ಇದಕುತ್ತರವಿದೆಯೇ..
------------------------
ಕಾಡಮೂಲೆಯಲೊಂದು ಬೀಜ ಮೊಳೆತಿದೆ,
------------------------
ಕಾಡಮೂಲೆಯಲೊಂದು ಬೀಜ ಮೊಳೆತಿದೆ,
ಪುಷ್ಟ ಕಾಂಡ, ಪಚ್ಚೆ ಎಲೆಗಳು,
ಮೊಗ್ಗು ಬಿರಿದು, ಬಿಳಿಯ ಹೂಗಳು.
ನಾಡಲೊಂದು ದೊಡ್ಡ ಮನೆ,
ಅಂಗಳದಿ ಅದೇ ಕಾಂಡ, ಅದೇ ಎಲೆ,
ಅದೇ ಮೊಗ್ಗು ಬಿರಿದದೇ ಹೂಗಳು.
ನಾಡಲೊಂದು ಹೆಸರು, ಹೂವಿಗಷ್ಟು ಬೆಲೆ,
ಕಾಡಲೇನೂ ಇಲ್ಲ, ಹೂವಿನದು ಅಜ್ಞಾತನೆಲೆ.
ಎರಡೂ ಕಡೆ ಹರಡಿತ್ತದೇ ಚೆಲುವ ಬಲೆ.
ನಾಡಿನದು ಮನೆಯಂಗಳದ್ದು
ಅದರದೆಲ್ಲ ಮನೆಯೊಡೆಯನದಷ್ಟೇ ಸೊತ್ತು
ಕಾಡಲಿ ಗಿಡದ್ದು, ವನದೇವಿಯ ನಾಸಿಕದ ನತ್ತು.
ಕಾಡಲದ ಕಂಡ ನಾಡಿಗೊಂದು ಜಿಜ್ಞಾಸೆ....
ಕಾಡಲ್ಲಿ ಬಿತ್ತಿದ್ದು ಯಾರು, ಆರೈಕೆಯಿತ್ತವರಾರು?
ಬೀಜ, ನೀರು-ಸಾರಗಳ ಕಾಡು ಕದ್ದೊಯ್ದಿತೇ?
ಬಾಯಿಗೊಂದು ಮಾತು, ಮನಸಿಗೊಂದು ದೂರು
ದಾಖಲಾಗಿದೆ ನಾಡ ನ್ಯಾಯದೇವತೆಯಲ್ಲಿ.
ಜಾಥಾ, ಧಿಕ್ಕಾರ, ಘೋಷಣೆ-ಪ್ರಶ್ನೆಗಳೂ ಹುಟ್ಟಿವೆ.
ಕಾಡು ನಗುತಿದೆ ನಾಡಿನಳುಕಿಗೆ, ಅಭದ್ರತೆಗೆ.
ಕೇಳಿದೆ-"ಗಾಳಿ ಯಾರಪ್ಪನ ಮನೆಯ ಆಸ್ತಿ?
ಯಾವ ದೊಣ್ಣೆನಾಯ್ಕನ ಅಪ್ಪಣೆ ಬೇಕದಕೆ?
ಅದೇ ಬೇಕಾದ್ದನೊಯ್ದಿದೆ, ಬೇಕಾದಲ್ಲಿಳಿಸಿದೆ.
ಗಾಳಿಯೂರಿದ ಬೀಜಕುಂಟು ನೆಲದ ನೀರು,
ವನದೇವತೆಯ ಮಡಿಲು, ರವಿಯ ಬೆಳಕು.
ಈಗ ಬಂಧಿಸಿರಿ ಗಾಳಿಯ ಸಾಧ್ಯವಾದರೆ..
ಹೊತ್ತೊಯ್ಯಿರಿ, ವಿಚಾರಿಸಿರಿ, ನಾಡಿನಮೂಲ್ಯ
ಆಸ್ತಿಯದ ಬೇನಾಮಿ ನೆಲದಲೂರಿದ್ದು ಯಾಕೆ?
ಪ್ರಶ್ನಿಸಿ ನೆಲ, ರವಿ, ವನದೇವಿಯ ಸಾಧ್ಯವಾದರೆ..
ಹೆಸರಿಲ್ಲದ ಜನ್ಮವದು, ಮೊಳೆಸಿ ಬೆಳೆಸಿದ್ದು ಯಾಕೆ?
ಅಲ್ಲರಳಬಾರದಿತ್ತದು, ಅರಳಿಸಿದ್ದು ಯಾಕೆ?"
No comments:
Post a Comment