Thursday, February 7, 2013

ನಾವೇಕೆ ಹೀಗೆ?


--------------------

ಇರುವೆಗಳಂತೇಕೆ ನಾವಿಲ್ಲ?

ನೋಡಲ್ಲಿ....

ಗುರುತಿಲ್ಲ, ಕಾರ್ಯಕಾರಣವಿಲ್ಲ,

ಉದ್ದೇಶವಿಲ್ಲ, ಪ್ರಯೋಜನದರಿವಿಲ್ಲ,

ಎದುರಾದ ಇನ್ನೊಂದಕೆ ಭಾವಸ್ಪರ್ಶದ ಮುತ್ತಿತ್ತು,

ಅದೆಲ್ಲಿಗೋ ಇದೆಲ್ಲಿಗೋ ಮರುಗಳಿಗೆಗೆ.


  ಹಕ್ಕಿಗಳಂತೇಕೆ ನಾವಿಲ್ಲ?

ನೋಡಲ್ಲಿ.....

ಗೂಡುಕಟ್ಟಿ, ಮೊಟ್ಟೆಯಿಟ್ಟು, ಕಾಪಾಡಿ,

ಕಾವಿತ್ತು, ಮರಿಮಾಡಿ, ಗುಟುಕಿತ್ತು,

ಹಾರಾಟ ಕಲಿಸಾಟ.. ಕರ್ತವ್ಯವೆಂದಷ್ಟೇ ಮಾಡಿದ್ದು.

ಮರುದಿನವೆ ಮರಿ ಹೊರಗೆ, ತಾಯೊಳಗೆ.


ಮರದಂತೇಕೆ ನಾವಿಲ್ಲ?

ನೋಡಲ್ಲಿ...

ಬಿತ್ತಿದವರಾರೋ, ನೀರುಣಿಸಿದ್ದು ಯಾರೋ,

ಋಣಸಂದಾಯದ, ಬೆಲೆಕಟ್ಟುವ ಗೋಜಿಲ್ಲ

ಗಾಳಿನೆರಳು ಹೂಹಣ್ಣಿತ್ತು ಒದಗುವುದಷ್ಟೇ ಗೊತ್ತು,


ಉರುವಲು ಕಡಿದವಗೆ, ಉರಿದು ಬೂದಿ ಪೊರೆದ ನೆಲಕೆ.


ಸಿಗುವುದರ, ಉಳಿವುದರ ಲೆಕ್ಕಾಚಾರ ನಮಗಷ್ಟೇ...

ಬಾಳಯಾನದ ಹೆಜ್ಜೆಹೆಜ್ಜೆಗೂ,

ಭಾವಸಿಂಚನದ ಹನಿಹನಿಗೂ,

ಸ್ನೇಹಕೂ, ಪ್ರೇಮಕೂ, ಅನುಬಂಧಕೂ,

ಸ್ಪಂದನೆಗೂ, ಅಭಿನಂದನೆ-ಅಭಿವಂದನೆಗೂ..

ಶುರುವಿಗೇ ಕೊನೆಯ ಅಂದಾಜಿಸುವ ಲೆಕ್ಕ.


  ನಿರೀಕ್ಷೆ, ಪರೀಕ್ಷೆ, ಪ್ರತಿಫಲಾಪೇಕ್ಷೆಯ ಕೂಡಿಕಳೆದು

ಸಂಶಯ ಭೀತಿಗಳ, ವಕ್ರಚಿಂತನೆಗಳ ಗುಣಿಸಿ

ನಂಬಿಕೆ ವಿಶ್ವಾಸವ ಅಹಂಕಾರದಿಂದ ಭಾಗಿಸಿ

ಕೊನೆಗುಳಿವುದು ಕಂಗೆಡಿಸುವ ಖಾಲಿತನವಷ್ಟೇ.








2 comments:

  1. ಹೂಂ ಈಗ ಲೆಕ್ಕಾಚಾರದ್ದೇ ಬದುಕು!

    ReplyDelete
  2. ಕೂಡಿ ಕಳೆವ ಗಣಿತವ ಕಲಿತವರೆಂಬ ಬರೀ ಭ್ರಮೆಯ ಅಹಂಭಾವ...
    ಹಾಗಾಗಿಯೇ ನಾವು ಹೀಗಿರಬೇಕು...
    ಚಂದದ ಭಾವ ಲಹರಿ...

    ReplyDelete