Monday, February 4, 2013

ಮುಗಿಯದ ರಾತ್ರಿ..


------------------------------

ಕತ್ತಲಲ್ಲ, ರಾತ್ರಿ ಬಹಳ ಕಾಡುತಿದೆ..

ನಿದ್ರೆಯೊಮ್ಮೆ ಪ್ರೌಢೆಯಂತೆ ಮಡಿಲಿತ್ತರೆ

ಒಮ್ಮೆ ತರಳೆಯಂತೆ ಕಣ್ಣುಮುಚ್ಚಾಲೆ..

ಕಿರಿಯದಕೆ ಇತ್ತ ಅಮ್ಮನ ಗಮನಕಳುವಂತೆ

ಮೊದಲ ಕೂಸು, ನಾ ನಿದ್ದೆಗತ್ತಂತಿದೆ.....



ನಿದ್ದೆಗೊಡದ ರಾತ್ರಿಯಲಿ ಅಜ್ಜಿಯ ನೆನಪು.

ಅಜ್ಜನಿಲ್ಲದ ಹತ್ತನೆಯ ವರ್ಷವೂ ಬೆಚ್ಚಿಬೀಳಿಸಿದ

ಧಿಗ್ಗನೆದ್ದು ಕೂರಿಸಿದ ಆತನ ಕಹಿಕನಸು

ಆಕೆ ಬೆಚ್ಚಿದ್ದಕೆ ನಾ ಬೆಚ್ಚಿ, ಎಚ್ಚರಾಗಿ

ಬಾಚಿ ತಬ್ಬುವ ಅಜ್ಜಿಯೆದೆಬಡಿತದ ಲಾಲಿಗೆ

ಮತ್ತೆ ಬೆಚ್ಚನೆ ಸೆರಗೊಳಹೊಕ್ಕ ಆ ನಿದ್ದೆಯಲಿ

ಸಂವಹಿಸಲ್ಪಟ್ಟ ಆಕೆ ಈಗ ಮೈದುಂಬಿ ಬಂದಂತೆ...



ರಾತ್ರಿಗಳಲಿ ಸೀತಕ್ಕನೂ ಕಾಡುತಾಳೆ.

ಹಗಲು ಒಂಟಿ ಮನೆಯೊಳಗೆ ಒಂಟಿ ಯುವತಿ.

ರಾತ್ರಿ ನೂರಾಳು ಮನೆಯೆದುರು ಸರದಿಗೆ ಕಾದು,

ಥೇಟ್ ಆಕೆಯ ನಾಯಿಯಂತೆ ಸುರಿಸುತ್ತ ಜೊಲ್ಲು.

ಕ್ಲಾಸಲ್ಲಿ ಪಕ್ಕ ಕೂರುತಿದ್ದವಳು ತಾತನೋರಗೆಯ

ನಾಯಕರನೊತ್ತಿ ಕೂತು ನಕ್ಕದ್ದು ಅಂದೊಂದು ಒಗಟು.

ನೂರುತ್ತರ ಹೊತ್ತುತಂದಾಕೆ ಈಗ ನನ್ನೊಳಗಾವರಿಸಿದಂತೆ...



ಮುರಿದ ಮೊದಲನೆ ಗೊಂಬೆ, ಕಿರುಬನೊಯ್ದ ಮೊದಲ ಕರು,

ಕಳೆದ ಮೊದಲನೆಯ ಕೊಡೆ, ಶಾಲೆಯ ಮೊದಲನೆ ಹೊಡೆತ,

ಮೊದಲ ಕಳ್ಳತನ ಬಯಲಾಗೆ ಅಮ್ಮ ಅಪ್ಪಿ ಬರೀ ಅತ್ತದ್ದು,

ನಾ ಕಲಿಸಿದ ತಂಗಿಯ ಮೊದಲನುಡಿ, ಮೊದಲ ಸ್ಪರ್ಧೆ,

ಮೊದಲ ಪರೀಕ್ಷೆ, ಮೊದಲ ಸೋಲು-ಗೆಲುವು,

ಮೊದಲ ನಿರಾಕರಣೆ, ಮೊದಲ ಸ್ನೇಹ, ಕೋಪ-ರಾಜಿ,

ಮೊದಲ ನಾಟಕದ ಪಾತ್ರ, ಸುಟ್ಟ ಮೊದಲ ಪ್ರೇಮ ಪತ್ರ...



ಹೀಗೆ ಹರಡಿ ಸಾವಿರಾರು ಅಂದಿನ ಮೊದಲುಗಳು,

ನಿಶೆಯಂಗಳದಿ ಸದ್ದಿರದ ಗಲಾಟೆಗೋಜಲು.

ಶಾಂತಿಪ್ರಿಯೆ ನಿದಿರೆ ಮಾರುದೂರ ಸಾಗಿಹಳು

ಮಾತಿಲ್ಲ, ಕತೆಯಿಲ್ಲ, ಮೌನವೂ ಅಲ್ಲದ ಬರೀ ನಿಶ್ಯಬ್ಧ.

ಶಬ್ಧಲೋಕದ ಲೀಲೆಯೊಳು ಮುಳುಗುವ,

ಒಳಗೆನ್ನನಷ್ಟೇ ಕಾಣುವ ಹಂಬಲ ಬೆನ್ನತ್ತಿದೆ ಬೆಳಗ.

ದಾಪುಗಾಲಿಗು ಮೀರಿ ಬೆಳೆವ ರಾತ್ರಿ ಬಹಳ ಕಾಡಿದೆ.







3 comments:

  1. ಕವಿತೆಯ ಉಗಮದ ಮೂಲ ಪರಿಸರ ಕಥನವನ್ನೂ ಕಟ್ಟಿಕೊಟ್ಟ ಕವಿತೆ.

    ಮೆಚ್ಚುಗೆಯಾಯ್ತು.

    ReplyDelete
  2. Super madam, Where do you get these words from? please teach me also:)

    ReplyDelete