ಸಿಕ್ಕಸಿಕ್ಕಲ್ಲಿ ಬಾಂಬ್!!!???
--------------------------
ಕಣ್ಮುಚ್ಚಿ ಕ್ಷಣದಲೇ ಮನೆಮಾರು ಕೆಡಹುವರೇ,
ನಿಮದೂ ಇರಬಹುದಲ್ಲವೇ ಪುಟ್ಟದೊಂದು ಸೂರು?
ಗುಟ್ಟು ಮುಚ್ಚಿಡುವ ಗೋಡೆ ಬಾಗಿಲುಗಳದು,
ನಗು-ಅಳು ಹುಟ್ಟಿಸುವ ಕೋಣೆ-ಕಿಟಕಿಗಳದು,
ಬೆಸೆವ-ಬೇರ್ಪಡಿಸುವ ಹೊಸಿಲು-ಮೆಟ್ಟಿಲುಗಳದು..
ಯೋಚಿಸದೇ ನಿಷ್ಪಾಪಿಗಳ ರಕ್ತ ಹರಿಸುವರೇ,
ನಿಮದೂ ಇರಬಹುದಲ್ಲವೇ ರಕ್ತಸಂಬಂಧಗಳು?
ತಪ್ಪು-ಒಪ್ಪುಗಳ ನುಂಗಿ ನನ್ನದೆನಿಸುವವು,
ಕಣ್ಣರಿಯದೇ ಕರುಳರಿವ ತಂಪು ವಾತ್ಸಲ್ಯದವು,
ನಿಸ್ವಾರ್ಥ ಹಾರೈಕೆ ಅಕ್ಷಯವಾಗೋ ಹಕ್ಕಿನವು...
ಮನಮುಚ್ಚಿ ಸಿಕ್ಕಲ್ಲಿ ಸಾವಸಾಧನ ಸಿಕ್ಕಿಸುವರೇ,
ನಿಮದೂ ಇದ್ದಿರಬಹುದಲ್ಲವೇ ಒಂದು ಬಾಲ್ಯ?
ಅದರಲೊಂದು ಮೂರು ಚಕ್ರದ ಸೈಕಲ್,
ತಂಗಿಯ ಪುಟ್ಟಗೊಂಬೆ, ಶಾಲೆಯ ತಿಂಡಿ ಡಬ್ಬ,
ಹೇಗೆ ಬಳಸಿದಿರಿ ಅವನೇ ಕೊಲುವ ಉದ್ದೇಶಕೆ?
ತಡರಾತ್ರಿ ಬರುವ ಅಪ್ಪನ ನಿದ್ದೆಗೆಟ್ಟು ಕಾದವರೇ,
ಕಾವ ಕಂಗಳು ನಿರಾಸೆಗೊಳುವ ನೋವಿನರಿವಿಲ್ಲವೇ?
ದೇಗುಲದ ಪ್ರಸಾದಕೆ, ಕುಂಕುಮವಿಡುವ ಅಮ್ಮನ ಕೈಗೆ
ಕಾದವರೇ, ಅಂಥದೊಂದು ದಿನ ಅಮ್ಮ ಬರದಿರುತ್ತಿದ್ದರೆ?
ಕುಸಿದ ಜೀವನಾಧಾರದ ಅಳಿವಿನ ಶಾಪದ ಅಳುಕಿಲ್ಲವೇ?
ಹಾರಿದ ನೆತ್ತರಬಿಂದು, ಮಾಂಸದ ತುಣುಕಿನತ್ತ
ಗೆಳೆಯನ ತರಚುಗಾಯಕತ್ತ ಮುಗ್ಧತೆ ಕುರುಡಾಯಿತೇ?
ಸಕ್ಕರೆಕಡ್ಡಿ, ಬೂಂದಿ, ಪೆಪ್ಪರಮಿಂಟು ಚಪ್ಪರಿಸಿದವರೇ,
ಅದೇ ನೀವು, ನಿಮಗೀಗ ವಿನಾಶ ಹೇಗೆ ರುಚಿಸಿತು?
ದ್ವೇಷ ಕೊಳ್ಳಲು ಆ ನಾಲಿಗೆಯ ಮಾರಿಕೊಂಡಿರಾ?
No comments:
Post a Comment