Wednesday, February 13, 2013

ಇಷ್ಟೆಲ್ಲಾ ಬೇಕೇ?

--------------------

ಪರಿಚಯ ಸಂಪರ್ಕದ ಮೂಲ,
ಸಂಪರ್ಕ ಸಂಬಂಧಕೆ..ಇದುವರೆಗೆ,
ಹರಿದಷ್ಟೇ ಸಲೀಸು ನೀರು ತಗ್ಗಿಗೆ.

ಸಂಬಂಧ ಅನುಬಂಧವಾಗುವೆಡೆ
ಎಚ್ಚರಿರಬೇಕು, ನಿಧಾನಿಸಬೇಕು..
ಹರಿಯುವಿಕೆಗಲ್ಲಲ್ಲಿ ನಿರ್ಬಂಧ ಬೇಕು.

ಅನುಬಂಧವದಷ್ಟೇ ಅಲ್ಲ, ಶಾಪವದಕೊಂದು
ಹಿಂದೆ ನೋವು, ನಿರಾಸೆಗಳ ಒಡಹುಟ್ಟು.
ಸಿಹಿಕಹಿಗಳಲಲ್ಲಿ ಕಹಿಯ ತೂಕವೆ ಮೇಲು.

ಮದ್ದು ಜಡ್ಡುಜೀವ ತಡೆದುಣ್ಣುವಂತೆ,
ನಾಳೆಗೀ ಕ್ಷಣವ ಬಲಿಕೊಡಲೇಬೇಕು..
ಕಳಕೊಳುವ ಛಾತಿಗಷ್ಟೇ ಸಾಧ್ಯ ಈ ಹೆಜ್ಜೆ.

ಸಂಖ್ಯೆಯಲ್ಲ, ಉಳಿವೇ ಬಲ ಅನುಬಂಧಕೆ,
ಕೆಸರಲುಳಿವಂತೆ ಕಮಲ ಬೇಸರಿಸದೆ,
ಬಂಧ ಕಾಯಬೇಕು ಪರಿಗೆ ದಿಗಿಲಾಗದೆ.

ಗಳಿಕೆ ಹಿರಿದಲ್ಲ, ಉಳಿಸಿಕೊಳುವುದು..
ಕಳವಳವ ದಾಟಿಯಷ್ಟೇ ಭದ್ರನೆಲೆ ಇಹುದು.
ದಾಟುವ ಕಾಲಿಗಷ್ಟೇ ಸೂಕ್ತ ಈ ಸವಾಲು.

ಉದುರುವುದಕೇ ಎಳಸುವಂತೆ ಹಣ್ಣೆಲೆ
ಪಕ್ವವಾಗುತ ತೊಟ್ಟು ಬಲಹೀನವಂತೆ,
ಕಳಚುವುದ ಬಲಗೊಳಿಸೆ ಬೇಕು ಬಲುತಾಳ್ಮೆ .









No comments:

Post a Comment