Sunday, April 14, 2013

ಒಂದು ಮಾತು

---------------------
ತಂಗಾಳಿಯೇ ಒಂದು ಮಾತು
ನೀ ಬೀಸದಂದು ನಾ
ಸುಟ್ಟು ಕರಕಲಾಗಲಿಕ್ಕಿಲ್ಲ,
ಬೆಂದು ಮುದ್ದೆಯಾಗಲಿಕ್ಕಿಲ್ಲ,
ಧಗೆಗೆ ಬಾಡಿಹೋದೇನು.

ತೂಗುಯ್ಯಾಲೆಯೇ ಒಂದು ಮಾತು-
ನೀ ತೂಗದಂದು ನಾ
ತುಂಡು ಚಂದ್ರನ ನಿನ ಬಿಂಬ ಮರೆಯಲಿಕ್ಕಿಲ್ಲ,
ಚಲನೆ ಮರೆತ ಜಡವಾಗಲಿಕ್ಕಿಲ್ಲ,
ನಲಿವಿರದ ನಡೆಯಾದೇನು.

ಕನಸೇ ಒಂದು ಮಾತು-
ನೀ ಮೂಡದಂದು ನಾ
ರಾತ್ರಿಯೇ ಕಹಿಯೆನ್ನಲಿಕ್ಕಿಲ್ಲ,
ನಿದ್ರೆಯೇ ಸುಳ್ಳೆನ್ನಲಿಕಿಲ್ಲ,
ನಾಳಿನಾಸೆ ತೊರೆದೇನು.

ಪ್ರೇಮವೇ ಒಂದು ಮಾತು-
ನೀ ತೊರೆದಂದು ನಾ
ಮುಗಿಯಿತೆಂದೆಲ್ಲ ಕೈ ಚೆಲ್ಲಲಿಕ್ಕಿಲ್ಲ,
ಹುಚ್ಚು ಕೆಚ್ಚಲಿ ಮೈ ಮರೆಯಲಿಕ್ಕಿಲ್ಲ,
ಉಸಿರಾಡುವ ಹೆಣವಾದೇನು.









7 comments:

  1. ನಾನೇನ ಹೇಳಲಿ ಈ ನಿಮ್ಮ ಒಂದು ಮಾತಿಗೆ, ನಾನು ಶರಣು.

    ReplyDelete
  2. ಒಂದೊಂದು ಮಾತೂ ಸೂಪರ್ ಮೇಡಂ ಜೀ...
    ನಂಗೆ ತುಂಬಾ ಅನ್ನೋವಷ್ಟು ಇಷ್ಟ ಆದ ಕವಿತೆ ಇದು..

    ReplyDelete
  3. ಬದುಕಿನಲ್ಲಿ ಯಾವುದೂ ನಮಗೆ ಅನಿವಾರ್ಯವಾಗಲೇ ಬಾರದು ಎನ್ನುವುದನ್ನು ಸೂಚ್ಯವಾಗಿ ತುಂಬಾ ಚೆನ್ನಾಗಿ ಉಲ್ಲೇಖಿಸಿದ್ದೀರಾ.

    ReplyDelete
    Replies
    1. ನೀವು ಹೇಳಿದಂತೆ ಅನಿವಾರ್ಯವಾಗಬಾರದು ನಿಜ, ಇನ್ನೂ ಒಂದು ಹೆಜ್ಜೆ ಮುಂದುವರೆದು, ಹಲವೊಮ್ಮೆ ಅನಿವಾರ್ಯ ಅನಿಸಿದ್ದೂ ಕಾಣೆಯಾದಾಗ ಹೆಚ್ಚೆಂದರೆ ಏನಾದೀತು, ಇಷ್ಟೇ ತಾನೇ ಅಂತ ಹೇಳುವ ಪ್ರಯತ್ನ ಮಾಡಿದೆ ಸರ್. ಧನ್ಯವಾದ.

      Delete
  4. ಬದುಕಿಗೆ ಸೊಗಸು ಬೇಕು. ಅದು ಇರದಾಗಲೂ ಸಹ ಬದುಕಬಹುದು. ಗಟ್ಟಿ ಮನಸ್ಸನ್ನು ತೋರಿಸುವ ಕವನ.

    ReplyDelete
  5. ಗಟ್ಟಿಮನಸು ಎಲ್ಲರ ಭಾಗ್ಯದಲ್ಲೂ ಇರಲ್ಲ ಸುನಾತ್ ಅವರೇ. ನನ್ನ ಜಾಯಮಾನ ಏನಂದ್ರೆ ಕುಸಿಯುವ ಸಂದರ್ಭಗಳಲ್ಲೆಲ್ಲಾ ನನದು ತುಂಬಾ ಗಟ್ಟಿಮನಸು ಅಂದುಕೊಳ್ತಾ ಬದುಕುವುದು... ಆ ಅನಿಸಿಕೆನೇ ಸುಮಾರು ಮಟ್ಟಿಗೆ ನಮ್ಮನ್ನ ಗಟ್ಟಿ ಮಾಡ್ತಾ ಸಾಗುತ್ತದೆ.. ಅಲ್ಲವಾ?

    ReplyDelete