನಡಿಗೆಗದು ಅಡ್ಡ... ಕಣ್ಣುರಿ......
ಸುತ್ತಿಗೆಯ ತಂದೊಮ್ಮೆ, ಮದ್ದುಗುಂಡಿಂದೊಮ್ಮೆ
ಒಡೆವ ಹುನ್ನಾರ....ಸ್ಥಿರವಸ್ಥಿರಕೆ ಬಾಗಿದಂತೆ
ಒಡೆಯಿತು.... ಅಡ್ಡವಿಲ್ಲವಾಯಿತು..
ಇಲ್ಲವಾಗಿಸಿದ ಜಯದ ಭ್ರಮೆಯದಕೆ,
ಇಲ್ಲವಾಗದುಳಿದ ನಗೆಯಿದಕೆ.....
ದೊಡ್ಡದೀಗ ಸಣ್ಣದಷ್ಟೇ..
ಪುಟ್ಟ ಪುಟ್ಟ ಕಣಕೂ ಅದೇ ಕಲ್ಲೆದೆ, ಗಟ್ಟಿತನ
ಹುಟ್ಟಿಂದ ಕಲ್ಲದು, ಒಡೆದು ಮತ್ತೂ ಕಲ್ಲೇ..
ನೀರೆಂದಾದರೂ ಆದೀತೆ?
----------------------------
ಹೀಗಾಗಬಹುದಿತ್ತು..
--------------------
ನಗೆಯಲ್ಲದ ನಗುವೊಂದುಹನಿಯಿಸಿ, ಬೆಳೆಸಿದೆ ನೋವಬೆಳೆ.
ಹೊತ್ತದ್ದು ಭಾವಗರ್ಭ,
ಮೊಳೆಸಿದ್ದು ನಾನೆಂಬ ನಾನೇ..
ಬಿತ್ತಿದ್ದ್ಯಾರು???
ತಪ್ಪು ದಾಟಿಸಿ ಹಗುರಾಗುವ ನಾನು,
ನೀನೆಂದು ತೋರುವ ಬೆರಳ ದೃಷ್ಟಿ
ಅಲ್ಲಿ ಇಲ್ಲಿ ಎಲ್ಲೂ ಇಲ್ಲದೆಡೆಗಿದೆ.
ನಾನಿಲ್ಲದೆಡೆ ಬೀಜ ಬಿತ್ತಲ್ಪಟ್ಟಿದ್ದರೆ,
ನಿರ್ವಿಕಾರತೆ ಹನಿಯಿಸಿದ್ದರೆ,
ನಿನ್ನ, ಅವರೆಲ್ಲರ ನಗುವೇ ಪೋಷಿಸಿ,
ನಲಿವೆಂಬ ಹೂವಿನ ಗಂಧದಲೆಯಲಿ ನಾ
ಕಂಡೂ ಕಾಣದಂತಿಣುಕಬಹುದಿತ್ತು...
No comments:
Post a Comment