ಹೀಗೊಂದು ಆಹ್ವಾನ ನಿನಗೆ
----------------
ಗೊತ್ತು, ನಿನಗೂ ಅಗತ್ಯವಿಲ್ಲ, ನನಗೂ
ನಂಬಿಸುವ, ಒಪ್ಪಿಸುವ ಜರೂರಿಂದು ಉಳಿದಿಲ್ಲ..
ಆದರೂ ತುಂಬಿ ಹೊರ ತುಳುಕಿದ ಹನಿಗಳಿವು,
ಬೇಕಿದ್ದರೆ ಬಿಸಿಹಸ್ತ ಚಾಚು, ತುಸು ತಂಪೆನಿಸೀತು.
ಗೊತ್ತು, ಈ ನಗು ನಿನಗೊಂದು ಪ್ರಶ್ನೆ...
ನೀ ಹೊರಟ ಕ್ಷಣವೂ ನಾನತ್ತಿರಲಿಲ್ಲ,
ಈಗ್ಯಾಕೆ ಅತ್ತೇನು, ನಗೆಯಷ್ಟೇ ನನಗೆ ಸ್ವಂತ.
ಈ ನಗು ಸಾಮಾನ್ಯವಲ್ಲ, ನನ್ನೊಲವೇ..
ಕಿತ್ತು ತಿನ್ನುವಳುವಿಗೂ, ಮೆಟ್ಟಿ ಹಿಸುಕೋ ನೋವಿಗೂ
ದಟ್ಟ ಮುಳ್ಳಿನ ಪರದೆಯಾಗುವುದು,
ಮುಳ್ಳು ಮಾತ್ರ ನನ್ನ ಚುಚ್ಚುತಲೇ ಸಾಗುವುದು.
ಗೊತ್ತು, ಈ ಮೌನವೂ ನಿನಗೊಂದು ಪ್ರಶ್ನೆ.
ನೀನಿದ್ದಾಗ ಅಪರಿಚಿತವಿತ್ತು, ಈಗ ಬಲುಆಪ್ತ.
ನೀ ಹೋಗುತ್ತಾ ಪರಿಚಯಿಸಿ ಹೋದೆಯಲ್ಲಾ,
ಇದೂ ಸಾಮಾನ್ಯವಲ್ಲ ಒಲವೇ...
ಮಾತು ಹುಟ್ಟದಂತೆ, ಹುಟ್ಟಿದರೂ ದನಿಯಾಗದಂತೆ
ಮುತುವರ್ಜಿಯ ಶಿಸ್ತು ನೇಮಿಸುವುದು.
ಶಿಸ್ತು ಮಾತ್ರ ನನ್ನುಸಿರುಗಟ್ಟಿಸುತಲೇ ಸಾಗುವುದು.
ಗೊತ್ತಾ, ನಾ ದೃಶ್ಯವಾಗಿರಲೇ ಇಲ್ಲ,
ಈಗ ದೃಷ್ಟಿಯಡಿಯಿದ್ದು ನಿಸ್ಸಹಾಯಕಳು,
ಜಗದ ಗಮನವೂ ಸಾಮಾನ್ಯವಲ್ಲ ಒಲವೇ...
ಬಿಟ್ಟೆನೆಂದರೂ ಬಿಡದ ಮಾಯೆಯಂತೆ
ಬಿಗಿಯಾಗಿ ಹೊರಗೆಳೆದು ಮನ ಖಾಲಿ ಮಾಡುವುದು
ಬಿಗಿ ಮಾತ್ರ ನನ್ನ ಕತ್ತು ಹಿಸುಕುತಲೇ ಸಾಗುವುದು
ನೀನಿಲ್ಲದ ನನ್ನಿರುವು
ಅದರ ಸುತ್ತುಮುತ್ತು,
ಕವನ-ಕಥನಗಳು,
ಕ್ರಿಯೆ-ಪ್ರತಿಕ್ರಿಯೆಗಳು,
ಬೆಳಗು-ಬೈಗು ಪ್ರಶ್ನೆಗಳಾಗಿ
ನಿನ್ನ ರೊಚ್ಚಿಗೆಬ್ಬಿಸಿದ್ದೂ ಗೊತ್ತು..
ಜಗ ಕಂಡದ್ದು ನನ್ನರ್ಧ ಸತ್ಯ,
ಇನ್ನರ್ಧವ ನೀನು, ನೀನಷ್ಟೇ ಕಾಣಬಹುದು
ಇಣುಕಿದರಾಗದು, ಶೋಧಿಸಲೇಬೇಕು.
ಇಚ್ಛೆಯಿದ್ದರೆ ಹೇಳು,
ಬಗೆದು ತೋರುವೆ ನನ್ನೊಳಗ, ಹುಡುಕಿಕೋ..
ನಂಬುವುದಾದರೆ ಕೇಳು,
ಇರುವುದಲ್ಲಿ ನಿನದೇ ಬಿಂಬ, ಅದರಲುತ್ತರ ಕಂಡುಕೋ..
ಪ್ರೀತಿಯ ಹೆಪ್ಪುಗಟ್ಟಿರುವ ಭಾವಗಳನ್ನು ಬಹಳ ಆಪ್ತವೆನ್ನಿಸುವ ಶೈಲಿಯಲ್ಲಿ ಹಾಳೆಗಳ ಮೇಲೆ ಚೆಲ್ಲಿದಂತಿದೆ, ಈ ಕವಿತೆ. ಮನಸ್ಸಿನಲ್ಲಿ ಅಂತರ್ಗತವಾದ ಪ್ರೀತಿಯ ಪಡಿಯಚ್ಚ ಭಾವಗಳನ್ನು ಕಂಡುಕೊಳ್ಳಲು ಅವನಿಗೆ ಕೊಟ್ಟ ಅಹ್ವಾನ ವಿಭಿನ್ನವಾಗಿದೆ. ನನಗಿಲ್ಲಿ ಸಿಕ್ಕ ಮತ್ತೊಂದು ಎಳೆ ಎಂದರೆ ಸತ್ಯಕ್ಕೆ ಎರಡರ್ಧಗಳಿರುತ್ತವೆ. ನಮಗೆ ದಕ್ಕಿದ್ದೊಂದು, ನಮ್ಮ ಎದುರಿನವರಿಗೆ ದಕ್ಕಿದ್ದೊಂದು. ಎರಡರ ಸಮಾಗಮವಾದರೆ ಮಾತ್ರ ನಿಜ ಸತ್ಯದ ಅರಿವಾಗಬಹುದು. ಚೆನ್ನಾಗಿದೆ ಅನಕ್ಕ. :)
ReplyDeleteನಿಮ್ಮ ಪ್ರೋತ್ಸಾಹಕ್ಕೆ ಅಭಾರಿ prasaad
Delete