ನಿಟ್ಟುಸಿರು ನಿರಾಳವಾಯಿತು.
----------------------
ಕಾಲ್ಮುರಿದುಕೊಂಡು
ಮೂಲೆ ಸೇರಿದ ದಿನಗಳು
ಎದ್ದೆದ್ದು ಬಂದು ಕಾಡಿಹವು
ಅವೇ ವಿಷಯಗಳ
ಹೊಸಹೊಸ ರೂಪಗಳು..
ನೇತು ಹಾಕಿದ ಸೌಟು
ಗಾಳಿಗಾಡಿದ ಹಾಡಿಗೆ
ಸೋರುವ ನಲ್ಲಿನೀರಿನ
ತಟಪಟ ಲಯಕೆ
ಕೈಯ್ಯತ್ತ ಸಾಗಿ
ನಾಟ್ಯದ ಜೊತೆ ನೀಡಬಯಸಿದೆ,
ಅಡುಗೆ ಮನೆ "ಮುದವಿಲ್ಲಿದೆ, ಬಾ" ಎನ್ನುತಿದೆ,
ಮುರಿದೆನ್ನ ಕಾಲ ಕಟ್ಟಿಹಾಕಿದ ಮಂಚ ಅಣಕಿಸಿದೆ..
ಯಾರೋ ಬರೆದ
ರಂಗೋಲಿಯ ಸೊಟ್ಟಗೆರೆ,
ತುಳಸಿಯ ಹಿಂದುಮುಂದು
ಬೋಳುನೆಲ ಕಾಡಿದೆ,
ಮನದೊಳಗಿನ ಮುದ್ದುಕಲ್ಪನೆ
ಚಿತ್ರವಾಗಬಯಸಿದೆ
ಅರಸಿನ-ಕುಂಕುಮದ ಬಟ್ಟಲೆನ್ನ ಕರೆದಿದೆ,
ಎತ್ತಿಕೊಳಲಾಗದ ನೋವ ಮುಂಜಾವು ಅಣಕಿಸಿದೆ...
ಮುಚ್ಚಿದ ಬಾಗಿಲ
ಕರೆಘಂಟೆ ಕೂಗುತಿದೆ,
ಕಾದ ಎದೆ ಹೇಳಿದೆ-
"ಯಾರೋ ಬಂದ ಹಾಗಿದೆ".
ಮೂಲೆಯ ನಿಶ್ಚಲಮೌನದ
ಕಿವಿ ನೆಟ್ಟಗಾಗಿದೆ,
ಶಬ್ಧದುಡುಗೆ ತೊಟ್ಟು ಎದುರುಗೊಳ್ಳಬಯಸಿದೆ,
ತೆವಳುವ ಮಾತ ತಲುಪದ ನಾಲ್ಕು ಹೆಜ್ಜೆ ಅಣಕಿಸಿದೆ..
ತೋಟದ ಮೊಗ್ಗು,
ಪಾರಿಜಾತಗಿಡದ ಹಕ್ಕಿಗೂಡು,
ಆ ಮನೆ ಬೆಕ್ಕಿನ ಮರಿ,
ಬೀದಿಯ ಬಸುರಿನಾಯಿ,
ಏನಾಗಿವೆಯೋ....ಹೇಗಾಗಿವೆಯೋ...
ಕಣ್ಮುಚ್ಚಿ ನೆನೆದ ಘಳಿಗೆ..
ಕಾಲಿತ್ತ ದೇವಗೆ, ನಡಿಗೆ ಕಲಿಸಿದ ಅಮ್ಮಗೆ,
ಚಲನಶೀಲತೆಯ ಅದಮ್ಯ ಉತ್ಸಾಹಕೆ,
ನಾಳೆ ಮತ್ತದರ ಪುನರುತ್ಥಾನದ ಸಾಧ್ಯತೆಗೆ
ನಮಿಸಿ ಮನ ಶರಣೆಂದಿತು....
ನಿಟ್ಟುಸಿರು ಮೈಮುರಿದು ನಿರಾಳವಾಯಿತು.
No comments:
Post a Comment