Monday, April 15, 2013

ನನಗಿದೇ ಇಷ್ಟ.


-------------

ಅತಿಯಾದರೆ ಎಲ್ಲವೂ ಕಷ್ಟ ಅಂದೆಯಲ್ಲಾ,

ಅತಿಯಾಗದೆ ಖುಶಿಯೆಲ್ಲಿಯದು ಒಲವೇ?

ಮೇಲುಮೇಲಿನ ತೇಲಾಟ ನಿರ್ಜೀವಿಗಳದು,

ಮುಳುಗಿಸುವ ಭಾರವಷ್ಟೇ ಜೀವಕೆ ಸ್ವಂತದ್ದು



ನೋವು, ಕಣ್ಣೀರು, ಮುನಿಸುಗಳೇ ಬದುಕು,

ನೋವೆಂದು ತಲೆ ಕತ್ತರಿಸಿಟ್ಟರದು ಸಾವು.

ಸರ್ವಸಂಗ ಪರಿತ್ಯಾಗ ಜೀವನ್ಮಂತ್ರವಾದ

ಜಗದ ತುಂಬೆಲ್ಲ ಸನ್ಯಾಸಿಗಳು ಮತ್ತವರ ಶಾಂತಿ.

ಬಾಳು ನಡೆಯಿರದೆ ಖಾಲಿಯಾಗತೊಡಗೀತು,

ಇಲ್ಲ, ನಿಂತ ನೀರಾಗಿ ಕೊಳೆತೀತು.

ಶಾಂತಿಯ ಹುಟ್ಟು, ಯೌವ್ವನಗಳೆಲ್ಲ

ಭಾವ ಸ್ಪರ್ಶವಿರದೆ ವ್ಯರ್ಥವಾದೀತು.



ಬಾಲರವಿಯ ಮುದ್ದು ಮೃದುತ್ವವೂ ಬೆಳೆದು,

ಎಳೆ ಬಿಸಿಲಾಗಬೇಕು, ಬಿರುಬಿಸಿಲಾಗಬೇಕು,

ಮತ್ತಳಿದು ಶಾಂತ ಸಂಜೆಯಾಗಬೇಕು,

ನಾಳೆ ಅದೇ ಮರುಕಳಿಸೆ ಅವ ಮುಳುಗಬೇಕು,

ಮತ್ತೆದ್ದು ಮೂಡಿ ಬರಬೇಕು- ಇದಲ್ಲವೇ ನಿಯಮ?



ಈ ಪ್ರೇಮವೂ ಹಾಗೆ, ಮೊದಲ ಕಚಗುಳಿಯಳಿದು,

ಬಿಸಿ ಚುಚ್ಚಬೇಕು, ಉರಿವ ಬರೆಯಾಗಬೇಕು,

ಗಾಯ ಮಾಯ್ದುಳಿವ ಕಲೆಯಾಗಬೇಕು,

ನಾಳೆ ಹೊಸದಾಗಿ ಹುಟ್ಟಿ ಬರಲಿಂದು

ಮೌನದೆಡೆಯಲಿ ಮರೆಯಾಗಬೇಕು



ಏರಿದಷ್ಟೂ ಕುಸಿವ ರಭಸವೂ ಜೋರು,

ಮತ್ತೆದ್ದೇಳುವ ತೀವ್ರತೆಯೂ ಜೋರು.

ಪುಟಿದೇಳುವ ರೋಮಾಂಚ ಸುಖಕಾಗಿ

ಧೊಪ್ಪನೆ ಬೀಳುವುದೆ ನನಗಿಷ್ಟ.

ಹುಟ್ಟಿಂದಲೇ ನಾನೊಂದು ತೀವ್ರತೆ,

ತೀವ್ರವಾಗುತಲೇ ಸಾಗುವುದಷ್ಟೇ ಕಲಿತೆ.

ಮುಳುಗಿ ಉಸಿರುಗಟ್ಟಿದರೂ,

ದಡದಿ ಬೆಚ್ಚನೆ ಕೂತರೂ,

ಜೀವನ ಯಾತ್ರೆ ಒಂದೇ ಕಡೆಗೇ ತಾನೇ?!











6 comments:

  1. ನಮಗೆ ಇಷ್ಟವಾಗುವ ಪರಿಯಲ್ಲಿ ಬದುಕುವ ಸ್ವಾತಂತ್ರ್ಯ ಮತ್ತು ಆತ್ಮ ಗೌರವವನ್ನು ಪ್ರೇರೇಪಿಸುವ ಕವನವಿದು.

    ReplyDelete
  2. ಏರಿದಷ್ಟೂ ಕುಸಿವ ರಭಸವೂ ಜೋರು,
    ಮತ್ತೆದ್ದೇಳುವ ತೀವ್ರತೆಯೂ ಜೋರು.
    ಪುಟಿದೇಳುವ ರೋಮಾಂಚ ಸುಖಕಾಗಿ
    ಧೊಪ್ಪನೆ ಬೀಳುವುದೆ ನನಗಿಷ್ಟ.)... ಪರಿಪಕ್ವ ಬರವಣಿಗೆ. ವಿಚಾರಗಳನ್ನು ಚೆನ್ನಾಗಿ ಕಡೆದಿಡುತ್ತೀರಿ.... ಹೌದು.... ಮೇಲುಮೇಲಿನ ತೇಲಾಟಕ್ಕಿಂತ ಮುಳುಗೇಳುವ ತಲಸ್ಪರ್ಶಜ್ಞಾನವೇ ಮೇಲು. ಕವಿತೆ ಇಷ್ಟವಾಯಿತು

    ReplyDelete