Thursday, February 21, 2013

ನಾನೂ ಕಲಿಯಬೇಕೇ?


-----------------

ಅಮ್ಮನ ಅಡುಗೆ ಮನೆ ಎದುರಾಗಲೆಲ್ಲ

ಹಲ ಅನಿಸಿಕೆಗಳ ಅಮ್ಮನ ಮನ

ಒಳಕರೆದಂತೆ, ಬೆತ್ತಲಾಗಬಯಸಿದಂತೆ...



ಸಕ್ಕರೆ ಡಬ್ಬದ ತುಪ್ಪದ ಇರುವೆ

ಕರೆಯದೆ, ಬಯಸದೆ ಬಂದ ಭಾವ

ಸ್ವಾರ್ಥವಷ್ಟೇ ಕುರುಹಾದ ವಾಸನೆ



ಸಾಸುವೆ ಡಬ್ಬದಲಡಗಿ ಕೂತ ಕಾಸು

ಮುಚ್ಚಿಟ್ಟ ಕಾದಿರಿಸಲ್ಪಟ್ಟ ಭಾವ

ನಾಳೆಗಳ ಕನಸಾದ ಝಣಝಣ...



ಮೇಲೆ ಜಂತಿಯ ಆಸ್ತಿ ಕೈವಸ್ತ್ರ,

ಕೊಳಕು, ಚೆಲ್ಲಿದ್ದು, ಉಕ್ಕಿದ್ದು ಒರೆಸಿದ ಭಾವ

ಮೂಲೆಸೇರಿದ ಹತಾಶೆ ಕಪ್ಪುಕಪ್ಪು



ಬಾಗಿಲ ಹಿಂದಿನ ಮೂಲೆಯ ಕಸಬರಿಗೆ

ಬಿಡದೆ ಹರಡುವ ಕಸವ ಗುಡಿಸುವ ಭಾವ

ಸುಸ್ತು ಅದ ಹೊರಹಾಕಿ ಎತ್ತಿಎತ್ತಿ.



ಮಸಾಲೆ ಡಬ್ಬದ ಬಿಗಿಯಾದ ಮುಚ್ಚಳ

ಜತನವಾಗಿಟ್ಟ ಬಲುತೀಕ್ಷ್ಣ ಕಂಪು ಭಾವ

ಹೊರಬಾರದ ಅಮೂಲ್ಯ ಘಮಘಮ



ಎತ್ತರದಿ ಬೋರಲ್ಹಾಕಿದ ತಿಂಡಿ ಡಬ್ಬ,

ಹಸಿವೆ ತಣಿಸಿ ತೃಪ್ತವಾಗುವ ಧನ್ಯತಾಭಾವ

ಕೋರಿಕೆಯಿಲ್ಲದೆ ಇಂದು ಖಾಲಿಖಾಲಿ



ಅರೆ ತುಂಬಿದ ಅಕ್ಕಿ-ಉದ್ದಿನ ಡಬ್ಬ

ಅರ್ಧ ತಣಿದ ಬಾಯಾರಿದ ಘಟ್ಟದ ಭಾವ

ನಿರಾಸೆ ಭರವಸೆಗೆ ಕಾಯುವ ಹಪಹಪಿ



ಒಲೆಮೇಲೆ ಕಾಯಿಸಲಿಟ್ಟ ಎಣ್ಣೆಬಾಣಲಿ

ಕುದಿವ ಒಳಗಲಡಗಿದ ಆರ್ದ್ರಭಾವ

ತಿಂಡಿಗಂಟುವ ಅನಗತ್ಯ ಎಣ್ಣೆ ಪಸೆಪಸೆ



ಅಮ್ಮ ಮಾತ್ರ ಮರೆಮಾಡಿದ್ದೊ, ಬಯಲಾದದ್ದೋ...

ನಾ ಎದುರಾಗಲೆಲ್ಲ..

ಊರುಗೋಲು ಕಿತ್ತೆಸೆದು ನಗುವನಾಧರಿಸಿ,

ನೋವ ವಾತ್ಸಲ್ಯದಡಿಗೊತ್ತಿ ಸ್ವಾಗತಿಸಿ,

ಮತ್ತೆ ಚಿಗಿತು ಅರಳಿದಂತೆ...



ಅಡುಗೆ ಮನೆ ಹೇಳಿದ್ದೂ

ಅಮ್ಮ ತೋರಿದ್ದೂ ಹೊಂದಿಕೊಳ್ಳದೆ

ಮತ್ತೆ ಎಂದಿನಂತೆ ಗೊಂದಲ ಹೊತ್ತು

ವಾಪಾಸಾಗುತ್ತೇನೆ ನನ್ನ ಅಸ್ತಿತ್ವಕೆ..

ಮತ್ತದೇ ಅಡುಗೆಮನೆ, ಇರುವೆ ಸಾಲು

ಅದೇ ಡಬ್ಬಗಳು, ಮಸಿಬಟ್ಟೆ.....

ಯೋಚಿಸುತ್ತೇನೆ,

ಕಲಿಯಬೇಕೇ ನಾನೂ ಅಮ್ಮನಂತೆ?

ಬತ್ತಲು ಅಡುಗೆಮನೆಗೆ ನಗೆಯುಡಿಸಿ,

ಖಾಲಿಗಳ ನಗೆಯಲೇ ತುಂಬುವುದನ್ನು.

No comments:

Post a Comment