Wednesday, February 6, 2013

ನಿನಗೆನ್ನ ಬಿಟ್ಟರುಂಟೇ....


-------------------

ಇನ್ನೆಷ್ಟು ಭಾರವೋ ಕಂದಾ.....

ಹೊತ್ತು ಸುಸ್ತಾಗದೇ?

ಯುಗಗಳಿಂದ ಭರಿಸುತಿರುವೆ,

ಅದೇ ಬೇಜಾರೆನಿಸದೇ?



ಕಳ್ಳನೆಂದರು, ಸುಳ್ಳನೆಂದರು,

ಕಪಟಿ-ಸ್ತ್ರೀಲೋಲನೆಂದರು,

ಸ್ವಜನ-ಪಕ್ಷಪಾತಿಯೆಂದರು,

ನಕ್ಕೆಲ್ಲಕೂ ಸರಿಯೆನುವೆಯಲ್ಲಾ,

ತಕ್ಕ ಉತ್ತರವಿಲ್ಲದಿಹುದೇ?



ಪುಟ್ಟಗುಡಿಯಲಿ ಮುಟ್ಟದಿರಿಸಿ,

ಕೊಟ್ಟದ್ದ ಬಿಟ್ಟು ಕೆಟ್ಟದ್ದೇ ಕೇಳಿ,

ಏಳುಬೀಳಲಿ ನೀ ಹಿಡಿದೆತ್ತುವುದ

ನಿನ್ನಾಟಕೆ ದಾಳವಾಗಿಸಿದ್ದೆನುವರು.

ಕೊಟ್ಟು, ಎತ್ತಿ, ಸಾಕಾಗದೇ?



ಸಿಕ್ಕನೆನುತ ಒಳಗಿರುವನ ಹೊರಗರಸಿ,

ಉಸಿರುಸಿರಲಿಹ ನಿನ್ನ ಒಪ್ಪಿ ಅಪ್ಪರು.

ಎತ್ತಿ ಒಮ್ಮೊಮ್ಮೆ, ಕುಕ್ಕಿ ಒಮ್ಮೊಮ್ಮೆ,

ಭಾವದಲೆಯಲಿ ನಿನ್ನ ಚೆಂಡಾಗಿಸುವರು.

ಹೀಗೂ ಒದಗುವುದುಂಟೇ?!



ಬಿಟ್ಟುಬಿಡೆಲ್ಲ, ಕಾದಿದೆ ಮಡಿಲು ಹರಡಿ

ಕಣ್ಮುಚ್ಚಿ ಮಲಗೊಮ್ಮೆ ಹಾಡುವೆ ಲಾಲಿ

ನಿದ್ದೆಯಲಿ ನಿನ್ನಳುನಗುವ ನೋಡಬೇಕು,

ಮಗು ನೀನೆನಗೆ, ಮಕ್ಕಳಾಟಿಕೆಯೆ ಸಾಕು.

ಅವರೊಪ್ಪುವ ಕಳ್ಳಸುಳ್ಳಮಳ್ಳನೇ

ಅವರ ಕಾಯಲಿ ಬಿಡು,

ಕ್ಷಣಕಾಲ ವಿರಮಿಸೋ,

ನನ್ನ ಬಿಟ್ಟರೆ ನಿನ್ನ ಕೇಳುವವರುಂಟೇ?!

No comments:

Post a Comment