Sunday, January 20, 2013

ಬಾಡಿಗೆಗಿದೆ ದೈವತ್ವ


-------------------

ಕಣ್ಣಿಗೆ ಕಾಣುವ ದೇವರು,

ಅಳಿವ ತಾನಪ್ಪಿ ನಾಳೆಯನುಳಿಸುವ ಶಕ್ತಿ

ಬಾಡಿಗೆಗಿದೆಯಂತೆ...ಇಲ್ಲೀಗ

ಹುಟ್ಟೂ ದುಡ್ಡಿಗೊದಗುವುದಂತೆ.



ಬೇಕಿಲ್ಲ ಪಾಣಿಗ್ರಹಣ,

ವಂಶೋದ್ಧಾರದ ನೆಪಕೆ.

ಬೇಕಿಲ್ಲ ಸಪ್ತಪದಿ,

ತುಳಿವುದಕೆ, ತುಳಿಸಿಕೊಳುವುದಕೆ..

ಬೇಕಿಲ್ಲ ಗೃಹಪ್ರವೇಶ,

ಒಂದ ತೊರೆದು ಇನ್ನೊಂದನಪ್ಪಲಿಕೆ.

ಬೇಕಿಲ್ಲ ಗರ್ಭದಾನಹೋಮ,

ಸತ್ಪುತ್ರಪ್ರಾಪ್ತಿಯ ಆಸೆಗೆ.

ಬೇಕಿಲ್ಲ ಪ್ರಸ್ಥಶಾಸ್ತ್ರ,

ಶುಭಗಳಿಗೆಗೆ ಕಾದು ಬೆರೆವುದಕೆ.



ಬಾಳ್ವೆಯಾಸೆ, ಏಳ್ಗೆಯಾಸೆಗಳಿರದ ಹೆಣ್ಣು

ಹರಿದುದ ಹೊಲಿದು ಜೀವ ತೇಯುತ,

ಹೊಸಹೊಸ ಹರಿಯುವಿಕೆಗೆ,

ಹೊಸಹೊಸ ತೇಪೆಗಳ ಕಲಿಕೆ.

ನಾವೀನ್ಯವೆಂಬುದನೆ ಮರೆತು

ಇಲ್ಲಗಳಿಗೆ ಸೋತು ಶರಣಾದ

ಹೈರಾಣಾದ ಸೃಷ್ಟಿಕಾರ್ಯದ ಕಣ್ಣು.



ನಾಲ್ಕುಗೋಡೆಯ ನಡುವಿನ

ಬೀಜದಾನಕಲ್ಲದೆ,

ಹಳೆಯ ಕೊರತೆ ಹೊಸ ಸಾಧ್ಯತೆಯ

ಒಂದಾಗುವಿಕೆಗೆ ತಲೆಬಾಗಿ,

ಇನ್ನೇನಿರದ ಘಟ್ಟದ ಭಿಕಾರಿಯಂತೆ,

ಹೊಟ್ಟೆಬಟ್ಟೆಯ ಹೆಸರಿಗೆ ಕಂಡರಿಯದೆಡೆಗೆ

ಎಲ್ಲವೆಂದರೆ ಎಲ್ಲ ಬಿಟ್ಟುಕೊಟ್ಟಂತೆ, ಕೊಟ್ಟುಬಿಟ್ಟಂತೆ.



ಹೊಸತನದ ಹುಡುಕುವಿಕೆಗೆ ಬಲಿ

ಹೆಣ್ತನವೆಂದೋ ಬಾಡಿಗೆಗಿತ್ತು.

ನೋಡಿದೋ.. ನಾಗರಿಕತೆಯ ತೆಕ್ಕೆಯಲಿ

ಇಂದು ತಾಯ್ತನವೂ ಬಾಡಿಗೆಗಿದೆ.

ಹೊತ್ತು ಬೆಳೆಸಿದ ದೇಹ ಕಿತ್ತಾಗಲೂ

ಸಿರಿತನಡಿಯಾಳಾಗಿ ನಗುತಿರಬೇಕು.

ಸಂಪತ್ತಿಗೆ ವಾರಸುದಾರನ ಬೆಳೆವ

ಆರೋಗ್ಯಕದು ಒತ್ತಾಸೆಯಾಗಿರಬೇಕು.



ಅನಿಶ್ಚಿತತೆಯಡಿಯೇ ಪ್ರತಿ ಮಾಸ

ಜೀವಸೃಷ್ಟಿಗೆ ಮೊದಲ ಹೆಜ್ಜೆ,

ಜೀವಸತ್ವವ ಬಸಿದು ಗೋಡೆ ಅಣಿಯಾಗಿ,

ಬರುಬಹುದಾದ ಕಂದಮ್ಮಗೊಂದು ಮೆತ್ತೆ.

ಕುಡಿಯೊಡೆಯದ ವಿಧಿಯಾಟದಿ,

ಹೊಟ್ಟೆಗಿಲ್ಲದ ಜುಟ್ಟಿಗಿಲ್ಲದ ಹಸಿವೆಯಲೂ

ಹನಿಹನಿಗೂಡಿದ ರಕ್ತ,

ಧಾರೆಯಾಗಿ ಹರಿದುಹೋದ

ಕಿಬ್ಬೊಟ್ಟೆಯ ನೋವಿನ ನಿರರ್ಥಕತೆಗೂ

ನಗುತ ಸ್ವಾಗತವೀಯುವ ಮನ,

ಹೊತ್ತು, ಕರುಳಬಳ್ಳಿಯಲಿ ಉಣಿಸ ಸಾಗಿಸಿ

ಅದ ತುಂಡರಿಸಿ ಹೆತ್ತ ಕಂದನನೊಪ್ಪಿಸುವಾಗ

ಅಸಹಾಯನಗುವ ಮುಸುಕೊಳಗೆ ಅತ್ತಿತ್ತು.

ಕಣ್ಣಿಗೊತ್ತಿಕೊಂಡ ನೋಟಿನ ಕಂತೆಯ ಬಿಸಿ

ಕಣ್ಣೀರನಾವಿಯಾಗಿಸಿತ್ತು,

ಹಿಂದೆ ತಿರುಗದೆ ಮಂಜುಗಣ್ಣಲಿ

ಮರೆವ ವ್ಯರ್ಥಯತ್ನದಿ

ನಿಷ್ಪಾಪಿ ಹೆಜ್ಜೆ ಸಾಗಿತ್ತು...













No comments:

Post a Comment