Tuesday, February 19, 2013

ಅಮ್ಮಾ, ನಿನಗೆ


---------------------

ನಿನಗೆಂದೇ ಎತ್ತಿರಿಸಿದ್ದೆ

ಜತನದಿಂದೊಂದಷ್ಟು ಕ್ಷಣ

ನೀನೆನಗೆ ಈ ಬಾಳಿನುಡುಗೊರೆಯಿತ್ತ ದಿನ.



ಹೊತ್ತಷ್ಟೂ ತಿಂಗಳಕಾಲ,

ಗಾಳಿನೀರನ್ನಗಳ ತುತ್ತುಣಿಸಿ,

ದೇಹದೊಂದು ತುಂಡು ನನ್ನ ಪೊರೆದಿದ್ದೆ.



ಉಗುಳಲೂ ನುಂಗಲೂ ಆಗದ ಬಿಸಿತುಪ್ಪ

ನಿನ್ನೆಲ್ಲ ಸತ್ವ ಹೀರಿದ ನನ್ನ ಅಸ್ತಿತ್ವ

ನಿನನೊದ್ದುದನೂ ನಕ್ಕು ಸುಖಿಸಿದ್ದೆ.



ಶುಭದೆಡೆಗಿತ್ತು ನೋವುಣುತ ನೀ ಕಾದ ಗಳಿಗೆ

ನಗುಹಾಸಿನ ಈ ಬಾಳಹಾದಿಯೇ ಸಾಕ್ಷಿಯದಕೆ

ಆದರೆ,ಹೆಣ್ಣು ಹೆತ್ತ ಸೃಷ್ಟಿಕಾರ್ಯಕಿಲ್ಲ ಹೆಗ್ಗಳಿಕೆ.



ಹೆಣ್ಣುಹುಟ್ಟಿದ ಕುವಾರ್ತೆಗೆ ಹಿಮ್ಮೇಳ ನನ್ನ ಅಳು.

ನೀನಷ್ಟೇ ನಕ್ಕದ್ದಲ್ಲಿ, ರಕ್ತವೂ ನಿನದೇ ಹರಿದದ್ದು.

ಅರೆಬಿರಿದ ಕಣ್ಣು ಕೇಳಿದ್ದವಂತೆ, "ಹೇಗಿದೆ ಕಣ್ಣು-ಕೂದಲು?"



ಒಳಗೂ ಹೊರಗೂ ನಿನ್ನತನವೆರೆದೇ ಕಾದೆ,

ತಾಳುವ ಶಕ್ತಿಯೆಲ್ಲ ಧಾರೆಯೆರೆದೆರೆದು ಬೆಳೆಸಿದೆ,

ಜಗಕೆ ದೈವ ಸಾಕ್ಷಾತ್ಕಾರದೊಂದು ಸಾಧ್ಯತೆಯಾದೆ.



ಆ ದಿನ ನನದಲ್ಲ, ಅಮ್ಮ, ನಿನದು, ನಿನದಷ್ಟೇ..

ನೀ ಸೃಷ್ಟಿಸಿದ್ದು, ನಿನ್ನ ಅಭಿನಂದಿಸಬೇಕು,

ಅಭಿವಂದಿಸಬೇಕು, ಹರಸಬೇಕಾ ಘನಕಾರ್ಯಕೆ.



ನೋಡು, ಜಗದಗಲದ ವಾರ್ತೆ- ಹಾರೈಕೆಯಲಿ,

ಕಾಣೆಯಾಯ್ತು ನಿನ್ನ ಹಕ್ಕಿನ ಆ ನಾಲ್ಕಾರು ಕ್ಷಣ...

ಕೇಳಬೇಕಿತ್ತು ನಿನ್ನ.....

"ಅಮ್ಮಾ, ಯಾವ ಹೊತ್ತಲೇ ನೀನನ್ನ ಹೆತ್ತದ್ದು?

ತುಂಬ ನೋಯಿಸಿದೆನೇನೆ, ಕರ್ಕಶವೇ ನಾನತ್ತದ್ದು?

ಕರುಳಬಳ್ಳಿ ಕತ್ತರಿಸೆ ಕಿತ್ತುಕೊಂಡಂತನಿಸಿತೇನೇ?

ಇತ್ತೇನೇ ನನರೂಪ ನೀ ಕನಸಲಿ ಕಂಡಂತೆ?

ಹೀಗೇ ಇನ್ನೇನೇನೋ....ಪ್ರಶ್ನೆಗಳ...

ನಿನನೊಯ್ಯಬೇಕಿತ್ತು ಮತ್ತೆ ಆ ಗರಿಮೆಗೆ,

ಜಗದ ಅತಿ ಎತ್ತರ ನೀ ಮುಟ್ಟಿದ ಹೊನ್ನ ಕ್ಷಣಕೆ.



ಇರಲಿ ಬಿಡು, ಕಾಯುವಾ ಇನ್ನೊಂದು ಸಲಕೆ,

ಹತ್ತು ಮತ್ತೆರಡಷ್ಟೇ ಮಾಸ ಮತ್ತಲ್ಲಿ ತಲುಪಲಿಕೆ

ಮೊದಲೆದ್ದು ನೆನೆವಾಗಲೇ ನಿನ್ನ ಕರೆವೆ,

ನಾ ಕೇಳಬೇಕಾದ್ದೆಲ್ಲ ಆಗಲೇ ಕೇಳಿಬಿಡುವೆ.

















3 comments:

  1. ನಿನಗೆಂದೇ ಎತ್ತಿರಿಸಿದ್ದೆ

    ಜತನದಿಂದೊಂದಷ್ಟು ಕ್ಷಣ

    ನೀನೆನಗೆ ಈ ಬಾಳಿನುಡುಗೊರೆಯಿತ್ತ ದಿನ.

    ಹೆಣ್ಣುಹುಟ್ಟಿದ ಕುವಾರ್ತೆಗೆ ಹಿಮ್ಮೇಳ ನನ್ನ ಅಳು.

    ನೀನಷ್ಟೇ ನಕ್ಕದ್ದಲ್ಲಿ, ರಕ್ತವೂ ನಿನದೇ ಹರಿದದ್ದು.

    ಅರೆಬಿರಿದ ಕಣ್ಣು ಕೇಳಿದ್ದವಂತೆ, "ಹೇಗಿದೆ ಕಣ್ಣು-ಕೂದಲು?"

    ಅದ್ಬೂತವಾದ ಸಾಲುಗಳು.....

    ಹೆತ್ತ ಒಡಲು ತಂಪಾಗಿಸುವಂತಿದೆ..
    ತುಂಬಾ ಚನ್ನಾಗಿದೆ...

    ReplyDelete
  2. ತಮ್ಮ ಜನುಮ ದಿನವನ್ನು ಹೀಗೆ ಆಚರಿಸಿಕೊಂಡ ರೀತಿಯೇ ನಮಗೆ ನಿಮ್ಮ ಬಗೆಗಿನ ಗೌರವ ಇಮ್ಮಡಿಯಾಗಲು ಕಾರಣವಾಯಿತು. ಅಮ್ಮನನ್ನು ನೆನೆವುದೇ ನಿಮ್ಮ ಒಳ್ಳೆಯತನ.

    ReplyDelete