Saturday, April 13, 2013


ದ್ವೀಪವಾದ ಎದೆಯಲೊಮ್ಮೆ..

--------------------.
ಹೇಗೆ ಮೂಡಿತ್ತೋ, ನಿಂತಿತ್ತೋ?!
ತಾನೇ ಚಿಮ್ಮಿಸಿದ ನೆತ್ತರೋ,
ಕಣ್ಣು ಸುರಿಸಿದ ಕಂಬನಿಯೋ,
ಬಂಧಗಳು ಒಸರಿಸಿದ ಆರ್ದ್ರತೆಯೋ...
ಜಲ ಸುತ್ತುವರಿದು ನಾಲ್ಕುಕಡೆ
ಎದೆ ನಡು ದ್ವೀಪವಾಗಿತ್ತು...

ಮಣ್ಣಹೆಂಟೆ ಇಲ್ಲಿಗ್ಯಾರು ಹೊತ್ತರೋ?!
ಭಾವದಲೆ ಹಿಂಜರಿಯುತಾ ಬಿಟ್ಟು ಹೋದುದೋ,
ನೆನಪ ತೆಪ್ಪದಿ ಮೂಟೆ ಸಾಗಿ ಬಂದುದೋ,
ಮನದ ಮೀನನಡೆ ಹೆಜ್ಜೆಗಂಟಿ ಬಂದುದೋ...
ನೀರೊಳು ಜರಿಯದೆ ಸ್ಥಿರವಾಗಿ ನಿಂತು
ಎದೆ ದ್ವೀಪವಾಗುಳಿದಿತ್ತು..

ಒಂದು ಹೊಸಿಲೂ ಮೂಡಿತ್ತು,
ಬಳುಕಾದ ಗೆರೆ, ಅರಿಸಿನಕುಂಕುಮವಲ್ಲದ
ಅಪರಿಚಿತ ರಂಗು ಅದರ ಮೇಲಿತ್ತು...
ಒಳಹೊರಗು ಬೇರ್ಪಟ್ಟ ಗೊಂದಲದ ದನಿ,
ತುದಿಗಿಟ್ಟ ಹೂವಲೂ ನಿರ್ಬಂಧದ ಧಾಟಿ..
ಒಳಗಲ್ಲಿ ಎದೆ ದ್ವೀಪವಾಗಿತ್ತು...

ಹಸಿರ ಹಾಸು, ಬೆಳಗಿನಿಬ್ಬನಿ,
ಸಂಜೆಯ ತಂಗಾಳಿ, ಹಗಲ ಬೇಗೆ, ನಡುವೊಂದು ಹೂ...
ಈಜಿ, ದಾಟಿ, ಹೊರಸಾರುವಾಸೆ
ಪುಟ್ಟ ಹೂಪಾದದ ಸಂಕ್ರಮಣದ ಓಂಕಾರ
ಮಿತಿ ಎಚ್ಚೆತ್ತ ಶಂಖಾನಾದದಿ ಅಡಗಿತು...
ತುಸು ನಡುಗಿ ಹೊಸಿಲು, ದ್ವೀಪವಲ್ಲಾಡಿತ್ತು.

ಹೊರಗೊಂದಿದ್ದರೂ, ಒಂದು ಒಳಗಿದೆ ಪಾದ,

ಮಿತಿಯನೆಬ್ಬಿಸಿದವರೇ ಇದು ನಿಮ್ಮ ಪುಣ್ಯ.
ಅದಕೂ ಇದಕೂ ನಿಮದು ಜೊತೆಯಾದರೊಳಿತು.
ಒಳಗುಳಿದರೆ ಹಿಂದುಳಿಯುವಿರಿ,
ಹೊರಗಿಟ್ಟರೆ ಕಳಚಿಕೊಳುವಿರಿ...
ದ್ವೀಪದಿ ಮುಕ್ತಿದೀಪವೀಗ ಬೆಳಗಿದೆ...







8 comments:

  1. >>
    ಮಣ್ಣಹೆಂಟೆ ಇಲ್ಲಿಗ್ಯಾರು ಹೊತ್ತರೋ?!
    ಭಾವದಲೆ ಹಿಂಜರಿಯುತಾ ಬಿಟ್ಟು ಹೋದುದೋ,
    ನೆನಪ ತೆಪ್ಪದಿ ಮೂಟೆ ಸಾಗಿ ಬಂದುದೋ,
    ಮನದ ಮೀನನಡೆ ಹೆಜ್ಜೆಗಂಟಿ ಬಂದುದೋ...
    ನೀರೊಳು ಜರಿಯದೆ ಸ್ಥಿರವಾಗಿ ನಿಂತು
    ಎದೆ ದ್ವೀಪವಾಗುಳಿದಿತ್ತು..
    <<

    ಸಖತ್ತಾಗಿದೆ ಸಾಲುಗಳು :-)
    ಕವಿತೆಯ ಶೀರ್ಷಿಕೆಯೂ ಇಷ್ಟವಾಯಿತು :-)

    ReplyDelete
  2. ಎದೆಯೂ ದ್ವೀಪವಾಗುವುದು ಸಹಿಸಲಸದಳ ವ್ಯಥೆಯ ಸಮಯದಲ್ಲೋ ಅಥವಾ ಬದುಕಿನ ಸಾಧಕ ಭಾದಕಗಳನೆಲ್ಲ ಪೋರೈಸಿದ ಆ ಸಂಧ್ಯಾ ಕಾಲದಲ್ಲೋ. ಈ ಕವನದ ಹೂರಣವು ತನ್ನೊಡನೆ ಕಳೆಯಲು ಹೊರಟಿರುವ ಆಪ್ತರನ್ನೂ ದ್ವೀಪದೊಳಗೆ ಸೆಳೆಯುವ ಯತ್ನ ಮಾಡುತ್ತಿದೆ.
    ಪರಿಪಕ್ವ ಕಾವ್ಯ.

    ReplyDelete
    Replies
    1. ಎದೆ ದ್ವೀಪವಾಗಲಿಕ್ಕೆ ಹಲವು ಕಾರಣಗಳಿದ್ದಿರಬಹುದು ಆದರೆ ಅಲ್ಲರಳಿದ ಒಂದು ಚಿಂತನೆಯ ಹೂವು ಹೊರಗಡಿಯಿಡಲು ಯತ್ನಿಸಿ ಒಂದು ಹೆಜ್ಜೆ ಹೊರಗಿಡುವಷ್ಟರಲ್ಲಿ, ಪರಿಸ್ಥಿತಿಯ ಯಥಾಸ್ಥಿತಿ ಗೆ ತೊಂದರೆಯಾಗದ ಹಾಗೆ ನೋಡ್ಕೊಳ್ಳಲಿಕ್ಕಾಗಿ ಮಿತಿಯೊಡ್ಡುವ ಸಮಾಜಕೊಂದು ಎಚ್ಚರಿಕೆಯ ಮಾತು ಹೇಳುವಾ ಅನಿಸಿತು ಸರ್. thank you

      Delete
  3. ಚೆನಾಗಿದೆ ಮೇಡಮ್...ಎದೆ ದ್ವೀಪವಾಗಿದೆ ಎಂಬ ಕಲ್ಪನೆ ಇಷ್ಟವಾಯ್ತು...
    "ಹೂಪಾದ"..
    "ಅರಿಸಿನಕುಂಕುಮವಲ್ಲದ ಅಪರಿಚಿತ ರಂಗು "
    "ಮೀನನಡೆ"
    ಇಷ್ಟವಾದ ಪದಗಳು :)
    ಬರೆಯುತ್ತಿರಿ...
    ನಮಸ್ತೆ :)

    ReplyDelete
  4. ಎದೆಯನ್ನು ದ್ವೀಪ ಮಾಡುವ ಕಲ್ಪನೆ ಚೆನ್ನಾಗಿದೆ.

    ReplyDelete
    Replies
    1. ನಾನು ಮಾಡುವುದಲ್ಲ ಸುನಾತ್ ಅವರೇ ಅದೇ ಆದದ್ದು ಮತ್ತು ನಾನದನ್ನು ಸ್ವಲ್ಪ ಗಮನವಿಟ್ಟು ನೋಡಿದ್ದು ಅಷ್ಟೇ :) :P

      Delete