Monday, February 18, 2013

ರಾಧಾಕೃಷ್ಣರ ಹಿಂದೆ ಮುಂದೆ.

------------------------------
ಕೃಷ್ಣನ ಕೊಳಲಲಿ ರಾಧೆಯುಸಿರೇ ಗಾನ,
ರಾಧೆ ಕಣ್ಣಲಿ ಕೃಷ್ಣನೊಲವೇ ಲೋಕ.
ಜಗಕಿಂದೂ ಈ ಬಂಧವೊಂದು ಸೋಜಿಗ.

ಯಾರೋ ಮೋಹನ ಯಾವ ರಾಧೆಗೋ ಎಂದು
ವಿರಹದುರಿಯ ಬಿಸಿಯಲಿ,
ರಾಧಾಸಮೇತಾ ಕೃಷ್ಣಾ ಎನುತಾ
ಸಮ್ಮಿಲನದ ಸೊಗಸಲಿ
ತಮ್ಮಲೊಂದಾಗಿಸುವ ಲೋಕಕೆ
ರಾಧಾಕೃಷ್ಣರು ಅಲ್ಲಲ್ಲಿ ಅಂತೆಯೇ ಒದಗುತಾರೆ.

ಅತೃಪ್ತ ಹೆಣ್ಣಿನೊಡಲಿನಾಸೆಯ ದ್ಯೋತಕ,
ಪತಿಯಲ್ಲದವನ ಹಿಂದೆ ಜಾರಿದ ಜಾರೆ,
ವ್ಯರ್ಥ ಸುಳ್ಳನ ಬಲೆಹೊಕ್ಕ ಪೆದ್ದು ನೀರೆ,
ಸಿಗದವಗೆ ಜಗವ ನೀವಾಳಿಸೊಗೆದ ಪಾತಕಿ
ರಾಧೆಗೋ ಬಣ್ಣಬಣ್ಣದ ವ್ಯಕ್ತಿ ಚಿತ್ರಣ...

ವಯಸೆನ್ನದೆ ಹೆಣ್ಣ ಸೆಳೆವ, ವರಿಸೆ ಕದ್ದೊಯ್ಯುವ,
ಸಾವಿರಾರು ಮಂದಿಯ ವರಿಸಿ ಮರೆತವ,
ಸೀರೆಕದ್ದವ, ಕೋತಿಸುತೆಯನೂ ಬಿಡದವ,
ರಾಧೆಯನಷ್ಟೇ ವರಿಸದುಳಿದವ, ಹೆಣ್ಣಿಗನವ
ಹೀಗೆ ಕೃಷ್ಣಗೂ ಅಷ್ಟೇ ಬಿರುದು-ಬಾವಲಿ...

ನಮ್ಮೊಳಗಿನ ಕೆಡುಕನವರ ಮಧ್ಯೆ,
ಅವರೊಳಗಿನ ಪಾವಿತ್ರ್ಯತೆಯ ನಮ್ಮಲ್ಲಿ,
ಹುಡುಕಿ ಸಿಗದೆ, ವ್ಯರ್ಥ ಆರೋಪಿಸುವ ನಿರ್ಬಲರೇ,
ಅವರು ನಿರ್ಬಲರಲ್ಲ, ಪ್ರೇಮವೇ ಮತ್ತು ಪ್ರೇಮವಷ್ಟೇ
ಲವಾದ ಸದೃಢ ಮನಸ್ಕರು, ಸರಳ ಮನಗಳು.
ಅವರ ಕಾಡದ ಪ್ರಶ್ನೆಗಳ ನಿಮ್ಮ ಮನದಿ ಹೊರಡಿಸಿ,
ಅವರು ನೋಡದ ಕ್ಲಿಷ್ಟತೆಯ ಅವರೊಳು ಆರೋಪಿಸಿ,
ಅಲಿಲ್ಲದ ಅಶುದ್ಧತೆ, ಅಸ್ಪಷ್ಟತೆಯ ನಿಮ್ಮೊಳಾವಾಹಿಸಿ,
ಅವರ ವಿಮುಖರಾಗಿಸುವುದು ಕನಸಲೂ ಸುಳ್ಳು.
ಅದ ಕಲ್ಪಿಸುವ ವಿಕೃತ ತೃಪ್ತಿಗೆ ಕೈ ಚಾಚದಿರಿ.

ಪ್ರಶ್ನಿಸದಿರಿ, ಆರೋಪಿಸದಿರಿ, ಅವಾಹಿಸಿಕೊಳದಿರಿ,
ಸಾಧ್ಯವಾದರೆ ಅನುಮೋದಿಸಿ, ಮತ್ತು ಅನುಸರಿಸಿ.
ಆಕೆ ಅವನಲೆ ಮೈಮರೆತರೂ, ವ್ರಜವ ಬಿಟ್ಟಿರಲಿಲ್ಲ
ಆತ ಸಂಪರ್ಕ ತೊರೆದೂ, ಪ್ರೇಮ ಅಧೋಮುಖಿಯಾಗಲಿಲ್ಲ.
ಅವರೊಳಗೆ ಅದೆಂದೂ ಊರ್ಧ್ವಮುಖಿಯೇ...

ನನ್ನೊಲವಿನ ಲೋಕವೇ, ನಂಬಿಕೆಯೆಂದೂ ಕೃಶವೇ.
ವಿರಹದ ಕಣ್ಣೀರನೇ ಮೆತ್ತಿಮೆತ್ತಿ ದೃಢ ಪಡಿಸಬೇಕು.
ಸಂಶಯದ ಗಾಳಿಗಾಡಾಡಿ ಮುರಿಯಲೆಳಸಿದಾಗ
ಕಣ್ಮರೆ ಪ್ರೇಮಿಯ ನೆನಪು ಅಂಟಿಸುವ ಗೋಂದಾಗಬೇಕು.
ಅಂಥದ್ದೊಂದು ಮಾತ್ರ ಅವರಂಥದ್ದಾದೀತು...
ಯುಗಗಳೇ ಕಳೆದರೂ ಸೆಳೆವಷ್ಟು ಹಸಿರಾಗಿದ್ದು,
ಕೋಟಿ ಪರವಿರೋಧಗಳಲೂ ಹಾಗೇ ಗೆದ್ದುಳಿದೀತು.









1 comment:

  1. ಅತ್ಯುನ್ನತ ಪ್ರೇಮ ಸಂಕೇತವನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತ, ವಿಶ್ಲೇಷಿಸಿದ್ದೀರ.

    ReplyDelete