Sunday, April 28, 2013

ನಿನಗೆನ್ನ ಮೇಲಾಣೆ.

------------------
ಮೋಡಸಖೀ, ತುಸು ನೋಡಿತ್ತ ದೃಢ ನಿಂತು
ಉದುರಿಸೊಂದಷ್ಟು ಮಾತಮುತ್ತು, ನಗೆಮುತ್ತು...
ಧರಿಸುವೆ ಧರೆ ಮಾಡಿ ಪದಕ, ಓಲೆ, ನತ್ತು.


ನಿರ್ವರ್ಣ ನಿನ್ನ ಮುತ್ತುದುರಿ ಪ್ರಕೃತಿಯುಡಿಯಲಿ, ಮಳೆಬಿಲ್ಲಿನೆಲ್ಲ ಬಣ್ಣವಾದಾವು, ವ್ಯರ್ಥವಾಗದಿರಲಿ.
ಹಸಿರಾದಾವು, ಉಸಿರಾದಾವು ನನ್ನ ಬಿಸಿ ಮೈಯ್ಯಲಿ.

ಗಾಳಿಯಿನಿಯನ ಸಂಗ ನೀ ಬಯಸುವುದೂ,
ಅವ ಕೈಹಿಡಿದು ನಿನ್ನ ಸೆಳೆದೊಯ್ಯುವುದೂ,
ಮಿಲನದಾತುರದಲೆಲ್ಲ ತರವೇ ಹೌದು.

ವಸಂತನಿರಬೇಕು ಕಿವಿಯೂದಿ ಕಳುಹಿದ್ದು.
ತಾಪಕೂ, ಶೀತಕೂ ನಲ್ಲೆ ಸಂಗವೆ ಮದ್ದು.
ಹಾಗವ ಬಂದದ್ದು ನೋಡು ರಥವೇರಿ ಖುದ್ದು.

ಬಲ್ಲೆ, ವಿರಹದೊತ್ತಡ ನಿನ್ನ ಕರಗಿಸುವಷ್ಟಿದೆ,
ಅವ ಬರಲು ನಿನ ಕಣ್ಣ ಕೋಲ್ಮಿಂಚು ಹೇಳಿದೆ,
"ಹೊರಡು" ಎಂದವಸರಿಸಿ ಅವ ಗುಡುಗಿದ್ದೂ ಕೇಳಿದೆ.

ಹೆಚ್ಚಲ್ಲ, ತುಸುಕಾಲ ನನದು- ನಿನದಿರಲಿ,
ಕಾದೆದೆ ನನದೂ ಹೌದು, ಬಿಸಿಯಷ್ಟು ತಣಿಯಲಿ,
ಸಿಹಿ ಹೆಚ್ಚು ಕಾದಷ್ಟು ಮಿಲನದಲ್ಲಿ, ಅವನೇ ಕಾಯಲಿ.

ನಿನಗಷ್ಟೇ ಸಖಿ ನಾ, ನನನೊಮ್ಮೆ ನೋಡು.
ಕೇಳು ನೀನಿರದಾಗ ಹೆಣೆದ ತಾಪದ ಹಾಡು.
ಸ್ನೇಹಸಿಂಚನ ನನ್ನ ಹಕ್ಕು, ಸಿಂಪಡಿಸಿ ಬಿಡು.

ಸುರಿಸದಿರೆ ನೀನೀಗ ಪ್ರೀತಿ, ನನ್ನೆದೆ ಬಿರಿವುದು.
ಬಿರುಕಲ್ಲಿ ನನ್ನೊಡಲ ಜೀವಸಂತತಿಯಳಿವುದು.
ಬರಡೆನಿಸಿ ಹೋಗದಿರು ಹಾಗೇ, ನಿನಗೆನ್ನ ಮೇಲಾಣೆ...



(ಈಗಷ್ಟೇ ಮೈಸೂರಿನಲ್ಲಿ ಸ್ವಲ್ಪ ಮಳೆಯಾಯಿತು, ಆದರೆ ಸಂಜೆಯೆಲ್ಲಾ ಸುರಿಯದೆ ಆಟವಾಡಿಸುತ್ತಾ ಇದ್ದ ಕಾರ್ಮೋಡ ಹೀಗೊಂದು ಬರಹಕ್ಕೆ ಕಾರಣವಾಯಿತು.)

ಕಂದಗೊಂದು ಮಾತು.

------------------------------
ನಾ ನಡೆದು ನಿನಗೆ ದಾರಿ ಮಾಡುವಾಸೆ,
ಸೆರಗ ಹಿಡಿದೇ ನಡೆದು ನೀನು
ತಳ್ಳಿ ಎದುರಾದ ತಡೆ ಸಾಗುವುದ ಕಾಂಬಾಸೆ.....

ನಾನಿರದ ಕ್ಷಣ ಎಚ್ಚರಿಸುವವರಾರೇ?
ಕಾದು ಕುಳಿತಿಹರೆಲ್ಲ,
ತಂಗಾಳಿ, ಚಂದ್ರನಂಥವರೂ ಚುಚ್ಚುವವರೇ...

ಕಣ್ಮುಂದೆ ಬಾಳೊಂದು ಬಟಾಬಯಲು
ತುದಿ ನೀನು ಹೊರಟಲ್ಲಿ,
ಕೊನೆ ಕಾಣದಷ್ಟು ವಿಶಾಲ ಸವಾಲು...

ಇದ್ದೀತು ಹಚ್ಚಹಸುರಿನ ಹಾಸಿನಚೆಲುವೇ.
ತಿಳಿ- ನೆಲಕಂಟಿದ ಹುಲ್ಲಲೂ,
ಅಂಟುವ, ಚುಚ್ಚುವ, ಕೀವಾಗಿಸುವ ಮುಳ್ಳಿರುತಾವೆ...

ಇದ್ದೀತು ಮುಕ್ತತೆಯ ತಂಪು ಮೆಲುಗಾಳಿ.
ಸುಳಿಗಾಳಿ ಬರುವಾಗ ಸದ್ದಿರುವುದಿಲ್ಲ,
ಸಿಲುಕಿದಾಗ ಮುಂದೆ ದಿಕ್ಕು ತಿಳಿಯದ ದಾರಿ.

ಇದ್ದೀತು ಹಲಬಗೆಯ ಹೂವುಹಣ್ಣು.
ರುಚಿ ನೋಡುವುದು ತಪ್ಪಿರದು,
ನಂಬಿ ಕೆಟ್ಟ ನೋವು ಮಾತ್ರ ಗುಣವಾಗದ ಹುಣ್ಣು...

ತೋರಿಸಿಯೇನು ಬದುಕಿನ ಅಂದಚಂದವನೂ.
ತಿಳಿ ಕಂದ, ಚಂದಕ್ಕೆ ಪರಿಚಯದ ಹಂಗಿಲ್ಲ.
ಎದೆಯಲ್ಲಿ ಹಾಲು ಸುರಿದೀತು,
ನಿರ್ಭಯರಾಗದ ಪಲ್ಲವಿಯೊಂದು ಹುಟ್ಟೀತು,
ಕಣ್ಣು ತಂತಾನೇ ಅರಳೀತು,
ಮನಸು, ಮತ್ತೊಮ್ಮೆ ಕೇಳು, ಮಿದುಳಲ್ಲ,
ಮನಸು ನಿಸ್ಸಂಶಯ ಅದರೆಡೆಗೆ ನಡೆಸೀತು...

ಬಯಲಲ್ಲಿ ಮುಳ್ಳು ಹೊತ್ತ ಹುಲ್ಲಿರದ
ಪಥವೆನ್ನ ಹೆಜ್ಜೆ ಮೂಡಿಸಿವೆ,
ಉದ್ದಕೂ ನಾ ತಳೆದ ಎಚ್ಚರಿಕೆಯ
ನಿಲುವು ಮಿದು ಹಾಸಾಗಿದೆ.
ಹಳ್ಳದಿಣ್ಣೆಗಳಿವೆ, ಪ್ರಕೃತಿ ಸಹಜ ಘಟ್ಟಗಳು.
ಕಾಲಿಗೆ ಕಣ್ಣು ಹಚ್ಚು, ಬಿದ್ದರೂ ಏಳೆನೆನದಿರು.
ತಪ್ಪನೊಪ್ಪು ಮತ್ತಪ್ಪದಿರು, ಪೆಟ್ಟಾಗದೇ ಸಾಗುವೆ.

ಸವಿ ನುಡಿದು ಅದಷ್ಟೇ ಉಣಿಸಲಾರೆ
ಕಹಿಯುಣ್ಣುವುದೂ ಅನಿವಾರ್ಯ ಜೀವಕೆ.
ಸ್ವಸ್ಥ ನೀ ಬೆಳೆವುದೆನ್ನ ಕನಸು.
ಮಗಳೇ, ಸಾವರಿಸಿ ನಡೆದ ಹೆಜ್ಜೆಗೇ
ಆತ್ಮತೃಪ್ತಿಯ ನಾಳೆಗಳಿವೆ.
ಸಂಭಾಳಿಸಿಕೊಳುವ, ಕೆಡುಕ ಗುರುತಿಸಿ,
ತಡೆ ದಾಟಿ ಮುನ್ನಡೆವ ಧೃತಿಯಾಗು.
ನಡೆಯಬೇಕಾದು ನೀನು, ನಡೆದು ನಾ ತೋರಬಲ್ಲೆ
ಕಿತ್ತೆಲ್ಲ ಸರಳವಾಗಿಸಲಾರೆ, ನೀಡಬಲ್ಲೆ-
ಹೆಚ್ಚೆಂದರೆ ಮೋಸದ ಛದ್ಮವೇಷ,
ಮತ್ತದರ ನಾಟಕದ ಪರಿಚಯ.







ಕೆಂಪಾಗದಿರಲಿ..


--------------------------

ಅಜ್ಜನ ಅಜ್ಜನೋ ಅವರಜ್ಜನೋ ಇರಬೇಕು,

ಹೊಂದಿದ್ದರಂತೆ ಅಷ್ಟಗಲ ನೆಲದ ನೆಲೆ.

ಗೋಡೆ, ಹೊಸಿಲು,ಬಾಗಿಲುಗಳದೊಂದು ಮನೆ,

ಅಂಗಳದಲೊಂದು ತುಳಸಿಕಟ್ಟೆ, ಬಾವಿಕಟ್ಟೆ...

ಒಂದಿತ್ತಂತೆ ಬಲು ಎತ್ತರದ ಇನ್ನೊಂದು ಕಟ್ಟೆ.

ಎಲ್ಲಿಲ್ಲದ ಮರ್ಯಾದೆ, ಭಯಭಕ್ತಿಯದರತ್ತ.

ಅರಿಸಿನಕುಂಕುಮವಲ್ಲ, ನಂಬಿಕೆಯ ಪೂಸಿ,

ಗಂಧದ ಕಡ್ಡಿಯಲ್ಲ, ಶ್ರಧ್ಧೆಯ ಕಂಪ ಹರಡಿ,

ಅಡಿಗೆ ನೀರಲ್ಲ, ನಿಷ್ಠೆಯ ಧಾರೆ ಹರಿಸಿ,

ದೀಪವಲ್ಲ, ಆಗದು-ಕೂಡದುಗಳನೇ ಬೆಳಗಿ,

ಪೂಜಿಸಿದ್ದು ಎಲೆಹಸಿರಿಲ್ಲದ ಹೂಬಿಡದ,

ಕಾಯಿ-ಬೀಜದ ಮುನ್ನಡೆಯಿಲ್ಲದ,

ಇದ್ದಷ್ಟೇ ಇದ್ದುಳಿದ ಒಣ ಕಾಷ್ಠವನ್ನು.

ಬೇರು ಮಾತ್ರ ಕಟ್ಟೆ, ಅಂಗಳಗಳ ಮೀರಿ,

ಮನೆಯ ಮನಕೂ ಆಳವಾಗಿಳಿದಿತ್ತು,

ಉಸಿರಾಡುತಿತ್ತು, ಮನೆಯುಸಿರೇ ಅಗಿತ್ತು..



 ಅಜ್ಜನಿಂದ ನನ್ನಜ್ಜನವರೆಗೆ

ಎಲ್ಲರೂ ಎರೆದೆರೆದು ಪೂಜಿಸಿದ್ದೇ ಪೂಜಿಸಿದ್ದು.

ಸುತ್ತ ಚುಚ್ಚುತಿತ್ತು, ಗೀರುತಿತ್ತು,

ಅದೃಶ್ಯ ಗಾಯ ಮೂಡಿಸುತಿತ್ತು,

ಹರಿದ ನೆತ್ತರು ಮಾತ್ರ ಗಾಢ ಕೆಂಪೇ ಇತ್ತು...

ನನ್ನಪ್ಪನಿಗೋ ಆ ಕೆಂಪು ಕಂಡೂ ಕಂಡೂ

ಬೇಸರವಾಗಿತ್ತು, ಬೇರೊಂದು ಬಣ್ಣ ಕಾಣುವಾಸೆ...

ಎರೆದುದನ್ನು, ಪೂಜಿಸಿದ ರೀತಿಯನ್ನು ಸ್ವಲ್ಪ

ಬದಲಾಯಿಸಿ ನೋಡಿದ್ದೂ ಹೌದು...



ಕೆಂಪು ನೆತ್ತರ ಕಂಡು ನನಗೆ ವಾಕರಿಕೆ-ಬವಳಿ,

ನಾ ಎರೆದದ್ದದೇ, ಹಚ್ಚಿದ್ದು ಮಾತ್ರ ಬೇರೆ ದೀಪ.

ಕಾಷ್ಠದ ನಿರ್ವರ್ಣವೀಗ ನನ್ನಂಗಳದಲಿಲ್ಲ,

ಬೇರೂ ಸ್ವಲ್ಪಸ್ವಲ್ಪ ಸಾಯುತಿದೆ.

ಅದೇ ಕಟ್ಟೆಯಿದೆ,

ನಂಬಿಕೆಯನೇ ಪೂಸಿ, ಶ್ರಧ್ಧೆ ಕಂಪಲಿ,

ನಿಷ್ಠೆಯೆರೆದು, ಪ್ರೇಮದ ದೀಪ ಹಚ್ಚಿಟ್ಟೆ.

ಇಂದು ಹಸಿರು ಚಿಗುರಿದೆ, ನಾಳೆ ಹೂವೂ ಹುಟ್ಟೀತು,

ಒಂದು ಪ್ರಾರ್ಥನೆ-

ಕೆಂಪು ಹೂ ಮಾತ್ರ ಹುಟ್ಟದಿರಲಿ..























Tuesday, April 23, 2013

ನೋವಿಗಿಲ್ಲ ಜಗದ ಹಂಗು..

----------------------
ಬಣ್ಣವಂತೆ, ಕುಸುರಿಯಂತೆ,
ರಾಗವಂತೆ, ತಾಳವಂತೆ,
ಮಿದುವಂತೆ, ನವಿರಂತೆ,
ಸಿಹಿಯಂತೆ, ಪಕ್ವವಂತೆ,
ಕಂಪಂತೆ, ಸೊಂಪಂತೆ..
ಅಳುವ ಕಣ್ಣಿಂದ, ಬಾಯಿಯಿಂದ,
ಮನದಿಂದ ಚಂದ ಬೇಡುತಿದೆ ಲೋಕ.

ನುಂಗಬೇಕು, ಇಂಗಬೇಕು,
ಒಳಗೇ ಹೆಪ್ಪುಗಟ್ಟಿ ಹರಳಾಗಬೇಕು,
ಕಿರುಬೆರಳುಂಗುರ ಮಾಡಿ ಧರಿಸಬೇಕು..
ಕಕ್ಕಬಾರದು, ಇಕ್ಕಬಾರದು,
ಬರೀ ಪಡೆಯಬೇಕು, ಹೊಂದಬೇಕು,
ಚುಚ್ಚುತಿದ್ದರೂ ಒಡವೆಯಾಗಿಸಬೇಕು.

ಬಿದ್ದವಗೊಂದು ಗುದ್ದು, ಮತ್ತೆದ್ದೇರಬೇಕು.
ಗೆದ್ದವ ಬಾವುಟದ ಗರುಡ ಪಟ...
ಕಹಿಯುಂಡು, ಉಟ್ಟು, ಹೊದ್ದು ಮಲಗೆದ್ದವ
ಸಕ್ಕರೆ ಲೇಪದ ಮಿಠಾಯಿ ಹೇಗಾದಾನು?!
ಉಣುವ ಬಾಯಿ ಸವಿಯೇ ಬಯಸುವುದು,
ಬಾಯನಲ್ಲ, ನೋವು ಕಿವಿಯ ಹುಡುಕುವುದು.
ಮುಚ್ಚಿಟ್ಟರೂ ಬೂದಿ ಒಳಗಿನ ಕೆಂಡ,
ಬಳಿಸಾರಿದವರ ಸುಟ್ಟೇ ಸುಡುವುದು.

ಮುಟ್ಟಲಿ ಬೆರಳು ಕೆಂಡ ಸುಡದಷ್ಟು ತಂಪ ಧರಿಸಿ.
ದಮ್ಮಿದ್ದರೆ ಬನ್ನಿ,
ಕರಾಳ ಬಿಕ್ಕಿಗೆ ಕೊನೇಪಕ್ಷ ಮೂಕಕಿವಿಯಾಗಿ,
ಒಡೆದ ಒರಟು ಹಸ್ತವ ಮಿದುಮಾಡುವ ಬೆಣ್ಣೆಯಾಗಿ,
ಕಹಿಯ ಮರೆಮಾಡುವ ಸಿಹಿ ರಸಗ್ರಂಥಿಯಾಗಿ,
ವಾಸನೆಯ ಕಂಪಾಗಿಸುವ ಕಸ್ತೂರಿಯಾಗಿ..

ಬೇಡುತಿಲ್ಲ ನೋವು ನಿಮ್ಮ ಸಾಂಗತ್ಯ,
ಅದು ಅಯಸ್ಕಾಂತ, ನೀವೇ ಕಪ್ಪುಕಬ್ಬಿಣದ ಚೂರುಗಳು..
ಸಾಧ್ಯವಾದರೆ ನಿಲ್ಲಿ ಸೆಳೆತ ಮೀರಿ
ಆಗದಿದ್ದರೆ ನಿರೀಕ್ಷೆಯ ಗಾಳಿಗೆ ತೂರಿ.
ನೋವು ಸಿಂಗರಿಸಿಕೊಳಬೇಕಿಲ್ಲ,
ಪ್ರಸ್ತುತ ಪಡಿಸಿಕೊಳಬೇಕಿಲ್ಲ, ಅಡಗಬೇಕಿಲ್ಲ,
ಅಷ್ಟೇ ಯಾಕೆ, ಮೆಚ್ಚಿಸಬೇಕಿಲ್ಲ.

Monday, April 22, 2013

ನಿನಗಾಗದಿದ್ದರೆ....

-----------------------
ಇರಲಿಬಿಡು, ನೀ ಜಗಕೆಲ್ಲ ಚಂದಿರ,
ಹರಡಬೇಕು ಎಲ್ಲೆಡೆ ಚಂದ್ರಿಕೆಯ ಹಂದರ.
ಅಡ್ಡ ಬಂದೀತು ಮೋಡ, ಮರ, ಪುಟ್ಟ ಹಕ್ಕಿ,
ನೀ ಇಣುಕಲಾಗದಿರೆ, ಬಿಟ್ಟುಬಿಡು.
ನಾ ನಿರುಕಿಸುತಲೇ ಇರುವೆ.
ನನಗೊಂದೇ ಅಕಾಶ, ಅದಕೊಂದೇ ಶಶಾಂಕ.

ಇರಲಿಬಿಡು ನೀ ನೆಲೆಯಿರದ ತಂಗಾಳಿ,
ಬೀಸುತಿರಬೇಕು ನೀ ಲೋಕಸಂಚಾರಿ.
ಅಡ್ಡ ಬಂದೀತು, ಗೋಡೆ, ಬೆಟ್ಟ, ಗುಡ್ಡ,
ರಿಂಗಣಿಸಲಾಗದಿರೆ ಈ ಹೆಬ್ಬಾಗಿಲ ಗಾಳಿಗಂಟೆ, ಬಿಟ್ಟುಬಿಡು.
ನನ್ನ ಹೆಬ್ಬಾಗಿಲೇ ಹಿಂಬಾಲಿಸೀತು.
ಅದಕೊಂದೇ ದಾರಿ, ಉದ್ದಕೂ ನಿನದೇ ಮೋಡಿ.

ಇರಲಿಬಿಡು ಹೂವೇ, ನೀ ಉದ್ಯಾನವನದಾಸ್ತಿ,
ಸೆಳೆಯಬೇಕು ಊರಿನೆದೆಯ ಆಸಕ್ತಿ.
ನೀರು, ಮಣ್ಣು, ಸುತ್ತುಮುತ್ತೂ ತಪ್ಪಿದ್ದೀತು,
ನನ್ನ ತೋಟದಲರಳಲಾಗದಿರೆ ಬಿಟ್ಟುಬಿಡು.
ನನ್ನ ತೋಟವೇ ನಿನ್ನಡಿಗೆ ಬಂದೀತು..
ಅದಕೆ ನಿನದೇ ಭಕ್ತಿ, ಮತ್ತಷ್ಟೇ ವ್ಯಾಪ್ತಿ.

ಇರಲಿಬಿಡು ಪ್ರೇಮವೇ, ನೀ ವಿಶ್ವವ್ಯಾಪಿ,
ಏರುತಿರಬೇಕು ನೀನೆಂದೂ ಊರ್ಧ್ವಮುಖಿ.
ಅಡ್ಡ ಬಂದೀತು ಹಮ್ಮುಬಿಮ್ಮು, ಅಭಿಮಾನ,
ನನ್ನ ಗಮನಿಸಲಾಗದಿದ್ದರೆ, ಬಿಟ್ಟುಬಿಡು.
ನಾನೇ ಎಕ್ಕರಿಸುವೆ, ನಿನ್ನೆಡೆಗೇರುವೆ.
ನನಗೆ ನೀನೇ ಗುರಿ, ಬರುವೆ ಎಲ್ಲ ಮೀರಿ.



Saturday, April 20, 2013

ರಾಮನವಮಿಯಂದು..


-----------------------

ರಾಮಾ, ನೀನಿಂದು ಮತ್ತೆ ಹುಟ್ಟಿಬಿಟ್ಟೆ.

ನೇರ ಒಳಗಿಂದಲೇ ಉದಯಿಸಿಬಿಟ್ಟೆ.

ಪೂರಾ ಬದಲಾದ ರೂಪದಲಿ,

ನನದಲ್ಲದ ಚಿಂತನೆಯ ಬೀಜದಲಿ..



ವ್ಯಕ್ತಿಯಾಗಲ್ಲ ನೀ ಬೆಳೆದದ್ದು,

ಸಮಷ್ಟಿಯ ಮುಕ್ತಿಮಾರ್ಗಕೆ ದೀಪ್ತಿಯಾಗಿ.

ಮಾದರಿಯಾಗೋ ಹಾದಿಗೆ ಮುನ್ನುಡಿಯಾಗಿ.

ತ್ಯಾಗಪಥಕೊಂದು ಮಾರ್ಗದರ್ಶಿಯಾಗಿ.

ತಾಳ್ಮೆ-ಸಂಯಮ ರೂಪವೆತ್ತ ಮೂರ್ತಿಯಾಗಿ.

ಚಂದಮಾಮನ ಬೇಡಿದ್ದೇ ಕೊನೆ,

ಮುಂದೆಂದೂ ನಿನ್ನ ಹಠಕಾಸ್ಪದವೇ ಇರಲಿಲ್ಲವೇನೋ.

ಜಗ ನಿನ್ನೆದುರು ಹಠವಿಟ್ಟದ್ದು,

ನೀ ಒಪ್ಪಿದ್ದು, ಮಣಿದದ್ದು...

ಕೊನೆಗದು ಮಹಾತ್ಮನಾಗುವ ನಿನ್ನ

ತಂತ್ರವೆನಿಸಿದ್ದು....



ಪಿತೃವಾಕ್ಯಕೆ ಬಗ್ಗಿದ್ದು ನೀನಲ್ಲ,

ಬಗ್ಗಿಸಿದ್ದು ಪಿತನ ಹತಾಶೆ ಮತ್ತು ನಂಬಿಕೆ.

ಸೀತೆಗೆ ನಾರುಡಿಸಿದ್ದು ನೀನಲ್ಲ,

ಪತಿಭಕ್ತಿ ಮೆರೆವ ಅವಳ ಹಠಸಾಧನೆ.

ತಮ್ಮಗೂ ಬೇಕಿತ್ತು ಭ್ರಾತೃಪ್ರೇಮದ ಕಿರೀಟ,

ತ್ರೇತಾಯುಗಕೆ ರಾಮನ ಪರಮನಾಗಿಸುವ ಜಪ...

ಕಪಿಸೈನ್ಯದ ಬಲಮೆರೆಸೆ ಸೇತು ಕಟ್ಟಿಸಿದೆ,

ತಾಳ್ಮೆಬಲ ನಿರೂಪಣೆಗಷ್ಟು ವರುಷ ಏಕಾಂಗಿಯಾದೆ,

ನಿನಗಸಾಧ್ಯವೆಂದಲ್ಲ, ನೀ ಅವತಾರ ಪುರುಷ...

ತಾರೆಗಾಗಿ ಮರೆಯಾಗಿ ಗೆದ್ದಪವಾದ ಹೊತ್ತೆ

ತುಮುಲವಡಗಿಸಿ ತೋರಬೇಕಿತ್ತು ಸಮಚಿತ್ತ,

ಸಾಮಾನ್ಯನಲ್ಲವಲ್ಲಾ, ನೀನದೇ ಅವತಾರ ಪುರುಷ...



ಧರ್ಮ ಧರ್ಮವೆನುತಲೇ ವನದಿ ಕಳೆದ

ಹದಿನಾಲ್ಕು ವರುಷದ ನಿನ್ನ ಯೌವ್ವನ

ಕಾಣಲೇ ಇಲ್ಲ ಜನಕೆ, ಮಹಾನ್ ಎನಿಸಿದ್ದು

ಸೀತೆಯ ತ್ಯಾಗ.

ಅದು ಮರುಗಿದ್ದು,

ಸೌಮಿತ್ರಿಯ ನಿಷ್ಠೆಗೆ,

ಹನುಮನ ಭಕ್ತಿಗೆ.

ಬೆರಗಾದದ್ದು ರಾವಣನ ಪೌರುಷಕೆ,

ಕಪಿಸೈನ್ಯದ ಸಾಹಸಕೆ.

ನಿನ್ನ ತ್ಯಾಗ ಅವತಾರದ ಹೆಸರಲಿ ನಗಣ್ಯ.



ಸೀತೆಯ ದೇಹಕೆ ಅಗ್ನಿಪರೀಕ್ಷೆ,

ನೀ ವಿಧಿಸಿ ಕೆಳಗಿಳಿದದ್ದು, ಅವಳು ಗೆದ್ದು ಮೇಲೇರಿದ್ದು..

ನಿನ್ನತನ ಸುಟ್ಟದ್ದು, ನೀ ಸ್ವಂತದೆದುರು ಸೋತದ್ದು-

ಜಗ ಕಂಡಿಲ್ಲ, ನೀ ತೋರಿಲ್ಲ.

ರಾಜಧರ್ಮ ಪಾಲನೆಯ ಮೋಡಿ ಕವಿದಿತ್ತಲ್ಲಾ..

ಸೀತೆ ವನ ಸೇರಿದಳು,

ಬಸುರಿಗೆ ತುಂಬುವನದ ಆರೈಕೆ,

ತುಂಬುಮನದ ಹಾರೈಕೆ...

ತಪ್ಪೆಸಗಿಲ್ಲದ ನೆಮ್ಮದಿ...

ಹಾಗೂ ಭಾರವನತ್ತು ಕಳೆಯಬಲ್ಲಳು..

ನಿನಗೆ ರಾಜ್ಯಭಾರ, ಅರಮನೆವಾಸ...

ಸುತ್ತುಮುತ್ತೆಲ್ಲಾ ಟೀಕೆ, ಪ್ರಶ್ನೆಗಳು ಬಲು ತೀಕ್ಷ್ಣ..

ಜೈಕಾರದ ಸದ್ದು ಅಲ್ಲೆಲ್ಲೋ ಬಲು ಕ್ಷೀಣ...

ಸಡಿಲಾಗುವಂತಿಲ್ಲ, ಭೋರ್ಗರೆದು ಅಳುವಂತಿಲ್ಲ

ಸುಮ್ಮನಿರಬೇಕು..ನೀ ಅವತಾರಪುರುಷ.



ಸೀತೆ ಕೊನೆಗವನಿಯ ಮಡಿಲು ಹೊಕ್ಕಳು

ಆತ್ಮಹತ್ಯೆ ಅದು ಅಂದದ್ದು, ನೀ ಕೊಂದೆ ಎಂದದ್ದು

ಮಾರ್ನುಡಿಯುತಿವೆ ಇಂದೂ ಎದೆಯಿಂದೆದೆಗೆ ಬಡಿದು...

ನೀ ಹೊಕ್ಕಿದ್ದೂ ಸರಯೂವಿನ ಮಡಿಲನೇ ಅಲ್ಲವೇ?

ಅವತಾರ ಪುರುಷನದು ಅವತಾರಸಮಾಪ್ತಿಯಷ್ಟೆಯೇ?!

ಎದೆಭಾರ ನಿನದೂ ಇದ್ದಿರಬಹುದು,

ತಪ್ಪಲ್ಲದ ತಪ್ಪೆಸಗುತಾ ನೀನೂ ಅತ್ತಿರಬಹುದು,

ಒಪ್ಪಲ್ಲದ ನಿರ್ಧಾರದಡಿ ಅಪ್ಪಚ್ಚಿಯಾಗಿರಬಹುದು,

ಪ್ರಶ್ನೆ- ಜೊತೆಗೊಂದಷ್ಟು ದೂರು ನನವೂ ಇವೆ,

ಇಂದವನು ಅಡಿಗಿಟ್ಟು, ನಿನ್ನ ಮೇಲಿಟ್ಟು ನೋಡುವಾಸೆ

ಈಗಷ್ಟೇ ಜನಿಸಿರುವೆ, ಹೊಸದಾಗಿ ಅಲಂಕರಿಸುವಾಸೆ...

ಸ್ವಲ್ಪ ತಿನಿಸಿ, ಕುಡಿಸಿ, ಆಡಿಸಿ, ಮಲಗಿಸಿ, ಮತ್ತೆಬ್ಬಿಸಿ,

ನಿನ್ನಂದ ಬರೀ ನಿನ್ನವತಾರದ ಚಂದಗಳ ಸವಿಯುವಾಸೆ...

Thursday, April 18, 2013

ಅವನಿಯಂಥ ಅವಳು ಮತ್ತು ಅವನು.


-------------------------

ತಣಿಸೆ ಮತ್ತೆ ಬರುವೆನೆಂದು ಹೋದ

ಇನಿಯನ ಸದ್ದಿಲ್ಲ, ಪರದೇಶವಶ..

ಭಾಷೆಯಿತ್ತ ಕೈ ಅಜ್ಞಾತ ಪಾಶವಶ.

ಪಡೆದ ಕೈ ಮೀಟಿ ಮನದ ತಂತಿ,

ಆಲಾಪ ಮಾತ್ರ ಶೋಕಭಾವ ವಶ...



ಮಡಿಲಲಿಳಿದ ಮುಸಲಧಾರೆ

ವರ್ಷಿಸಿದ್ದು ಅವನ ಪ್ರೇಮ,

ಹುಟ್ಟಿಸಿದ್ದು ಕೋಟ್ಯಾಂತರ ಜನ್ಮ..

ತೆರೆದ ಬಾಯ್ಗಳಷ್ಟೇ ತುಂಬುವ ಕೈಗಳು,

ತುಂಬಿತುಳುಕುವ ಸಮೃದ್ಧಿಯ ಕೊಡುಗೆ.

ತುಂಬುಮೇಲ್ಮೈ ಹಸಿವ ಭರಿಸುತಾ ಖಾಲಿಯತ್ತ,

ಒಡಲಕುಡಿಗಳು ನೂರ್ಮಡಿಸುತಲೇ ಅನಂತದತ್ತ...



ಹೊಂದಿದ್ದು, ಉಟ್ಟದ್ದು, ಪಡೆದದ್ದು,

ಉಸಿರಾಡಿದ್ದು, ತಾನುಣುವದ್ದು,

ಒಡಲಾಳದ್ದು, ಧಮನಿಯಲಿ ಹರಿವದ್ದು...

ಒಳಗ ಬಗೆದು ತೆಗೆದದ್ದು...ಹೀಗೇ..

ಅವಳೆಲ್ಲ ಇತ್ತೂ ತೆರೆದ ಬಾಯ್ಗಳು ತೆರೆದೇ ಇವೆ,

ಕೊಡುವ ಕೈಗಳೀಗ ತಡಕಾಡುತಿವೆ..

ಅವಗರಿವಿಲ್ಲವೋ, ಬರಲಾರದಳಲೋ

ಇನ್ನೂ ಬಂದಿಲ್ಲ...



ಅಡಿಯಲೆಲ್ಲೋ ಉಳಿದಿತ್ತು ಅವನಾರ್ದೃತೆಯ ಪಸೆ...

ಈಗದೂ ಆರುತಿದೆ .

ಅವಳೊಣಗುತಿದ್ದಾಳೆ ಜೊತೆಗವಳ ಕುಡಿಗಳೂ..

ಅಳಲು ಬಿರುಕಾಗಿ ಎಲ್ಲ ಸೀಳಿದೆ

ಮುತ್ತು ಮರೆತ ತುಟಿ, ಮಾತು ಮರೆತ ನಾಲಿಗೆ

ಅವನುಲಿಯ ಮರೆತ ಕಿವಿ, ಸ್ಪರ್ಶ ಮರೆತ ಚರ್ಮ,

ಕಣ್ಣೀರೂ ಬತ್ತಿದ ಕಣ್ಣು, ಒಣಪ್ರಾಣವೆಳೆದ ಮೂಗು,

ಹುಡುಕಿ ಅಲೆದ ಪಾದ, ಕೊರಗಿ ಸೊರಗಿದೆದೆ..

ಉರಿ.. ಬರೀ ಉರಿಗೆ ಬಾಳು ಬರಡಾಗಿದೆ.



ಮಿಣುಕೆನುವ ಆಸೆ ಬರಿದೇ ನೋಡುತಿದೆ

ಕರಿಮೋಡಕೊಮ್ಮೆ ಅವನಾಕೃತಿ,

ಮತ್ತೊಮ್ಮೆ ಅದು ಅವನಲ್ಲದ ಭ್ರಾಂತಿ,

ಗಾಳಿಯತ್ತ ದಯನೀಯ ದೃಷ್ಟಿ,

"ಅವ ಬಾರದಿದ್ದರೂ ಸರಿ, ನೀ ಹೊತ್ತುತಾರೇ

ಕೂಡಿಟ್ಟಿರಬಹುದು ನನಗಾಗಿ ಒಂದಷ್ಟು ಮುತ್ತು,

ಒಂದಷ್ಟು ಮಾತು, ಕತೆ-ಕವಿತೆ,

ಒಂದಷ್ಟು ಕಣ್ಣೀರು, ಒಂದಷ್ಟು ಕೋಪತಾಪ,

ತಣಿದೇನು ಅವನ ಸಂದೇಶಕೇ...

ನೀ ತರುವ ಅವನಂತರಂಗದ ಸ್ಪರ್ಶಸಖ್ಯಕೇ...."

Wednesday, April 17, 2013

ಸತ್ಯವೂ ಅರ್ಧ, ಸುಳ್ಳೂ ಅರ್ಧ.


-----------------------

ಅರ್ಧ ತುಂಬಿದ ಚಂದ್ರ,

ಅರ್ಧ ದಾರಿ ಸವೆದ ರಾತ್ರಿ,

ಅರ್ಧ ನಿದ್ದೆಯಲಿ ಧಾತ್ರಿ,

ಅರ್ಧ ಜೋಗುಳ ಧಾಟಿ ಮಂದ್ರ...



ಗೂಬೆ ಕೂಗು ಸಾರಿದರ್ಥವೂ ಅರ್ಧ,

ಜೀರುಂಡೆಯ ದನಿಯಾನವೂ ಅರ್ಧ,

ಮಂದಮಾರುತ ಬೀಸಿದ್ದೂ ಅರ್ಧ,

ಕಾರ್ಮೋಡ ಹನಿಸಿದ್ದೂ ಅರ್ಧ...

ಅತೃಪ್ತಿ-ತೃಪ್ತಿಯ ಕಣ್ಣಾಮುಚ್ಚಾಲೆಯೂ ಅರ್ಧ,

ಅರ್ಪಣೆ-ಸ್ವೀಕೃತಿಯ ಹಿಡಿಹಿಡಿಯಾಟವೂ ಅರ್ಧ.

ಬೆವರಿಳಿಸೋ ಸೆಕೆ, ಅದನಾವಿ ಮಾಡೋ ತಂಗಾಳಿ,

ಅರೆಮುಚ್ಚಿದ ಕಣ್ಣ ನಿದ್ದೆ,

ಅರೆತೆರೆದ ಕಣ್ಣ ಕನಸು- ಎಲ್ಲ ಬರೀ ಅರ್ಧರ್ಧ...



ಅರ್ಧ ನುಡಿದ ಆ ಮಾತುಗಳ

ಪೂರ್ತಿ ಬರೆಯ ಹೊರಟ ಪತ್ರವೂ ಅರ್ಧ...

ಪ್ರೀತಿ ವ್ಯಕ್ತ ಮಾಡುವ ಆ ನೋಟದ

ಹಿಂದಿನೆರಡು ಕಣ್ಣು ತೆರೆದಿವೆ ಅರ್ಧ...

ರಾತ್ರಿರಾಣಿ ಅರಳಿದ್ದೂ ಅರ್ಧ,

ಹೇಳಿದ್ದೂ ಅರ್ಧ, ಕೇಳಿದ್ದೂ ಅರ್ಧ...

ಕಾಲದ ಹೆಜ್ಜೆ ಹೊರಳಿದ್ದೂ ಅರ್ಧ.

ಈ ಕ್ಷಣದ ನಡೆಯ ಹಣೆಬರಹವೇ ಅರ್ಧವಿರಲು

ಪೂರ್ತಿ ಅರ್ಥವಾಯಿತೆಂದು ನೀ ಬಗೆದದ್ದು ಹೇಗೆ,

ಅರ್ಥೈಸಿ ಗೆದ್ದೆನೆಂದು ನಾ ಬೀಗಿದ್ದು ಹೇಗೆ?



ಒಲವೇ, ಪ್ರತಿ ಗಳಿಗೆಯೂ ಅರ್ಧ ಸತ್ಯ

ಈ ಕ್ಷಣಕೆ ತಾ ಪೂರ್ಣ, ಹಿಂದಿನದು ಅಪೂರ್ಣ,

ಮುಂದಿನದು ಬಣ್ಣಿಸಲಾಗದೊಂದು ಬಣ್ಣ.

ತಿಳಿದೆನುನುವುದೂ, ಇಲ್ಲವೆನುವುದೂ ಸುಳ್ಳು

ಬಾಳುತಾ ಸಾಗುವುದಷ್ಟೇ ಸತ್ಯ.

ಅರಿವುದ್ಯಾಕೆ, ಮರೆವುದ್ಯಾಕೆ, ಮತ್ತೆ

ತಪ್ಪೆಂದು ಜರೆವುದ್ಯಾಕೆ?

ಜನ್ಮಾಂತರದ ಕಲ್ಪನೆಯಡಿ ಸಾವೂ ಅರ್ಧವೇ..

ಕೊನೆಯ ಗಮ್ಯವೂ ಅರ್ಧವಿರಲು,

ಪೂರ್ಣತೆಯ ಹಂಗೇಕೆ, ಹಂಬಲವೇಕೆ?

Tuesday, April 16, 2013

ಈ ಹಾಡುಗಳೇ ಹೀಗೆ.


------------------------------
ಈ ಹಾಡುಗಳೇ ಹೀಗೆ.
ರಾಗ ಸಂಯೋಜಿಸಿಕೊಂಡೂ,
ಭಾವ ಸಂವೇದಿಸಿಕೊಂಡೂ,
ಎಡವದಂತೆ ಮೆತ್ತನೆ ನಡೆಸಿದ
ಕೊರಳಲಿ ಹಾಡಿಸಿಕೊಂಡೂ
ಕೆಲವೊಮ್ಮೆ ವಶವಾಗದುಳಿಯುತ್ತವೆ.

ಅಪರಿಚಿತವಾಗಿಯೇ ಉಳಿಯುತ್ತವೆ
ಹಾಡುವಾತಗೆ, ಕೇಳುವಾತಗೆ,
ಓದುವಾತಗೆ ಒಮ್ಮೊಮ್ಮೆ ಬರೆದಾತಗೂ...
ಕಹಿಯೆಂದು ಮೂಡಿಸಿದ್ದು ಸಿಹಿಯ ನಕ್ಷತ್ರದಿ ಹುಟ್ಟಿ
ಜನಕಗೇ ಕಣ್ಣುಮೂಗು ತನದಲ್ಲವೆನಿಸುವಂತೆ...

ಸೂರ್ಯಗರ್ಪಿತ ಕವನ ಅಪ್ಪನಿಗೆ,
ಭೂಮಿಗರ್ಪಿತವಾದದ್ದು ಅಮ್ಮನಿಗೆ,
ಹೂವಿಗರ್ಪಿತವಾದುದು ಪ್ರೀತಿಯಲ್ಪಾಯುಸ್ಸಿಗೆ,
ದುಂಬಿಗರ್ಪಿತವಾದುದು ಪ್ರಿಯತಮಗೆ...
ತುತ್ತು ಯಾರಿಗೋ, ಬಾಯಿ ಯಾರದೋ...

ಅನುಭವದ ಕೂಸಿಗೆ ಭಾವತೀವ್ರತೆಯಲಂಕಾರ,
ಪರಕಾಯಪ್ರವೇಶಕ್ಕೆ ಬರೀ ಆವೇಶದಾಡಂಬರ
ಅದು ಇದರಂತೆ, ಇದು ಅದರಂತೆ...
ನೋಡುಗನ ಕಣ್ಣಲಿನ್ನಷ್ಟು ಬಣ್ಣ ಸಾವಿರ
ಧ್ವನಿತಂತಲಿನ್ನೂ ನೂರು ತರಂಗಾಂತರ,
ಕೇಳುವ ಕಿವಿಗೆ ಕೊನೆಗೊಂದು ರೂಪಾಂತರ.

ಎಲ್ಲೋ ಹುಟ್ಟಿ ಬೆಳೆದು, ಎಲ್ಲೋ ಮನೆ ಬೆಳಗುವ
ಮನೆಮಗಳಂತೆ,
ಎಲ್ಲೋ ಅರಳಿ ಎಲ್ಲೋ ಪೂಜೆಗೊದಗುವ
ಹೂಮಾಲೆಯಂತೆ,
ಕೆಲಗಳಿಗೆಯಷ್ಟೇ ಕೆಲ ಕೈಗಳ ವಶ..
ಹಲ ಮಜಲುಗಳಲಿವಕೆ ಹಲವಾರು ವೇಷ...

ಹುಟ್ಟಿಸಿದವ, ಬೆಳೆಸಿದವ, ಅರ್ಥೈಸಿದವ,
ಅಭಿವ್ಯಕ್ತಿಸಿದವ, ಜಗಕೊಪ್ಪಿಸಿದವ
ಎಲ್ಲ ಬೇರೆಬೇರೆ..
ಒಳಗೊಳುವವರ ಹುಡುಕುತಲೇ ಸಾಗುತವೆ,
ಅರ್ಥ ಅನರ್ಥಗಳ ನಡು ನರಳುತವೆ,
ಅಯೋಗ್ಯ ತಾಣದಲೇ ಮೆರೆಸಲ್ಪಡುತವೆ,
ಮೈಮರೆಯದೆ, ಶರಣಾಗದೆ ಕೃತಘ್ನವೆನಿಸುತವೆ...





Monday, April 15, 2013

ನನಗಿದೇ ಇಷ್ಟ.


-------------

ಅತಿಯಾದರೆ ಎಲ್ಲವೂ ಕಷ್ಟ ಅಂದೆಯಲ್ಲಾ,

ಅತಿಯಾಗದೆ ಖುಶಿಯೆಲ್ಲಿಯದು ಒಲವೇ?

ಮೇಲುಮೇಲಿನ ತೇಲಾಟ ನಿರ್ಜೀವಿಗಳದು,

ಮುಳುಗಿಸುವ ಭಾರವಷ್ಟೇ ಜೀವಕೆ ಸ್ವಂತದ್ದು



ನೋವು, ಕಣ್ಣೀರು, ಮುನಿಸುಗಳೇ ಬದುಕು,

ನೋವೆಂದು ತಲೆ ಕತ್ತರಿಸಿಟ್ಟರದು ಸಾವು.

ಸರ್ವಸಂಗ ಪರಿತ್ಯಾಗ ಜೀವನ್ಮಂತ್ರವಾದ

ಜಗದ ತುಂಬೆಲ್ಲ ಸನ್ಯಾಸಿಗಳು ಮತ್ತವರ ಶಾಂತಿ.

ಬಾಳು ನಡೆಯಿರದೆ ಖಾಲಿಯಾಗತೊಡಗೀತು,

ಇಲ್ಲ, ನಿಂತ ನೀರಾಗಿ ಕೊಳೆತೀತು.

ಶಾಂತಿಯ ಹುಟ್ಟು, ಯೌವ್ವನಗಳೆಲ್ಲ

ಭಾವ ಸ್ಪರ್ಶವಿರದೆ ವ್ಯರ್ಥವಾದೀತು.



ಬಾಲರವಿಯ ಮುದ್ದು ಮೃದುತ್ವವೂ ಬೆಳೆದು,

ಎಳೆ ಬಿಸಿಲಾಗಬೇಕು, ಬಿರುಬಿಸಿಲಾಗಬೇಕು,

ಮತ್ತಳಿದು ಶಾಂತ ಸಂಜೆಯಾಗಬೇಕು,

ನಾಳೆ ಅದೇ ಮರುಕಳಿಸೆ ಅವ ಮುಳುಗಬೇಕು,

ಮತ್ತೆದ್ದು ಮೂಡಿ ಬರಬೇಕು- ಇದಲ್ಲವೇ ನಿಯಮ?



ಈ ಪ್ರೇಮವೂ ಹಾಗೆ, ಮೊದಲ ಕಚಗುಳಿಯಳಿದು,

ಬಿಸಿ ಚುಚ್ಚಬೇಕು, ಉರಿವ ಬರೆಯಾಗಬೇಕು,

ಗಾಯ ಮಾಯ್ದುಳಿವ ಕಲೆಯಾಗಬೇಕು,

ನಾಳೆ ಹೊಸದಾಗಿ ಹುಟ್ಟಿ ಬರಲಿಂದು

ಮೌನದೆಡೆಯಲಿ ಮರೆಯಾಗಬೇಕು



ಏರಿದಷ್ಟೂ ಕುಸಿವ ರಭಸವೂ ಜೋರು,

ಮತ್ತೆದ್ದೇಳುವ ತೀವ್ರತೆಯೂ ಜೋರು.

ಪುಟಿದೇಳುವ ರೋಮಾಂಚ ಸುಖಕಾಗಿ

ಧೊಪ್ಪನೆ ಬೀಳುವುದೆ ನನಗಿಷ್ಟ.

ಹುಟ್ಟಿಂದಲೇ ನಾನೊಂದು ತೀವ್ರತೆ,

ತೀವ್ರವಾಗುತಲೇ ಸಾಗುವುದಷ್ಟೇ ಕಲಿತೆ.

ಮುಳುಗಿ ಉಸಿರುಗಟ್ಟಿದರೂ,

ದಡದಿ ಬೆಚ್ಚನೆ ಕೂತರೂ,

ಜೀವನ ಯಾತ್ರೆ ಒಂದೇ ಕಡೆಗೇ ತಾನೇ?!











Sunday, April 14, 2013

ಒಂದು ಮಾತು

---------------------
ತಂಗಾಳಿಯೇ ಒಂದು ಮಾತು
ನೀ ಬೀಸದಂದು ನಾ
ಸುಟ್ಟು ಕರಕಲಾಗಲಿಕ್ಕಿಲ್ಲ,
ಬೆಂದು ಮುದ್ದೆಯಾಗಲಿಕ್ಕಿಲ್ಲ,
ಧಗೆಗೆ ಬಾಡಿಹೋದೇನು.

ತೂಗುಯ್ಯಾಲೆಯೇ ಒಂದು ಮಾತು-
ನೀ ತೂಗದಂದು ನಾ
ತುಂಡು ಚಂದ್ರನ ನಿನ ಬಿಂಬ ಮರೆಯಲಿಕ್ಕಿಲ್ಲ,
ಚಲನೆ ಮರೆತ ಜಡವಾಗಲಿಕ್ಕಿಲ್ಲ,
ನಲಿವಿರದ ನಡೆಯಾದೇನು.

ಕನಸೇ ಒಂದು ಮಾತು-
ನೀ ಮೂಡದಂದು ನಾ
ರಾತ್ರಿಯೇ ಕಹಿಯೆನ್ನಲಿಕ್ಕಿಲ್ಲ,
ನಿದ್ರೆಯೇ ಸುಳ್ಳೆನ್ನಲಿಕಿಲ್ಲ,
ನಾಳಿನಾಸೆ ತೊರೆದೇನು.

ಪ್ರೇಮವೇ ಒಂದು ಮಾತು-
ನೀ ತೊರೆದಂದು ನಾ
ಮುಗಿಯಿತೆಂದೆಲ್ಲ ಕೈ ಚೆಲ್ಲಲಿಕ್ಕಿಲ್ಲ,
ಹುಚ್ಚು ಕೆಚ್ಚಲಿ ಮೈ ಮರೆಯಲಿಕ್ಕಿಲ್ಲ,
ಉಸಿರಾಡುವ ಹೆಣವಾದೇನು.









Saturday, April 13, 2013


ದ್ವೀಪವಾದ ಎದೆಯಲೊಮ್ಮೆ..

--------------------.
ಹೇಗೆ ಮೂಡಿತ್ತೋ, ನಿಂತಿತ್ತೋ?!
ತಾನೇ ಚಿಮ್ಮಿಸಿದ ನೆತ್ತರೋ,
ಕಣ್ಣು ಸುರಿಸಿದ ಕಂಬನಿಯೋ,
ಬಂಧಗಳು ಒಸರಿಸಿದ ಆರ್ದ್ರತೆಯೋ...
ಜಲ ಸುತ್ತುವರಿದು ನಾಲ್ಕುಕಡೆ
ಎದೆ ನಡು ದ್ವೀಪವಾಗಿತ್ತು...

ಮಣ್ಣಹೆಂಟೆ ಇಲ್ಲಿಗ್ಯಾರು ಹೊತ್ತರೋ?!
ಭಾವದಲೆ ಹಿಂಜರಿಯುತಾ ಬಿಟ್ಟು ಹೋದುದೋ,
ನೆನಪ ತೆಪ್ಪದಿ ಮೂಟೆ ಸಾಗಿ ಬಂದುದೋ,
ಮನದ ಮೀನನಡೆ ಹೆಜ್ಜೆಗಂಟಿ ಬಂದುದೋ...
ನೀರೊಳು ಜರಿಯದೆ ಸ್ಥಿರವಾಗಿ ನಿಂತು
ಎದೆ ದ್ವೀಪವಾಗುಳಿದಿತ್ತು..

ಒಂದು ಹೊಸಿಲೂ ಮೂಡಿತ್ತು,
ಬಳುಕಾದ ಗೆರೆ, ಅರಿಸಿನಕುಂಕುಮವಲ್ಲದ
ಅಪರಿಚಿತ ರಂಗು ಅದರ ಮೇಲಿತ್ತು...
ಒಳಹೊರಗು ಬೇರ್ಪಟ್ಟ ಗೊಂದಲದ ದನಿ,
ತುದಿಗಿಟ್ಟ ಹೂವಲೂ ನಿರ್ಬಂಧದ ಧಾಟಿ..
ಒಳಗಲ್ಲಿ ಎದೆ ದ್ವೀಪವಾಗಿತ್ತು...

ಹಸಿರ ಹಾಸು, ಬೆಳಗಿನಿಬ್ಬನಿ,
ಸಂಜೆಯ ತಂಗಾಳಿ, ಹಗಲ ಬೇಗೆ, ನಡುವೊಂದು ಹೂ...
ಈಜಿ, ದಾಟಿ, ಹೊರಸಾರುವಾಸೆ
ಪುಟ್ಟ ಹೂಪಾದದ ಸಂಕ್ರಮಣದ ಓಂಕಾರ
ಮಿತಿ ಎಚ್ಚೆತ್ತ ಶಂಖಾನಾದದಿ ಅಡಗಿತು...
ತುಸು ನಡುಗಿ ಹೊಸಿಲು, ದ್ವೀಪವಲ್ಲಾಡಿತ್ತು.

ಹೊರಗೊಂದಿದ್ದರೂ, ಒಂದು ಒಳಗಿದೆ ಪಾದ,

ಮಿತಿಯನೆಬ್ಬಿಸಿದವರೇ ಇದು ನಿಮ್ಮ ಪುಣ್ಯ.
ಅದಕೂ ಇದಕೂ ನಿಮದು ಜೊತೆಯಾದರೊಳಿತು.
ಒಳಗುಳಿದರೆ ಹಿಂದುಳಿಯುವಿರಿ,
ಹೊರಗಿಟ್ಟರೆ ಕಳಚಿಕೊಳುವಿರಿ...
ದ್ವೀಪದಿ ಮುಕ್ತಿದೀಪವೀಗ ಬೆಳಗಿದೆ...







Wednesday, April 10, 2013

ಅಂದು-ಇಂದು


-----------------
ಸಡಿಲಾದ ಅಪ್ಪುಗೆಯಲಿ ಕಾಲದ್ದೆ ಕೈ
ಅಂದೊಮ್ಮೆ ಬಿಗಿಗೆ ಉಸಿರೂ ಸೋತಿತ್ತು,
ತಬ್ಬಿದ್ದ ಮೌನಕ್ಕೆ ಶಬ್ಧ ತಲೆಬಾಗಿತ್ತು,
ಸತ್ತ ಮಾತಲಿ ಪ್ರೀತಿಯ ಹುಟ್ಟಿತ್ತು,
ಆ ಅನುಭವ ಅನುಭೂತಿಗೊಯ್ದಿತ್ತು..

ನೆನಪು ಜೋಕಾಲಿಯಲಿ ಜೀಕಿದ್ದೆ ಹೆಳೆ
ಇಂದು ಶುಷ್ಕವೆನಿಸಿದೆ,
ಉಸಿರು ನಿಡಿದಾಯ್ತು ನೋವೆಳೆದೆಳೆದು,
ಮೌನ ಗೈರು, ಮಾತಿನದೆ ಕಾರುಬಾರು,
ಪ್ರೀತಿ ಗುಬ್ಬಚ್ಚಿ ಹೆದರಿ ಮುದುಡಿದೆ,
ಕೊನೆಯತ್ತ ದೂಡುವ ಕಾಲಕೆದುರು ಹಾರಿ
ಸೋತಿದೆ, ಕ್ಷೀಣ ಬಾಳ್ವಾಸೆಯಾಸರೆ....

ಏನಾಯ್ತೋ, ಏಕಾಯ್ತೋ...!!
ಎಲ್ಲ ಮುಗಿದ ಭಾವದ ಭಾರ,
ಸತ್ತುದ ಸುಟ್ಟು ಬಂದಾಗಿನ ಶೂನ್ಯತೆ,
ನಡೆದ ಕಂದನ ಖಾಲಿತೊಟ್ಟಿಲ ವ್ಯಥೆ,
ಮೈಯ್ಯೆಲ್ಲ ಆವರಿಸಿ ಸಹಸ್ರಾಕ್ಷನ ಗೋಳಂತೆ
ಕಣ್ಣರಳಿಸಿ ನೋಡಲೇಬೇಕಾದ ಕತೆ..
ಅವು ಕಣ್ಬಿಟ್ಟಲ್ಲೆಲ್ಲಾ ಗಾಯವಾಗಿವೆ.
ಬಾಳು ಬಿಲ್ಲು ನಾಳೆಯೆಡೆಗೆ ಬಿಟ್ಟ
ಆದರೆ ಗುರಿಯಿರದ ಬಾಣವಾಗಿದೆ...

Monday, April 1, 2013

ಕಾಲಕೋಡುವುದಷ್ಟೇ ಗೊತ್ತು...


--------------------------
ರಾತ್ರಿ ಹೆತ್ತೊಪ್ಪಿಸಿ ಕಣ್ಮುಚ್ಚಿದೆ,
ಹಸುಗೂಸು ನಸುಕ
ಕಾಲನ ತೆಕ್ಕೆಗೆ,
ಹೊತ್ತೋಡುವುದಷ್ಟೇ ಗೊತ್ತವಗೆ,
ಇನ್ನೇನೂ ಅಲ್ಲ...

ನಗು ಹೂವು, ಅಳು ಇಬ್ಬನಿ,
ಕಾಲ್ಗೆಜ್ಜೆ ಹಕ್ಕಿಯುಲಿ, ದನಿ ಕರುವ ಕರೆಯಲಿ.
ಎಲ್ಲಕೂ ಜಗ ಚೆಲುವೆಂದಿತು,
ಏಳ್ಗೆಯ ಮೆಟ್ಟಿಲ ಮೆಚ್ಚಿ, ಮೆಟ್ಟಿ ಮುನ್ನಡೆಯಿತು
ಮುಟ್ಟಿ ಮೈದಡವಿದವರಿಲ್ಲ...
ಕಾಲಕರಿವಿಲ್ಲ, ಅದಕೋಡುವುದಷ್ಟೇ ಗೊತ್ತು,

ಕಣ್ಚುಚ್ಚುವ ರವಿಯ ಕಣ್ಕುಕ್ಕಿತು ಯೌವ್ವನ,
ತಡವಿಲ್ಲ, ಎತ್ತರದ ಹುಂಬತನ ಬೋರಲು,
ಕಾವಲಿಲ್ಲದ ತೆರಕೊಳ್ಳುವಿಕೆ ಕೆಳಗಂಗಾತ...
ಬಿಸಿಯ ಬಿಸಿಯಾಗಿಸಿದ ಹೆಣ್ತನ ಸೂರೆ,
ಕಾವು ಲೋಕವ ಬಿಟ್ಟಿಲ್ಲ,
ಕಾಲಕರಿವಿಲ್ಲ, ಅದಕೋಡುವುದಷ್ಟೇ ಗೊತ್ತು..

ತಳ್ಳಲ್ಪಟ್ಟು ನೀರಿಗೆ ಈಜಿನಳುಕು ಮಾಯ
ತಟಕೀಜುತಾ ಈಗಾಕೆ ಶಾಂತ ಸಂಧ್ಯೆ,
ಮಾಗಿದ ತಂಪು ಉರಿಸಿದ್ದಕೆ ಸವಾಲು..
"ಅವನಿಟ್ಟುಕೊಂಡದ್ದು, ನಾ ಸೂಳೆಯಲ್ಲ"
ಕೂಗಿದ್ದು ಕೆಂಗೆನ್ನೆಯ ನಗು,
ಕಾಲಕರಿವಿಲ್ಲ, ಅದೋಡುತಲೇ ಇದೆ.

ಭೂಮಿ ಬಿರಿದಂತೆ ಸೀತೆಗೆ,
ಇರುಳೋಡಿ ಬಂದಿದೆ, ಕೈಯ್ಯಗಲ ಚಾಚಿ...
ಕಾಲದೋಟದಿ ಕಂದ ಬೆಳೆದ ಸುಖ,
ಇಹವ್ಯಾಪಾರ ಬಳಸಿದ ನೋವಲಿ
ಲೀನವಾಯ್ತು, ಸಂಜೆ ತಾಯ್ತೆಕ್ಕೆಯಲಿ..
ತೆಕ್ಕೆ ಹಗುರಾದುದೂ ಗೊತ್ತಿಲ್ಲ,
ಕಾಲಕೋಡುವುದಷ್ಟೇ ಗೊತ್ತು...









ಬೀಗದಿರು ಒಲವೇ....


-----------------------
ಬಿಟ್ಟು ತೆರಳಿದೆನೆಂದು ಬೀಗದಿರು,
ನಿನ್ನ ಹೆಜ್ಜೆಗುರುತಿಲ್ಲೇ ಅಳಿಯದುಳಿದಿವೆ...

ಜೋಪಾನ ಕೆಲವೊಂದು ಭಾವಚಿತ್ರಗಳು-
ನೀ ನಕ್ಕ ಸ್ಥಿರಚಿತ್ರ ಎದೆಗೋಡೆಯಲಿ,
ನವಿಲುಗರಿಯೊರೆಸಿದ ಚರಚಿತ್ರ ಕೆನ್ನೆಯಿಳಿಜಾರಲಿ,
ಣ್ಣಲೇ ಮುತ್ತಿಟ್ಟ ಸ್ವಪ್ನಚಿತ್ರ ಹಣೆಯಗಲ ನೆಲದಲಿ...

ಬಚ್ಚಿಟ್ಟಿರುವೆ ಕೆಲಕ್ಷಣ ಮೌನ ಮುಚ್ಚಳದಡಿ-
ದನಿಯಾಗದ ನೀ ಮೊದಲುಸುರಿದ ಮೆಚ್ಚುಗೆ,
ಹಾಡಾಗದ ನೀ ಬರೆದ ಕವಿತೆ,
ಟಪಾಲಾಗದ ಪ್ರೇಮಪತ್ರದ ಸಾಲು...

 ಪಾದಚಿಹ್ನೆ ಹಸಿಯಾಗಿವೆ ...
ಮೆತ್ತನಿಟ್ಟು ನೀ ಒಳಬಂದ ಹೆಜ್ಜೆಯದು,
ಮೆಟ್ಟಿ ಗುಳಿಮಾಡಿದ್ದು, ದಾಟಿ ಮೀರಿಹಾರಿದ್ದು,
ಆಸೆಪುಷ್ಪ ಹೊಸಕಿ, ಸಿಟ್ಟು ಹೊತ್ತು ಹೊರನಡೆದದ್ದು...

ನನ್ನೆದೆಯ ಮಣ್ಣಲಿ ಮೂಡಿವೆ, ನನ್ನಾಸ್ತಿ...
ನೀನೆತ್ತಿ ಒಯ್ಯಲಾರೆ...
ಕಣ್ಣೀರ ಮಳೆಗೂ ಕಿಂಚಿತ್ತೂ ಮಾಸಿಲ್ಲ,
ನೀನಳಿಸಲಾರೆ...
ಬೀಗದಿರು, ಹೆಜ್ಜೆಗುರುತೊಳಗೆ ಭದ್ರವಾಗಿವೆ,
ಜಡಿದ ಬೀಗದ ಕೀಲಿಕೈ ಮುರಿದಿರುವೆ.