Friday, September 20, 2013

ಕೊನೆಯಪಕ್ಷ...

ಅಲ್ಲಿಂದ ಇಲ್ಲಿಯವರೆಗೆ
ಎಲ್ಲ ಕೇಳಿದ ಮೇಲುಳಿದದ್ದು
ಪ್ರೀತಿಸುವ ಮತ್ತು ಪ್ರೀತಿಸುತಲೇ
ತೃಪ್ತನಾಗುವ ಶಕ್ತಿಯ ಕೋರಿಕೆ.
 
ಅದನಿತ್ತುಬಿಟ್ಟೆ ನೋಡು,
ಹೆಚ್ಚುಕಾಲ ಸಂಭ್ರಮಿಸಲಾಗಲೇ ಇಲ್ಲ.
ಈಗ ಬೇಕಿದೆ ತುರ್ತು ,
ಅದ ಮಣಿಸುವ ದ್ವೇಷಿಸುವ ಆನೆಬಲ.
 
ತಪಕಂತೂ ಕೂರಲಾರೆ,
ಜಪ ನಾನರಿತಿಲ್ಲ,
ಹೆಚ್ಚೆಂದರೆ ಕಾಯಬಲ್ಲೆ,
ಕಾಯುತಲೇ ಸಾಯಬಲ್ಲೆ.
 
ಕೊನೆ ಗಳಿಗೆಯಲಾದರೂ ಪ್ರಭುವೇ,
ಉಸಿರುಸಿರನೂ ಕಂಬನಿಯಾಗಿಸಿದ
ಒತ್ತಡದಾಗರಗಳು ಕೆಲವಿವೆ,
ಬಲು ಪ್ರೀತಿಪಾತ್ರವವು ನನಗೆ.
 
ನನ್ನ ದ್ವೇಷಕವು ಸಡಿಲಾಗಲಿ
ನನ್ನ ತಂಪೆದೆ ಕೋಪದ ಕುಲುಮೆಯಾಗಿ
ಕಂಬನಿ ಕುದಿದು ಆವಿಯಾಗಲಿ
ಆ ಆವಿ ನನ್ನ ಕೊನೆಯುಸಿರಿಗೊದಗಲಿ.
 
ಪ್ರೀತಿಯುಂಡು ಜೀರ್ಣಿಸಲಾಗದೆ
ಕಕ್ಕಿದ ಸುಸ್ತಿಗೆ ದ್ವೇಷ ಬೆನ್ನು ಸವರಲಿ.
ಪ್ರೀತಿಯದಾರಿ ಇಷ್ಟು ದುರ್ಗಮವೇ?
ಗೊತ್ತಿರದೆ ಆಯ್ದುಬಿಟ್ಟೆ, ಕೇಳಿಬಿಟ್ಟೆ ಕ್ಷಮೆಯಿರಲಿ.
 
ಪ್ರೀತಿಯ ಸುಳಿವಿರದ ಸುಲಭಮಾರ್ಗದಲಿ
ಜೀವಂತ ಒಂದು ಹೆಜ್ಜೆಯನಾದರೂ ಊರಿಸು.

Thursday, September 19, 2013

ಕ್ಷಮಿಸು.

ದೈವಸಾನ್ನಿಧ್ಯದಲಿ
ಶರಣಾಗತಿಯಡಿ
ಕೈಗುದುರಿದ ಹೂ
ಬಾಡಿದ್ದರೆ, ನಿರ್ಗಂಧವಿದ್ದರೆ
ಹೂವಲ್ಲವೆನಿಸಿದರೂ
ಕಣ್ಣಿಗೊತ್ತಿಕೊಳುವಾಗ
ಪ್ರಶ್ನೆಯಿರುವುದಿಲ್ಲ,
ಕಲ್ಲ ಮೈಮೇಲಿದ್ದುದು
ಅದು, ಪ್ರಸಾದ.
 
ನಿನ್ನ ಸಾನ್ನಿಧ್ಯದಲಿ
ಅದೇ ಶರಣಾಗತಿಯಡಿ
ಎದೆಗುದುರಿದ ಹೂಭಾವ
ಗಡುಸಿದ್ದರೆ, ನಿರ್ಗಂಧವಿದ್ದರೆ,
ಹೂವಲ್ಲವೆನಿಸಿದರೆ,
ಕಣ್ಣಿಗೊತ್ತಿಕೊಳುವ ಯತ್ನಕೆ
ಎದುರಿವೆ ಬರೀ ಪ್ರಶ್ನೆ..
ನಿನ್ನೊಳಗಿಂದ ಬಂದಿದೆ
ಇದು, ಸಂಬಂಧ.

,ಓ ಹಗಲ ದೀಪವೇ..

ದಾರಿದೀಪಕೊಂದು ಜಿಜ್ಞಾಸೆ.
ತಣ್ಣನೆಯ ಬಿಳಿಚಂದ್ರನನಲ್ಲ,
ತನ್ನಂತೆ ಹೊತ್ತಿಉರಿವ
ಕೆಂಪುಸೂರ್ಯನ ಕೇಳುವಾಸೆ.
 
ರಾತ್ರಿಪೂರ್ತಿ ಆ ಕಡೆ, ಈ ಕಡೆ
ಒಂದೇಸಮ ದಾರಿತೋರುವ ದೀಪಕೆ,
ರಾತ್ರಿಯ ಕೊನೆಯಹೆಜ್ಜೆ
ತಾ ಬರೀ ನೆನಪಾಗುಳಿವ ಕಥೆ.
ಹಗಲವ ಬರುವ ಹೊತ್ತು
ಮತ್ತೆಮತ್ತೆ ಕೊಲೆಯಾಗಿ
ತಾ ಪ್ರಶ್ನೆಯಾಗಿಯೇ ಉಳಿದ ವ್ಯಥೆ.
 
ಸುತ್ತ ಸುತ್ತುವ ದೀಪದಹುಳು
ನಗುತಾವೆ, ಇದರಂತರಾಳವ
ರಾಗ ಮಾಡಿ ಗುಯ್ ಗುಡುತಾವೆ...
ದೀಪ ಮುನಿಸಿಕೊಳುವುದಿಲ್ಲ,
ಮತ್ತದೇ ಗೆದ್ದಲುತಿಂದುಳಿದ
ಅರ್ಧಜೀವದ ಕಂಬದಾಸರೆ,
ಬಣ್ಣ ಮಾಸಿದ ಹಿಂದಿನ ತಟ್ಟೆ
ಸಹವಾಸದಲೇ ಹೊತ್ತಿಕೊಳುತದೆ
ಕತ್ತಲಾಗುತ್ತಿದ್ದಂತೆ ಕೆಂಪಗೆ,
ಇದೇ ಮೊದಲಬಾರಿಯೆಂಬಂತೆ.
 
ನಡೆದು ಬರುತಾವಷ್ಟು
ಬಾಯಾರಿದ ದೇಹ
ಹಿಂತಿರುಗುವಾಗ
ಭಾರವಿಳಿಸಿ ತಣಿಸಿ ದಾಹ.
ಬರುವವಕೆ ಮನೆ ಬೇರೆ ಇದೆ,
ಮನಸಲ್ಲಿಟ್ಟು ಬಂದಿದ್ದಾವು..
ತನ್ನಡಿಯವು ಇವೆಲ್ಲಿ ಕಿತ್ತಿಟ್ಟಾವು,
ಎಲ್ಲಿ ಬಚ್ಚಿಟ್ಟಾವು?
ಅವಕಿದೇ ಮನೆ, ಮಂತ್ರಾಲಯವೂ...
 
ಮನಸಿಲ್ಲದ ತಮ್ಮ ದೇಹದ
ತೃಷೆಗೊದಗಿದ ಆ ದೇಹ,
ಮತ್ತದರೊಳಗಿನ ಮನಸುಗಳ
ಕೊನೆಪಕ್ಷ ನೆನಪೂ ಅಲ್ಲ,
ಮರೆವು ಮಾಡಿ ಹೊರನಡೆವ
ನಿರ್ಜೀವ ಕಾಲುಹಾದಿಯ
ಕತ್ತಲೆ ತಾ ತೊಡೆಯಲಾಗದು, ಏಕೆ?
 
ಮನಸನಲ್ಲೇ ಬಿಚ್ಚಿದ ಬಟ್ಟೆಯ
ಮಡಿಕೆಯೊಳಗೆತ್ತಿ ಮರೆಸಿ
ಜತನವಾಗಿಡಲಿನ್ನೂ ಕಲಿಯದ,
ಪ್ರತಿಬಾರಿ ದೇಹವ್ಯಾಪಾರಕೆ
ಮನಸ ಬಲಿಕೊಡುವ
ಆ ಕೋಣೆಯೊಳಗಿನ
ಕತ್ತಲೆ ತಾ ತೊಡೆಯಲಾಗದು, ಏಕೆ?
 
ಒಂದೇ ಒಂದು ಬೀದಿಯ ದೀಪ,
ನನಗೇ ಇಂಥ ಭಾವತಿಕ್ಕಾಟ..
ಜಗದೆಲ್ಲ ಹಾದಿಬೀದಿಗಳ
ಆಗುಹೋಗು, ಒಳಿತುಕೆಡುಕುಗಳ
ಸಾಕ್ಷಿ ನೀನು,
ಓ ಹಗಲ ದೀಪವೇ
ನಿನಲಿಲ್ಲವೇ ಇಂಥವೆಷ್ಟೋ ಸಂಕಟ?

Monday, September 16, 2013

ಅದಲುಬದಲು

ನನ್ನಲೇ ಅದುಳಿದುದು ಗೊತ್ತಿಲ್ಲ, ಸೋಲೋ ಗೆಲುವೋ!
ತಣ್ಣನೆ ಛಳುಕೊಂದು ಅಡಿಯಿಂದ ಮುಡಿಗೆ, ನೋವೋ ನಲಿವೋ!
 
ದಾಟಲಾಗದೆ ಹೊಸಿಲು, ಎತ್ತಿದ ಹೂಹೆಜ್ಜೆ ಹಿಂದಿಡುವಾಗ ಮಣಭಾರ
ಮೀಟದುಳಿದ ತಂಬೂರಿಯೆದುರಿನ ಶ್ರುತಿತಪ್ಪಿದ ರಾಗ ರಾಜ್ಯಭಾರ
 ಸಪ್ತವರ್ಣ ಕಾಲ್ಮುರಿದುಕೊಂಡು ಬಿದ್ದ ಕುಳಿಯೊಡಲು ಬರೀಬಿಳಿ
ಸತ್ತುದಕೆ ಹೊದಿಸುವ, ವಿಧವೆಬಾಳಿಗುಡಿಸುವ ಖಾಲಿಖಾಲಿ ಬಿಳಿ.
 
ತೂಕಕಿಡಲಾಗದ ವಿಷಯ, ಇಲ್ಲೊಳಗಿನ ತಕ್ಕಡಿಯಾಕೋ ಕಣ್ಮರೆ
ಮೂಕವಾಗಿದೆ ಬಹುಶಃ ಇದಿಷ್ಟೇ ಎಂದು ಹೇಳಲಾಗದ ಅಳುಕಿಗೆ.
 
ಅಷ್ಟು ತುಂಬಿಕೊಂಡೂ ಅದು ಹಗುರವೆಂದು ಕೈಲೆತ್ತಿಕೊಡಬಯಸಿದ್ದೆ
ಆಗದೆ ಮತ್ತೊಳ ಬಂದುದು ಎಲ್ಲ ಕಳಕೊಂಡ ಖಾಲಿಯೆಂದುಕೊಂಡೆ..
 
ಆದರೆ ನೋಡು, ನಿನ್ನೆ-ಮೊನ್ನೆಗಿಂತ ಇಂದು ಭರಪೂರ ನನ್ನೊಳಗು
ಅಚ್ಚರಿಯಿಲ್ಲ, ಸಾಲದೇ ಅಷ್ಟಡಿ ಎತ್ತರದ ನೀನು ಒಳಹೊಕ್ಕದ್ದು?
 
ಹುಚ್ಚಿ ನಾನು, ನಿನನಲ್ಲೇ ಹೊರಗಿಟ್ಟು ನಿನ್ನೊಳಹೊಗಬಯಸಿದ್ದೆ,
ಶತಾಯಗತಾಯ ಮುಚ್ಚಿದ್ದ ಕದದೂಡುವ ಒತ್ತಾಯದತಿಥಿಯಂತೆ.
 
ನನ್ನ ಸ್ವಾಗತದಾಲಾಪ ನೈವೇದ್ಯವಾಗಿತ್ತು ಅವಗೆ, ನಿನಗೆ ಪ್ರಸಾದ
ನನನಲ್ಲೇ ಇಟ್ಟು, ನನ್ನೊಳಹೊಗಿಸಿದ್ದು ನಿನ್ನ, ಅವನದೇ ಆಶೀರ್ವಾದ.

ನಾನು ಬರೀ ನಾನಲ್ಲ..

ನಿನ್ನೆದೆಯನೇ ಜಗ ಮಾಡಿ
ಮೂಲೆಯ ಆ ಜಾಗ ಕೇಳಲಾರೆ
ತ್ರಿವಿಕ್ರಮ ನಾನು, ಜಗವನೇ ಹೆಜ್ಜೆಗಳಲಳೆಯಬಲ್ಲೆ.
 
ನಿನ್ನಿರುವನೇ ಅರಿವು ಮಾಡಿ
ಮೊನೆಯಷ್ಟು ಗಮನ ಬೇಡಲಾರೆ
ಕಾಮನಬಿಲ್ಲು ನಾನು, ಲೋಕವನೇ ಸೆಳೆಯಬಲ್ಲೆ.
 
ಕಾಲಗರ್ಭದ ತುಂಬ ನಿನ್ನ ತುಂಬಿ
ಕ್ಷಣವೊಂದರ ದಯಕೆ ಕಣ್ಣೊಡ್ಡಲಾರೆ
ಜೀವಂತಿಕೆ ನಾನು, ಅನಂತಕೇ ಕಣ್ಣ ಹಾಯಿಸಬಲ್ಲೆ.
 
ಗಡಿಯಾರ ತೂಗುಹಾಕಿದ ಮೊಳೆಯಾಗಿ
ಹೊತ್ತು ನೂಕುವ ಕೃತ್ಯ ಹೊರಲಾರೆ
ಗಂಟೆಯ ಮುಳ್ಳು ನಾನು, ಸಮಯ ಮುನ್ನಡೆಸಬಲ್ಲೆ.
 
ಕಣ್ಣ ಸುತ್ತಳತೆಯುದ್ದಗಲ ನಿನ್ನ ಹರಡಿ
ನೀನೆಸೆದ ನೋಟದೊಳಹೊಕ್ಕಲಾರೆ
ದೃಷ್ಟಿ ನಾನು, ನಿನ್ನೆತ್ತರಕೂ ಮೀರಿ ಬೆಳೆಯಬಲ್ಲೆ.
 
ನಿನ್ನ ಪ್ರೇಮಸಾಮ್ರಾಜ್ಯದ ದೊರೆ ಮಾಡಿ
ನೀನೆಸೆದ ಭಿಕ್ಷೆಯಲಿ ತಣಿಯಲಾರೆ,
ಪ್ರೇಮಬಿತ್ತ ನಾನು, ತುತ್ತಿಲ್ಲದೆಯೇ ಮೊಳೆಯಬಲ್ಲೆ.
 
ನನ್ನೆಲ್ಲವನೂ ನಿನ್ನ ಪಾಲುಮಾಡಿ
ಖಾಲಿಯಾಗಿಯೂ ಖಾಲಿ ಉಳಿಯಲಾರೆ
ಒಲವು ನಾನು, ಮತ್ತೆಮತ್ತೆ ಚಿಗುರಬಲ್ಲೆ, ಇರಬಲ್ಲೆ.

ಹಿಂತಿರುಗಿದೆ ಕನಸು

ಖುದ್ದು ಬಂದಿತ್ತಂತೆ ಕನಸಲ್ಲಿಗೆ
ಬರಿಗೈಲಿ ಕಳಿಸಿದ್ದೀಯಂತೆ..
 
ನಿನ್ನನೊಳಗೊಂಡು ತರಲು
ಶ್ರೀಗಂಧದ ಚೌಕಟ್ಟು ತಂದಿತ್ತಂತೆ..
ಖಾಲಿ ಹಿಂತಿರುಗುವಾಗ ಎಂದೂ ಬರದ
ಗೆದ್ದಲುಹುಳು ಬಂದು ತಿಂದವಂತೆ..
ಈಗ ನನ್ನ ಬೋಳುಕನಸಲಿ
ಒಂದಷ್ಟು ಅಳು, ಜೊತೆಗೆ ಗೆದ್ದಲುಹುಳು..
 
ನಿನ್ನ ಹೊತ್ತು ತರಲು
ಗಟ್ಟಿಪಲ್ಲಕ್ಕಿ ತಂದಿತ್ತಂತೆ..
ಖಾಲಿ ಬರುವಾಗ ಕಂಬನಿಹನಿ ಬಿದ್ದು
ತುಕ್ಕುಹಿಡಿದು ಚೂರುಚೂರಾಯ್ತಂತೆ..
ಈಗ ನನ್ನ ಜೊಳ್ಳುಕನಸಲಿ
ಒಂದಷ್ಟು ಕುದಿ, ಜೊತೆಗೆ ತುಕ್ಕಿನಪುಡಿ.
 
ನಿನ್ನ ಸ್ಪರ್ಶಸುಖ ತರಲು
ಮದರಂಗಿ ಬೆರಳು ಬಂದಿದ್ದವಂತೆ..
ಖಾಲಿ ಬರುವ ದಾರಿಯ ನಿರಾಸೆ ಚುಚ್ಚಿ
ರಕ್ತದ ಕೆಂಪು ಮದರಂಗಿಯ ನುಂಗಿತಂತೆ..
ಕುಸಿದುಕೂತ ಕನಸಲೀಗ
ಒಂದಷ್ಟು ಸುಳ್ಳು ಮತ್ತಷ್ಟು ಟೊಳ್ಳು...

**

ಮನಸು ನನ್ನ ಕೈಯ್ಯೊಳಗಿತ್ತು.
ನೀ ಒಂದೇ ಹೆಜ್ಜೆಯಳತೆ ದೂರ.
ನಿರ್ವಾತ ತುಂಬಿದಂತರ
ಗಾಳಿಬೆನ್ನೇರಿದ ವೇಗದಾಸೆ ಕ್ರಮಿಸಲಾಗಲಿಲ್ಲ.
 
ಒಂದೇ ಗಳಿಗೆ, ಯಥಾಸ್ಥಾನ ಹೊಕ್ಕಿದೆ ಮನಸು.
ನೀ ಪಡೆವುದಾಗಲಿಲ್ಲ ಎಂದರೂ
ನಾನೀವುದಾಗಲಿಲ್ಲ ಎಂದರೂ
ಅಂಥ ವ್ಯೆತ್ಯಾಸವೇನಿಲ್ಲ..
 
ಹಠಾತ್ತನೆ ದಿಕ್ಕುಬದಲಿಸಿವೆ
ಗಾಳಿ ಬೀಸಿದೆಡೆ ತೂರಿಕೊಳುವ ಹೆಜ್ಜೆ
ಮೈಮನಸು ಹಿಂಬಾಲಿಸಿ ಕಾಲ ದೂರ ಸಾಗಿದೆ..
ನಿರ್ವಾತ ನಿಧಾನ ಒಳಹೊಕ್ಕಿದೆ.
 
ನೆನಕೆಯಿಲ್ಲ, ಕನವರಿಕೆಯಿಲ್ಲ.
ಪ್ರಾಣವಿಲ್ಲ, ಪ್ರಮಾಣವೂ ಇಲ್ಲ.
ಪ್ರೀತಿಪ್ರೇಮ ಬಿಡು, ಉಸಿರಾಟವೇ ಇಲ್ಲ.
ಈಗ ಕೊಡುವುದೇನು, ಪಡೆವುದೇನು?
 
ಎಲ್ಲೋ ಕೆಲವು ಉಸಿರು ಕಡ ಸಿಕ್ಕರೆ,
ಒಳಹೊಕ್ಕಿ ಹೋರಾಡಿ ಅವು ಉಳಿದು ದಕ್ಕಿದರೆ,
ನಿರ್ವಾತದಾಳ್ವಿಕೆ ಹೇಗೋ ಪತನವಾದರೆ....
ನಿರ್ಜೀವ ಬಾಳಿಗಿಂದು ರೆ ಸಾಮ್ರಾಜ್ಯದ್ದೇ ಆಸರೆ..