Wednesday, February 27, 2013

ಅವನಲ್ಲ, ಅಕ್ಷರವಿಳಿದವು.

--------------------
ಅದೇ ರಾತ್ರಿ, ಅದೇ ಚಂದ್ರ,
ಅದೇ ಚಂದ್ರಿಕೆ...ಬಂದಾಗೆಲ್ಲ
ಒಮ್ಮೊಮ್ಮೆ ಮುದ್ದು ಸುರಿಸಿ,
ಒಮ್ಮೊಮ್ಮೆ ಕಾಡಿ ಬಿಡುವವು...

ಬರೀ ಕತ್ತಲೆಯೇ ಇರುಳು,
ಅಸ್ಪಷ್ಟತೆಯಷ್ಟೇ ಹೊರಲು?
ಸಂಧ್ಯೆ ರವಿಯ ಸಾರುವ ರಥ,
ಚಂದ್ರ ಮಲಗೋ ಮಡಿಲು,
ರಾತ್ರಿರಾಣಿಯ ಉಯ್ಯಾಲೆ,
ತಾರೆ ಜೋಗುಳದ ಶ್ರುತಿ
ಕಣ್ಣು-ನಿದಿರೆಯ ಕಳ್ಳಭೇಟಿಯ ತಾಣ,
ಜಗಕೆ ಕಪ್ಪಿನ ಸಾಕ್ಷಾತ್ಕಾರ
ಹೀಗೆ ಹಲ ಕಾರ್ಯಗಳ ಸರದಾರ.

ಬರೀ ದರ್ಪಣವೇ ಚಂದ್ರ,
ನಮ್ಮೊಳಗ ಬಿಂಬಿಸಲು?
ಇರುಳ ಮುದ್ದಿನ ಕಂದ,
ತಾರೆಗಳ ಮನದಿನಿಯ,
ಚಂದ್ರಿಕೆಯ ಬಾಳಸಖ,
ಇಳೆಯ ಪ್ರೇಮಾರ್ಥಿ,
ರವಿಪ್ರಭೆಯ ಬಾಡಿಗೆದಾರ,
ಹಲ ಪಾತ್ರಗಳೊಡೆಯನವ...

ಬರೀ ಬೆಳಕೇ ಚಂದ್ರಿಕೆ
ನಮ್ಮಿರುಳ ದಾರಿಗೊದಗಲು?
ಕಪ್ಪಲಡಗಿದ ಬಿಳಿ,
ಚಂದ್ರನ ಪೂರ್ಣತೆಗೆ ಬೇಲಿ,
ಕತ್ತಲೊಡಲಿಗೊಂದು ಸಾಂತ್ವನ,
ತಾರೆ ತೂತಾಗಿಸಿದ ಬಿಳಿ ಚಾದರ,
ರಾತ್ರಿಯಟ್ಟಹಾಸಕೆ ಕಟೆಚ್ಚರ
ಹೀಗೆ ಹಲ ರೂಪಗಳೊಡತಿ.

ಹುಣ್ಣಿಮೆಯೊಂದು ರಾತ್ರಿ ಚಂದ್ರ
ಜಾಜಿಯೆಲೆಯ ಜಾರುಬಂಡೆಯಾಗಿಸಿ
ಜಾರುತಿದ್ದ ಎಲ್ಲ ಮರೆತು..
ನಾ "ಬಿದ್ದ ನೋಡೀಗ" ಎನುತ
ಧರೆಗಿಳಿವುದನೇ ಕಾಯುತಿದ್ದೆ
ಎಲ್ಲ ಮರೆತು...
ಅವ ನೆಲಕಿಳಿಯದ ಅಳಹೀಗಷ್ಟು
ಅಕ್ಷರ ಹಾಳೆಗುದುರಿ ಸಂತೈಸಿದವು.








ಮೌನದ ವಿಜಯಪಥ

---------------------
ಹಠಮಾರಿ ಮೌನ,
ಹೊಳೆಯ ಸುಳಿಯಂತೆ,
ಹೊರವರ್ತುಲದಲಿದ್ದುದನೂ
ಒಳಗೆಳೆದುಕೊಳುವುದು.
ಓಟಅಟ್ಟಿಸಿ ಬರುವ
ಕಬಂಧ ಬಾಹುವಾಗುವುದು.

ಉರಿವ, ಉರಿಸುವದನೆಲ್ಲ
ಭರಿಸುವ ಶಾಂತ ಧರೆ
ಜ್ವಾಲಾಮುಖಿಯಾಗೊಮ್ಮೆ
ಹೊರಗುಗುಳುವುದಕೆ,
ವಿನಾಶದ ಹಿಂದಿನ ಶಾಂತಿಗೆ,
ಆರುವ ಮುನ್ನ ಧಗಧಗಿಸುವ
ಜ್ವಾಲೆಯ ಅಲ್ಪಾಯುಸ್ಸಿಗೆ,
ಹೆದರಿ ಜೀವ ಮುದುಡಿ ಕೂತಿದೆ.

ಹರಸಾಹಸಕೂ ಬಗ್ಗದ
ಪೂರ್ವ ತಯಾರಿಯದರದು.
ತಾನು ತಾನಾಗುಳಿವಲ್ಲಿ,
ಬೇರೆಲ್ಲ ಮರೆಯಲಿರಿಸಿದೆ.
ಉಮ್ಮಳಿಸುವ ಅಳು
ಕಣ್ಣೀರ ಮೂಕಧಾರೆಯಾಗಿ,
ನಗುವೂ, ಬಿಕ್ಕುವಿಕೆಯೂ,
ದನಿಯುಡುಗಿ ಕೂತಿವೆ.

ಸೋಲು-ಗೆಲುವಲ್ಲ,
ಗುರಿ ಇದ್ದಲ್ಲೇ ಇದೆ.
ನಿರ್ವಿಕಾರತೆಯಲ್ಲ,
ಆಸೆ-ನಿರಾಸೆ ನೂರಿದೆ
ಸ್ಥಿತಪ್ರಜ್ಞತೆಯೂ ಅಲ್ಲ,
ಭಾವತೀವ್ರತೆಯಿದೆ.
ಬರೀ ದಿವ್ಯಮೌನವೆಲ್ಲದರ
ಜೊತೆ ಗುದ್ದಾಡಿ ಗೆಲ್ಲುತಿದೆ.

ಯಾರಿಗೆ ಬೇಕಿತ್ತೀ ಭಾಗ್ಯ,
ಮೌನ ಬಂಗಾರದ ವರ?!
ಎದುರಿದ್ದವಗೆ ಗಾಂಭೀರ್ಯದ
ಅಪರಾವತಾರ,
ಒಳಗಿನ ಗುಟ್ಟು ದೇವನೇ ಬಲ್ಲ..
ಮೌನದೊಗೆತನ ನಿಭಾಯಿಸಿ
ಕಳೆದುಹೋಗುವುದೊಮ್ಮೆ,
ಕಳಕೊಳ್ಳುವುದೊಮ್ಮೆ.

ಮರೆಮಾಚುವುದು ಕರಗತವದಕೆ
ನೋವಿನೊಡನೆ, ಸುಳ್ಳನೂ,
ಪ್ರೀತಿಯೊಡನೆ, ದ್ವೇಷವನೂ.
ಮಾತು ಬಯಲಾಗಿಸಿ
ಹಗುರಾಗಿಸಿದರೆ,
ಮೌನ ಸಂಗ್ರಹಿಸಿಟ್ಟು,
ಭಾರವಾಗಿಸುವುದು.

ಇದಲ್ಲ, ಬೇರೆಯದು ತಾ...

----------------------------------
ಚಿನ್ನದ್ದೇ ಇರಬಹುದು,
ನೀನಿತ್ತ ಸರಿಗೆ.
ನನ್ನ ಪಾಲಿನ
ಬಾಳಭಾರ ತಡೆದೀತೇ?!

ನೆಲಕಂಟಿವೆ ನನ್ನ ತಾರೆಗಳು,
ಆಗಸ ಖಾಲಿಖಾಲಿ,
ಜೀರುಂಡೆ ಗುಂಯ್ಗುಡದ,
ಬಾವಲಿಯೂ ಹಾರದ,
ಕನಸು ಕೈಜಾರಿ ಹೋದ
ಇರುಳ ಯಾತ್ರೆಯಲಿ
ನಿದ್ದೆಯದೂ ಗೈರು.
ಸೂರ್ಯನಿರದೆ ಹಗಲೂ

ರಕ್ತ ಹೆಪ್ಪುಗಟ್ಟಿದ ನೀಲಿ.
ಮರುಭೂಮಿಯಲುದುರಿ
ಮೊಳೆವಾಸೆಯ ಬೀಜದ
ನಿರರ್ಥಕತೆಯಂತೆ ಭಾರ ಭಾರ.

ಶೂನ್ಯದೊಳಗೆ ಅಂಕಿಗಳ, ಕಪ್ಪಿನೊಳಗೆ ಬಣ್ಣಗಳ
ಹುಡುಕುವ ವ್ಯರ್ಥ ಯತ್ನಕೆ
ಕಣ್ಣಿರುವ ಸೌಭಾಗ್ಯದ
ವ್ಯರ್ಥ ಬೆಂಬಲ.
ಮುಗಿಯದ ದಾರಿಗೆ
ಸುಳ್ಳು ಸೂಚನಾಫಲಕ,
ಅಳಿಸಿಹೋದ ಮೈಲಿಗಲ್ಲುಗಳು.
ಕೆಲವೊಮ್ಮೆ ನೆಲದಲಿ,
ಕೆಲವೊಮ್ಮೆ ಎದೆಯಲಿ
ಮೂಡುವ ಆಳದ
ಹೆಜ್ಜೆಗುರುತೂ ಬಲುಭಾರ.

ಒದಗದ, ಸತ್ವವಾಗದ್ದೇ
ಉಂಡು ಮೈ ಭಾರ..
ಹಿಂಜಾರುವುದ ಮುಂದೆಳೆವ
ನಡಿಗೆ ಬಲು ನಿಧಾನ,
ಅದಕೆ ಮೈ ಕರಗಿಲ್ಲ,
ಸಿಕ್ಕಿದ್ದನೆಲ್ಲ ಸಿಕ್ಕಿಸಿಕೊಂಡ
ರ್ಮಕೆ ಮನಸೂ ಭಾರ, ಬಿಸುಡದ ಜಾಯಮಾನಕೆ
ತೂರಿಸಲೂ ಜಾಗವಿಲ್ಲ.
ಬರೀ ತೂಕ..ತೂಕ..
ಕೆಳಗೇ ಜಗ್ಗುವ ಭಾರ

ಸಾಲದು ಒಲವೇ,
ನೀನಿತ್ತುದು ನನ್ನನೆತ್ತಲು
ಹೋಗು ಬಲವಾದುದನೆತ್ತಿ ತಾ.
ಕಾಲು ನಿಧಾನ ಹುದುಗುತಿವೆ,
ಕಾಲದ ಕೆಸರಸುಳಿಯಲಿ.
ಮುಳುಗುವ ಮುನ್ನ ಎತ್ತಿಕೋ
ನನ್ನ ನಿನ್ನೆದೆಯೆತ್ತರಕೆ.

ಬಂಡೆ ಬಂಡೆಯಾಗುಳಿದಿದೆ.

----------------------
ಮೊರೆವ ಸಾಗರದ
ಮೈಲುದ್ದ ಸಾಗುವ ಶಬ್ಧ,
ಸಾಲುಸಾಲು ತೆರೆ,
ಮೆಲ್ಲ ಕಚಗುಳಿಯಿಡುವ
ನೂರಾರು ಜಲಚರಗಳು,
ನಿಟ್ಟಿಸುವ ಎಷ್ಟೋ ಕಣ್ಣೋಟ,
ತೇಲುವ, ಮುಳುಗುವ
ಜೀವ-ನಿರ್ಜೀವಗಳು,
ಮೇಲೆ ಹತ್ತಿಳಿವ ನೊರೆರಾಶಿ,
ದೇವಗೆಂದೆಸೆವ ನಾಣ್ಯಗಳು.

ಹೀಗೆ ಅದೆಷ್ಟೋ ಅಸ್ತಿತ್ವಗಳ
ನಡು ನಿಂತ ಹೆಬ್ಬಂಡೆ
ಶತಮಾನಗಳಿಂದ ಏಕಾಂಗಿ.
ನಿಷ್ಟುರ, ನಿರ್ದಯಿ ಮೌನವಷ್ಟೇ
ಆಸ್ತಿಯಾದ ಒಂಟಿತನ,
ಏಕಾಂತದ ಸೆಳೆತಕಿಲ್ಲಿ
ಅಯಸ್ಕಾಂತದ ಬಲ.

ಬಳಿ ಸಾರುವರ ತುಳಿತಕೊಮ್ಮೆ,
ಮೈಚಾಚಲು ಹಾಸಾಗಿ ಒಮ್ಮೆ,
ಧ್ಯಾನಕೆ ಆಸನವಾಗೊಮ್ಮೆ,
ಮೆಚ್ಚುಗೆಗೆ, ಕಣ್ಣೀರಿಗೆ,
ವಿಸ್ಮಯಕೆ, ಒಮ್ಮೊಮ್ಮೆ ಭಯಕೂ
ಸಾಕ್ಷಿಯಾಗುತಾ,
ತಾನೇನೆಂಬುದನೇ
ಮರೆತಿದೆ.

ಪ್ರಣಯಕೆ, ಮುನಿಸಿಗೆ,
ನಿರೀಕ್ಷೆಗೆ, ಹತಾಶೆಗೆ,
ಕಾಮದಾಟಾಟೋಪಕೆ,
ಕಂದಮ್ಮಗಳ
ಕಣ್ಣುಮುಚ್ಚಾಲೆಯಾಟಕೆ,
ಜಗಳಕೆ, ಕೊನೆಗೊಮ್ಮೆ
ಆತ್ಮಹತ್ಯೆಗೂ ಒದಗಿ
ಸವೆದು ಸವಕಲಾಗಿದೆ.

ಮೇಲ್ಹಾಸು ಪಚ್ಚೆಕಂದು
ಪಾಚಿಯಾಗಿದ್ದರೂ
ಮೃದ್ವಂಗಿಗಳ ಎಡೆಬಿಡದ
ಒಡನಾಟಕೂ ಒಂದಿಷ್ಟೂ
ಮಿದುವಾಗಿಲ್ಲ, ಬದಲಾಗಿಲ್ಲ.
ಆನೆಗಾತ್ರದ ಅಲೆಹೊಡೆತಕೂ
ಕಿಮ್ಮಕ್ ಎಂದಿಲ್ಲ,
ಬಂಡೆ ಬರೀ ತಾನಾಗುಳಿದಿದೆ
ಅದಕೆ ಒಂಟಿಯಾಗಿದೆ.

---------------------

Monday, February 25, 2013

ಅತ್ತ ನಡೆವಾಗ ಪ್ರಶ್ನೆ ತಡೆದಿದೆ...

-------------------
ಇಂದು ರಕ್ತಸುರಿದ ಗಾಯದ ನೋವು ಕಾಡಿ,
ಹರಿಯದ ಕಣ್ಣೀರ ಪಸೆ ಮಿದುಮಾಡಿ ಎದೆನೆಲವ
ಸದ್ದಿಲ್ಲದೊಂದು ಪ್ರಶ್ನೆಯಲ್ಲಿ ಮೊಳೆತಿದೆ...
ನನ್ನೆಲ್ಲಾ ಪ್ರಶ್ನೆಯೂ ನಿನಗೇ, ಉತ್ತರವೂ...
ಸಂಶಯದ ಬೀಜದ ಮೊಳಕೆ,
ಸಂಶಯಿಸಿಯೇ ತಲೆಯೆತ್ತಿದೆ....

ಹಿಂದಡಿಯಿಟ್ಟೀತು, ಒಮ್ಮೆ ಕಣ್ಹಾಯಿಸಿಬಿಡು
ಇದ್ದರೆ ಉತ್ತರದ ಹನಿಯುಣಿಸು,
ವಿಚಿತ್ರ ಬೆಳೆಯಿದು, ನೀ ಹನಿಯಿಸೆ
ಮುರುಟಿ ಇಲ್ಲವಾದರೂ ಆದೀತು, ಅಥವಾ
ದಟ್ಟವಾಗೆದ್ದು ನನನೇ ಮರೆ ಮಾಡೀತು.
ಹಾದರದ ಕೂಸಂತೆ ಅಲ್ಲದೆಡೆ ಮೂಡಿಬಿಟ್ಟಿದೆ
ಳಿಸುವುದು-ಉಳಿಸುವುದು ನಿನಗೆ ಬಿಟ್ಟದ್ದು..

ನಾಳೆ ನಾನಳಿವ ಕ್ಷಣ ಹೇಳಿಕಳಿಸದೆಯೂ
ಮರೆಯಿಂದೀಚೆ ಬರುವೆಯಾ?
ಸುಕ್ಕುಚರ್ಮ, ಸಿಕ್ಕಿ ಹಾಕಿಕೊಂಡ ಉಸಿರಿಗೆ
ಉಕ್ಕಿ ಬರುವ ವಾಕರಿಕೆ ಅಡಗಿಸಿ,
ನಡೆಯಿರದ ಕಾಲು, ಹಾಡಿರದ ಬಾಯಿಗೆ
ತಡೆದು ತಿರುಗಿಸುವ ಅಸಹ್ಯ ಮೆಟ್ಟಿ,
ಕಣ್ಣಲಿ ಕಣ್ಣ ನೆಡುವೆಯಾ ಅಂದಿನಂತೆ?
ಕಣ್ಣೀರ ಮುತ್ತಲೊರೆಸುವೆಯಾ ಅಂದಿನಂತೆ?
ಮುಂದಿಗೂ ನೀನೇ ಬೇಕೆಂಬೆಯಾ ಅಂದಿನಂತೆ?

ಉಳಿದುಸಿರಿನ ಲೆಕ್ಕ ಜಟಿಲವಾಗುತ ಸಾಗಿದೆ
ಗುಣಿಸಿ ಭಾಗಿಸಿ ಶೇಷ ಶೂನ್ಯವಾಗಿಸುವೆಯಾ?
ಸುಳ್ಳಿನಿಂದಲೇ ಸರಿ, ಲೆಕ್ಕ ಮುಗಿಸಿಬಿಡು,
ಪೊಳ್ಳಾದರೂ ಆಶ್ವಾಸನೆಯ ಸಾಲ ಕೊಡು,
ಸಾವು ಸಾಲ ತೀರಿಸೀತು...
ಚಿತೆಯ ಬೂದಿ ಕರುಳಕುಡಿಗಂತೆ,
ನನ್ನದದಿಲ್ಲ, ಬರೆದು ಬಿಡುವೆ ನಿನ್ನ ಹೆಸರಿಗೆ.
ಒಯ್ಯುವೆಯಂತೆ ಬೇಕಾದಷ್ಟು,
ನಿನ್ನರಮನೆಯ ನಂದನ ಹೂವರಳಿಸುವಷ್ಟು..






ಹೀಗೊಂದು ಆಹ್ವಾನ ನಿನಗೆ

----------------
ಗೊತ್ತು, ನಿನಗೂ ಅಗತ್ಯವಿಲ್ಲ, ನನಗೂ
ನಂಬಿಸುವ, ಒಪ್ಪಿಸುವ ಜರೂರಿಂದು ಉಳಿದಿಲ್ಲ..
ಆದರೂ ತುಂಬಿ ಹೊರ ತುಳುಕಿದ ಹನಿಗಳಿವು,
ಬೇಕಿದ್ದರೆ ಬಿಸಿಹಸ್ತ ಚಾಚು, ತುಸು ತಂಪೆನಿಸೀತು.

ಗೊತ್ತು, ಈ ನಗು ನಿನಗೊಂದು ಪ್ರಶ್ನೆ...
ನೀ ಹೊರಟ ಕ್ಷಣವೂ ನಾನತ್ತಿರಲಿಲ್ಲ,
ಈಗ್ಯಾಕೆ ಅತ್ತೇನು, ನಗೆಯಷ್ಟೇ ನನಗೆ ಸ್ವಂತ.
ಈ ನಗು ಸಾಮಾನ್ಯವಲ್ಲ, ನನ್ನೊಲವೇ..
ಕಿತ್ತು ತಿನ್ನುವಳುವಿಗೂ, ಮೆಟ್ಟಿ ಹಿಸುಕೋ ನೋವಿಗೂ
ದಟ್ಟ ಮುಳ್ಳಿನ ಪರದೆಯಾಗುವುದು,
ಮುಳ್ಳು ಮಾತ್ರ ನನ್ನ ಚುಚ್ಚುತಲೇ ಸಾಗುವುದು.

ಗೊತ್ತು, ಈ ಮೌನವೂ ನಿನಗೊಂದು ಪ್ರಶ್ನೆ.
ನೀನಿದ್ದಾಗ ಅಪರಿಚಿತವಿತ್ತು, ಈಗ ಬಲುಆಪ್ತ.
ನೀ ಹೋಗುತ್ತಾ ಪರಿಚಯಿಸಿ ಹೋದೆಯಲ್ಲಾ,
ಇದೂ ಸಾಮಾನ್ಯವಲ್ಲ ಒಲವೇ...
ಮಾತು ಹುಟ್ಟದಂತೆ, ಹುಟ್ಟಿದರೂ ದನಿಯಾಗದಂತೆ
ಮುತುವರ್ಜಿಯ ಶಿಸ್ತು ನೇಮಿಸುವುದು.
ಶಿಸ್ತು ಮಾತ್ರ ನನ್ನುಸಿರುಗಟ್ಟಿಸುತಲೇ ಸಾಗುವುದು.

ಗೊತ್ತಾ, ನಾ ದೃಶ್ಯವಾಗಿರಲೇ ಇಲ್ಲ,
ನೀ ಮೀಯಿಸಿದ್ದು, ಆಮೇಲೆ ಹೊಳೆದು ನಾ ಕಾಣಿಸಿದ್ದು.
ಈಗ ದೃಷ್ಟಿಯಡಿಯಿದ್ದು ನಿಸ್ಸಹಾಯಕಳು,
ಜಗದ ಗಮನವೂ ಸಾಮಾನ್ಯವಲ್ಲ ಒಲವೇ...
ಬಿಟ್ಟೆನೆಂದರೂ ಬಿಡದ ಮಾಯೆಯಂತೆ
ಬಿಗಿಯಾಗಿ ಹೊರಗೆಳೆದು ಮನ ಖಾಲಿ ಮಾಡುವುದು
ಬಿಗಿ ಮಾತ್ರ ನನ್ನ ಕತ್ತು ಹಿಸುಕುತಲೇ ಸಾಗುವುದು

ನೀನಿಲ್ಲದ ನನ್ನಿರುವು
ಅದರ ಸುತ್ತುಮುತ್ತು,
ಕವನ-ಕಥನಗಳು,
ಕ್ರಿಯೆ-ಪ್ರತಿಕ್ರಿಯೆಗಳು,
ಬೆಳಗು-ಬೈಗು ಪ್ರಶ್ನೆಗಳಾಗಿ
ನಿನ್ನ ರೊಚ್ಚಿಗೆಬ್ಬಿಸಿದ್ದೂ ಗೊತ್ತು..

ಜಗ ಕಂಡದ್ದು ನನ್ನರ್ಧ ಸತ್ಯ,
ಇನ್ನರ್ಧವ ನೀನು, ನೀನಷ್ಟೇ ಕಾಣಬಹುದು
ಇಣುಕಿದರಾಗದು, ಶೋಧಿಸಲೇಬೇಕು.
ಇಚ್ಛೆಯಿದ್ದರೆ ಹೇಳು,
ಬಗೆದು ತೋರುವೆ ನನ್ನೊಳಗ, ಹುಡುಕಿಕೋ..
ನಂಬುವುದಾದರೆ ಕೇಳು,
ಇರುವುದಲ್ಲಿ ನಿನದೇ ಬಿಂಬ, ಅದರಲುತ್ತರ ಕಂಡುಕೋ..









Sunday, February 24, 2013

ಅಬ್ಜಾರಣ್ಯ ಬೆಳಕಾಯಿತು


----------------------

ಬಿಳಿಯುಟ್ಟು, ಬೆಳ್ಳಿಯಾಭರಣ ತೊಟ್ಟು,

ಬೆಳ್ಳಿಕಿರೀಟದ ಸುರಸುಂದರಾಂಗ.

ಹೊಳೆಹೊಳೆವ ಮೈಕಾಂತಿ,

ಶುಭ್ರಶ್ವೇತ ವ್ಯಕ್ತಿತ್ವ....

ಕಣ್ಣಿಂದೇಕೋ ನಸುಮಂಕು,

ಕಪ್ಪು ಕೂದಲಡಿ ತಲೆತುಂಬ

ಕಾಡಿದ ಪ್ರಶ್ನೆಗಳೂ ಮಬ್ಬುಕಪ್ಪು..



ತಂದೆಗೇನು, ಇಪ್ಪತ್ತೇಳಲ್ಲ,

ನೂರು ಸಂತಾನಕೂ

ನೂರ್ಮಡಿಸಿಯೋ, ವಿಭಜಿಸಿಯೋ

ವಾತ್ಸಲ್ಯ ಸಮಹಂಚಿಕೆಯಾದೀತು..

ಪ್ರೇಮ ಏಕದಳಧಾನ್ಯ, ಹೇಗೊದಗೀತು?!

ಎರಡೂ ಆಗದು, ಆದರೆ ಚೂರುಚೂರಷ್ಟೇ..

ತನ್ನರಿವಿರದೇ ಮೊಳೆತ ಪ್ರಜಾಪತಿಯ

ಪುತ್ರಿಯರೆಲ್ಲರ ಧಾರೆಯ ನಿರ್ಧಾರಕೆ,

ತಾ ಬಲಿಯಾಗೆ, ದಕ್ಷಗೆ ಬೆಂಬಲವಿತ್ತ ದೈವ

ಅನಿವಾರ್ಯಒಪ್ಪಿಗೆಯ ಮೌನ ತನಗೇಕಿತ್ತದ್ದು?



ರೋಹಿಣಿ ತನ್ನ ಮನದರಸಿ,

ಉಳಿದವರು ಮನೆಗಷ್ಟೇ..

ರೋಹಿಣಿಗಿತ್ತ ಒಂದು ಪ್ರೀತಿ ಮುತ್ತಿಗೂ

ಒಂದೇ, ಎರಡೇ ಇಪ್ಪತ್ತಾರು ಪ್ರಶ್ನಾರ್ಥನೋಟ

ಆರ್ತನಿರೀಕ್ಷೆ, ನಿರಾಸೆ ಮತ್ತಾಪಾದನೆಗಳು.

ಇಲ್ಲದ್ದ ತಾನೆಲ್ಲಿಂದ ತಂದು ಕೊಡಲಿ?!

ಎಲ್ಲ ಇದ್ದೇ ಬೆಳೆದವರಿಗೆ ಇಲ್ಲದ್ದ ಹೇಗೆ ತೋರಿಸಲಿ?



ಅಸಮಾಧಾನದ ಹೊಗೆ ತವರ ತಲುಪಿ,

ಅಲ್ಲಿ ಭುಗಿಲೆದ್ದ ಕೋಪ, ನಭಕದರ ತಾಪ.

ಚೆಲುವಿನೊಡೆಯ ಶಶಾಂಕಗೆ

ವ್ಯಕ್ತಿತ್ವ ನಶಿಸುವ ಶಾಪ..

ಸೊರಗುತ ಸಾಗಿರುವಾತಗೆ ಪ್ರೀತಿಯುಣಿಸಿ,

ಪುಷ್ಟಿ ಮಾಡಲೆತ್ನಿಸುವ ರೋಹಿಣಿ

ಫಲವಿಲ್ಲದ ಸಾಧನೆಗೆ ಕೊರಗುತಾಳೆ.



ಭಕ್ತರಾಧೀನ ಶಿವನ ನೆನಪು,

ಕಾರ್ಮೋಡದೆಡೆ ಮಿಂಚಿನಗೆರೆಯ ಹೊಳಪು...

ತಪಗೈದು ಶಾಪದ ತಾಪವಿಳಿಸುವ ಆಸೆ,

ಚಂದ್ರ ಅಡಿಯಿರಿಸಿದ ಆ ಕಾಡಿನೊಳಗೆ.

ದಟ್ಟಕಾನನದ ಕಡುಪಚ್ಚೆಯಡಿಯ ಕಪ್ಪು,

ತಾರಾಪತಿಯ ಅರೆಕಾಂತಿಗೂ ಬೆಳ್ಳನೆ ಬೆಳಗಿ,

ಅಬ್ಜಾರಣ್ಯ ಬೆಳಕಾಯಿತು..



ತಪಕೆ ಮೆಚ್ಚಿದ ಶಿವ, ತಿಂಗಳನಿಗೆ

ಪಕ್ಷವೆರಡರ ತಿಂಗಳಿನವಧಿಯಿತ್ತ...

ಪಕ್ಷವೊಂದು ಕ್ಷೀಣವಾಗಿಸಿದರೆ,

ಮುಂದಿನದರಲಿ ವೃದ್ಧಿಯಾಗೆಂದ..

ಹುಣ್ಣಿಮೆ, ಅಮಾವಾಸ್ಯೆಗಳ ವ್ಯಾಖ್ಯಾನಿಸಿ,

ಶುಕ್ಲ, ಕೃಷ್ಣಪಕ್ಷಗಳ ನೇಮಿಸಿದ...



ಉಡುಪತಿ ತಪಗೈದು ವಿರಾಜಿಸಿದ

ಜಾಗವೇ ಉಡುಪಿ,

ಚಂದ್ರನ ಪರಿಪಾಲಿಸಿದ ಈಶ್ವರನೇ

ಚಂದ್ರಮೌಳೀಶ್ವರ ಎಂದಾಯಿತು.



(ನಾನು ಓದಿದ ಪೂರ್ಣಪ್ರಜ್ಞ ಕಾಲೇಜಿನ ಆವರಣದೊಳಗೆ ಈ ಅಬ್ಜಾರಣ್ಯವಿದ್ದ ಜಾಗವಿದೆ, ಅಲ್ಲೀಗ ನಾಗಮಂಡಲದ ತಯಾರಿಯ ಸಂಭ್ರಮವಂತೆ, ತವರಿಂದ ಬಂದ ಆ ಸುದ್ಧಿ ನನ್ನೊಳಗೆ ಮೂಡಿಸಿದ ಸಾಲುಗಳಿವು)