Monday, April 22, 2013

ನಿನಗಾಗದಿದ್ದರೆ....

-----------------------
ಇರಲಿಬಿಡು, ನೀ ಜಗಕೆಲ್ಲ ಚಂದಿರ,
ಹರಡಬೇಕು ಎಲ್ಲೆಡೆ ಚಂದ್ರಿಕೆಯ ಹಂದರ.
ಅಡ್ಡ ಬಂದೀತು ಮೋಡ, ಮರ, ಪುಟ್ಟ ಹಕ್ಕಿ,
ನೀ ಇಣುಕಲಾಗದಿರೆ, ಬಿಟ್ಟುಬಿಡು.
ನಾ ನಿರುಕಿಸುತಲೇ ಇರುವೆ.
ನನಗೊಂದೇ ಅಕಾಶ, ಅದಕೊಂದೇ ಶಶಾಂಕ.

ಇರಲಿಬಿಡು ನೀ ನೆಲೆಯಿರದ ತಂಗಾಳಿ,
ಬೀಸುತಿರಬೇಕು ನೀ ಲೋಕಸಂಚಾರಿ.
ಅಡ್ಡ ಬಂದೀತು, ಗೋಡೆ, ಬೆಟ್ಟ, ಗುಡ್ಡ,
ರಿಂಗಣಿಸಲಾಗದಿರೆ ಈ ಹೆಬ್ಬಾಗಿಲ ಗಾಳಿಗಂಟೆ, ಬಿಟ್ಟುಬಿಡು.
ನನ್ನ ಹೆಬ್ಬಾಗಿಲೇ ಹಿಂಬಾಲಿಸೀತು.
ಅದಕೊಂದೇ ದಾರಿ, ಉದ್ದಕೂ ನಿನದೇ ಮೋಡಿ.

ಇರಲಿಬಿಡು ಹೂವೇ, ನೀ ಉದ್ಯಾನವನದಾಸ್ತಿ,
ಸೆಳೆಯಬೇಕು ಊರಿನೆದೆಯ ಆಸಕ್ತಿ.
ನೀರು, ಮಣ್ಣು, ಸುತ್ತುಮುತ್ತೂ ತಪ್ಪಿದ್ದೀತು,
ನನ್ನ ತೋಟದಲರಳಲಾಗದಿರೆ ಬಿಟ್ಟುಬಿಡು.
ನನ್ನ ತೋಟವೇ ನಿನ್ನಡಿಗೆ ಬಂದೀತು..
ಅದಕೆ ನಿನದೇ ಭಕ್ತಿ, ಮತ್ತಷ್ಟೇ ವ್ಯಾಪ್ತಿ.

ಇರಲಿಬಿಡು ಪ್ರೇಮವೇ, ನೀ ವಿಶ್ವವ್ಯಾಪಿ,
ಏರುತಿರಬೇಕು ನೀನೆಂದೂ ಊರ್ಧ್ವಮುಖಿ.
ಅಡ್ಡ ಬಂದೀತು ಹಮ್ಮುಬಿಮ್ಮು, ಅಭಿಮಾನ,
ನನ್ನ ಗಮನಿಸಲಾಗದಿದ್ದರೆ, ಬಿಟ್ಟುಬಿಡು.
ನಾನೇ ಎಕ್ಕರಿಸುವೆ, ನಿನ್ನೆಡೆಗೇರುವೆ.
ನನಗೆ ನೀನೇ ಗುರಿ, ಬರುವೆ ಎಲ್ಲ ಮೀರಿ.



6 comments:

  1. ನಾನೇ ನಿನ್ನೆಡೆಗೆ, ನಿನ್ನಡಿಗೆ ಬರುವೆನೆಂಬ ಶರಣು ಭಾವ...
    ಎಲ್ಲ ಒಳಿತುಗಳೆಡೆಗೆ ನಿಮ್ಮ ತುಡಿತ...
    ತುಂಬಾ ಇಷ್ಟವಾಯಿತು ಮನದ ಮೃದು ಪ್ರೇಮದೆಡೆಗಿನ ರಿಂಗಣ...

    ReplyDelete
  2. ಇಷ್ಟವಾಯಿತು.... ಮೀರಿ ನಿಲ್ಲುವ, ಮೀರಿಯೂ ತನ್ನದಾಗಿಸಿಕೊಳ್ಳುವ ಹಂಬಲದ ಮನುಷ್ಯನ ಕನಸುಗಳಿಗೆ ಚಂದ್ರ, ತಂಗಾಳಿ, ಪ್ರೇಮದ ರೂಪಕ...

    ReplyDelete
  3. "ನನ್ನ ತೋಟವೇ ನಿನ್ನಡಿಗೆ ಬಂದೀತು..
    ಅದಕೆ ನಿನದೇ ಭಕ್ತಿ, ಮತ್ತಷ್ಟೇ ವ್ಯಾಪ್ತಿ." ಸಂಪೂರ್ಣ ಅರ್ಪಣಾಭಾವದ ಈ ಸಾಲುಗಳಿಂದ ಕವನ ಮತ್ತಷ್ಟು ಮೆರಗುಗಟ್ಟಿದೇ.

    ReplyDelete
  4. ತುಂಬಾ ಚೆನ್ನಾಗಿದೆ ಮೇಡಮ್....
    ನಿರುಕಿಸುತಲೆ ಇರುವೆ ಎಂಬ ಪದ ಗೊತ್ತಿರಲಿಲ್ಲ....ನಿರೀಕ್ಷಿಸು ಎನ್ನವ ಅರ್ಥ...ಇಷ್ಟವಾಯ್ತು..
    ಮತ್ತೆ ,ಆ
    "ಅಡ್ಡ ಬಂದೀತು ಮೋಡ, ಮರ, ಪುಟ್ಟ ಹಕ್ಕಿ,
    ನೀ ಇಣುಕಲಾಗದಿರೆ, ಬಿಟ್ಟುಬಿಡು"
    ಹಾಗೂ ,
    "ಅಡ್ಡ ಬಂದೀತು ಹಮ್ಮುಬಿಮ್ಮು, ಅಭಿಮಾನ,
    ನನ್ನ ಗಮನಿಸಲಾಗದಿದ್ದರೆ, ಬಿಟ್ಟುಬಿಡು."
    ಎರಡು ಸಾಲುಗಳು ತುಂಬಾ ಗಮನ ಸೆಳೆದವು..ಅದೆಷ್ಟು ಚೆನ್ನಾಗಿದೆ ಆ ಕಲ್ಪನೆ...ಮೋಡಗಳೆಂದರೆ ಹಮ್ಮು,ಬಿಮ್ಮು ಬಿಗುಮಾನ...ಆ ಕಡೆ ಚಂದ್ರನ ಪ್ರೀತಿ...ಇಣುಕಿ ನೋಡುವುದು..
    ಇಷ್ಟವಾಯ್ತು..
    ಅಮೇರಿಕಾ ಅಮೇರಿಕಾ ಸಿನೆಮಾದ ನೆನಪಾಯ್ತು...
    ಧನ್ಯವಾದಗಳು...ನಮಸ್ತೆ :)

    ReplyDelete