Tuesday, February 12, 2013


(ಬದರಿನಾಥ ಪಳವಳ್ಳಿಯವರ ಜೋಕಾಲಿ ಆ ಲಹರಿಯ ನನ್ನ ಬಾಲ್ಯದ ನೆನಪುಗಳನ್ನೂ ಬಡಿದೆಬ್ಬಿಸಿತು. ಇನ್ನೂ ಸರಣಿ ಮುಂದುವರೀತಾ ಇದೆ..
ಇಷ್ಟರವರೆಗಿನವು ಅಕ್ಷರವಾದವು, ಇನ್ನುಳಿದವು ನನ್ನ ತೂಗುವ ಉಯ್ಯಾಲೆಯಾಗುತ್ತಾವೆ..)
----------------------------------------------------
ಇಂದ್ಯಾಕೋ ನಿನ್ನ ನೆನಪು..
---------------

ನಿನ್ನೆ ಮೊನ್ನೆಯಂತಿದೆ ಆ ದಿನ..
ನೀ ಮೊದಲ ಬಾರಿ
ನನ್ನ ಚಂದ ಅಂದ ದಿನ...

ಹಳ್ಳಿಮನೆ, ಮೊದಲಸೊಸೆ,
ಮೈಮುರಿವ ಕೆಲಸದೆಡೆ,
ಹರಿದ ಕಪ್ಪು ಸೀರೆಯಲಮ್ಮ
ಹೊಲಿದ ಚೂಡಿದಾರ ನಾ ತೊಟ್ಟಾಗ
ನೀ ಕರಡಿಯೆಂದದ್ದು ನಾನತ್ತದ್ದು..

ನವರಾತ್ರಿ ಉತ್ಸವದಿ ಮೊದಲಸಲ
ವೇದಿಕೆಯೇರಿ ಹಾಡಿದಾಗ,
ಎತ್ತರಿಸಿದ ದನಿ ಕೈಕೊಟ್ಟದ್ದು,
ಹತ್ತಾರು ಚಪ್ಪಳೆಗಳ ಮಧ್ಯೆಯೂ
ನಿನ್ನ "ಕಿಸಕ್ಕ್" ಕೇಳಿಸಿದ್ದು, ನಾನತ್ತದ್ದು.

ಮನೆಯ ಮೊದಲ ಹೆಣ್ಮಗು ನಾ
ಮೈನೆರೆದಾಗ ಊರಿಗೂಟ ಹಾಕಿಸಿದ್ದು,
ಮೂಲೆಯಲಿ ಒಂಟಿಯಾಗಳುವ ನನ್ನ
ಕ್ಷುದ್ರಪ್ರಾಣಿಯಂತೆ ನೋಡಿ ಸಾಗಿದ್ದು..
ಮುಸುಮುಸು ಅಳು ತಾರಕಕೇರಿದ್ದು..

ಬೇಲಿಯ ದಪ್ಪಕಳ್ಳಿಯೆಲೆಯಲಿ,
ರಂಗುರಂಗಾದ ಕತೆ ಕೆತ್ತಿ,
ನನ್ನ ಹೆಸರ ಮೂಡಿಸಿದ ಪಾಪಿಗಳು
ಊರೆಲ್ಲ ಗುಲ್ಲು, ನಡುಗುತಿದ್ದ ನನ್ನ
ಪರಕೀಯಳಂತೆ ನೋಡಿದ್ದು, ನಾನತ್ತದ್ದು..

ಊರಕಣ್ಮಣಿಯ ಮದುವೆ,
ಮನೆಮುಂದೆ ಚಪ್ಪರದ ಭರಾಟೆಯಲಿ
ಗಂಟು ಹಾಕುತ ನೀ ಕಾಲ್ಜಾರಿ ಬಿದ್ದಾಗ
ನಾ ನಕ್ಕೆ, ನೀ ಮೊದಲೆಂಬಂತೆ ನಿಟ್ಟಿಸಿ,
"ಮದುಮಗಳೇ ನೀನೆಷ್ಟು ಚಂದ" ಅಂದದ್ದು....

ಮತ್ತೆ ನಡೆದ ದಾರಿಯಲೆಂದೂ
ನೀ ಅಳಿಸಿರಲೇ ಇಲ್ಲ ನೋಡು..
ಇಂದ್ಯಾಕೋ ಮಗಳು ಆ ಹುಡುಗನತ್ತ
ಕೈ ತೋರಿ ಮೂತಿಯುಬ್ಬಿಸಿದಾಗ,
ಬೊಗಸೆಕಣ್ಣು ಮೆಲ್ಲ ನೀರಾದಾಗ
ಮತ್ತೆ ನೆನಪು ಕಣ್ಣ ಕೊಳವಾಗಿಸಿದೆ...























4 comments:

  1. ಮೊದಲು ನನ್ನ ಕವನವನ್ನು ಉಲ್ಲೇಖಿಸಿದ ನಿಮಗೆ ಅನಂತ ನಮನಗಳು.

    ನಿಮ್ಮ ಈ ಕವನವು ಒಂದು ಹೆಣ್ಮಗಳ ವೃತ್ತವನ್ನು ಆಪ್ತವಾಗಿ ಚಿತ್ರಿಸಿಕೊಟ್ಟಿತು.

    "ಹರಿದ ಕಪ್ಪು ಸೀರೆಯಲಮ್ಮ
    ಹೊಲಿದ ಚೂಡಿದಾರ" ಈ ಸಾಲುಗಳು ಯಾಕೋ ನಮ್ಮ ಹಳ್ಳಿಯ ಬದುಕನ್ನು ಕಣ್ಮುಂದೆ ತಂದಿತು. ಕಣ್ಣಂಚಲಿ ನೀರು...

    ReplyDelete
  2. ಬರೀತಾ ಬರೀತಾ ನನ್ನ ಕಣ್ಣಲೂ ನೀರು ಬಂತು..ಯಾಕೋ ಗೊತ್ತಿಲ್ಲ... ಆ ದಿನಗಳನ್ನು ತುಂಬಾ ಮಿಸ್ ಮಾಡ್ಕೊಳ್ತಾ ಇರ್ತೀನಿ.. ಸುಮಾರು ಈಗಿರುವ ವಿಷಯಗಳು ಇರಲಿಲ್ಲವಾದರೂ ಆಗ ಒಂಥರಾ ಮುಚ್ಚಟೆ ನನ್ನ ಸುತ್ತಮುತ್ತ ಇತ್ತು.... ಧನ್ಯವಾದ ಬದರಿ ಸರ್..

    ReplyDelete
  3. ಆಪ್ತ ಭಾವಗಳ ತುಂಬಿ ನೆನಪ ಕದ ತೆರೆದು ಪೊಣಿಸಿದ ಸಾಲುಗಳು ಇಷ್ಟವಾದವು, ಹಳೆತೆಲ್ಲ ಹೊಸತಾಗಿ ಕಾಡುತ್ತ ಕನವರಿಸುವಂತೆ ಮಾಡುವಂತಿದೆ ಕವನ...

    ಮತ್ತೇನು ಹೇಳಲಾರೆ. ನೆನಪ ಮೀಟಿದ್ದಕ್ಕೆ ಧನ್ಯವಾದ ಹೇಳದಿರಲಾರೆ.

    ReplyDelete
  4. ನಿಮ್ಮ ಆಪ್ತ ಪ್ರತಿಕ್ರಿಯೆಗೆ ನಾನೂ ಧನ್ಯವಾದ ಹೇಳದಿರಲಾರೆ ರಘುನಂದನ್...

    ReplyDelete